ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2012

5

ವಿವೇಕಾನಂದರು ನಮಗೆಷ್ಟು ಗೊತ್ತು?

‍ನಿಲುಮೆ ಮೂಲಕ

-ಹೇಮಾ ಪವಾರ್

ಈಗಾಗಲೇ ಕಾಂಟ್ರಾವರ್ಷಿಯಲ್ ನ ಉತ್ತುಂಗದಲ್ಲಿರುವ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗಿದೆ ಎನ್ನಲಾದ ದಿನೇಶ್ ಅಮಿನ್ ಮಟ್ಟುರವರ ಲೇಖನದ ರೆಫರೆನ್ಸ್ ಇಟ್ಟುಕೊಂಡೇ ಬರೆಯುತ್ತಿದ್ದೇನೆ. ಶಾಲೆಯ ದಿನಗಳಲ್ಲಿ ನನಗೆ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದವರು, ಹೊರದೇಶದಲ್ಲಿ ಭಾರತದ ಬಗ್ಗೆ ಮಾತನಾಡಿ ಮನ್ನಣೆ ಪಡೆದವರು ಎಂಬಂತಹ ಬೇಸಿಕ್ ಮಾಹಿತಿಗಳನ್ನು ಬಿಟ್ಟರೆ ಹೆಚ್ಚೇನು ತಿಳಿದಿರಲಿಲ್ಲ. ಕಾಲೇಜಿನ ದಿನಗಳಲ್ಲಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ, ಬಡವರ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದರೂ ಕಿಟಕಿಯಿಂದ ಕೈಗೆ ಸಿಕ್ಕಿದ್ದನ್ನು ಬಿಕ್ಷುಕರಿಗೆ ದಾನ ಮಾಡಿಬಿಡುತ್ತಿದ್ದರು ಎಂದೆಲ್ಲಾ ಉರು ಹಚ್ಚಿ ಭಾಷಣಗಳಲ್ಲಿ ಒಪ್ಪಿಸುತ್ತಿದ್ದದ್ದೇ ಹೊರತು ಒಬ್ಬ ವ್ಯಕ್ತಿಯಾಗಿ, ಸಾಧಕರಾಗಿ, ಅದೆಷ್ಟೋ ಜನರಿಗೆ ಪ್ರೇರಕ ಶಕ್ತಿಯಾದ ವಿವೇಕಾನಂದರ ಚಿಂತನೆಗಳನ್ನು ನಿಲುವುಗಳನ್ನು ಬಿಂಬಿಸುವಂತಹ ಮಾಹಿತಿ ಶಾಲೆ ಅಥವಾ ಕಾಲೇಜಿನ ದಿನಗಳಲ್ಲಿ ದಕ್ಕುವುದು ವಿರಳವಾಗಿತ್ತು.

ಇಂತಹ ಪುಸ್ತಕದಲ್ಲಿ, ಹೀಗೆ, ಇಂತಹವರು ಹೇಳಿದ್ದಾರೆ ಎಂದು ಇಡೀ ಪುಸ್ತಕವನ್ನೇ ಇಂಡೆಕ್ಸ್ ಮಾಡಿಕೊಂಡಿದ್ದ ಖ್ಯಾತ ಕಾದಂಬರಿಯೊಂದನ್ನು ಓದಿ ವಿವೇಕಾನಂದರ ನಿಜದ ನಿಲುವು ಹೀಗಿತ್ತೇ ಎಂದು ಗೊಂದಲಕ್ಕೊಳಗಾಗಿ ಅವರ ಬಗ್ಗೆ ಓದಲು ತೊಡಗಿದೆ. ಸೆಂಟ್ರಲ್ ಲೈಬ್ರರಿಯ ಹತ್ತಾರು ಪುಸ್ತಕಗಳ ನಡುವೆ ಆಸಕ್ತಿಕರ ಎನಿಸಿದ ಪುಸ್ತಕ ‘Swami Vivekananda On Himself’, ಆತ್ಮ ಕಥೆ ಎಂದು ಹೇಳಲು ಬರದಿದ್ದರೂ ಆ ಪುಸ್ತಕದಲ್ಲಿದ್ದದ್ದೆಲ್ಲಾ ವಿವೇಕಾನಂದರ ಬರಹಗಳೇ, ಅವರ ಡೈರಿಯಿಂದ ಹೆಕ್ಕಿದ್ದು, ಹಲವರ ಜೊತೆ ಹಂಚಿಕೊಂಡ ಪತ್ರಗಳು ಹೀಗೆ ಅವರ ವಿಚಾರಗಳನ್ನು ಹಿಡಿಯಾಗಿ ಬಿಂಬಿಸುವಂತಹ ಪುಸ್ತಕವದು. ಓದಿ ಮುಗಿಸುವಷ್ಟರಲ್ಲಿ ಅವರ ಚಿಂತನೆಗಳಿಂದ ತೀವ್ರ ಪ್ರಭಾವಿತಳಾಗಿದ್ದೆ. ವಿವೇಕಾನಂದರು ಮತ್ತವರ ಚಿಂತನೆಗಳು ಎಲ್ಲಾ ಕಾಲಕ್ಕು ಅನ್ವಯವಾಗುವಂತವು. ತಮ್ಮ ಬರಹಕ್ಕೆ ಬೆಂಬಲಿಸುವಂತದ್ದಷ್ಟೇ ಮುಖ್ಯವಾಗಿಸಿಕೊಂಡು ಅವರು ಹೀಗಿದ್ದರು ನೋಡಿ ನಾನು ಹೇಳುತ್ತಿರುವುದೂ ಅದನ್ನೇ ಎಂದು ತಮ್ಮ ವಿಕೃತಿಯನ್ನು ವಿವೇಕಾನಂದರ ಮೇಲೆ ಹೇರಲೆತ್ನಿಸಿದ ಆ ಖ್ಯಾತ ಕಾದಂಬರಿಕಾರರ ಬಗ್ಗೆ ಯೋಚಿಸಿ ನಗು ಬಂದಿತ್ತು.

ವಿವೇಕಾನಂದರು ಹುಕ್ಕ ಸೇದುತ್ತಿದ್ದರು, ಅವರಿಗೆ ಮದುವೆ ಮಾಡಲು ಅವರ ತಾಯಿ ಇನ್ನಿಲ್ಲದ ಪ್ರಯತ್ನ ಪಟ್ಟು ಸೋತು ನೊಂದಿದ್ದರು, ಎಂಬಷ್ಟೇ ಮಾಹಿತಿಗಳಲ್ಲದೆ ದಿನಗಟ್ಟಲೆ ಧ್ಯಾನದಲ್ಲಿ ಮಗ್ನರಾಗಿರಬಲ್ಲವರಾಗಿದ್ದರು, ಸರ್ವ ಧರ್ಮ ಸಮ್ಮೇಳನಕ್ಕೆ ಅತೀ ಕಡಿಮೆ ದುಡ್ಡಿನಲ್ಲಿ ಪ್ರಯಾಣ ಮಾಡಿದ್ದರಲ್ಲದೆ, ವಾಪಾಸು ಬರಲು ಅವರ ಬಳಿ ಹಣವೇ ಇರಲಿಲ್ಲ. ಸಮ್ಮೇಳನದ ಹಿಂದಿನ ದಿನ ರಸ್ತೆಯಲ್ಲಿಯೇ ಕಳೆದಿದ್ದರು. ಕಡೆಯ ಭಾಷಣಕಾರರಾಗಿ, ಎಲ್ಲರೂ ನಿರ್ಗಮಿಸುತ್ತಿರಬೇಕಾದರೆ ತಮ್ಮ ಮಾತನ್ನು ಶುರು ಮಾಡಿದೆ, ಧ್ವನಿಯಲ್ಲಿ ಕಂಪನವಿದ್ದಂತಿತ್ತು ನಂತರ ಯಾವುದೋ ಶಕ್ತಿ ಮೈಯಲ್ಲಿ ಹೊಕ್ಕಂತೆ ಮಾತಾಡಿದೆ ಎಂದು ಸ್ವತಃ ವಿವೇಕಾನಂದರೇ ಅವರ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸಮ್ಮೇಳನದಲ್ಲಿ ಅವರ ಭಾಷಣ ಎಷ್ಟು ಜನಪ್ರಿಯವಾಯಿತೆಂದರೆ ಮಾರನೇ ದಿನ ಅದೇ ರಸ್ತೆಯ ಮೇಲೆ ಅವರ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಎಲ್ಲ ಇಂಗ್ಲೀಷ್ ಪತ್ರಿಕೆಗಳು ಅವರನ್ನು ಹೊಗಳಿ ಬರೆದಿದ್ದವು. ಇಂತಹ ಸಣ್ಣ ವಿವರಗಳು ನಿಜವಾದ ವಿವೇಕಾನಂದರು ನಮಗೆ ಹತ್ತಿರವಾಗುವಂತೆ ಮಾಡುತ್ತವೆ. ಒಬ್ಬ ಮನುಷ್ಯ ಐಕಾನ್ ಹೌದೋ ಅಲ್ಲವೋ ಎಂಬುದು, ಆತನ ಕೆಲಸಗಳಿಂದ, ಚಿಂತನೆಗಳಿಂದ ನಮಗೆ ತಿಳಿಯಬೇಕೆ ಹೊರತು ಅವನೊಬ್ಬ ಐಕಾನ್ ಹೌದೇ ಹೌದು ಎಂದು ಒಂದು ನಿಯಮಿತ ಗುಂಪಿನ ಹೇರಿಕೆಯಿಂದಾಗಲೀ, ಜಯಂತಿ ಉತ್ಸವಗಳ ಆಚರಣೆಯಿಂದಾಗಲೇ ನಮ್ಮ ಹಾಗೂ ಮುಂದಿನ ಪೀಳಿಗೆಗೆ ತಿಳಿಯಬೇಕಿಲ್ಲ.

ವಿವೇಕಾನಂದರು ಹಿಂದುಗಳ ಬ್ರಾಂಡ್ ಅಂಬಾಸಿಡರ್ ಎಂಬಂತೆ ಬಿಂಬಿಸುವ ಕೋಮುವಾದಿಗಳ ಪ್ರಯತ್ನಕ್ಕೆ ನೀರೆರೆಚುವಂತಿರುವ ಅಮೀನ್ ಮಟ್ಟು ಬರಹ ಕಹಿಯಾದರೂ ಅರಗಿಸಿಕೊಳ್ಳಬೇಕಾದ, ವಿವೇಕಾನಂದರನ್ನು ರಾಜಕೀಯದಿಂದ ಹೊರಗಿಡಲು ಅಗತ್ಯವಾದ ಮಾಹಿತಿಪೂರ್ಣ ಲೇಖನ. ವಸ್ತು ನಿಷ್ಠತೆಯಲ್ಲಿ ಬರಹವನ್ನು ಅಲ್ಲಗಳೆಯುವಂತಿಲ್ಲವಾದರೂ, ವಿವೇಕಾನಂದರನ್ನು ತಿಂಡಿಪೋತ, ದಡ್ಡ ಶಿಕ್ಷಕ ಎಂದೆಲ್ಲ ಕರೆದಿರುವುದು ಅರಗಿಸಿಕೊಳ್ಳಲು ಕಷ್ಟವೇ. ವಿವೇಕಾನಂದರು ಮಾಂಸಾಹಾರಿಯಾಗಿದ್ದರು ಎಂಬುದೂ ನನಗೆ ದಿನೇಶರ ಲೇಖನ ಓದಿಯೇ ತಿಳಿದದ್ದು. ಗಾಂಧೀಜಿ ತಮ್ಮ ಆತ್ಮ ಸಂಯಮ ಪರೀಕ್ಷೆಗಾಗಿ ಹೆಂಗಸಿನೊಂದಿಗೆ ಬೆತ್ತಲೆ ಮಲಗಿದ್ದರು, ನೆಹರು ಮೌಂಟ್ ಬ್ಯಾಟನ್ ಹೆಂಡತಿಯೊಂದಿಗೆ ಸಲಿಗೆಯಿಂದಿದ್ದರು ಎಂಬೆಲ್ಲಾ ಮಾತುಗಳನ್ನು ಕೇಳಿದಾಗ, ಚಿಕ್ಕಂದಿನಿಂದ ಓದಿ ಕೇಳಿ ನಮ್ಮಲ್ಲೇ ಬೆಳೆಸಿಕೊಂಡು ಬಂದಿರುವ ವ್ಯಕ್ತಿಗಳ ಬಗೆಗಿನ ಗೌರವದ ಬುಡವೇ ಅಲ್ಲಾಡಿದಂತಾಗುತ್ತದೆ. ಆದರೆ ಎಷ್ಟೇ ದೊಡ್ಡವನಾದರೂ ಆತನು ನಮ್ಮೆಲ್ಲರಂತೆ ಮನುಷ್ಯ ಎಂಬುದು, ಕಂಡಕಂಡ ಬಾಬಾಗಳು, ಮಠಾಧೀಶರು, ಸ್ವಾಮೀಜಿಗಳಿಗೆ ಕಾಲಿಗೆ ಬಿದ್ದು ದೈವತ್ವಕ್ಕೇರಿಸುವ ನಮಗೆ ಅರಿವಾಗಲು, ಒಳಹೋಗಲು ಇನ್ನು ಬಹಳಷ್ಟು ಸಮಯಬೇಕೆನಿಸುತ್ತದೆ.

ಆರ್.ಎಸ್.ಎಸ್ ನ ಅಂಗವಾದ ಎ.ಬಿ.ವಿ.ಪಿ ಐಕಾನಿಕ್ ವ್ಯಕ್ತಿಯಾದ ಭಗತ್ ಸಿಂಗ್ ನಿಜದಲ್ಲಿ ಒಬ್ಬ ಕಮ್ಯುನಿಷ್ಟ್ ಆಗಿದ್ದ. ದೇವರನ್ನು ಸುತಾ ರಾಂ ನಂಬುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಚಂದವೆತ್ತಿದ್ದ ಹಣವನ್ನು ಕದ್ದು ಸಿನಿಮಾ ನೋಡಲು ಹೋಗಿದ್ದ ಎಂದೆಲ್ಲಾ ನಾವು ಹೇಳದಿದ್ದರೆ, ದೇಶಕ್ಕಾಗಿ ಪ್ರಾಣ ಕೊಟ್ಟ ಆತನ ತ್ಯಾಗವನ್ನು, ಭವಿಷ್ಯದ ಭಾರತ ಹೀಗಿರಬೇಕು ಎಂದು ಆತ ಕಂಡ ಕನಸುಗಳನ್ನು, ಚಿಂತನೆಗಳನ್ನು ಕೋಮುವಾದಿಗಳ ವಶಕ್ಕೆ ಬಿಟ್ಟು ಸುಮ್ಮನೆ ಕುಳಿತಂತಾಗುತ್ತದೆ. ವಿವೇಕಾನಂದ, ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಗಾಂಧೀಜಿ, ಸಾವರ್ಕರ್, ಮುಂತಾದ ಇತಿಹಾಸ ಪುರುಷರನ್ನು ಅವರಿದ್ದ ಹಾಗೇ ಯಾವುದೇ ಹೇರಿಕೆ, ಇಂಟರ್ ಪ್ರೆಟೇಶನ್ನುಗಳಿಲ್ಲದೆ ಅರ್ಥಮಾಡಿಕೊಳ್ಳುವುದು ಸದ್ಯದ ಅನಿವಾರ್ಯ.

* * * * * * *

ಚಿತ್ರಕೃಪೆ : rockmemorial.org

5 ಟಿಪ್ಪಣಿಗಳು Post a comment
  1. manjunath's avatar
    ಫೆಬ್ರ 20 2012

    ಭಲೇ ಭಲೇ

    ಉತ್ತರ
  2. ರಾಕೇಶ್ ಶೆಟ್ಟಿ's avatar
    ಫೆಬ್ರ 20 2012

    ವಿವೇಕಾನಂದರು ಕೋಮುವಾದಿಗಳ-ಸಿಕ್ಯುಲರ್ಗಳ ಹಿಡಿತಕ್ಕೆ ಸಿಕ್ಕುವವರಲ್ಲ…ಇಬ್ಬರಿಗೂ ಸಮ್ಯ ಸಿಕ್ಕಗೆಲ್ಲ ಅವರು ಜಾಡಿಸಿದ್ದಾರೆ… ಇನ್ನ ಅಮೀನ್ ಮಟ್ಟು ಅವರು ನನ್ನ ಹಿಂದಿನ ವಿವೇಕಾನಂದರ ಬಗೆಗಿನ ಲೇಖನದಲ್ಲಿ ಹೇಳಿದಂತೆ ಬಲ ಪಂಥೀಯರ ಮೇಲೆ ಗುಂಡು ಹಾರಿಸಲು ವಿವೇಕಾನಂದರ ಹೆಗಲು ಬಳಸಿಕೊಂಡಂತಿದೆಯಷ್ಟೇ ಅವರ ಬರಹ…. ಅದರೊಳಗೆ ನಿಮಗೆಂತ ಮಾಹಿತಿ ಸಿಕ್ಕಿತು.. ಅದರ ಬದಲು ವಿವೇಕಾನಂದರ ಕುರಿತು ಇನ್ನಷ್ಟು ಓದಿಕೊಳ್ಳಿ.ಅವರೆ ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದಾರೆ… ಆಗ ’ಇಸಂ’ಗಳ ನೆರಳಿಲ್ಲದ ವಿವೇಕಾನಂದರು ಕಾಣುತ್ತಾರೆ.

    ಉತ್ತರ
  3. ಸುಮನ's avatar
    ಸುಮನ
    ಫೆಬ್ರ 21 2012

    ರಾಕೇಶರವರೇ,

    ನೀವು ತುಂಬಾ ಓದಿಕೊಂಡು ಇದ್ದೀರಾ, ಅದು ನಿಮ್ಮ ಲೇಖನಗಳಲ್ಲೇ ಕಾಣುತ್ವೆ. ಪ್ರತಿ ವಾರವೂ ದೇಶ ಭಾಷೆ ಮಣ್ಣಿನ ವಿಚಾರವಾಗಿ ನಮಗೂ ಲೇಖನಗಳ ಮೂಲಕ ತಿಳಿಸಿಕೊಡಿ.

    ನಿಲುಮೆಯ ಈ ಪ್ರಯತ್ನಗಳಿಗೆ ಧನ್ಯವಾದಗಳು

    ಉತ್ತರ
  4. ವಿಜಯ್ ಪೈ's avatar
    ವಿಜಯ್ ಪೈ
    ಫೆಬ್ರ 21 2012

    ಎಷ್ಟೋ ಜನರಿಗೆ ವಿವೇಕಾನಂದರೊ ಅಥವಾ ಇನ್ನಾರೋ ಮಹಾನರು ಜೀವನ ಘಟ್ಟದಲ್ಲಿ ತಮ್ಮಂತೆ ಅಪಾಪೋಲಿತನದ ಕೆಲಸಗಳನ್ನು ಮಾಡಿದ್ದರು ಎಂಬುದನ್ನು ಓದಿ ಪುಳಕವಾಗುತ್ತದೆ. ಅವರು ಕೂಡ ತಮ್ಮ ‘ಲೆವಲ್” ನವರೆ ಅಂತ ಖುಷಿಯಾಗುತ್ತದೆ. ಆದರೆ ಅವರು ಮುಂದುವರಿದು ಮಹಾನರಾದರು, ನಿಸ್ವಾರ್ಥತೆಯನ್ನು ಮೆರೆದರು ಎಂಬುದು ಮರೆತುಹೋಗುತ್ತದೆ. ಇದ್ದಿದ್ದನ್ನು ಇದ್ದ ಹಾಗೆಯೇ ಬರೆಯೋಣ..ಆದರೆ ಕ್ಷುಲ್ಲಕವನ್ನು ವಿಜೃಂಭಣೆ ಮಾಡುವುದನ್ನು ಬಿಡೋಣ!.

    ದಿನೇಶ ಅಮೀನ ಮಟ್ಟು ತಮ್ಮ ಲೇಖನದ ಧಾಟಿ ಅಷ್ಟು ಸರಿಯಿರಲಿಲ್ಲ ಎಂಬುದನ್ನು ತಮ್ಮ ನಂತರದ ಪ್ರತಿಕ್ರಿಯೆಯಲ್ಲಿ ಒಪ್ಪಿಕೊಂಡಿದ್ದಾರೆ. ಅವರಿಗೆ ವಿವೇಕಾನಂದರು ನಮ್ಮ-ನಿಮ್ಮಂತೆ ಸಹಜವಾಗಿದ್ದರು ಎಂಬುದನ್ನು ಹೇಳುವದಕ್ಕಿಂತ ಮುಖ್ಯ ಲೇಖನದ ಮೂಲಕ ಬಲಪಂಥಿಯರನ್ನು ಬಡಿಯುವುದಾಗಿತ್ತು. ನಂತರದ ಪ್ರತಿಕ್ರಿಯೆಗಳಲ್ಲಿ ಅವರನ್ನು ಎತ್ತಿ ಕುಣಿದಾಡಿದವರ ಉದ್ದೇಶವು ಇದೇ ಆಗಿತ್ತು. ನಿಜ ವಿವೇಕಾನಂದರು ಇವರ ನಡುವೆ ಕಳೆದುಹೋದರು.
    ಅಮೀನ ಮಟ್ಟು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ The monk as a man ಪುಸ್ಕಕವನ್ನು ಓದಿನೋಡಿದರೆ, ಅಮೀನ ಮಟ್ಟು ವಿಷಯ ಉತ್ಪ್ರೇಕ್ಷೆ ಎಷ್ಟು ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಸಿಸ್ಟರ್ ನಿವೇದಿತಾ ಬರೆದ ಈ ಪುಸ್ತಕವನ್ನು ಕೂಡ ಓದಿ ನೋಡಿ. ನೆಟ್ನಲ್ಲಿ ಡೌನಲೋಡ ಮಾಡಿಕೊಳ್ಳಬಹುದು..
    http://www.archive.org/details/selectessaysofsi00niveuoft

    ನಮ್ಮದೊಂದು ಸ್ವಭಾವ. ಪಶ್ಷಿಮದಲ್ಲಿ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಇತ್ಯಾದಿಗಳು ಗರಾಜಿನಲ್ಲಿ ತಮ್ಮ ಉದ್ಯಮ ಶುರುಮಾಡಿ ನಂತರ ಬಿಲಿಯಾಧಿಪತಿಗಳಾದರು ಎಂಬುದರ ಪ್ರಭಾವ ಸುಧಾಮೂರ್ತಿ ಸಾಸಿವೆಡಬ್ಬದಲ್ಲಿ ಕೂಡಿಟ್ಟಿದ್ದ ಹಣ ಕೊಟ್ಟು ಇಂಫೋಸಿಸ್ ಪ್ರಾರಂಭಕ್ಕೆ ಕಾರಣದರು, ಕಿರಣ ಮಜುಂದಾರ್ ಶಾ ಗರಾಜಿನಲ್ಲಿ ಬಯೊಕಾನ್ ಶುರುಹಚ್ಚಿಕೊಂಡರು ಎಂದು ಬಣ್ಣಕೊಡುವವರೆಗೆ ಹೋಗುತ್ತದೆ. ಇದನ್ನು ಓದಿದದವರಿಗೆ ಅವರ ಲೆವಲ್ ಗೆ ಏರಿದ ಸಂತೋಷವೂ ಸಿಗುತ್ತದೆ ಅಥವ ಏರಿದಂತೆ ನಾಟಕವಾಡಲು ಅವಕಾಶವನ್ನು ಸೃಷ್ಟಿಸಿಕೊಡುತ್ತದೆ :). ನಮ್ಮ ಈ ಸ್ವಭಾವವನ್ನು ಪತ್ರಕರ್ತರು, ಪತ್ರಿಕೋದ್ಯಮಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

    ಕೊನೆಯದಾಗಿ, ಗಾಂಧಿ ಮತ್ತು ನೆಹರೂ ವನ್ನು ಒಂದೆ ತಟ್ಟೆಯಲ್ಲಿ ತೂಗಲಾಗದು..ಆ ವಿಷಯದಲ್ಲಿ. ಗಾಂಧೀಜಿಯದು ತಮ್ಮನ್ನು ತಾವು ಪರಿಕ್ಷಿಸಿಕೊಳ್ಳುವ ಒಪ್ಪಿಕೊಳ್ಳಲಾಗದ ಹುಚ್ಚು ಪ್ರಯೋಗಳೆನಿಸಿದರೆ..ನೆಹರೂ ಸಾಹೇಬರು ಮಾಡಿದ್ದು ತಾವು ಸರ್ಟಿಫೈಡ್ ಲಂಪಟರು ಎಂದು ಪ್ರೂವ ಮಾಡುವ ನಿಟ್ಟಿನಲ್ಲಿ !.

    ಉತ್ತರ
  5. ನಂದನ್ ಕಾರ್ಣಿಕ್'s avatar
    ನಂದನ್ ಕಾರ್ಣಿಕ್
    ಫೆಬ್ರ 22 2012

    ಲೇಖಕಿಗೆ ಸ್ವಲ್ಪ ವಿಷ್ಯದ ಗೊಂದಲ ಇರುವಂತಿದೆ. ಆದರೂ ನಿರೂಪಣೆ ಚೆನ್ನಾಗಿದೆ.

    ಉತ್ತರ

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments