-ಸುಗುಣ ಮಹೇಶ್
“ರುದ್ರಾಕ್ಷಿ” ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ.
“ರುದ್ರ್ಚ ಮತ್ತು
ಅಕ್ಷ” ಎಂಬ ಎರಡು ಶಬ್ಧಗಳಿಂದಾದ ರೂಪವೇ ರುದ್ರಾಕ್ಷಿ.
“ರುದ್ರ” ಎಂದರೆ ಶಿವನ ಮತ್ತೊಂದು ಹೆಸರು.
“ಅಕ್ಷ” ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ.
ರುದ್ರ್ಚ ಅಕ್ಷ ಎಂಬುದಕ್ಕೆ ಬಹಳ ಅರ್ಥಗಳೇ ಇವೆ… “ರುದ್ರ ಎಂದರೆ! ‘ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ’ ಅಂದರೆ ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ’ ಎಂಬ ಅರ್ಥ” ಶಿವ ತನ್ನ ಮೂರನೇ ಕಣ್ಣಿನಿಂದ ಎಲ್ಲವನ್ನೂ ನೋಡಬಲ್ಲ ಆ ಕಣ್ಣು ಅಕ್ಷರೇಖೆಯ ಸುತ್ತ ಸುತ್ತುತ್ತಲಿರುತ್ತದೆ ಆದ್ದರಿಂದಲೇ “ಅಕ್ಷ” ಎಂದು ಕರೆಯುತ್ತಾರೆ. ಮತ್ತೊಂದು ಅರ್ಥವನ್ನು ಎಲ್ಲೋ ಓದಿದ ನೆನಪು ಅ- ಎಂದರೆ ತೆಗೆದುಕೊಳ್ಳುವುದು ಮತ್ತು ಕ್ಷ- ಎಂದರೆ ಕೊಡುವುದು ಎಂದರ್ಥ, “ಅಕ್ಷ” ಎಂದರೆ ತೆಗೆದುಕೊಳ್ಳುವುದು ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ನಮ್ಮ ದುಃಖವನ್ನು ತೆಗೆದುಕೊಂಡು ಸುಖವನ್ನು ಕೊಡುವ ಕ್ಷಮತೆ ಇರುವುದೆಂದು ಸಹ ಹೇಳುತ್ತಾರೆ.
ತಾರಕಾಕ್ಷ ಮತ್ತು ಕಮಲಾಕ್ಷರೆಂಬ ತಾರಕಪುತ್ರರು ಅಧರ್ಮಗಳ ಆಚರಣೆಯಲ್ಲಿ ತೊಡಗಿಸಿಕೊಂಡಿರುವಾಗ ಅತಿ ವಿಷಾದದಿಂದ ಅಶ್ರುಗಳಿಂದ ತುಂಬಿದ್ದ ಶಿವನ ನೇತ್ರದಿಂದ ಕೆಲವು ಕಂಬನಿಗಳು ಭುವಿಯ ಮೇಲೆ ಬಿದ್ದ ಪರಿಣಾಮದಿಂದಲೇ “ರುದ್ರಾಕ್ಷಿ ವೃಕ್ಷ” ಹುಟ್ಟಿತೆಂದು ಹೇಳಲಾಗುತ್ತದೆ.
ರುದ್ರಾಕ್ಷಿ ಮರ ನಿತ್ಯ ಹರಿದ್ವರ್ಣ ವೃಕ್ಷ, ವರ್ಷ ಪೂರ್ಣ ಎಲೆಗಳು ಬಲಿತು ಉದುರುತ್ತವೆ ಹಾಗೂ ಹೊಸ ಚಿಗುರಿನಿಂದ ಕಂಗೊಳಿಸುತ್ತದೆ. ಈ ರುದ್ರಾಕ್ಷಿ ವೃಕ್ಷಗಳು ಸಮತಟ್ಟ ಪ್ರದೇಶಗಳಲ್ಲಿ ಬೆಳೆಯದೆ ಯಾವಾಗಲೂ ತಗ್ಗು ಪ್ರದೇಶದಲ್ಲೇ ಬೆಳೆಯುತ್ತವೆ. ಇದು ಹಿಮಾಲಯದ ಪರ್ವತಗಳಲ್ಲಿ, ಕಾಶ್ಮೀರ, ನೇಪಾಳ ಈ ಪ್ರದೇಶಗಳಲ್ಲೇ ಹೆಚ್ಚು ಕಾಣುತ್ತೇವೆ (ದಕ್ಷಿಣ ಏಷಿಯಗಳಲ್ಲಿ ಹೆಚ್ಚು ದೊರಕುವುದು). ಇದರ ಎಲೆಗಳು ಮಾವಿನ ಮರದ ಎಲೆಯಂತಿರುತ್ತೆ, ರುದ್ರಾಕ್ಷಿ ವೃಕ್ಷದಲ್ಲಿ ಬಿಡುವ ಹಣ್ಣುಗಳನ್ನು ಹಲವಾರು ಯತಿಗಳು ತಿನ್ನುತ್ತಾರೆ, ಇದರಿಂದ ಬಾಯಾರಿಕೆ ಆಗುವುದಿಲ್ಲವೆಂದು ಸಹ ಹೇಳುತ್ತಾರೆ. ರುದ್ರಾಕ್ಷಿ ಮರದ ಹಣ್ಣುಗಳು (ನೀಲಿ ಬಣ್ಣದಲ್ಲಿರುತ್ತದೆ) ತುಂಬಾ ಹಣ್ಣಾಗಿ ಕೆಳಗೆ ಬಿದ್ದನಂತರ ಒಳಗಿರುವ ಬೀಜಗಳು ಒಣಗುತ್ತವೆ. ಬಿದ್ದ ಹಣ್ಣುಗಳನ್ನು ಕೆಲ ದಿನ ನೀರಿನಲ್ಲಿ ನೆನೆಸಿಟ್ಟರೆ ಸಿಪ್ಪೆ ಬೀಜದಿಂದ ಬೇರ್ಪಡುತ್ತದೆ. ಒಂದೇ ಹಣ್ಣಿನಲ್ಲಿ ಸುಮಾರು ೧೦ ರಿಂದ ೧೫ ಬೀಜಗಳಿರುತ್ತವೆ (ಹಣ್ಣಿನೊಳಗೆ ಬೀಜಗಳು ಹೆಚ್ಚಾದಂತೆ ಬೀಜಗಳ ಆಕಾರ ಕೂಡ ಕಡಿಮೆ ಇರುತ್ತದೆ ಅಂದರೆ ಚಿಕ್ಕ ರುದ್ರಾಕ್ಷಿ ಬೀಜಗಳು). ನಿಮಗೇ ಗೊತ್ತೆ ರುದ್ರಾಕ್ಷಿ ಬೀಜದಲ್ಲಿ ಮೊದಲೇ ರಂಧ್ರವಿರುತ್ತದೆ ಅದಕ್ಕೆ ವಾಹಿನಿ ಎನ್ನುತ್ತಾರೆ… ಆ ರಂಧ್ರ ಮೊದಲೇ ಇರುವುದರಿಂದ ಪೋಣಿಸಲು ಸುಲಭವಾಗುತ್ತದೆ ಅಲ್ಲವೇ….? ಈ ರುದ್ರಾಕ್ಷಿಗಳಲ್ಲಿ “ಎಲೆಕ್ಟ್ರೋಮ್ಯಾಗ್ನಟಿಕ್” ಗುಣಧರ್ಮ ಹೊಂದಿರುತ್ತದೆ.
ರುದ್ರಾಕ್ಷಿಯಲ್ಲಿ “೧ ರಿಂದ ೩೫” ಮುಖಗಳಿರುವ ರುದ್ರಾಕ್ಷಿ ಇರುತ್ತವೆ (ಸಾಮಾನ್ಯವಾಗಿ ೧ ರಿಂದ ೧೪ ಮುಖದ ರುದ್ರಾಕ್ಷಿಗಳೇ ಹೆಚ್ಚು ಸಿಗುತ್ತವೆ). ಆದರೆ ಏಕಮುಖ ರುದ್ರಾಕ್ಷಿ ಬಲು ಅಪರೂಪ ದೊರಕುವುದು ಅದರ ಆಕಾರವೂ ಸಹ ವಿಭಿನ್ನವಾಗಿರುತ್ತದೆ. ರುದ್ರಾಕ್ಷಿ ನಸು ಕೆಂಪಿನ ಬಣ್ಣದಾಗಿರುತ್ತದೆ, ಅದರ ಮೇಲೆ ಹಳದಿ ಬಣ್ಣದಂತಹ ಪಟ್ಟೆಗಳನ್ನು ನಾವು ಕಾಣಬಹುದು. ರುದ್ರಾಕ್ಷಿಗಳಲ್ಲಿ ಹಲವು ಬಣ್ಣಗಳೂ ಸಹ ಇವೆ ಬಿಳಿ, ಹಳದಿ, ಕೆಂಪು, ಕಪ್ಪು ಇವೆಲ್ಲವೂಗಳಲ್ಲಿ ಬಿಳಿ ಬಣ್ಣದ ರುದ್ರಾಕ್ಷಿ ಶ್ರೇಷ್ಠವೆಂದು ನಂಬಿದ್ದಾರೆ. ಈ ರುದ್ರಾಕ್ಷಿಗಳನ್ನು ಕೊರಳಿನ ಮಾಲೆ ಮತ್ತು ಜಪ ಮಾಲೆಯಾಗಿ ಧರಿಸುತ್ತಾರೆ. ಮಾಲೆಯಲ್ಲಿ ಸಾಮಾನ್ಯವಾಗಿ ೧೦೮ ರುದ್ರಾಕ್ಷಿಗಳನ್ನು ಪೋಣಿಸಿದ ಮಾಲೆಯನ್ನು ಹೆಚ್ಚು ಧರಿಸಿದ್ದನ್ನ ನಾನು ನೋಡಿದ್ದೇನೆ ಆದರೆ ೨೪೯, ೧೦೦೦ ಹಾಗೂ ೧೧೦೦ ಇರುವ ರುದ್ರಾಕ್ಷಿಮಾಲೆಯನ್ನೂ ಸಹ ಧರಿಸುತ್ತಾರೆಂದು ಕೇಳಿದ್ದೇನೆ.
ರುದ್ರಾಕ್ಷಿ ಬೀಜ ಮತ್ತು ಮರದ ಸಿಪ್ಪೆಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ವಾತ, ಪಿತ್ತ, ಕಫಾ, ಚರ್ಮರೋಗ, ರಕ್ತದ ಒತ್ತಡ ಇಂತಹ ಹಲವಾರು ತೊಂದರೆಗಳಿಗೆ ಔಷಧಿ ತಯಾರಿಸಲು ಮನೆಮದ್ದಾಗಿ ರುದ್ರಾಕ್ಷಿ ಬೀಜದ ಪುಡಿಯನ್ನು ಬಳಸುತ್ತಾರೆ. ಇನ್ನು ರುದ್ರಾಕ್ಷಿ ಮರಗಳನ್ನು ಪೀಠೋಪಕರಣ ತಯಾರಿಕೆಗಳಿಗೆ ಹಾಗೂ ಹಣ್ಣು ಪ್ಯಾಕ್ ಮಾಡಲು ಬಳಸುತ್ತಾರೆ.
ಸೂಚನೆ: ಮಾಹಿತಿಯಲ್ಲೇನಾದರು ತಪ್ಪಿದ್ದರೆ ಮತ್ತು ಮತ್ತಷ್ಟು ಮಾಹಿತಿಗಳು ಗೊತ್ತಿದ್ದರೆ ತಿಳಿಸಿ…
* * * * * * *
ಚಿತ್ರಕೃಪೆ : ಸುಗುಣ ಮಹೇಶ್
olle lekhana suguna avare.
@ satya hanasoge, dhanyavadagaLu