ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 22, 2012

8

ಪತ್ರಕರ್ತರ ಕೊರಳಿಗೆ ಗಂಟೆ ಕಟ್ಟುವರು ಯಾರು?

‍ನಿಲುಮೆ ಮೂಲಕ

– ಪೂರ್ಣಚಂದ್ರ

ಬಡವರಿಗೆ ಬಣ್ಣದ ಟಿವಿ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸಿದಾಗ, ಪತ್ರಕರ್ತರು ಇದೊಂದು ಜನಪ್ರಿಯ ಘೋಷಣೆ ಎಂದು ಗೇಲಿ ಮಾಡಿದರು. ಸರಕಾರಗಳು ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ಗೇಲಿ ಮಾಡುವುದು, ವಿಶ್ಲೇಷಿಸುವುದು ಅವರ ಕರ್ತವ್ಯ ಅವರು ಮಾಡಿದರು. ಆದರೆ, ಅಂತಹ ಜನಪ್ರಿಯ ಘೋಷಣೆಯ ಫಲಾನುಭವಿಗಳೇ ತಾವೇ ಆಗಿಬಿಟ್ಟರೆ !
ಕರ್ನಾಟಕದ ಬಿಜೆಪಿ ಸರಕಾರ ರಾಜ್ಯದ ಎಲ್ಲ ಪತ್ರಕರ್ತರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದು ಎಂಬ ಆದೇಶವನ್ನು ಸದ್ಯದಲ್ಲಿಯೇ ಹೊರಡಿಸಲಿದೆಯಂತೆ. ಇದು ಕೂಡ ಜನಪ್ರಿಯ ಘೋಷಣೆಯೇ. ಆದರೆ, ಅದೇಕೋ ಹೆಚ್ಚು ಪತ್ರಕರ್ತರು ಈ ಬಗ್ಗೆ ಮಾತನಾಡುತ್ತಿಲ್ಲ.
ಈ ಬಗ್ಗೆ ಪೂರ್ಣಚಂದ್ರ ಬರೆದಿದ್ದಾರೆ.

ಬೀದರ್‌ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ಮಾನ್ಯತೆ ಪಡೆದ ಪತ್ರಕರ್ತರು ಈಗ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಎಲ್ಲಿ ಬೇಕಾದರಲ್ಲಿ ಓಡಾಡಬಹುದು !

ನಾನಾ ಆರೋಪಗಳನ್ನು ಹೊತ್ತು ಮನೆಗೆ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬೆಂಗಳೂರು ಪತ್ರಕರ್ತರಿಗಷ್ಟೇ ದಯಪಾಲಿಸಿದ್ದ ಈ ಕೊಡುಗೆಯನ್ನು, ನಗುಮೊಗದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ರಾಜ್ಯದ ಎಲ್ಲ ಪತ್ರಕರ್ತರಿಗೂ ವಿಸ್ತರಿಸಲಿದ್ದಾರೆ ಎಂಬ ವರ್ತಮಾನ ಬಂದಿದೆ.
ಅದೂ, ರಾಜಹಂಸ, ವೋಲ್ವೋ ಸಹಿತ ಎಲ್ಲ ಬಸ್‌ಗಳಲ್ಲೂ !

ಅಧಿಕಾರಕ್ಕೆ ಬಂದು ಮೂರು ವರ್ಷ ಮತ್ತಾರು ತಿಂಗಳಲ್ಲಿ ಬಿಜೆಪಿ ಸರಕಾರ ಕಟ್ಟಿ-ಕಡಿದು ಹಾಕಿದ್ದನ್ನು ಬಗೆ-ಬರೆಯಾಗಿ ಬರೆದು, ನಾನಾ ಹಗರಣಗಳನ್ನು ಬಯಲಿಗೆ ತಂದ ಪತ್ರಕರ್ತರು, ಇಂತಹದ್ದೊಂದು ಸೌಲಭ್ಯವನ್ನು ಸರಕಾರದ ಮೇಲೆ ಒತ್ತಡ ಹೇರಿ, ಪಡೆದುಕೊಂಡಿದ್ದಾರಂತೆ. ಪತ್ರಿಕಾಲಯಗಳಲ್ಲಿರುವ ಕ್ರೀಮಿ ಲೇಯರ್ ಪತ್ರಕರ್ತರಿಗೆ ವಾರ್ತಾ ಇಲಾಖೆ ಒಂದು ಮಾನ್ಯತಾ ಪತ್ರ(ಕಾರ್ಡ್) ನೀಡುತ್ತದೆ. ಇಂತಹದ್ದೊಂದು ಕಾರ್ಡ್ ಹೊಂದಿರುವವ, ವಾರ್ತಾ ಇಲಾಖೆಯ ಖಾಯಂ ಆಹ್ವಾನಿತ. ಆತ ಸರಕಾರದ ಎಲ್ಲ ವಿವಿಐಪಿ, ವಿಐಪಿಗಳ ಪತ್ರಿಕಾಗೋಷ್ಠಿಗಳಿಗೆ, ಸರಕಾರ ಸಭೆ-ಸಮಾರಂಭಗಳಿಗೆ ತಪ್ಪದೆ ಆಹ್ವಾನ ಪಡೆಯುವವನು. ಈ ಕಾರ್ಡ್ ಇದ್ದರೆ, ವಿಧಾನ ಸೌಧ ಸೇರಿದಂತೆ, ಎಲ್ಲ ಸರಕಾರಿ ಕಚೇರಿಗಳಿಗೆ ಸುಲಭವಾಗಿ ಪ್ರವೇಶಿಸಬಹುದು. ಉಳಿದಂತೆ ಇಲಾಖೆ ಪ್ರತಿವರ್ಷ ೧ ಸಾವಿರ ರೂ. ಮೌಲ್ಯದ ಕೆಎಸ್‌ಆರ್‌ಟಿಸಿ ಕೂಪನ್ ನೀಡುತ್ತದೆ. ಅದನ್ನು ಬಳಸಿ, ಪತ್ರಿಕಾ ಕೆಲಸಗಳಿಗಾಗಿ ರಾಜ್ಯದಲ್ಲಿ ಪ್ರವಾಸ ಮಾಡಬಹುದು. ಮೊದಲಿನಿಂದಲೂ ಇದ್ದ ಈ ವ್ಯವಸ್ಥೆಯನ್ನು ವರ್ಷದ ಹಿಂದೆ ಬಿ. ಎಸ್. ಯಡಿಯೂರಪ್ಪ ಬದಲಿಸಿದರು. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮಠಾಧೀಶರಿಗೆ ಧಾರಾಳವಾಗಿ ವಿತರಿಸಿ, ಅವರನ್ನು ಓಲೈಸುತ್ತಿರುವ ಯಡಿಯೂರಪ್ಪ ಅವರಿಗೆ ಪತ್ರಕರ್ತರನ್ನು ಸರಕಾರಿ ಲೆಕ್ಕದಲ್ಲಿಯೇ ಓಲೈಸಲು ಮಾರ್ಗೋಪಾಯ ಬೇಕಿತ್ತು. ಹಾಗಾಗಿ ಉಚಿತ ಪ್ರಯಾಣದ ಕೊಡುಗೆಯನ್ನು ಘೋಷಿಸಿಯೇ ಬಿಟ್ಟರು. ಇದರ ಜತೆಗೆ ೨ ಸಾವಿರ ರೂ. ಕೂಪನ್ ಬೇರೆ.

ಆದರೆ ಇದನ್ನು ಜಾರಿಗೆ ತರಲು ಮುಂದಾದ ಅಧಿಕಾರಿಗಳು, ಈ ಸೌಲಭ್ಯದಿಂದ ಆಗುವ ಲಾಭ, ನಷ್ಟ, ಪ್ರಯೋಜನ, ಖರ್ಚು-ವೆಚ್ಚ ಎಲ್ಲವನ್ನು ಲೆಕ್ಕ ಹಾಕಿದರು. ರಾಜ್ಯಮಟ್ಟದ ಬಹುತೇಕ ಎಲ್ಲ ಪತ್ರಿಕೆಗಳಿಗೂ ಜಿಲ್ಲಾ ಮಟ್ಟದಲ್ಲಿ ವರದಿಗಾರರು ಇದ್ದರು. ಒಂದು ಜಿಲ್ಲೆಯ ವರದಿಗಾರ, ಸುದ್ದಿಯ ಕಾರಣಕ್ಕಾಗಿ ಇನ್ನೊಂದು ಜಿಲ್ಲೆಯ ಗಡಿಯನ್ನು ಪ್ರವೇಶಿಸುತ್ತಿರಲಿಲ್ಲ. ಹಾಗಾಗಿ ಜಿಲ್ಲಾ ವರದಿಗಾರರಿಗೆ, ಜಿಲ್ಲೆಯಲ್ಲಿ ಮಾತ್ರ ಉಚಿತ ಪ್ರವೇಶ ಎಂದು ಆದೇಶ ಹೊರಡಿಸಿದರು. ಬೆಂಗಳೂರು ನಗರದ ವರದಿಗಾರರಿಗೆ ಗಡಿ,ಎಲ್ಲೆಗಳ ಮಿತಿ ಇಲ್ಲ. ಅವರು ಎಲ್ಲಿಗೆ ಬೇಕಾದರಲ್ಲಿ ಹೋಗಿ, ವರದಿ ಮಾಡಬಹುದು ಎಂದು ಅಧಿಕಾರಿಗಳಿಗೆ, ಯಾರೋ ಬೆಂಗಳೂರು ಪತ್ರಕರ್ತರೇ ಹೇಳಿರಬೇಕು. ಹಾಗಾಗಿ, ಅವರಿಗಷ್ಟೇ ಈ ಪ್ರಯೋಜನವನ್ನು ರಾಜ್ಯಾದ್ಯಂತ ಜಾರಿಗೆ ತಂದರು. ಇದು ಜಿಲ್ಲಾ ವರದಿಗಾರರನ್ನು ಕೆರಳಿಸಿತು. ತಮ್ಮ ಸಿಟ್ಟು-ಸೆಡವು, ಆಕ್ರೋಶವನ್ನೆಲ್ಲಾ ಸಾರಿಗೆ ಸಚಿವ ಆರ್. ಅಶೋಕ್ ಮುಂದೆ ಕಾರಿದರು. ಪ್ರಯೋಜನವಾಗಲಿಲ್ಲ. ಈಗ ಸಿಎಂ ಸದಾನಂದಗೌಡರ ತನಕ ತೆಗೆದುಕೊಂಡು ಹೋಗಿ, ಜಯಶಾಲಿಗಳಾಗಿ ಬಂದಿದ್ದಾರೆ.

ನಾನು ಒಂದು ಜಿಲ್ಲಾ ಕೇಂದ್ರದಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಾನ್ಯತೆ ಪಡೆದ ಪತ್ರಕರ್ತ. ಅಂದ್ರೆ ಕ್ರೀಮಿ ಲೇಯರ್ ಪತ್ರಕರ್ತ. ಇದನ್ನು ಒಪ್ಪಿಕೊಳ್ಳುತ್ತಲೇ, ಒಂದಿಷ್ಟು ಪ್ರಶ್ನೆಗಳನ್ನು ಪತ್ರಕರ್ತರ ಮುಂದೆ ಇಡುತ್ತಿದ್ದೇನೆ.

೧. ನಿಜ, ಪತ್ರಕರ್ತ ವೃತ್ತಿಯೂ ಸಾರ್ವಜನಿಕ ಬದುಕಿಗೆ, ಸಾರ್ವಜನಿಕ ಸೇವೆಗೆ ಸಂಬಂಧಿಸಿದ್ದೇ ಆಗಿದೆ. ಸರಕಾರ ಸಂಬಳ ನೀಡದಿದ್ದರೂ, ಇದೊಂದು ರೀತಿ ಸರಕಾರಿ ಇಲ್ಲವೇ ಸಮಾಜದ ಕೆಲಸವೇ ಆಗಿರುತ್ತದೆ. ಹಾಗಾಗಿ ಸರಕಾರ ಪತ್ರಕರ್ತರಿಗೆ ಒಂದಿಷ್ಟು ಸೌಲಭ್ಯ ನೀಡುವುದು ತಪ್ಪಲ್ಲ. ಮೊದಲೆಲ್ಲಾ ಪತ್ರಿಕಾ ಮಾಲೀಕರು ಪತ್ರಕರ್ತರಿಗೆ ನೀಡುತ್ತಿದ್ದ ಸಂಬಳ, ಘನತೆಯಿಂದ ಬದುಕು ಮಾಡುವಷ್ಟು ಇರಲಿಲ್ಲ. ಬಡ ಮೇಷ್ಟ್ರಂತೆ, ಈತನೂ ಬಡಪತ್ರಕರ್ತನೇ ಆಗಿದ್ದ.
ಹಾಗಾಗಿಯೇ ಕೂಪನ್ ನೀಡಿಕೆ, ವರ್ಷಕ್ಕೊಮ್ಮೆ ಪ್ರವಾಸ ಕರೆದುಕೊಂಡು ಹೋಗುವ ವಾರ್ತಾ ಇಲಾಖೆಯ ಪರಿಪಾಠಕ್ಕೆ ಸಮರ್ಥನೀಯ ಕಾರಣವಿತ್ತು. ಆದರೆ, ಈಗ ಪತ್ರಕರ್ತನ ಸ್ಥಿತಿ ಸುಧಾರಿಸಿದೆ. ಇಂಥಾ ಹೊತ್ತಲ್ಲಿ, ಸರಕಾರ ಯಾವ ಪ್ರಮಾಣದಲ್ಲಿ ಸೌಲಭ್ಯ ನೀಡಬೇಕು ಮತ್ತು ಅದು ಹೇಗಿರಬೇಕು ಎಂಬುದು ಮುಖ್ಯ.

೨. ಗಾಂಧೀಜಿ ಈ ವೃತ್ತಿಗೆ ಪತ್ರಿಕಾಕರ್ತ ಸೇವೆ ಎನ್ನುತ್ತಿದ್ದರು. ಈಗ ಯಾರೂ ಈ ಪರಿಭಾಷೆಯನ್ನು ಬಳಸುವುದಿಲ್ಲ. ಪತ್ರಿಕೋದ್ಯಮ ಎನ್ನುತ್ತಾರೆ. ಅಂದ್ರೆ, ಸೇವೆ ಉದ್ಯಮವಾಗಿದೆ. ಒಂದೂವರೆ ದಶಕದಿಂದೇಚೆಗಂತೂ, ಪತ್ರಿಕೋದ್ಯಮ ಎಂಬುದು ಉದ್ಯಮಿಗಳ ಪಾಲಿಗೆ ಆಕರ್ಷಕ ಹಾಗೂ ಅಧಿಕಾರ ತಂದುಕೊಡುವ ಕಾಮಧೇನು ಎಂಬಂತೆ ಕಂಡಿದೆ, ಕಾಣುತ್ತಿದೆ ಮತ್ತು ಕೆಲವರ ಪಾಲಿಗೆ ಅದು ಸತ್ಯವೂ ಆಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ವೇತನವೂ ಹೆಚ್ಚಿದೆ. ಇಂಥಾ ಸಂದರ್ಭದಲ್ಲಿ, ಉಚಿತ ಪ್ರಯಾಣದ ಸೌಲಭ್ಯ ಬೇಡುವುದೇಕೆ ?

೩. ಗೌರವ ಮತ್ತು ಅಭಿಮಾನ ಪೂರ್ವಕವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ;
ಕನಿಕರ, ಅನುಕಂಪ ಹಾಗೂ ಬಡತನವನ್ನು ಮುಂದಿಟ್ಟುಕೊಂಡು- ಹಿರಿಯ ಪುರುಷರಿಗೆ, ಹಿರಿಯ ಮಹಿಳೆಯರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳಿಂದ ಬಳಲುವ ಬಡವರಿಗೆ, ಸಂಪೂರ್ಣ ಉಚಿತವಾಗಿ ಅಲ್ಲದಿದ್ದರೂ ರಿಯಾಯಿತಿ ದರದಲ್ಲಿ ಇಂತಹ ಸೇವೆ ನೀಡುವುದರಲ್ಲಿ ಒಂದು ಅರ್ಥವಿದೆ, ಸಮರ್ಥನೆಯೂ ಇದೆ. ಇಂಥವರ ಸಂಖ್ಯೆಯೂ ಕಡಿಮೆ ಇರುತ್ತದೆ. ಹಾಗಾಗಿ ಬೊಕ್ಕಸಕ್ಕೂ ನಷ್ಟವಾಗದು. ಆದರೆ, ಸಾವಿರಾರು ಸಂಖ್ಯೆಯಲ್ಲಿರುವ ಪತ್ರಕರ್ತರಿಗೆ ಯಾಕಿಂಥ ಉಚಿತ ಸೇವಾ ಸೌಲಭ್ಯ, ಅವರು ಮಾಡುವ ಕೆಲಸಕ್ಕೆ, ಅವರವರ ಪತ್ರಿಕಾ ಮಾಲೀಕರು ಕೈತುಂಬ ಸಂಬಳ ನೀಡುತ್ತಾರೆ.

೪. ದೇಶ-ರಾಜ್ಯಕ್ಕೆ ಹೆಸರು, ಕೀರ್ತಿ ತರುವ ಸಂಗೀತಗಾರರು, ಆಟಗಾರರು ಸೇರಿದಂತೆ ಸಾಧಕರಿಗೆ ಇಂತಹ ಸೌಲಭ್ಯ ನೀಡಲಿ. ಪತ್ರಕರ್ತರಲ್ಲೂ ಅಂತಹ ಸಾಧಕರಿದ್ದರೆ, ಗುರುತಿಸಲಿ. ಆದರೆ, ಇದ್ಯಾವುದೇ ಇಲ್ಲದ ಪತ್ರಕರ್ತ ಎಂಬ ಏಕೈಕ ಕಾರಣಕ್ಕೆ, ಉಚಿತ ಸೌಲಭ್ಯ ನೀಡುವುದು ಸರಿಯಲ್ಲ. ವಾಣಿಜ್ಯ ಉದ್ದೇಶವನ್ನು ಒಳಗೊಂಡಿರುವ ಪತ್ರಿಕೋದ್ಯಮಕ್ಕೆ ರಿಯಾಯಿತಿ ಏಕೆ ?

೫. ಸರಕಾರದ ಈ ಸೌಲಭ್ಯ ಪಡೆಯುವರು ಪತ್ರಿಕಾ ಸಂಸ್ಥೆಗಳ ಕ್ರೀಮಿ ಲೇಯರ್ ಮಂದಿ. ಅಂದ್ರೆ, ಎಲ್ಲ ಪತ್ರಿಕಾಲಯಗಳು ಸಂಪಾದಕರು, ಮುಖ್ಯ ವರದಿಗಾರರು, ಪ್ರಧಾನ ವರದಿಗಾರರೇ ಆಗಿರುತ್ತಾರೆ. ಇಂಥವರಿಗೆಲ್ಲಾ ಸಂಸ್ಥೆಯೇ ಒಳ್ಳೆಯ ಸಂಬಳ ನೀಡುತ್ತಿರುತ್ತದೆ. ಆದರೆ,ಅದೇ ಸಂಸ್ಥೆಯಲ್ಲಿ ಕಡಿಮೆ ದುಡ್ಡಿಗೆ ಸಂಬಳ ಮಾಡುವ ಇನ್ನೊಂದು ವರ್ಗವೂ ಇರುತ್ತದೆ. ಇವರಿಗೆ ಸೌಲಭ್ಯ ಬೇಕಿರುತ್ತದೆ. ಆದರೆ ಕಾರ್ಡ್ ಇರುವುದಿಲ್ಲ.

೬. ಇಂತಹ ಸೌಲಭ್ಯವನ್ನು ಪಡೆಯಲೇಬೇಕು ಎಂದಿದ್ದರೂ, ನಿಜಕ್ಕೂ ಅರ್ಹ ಬಡಪತ್ರಕರ್ತರಿಗೆ ಅದು ಸಲ್ಲಲಿ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಗ್ರಾಮೀಣ ಪತ್ರಕರ್ತರಿಗೆ ಇಂತಹ ಕಾರ್ಡ್ ನೀಡಿದರೆ, ಪೂರ್ಣ ಅಲ್ಲದಿದ್ದರೂ, ಒಂದಿಷ್ಟು ಸಮರ್ಥನೆ ಒದಗಿಸಬಹುದು. ಕ್ರೀಮಿ ಲೇಯರ್ ಪತ್ರಕರ್ತರು ಈ ಉದಾರತೆಯನ್ನೂ ಪ್ರದರ್ಶಿಸುವುದಿಲ್ಲ.

೭. ಸ್ವಾರಸ್ಯ ಅಂದ್ರೆ, ಸರಕಾರ ಬೆಂಗಳೂರು ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿದ್ದೂ ಅಲ್ಲದೆ, ವರ್ಷಕ್ಕೆ ೨ ಸಾವಿರ ರೂ. ಮೊತ್ತದ ಕೂಪನ್‌ಗಳನ್ನೂ ವಿತರಿಸಿದೆ. ಪ್ರಯಾಣವೇ ಉಚಿತ ಎಂದ ಮೇಲೆ, ಕೂಪನ್ ಏಕೆ ಬೇಕಿತ್ತು. ಇದನ್ನು ಯಾವೊಬ್ಬ ಪತ್ರಕರ್ತರು ಪ್ರಶ್ನಿಸಿಲ್ಲ.
ಅದು ಎಂಥವಳೋ ಮದುವೆಯಲ್ಲಿ ಉಂಡವನೇ ಜಾಣ… ಎಂಬಂತಾಗಿದೆ ಪತ್ರಕರ್ತರ ನಡವಳಿಕೆ.

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ?

* * * * * * * * *

ಚಿತ್ರಕೃಪೆ : cartoonstock.com

8 ಟಿಪ್ಪಣಿಗಳು Post a comment
  1. nanjundaraju's avatar
    ಫೆಬ್ರ 22 2012

    ಮಾನ್ಯ ಪೂರ್ಣಚಂದ್ರರವರೆ, ನೀವೂ ಒಬ್ಬ ಪತ್ರಕರ್ತರಾಗಿದ್ದರೂ ಸಹ ನಿಮ್ಮ ಸಹೋದ್ಯೋಗಿಗಳ hotte ಟೀಕಿಸುತ್ತಿರುವ ನಿಮಗೆ ನಮ್ಮ ಅನಂತ ಧನ್ಯವಾದಗಳು. ಈ ಬಗ್ಗೆ ನಿಮ್ಮ ಪತ್ರಕರ್ತ ಮಿತ್ರರು ಯೋಚಿಸಬೇಕು. ದೇವರು ಸಾಕಷ್ಟು ಕೊಟ್ಟಿದ್ದರೂ ಸಹ, ಸಾಕೆನ್ನದೆ. ಸಾಮಾಜದಲ್ಲಿ ಹೆಚ್ಚು ತಿಳುವಳಿಕೆ ಉಳ್ಳವರು ಪತ್ರಕರ್ತರು ಎಂದು ತಿಳಿದಿದ್ದೆವು. ಸರಕಾರ ಕೊಟ್ಟು ನಾವು ತೆಗೆದುಕೊಂಡವು ಎಂಬ ವಾದಮಾಡುತ್ತಾ. ರಾಜ್ಯದಲ್ಲಿ ಎಸ್ಟೋ ಬಡವರು ನಿರ್ಗತಿಕರು ಬಿಕ್ಸುಕರು ಕಣ್ಣಿಲ್ಲದ ಕುರುಡರು ಹಿಡಿ ಅನ್ನಕ್ಕಾಗಿ ಹತೊರಿಯುತ್ತಿರುವಾಗ ಒಂದೊತ್ತದರೂ ನೆಮ್ಮದಿಯಾಗಿ ತಿನ್ನಲು ಇರುವ ಪತ್ರಕರ್ತರು ಈ ರೀತಿಯ ಸೌಲಭ್ಯ ಪಡೆಯುವುದು ಸರಿಯಲ್ಲ. ಸಾರ್ವಜನಿಕರಾದ ನಾವು ಇದೆ ರೀತಿ ಎಸ್ಟೋ ಹಣ ರಾಜ್ಯ ಬೊಕ್ಕಸದಿಂದ ಸೋರಿ ಹೋಗುತ್ತದೆ ಅದರಲ್ಲಿ ಇದು ಒಂದು. ಅಲ್ಲವೇ? ವಂದನೆಗಳೊಡನೆ

    ಉತ್ತರ
  2. ನಿಶಾಂತ್ ಕುಮಾರ್'s avatar
    ನಿಶಾಂತ್ ಕುಮಾರ್
    ಫೆಬ್ರ 22 2012

    ಸರಿಯಾದ ಮಾತು

    ಉತ್ತರ
  3. parupattedara's avatar
    ಫೆಬ್ರ 22 2012

    bahala nija purnachandra avre, eega patrakartarendare patrike kadeyinda olleya car, matte itare ella soulabhya iruttade, innu sarkara kodo soulabhya patrikegalla swantakke balasikolluttare ashte, adakke badalu vayassadavarige, angavikalarige kodalaguttiruva riyayiti hechchu madali.

    ಉತ್ತರ
  4. Masood Doddebagilu's avatar
    ಫೆಬ್ರ 22 2012

    ನಾನೊಬ್ಬ ಪತ್ರಕರ್ತನಾಗಿ ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಬೆಂಬಲ ನೀಡ್ತೇನೆ ಸರ್. ಪ್ರಾಮಾಣಿಕತೆ ಬಗ್ಗೆ ಪುಟಗಟ್ಟಲೆ ಬರೆಯುವ, ಗಂಟೆಗಟ್ಟಲೆ ಕೊರೆಯುವ ನಾವು ಪತ್ರಕರ್ತರು ಇದನ್ನು ಅವಶ್ಯಕವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

    -ಮಸೂದ್ ದೊಡ್ಡೇಬಾಗಿಲು.

    ಉತ್ತರ
  5. ರಾಕೇಶ್ ಶೆಟ್ಟಿ's avatar
    ಫೆಬ್ರ 22 2012

    ಇದು ಕೇವಲ ಬಸ್ ಪಾಸಿಗೆ ನಿಲ್ಲಲಿಲ್ಲ, ಡಿನೋಟಿಫ಼ಿಕೇಷನ್ ಬಗ್ಗೆ ಪುಟಗಟ್ಟಲೆ ಬರೆದವ್ರು ಅದೇ ಸರ್ಕಾರದ ಚುಂಗು ಹಿಡಿದು ಜಿ-ಕ್ಯಾಟೆಗರಿ ಸೈಟು ಮಾಡಿಕೊಂಡಿದ್ದಾರೆ.ವೇದಾಂತ ಹೇಳುತ್ತ ಬದನೆಕಾಯಿ ತಿನ್ನೋ ಮಂದಿಗೆ ನಿಮ್ಮಂತ ಸಹೃದಯಿಗಳ ಮಾತು ಸಹ್ಯವಾಗಲಿಕ್ಕಿಲ್ಲ ಪೂರ್ಣಚಂದ್ರ ಅವರೇ.ಗಣಿ ವರದಿಯಲ್ಲಿ ಧೂಳು ಮೆತ್ತಿಸಿಕೊಂಡು ರಾಜಕಾರಣಿಗಳ ನೈತಿಕಯ ಬಗ್ಗೆ ಮಾತನಾಡುವ ಕೆಲ ಮೂರು ಬಿಟ್ಟ ಮಂದಿಯ ನೋಡಿದರೆ ಮೈ ಉರಿಯುತ್ತದೆ.

    ಉತ್ತರ
  6. Ganesha Belthangady's avatar
    ಫೆಬ್ರ 22 2012

    Thumba arthapoorna lekhana. Naithikatheya paata helalu Pathrakartharu kooda Naithikathe hondirabeku endu ee lekhanavu athyutthamavagi bimbiside.

    ಉತ್ತರ
  7. V. Naveena's avatar
    ಫೆಬ್ರ 23 2012

    ಆತ್ಮಾವಲೋಕನ ಅಗತ್ಯ. ಪತ್ರಿಕಾ ಬಳಗದಲ್ಲಿ ಪೂರ್ಣಚಂದ್ರ ಅವರ ಸಂತಾನ ಹೆಚ್ಚಲಿ.

    – ನವೀನ್, ಶಿವಮೊಗ್ಗ

    ಉತ್ತರ
  8. nagaraj's avatar
    nagaraj
    ಏಪ್ರಿಲ್ 18 2012

    ಸರಿಯಾದ ಮಾತು

    ಉತ್ತರ

Leave a reply to V. Naveena ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments