ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 6, 2012

1

ಸಂಸ್ಕೃತಿ ಸಂಕಥನ – 21 – ಬುದ್ಧ ಬ್ರಾಹ್ಮಣ ವಿರೋಧಿಯೇ?

‍ನಿಲುಮೆ ಮೂಲಕ

-ರಮಾನಂದ ಐನಕೈ

ನಿಜಕ್ಕೂ  ಇದು ಕುತೂಹಲದ ಪ್ರಶ್ನೆ. ಈ ಕುರಿತು ಸಂಶೋಧನೆ ಮಾಡಿದ ಬಾಲಗಂಗಾಧರರ ಅಭಿಪ್ರಾಯಗಳು ನಮಗೆ ಹೊಸತೊಂದು ಸತ್ಯದ ಲೋಕವನ್ನು ತೆರೆದುಕೊಡುತ್ತದೆ. ಬುದ್ಧ ವರ್ಣ ವ್ಯವಸ್ಥೆಯನ್ನು ದ್ವೇಷಿಸಿದ್ದು ನಿಜವೇ? ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡೆ ಆತ ಬ್ರಾಹ್ಮಣತ್ವವನ್ನು ಚರ್ಚೆಗೆ ಎಳೆಯುತ್ತಾನೆ. ಇದು ಹೇಗೆ ಸಾಧ್ಯ? ನಮ್ಮ ದೇಶದ ದಲಿತರು ಬುದ್ಧಿಸಂನ್ನು ಆರಾಧಿಸು ವುದು ಅದು ನಿಜವಾದ ಮಾನವೀಯ ಧರ್ಮ ಅಂತಲೋ ಅಥವಾ ಬುದ್ಧಿಸಂ ಬ್ರಾಹ್ಮಣರನ್ನು ದ್ವೇಷಿಸುತ್ತದೆ ಎಂಬ ಕಲ್ಪಿತ ಕಥೆಯ ಪ್ರೇರಣೆ ಯಿಂದಲೋ?

ಹಿಂದೂಯಿಸಂ ಹಾಗೆ ಬುದ್ಧಿಸಂ ಕುರಿ ತಾಗಿಯೂ ವರ್ಣರಂಜಿತ ಕಥೆ ಕಟ್ಟಿದವರೂ ಐರೋಪ್ಯರೆ. ಏಕೆಂದರೆ ಬುದ್ಧಿಸಂನ್ನು ಕೂಡಾ ಅವರು ತಮ್ಮ ಕನ್ನಡಕದಿಂದಲೇ ನೋಡಿದರು. ಜೊತೆ ಜೊತೆಗೆ ಹಿಂದೂಯಿಸಂ ಕುರಿತಾದ ಕೆಲವು ಕಗ್ಗಂಟುಗಳಿಂದ ತಪ್ಪಿಸಿಕೊಳ್ಳಲು ಬುದ್ಧಿಸಂನ್ನು ವೈಭವೀಕರಿಸುವ ಅಗತ್ಯ ಅವರಿಗಿತ್ತು. ಬುದ್ಧಿಸಂ ಅನ್ನುವುದು ಹಿಂದೂಯಿಸಂಗಿಂತ ಉತ್ತಮವಾದ ರಿಲಿಜನ್ ಎಂದು ಭಾವಿಸಲು ಅವರಲ್ಲಿ ಸಾಕಷ್ಟು ಸಮರ್ಥನೆಗಳಿದ್ದವು. ಬುದ್ಧಿಸಂ ಏಕದೇವನ ಕಲ್ಪನೆಯಲ್ಲಿದೆ. ತ್ರಿಪಿಟಕಗಳು ಅವರ ಸ್ಕ್ರಿಪ್ಚರ್ಗಳು. ಮತಾಂತರಕ್ಕ ಮಾನ್ಯತೆ ಇದೆ. ಹಾಗಾಗಿ ಬುದ್ಧಿಸಂ ಅನ್ನುವುದು ಒಂದು ಶುದ್ಧವಾದ ರಿಲಿಜನ್ ಅಂದು ಕೊಂಡರು.

ಪ್ರೊಟೆಸ್ಟಾಂಟರು ಬುದ್ಧನನ್ನು ಭಾರತದ ಲೂಥರ್ ಎಂದು ಕರೆದರು. ಹಿಂದೂಯಿಸಂ ಹೊಂದುತ್ತಿರುವ ಅವನತಿಯನ್ನು ತಪ್ಪಿಸಿ ಪುನರು ದ್ಧಾರ ಮಾಡಲು ಬಂದ ದೇವದೂತನಂತೆ ಬುದ್ಧ ನನ್ನು ಚಿತ್ರಿಸಿದರು. ಬುದ್ಧಿಸಂ ಮಾನವರ ನಡುವೆ ತಾರತಮ್ಯ ಮಾಡುವುದಿಲ್ಲ. ವರ್ಣಾಶ್ರಮದ ವಿರುದ್ಧ ಹೋರಾಡುತ್ತಿದೆ. ಹಾಗಾಗಿ ಬುದ್ಧಿಸಂನ್ನು ಸಾರ್ವತ್ರಿಕ ರಿಲಿಜನ್ ಎಂದು ಕರೆದು ಅದಕ್ಕೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಯ ಸ್ಥಾನಮಾನ ನೀಡಿದರು. ಹೀಗೆ ಐರೋಪ್ಯರ ಬಾಯಲ್ಲಿ ಬುದ್ಧಿಸಂ ಭಾರತದ ಪ್ರೊಟೆಸ್ಟಾಂಟಿಸಂ ಎನಿಸಿ ಕೊಂಡಿತು.

ಬೌದ್ಧ ಮತ ಅಂದರೆ ಸಂನ್ಯಾಸಿಗಳ ಪಂಥ ಎಂದು ತಿಳಿದುಕೊಂಡಿರುವುದು ತಪ್ಪು ಕಲ್ಪನೆ. ಬೌದ್ಧರಲ್ಲಿ ಸಂನ್ಯಾಸಿಗಳೂ ಇದ್ದರು, ಸಾಂಸಾರಿಕರೂ ಇದ್ದರು. ಎಲ್ಲರದ್ದೂ ಆನಂದವನ್ನು ಪಡೆಯುವುದು ಗುರಿಯಾಗಿತ್ತು. ಕೆಲವರು ಸಂಸಾರದಲ್ಲಿ ಆನಂದ ಪಡೆದರೆ ಇನ್ನೂ ಕೆಲವರು ಸಂನ್ಯಾಸತ್ವ ಸ್ವೀಕರಿಸಿ ವಿರಕ್ತಿಯಲ್ಲಿ ಆನಂದ ಪಡೆಯುತ್ತಿದ್ದರು. ಶ್ರಮಣ ಸಂಪ್ರದಾಯದವರು ಸಂಸಾರದತ್ತ ಒಲವು ತೋರಿಸಿದಾಗ ಅವರೆದುರು ಎರಡೇ ಸಾಧ್ಯತೆ ಗಳಿದ್ದವು. ಒಬ್ಬನು ಭಿಕ್ಷುವಾಗಬೇಕು ಇಲ್ಲವೇ ಸಂಸಾರಸ್ಥನಾಗಬೇಕು. ಹಾಗಂತ ಸಂಸಾರದಲ್ಲಿ ಬ್ರಾಹ್ಮಣನಂತೇ, ರಾಜನಂತೇ ಮುಂದುರಿಯ ಬೇಕೆಂಬ ಸೂಚನೆ ಇದೆ. ಬ್ರಾಹ್ಮಣ ಹಾಗೂ ರಾಜ ಎರಡೂ ಕೂಡ ವರ್ಣಾಶ್ರಮದಿಂದ ಪಡೆದ ಕಲ್ಪನೆ ಗಳು. ಬುದ್ಧ ವರ್ಣಾಶ್ರಮ ವಿರೋಧಿಯಾಗಿದ್ದರೆ ಹೀಗೇಕೆ ಸೂಚಿಸಲಾಗುತ್ತಿತ್ತು?

ಬುದ್ಧ ಸಂಸಾರ ವ್ಯವಸ್ಥೆಯ ವಿರೋಧವಾಗಿದ್ದ ಎಂಬ ತಪ್ಪು ಕಲ್ಪನೆಯೂ ಇದೆ. ಆದರೆ ಬುದ್ಧ ಎಂದೂ ಸಂಸಾರವನ್ನು ವಿರೋಧಿಸಿಲ್ಲ. ಆದರೆ ಅವನ ಸಂಘೋಪಾಸನೆಗೆ ಸೇರಬೇಕಾದರೆ ಸಂಸಾರ ತ್ಯಜಿಸ ಬೇಕಾಗಿತ್ತು. ಯಾರಿಗೆ ಸಂಸಾರದಲ್ಲಿ ದುಃಖ ಇದೆಯೋ ಅವರು ಮಾತ್ರ ಆತನ ಸಂಘ ಸೇರಬಹು ದಾಗಿತ್ತು. ಅಷ್ಟಾಂಗ ಮಾರ್ಗದಲ್ಲಿ ನಂಬಿಕೆ ಇಟ್ಟವರು ಮಾತ್ರ ಬುದ್ಧನ ಅನುಯಾಯಿಗಳಾಗಲು ಅರ್ಹ ರಾಗುತ್ತಿದ್ದರು. ಹೀಗೆ ಬುದ್ಧ ಸಂಸಾರದ ಕುರಿತು ಅಸಡ್ಡೆ ತೋರಿಸಿಲ್ಲ. ಅಲ್ಲಿ ಸಾಧ್ಯವಾಗದವರು ಇಲ್ಲಿ ಬಂದು ಆನಂದ ಪಡೆಯಬಹುದೆಂಬ ಆಯ್ಕೆ ಯನ್ನು ಎದುರಿಗಿಟ್ಟ.

ಬುದ್ಧಿಸಂನಲ್ಲಿ ತಾರತಮ್ಯ ಇರದಿದ್ದರೆ, ಅದೊಂದು ಸಾರ್ವತ್ರಿಕ ರಿಲಿಜನ್ನೇ ಆಗಿದ್ದ ಪಕ್ಷದಲ್ಲಿ ಬುದ್ಧನ ಉಪದೇಶಗಳಲ್ಲಿ ವರ್ಣವ್ಯವಸ್ಥೆಯ ಸ್ಪಷ್ಟ ನಿರಾಕರಣೆಯನ್ನು ನಾವು ಕಾಣಲೇಬೇಕು. ಆದರೆ ಅಂತಹ ನಿರಾಕರಣೆಯನ್ನು ನಾವು ಕಾಣಲು ಸಾಧ್ಯವಿಲ್ಲವೆಂಬುದು ಬಾಲಗಂಗಾಧರರ ಅಭಿಪ್ರಾಯ. ಅಂದರೆ ಬುದ್ಧಿಸಂ ಎಲ್ಲವನ್ನೂ ವರ್ಣ ವ್ಯವಸ್ಥೆಯ ಚೌಕಟ್ಟಿನಲ್ಲೇ ನೋಡಲು ಪ್ರಯತ್ನಿಸು ತ್ತದೆ. ಬುದ್ಧನು ಬ್ರಾಹ್ಮಣ ವಿರೋಧಿಯಾಗಿದ್ದನು ಎಂಬುದು ಐರೋಪ್ಯರು ಕಟ್ಟಿದ ಕಥೆ. ಏಕೆಂದರೆ ಭಾರತದ ಕಥೆ ಬರೆದ ಪಾಶ್ಚಾತ್ಯರೇ ಬ್ರಾಹ್ಮಣ ವಿರೋಧಿಗಳಾಗಿದ್ದರು. ವಸಾಹತುಶಾಹಿಗಳಿಗೆ ದೊಡ್ಡ ತೊಡಕಾದವರೆಂದರೆ ಭಾರತೀಯ ಬ್ರಾಹ್ಮಣರು. ಇವರು ಕ್ರಿಶ್ಚಿಯನ್ ರಿಲಿಜನ್ನನ್ನು ತಿರಸ್ಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಆದ್ದರಿಂದ ಅವರನ್ನು ಮತಾಂತರಕ್ಕೆ ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೂ ಇಡೀ ಭಾರತೀಯ ಸಮಾಜ ಬ್ರಾಹ್ಮಣರ ಕಪಿಮುಷ್ಠಿ ಯಲ್ಲಿದ್ದಂತೆ ಅವರಿಗೆ ಭಾಸವಾಯಿತು. ಇಲ್ಲಿನ ವರ್ಣಾಶ್ರಮ ವ್ಯವಸ್ಥೆಯನ್ನೂ ಬ್ರಾಹ್ಮಣರೇ ನಿರ್ಮಿಸಿದರೆಂದು ಗ್ರಹಿಸಿದರು. ಕೆಥೋಲಿಕ್ ಪ್ರೀಸ್ಟ್ಗಳ ಪರಂಪರೆಗೆ ಪರ್ಯಾಯವಾಗಿ ಭಾರತೀಯ ಬ್ರಾಹ್ಮಣರನ್ನು ಚಿತ್ರಿಸಿದರು. ಈ ಬ್ರಾಹ್ಮಣರಿಂದ ಹಿಂದೂಯಿಸಂ ಅವನತಿಗೆ ಬಂದಿದೆ. ಹಾಗಾಗಿ ಬುದ್ಧ ಬ್ರಾಹ್ಮಣರನ್ನು ವಿರೋಧಿಸುವ ಮೂಲಕ ಹಿಂದೂಯಿಸಂ ಪುನರುಜ್ಜೀವನ ಮಾಡಲು ಪ್ರಯತ್ನಿಸಿದ ಎಂದು ಕಥೆ ಬರೆದರು.

ಈ ಕುರಿತಾಗಿ ನಾವು ಬೌದ್ಧ ಸಂಪ್ರದಾಯಗಳಿಗೆ ಸಂಬಂಧಪಟ್ಟ ಎರಡು ಪಠ್ಯಗಳನ್ನು ನೋಡ ಬಹುದು. ಒಂದು ಬುದ್ಧನಿಗೇ ಸ್ವತಃ ಆರೋಪಿಸ ಲಾದ ಪ್ರಮುಖ ಪಠ್ಯ ‘ದಮ್ಮಪದ’. ಎರಡನೆಯದು ಬುದ್ಧನ ಸಂಭಾಷಣೆಯನ್ನು ದಾಖಲಿಸುವ ಒಂದು ಉಪಪಠ್ಯವಾದ ‘ಸೋನದಂಡ ಸುತ್ತ’. ದಮ್ಮಪದದ ಕೊನೆಯ ಅಧ್ಯಾಯವು ಬ್ರಾಹ್ಮಣರ ಕುರಿತಾಗಿದೆ.  ಧಾಟಿಯಲ್ಲಿ ವಸ್ತುವಿನಲ್ಲಿ ಹಾಗೂ ಸತ್ವದಲ್ಲಿ ಎಲ್ಲ ಪದ್ಯಗಳೂ ಒಂದೇ ಸ್ವರೂಪವನ್ನು ಹೊಂದಿವೆ. ಇಲ್ಲಿ ಬುದ್ಧನು ಯಾವನು ನಿಜವಾದ ಬ್ರಾಹ್ಮಣನೆಂಬುದರ ಬಗ್ಗೆ ತಿಳಿಸುತ್ತಾನೆ. ಬ್ರಾಹ್ಮಣನೆಂದರೆ ಮೋಸಗಾರ ವಂಚಕ ಅಥವಾ ಸುಳ್ಳುಗಾರನೆಂದು ಎಲ್ಲಿಯೂ ಹೇಳುವುದಿಲ್ಲ. ಎಲ್ಲೂ ಬ್ರಾಹ್ಮಣಿಕೆ ಅಥವಾ ವರ್ಣ ಪದ್ಧತಿಯನ್ನು ಅಸಹ್ಯಕರವೆಂದು ಕರೆಯುವುದಿಲ್ಲ. ಅಥವಾ ಶತಮಾನಗಳ ನಂತರ ಕ್ರೈಸ್ತ ಮಿಶನರಿಗಳು ಬಂದು ಏನನ್ನು ಮಾಡಿದರೋ ಅವೇನನ್ನೂ ಬುದ್ಧನು ಮಾಡುವುದಿಲ್ಲ. ಬುದ್ಧ ಬ್ರಾಹ್ಮಣ ವಿರೋಧಿಯಾಗಿದ್ದ ಎಂಬುದು ಪಾಶ್ಚಿಮಾತ್ಯರು ಕಟ್ಟಿದ ಕಥೆ. ಇದೇ ಕಥೆಯನ್ನು ಭಾರತೀಯರೂ ನಂಬಿಕೊಂಡಿದ್ದಾರೆ.

‘ಸೋನದಂಡ ಸುತ್ತ’ದಲ್ಲಿ ಬುದ್ಧನು ಸೋನದಂಡನ ಜೊತೆಗೆ ನಿಜವಾದ ಬ್ರಾಹ್ಮಣನು ಯಾರು ಎಂಬ ಬಗ್ಗೆ ಸಂಭಾಷಣೆ ನಡೆಸುತ್ತಾನೆ. ಇದರ ಪ್ರಕಾರ ನಿಜವಾದ ಬ್ರಾಹ್ಮಣನಿಗೆ ಐದು ಗುಣಗಳಿರಬೇಕು.

1) ಹುಟ್ಟಿನ ವಿಷಯದಲ್ಲಿ ದೂಷಿತನಾಗಬಾರದು. ಅಂದರೆ ತಂದೆ ಮತ್ತು ತಾಯಿ ಕಡೆಯಿಂದ ಏಳು ತಲೆ ಮಾರುಗಳಿಂದ ದೂಷಿತವಾಗಿರಬಾರದು.

2) ಮಂತ್ರಗಳು, ಮೂರು ವೇದಗಳು ಹಾಗೂ ಇತರ ಶಾಸ್ತ್ರಗಳಲ್ಲಿ ಪಂಡಿತನಾಗಿರಬೇಕು.

3) ಸದೃಢ ವ್ಯಕ್ತಿತ್ವ ಹೊಂದಿರಬೇಕು.

4) ಬಣ್ಣದಲ್ಲೂ ಸುಂದರನಾಗಿರಬೇಕು.

5) ತಿಳುವಳಿಕೆಯುಳ್ಳವನೂ ಮತ್ತು ವಿವೇಕ ಶಾಲಿಯೂ ಆಗಿರಬೇಕು.

ಹೀಗೆ ಯಾವ್ಯಾವ ಕನಿಷ್ಟ ಗುಣಗಳಿದ್ದರೆ ಬ್ರಾಹ್ಮಣನಾಗಬಹುದೆಂಬುದನ್ನು ಚರ್ಚಿಸುತ್ತ ಕೊನೆಯ ಪಕ್ಷ ಸದ್ಗುಣ ಹಾಗೂ ವಿವೇಕ ಎರಡಿದ್ದರೆ ಬ್ರಾಹ್ಮಣ ಆಗಬಹುದೆಂಬ ಅಭಿಪ್ರಾಯ ನೀಡುತ್ತಾನೆ. ಇದು ಬ್ರಾಹ್ಮಣರನ್ನು ವಿರೋಧಿಸುವ ಅಭಿಪ್ರಾಯಗಳೆಂಬುದಕ್ಕೆ ಅರ್ಥ ಇದೆಯೇ?

ಒಂದೊಮ್ಮೆ ಇದನ್ನು ಬ್ರಾಹ್ಮಣರ ಟೀಕೆಯೆಂದು ಪರಿಗಣಿಸಿದರೂ ಕೂಡ ಈ ಕಾರಣದಿಂದ ಬುದ್ದ ವರ್ಣ ವ್ಯವಸ್ಥೆಯನ್ನು ಹೇಗೆ ತಿರಸ್ಕರಿಸಿದಂತಾಗುತ್ತದೆ? ಬ್ರಾಹ್ಮಣನಾಗುವುದಕ್ಕೆ ಪ್ರಮಾಣಿತ ನೈತಿಕ ಸದ್ಗುಣಗಳಿರಬೇಕು ನಿಜ. ಆದರೆ ಇದು ಎಲ್ಲ ಮನುಷ್ಯ ವಲಯಕ್ಕೆ ಅನ್ವಯವಾಗುವುದಿಲ್ಲ. ಇದು ಅನ್ವಯವಾಗುವುದು ವರ್ಣ ವ್ಯವಸ್ಥೆಯಿಂದ ರಚಿತ ವಾದ ಮಾನವ ವಲಯ ಮಾತ್ರವಾಗಿದೆ. ಅದು ಹೇಗೆಂದರೆ ಎಲ್ಲ ‘ನಿಜವಾದ’ ಬ್ರಾಹ್ಮಣರು ನೀತಿ ವಂತರೂ ವಿವೇಕಿಗಳೂ ಆಗಿದ್ದರು. ಆದರೆ ಎಲ್ಲ ನೀತಿ ವಂತ ವಿವೇಕಿ ಮನುಷ್ಯರು ಬ್ರಾಹ್ಮಣರಲ್ಲ. ಏಕೆಂ ದರೆ ಎಲ್ಲ ಮನುಷ್ಯರೂ ವರ್ಣ ವ್ಯವಸ್ಥೆಯ ಭಾಗ ವಲ್ಲ. ಇದರಿಂದಲೇ ಸ್ಪಷ್ಟವಾಗುತ್ತದೆ. ವರ್ಣ ವ್ಯವಸ್ಥೆ ತಿರಸ್ಕರಿಸುವುದು ಬುದ್ಧನಿಗೆ ಸಾಧ್ಯವಿರಲಿಲ್ಲ.  ಬುದ್ಧನ ಸಂವಾದದೊಳಗೆ ವರ್ಣಾಶ್ರಮದ ಅನು ಕ್ರಮಣ ವ್ಯತ್ಯಾಸವಾಗಿದ್ದನ್ನು ಗುರುತಿಸಬಹುದು. ಕ್ಷತ್ರಿಯರು, ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರು ಎಂಬುದಾಗಿ ಕ್ಷತ್ರಿಯರು ಮೊದಲು ಬರುತ್ತಾರೆ. ನಂತರ ಬ್ರಾಹ್ಮಣರು. ಬುದ್ಧನೇ ಸ್ವತಃ ಕ್ಷತ್ರಿಯನಾಗಿದ್ದನೆಂಬುದೂ ಗಮನಾರ್ಹ ಸಂಗತಿ. ಹಾಗಾಗಿ ಬುದ್ಧನೂ ಕೂಡ ವರ್ಣಾಶ್ರಮದಿಂದ ಹೊರಗುಳಿದಿರಲಿಲ್ಲ. ವರ್ಣ ವ್ಯವಸ್ಥೆಯು ಅವನಿಗೆ ನೀಡಿದ ಸ್ಥಾನದಲ್ಲಿದ್ದನು. ಅಂದರೆ ವರ್ಣ ವ್ಯವ ಸ್ಥೆಯ ಪರಿಧಿಯೊಳಗೇ ಬುದ್ಧನ ಸಂವಾದ ವಿಸ್ತಾರ ವಾಗುತ್ತಿತ್ತು. ಹೀಗಿದ್ದಾಗ ಬುದ್ಧ ವರ್ಣ ವ್ಯವಸ್ಥೆ ಯನ್ನು ವಿರೋಧಿಸಿದ್ದ ಎಂಬುದಕ್ಕೆ ಆಧಾರ ಯಾವುದು?

ಬುದ್ಧನ ಪ್ರಕಾರ ನಾಲ್ಕು ವರ್ಣಗಳು ಹಾಗೂ ಶ್ರಮಣರು ಕ್ರಮಬದ್ಧವಾಗಿ ಯಥಾಯೋಗ್ಯ ವಾಗಿ ಮತ್ತು ಧರ್ಮದ ಪ್ರಕಾರವೇ ಅಸ್ತಿತ್ವಕ್ಕೆ ಬಂದರು. ಅಗ್ಗನ್ನಸುತ್ತದ ಕೊನೆಯ ಪದ್ಯದಲ್ಲಿ ಬುದ್ಧ ಅರ್ಥಭರಿತವಾಗಿ ಹೇಳುತ್ತಾನೆ.

ಯಾರು ವಂಶದಲ್ಲಿ ವಿಶ್ವಾಸ ಇಟ್ಟಿದ್ದಾನೋ

ಅಂಥ ಕ್ಷತ್ರಿಯನು ಈ ಜನರಲ್ಲೇ ಶ್ರೇಷ್ಠತಮನು

ಆದರೆ ವಿವೇಕ ಮತ್ತು ಸದ್ಗುಣಗಳನ್ನು ಧರಿಸಿದವನು

ಯಕ್ಷರು ಮತ್ತು ಮನುಷ್ಯರು ಇಬ್ಬರಲ್ಲೂ  ಎಲ್ಲರಿಗಿಂತ ಶ್ರೇಷ್ಠತಮ

ಇಲ್ಲಿ ವಿವೇಕ ಮತ್ತು ಸದ್ಗುಣಗಳನ್ನು ಧರಿಸಿದವ ರೆಂದರೆ ಬ್ರಾಹ್ಮಣರು. ಬುದ್ಧನು ಬ್ರಾಹ್ಮಣ ವರ್ಣವು ಮೂಲತಃ ಸದುದ್ದೇಶದಿಂದ ಹಾಗೂ ಸತ್ಸಂಪ್ರ  ದಾಯದಿಂದ ನಿರ್ಮಾಣವಾಯಿತೆಂದು ಅವರ ಮುಖಸ್ತುತಿಯನ್ನೇ ಮಾಡುತ್ತಾನೆ. ಏಕೆಂದರೆ ಬ್ರಾಹ್ಮಣರನ್ನು ತನ್ನ ಹೊಸ ಮಾರ್ಗಕ್ಕೆ ಹಾಗೂ ಚಿಂತನೆಗಳಿಗೆ ಒಲಿಸಿಕೊಳ್ಳಲು ಮತ್ತು ಗೆದ್ದು ಕೊಳ್ಳಲು ನೋಡುತ್ತಾನೆ. ಇದರಿಂದ ಏನು ಸ್ವಷ್ಟ ವಾಗುತ್ತದೆಂದರೆ ಬುದ್ಧ ಬ್ರಾಹ್ಮಣ ವಿರೋಧಿಯಾಗಿ ರಲಿಲ್ಲ. ಜೊತೆಗೆ ಬ್ರಾಹ್ಮಣರ ಕುರಿತು ಬುದ್ಧನ ಟೀಕೆ ಗಳು ವರ್ಣ ವ್ಯವಸ್ಥೆಯ ನಿರಾಕರಣೆಯಾಗಿರಲಿಲ್ಲ.

ಆದರೆ ಇವ್ಯಾವವೂ ಅರ್ಥವಾಗದ ಪ್ರೊಟೆ ಸ್ಟಾಂಟರು ಬುದ್ಧನ ಬಗ್ಗೆ ಇಲ್ಲಸಲ್ಲದ ಕಥೆ ಬರೆದರು. ಏಕೆಂದರೆ ಬುದ್ದ ಅಥವಾ ಬ್ರಾಹ್ಮಣ ಯುರೋಪಿ ಯನ್ನರ ಅನುಭವಕ್ಕೆ ದಕ್ಕಲು ಸಾಧ್ಯವೇ ಇಲ್ಲ. ಯಾರು ಬ್ರಾಹ್ಮಣ? ಎಂಬ ಪ್ರಶ್ನೆಯು ಬ್ರಾಹ್ಮಣನಿಗೆ ತಿಳಿಯುತ್ತದೆ. ಯಾರು ರಿಲಿಜನ್ನನ್ನು ಹೊಂದಿದ ವರು? ಎಂಬ ಪ್ರಶ್ನೆಯು ಪ್ರೊಟೆಸ್ಟಾಂಟನಿಗೆ ತಿಳಿ ಯುತ್ತದೆ.  ಬ್ರಾಹ್ಮಣತ್ವ ಅಥವಾ ಬ್ರಾಹ್ಮಣನಾಗಿರು ವುದು ತಮ್ಮ ಅನುಭವಕ್ಕೆ ನಿಲುಕುವ ಪ್ರಭೇದ ಗಳಾಗಿದ್ದಾಗ ಮಾತ್ರವೇ ಬುದ್ದನ ಪ್ರಶ್ನೆಯು ಅವನ ಸಾರ್ವಜನಿಕರಿಗೆ ಅರ್ಥವಾಗುತ್ತದೆ.

ಆದ್ದರಿಂದ ಬುದ್ಧನ ಬಗ್ಗೆ ಅಥವಾ ಬುದ್ಧಿಸಂ ಬಗ್ಗೆ ಅರ್ಥ ಮಾಡಿಕೊಳ್ಳುವಾಗ ಯುರೋಪಿನವರ ಕಾಗಕ್ಕ ಗುಬ್ಬಕ್ಕನ ಕಥೆ ಬಿಟ್ಟು  ಬೇರೆ ಮಾರ್ಗದಲ್ಲಿ ಹೊರಡಬೇಕಾಗುತ್ತದೆ. ಅದಕ್ಕೆ ಬಾಲಗಂಗಾಧರರು ಮಾರ್ಗದರ್ಶನ ಮಾಡುತ್ತಾರೆ.

* * * * * * * *

ಚಿತ್ರಕೃಪೆ : phramick.files.wordpress.com

1 ಟಿಪ್ಪಣಿ Post a comment
  1. Balachandra's avatar
    Balachandra
    ಫೆಬ್ರ 6 2012

    ಉತ್ತಮವಾದ ಲೇಖನ. ಧನ್ಯವಾದಗಳು. ಬುದ್ಧನ ವಿಚಾರದಲ್ಲಿ ಬಹಳಷ್ಟು ಜನ ಪೂರ್ವಗ್ರಹ ಪೀಡಿತರಾಗಿದ್ದಾರೆ. ಬುದ್ಧನ ವಿಚಾರಗಳು ವರ್ಣ ವ್ಯವಸ್ಥೆಗೆ ವಿರುದ್ಧವಾಗಿವೆ ಎಂಬ ಒಂದೇ ಕಾರಣದಿಂದ ಜನ ಬುದ್ಧಿಸಂ ಮೊರೆ ಹೋಗಿದ್ದಾರೆ. ನಿಜಕ್ಕೂ ನೋಡಿದರೆ ಹಾಗೆ ಹೋದವರಲ್ಲಿ ಬುದ್ಧನ ತತ್ವಗಳನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ. ಆದ್ದರಿಂದಲೇ ಬುದ್ಧಿಸಂ ಭಾರತದಲ್ಲಿ ಕ್ಷಯಿಸಿತು ಎನ್ನಬಹುದು. ಬುದ್ಧಿಸಂ ಒಂದು religion ಅಲ್ಲ. ಅದು ಒಂದು ‘systematic study of reality’. ನೈಜ್ಯತೆಯ ಅನಾವರಣೆಗಾಗಿ ಮಾಡಲ್ಪಟ್ಟ ವಿಮರ್ಶಾತ್ಮಕ ಅಧ್ಯಯನ. ಬುದ್ಧನ ನಂತರ ಬಂದ ಬಹಳಷ್ಟು ಶಾಖೆಗಳು ತಮ್ಮ ತಮ್ಮ philosophy ಗಳಲ್ಲಿ ಭಿನ್ನತೆಗಳನ್ನು ಹೊಂದಿದ್ದವು. ಅವುಗಳಲ್ಲಿ ಕೆಲವು ವೈದಿಕ philosophy ಗೆ ಹತ್ತಿರವಾಗಿಯೂ ಇದ್ದವು.

    ಉತ್ತರ

Leave a reply to Balachandra ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments