ಪ್ರೇಮಿಗಳ ದಿನ ಪೆಸೆಲ್
-ಕೋಮಲ್ ಕುಮಾರ್
ನಮ್ಮ ಸುಬ್ಬ, ಗೌಡಪ್ಪನ ಮಗಳು ರಂಗಮ್ಮಂಗೆ ಕಾಳು ಹಾಕ್ತಾ ಇದ್ದ. ಅದೂ ಒಂದು ಸ್ವಲ್ಪ ದಿನ ಆದ ಮೇಲೆ ತಿಂದಿತ್ತು. ಬಡ್ಡೆಐದ ಇದರ ಬಗ್ಗೆ ನಮಗೆ ಹೇಳೇ ಇರಲಿಲ್ಲ. ಬೆಳಗ್ಗೆನೇ ದೊಗಲೆ ಚೆಡ್ಡಿ, ಬನೀನು ಹಾಕ್ಕಂಡು ಗೌಡಪ್ಪನ ಮನೆಗೆ ಹೋಗೋನು. ಯಾಕ್ಲಾ ಅಂದ್ರೆ, ಪೇಪರ್ ಓದಿ, ಬುದ್ದಿ ಹೆಚ್ಚಿಸಿಕೊಳ್ಳೋಕೆ ಹೋಯ್ತೀನಿ ಅನ್ನೋನು. ಬಡ್ಡೆಐದ ಸಿಸುವಿಹಾರಕ್ಕೆ ಸಾಲೆಗೆ ಹೋಗೋದು ಬಿಟ್ಟಿದ್ದ. ಆಮ್ಯಾಕೆ ಗೊತ್ತಾತು ರಂಗಿ ಸಗಣಿ ಸಾರಿಸಿ ರಂಗೋಲಿ ಹಾಕೋ ಟೇಮಿಗೆ ಹೋಯ್ತಾನೆ ಅಂತ. ಏನು ಇವತ್ತು ಸಗಣಿ ಫ್ರೆಸ್ಸಾ ಅನ್ನೋನು. ಅದಕ್ಕೆ ಅದು, ಇಲ್ಲಾ ಓಲ್ಡ್ ಸ್ಟಾಕ್, ಯಾಕೆ ಪ್ರೆಷ್ ವಾಸನೆ ಬಂತಾ ಅನ್ನೋದು. ಏಥೂ. ಯಾಕೆ ಸಗಣಿ ನೀರಾಗೈತೆ, ಇಲ್ಲಾ ನಮ್ಮ ಹಸಾಕ್ಕೆ ಮೂರು ದಿನದಿಂದ ಬೇಧಿ ಅನ್ನೋದು ರಂಗಿ. ರಂಗೋಲಿ ಸಾನೇ ಸಂದಾಗಿ ಬಿಡ್ತಿಯಾ, ನಿಂಗೆ ಇಸ್ಣು ಚಕ್ರ ಬರೆಯಕ್ಕೆ ಬತ್ತದಾ, ಹೂಂ ಭೂ ಚಕ್ರ ಇಟ್ಟು ಅದರ ಮ್ಯಾಕೆ ರಂಗೋಲಿ ಹಾಕಿ ಬೆಂಕಿ ಇಟ್ಟರೆ ಇಸ್ಣು ಚಕ್ರ ಆಯ್ತದೆ ಅನ್ನೋದು. ಇದು ಇವುಗಳ ಸಂಭಾಷಣೆ. ಬಡ್ಡೆಐದ ಗೌಡಪ್ಪ, ಬತ್ತಿದಾಗೆನೇ ಪೇಪರ್ ಓದೋ ತರಾ ನಾಟಕ ಮಾಡೋನು. ಏನ್ಲಾ ಇವತ್ತಿನ ಇಸ್ಯಾ ಸುಬ್ಬ ಅಂದ್ರೆ, ಯಡೂರಪ್ಪ ರಾಜೀನಾಮೆ ಕೊಟ್ಟವ್ರೆ ಅನ್ನೋನು. ಲೇ ಆ ವಯ್ಯನ ಕಿತಾ ಎಷ್ಟು ಸಲ ರಾಜೀನಾಮೆ ತಗೊಂತಾರೆ, ಒಂದು ಕಿತಾ ಕೊಟ್ಟರೆ ಸಾಲಕ್ಕಿಲ್ವಾ, ಇಲ್ಲಾ ಒಂದು ನೂರು ಜೆರಾಕ್ಸ್ ಮಾಡಿ ಕೊಡಕ್ಕೆ ಹೇಳಬೇಕು ಕಲಾ ಅಂತಿದ್ದ ಗೌಡಪ್ಪ. ನನ್ನ ರಾಸಿ ಫಲ ಏನು ಐತೆ ಅಂತಾ ಗೌಡಪ್ಪ ಅಂದ್ರೆ, ನಿಮಗೆ ಹೊರಿಕ್ಕೆ ಹೋದ್ರೆ ಧರ್ಮದೇಟು ಗ್ಯಾರಂಟಿಯಾ ಅಂತಿದ್ದಾಗೆನೇ, ಗೌಡಪ್ಪ ಪಂಚೆ ಎತ್ಕಂಡು ಒಳಿಕ್ಕೆ ಓಡೋನು.
ಸರಿ ಇವರ ಲವ್, ಬಟ್ಟೆ ಒಗೆಯೋದ್ರಿಂದ ಹಿಡಿದು, ಹಸಾ ಮೈ ತೊಳೆಯೋ ತನಕ ಬಂತು. ಲೇ ಪ್ರೇಮಿಗಳ ದಿನಕ್ಕೆ ರಂಗಿ ಏನ್ಲಾ ಕೊಡಿಸ್ಲಿ ಅಂದಾ ಸುಬ್ಬ. ನೋಡ್ಲಾ ಒಂದು ಫುಲ್ ಬಾಟಲ್ ರಮ್ ಅಂಗೇ ಬೋಟಿ ಬಿರಿಯಾನಿ ಕೊಡಿಸ್ಲಾ ಅಂದ ಸಿದ್ದ. ಲೇ ನಾ ಕೇಳಿದ್ದು ಬಸಮ್ಮಂಗೆ ಅಲ್ಲ ಕಲಾ, ನನ್ನ ಲವರ್ ರಂಗಿಗೆ ಅಂದಾ ಸುಬ್ಬ. ಅಂಗಾರೆ ಒಂದು ಕೆಲಸ ಮಾಡು, ರಂಗಿ ಯಾವಾಗ ನೋಡಿದ್ರು ಹಸಾ, ಹಸಾ ಅಂತಿರ್ತದೆ. ಒಂದು ಸಿಂಧಿ ಆಕಳ ಕೊಡಿಸ್ಲಾ ಅಂದ ಸೀನ. ಲೇ ಆಮ್ಯಾಕೆ ನನ್ನ ಕ್ಯಾಮೆ ಬರೀ ಸಗಣಿ ತೆಗೆಯದೇ ಆಯ್ತದೆ ಕಲಾ ಅಂದು ಒಂದು ಚೂಡಿದಾರ್ ತಂದಿದ್ದ. ನಿಂಗೇನ್ಲಾ ಅಂದ್ರೆ ಪಟಾಪಟಿ ಬಟ್ಟೇಲಿ ಪ್ಯಾಂಟು, ದೊಗಲೆ ಸಲ್ಟು ಹೊಲಿಸಿದ್ದ. ಬಡ್ಡೆ ಹತ್ತಾವು ಎರಡು ಒಳ್ಳೆ ತೊಟ್ಟಿರಾಯ ಗೊಂಬೆ ಕಂಡಂಗೆ ಕಾಣೋವು. ಪಾಪ ರಂಗಿ ಎರಡು ಕಿತಾ ಬಿದ್ದು ಮೂಗು ಒಡಕಂಡಿತ್ತು. ಯಾಕಮ್ಮೀ, ಚೂಡಿ ಪ್ಯಾಂಟು ಹವಾಯಿ ಚಪ್ಪಲಿಗೆ ಸಿಕ್ಕಾಂತದೆ ಅನ್ನೋದು. ಇಬ್ಬರ ಹಿಂದೂ ಒಂದು ಮಣ ಸಗಣಿ ಇತ್ತು. ಯಾಕ್ರಲಾ ಅಂದ್ರೆ ಹವಾಯಿ ಚಪ್ಪಲಿ ಪ್ರಭಾವ ಅಂದ್ವು.
ಸರಿ ಇವರಿಬ್ಬರ ಪ್ರೀತಿ ಇಸ್ಯಾ ಗೌಡಪ್ಪಂಗೆ ಗೊತ್ತಾಗಿ ಸುಬ್ಬಂಗೆ ಸಾನೇ ಉಗಿದಿದ್ದ. ಅವಾಗಿಂದ ಸುಬ್ಬ ರಾತ್ರಿ 12 ಆದ್ ಮ್ಯಾಕೆ ಹೋಗೋನು. ಅದು ಕೊಟ್ಟಿಗೆಯಲ್ಲಿ ಇವರ ಭೇಟಿ. ಒಂದು ಕಿತಾ ಸುಬ್ಬ ಬ್ಯಾಕಿಗೆ ಬ್ಯಾಂಡೇಜ್ ಹಾಕ್ಕಂಡಿದ್ದ. ಯಾಕ್ಲಾ ಅಂದ್ರೆ, ಕೊಟ್ಟಿಗೆ ಮ್ಯಾಕಿಂದ ಎಮ್ಮೆ ಕೊಂಬಿನ ಮೇಲೆ ಬಿದ್ದೆ ಕಲಾ. ಸದ್ಯ ಕೊಂಬು ಚೂಪಾಗಿರಲಿಲ್ಲ ಅಂದಿದ್ದ ಸುಬ್ಬ. ಇಬ್ಬರೂ ಬರೀ ಹಸಾ ಸಗಣಿ ಬಿಟ್ಟರೆ ಬೇರೆ ಮಾತೇ ಇಲ್ಲ. ಯಾರಾದ್ರೂ ಇವರ ಮಾತು ಕೇಳಿಸ್ಕಂಡ್ರೆ ಯಾರೋ ಡೈರಿಯೋರು ಇರಬೇಕು ಅನ್ನೋರು. ಸರಿ ಇಬ್ಬರೂ ಓಡಿ ಹೋಗೋದು ಅಂತಾ ಡಿಸೈಡ್ ಮಾಡಿದ್ರು. ನಮ್ಮೂರು ಬೆಟ್ಟದ ಯಲ್ಲಮ್ಮನ ದೇವಸ್ಥಾನದಾಗೆ ತಾಳಿ ಕಟ್ಟೋದು ಅಂತಾ ಆತು.
ಸರಿ ಬೆಳಗ್ಗೆನೇ ನಾವೆಲ್ಲಾ ಬೆಟ್ಟಕ್ಕೆ ಹೋಗಿದ್ವಿ. ರಂಗಮ್ಮ ಮಾತ್ರ ಬಂದ್ಲು, ಸುಬ್ಬ ಎಲ್ಲವಾ ಅಂದ ಸಿದ್ದ. ಬಡ್ಡೆಐದ ಹಿಂದಿನ ದಿನ ಸಾನೇ ಕಾಳು ಸಾಂಬಾರು ತಿಂದವ್ನೆ, ಹತ್ತತ್ತು ಹೆಜ್ಜೆಗೂ ಕೆರೆತಾವ ಹೋಗ್ತಾ ಇದಾನೆ ಅಂತು. ಬಡ್ಡೆಐದ ಬೆಟ್ಟ ಹತ್ತೋದು ಕೆರೆತಾವ ಹೋಗೋದು ಹಿಂಗೆ ಮಾಡಿದಾನೆ. ಬಾಡಿಯಲ್ಲಿ ಇರೋ ನೀರೆಲ್ಲಾ ಹೋಗೈತೆ. ಕಡೆಗೆ ನಾವೆ ಒಂದು ಚಟ್ಟ ರೆಡಿ ಮಾಡಿ, ಹೆಣದ ತರಾ ಸುಬ್ಬನ ಮ್ಯಾಕೆ ತಂದ್ವಿ. ಜನ ನೋಡ್ದೋರು ಹೆಣನ್ನ ಮಸಾಣಕ್ಕೆ ಒಯ್ಯೋದು ಬಿಟ್ಟು ಗುಡಿಗೆ ಯಾಕೆ ಒಯ್ತಾ ಇದಾರೆ ಅನ್ನೋರು. ಸರಿ ಸುಬ್ಬನ ಇಳಿಸಿದರೆ, ದಪ್ ಅಂತಾ ಬಿದ್ದ. ನಾಯಿ ತರಾ ಎಳ್ಕಂಡು ಹೋಗಿ ದೇವಸ್ಥಾನದೊಳಕ್ಕೆ ಹಾಕಿದ್ವಿ. ಕಣ್ಣು ಮೇಲೆ ಮಾಡೋನು. ಪೂಜಾರಪ್ಪ ಬೇಗ ನೀರು ಹಾಕಿರಿ ಇಲ್ಲಾ ಸತ್ತು ಹೋಯ್ತಾನೆ ಅಂತಿದ್ದ. ಬಡ್ಡೆಐದಂಗೆ ಹಾರ ಹಾಕಿದರೆ ಥೇಟ್ ಹೆಣನೇ ಆಗಿದ್ದ. ತಾಳಿ ಕಟ್ಟಲಾ ಅಂದ್ರೆ ಭಾರ ಐತೆ ಅನ್ನೋನು. ಯಾಕೆ ಅಂತಾ ನೋಡಿದ್ರೆ, ಹಸಾ ಕಟ್ಟೋ ಚೈನ್ನಾಗೆ ತಾಳಿ ಮಾಡಿಸಿದ್ದ. ತಾಳಿ ಕಟ್ಟಿ ಎರಡೇ ನಿಮಿಸಕ್ಕೆ ಬಡ್ಡೆಐದ ರಂಗಿ ತೊಡೆಮ್ಯಾಕೆ ಮಕ್ಕಂಡಿದ್ದ. ಅಣ್ಣಾ ಇವನೇನಾದ್ರೂ ಹೊಗೆ ಹಾಕಿಸ್ಕಂಡ್ರೆ ಅಂತು ರಂಗಿ. ಹಂಗೆಲ್ಲಾ ಅನ್ ಬೇಡವಾ, ಯಲ್ಲಮಂಗೆ ಹರಕೆ ಹೊತ್ಕೊ, ಸುಬ್ಬನಿಂದ ದಿನಾ ಬೆಟ್ಟ ಹತ್ತಿಸುತ್ತೀನಿ ಅಂತಿದ್ದಾಗೆನೆ ಸುಬ್ಬ ಸ್ಟಡಿ ಆಗಿ ಕುಂತಿದ್ದ. ಮದುವೆ ಆದ್ ಮ್ಯಾಕೆ ಮುಂಡೇಮಗಂಗೆ 10 ಡ್ರಿಪ್ಸ್ ಹಾಕಿಸಿದ್ವಿ. ಈಗ ಬದುಕಿದಾನೆ.
ಗೌಡಪ್ಪನೂ ಖುಸಿಯಾಗಿದ್ದ, ಯಾಕ್ರೀ ಅಂದ್ರೆ, ಲೇ ಅದು ನನ್ನ ಮಗಳು ಅಲ್ಲ ಕಲಾ. ಪಾಪ ಅನಾಥೆ ಅಂತಾ ಸಾಕಿದ್ದೆ, ಸುಬ್ಬ ಬಾಳುಕೊಟ್ಟವ್ನೆ ಅಂದು ಎರಡು ಹಸಾ ಅಂಗೇ ಒಂದು ಕೊಟ್ಟಿಗೆ ಮಾಡಿಸಿ ಕೊಟ್ಟವ್ನೆ. ಈಗ ಸುಬ್ಬ ಬೆಳಗ್ಗೆ ಎದ್ರೆ ಕೊಟ್ಟಿಗೆಯಲ್ಲೇ ಡ್ಯೂಟಿ. ಬಡ್ಡೆಐದ ಯಾವಾಗ ಬಂದ್ರು ಸಗಣಿ, ಗೊಬ್ಬರ ಮಾತಾಡ್ತಾನೆ. ಅದೇ ವಾಸನೆಯಾ. ರಂಗಿ ಕಾಮಧೇನು ಹಾಕು ಉತ್ಪಾದಕರ ಅಧ್ಯಕ್ಸೆ ಆಗವ್ಳೆ. ಪ್ರೇಮಿಗಳ ದಿನಾ ಮದುವೆ ಆದ್ರೆ ನಮ್ಮ ಬಾಳು ತಿಪ್ಪೇಗುಂಡಿ ಆಯ್ತದೆ ಅಂತಾನೆ ಸುಬ್ಬ. —–ಪಾಪ ಬಡ್ಡೆಹತ್ತದ್ದು. ಗುಂಡಿಗೆ ಬಿತ್ತು.
* * * * * * * *
ಚಿತ್ರಕೃಪೆ : http://komal1231.blogspot.in




