ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 21, 2012

1

ಎಷ್ಟು ಶುದ್ಧ ಮಾಡಿದರೂ ಕೊಚ್ಚೆ ಕೊಚ್ಚೆಯೇ

‍ನಿಲುಮೆ ಮೂಲಕ

ವಿಷ್ಣುಪ್ರಿಯ

ತಾನು ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಮಾನವಭ್ರಮೆಗೆ ಪ್ರತಿ ಬಾರಿಯೂ ತಡೆ ಬೀಳುತ್ತಿದೆ ಎಂಬುದು ದಿಟವಾಯಿತು. ಪ್ರಕೃತಿಯ ನಿರ್ಧಾರಗಳ ಮೇಲೆ ಮಾನವ ತನ್ನ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಪ್ರಕೃತಿ ಮಾನವನಿಗಿಂತಲೂ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಕೂಡಾ ಸ್ಪಷ್ಟವಾಯಿತು.

ಈ ಚರಂಡಿಗಳಲ್ಲಿ ಹರಿಯುವ ನೀರನ್ನು ನೊಡಿದರೆ ಮೈಯೆಲ್ಲಾ ಜಿರಳೆ ಹರಿದಂತಾಗುತ್ತದೆ! ಬೆಂಗಳೂರಿಗರಿಗಂತೂ ಮಳೆ ಬಂದು ಚರಂಡಿಯಲ್ಲಿ ನೀರುಕ್ಕಿ ಹರಿದರೆ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಬಂದೀತು! ಬೆಂಗಳೂರಿನಲ್ಲಿ ಚರಂಡಿಗಳ ನೀರು ಅದ್ಯಾವ ಕೆರೆ ಸೇರುತ್ತದೆ ಎಂದು ನೋಡುವುದಕ್ಕೆ ಹೊರಟರೆ ಆ ಕೆರೆಯಿಂದಲೇ ನಮಗೆ ವಿತರಣೆಯಾಗುವಂಥ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ. ನಿರನ್ನು ಶುದ್ಧೀಕರಿಸಿಯೇ ಕೆರೆಗೆ ಬಿಡಲಾಗುತ್ತದೆ, ಕೆರೆಯ ನಿರನ್ನು ಶುದ್ಧೀಕರಿಸಿಯೇ ಕುಡಿಯುವುದಕ್ಕೆ ನೀಡಲಾಗುತ್ತದೆ. ಹೀಗಾಗಿ ಆ ನೀರಿನಿಂದ ಏನೂ ಸಮಸ್ಯೆ ಆಗದು ಎಂದು ಆಧಿಕಾರಿಗಳು ಹೇಳಿದರು ಎಂದಾದರೆ ಅವರ ಮಾತನ್ನು ನಂಬಬೇಡಿ. ಯಾಕೆಂದರೆ ಕೊಚ್ಚೆ ನೀರನ್ನು ಅದೆಷ್ಟೇ ಶುದ್ಧೀಕರಿಸಿದರೂ ಸಹ, ಅದ್ಯಾವ ಅತ್ಯಾಧುನಿಕ ತಂತ್ರಜ್ಞಾನದಿಂದ ಶುದ್ಧೀಕರಿಸಿದರೂ ಸಹ ಅದರಲ್ಲಿರುವ ವೈರಾಣುಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ ಎಂದು ವಿಜ್ಞಾನಿಗಳ ತಂಡವೊಂದರ ಸಂಶೋಧನೆ ಹೇಳುತ್ತಿದೆ.

ಯೂನಿವರ್ಸಿಟಿ ಆಫ್ ಮಿನೆಸೋಟಾದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಶುದ್ಧೀಕರಿಸಿದ ನೀರಿನಲ್ಲಿಯೂ ಸಹ ಬಹಳಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಇತರ ವೈರಾಣುಗಳು ಇರುತ್ತವೆ. ಈ ವೈರಾಣುಗಳು ಸೋಂಕು ನಿರೋಧಕಗಳು ಅಥವಾ ಆಂಟಿಬಯಾಟಿಕ್ ಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಇವುಗಳ ಕಾರಣದಿಂದಾಗಿಯೇ ಹಲವು ರೋಗಗಳು ಹರಡುತ್ತವೆ ಎಂಬ ವಾಸ್ತವಾಂಶ ತಿಳಿದುಬಂದಿದೆ.

ಬ್ಯಾಕ್ಟೀರಿಯಾಗಳ ಸೃಷ್ಟಿ
ತ್ಯಾಜ್ಯ ನೀರನ್ನು ಗುಣಮಟ್ಟದ ವಿಧಾನಗಳಿಂದ ಶುದ್ಧೀಕರಿಸುವಾಗ ಆಂಟಿಬಯಾಟಿಕ್ ಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವಂಥ ಬ್ಯಾಕ್ಟೀರಿಯಾ ವಂಶವಾಹಿಗಳ ಸೃಷ್ಟಿಯಾಗುತ್ತದೆ. ಇದರಿಂದಾಗಿ ಶುದ್ಧೀಕರಿಸಿದ ನೀರಿನಲ್ಲಿಯೂ ಸಹ ಅಗಾಧ ಪ್ರಮಾಣದ ಬ್ಯಾಕ್ಟೀರಿಯಾಗಳು ಉಳಿದುಕೊಳ್ಳುತ್ತವೆ. ಆದರೆ ಈ ಬ್ಯಾಕ್ಟೀರಿಯಾಗಳು ಸುಲಭವಾಗಿ ಗೋಚರಿಸುವುದಿಲ್ಲ. ಅಲ್ಲದೆ ನೀರನ್ನು ಶುದ್ಧೀಕರಿಸಿದ್ದೇವೆ ಎಂದು ನಾವು ಭಾವಿಸುವ ಕಾರಣ ಅದರ ಶುದ್ಧತೆಯ ಬಗ್ಗೆ ಮತ್ತೊಮ್ಮೆ ಪರೀಕ್ಷಿಸಲು ಪ್ರಯತ್ನಿಸುವುದಿಲ್ಲ. ಇದರಿಂದಾಗಿ ಬ್ಯಾಕ್ಟೀರಿಯಾಗಳು ನಮಗೆ ಅರಿವಿಲ್ಲದಂತೆ ನಮಗೆ ತೊಂದರೆ ಕೊಡುವಂಥ ಮಟ್ಟಕ್ಕೆ ಬೆಳೆಯುತ್ತವೆ.

ಬ್ಯಾಕ್ಟಿರಿಯಾಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವುದಕ್ಕೆ ಆಂಟಿಬಯಾಟಿಕ್ಸ್ ಅನ್ನು ಬಳಸಲಾಗುತ್ತದೆ. ಆದರೆ ಈ ಆಂಟಿಬಯಾಟಿಕಿಗೇ ತಡೆ ಹೊಂದಿರುವಂಥ, ಅವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವಂಥ ಬ್ಯಾಕ್ಟೀರಿಯಾಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ವೈದ್ಯಲೋಕದಲ್ಲಿ ಆತಂಕವನ್ನು ಸೃಷ್ಟಿಸಿದೆ. ಪ್ರಸ್ತುತ ಇರುವಂಥ ಆಂಟಿಬಯಾಟಿಕ್ ಔಷಧಿಗಳು ಭವಿಷ್ಯದಲ್ಲಿ ಪರಿಣಾಮಕಾರಿಯಾಗಿರಬಹುದೇ ಎಂಬ ಚಿಂತೆ ಶುರುವಾಗಿದೆ. ಇದರ ಜೊತೆ ಜೊತೆಯಲ್ಲಿಯೇ ಬ್ಯಾಕ್ಟೀರಿಯಾಗಳು ಆಂಟಿಬಯಾಟಿಕ್ಗೇ ಪ್ರತಿರೋಧವನ್ನು ಹೇಗೆ ಸಂಪಾದಿಸಿಕೊಂಡವು ಎಂಬ ಬಗ್ಗೆ ಸಂಶೋಧನೆಗಳು ಶುರುವಾಗಿವೆ. ಕೃಷ್ಟಿಯಲ್ಲಿ, ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಆಂಟಿಬಯಾಟಿಕ್ಗಳ ಬಳಕೆಯ ಪರಿಣಾಮದ ಬಗ್ಗೆಯೂ ಪರಿಶೀಲನೆ ನಡೆದಿದೆ.

ಮಾನವನ ದೇಹದಲ್ಲಿಯೂ ಸಹ ಆಂಟಿಬಯಾಟಿಕ್ಗೆ ಪ್ರತಿರೋಧ ಹೊಂದಿರುವಂಥ ಬ್ಯಾಕ್ಟೀರಿಯಾಗಳ ಸೃಷ್ಟಿಯಾಗುತ್ತಿದೆ. ವೈರಾಣುಗಳು ಅಥವಾ ಬ್ಯಾಕ್ಟೀರಿಯಾಗಳಿಂದಾಂಥ ಸೋಂಕಿಗಳನ್ನು ಅಥವಾ ರೋಗಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮಾನವ ಆಂಟಿಬಯಾಟಿಕ್ ಔಷಧಿಗಳನ್ನು ತೆಗೆದುಕೊಳ್ಳುತ್ತಾನೆ. ಈ ಔಷಧಿಗಳನ್ನು ಪದೇ ಪದೇ ತೆಗೆದುಕೊಳ್ಳುವುದರ ಪರಿಣಾಮವಾಗಿ ಮನುಷ್ಯನ ಗ್ಯಾಸ್ಟ್ರೋಇಂಟೆಸ್ಟೈನಲ್ ಟ್ರಾಕ್ನಲ್ಲಿ ಇರುವಂಥ ಬ್ಯಾಕ್ಟೀರಿಯಾಗಳು ಅಥವಾ ವೈರಾಣುಗಳು ಈ ಔಷಧಿಗಳಿಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಹೀಗಾಗಿ ಮತ್ತೊಂದು ಬಾರಿ ಆಂಟಿಬಯಾಟಿಕ್ ಔಷಧಿ ತೆಗೆದುಕೊಂಡರೆ ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅಲ್ಲದೆ ಈ ಬ್ಯಾಕ್ಟೀರಿಯಾಗಳು ತ್ಯಾಜ್ಯ ನೀರಿನ ಮುಖಾಂತರವಾಗಿಯೂ ಸಾಗುತ್ತವೆ. ಆಂಟಿಬಯಾಟಿಕ್ಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವಂಥ ಈ ಬ್ಯಾಕ್ಟೀರಿಯಾಗಳು ತ್ಯಾಜ್ಯ ನೀರಿನ ಸಂಸ್ಕರಣೆಯ ವೇಳೆಯೂ ತಪ್ಪಿಸಿಕೊಂಡು ನೀರಿನಲ್ಲಿಯೇ ಉಳಿದುಬಿಡುತ್ತವೆ.

ಆದರೆ ಒಂದಂತೂ ನಿಜ, ಮಾನವ ಏನೆಲ್ಲ ಸಾಹಸ ಮಾಡಿ ತನಗೆ ಸಮಸ್ಯೆಯಾಗುವಂಥ ಸೂಕ್ಷ್ಮಾಣು ಜೀವಿಗಳ ನಿಯಂತ್ರಣಕ್ಕೆ ಮುಂದಾಗುತ್ತಾನೆಯೇ ಅವನಿಗಿಂತ ಹೆಚ್ಚು ಸಾಹಸದಲ್ಲಿ ಸೂಕ್ಷ್ಮಾಣು ಜೀವಿಗಳು ಮಾನವ ಹಾಕಿದಂಥ ತಡೆಗೋಡೆಯನ್ನು ಭೇದಿಸಿಕೊಂಡು ಬೆಳೆಯುತ್ತಿವೆ. ಅಂದರೆ ತಾನು ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಮಾನವಭ್ರಮೆಗೆ ಪ್ರತಿ ಬಾರಿಯೂ ತಡೆ ಬೀಳುತ್ತಿದೆ ಎಂಬುದು ದಿಟವಾಯಿತು. ಪ್ರಕೃತಿಯ ನಿರ್ಧಾರಗಳ ಮೇಲೆ ಮಾನವ ತನ್ನ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ ಪ್ರಕೃತಿ ಮಾನವನಿಗಿಂತಲೂ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಕೂಡಾ ಸ್ಪಷ್ಟವಾಯಿತು.

ಶುದ್ಧತೆಯ ಪ್ರಶ್ನೆಗೆ ಉತ್ತರವಿಲ್ಲ!
ಜಗತ್ತಿನ ಅತ್ಯುನ್ನತ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳಲ್ಲಿನ ಸಂಸ್ಕರಿತ ನೀರನ್ನು ವಿಜ್ಞಾನಿಗಳು ತಮ್ಮ ಸಂಶೋಧನೆಗೆ ಒಳಪಡಿಸಿದ್ದಾರೆ. ಹಲವು ಬಾರಿ ವಿವಿಧ ತಂತ್ರಜ್ಞಾನದ ಮೂಲಕ ನೀರನ್ನು ಶುದ್ಧೀಕರಿಸಿದರೂ ಸಹ ಈ ಬ್ಯಾಕ್ಟೀರಿಯಾಗಳು ನೀರಿನಲ್ಲಿಯೇ ಉಳಿದುಕೊಂಡದ್ದು ವಿಜ್ಞಾನಿಗಳ ಗಮನಕ್ಕೆ ಬಂದಿದೆ. ಯಾವುದೇ ಶುದ್ಧೀಕರಣ ವಿಧಾನದಿಂದಲೂ ಸಹ ಈ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂದಾದರೆ ಪ್ರಸ್ತುತ ಜಗತ್ತಿನ ಬಹಳಷ್ಟು ನಗರಗಳಲ್ಲಿ ಪೂರೈಕೆಯಾಗುತ್ತಿರುವಂಥ ಸಂಸ್ಕರಿತ ನೀರಿನ ಗುಣಮಟ್ಟದ ಬಗ್ಗೆ ಯೋಚಿಸಬೇಕಾಗುತ್ತದೆ.

ಕೆಲವು ನಗರಗಳಲ್ಲಿ ನೀರಿನ ತೀವ್ರ ಅಭಾವವಿದೆ. ಇಂಥ ಕಡೆಗಳಲ್ಲಂತೂ ಸಂಸ್ಕರಿತ ನೀರನ್ನೇ ಕುಡಿಯುವುದಕ್ಕೆ, ಅಡುಗೆಗೆ ಮತ್ತಿತರ ಅಗತ್ಯಗಳಿಗೆ ಬಳಸಿಕೊಳ್ಳಬೇಕಾದಂಥ ಅನಿವಾರ್ಯತೆಯಿದೆ. ಸಂಸ್ಕರಣೆಯಿಂದ ವೈರಾಣುಗಳು ಮುಕ್ತವಾಗದೇ ಇದ್ದರೆ ಅದು ಯಾವ ರೀತಿಯ ಸಮಸ್ಯೆಗಳನ್ನು ಸೃಷ್ಟಿ ಮಾಡಬಹುದು ಎಂಬುದನ್ನು ಅಂದಾಜಿಸುವುದು ಸ್ವಲ್ಪ ಕಷ್ಟವೇ. ಇಲ್ಲಿ ಇನ್ನೊಂದು ಪ್ರಶ್ನೆಯೂ ಕಾಡುತ್ತದೆ- ನೀರನ್ನು ಸಂಸ್ಕರಿಸಿ ವೈರಾಣುಮುಕ್ತ ನೀರನ್ನು ಕೊಡುವಂಥ ಉಪಕರಣಗಳು ಈಗ ಹೆಚ್ಚು ಹೆಚ್ಚು ಪ್ರಚಾರ ಪಡೆಯುತ್ತಿವೆ. ಯಾವ ವಿಧಾನದಿಂದಲೂ ನೀನಿರ ಸಂಸ್ಕರಣೆ ಪರಿಪೂರ್ಣವಾಗುವುದಿಲ್ಲ ಎಂದಾದರೆ ಈ ಉಪಕರಣಗಳ ಕ್ಷಮತೆಯೆಷ್ಟು?

ಈ ಉಪಕರಣಗಳಿಂದ ಹೊರಬರುವ ನೀರು ನಿಜಕ್ಕೂ ವೈರಾಣುಗಳಿಂದ ಮುಕ್ತವಾಗಿರುತ್ತದೆಯೇ? ಕೊಳ್ಳುಬಾಕ ಸಂಸ್ಕೃತಿಯೇ ಹೆಮ್ಮರವಾಗಿ ಬೆಳೆದುನಿಂತಿರುವಂಥ ಇಂದಿನ ದಿನದಲ್ಲಿ ಜನರನ್ನು ಮೋಡಿ ಮಾಡಿ ಉತ್ಪನ್ನಗಳನ್ನು ಮಾರಾಟ ಮಾಡುವುದೇನೂ ದೊಡ್ಡ ಸಾಹಸವಲ್ಲ. ಅದರೊಂದಿಗೆ ಜನರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಸ್ವಲ್ಪ ಅತಿರೇಕ ಎನ್ನುವ ಮಟ್ಟದಲ್ಲಿಯೇ ಇದೆ. ಇಂತಿರುವಾಗ `ನೀರಿನ ಸಂಸ್ಕರಣೆ’ಯ ಹಣೆಪಟ್ಟಿಯೊಂದಿಗೆ ಯಾವ ಉಪಕರಣ ಮಾರುಕಟ್ಟೆಗೆ ಬಂದರೂ ಸಹ ಜನ ಅದನ್ನು ಕೊಳ್ಳುತ್ತಾರೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಈ ಉಪಕರಣಗಳು ನೀರನ್ನು ಪೂರ್ಣವಾಗಿ ಶುದ್ಧೀಕರಿಸುತ್ತವೆ ಎಂದು ನಂಬುದಕ್ಕಂತೂ ಸಾಧ್ಯವಿಲ್ಲ ಎಂಬುದನ್ನು ಈ ಸಂಶೋಧನೆ ಸಾಬೀತುಪಡಿಸುತ್ತದೆ.

ಹಾಗಾದರೆ ನೀರು ಪರಿಪೂರ್ಣವಾಗಿ ಶುದ್ಧಗೊಳ್ಳಲು ಯಾವ ಮಾರ್ಗವನ್ನು ಅನುಸರಿಸಬೇಕು? ಸದ್ಯಕ್ಕೆ ಅದರ ಅನ್ವೇಷಣೆಯ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಹೊಸದಾಗಿ ಸಂಶೋಧನೆ ನಡೆಸಿ ನೀರಿನ ಸಂಸ್ಕರಣೆಗೊಂದು ಮಾರ್ಗ ಕಂಡುಕೊಂಡರೂ ಸಹ ಆ ತಂತ್ರಜ್ಞಾನದಿಂದ ರಕ್ಷಣೆ ಪಡೆಯುವ ಶಕ್ತಿಯನ್ನು ವೈರಾಣುಗಳು ಬೆಳೆಸಿಕೊಳ್ಳುವುದಿಲ್ಲ, ಅವುಗಳ ಪ್ರತಿರೋಧಕ ಶಕ್ತಿ ಇನ್ನಷ್ಟು ಹೆಚ್ಚುವುದಿಲ್ಲ ಎಂದು ಯಾವ ಖಾತ್ರಿಯೂ ಇಲ್ಲ!

* * * * * * * *

ಚಿತ್ರಕೃಪೆ : ವಿಷ್ಣುಪ್ರಿಯ

Read more from ವಿಜ್ಞಾನ
1 ಟಿಪ್ಪಣಿ Post a comment
  1. ಸುಮನ's avatar
    ಸುಮನ
    ಫೆಬ್ರ 21 2012

    ನೀರಿನ ಬಗ್ಗೆ ಬಹಳ ಮನೋಜ್ಣವಾಗಿ ಅರಿವು ಮೂಡಿಸಿರುವಿರಿ, ಧನ್ಯವಾದಗಳು

    ಉತ್ತರ

Leave a reply to ಸುಮನ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments