ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ
-ರಾಕೇಶ್ ಎನ್ ಎಸ್
ಇತ್ತ ಮಹಾರಾಷ್ಟ್ರದ ಹಿತ ಕಾಯಲು ಶಿವಸೇನೆ ಮತ್ತು ರಾಷ್ಟೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇವೆ. ಶಿವಸೇನೆ ೧೯೯೦ರ ಬಳಿಕ ಬಲಿಷ್ಠವಾಗಿ ರೂಪುಗೊಂಡರೆ, ಆ ದಶಕದ ಕೊನೆಗೆ ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ ಜನ್ಮತಳೆಯಿತು. ಆದರೆ ಎನ್‌ಸಿಪಿ ಮೂಲತಃ ರಾಷ್ಟ್ರೀಯ ಆಶಯಗಳನ್ನು ಇಟ್ಟುಕೊಂಡು ಹುಟ್ಟಿದ್ದ ಪಕ್ಷ. ಕಾಂಗ್ರೆಸ್‌ನ ಅಧ್ಯಕ್ಷಗಿರಿಯನ್ನು ವಿದೇಶಿ ಮೂಲದ ಸೋನಿಯಾ ಗಾಂಧಿಯವರಿಗೆ ನೀಡುವುದನ್ನು ಖಂಡಾತುಂಡವಾಗಿ ವಿರೋಧಿಸಿ ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರೀಖ್ ಅನ್ಚರ್ ೧೯೯೯ರ ಜೂನ್‌ನಲ್ಲಿ ಎನ್‌ಸಿಪಿಯನ್ನು ಸ್ಥಾಪಿಸಿದ್ದರು. ಅದು ದೇಶದ ಬೇರೆ ಭಾಗಗಳಲ್ಲಿ ನೆಲೆ ಕಾಣಲು ವಿಫಲವಾದರೂ ಮಹಾರಾಷ್ಟ್ರದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಇತ್ತ ಯುಪಿಎ ಸರ್ಕಾರದಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯಲ್ಲಿರುವಾಗ ಅದರ ಬಗ್ಗೆ ಚರ್ಚಿಸಲು ಸಂಪುಟ ಕಾರ್ಯದರ್ಶಿಗಳು ಕರ್ನಾಟಕ ಮತ್ತು ಮಹರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಎನ್‌ಸಿಪಿ ನೋಡಿಕೊಂಡದ್ದನ್ನು ನಾವು ಯಾವ ಕಾರಣಕ್ಕೂ ಮರೆಯವ ಹಾಗಿಲ್ಲ. ಇದು ಶಿವಸೇನೆಯಷ್ಟು ಉಗ್ರವಾಗಿ ಮರಾಠಿ ಮಾನೂಸ್‌ನ್ನು ಪ್ರತಿಪಾದಿಸದಿದ್ದರೂ ತನ್ನ ನೆಲ ಜಲದ ಪ್ರಶ್ನೆ ಬಂದಾಗ ಲಾಬಿ ಮಾಡಲು ಹಿಂಜರಿದಿಲ್ಲ. ಇತ್ತ ಶಿವಸೇನೆ ಬಿಜೆಪಿಯ ಹೆಗಲಿಗೆ ಕೈ ಹಾಕಿದೆ. ಅದ್ದರಿಂದ ಮಹಾರಾಷ್ಟ್ರದ ಹಿತಕ್ಕೆ ಯಾವ ಪಕ್ಷ ಅಧಿಕಾರಕ್ಕೇರಿದರೂ ಯಾವುದೇ ಧಕ್ಕೆಯಿಲ್ಲ.
ನಮ್ಮ ನೆರೆಯ ರಾಜ್ಯಗಳನ್ನು ಹೊರತಾಗಿ ನೋಡಿದರೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಬಿಹಾರದಲ್ಲಿ ಜನತಾದಳ (ಸಂಯುಕ್ತ), ರಾಷ್ಟ್ರೀಯ ಜನತಾದಳ, ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ಒರಿಸ್ಸಾದಲ್ಲಿ ಬಿಜು ಜನತಾದಳ, ಅಸ್ಸಾಂನಲ್ಲಿ ಅಸೋಮ್ ಗಣ ಪರಿಷತ್, ಪಂಜಾಬ್‌ನಲ್ಲಿ ಅಕಾಲಿ ದಳ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮುಂತಾದ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯದ ಕಲ್ಯಾಣಕ್ಕಾಗಿ ಎಷ್ಟು ದುಡಿಯುತ್ತಿವೆ ಎಂಬ ಪ್ರಶ್ನೆಗಳ ನಡುವೆಯೂ ರಾಜ್ಯದ ಹಿತ ಕಾಯುವುದಕ್ಕಾಗಿ ಕೇಂದ್ರ ಸರ್ಕಾರದ ನಡುವೆ ಗುದ್ದಾಟ ನಡೆಸುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಒಪ್ಪಬೇಕಾಗುತ್ತದೆ.
ಬಹುಶಃ ೧೯೭೫ವರೆಗೆ, ಅಂದರೆ ಕಾಂಗ್ರೆಸ್ ಪಕ್ಷದ ಏಕಮೇವಾದಿಪತ್ಯ ಆಡಳಿತ ದೇಶದಲ್ಲಿ ಇರುವ ತನಕ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಮಾನ್ಯತೆ ಇರಲಿಲ್ಲ (೧೯೬೯ರಲ್ಲಿ ಇಂದಿರಾ ಗಾಂಧಿ ದೇಶದ ಮೊತ್ತಮೊದಲ ಅಲ್ಪ ಬೆಂಬಲದ ಸರ್ಕಾರ ರಚಿಸಿದ್ದಾಗ ಸಿಪಿಐ ಅದನ್ನು ಬೆಂಬಲಿಸಿತ್ತು). ಆದರೆ ೧೯೭೭ರಲ್ಲಿ ೨೯೨ ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೇರಿದ ಜನತಾ ಪಕ್ಷಕ್ಕೆ ಅವಶ್ಯಕತೆ ಇಲ್ಲದಿದ್ದರೂ ಡಿಎಮ್‌ಕೆ ಮತ್ತು ಅಕಾಲಿ ದಳ ಬೆಂಬಲ ನೀಡಿದ್ದವು. ಆಗ ಎಲ್ಲ ಪ್ರಾದೇಶಿಕ ಪಕ್ಷಗಳು ಪಡೆದ ಮತವನ್ನು ಲೆಕ್ಕ ಹಾಕಿದರೆ ಅದು ಚಲಾವಣೆಯಾದ ಮತದ ಶೇ. ೫ ರಿಂದ ಶೇ. ೧೦ ರಷ್ಟು ಮತವಾಗುತ್ತಿತ್ತು ಅಷ್ಟೆ. ಬಳಿಕ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ಕಾರಗಳ ಶಖೆ ಪ್ರಾರಂಭವಾಯಿತು. ಆದರೆ ೧೯೮೯ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಲೇ ಪ್ರಾದೇಶಿಕ ಪಕ್ಷಗಳ ಕಾರುಬಾರಿಗೆ ದೆಹಲಿಯ ಸಂಸತ್ ಭವನ ಆಡುಂಬೊಲವಾಗುವುದು ಅಧಿಕೃತವಾಯಿತು! ಜೊತೆಗೆ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಆಡಿದ್ದೆ ಆಟ ಎಂಬ ಪರಿಸ್ಥಿತಿ ಉದ್ಭವಿಸಿತು ಆದು ಈಗಲೂ ಮುಂದುವರಿದೆ ಕೂಡ. ಆದರೆ ಹೇಳಿಕೊಳ್ಳಲು ತನ್ನದೆನ್ನುವ ಒಂದೇ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷವನ್ನು ಹೊಂದಿರದ, ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನೆ ಹೆಚ್ಚಾಗಿ ಬೆಂಬಲಿಸುತ್ತಿರುವ ಕರ್ನಾಟಕ ಮಾತ್ರ ಈ ರಾಜಕೀಯದಾಟದಲ್ಲಿ ಬರಿ ಮೂಕಪ್ರೇಕ್ಷಕ ಮಾತ್ರವಲ್ಲ ಬಲಿಪಶು ಕೂಡ.
ಕರ್ನಾಟಕದಲ್ಲಿ ಪ್ರಾದೇಶಿಕತೆಯ ಬಗೆಗಿನ ಅರಿವು, ಅದನ್ನು ಉಳಿಸಿಕೊಳ್ಳುವುದಕ್ಕಾಗಿನ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ಸ್ವಾತಂತ್ರ್ಯಪೂರ್ವದ ಇತಿಹಾಸವೇ ಇದೆ. ಅಲೂರು ವೆಂಕಟರಾವ್‌ರ ಮುಂದಾಳತ್ವದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿ ಇಂತಹದ್ದೆ ಒಂದು ಹೋರಾಟವಾಗಿತ್ತು.
ನಾಗ್ಪುರದಲ್ಲಿ ೧೯೨೦ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ) ಸ್ಥಾಪಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಪ್ಪಿತ್ತು. ಹಾಗೆಯೇ ಸ್ಥಾಪನೆ ಕೂಡ ಮಾಡಿತ್ತು. ಗುಡ್ಲಪ್ಪ ಹಳ್ಳಿಕೇರಿಯವರ ಪ್ರಯತ್ನದ ಫಲವಾಗಿ ನೆಹರು ಸಮಿತಿಯೂ ೧೯೨೮ರಲ್ಲಿ ಕನ್ನಡ ಮಾತನಾಡುವ ಎಲ್ಲರನ್ನು ಒಂದೇ ಪ್ರಾಂತ್ಯದ ಸೂರಿನಡಿಗೆ ತರುವ ಶಿಫಾರಸ್ಸು ಕೂಡ ಮಾಡಿತ್ತು. ಆದರೆ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕುತ್ತಲೆ ಏಕೀಕರಣ ಚಳವಳಿಯ ಕಾಲೆಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈ ಹಾಕಿತ್ತು. ಆಗ ಕನ್ನಡಿಗರು ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿ, ಕೊಡಗು, ಮೈಸೂರು ಮತ್ತು ಹೈದರಾಬಾದ್‌ಗಳ ಮಧ್ಯೆ ಹರಿದು ಹಂಚಿ ಹೋಗಿದ್ದರು. ೧೯೪೮ರಲ್ಲಿ ರಚನೆಯಾದ ಧರ್ ಸಮಿತಿ ರಾಜ್ಯಗಳ ಪುನರ್ರಚನೆಯನ್ನು ವಿರೋಧಿಸಿತ್ತು. ನಂತರ ಸರ್ಕಾರ ಜೆವಿಪಿ (ಜವಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ಸಮಿತಿಯನ್ನು ರಚಿಸಿತು. ಸಮಿತಿ ಆಂಧ್ರಪ್ರದೇಶವನ್ನು ರಚಿಸಲು ಮಾತ್ರ ತನ್ನ ಒಲವನ್ನು ವ್ಯಕ್ತಪಡಿಸಿತು.
ಇದನ್ನು ತನಗೆ ಬಗೆದ ದ್ರೋಹ ಎಂದೆ ಭಾವಿಸಿದ ಏಕೀಕರಣ ಚಳವಳಿಗಾರರು ೧೯೫೧ರ ಚುನಾವಣೆಯಲ್ಲಿ ಸ್ಪರ್ಧಿಸಲು ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷವನ್ನು ನಮ್ಮ ರಾಜ್ಯದ ಮೊದಲ ಪ್ರಾದೇಶಿಕ ಪಕ್ಷ ಎಂದು ಕರೆಯಬಹುದು. ಈ ಪಕ್ಷವನ್ನು ಕೆಂಗಲ್ ಹನುಮಂತರಾಯ ಎಸ್.ನಿಜಲಿಂಗಪ್ಪ, ಮುಂತಾದವರು ಬೆಂಬಲಿಸಿದ್ದರು! ಕನ್ನಡಿಗರ ಒತ್ತಾಯಕ್ಕೆ ಮಣಿದ ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಫಜಲ್ ಅಲಿ ಸಮಿತಿ ರಚಿಸಿದರು. ಈ ಸಮಿತಿ ಕಾಸರಗೋಡನ್ನು ಹೊರತುಪಡಿಸಿ ಕರ್ನಾಟಕದ ಏಕೀಕರಣಕ್ಕೆ ಒಪ್ಪಿಕೊಂಡಿತ್ತು. ಅಂದರೆ ಸ್ವಾತಂತ್ರ್ಯೋತ್ತದ ಮೊದಲ ವರ್ಷಗಳಲ್ಲಿಯೇ ಕನ್ನಡಿಗರು ತಮ್ಮದೇ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಕೇಂದ್ರವ ಬಲಿಷ್ಠ ನಾಯಕತ್ವಕ್ಕೆ ಸಡ್ಡು ಹೊಡೆದು ತಮ್ಮ ಗುರಿ ಸಾಧಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಆದರೆ ಆ ಬಳಿಕ?
ಎಸ್ ನಿಜಲಿಂಗಪ್ಪ (ಎಸ್‌ಎನ್) ಅವರನ್ನು ಅಧುನಿಕ ಕರ್ನಾಟಕದ ನಿರ್ಮಾತೃ ಎಂದೆ ಕರೆಯಲಾಗುತ್ತದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ (೧೯೬೯) ನೀಲಂ ಸಂಜೀವ ರೆಡ್ಡಿಯವರನ್ನು ರಾಷ್ಟ್ರಪತಿಯನ್ನಾಗಿಸಬೇಕೆಂಬ ಅವರ ಆಸೆಗೆ ಇಂದಿರಾಗಾಂಧಿ ಅಡ್ಡಿಯಾದರು. ಅದೇ ಕಾಂಗ್ರೆಸ್‌ನ ವಿಭಜನೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ನಿಜಲಿಂಗಪ್ಪ, ಕಾಮರಾಜ್, ಎಸ್.ಕೆ. ಪಾಟೀಲ್, ರಾಮಕೃಷ್ಣ ಹೆಗಡೆ ಮುಂತಾದವರು ಕಾಂಗ್ರೆಸ್ (ಒ) ಸ್ಥಾಪಿಸಿದರು. ಈ ಪಕ್ಷಕ್ಕೆ ರಾಷ್ಟೀಯ ಮಾನ್ಯತೆ ಮತ್ತು ಸ್ವರೂಪವಿದ್ದರೂ ಎಸ್.ಎನ್. ಮತ್ತು ರಾಮಕೃಷ್ಣ ಹೆಗಡೆಗೆ ಕರ್ನಾಟಕದ ಜೊತೆಗಿದ್ದ ನಂಟಿನಿಂದಾಗಿ ಈ ಪಕ್ಷ ರಾಜ್ಯದಲ್ಲಿ ಬಿರುಗಾಳಿ ಸೃಷ್ಟಿsಸಬಹುದು ಎಂದು ನಂಬಲಾಗಿತ್ತು ಆದರೆ ಆ ಬಿರುಗಾಳಿಯ ಭ್ರಮೆ ಬೋರಾಲಾಗಿ ಬಿದ್ದು ಹೋಯಿತು.
ಅನಂತರ ಹಿಂದುಳಿದ ವರ್ಗಗಳ ನಾಯಕರೆಂದೆ ಜನಪ್ರಿಯರಾಗಿದ್ದ ದೇವರಾಜ ಅರಸು ಇಂದಿರಾ ಗಾಂಧಿ ಜೊತೆ ಮುನಿಸಿಕೊಂಡು ೭೦ರ ದಶಕದ ಅಂತ್ಯಕ್ಕೆ ಅರಸು ಕಾಂಗ್ರೆಸ್ ಕಟ್ಟಿದರು. ಆದರೆ ಅ ಪಕ್ಷ ಕೂಡ ರಾಜ್ಯದ ಜನತೆಯ ಮನದರಸನಾಗದೆ ಹೋಯಿತು. ಅರಸು ತಮ್ಮ ‘ಕ್ರಾಂತಿರಂಗ’ವನ್ನು ಗಟ್ಟಿ ತಳಪಾಯದ ಮೇಲೆ ಕಟ್ಟುವ ಮುಂಚಿತವಾಗಿಯೇ ವಿಧಿವಶರಾದರು. ಈ ಬಗ್ಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾರ ಜೊತೆ ಮಾತನಾಡಿದಾಗ, “ಅರಸು ತಮ್ಮ ಕಾರ್ಯಕ್ರಮಗಳನ್ನು ಮೊದಲು ಇಂದಿರಾ ಗಾಂಧಿಯ ಕಾರ್ಯಕ್ರಮಗಳೆಂದೆ ಪ್ರಚಾರ ಮಾಡಿದ್ದರು. ಅದ್ದರಿಂದ ಜನರು ಕೂಡ ಅದನ್ನೆ ಸತ್ಯ ಎಂದು ನಂಬಿದ್ದರು. ಹಾಗೆ ಅವರು ಇನ್ನೂ ಕೆಲ ಸಮಯ ಬದುಕಿರಬೇಕಿತ್ತು. ಆಗ ನಾಡಿನ ಚಿತ್ರಣವೇ ಬದಲಾಗುತ್ತಿತ್ತು” ಎನ್ನುತ್ತಾರೆ. ಮುಂದಿನ ದಶಕ ಕರ್ನಾಟಕದಲ್ಲಿ ಅನೇಕ ರಾಜಕೀಯ ಸ್ಥಿತ್ಯಂತರಗಳೇ ನಡೆದವು. ಜನತಾ ಪಕ್ಷ, ಜನತಾದಳಗಳ ಕಾರುಬಾರು ರಾಜ್ಯದಲ್ಲಿ ಇತ್ತು. ಆದರೆ ಆ ಪಕ್ಷಗಳಿಗೆ ರಾಷ್ಟೀಯ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿತ್ತು.
೯೦ರ ದಶಕದಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಕೂಡ ಎರಡೆರಡು ಪಕ್ಷ ಕಟ್ಟಿದರೂ ತಮ್ಮ ಗುರಿ ತಲುಪಲು ಆಗಲಿಲ್ಲ. ಅವರು ೧೯೯೪ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ ಆ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ೧೦ ಸ್ಥಾನಗಳನ್ನು ಗೆದ್ದರು. ಅದಕ್ಕಿಂತ ಹೆಚ್ಚಾಗಿ ಅನೇಕ ಕ್ಷೇತ್ರಗಳು ಕಾಂಗ್ರೆಸ್‌ನ ಕೈ ತಪ್ಪುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಅನಂತರ ಕರ್ನಾಟಕ ವಿಕಾಸ ಪಕ್ಷ ಕಟ್ಟಿದ್ದರು. ಆದರೆ ಅವರು ಆ ಮೂಲಕ ಗುಡ್ಡಕ್ಕೆ ಮಣ್ಣು ಹೊರುವ ಕೆಲಸಮಾಡಿದರು ಎಂದು ನಾವು ಹೇಳುವ ಹಾಗೆ ಇಲ್ಲ. ಏಕೆಂದರೆ ಅವರು ಆ ಪಕ್ಷ ಕಟ್ಟಿ ಅಲ್ಲೆ ಮರೆತು ಬಿಟ್ಟರು, ಇನ್ನು ಮಣ್ಣು ಹೊರುವ ಶ್ರಮವೆಲ್ಲಿ!
ಇನ್ನು ರಾಜ್ಯದ ಮೊದಲ ಕಾಂಗ್ರೆಸ್ಸೆತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಲಾಲು ಪ್ರಸಾದ್ ಯಾದವ್ ದೇವೇಗೌಡರ ಸಲಹೆಯ ಮೇರೆಗೆ ಜನತಾದಳದಿಂದ ಉಚ್ಛಾಟಿಸಿದ್ದರು. ಹೆಗಡೆ ’ಲೋಕಶಕ್ತಿ’ ಮತ್ತು ’ರಾಷ್ಟ್ರೀಯ ನವನಿರ್ಮಾಣ ವೇದಿಕೆ’ ಎಂಬ ರಾಜಕೀಯ ಸಂಘಟನೆ ಕಟ್ಟಿಕೊಂಡು ಅಧಿಕಾರದ ಪಡಸಾಲೆಗೆ ಏರುವ ಪ್ರಯತ್ನ ಮಾಡಿದರೂ ಒಂದು ಹೆಜ್ಜೆ ಇಡಲು ಅವರಿಂದ ಸಾಧ್ಯವಾಗಲಿಲ್ಲ. ಲೋಕಶಕ್ತಿ ಆ ಬಳಿಕ ಸಂಯುಕ್ತ ಜನತಾದಳದೊಂದಿಗೆ ವಿಲೀನವಾಯಿತು.
ಈಗ ನಮ್ಮ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜನತಾದಳ (ಎಸ್), ಜನತಾದಳ (ಯು), ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ) ಮುಂತಾದ ರಾಷ್ಟ್ರೀಯ ಪಕ್ಷಗಳಿವೆ. ಇವುಗಳಲ್ಲಿ ಮೊದಲ ಮೂರು ಪಕ್ಷಗಳನ್ನು ಬಿಟ್ಟರೆ ಉಳಿದ ಪಕ್ಷಗಳದ್ದು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಅನ್ನುವ ಪರಿಸ್ಥಿತಿ ಇದೆ.
ಜನತಾದಳ (ಎಸ್) ಮಾಜಿ ಪ್ರಧಾನಿ ದೇವೆಗೌಡರ ವಶದಲ್ಲಿದ್ದು ದೇಶದ ಬೇರೆಡೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ಇದರ ಶಕ್ತಿ ಮತ್ತು ಯುಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಜನತಾದಳ(ಎಸ್) ನಮ್ಮ ಮಣ್ಣಿನ ಮಗನ ಪಕ್ಷವಾಗಿದ್ದರೂ ಕೂಡ ಅದು ಈ ಮಣ್ಣಿನ ಪಕ್ಷವಾಗಿ ಬೆಳೆದಿಲ್ಲ. ಈಗ ಅದು ಬೇರೆ ಎಲ್ಲೂ ತನಗೆ ನಾಯಕರು ಇಲ್ಲ, ನೆಲೆಯೂ ಇಲ್ಲ ಎಂದು ನಮ್ಮ ಈ ಫಲವತ್ತಾದ ನಾಡಿನಲ್ಲಿ ತೆನೆ ಹೊರುತ್ತಿದ್ದಾರೆಯೇ ಹೊರತು ಈ ನಾಡ ಪ್ರೇಮದಿಂದಲ್ಲ.
ರೈತ ಸಂಘದ ನಂಜುಂಡಸ್ವಾಮಿಯವರ ಕನ್ನಡ ದೇಶ, ವಿಜಯ್ ಮಲ್ಯರ ಜನತಾ ಪಕ್ಷ, ವಾಟಾಳ್ ನಾಗರಾಜ್‌ರ ಕರ್ನಾಟಕ ವಾಟಳ್ ಪಕ, ವಿಜಯ್ ಸಂಕೇಶ್ವರರ ಕನ್ನಡ ನಾಡು ಪಕ್ಷ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿಯವರ ಪ್ರಗತಿರಂಗ, ದೇವನೂರು ಮಹಾದೇವರ ಸರ್ವೋದಯ ಕರ್ನಾಟಕ, ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್‌ರ ಸುವರ್ಣ ಕರ್ನಾಟಕ, ಹರಿ ಖೋಡೆಯವರ ಅರಸು ಸಂಯುಕ್ತ ಪಕ್ಷ – ಎಲ್ಲವು ಕರ್ನಾಟಕದ ರಾಜಕೀಯ ರಂಗದಲ್ಲಿ ಒಂದು ಪ್ರಯತ್ನವಾಗಿ ದಾಖಲಾಗಿದೆಯೇ ಹೊರತು ಒಂದು ಪರ್ಯಾಯ ಶಕ್ತಿಯಾಗಿ ಅಲ್ಲ.
ನಮ್ಮಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವರಿಗೆ ತಾಳ್ಮೆ ಕಡಿಮೆ ಇತ್ತು. ಅವರೆಲ್ಲ ಒಂದೆ ಚುನಾವಣೆಯಲ್ಲಿ ಬಸವಳಿದು ಹೋಗಿದ್ದರು. ಬಹುತೇಕರು ತಮ್ಮ ಇಳಿವಯಸ್ಸಿನಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದರು. ಅದ್ದರಿಂದ ತಮ್ಮ ಪ್ರಯತ್ನವನ್ನು ಒಂದು ತಾರ್ಕಿಕ ಅಂತ್ಯ ತಲುಪಿಸಲು ಅವರ ವಯಸ್ಸು ಮತ್ತು ಆರೋಗ್ಯ ಜೊತೆ ನೀಡಲಿಲ್ಲ. ಕನ್ನಡದ ಜನಪ್ರಿಯ ನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್ ಮುಂತಾದವರು ರಾಜಕೀಯ ಪ್ರವೇಶಿಸುವ ಅವಕಾಶವಿದ್ದರೂ ದೂರ ನಿಂತದ್ದು, ಹಾಗೇ ಅಂಬರೀಷ್‌ರಂತಹ ನಟರು ರಾಷ್ಟ್ರೀಯ ಪಕ್ಷವನ್ನೆ ನೆಚ್ಚಿಕೊಂಡದ್ದು ಕೂಡ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷವೊಂದು ಹುಟ್ಟದಂತೆ ತಡೆಯಿತು ಎಂದು ಊಹಿಸಬಹುದು.
ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ಮಾಜಿ ಮೀನುಗಾರಿಕ ಸಚಿವ ಜಯಪ್ರಕಾಶ್ ಹೆಗ್ಡೆ, “ಪ್ರಾದೇಶಿಕ ಪಕ್ಷ ಕಟ್ಟಲು ಉತ್ತಮ ನಾಯಕತ್ವ ಬೇಕು. ಅರಸುರಂತಹ ದೊಡ್ಡ ನಾಯಕರಿಗೂ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಾಗಲಿಲ್ಲ. ಇದರ ಜೊತೆಗೆ ಹಣ ಬಲವು ಬೇಕಿದೆ. ಇಂದು ಹಣ ಇರುವವರಿದ್ದರೆ ಆದರೆ ಅವರಲ್ಲಿ ನಾಯಕತ್ವ ಗುಣವಿಲ್ಲ” ಎನ್ನುತ್ತಾರೆ.
ಪಿಜಿಆರ್ ಸಿಂಧ್ಯಾರ ಪ್ರಕಾರ, “ನಮ್ಮ ನಾಡಿಗೆ ಹೊಸ ಪ್ರಾದೇಶಿಕ ಪಕ್ಷದ ಅಗತ್ಯವಿಲ್ಲ, ಜೆಡಿಎಸ್ ಪ್ರಾದೇಶಿಕ ಪಕ್ಷದ ಕೆಲಸ ಮಾಡುತ್ತಿದೆ. ಇಂದು ಜಾತಿ ಅಧಾರದಲ್ಲಿ ಮತ ಧ್ರುವೀಕರಣವಾಗಿದೆ. ಉನ್ನತ ತತ್ವಗಳನ್ನು ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮತದಾರರು ಪ್ರಬುದ್ಧರಿದ್ದಾರೆ ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದೆನ್ನುತ್ತಾರೆ.
ಇದೀಗ ಯಡಿಯೂರಪ್ಪ ಹಾಗೂ ಶ್ರೀರಾಮುಲು ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆ ಅನ್ನುವ ಸುದ್ದಿ ಹುಟ್ಟಿಕೊಂಡಿದೆ. ಅದಕ್ಕೆ ಇಂಬು ನೀಡುವ ಅನೇಕ ಪ್ರಯತ್ನಗಳು ಕೂಡ ಸಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದು ಸುಲಭ, ಆದರೆ ಅದನ್ನು ಬೆಳೆಸಲು ಎಷ್ಟು ಕಷ್ಟವಿದೆ ಎಂಬುದಕ್ಕೆ ನಮ್ಮ ರಾಜ್ಯದಲ್ಲಿ ಚರಿತ್ರೆಯ ಪುಟಗಳಲ್ಲಿ ಹೇಳ ಹೆಸರಿಲ್ಲದೆ ಹೋಗಿರುವ ಅನೇಕ ಪ್ರಾದೇಶಿಕ ಪಕ್ಷಗಳ ಹೆಸರೇ ಸಾಕ್ಷಿ. ಈ ಇತಿಹಾಸವನ್ನು ಕಂಡೆ ಬೆಚ್ಚಿ ಬಿದ್ದ ಸಿದ್ಧರಾಮಯ್ಯ ತಮ್ಮ ಅಹಿಂದದ ಸಹವಾಸ ತೊರೆದು ಕಾಂಗ್ರೆಸ್‌ನ ಅಂಗಳಕ್ಕೆ ಬಂದಿದ್ದು.
ಯಡಿಯೂರಪ್ಪರಂತು ತಮ್ಮ ಜಾತಿ ಬಾಂಧವರನ್ನು ನೆಚ್ಚಿಕೊಂಡಿದ್ದಾರೆ. ಶ್ರೀರಾಮುಲುವಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಜನ ಮತ್ತು ಅನುಭವದ ಬೆಂಬಲವಿದೆ. ಆದರೆ ಇದೆಲ್ಲವು ಮತವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದು ಅಲ್ಲದೆ ಅವರ ಮೇಲೆ ಭ್ರಷ್ಟಾಚಾರದ ಅನೇಕ ಆರೋಪಗಳಿದ್ದು ಒಂದೆರಡು ಪ್ರಕರಣಗಳಲ್ಲಿ ಮಾತ್ರ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಇನ್ನು ಅವರು ವಾಪಾಸು ಯಾವಾಗ ಜೈಲು ವಾಸ ಶುರು ಮಾಡಬೇಕಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮಾಜಿ ಟೆಲಿಕಾಂ ಸಚಿವ ಸುಖರಾಂರವರಿಗೆ ೧೫ ವರ್ಷಗಳ ಬಳಿಕ ಶಿಕ್ಷೆಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಾದೇಶಿಕ ಪಕ್ಷಗಳು ವೈಯಕ್ತಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹುಟ್ಟಿಕೊಂಡವೇ ಹೊರತು ಕನ್ನಡ ನಾಡಿನ ಇಶ್ಯೂಗಳ ಆಧಾರದಲ್ಲಿ ಅಲ್ಲ. ಮೂಲ ಪಕ್ಷದಲ್ಲಾದ ಅವಮಾನ, ನಿರ್ಲಕ್ಷ್ಯ, ಸೂಕ್ತ ಸ್ಥಾನಮಾನ ನೀಡದಿರುವುದು ಅಥವಾ ಪಕ್ಷದಿಂದಲೇ ಉಚ್ಛಾಟನೆಗಳ ಕಾರಣಕ್ಕಾಗಿ ಬಹುತೇಕ ನಾಯಕರು ಹೊಸ ಪಕ್ಷ ಕಟ್ಟಿದ್ದು. ಅರಸು, ಹೆಗಡೆ, ಬಂಗಾರಪ್ಪ ಇವರೆಲ್ಲರ ವಿಷಯದಲ್ಲಿ ಇದು ನಿಜ. ಇದೀಗ ಯಡಿಯೂರಪ್ಪ ಮತ್ತು ಶ್ರೀರಾಮುಲುರ ವಿಷಯದಲ್ಲಿ ಕೂಡ ಅದೇ ರೀತಿ ಆಗಲಿದೆ. ಹೊದ ಪುಟ್ಟ, ಬಂದ ಪುಟ್ಟ ಪಕ್ಷಗಳ ಸಾಲಿಗೆ ಇವರೂ ಕೂಡ ತಮ್ಮ ಹೆಸರು ನೋಂದಾಯಿಸುತ್ತ್ತಾರಷ್ಟೆ.




![northeast India political parties[2]](https://nilume.net/wp-content/uploads/2012/02/northeast-india-political-parties2.jpg?w=300&h=209)

ನಮ್ಮ ಯುವಕರೆಲ್ಲ ಹಿಂದುತ್ವದ ಭೂತ ತಲೆಗೇರಿಸಿಕೊಂಡು ಹೆಂಡ ಕುಡಿದಿರೋ ಮಂಗಗಳ ತರಹ ಆಡುವಾಗ ಎಲ್ಲಿದೆ ಬತ್ತದೆ ಸ್ವಾಮಿ ಪ್ರಾದೇಶಿಕ ಪಕ್ಸಾ? ಮಾಡಿದ್ರೆ ನಮ್ ರಾಕೇಶ್ ಶೆಟ್ರೆ ಮಾಡಬೇಕು..
ಆಯ್ತು… ಸಮಾಧಾನ… ಮಾಡೋಣ…
ಆದರೆ ನಿಮ್ಮ ಬೆಂಬಲ ಮಾತ್ರ ನಮ್ ಮಣ್ಣೂ,ನಮ್ ನೆಲ ಅನ್ನುತ್ತಾ ಸಿಕ್ ಸಿಕ್ಕ ಕಡೆ ಡಿ-ನೋಟಿಫ಼ೈ ಮಾಡಿಕೊಂಡವರಿಗೆ ಅಂತ ಗೊತ್ತಿದೆ 🙂
ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಇರುವುದರಿಂದಲೇ ಅಲ್ಲಿ ಅಭಿವೃಉದ್ಧಿಯಾಗಿರುವುದು. ರಾಷ್ಟ್ರೀಯ ಪಕ್ಷಗಳು ಕರ್ನಾಟಕಕ್ಕೆ ದ್ರೋಹವನ್ನೇ ಮಾಡೀರುವುದು.
ಲೋಕೇಶ್
ಒಳ್ಳೆಯ ಲೇಖನ, ಆದರೆ ಅಂಕಣದ ಹೆಡ್ಡೀಂಗ್ ಬೇರೆ ಇರಬೇಕಿತ್ತು ಅನ್ನಿಸುತ್ತೆ. ಯಾಕಂದ್ರೆ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ನೆಲೆ ಕಂಡು ಕೊಳ್ಳಲು ಹಿಂದೆ ಆಗಿಲ್ಲ. ಮುಂದೆ ಆಗಲ್ಲ ಅಂತ ಹೇಳಕ್ಕೆ ಆಗಲ್ಲ. ಒಟ್ಟಿನಲ್ಲಿ ಕರ್ನಾಟಕಕ್ಕೆ ಕನ್ನಡ ಕೇಂದ್ರಿತ ಒಂದು ಪ್ರಾದೇಶಿಕ ಪಕ್ಷ ಬೇಕು ಎಂಬುದು ಮಾತ್ರ ತುಂಬಾ ಸ್ಪಷ್ಟ.