ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 21, 2014

1

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-2

‍ನಿಲುಮೆ ಮೂಲಕ

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಸಾರ್ವಭೌಮ ಪ್ರಭುತ್ವ(State) ಮತ್ತು ಸಾರ್ವಜನಿಕ ವಲಯ

ಇಂದಿನ ಭಾರತೀಯ ಪ್ರಭುತ್ವ ಎನ್ನುವ ಕಲ್ಪನೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲಾಗಿ ಬಂದಿದೆ. ಈ ವಿಷಯವು ನಿಸ್ಸಂಶಯವಾಗಿ ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು, ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಭಾರತದ ಸಂವಿಧಾನ ಕರ್ತೃಗಳು ಪಡೆದು ಭಾರತಕ್ಕೆ ಅಳವಡಿಸಿದ್ದಾರೆ ಎನ್ನುವುದೇ ಆ ಹೆಗ್ಗಳಿಕೆಯಾಗಿದೆ. ಆದರೆ ಈ ಹೆಗ್ಗಳಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು, ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅವುಗಳಿಗೆ ಪೂರಕವಾಗಿ ನಡೆದುಕೊಳ್ಳದೇ ಇರುವುದರಿಂದ, ಅವು ಇಲ್ಲಿ ಅಪಭ್ರಂಶ (distortion) ಕ್ಕೆ ಒಳಗಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ನಮಗೆ ಗೊತ್ತಿರುವ ಹಾಗೆ ಸ್ಟೇಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಿಸಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸ್ಟೇಟ್ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸ್ಟೇಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸ್ಟೇಟ್ ಬೆಳೆದು ಬಂದಿದ್ದು ಪಶ್ಚಿಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಕಡಿಮೆ 17-18ನೇ ಶತಮಾನದ ನಂತರ ಎಂದೇ ಹೇಳಬಹುದು (Mukherji, Partha Nath, 2010).

ಗ್ರೀಕ್ ಮತ್ತು ರೋಮ್ನ ಕಾಲಘಟ್ಟದಲ್ಲಿಯೂ ಅಲ್ಲಿ ಸ್ಟೇಟ್ ಕಲ್ಪನೆ ಇದ್ದರೂ ಅದು ಸಾರ್ವಭೌಮ ಸ್ಟೇಟ್ ಆಗಿರಲಿಲ್ಲ. ಅಂದರೆ ಜನರ ಜೀವನ ಸ್ಟೇಟ್ನ ಏಕೀಕೃತ ಸಾರ್ವಭೌಮ ಕಾನೂನಿಗೆ ಒಳಪಟ್ಟಿರಲಿಲ್ಲ. ಸ್ಟೇಟ್ಗೆ ಈ ಸ್ವರೂಪ ಬರುವುದಕ್ಕೂ ಕಾನೂನಿಗೆ ಸಾರ್ವಭೌಮ ಸ್ವರೂಪ ದಕ್ಕುವುದಕ್ಕೂ ಸಂಬಂಧವಿದೆ. ರೋಮನ್ನರ ಕಾಲದವರೆಗೂ ಕಾನೂನುಗಳು ಎಂದರೆ ಅವು ರೂಢಿ ಸಂಪ್ರದಾಯಗಳಂತೆ ಇದ್ದವು. ರೋಮನ್ ಸಾಮ್ರಾಜ್ಯ ನೂರಾರು ಬುಡಕಟ್ಟುಗಳನ್ನು ಒಳಗೊಂಡಿದ್ದರಿಂದ ಆ ನೂರಾರು ಬುಡಕಟ್ಟುಗಳ ಜನಜೀವನವು ಅವುಗಳದ್ದೇ ಆದ ನೀತಿ-ನಿಯಮ ಪದ್ಧತಿಗಳಂತೆಯೇ ಇತ್ತು (Raymond Wacks, 2006).ರೋಮನ್ನರ ಜಸ್ಟ್ ಜಂಟಿಯಂ ಈ ಸ್ವರೂಪದ ಕಾನೂನುಗಳ ಕ್ರೂಡೀಕರಣವಾಗಿತ್ತು. ಹಾಗಾಗಿ ಒಂದು ಬುಡಕಟ್ಟಿನ ಜೀವನಕ್ಕೆ ಸಂಬಂಧಿಸಿದ ರೋಮನ್ನರ ನಿಯಮಗಳಿಗೂ ಮತ್ತೊಂದು ಬುಡಕಟ್ಟಿಗೆ ಸಂಬಂಧಿಸಿದ ನಿಯಮಗಳಿಗೂ ಅಜಗಜಾಂತರ ವ್ಯತ್ಯಾಸಗಳಿದ್ದವು. ಹೀಗೆ ರೋಮನ್ನರ ಕಾಲಘಟ್ಟದಲ್ಲಿ ರಾಷ್ಟ್ರದ ಏಕೀಕೃತ ಸಾರ್ವಭೌಮ ಕಾನೂನುಗಳು ಆ ಸಾಮ್ರಾಜ್ಯದ ಎಲ್ಲಾ ನಾಗರಿಕರನ್ನು ನಿಯಂತ್ರಿಸಿ ನಿರ್ದೇಶಿಸುತ್ತಿರಲಿಲ್ಲ. ರೋಮನ್ ಬುಡಕಟ್ಟುಗಳ ಸಂಸ್ಕೃತಿಯಲ್ಲಿದ್ದ ರಿಲಿಜಿಯೊ ಸ್ವರೂಪವೇ ಹಾಗಿತ್ತು. ಒಂದೊಂದು ಬುಡಕಟ್ಟೂ ಪೀಳಿಗೆಯಿಂದ ಪೀಳಿಗೆಗೆ ದಾಟಿಕೊಂಡು ಬಂದ ಒಂದೊಂದು ರೀತಿಯ ಸಂಪ್ರದಾಯದ ರೂಢಿ-ಪದ್ಧತಿಗಳನ್ನು ಪಾಲಿಸಿಕೊಂಡು ಬರುತ್ತಿದ್ದವು. ಅದಕ್ಕೆ ತಕ್ಕ ಹಾಗೆ ಪ್ರತಿಯೊಂದು ಬುಡಕಟ್ಟಿನ ಕಟ್ಟುಪಾಡುಗಳೂ ನೀತಿ ನಿಯಮಗಳೂ ವಿಭಿನ್ನವಾಗಿದ್ದವು (ಬಾಲಗಂಗಾಧರ ಎಸ್.ಎನ್ 1994).

ಈ ಪರಿಸ್ಥಿತಿ ರೋಮನ್ ಸಾಮ್ರಾಜ್ಯ ಕೊನೆಯ ಘಟ್ಟದಲ್ಲಿ ಮತ್ತು ಕ್ರಿಶ್ಚಿಯನ್ ಚರ್ಚಿನ ಪ್ರಭಾವ ದಟ್ಟವಾಗಿ ಹಬ್ಬಿದ ಸಂದರ್ಭದಲ್ಲಿ ಬದಲಾಗುತ್ತದೆ. ಅಸಂಖ್ಯಾತ ರೋಮನ್ ಬುಡಕಟ್ಟುಗಳ ಅಸಂಖ್ಯಾತ ಜೀವನ ವಿಧಾನ/ನೀತಿನಿಯಮಗಳನ್ನು ಸುಳ್ಳು ಮಾರ್ಗಗಳೆಂದು ನಿರೂಪಿಸಿದ ಕ್ರಿಶ್ಚಿಯಾನಿಟಿ ಸಾರ್ವಭೌಮ ಗಾಡ್ನ ಯೋಜನೆ ಮತ್ತು ಇಚ್ಚೆಯಂತೆಯೇ ಸಕಲ ಮಾನವರು ಬದುಕವುದು ಯುಕ್ತವೆಂದು ವಾದಿಸಿತು. ಸಕಲರೂ ಆ ಸಾರ್ವಭೌಮ ಗಾಡ್ ಇಚ್ಚೆ/ಯೋಜನೆಯಂತೆ ಬದುಕಬೇಕೆಂದಾಗ ಎಲ್ಲರೂ ಒಂದೇ ರೀತಿಯ ಸತ್ಯವಾದ ಗಾಡ್ನ ನಿಯಮಗಳನ್ನು ಅನುಸರಿಸಬೇಕು. ಹಾಗಾಗಿ ಒಂದೊಂದು ಬುಡಕಟ್ಟು ಸಮುದಾಯಗಳಿಗೆ ಒಂದೊಂದು ರೀತಿಯ ನಿಯಮಗಳಿದ್ದರೆ ಅದು ಆಯಾ ಬುಡಕಟ್ಟುಗಳು ಹಾಕಿಕೊಂಡಿರುವ ಸುಳ್ಳು ಮಾರ್ಗಗಳ ಪರಿಣಾಮ ಎಂದು ಕ್ರಿಶ್ಚಿಯಾನಿಟಿ ವಾದಿಸಿತು. ಮುಂದುವರೆದು, ಗಾಡ್ ನಿಯಮದಂತೆ ಬದುಕುವುದೊಂದೇ ಸತ್ಯವಾದ ಮಾರ್ಗ ಮತ್ತು ಅದು ಒಂದೊಂದು ಸಮುದಾಯಕ್ಕೆ ಒಂದೊಂದು ರೂಪದಲ್ಲಿರುವುದಿಲ್ಲ. ಎಲ್ಲರಿಗೂ ಒಂದೇ ಆಗಿರುತ್ತದೆ. ಹಾಗೆಯೇ ಇಂತಹ ನಿಯಮಗಳು ಗಾಡ್ನ ನಿಯಮಗಳಾದ್ದರಿಂದ ಅವನ್ನು ಪ್ರಶ್ನಿಸಬಾರದು, ಏಕೆಂದರೆ ಅವನ್ನು ಪ್ರಶ್ನೆಮಾಡುವುದರಿಂದ ಗಾಡ್ನ ಅಸ್ತಿತ್ವವನ್ನೇ ಪ್ರಶ್ನಿಸಿದಂತೆ (ಅದೇ). ಹೀಗೆ ನಿಯಮಗಳ ಸಾರ್ವಭೌಮತೆಯ ಸ್ವರೂಪವನ್ನೂ ಕ್ರಿಶ್ಚಿಯಾನಿಟಿಯ ಪ್ರವರ್ಧಮಾನತೆಯೊಂದಿಗೇ ಗುರುತಿಸಬಹುದು.

ಹೀಗೆ ರೋಮನ್ನರ ಆಳ್ವಿಕೆ ಕೊನೆಗೊಂಡ ನಂತರ ಅಂದರೆ ಕ್ರಿ.ಶ. ನಾಲ್ಕನೇ ಶತಮಾನದಿಂದ ಕ್ರಿ.ಶ.13-14ನೇ ಶತಮಾನದವರೆಗೂ ಅಂದರೆ ಸರಿಸುಮಾರು ಒಂದು ಸಾವಿರ ವರ್ಷಗಳ ಕಾಲ ಕ್ರಿಶ್ಚಿಯನ್ ಚರ್ಚಿನ ಆಳ್ವಿಕೆಗೆ ಒಳಪಟ್ಟು ಯೂರೋಪು ಈ ಕ್ರಿಶ್ಚಿಯನ್ ಥಿಯಾಲಜಿಯ ಗಾಡ್, ಅವನ ಸಾರ್ವಭೌಮತೆ, ಅಲ್ಲಿಯ ಮಾನವ ಜನಜೀವನದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಪಾಲಿಸಬೇಕಾದ ಆ ಗಾಡ್ನ ಕಾನೂನುಗಳ ಪರಿಕಲ್ಪನೆ ಬೆಳೆದು ಬಂತು. 16-17 ನೇ ಶತಮಾನದ ನಂತರ ಚಿರಪರಿತ ‘ಚರ್ಚ್ ಮತ್ತು ಸ್ಟೇಟ್ ನಡುವಣ ವಿವಾದ’ ಅಂತ್ಯಗೊಂಡ ನಂತರ ಪ್ರವರ್ಧಮಾನಕ್ಕೆ ಬಂದ ಸ್ಟೇಟ್ ಹೆಚ್ಚು ಕಡಿಮೆ ಚರ್ಚಿನ ಪಡಿಯಚ್ಚಿನಂತೆಯೇ ಇತ್ತು. ಅಂದರೆ, ಒಂದು ರೀತಿಯಲ್ಲಿ ಸೆಕ್ಯುಲರೀಕೃತಗೊಂಡ ಚರ್ಚಿನ ರೂಪದಂತೆ. ಆ ಸ್ಟೇಟ್ ಕ್ರಿಶ್ಚಿಯಾನಿಟಿಯ ಥಿಯಾಲಜಿಯ ವಾದದಿಂದ ಮೂಡಿದ ಸಾರ್ವಭೌಮ ಅಧಿಕಾರದ ಸ್ವರೂಪ ಪಡೆಯಿತು. ಈ ರೀತಿಯ ಸೆಕ್ಯುಲರೀಕೃತಗೊಂಡ ಸ್ಟೇಟ್ನ ಸಾರ್ವಭೌಮ ಕಾನೂನಿನ ಪರಿಕಲ್ಪನೆಯನ್ನು ಹ್ಯೂಗೋ ಗ್ರೋಷಿಯಸ್ ಮೊಟ್ಟಮೊದಲಿಗೆ ಕಟ್ಟಿಕೊಡುತ್ತಾನೆ. ಈ ರೀತಿಯ ಸೆಕ್ಯುಲರೀಕೃತ ಸಾರ್ವಭೌಮ ಕಾನೂನಿನ ಬೆಳವಣಿಗೆಯಾದ ಕೆಲವೇ ವರ್ಷಗಳಲ್ಲಿ ಸುಪ್ರಸಿದ್ದ ವೆಸ್ಟೇಫೇಲಿಯ ಒಪ್ಪಂದ ಏರ್ಪಡುತ್ತದೆ. ಇಂದಿನ ನೇಷನ್-ಸ್ಟೇಟ್ನ ಪ್ರಾರಂಭವನ್ನು ಇಲ್ಲಿಂದ ಗುರುತಿಸುತ್ತಾರೆ. ಈ ಒಪ್ಪಂದದಂತೆ ಒಂದು ನೇಷನ್(ಜನಾಂಗ) ವಾಸವಿರುವ ಭೂಪ್ರದೇಶದ ಗಡಿಯನ್ನು ಗುರುತಿಸಿಕೊಂಡು ಅದಕ್ಕೇ ಒಂದು ಸಾರ್ವಭೌಮ ಸ್ಟೇಟ್ ಇರಬೇಕು. ಹೀಗೆ, ಪ್ರತಿಯೊಂದು ಜನಾಂಗಕ್ಕೂ ಒಂದೊಂದು ಸ್ಟೇಟ್ ರೂಪಿಸಿಕೊಂಡು ಆಯಾ ಜನಾಂಗ ವಾಸಿಸುವ ಪ್ರದೇಶದಲ್ಲಿ/ಆ ಪ್ರದೇಶದಲ್ಲಿ ವಾಸಿಸುವ ಜನಾಂಗದ ಮೇಲೆ ಆ ಸ್ಟೇಟ್ನ ಸಾರ್ವಭೌಮ ಕಾನೂನು ಚಾಲ್ತಿಯಲ್ಲಿರುತ್ತದೆ. ಇದನ್ನು ಇತರೇ ಸ್ಟೇಟ್ಗಳಾಗಲೀ, ಸ್ಟೇಟ್ನ ಒಳಗಿರುವವರಾಗಲೀ ಪ್ರಶ್ನಿಸುವಂತಿಲ್ಲ (Raymond Wacks, 2006). ಈ ರೀತಿಯ ಸಾರ್ವಭೌಮ ಪ್ರಭುತ್ವದ ಮೊಳಕೆ ಇಲ್ಲಿ ಒಡೆಯುತ್ತದೆ.

ಅಂದರೆ, ಸಾರ್ವಭೌಮ ಪ್ರಭುತ್ವ ಅಥವಾ ಸ್ಟೇಟ್ ಎನ್ನುವುದು ಕ್ರಿಶ್ಚಿಯನ್ ನಂಬಿಕೆಯ ಸೆಕ್ಯುಲರೀಕೃತ ರೂಪವೆನ್ನುವುದು ಇಲ್ಲಿ ವೇದ್ಯವಾಗುತ್ತದೆ. ಯಾರೂ ಯಾವುದೇ ರೀತಿಯಲ್ಲಾದರೂ ಬದುಕುವುದು ತರವಲ್ಲ. ಒಂದು ಪ್ರಭುತ್ವದೊಳಗಿರುವ (ಗಾಡ್ ಪ್ರಭುವಾದರೆ, ಆತನ ದೈವ ಸಾಮ್ರಾಜ್ಯದ ಪ್ರಜೆಗಳಾದ ಮಾನವ ಕುಲ ಆತನ ನಿಯಮಗಳನ್ನಷ್ಟೇ ಪಾಲಿಸಬೇಕು. ಮತ್ತು ಅದು ಎಲ್ಲರಿಗೂ ಏಕರೂಪದಲ್ಲಿರುತ್ತದೆಯೇ ವಿನಃ ಭಿನ್ನವಾಗಿರುವುದಿಲ್ಲ). ಎಲ್ಲರೂ ಆ ಪ್ರಭುತ್ವದ ನಿಯಮಗಳನ್ನು ಪ್ರಶ್ನಾತೀತವಾಗಿ ಪಾಲಿಸಬೇಕು, ಮತ್ತು ಅದು ಏಕರೂಪವಾಗಿಯೇ ಇರಬೇಕು. ಇದೇ ನೆಲೆಯಲ್ಲಿಯೇ ಮುಂದೆ ಪ್ರಭುತ್ವದ ಬಗ್ಗೆ ವ್ಯವಸ್ಥಿತವಾದ ಸಿದ್ಧಾಂತಗಳನ್ನು ಬೆಳೆಸಲು ಪ್ರಯತ್ನಿಸುವ ಹಾಬ್ಸ್, ಲಾಕ್, ರೂಸ್ಸೋ, ಹಾಗೂ ಆಸ್ಟಿನ್ನಂತವರು ಸಾರ್ವಭೌಮ ಪ್ರಭುತ್ವದ ಚಿತ್ರಣವನ್ನು ಕೊಡುತ್ತಾರೆ. ಅದರಲ್ಲೂ ಲಾಕ್ನ ಸಿದ್ಧಾಂತ ಹೇಗೆ ಕ್ರಿಶ್ಚಿಯನ್ ಥಿಯಾಲಜಿಯ ಸೆಕ್ಯುಲರೀಕೃತ ರೂಪ ಎನ್ನುವುದನ್ನು ಎಸ್.ಎನ್.ಬಾಲಗಂಗಾಧರರು ಸ್ಟಷ್ಟವಾಗಿಯೇ ತೋರಿಸುತ್ತಾರೆ.

ಪ್ರಭುತ್ವ ಮತ್ತು ಭಾರತೀಯ ಸಂದರ್ಭ
ಭಾರತದಂತಹ ಸಂದರ್ಭದಲ್ಲಿರುವಂತಹ ಈ ರಾಜಕೀಯ ಪ್ರಭುತ್ವದ ಸ್ವರೂಪವೂ ಇದೇ ಹಿನ್ನೆಲೆಯಿಂದ ಪಡೆದ ಅಂಶವಾಗಿದೆ. ಸ್ವಾತಂತ್ರ್ಯಾನಂತರ ವಿಶ್ವದ ಇತರೆಡೆಗಳಂತಯೇ ಭಾರತದಲ್ಲಿಯೂ ಒಂದು ರಾಜಕೀಯ ಮಾದರಿಯನ್ನು ರೂಪಿಸಲಾಯಿತು ಮತ್ತು ಅದನ್ನು ‘ನೇಷನ್-ಸ್ಟೇಟ್’ ಮಾದರಿ ಎಂದೂ ಕರೆಯಲಾಯಿತು. ಆದರೆ ಇದು ಸಂವಿಧಾನ ಮತ್ತು ಶಾಸನಗಳ ರೂಪದಲ್ಲಿ ಪ್ರಕಟಗೊಂಡರೂ ಇಲ್ಲಿಯ ಜೀವನದ ಮಾದರಿಯಾಗಿ ಪ್ರಕಟಗೊಂಡಿತೇ ಎನ್ನುವುದು ಪ್ರಮುಖ ಪ್ರಶ್ನೆ. ಈ ಕುರಿತು ಬರೆಯಲ್ಪಟ್ಟಿರುವ ಅಸಂಖ್ಯಾತ ಲೇಖನಗಳು ಪುಸ್ತಕಗಳು ತೋರಿಸುವಂತೆ ಹಾಗೆ ಪ್ರಕಟಗೊಳ್ಳುತ್ತಿಲ್ಲ ಎನ್ನುವ ಹಲುಬುವಿಕೆ ಎದ್ದುಕಾಣುತ್ತದೆ. ಆದರೆ ಈ ಹಲುಬುವಿಕೆಗಳು ಹೀಗೆ ಪ್ರಕಟಗೊಳ್ಳದಿರಲು ಭಾರತೀಯ ಸಮಾಜವನ್ನು ಅಂದರೆ ಇಲ್ಲಿಯ ಜಾತಿ ಪದ್ಧತಿ, ಶೋಷಣೆಯನ್ನೇ ಆಧಾರವನ್ನಾಗಿಸಿಕೊಂಡಿರುವ ಹಿಂದೂ ಧರ್ಮ, ಅದರ ಮೌಢ್ಯತೆ ಮತ್ತು ಒಡಕಿನ ಗುಣಗಳು ಅದರೊಳಗೆ ಜೀವಿಸುವ ಸಾಮಾನ್ಯ ಜನರನ್ನು ಮತ್ತು ಅವರಿಂದ ಆಯ್ಕೆಗೊಂಡ ನಾಯಕರನ್ನು ಹೊಣೆಯನ್ನಾಗಿಸುತ್ತದೆ (Bidyut Chakrabarty, 2008).

ಆದರೆ, ಈ ಮಾದರಿಯು ವಾಸ್ತವವಾಗಿ ಪ್ರಕಟಗೊಳ್ಳಲು ಇಲ್ಲಿಯವರೆಲ್ಲರೂ ಒಂದು ಜನಾಂಗವಾಗಿರಬೇಕು ಮತ್ತು ಸಾರ್ವಭೌಮ ಕಾನೂನುಗಳನ್ನು ಏಕರೂಪ ನಿರ್ದೇಶನವಾಗಿ ಸ್ವೀಕರಿಸಲು ಆ ರೀತಿಯ ಸಾರ್ವಭೌಮ ನಿಯಮವೆಂದರೇನು ಮತ್ತು ಅದನ್ನು ಪ್ರಶ್ನಿಸದೆ ಪಾಲಿಸಬೇಕು ಎಂಬುದನ್ನು ಜೀವನ ವಿಧಾನವನ್ನಾಗಿ ಹೊಂದಿರುವ ಸಂಸ್ಕೃತಿಯೂ ಇಲ್ಲಿರಬೇಕು ಅಲ್ಲವೇ ಎನ್ನುವಂತಹ ಅಂಶಗಳನ್ನು ಮುಂದಿಟ್ಟುಕೊಂಡರೆ ಇಡೀ ವಿಷಯವನ್ನು ಬೇರೆಯದೇ ರೀತಿಯಲ್ಲಿ ಚರ್ಚಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ ಪೂರ್ವದಲ್ಲಿ ಈ ರೀತಿಯ ಒಂದು ಜನಾಂಗವಿದ್ದ ಲಕ್ಷಣಗಳಿಲ್ಲ. ಹಾಗೆಯೇ ಸ್ವತಂತ್ರ ನಂತರವೂ ಆ ರೀತಿಯ ಜನಾಂಗ ಸೃಷ್ಟಿಯಾಗಲೂ ಇಲ್ಲ. ಹಾಗೆಯೇ, ಸಾರ್ವಭೌಮ ಸ್ಟೇಟ್ನ ಪರಿಚಯವೂ ಭಾರತದಲ್ಲಿ ಇರಲಿಲ್ಲ; ಅದು ಬ್ರಿಟೀಷರಿಂದ ನಮಗೆ ಬಳುವಳಿಯಾಗಿ ಬಂದ ಪರಿಕಲ್ಪನೆ. ಆದರೆ ಅದೆಂದೂ ಇಲ್ಲಿಯ ಜೀವನ ವಿಧಾನವಾಗಲಿಲ್ಲ. ಹಿಂದೆ ರಾಜಮಹಾರಾಜರ ಆಳ್ವಿಕೆಯಲ್ಲಿ ಸ್ಥಳೀಯ ಜನರ ಜೀವನ ಅಲ್ಲಿಯ ಇಲ್ಲವೇ ಆಯಾ ಜಾತಿಗಳ ರೂಢಿ ಪದ್ಧತಿಯಂತೆ ನಡೆಯುತ್ತಿದ್ದವೇ ವಿನಃ ಪ್ರಭುತ್ವಗಳ ಕಾನೂನಿನ ಪ್ರಕಾರವಾಗೇನೂ ಅಲ್ಲ. ಹಾಗಾಗಿ ಪ್ರಭುತ್ವದ ಕಾನೂನಿನ ಪ್ರಕಾರ ಜೀವನ ನಡೆಸುವುದೂ ಇಲ್ಲಿಯ ಸಂಸ್ಕೃತಿಗೆ ಅಷ್ಟೇ ಅಪರಿಚಿತ (ರಾಜಾರಾಮ ಹೆಗಡೆ, ವಸಹತುಪೂರ್ವ ರಾಜ್ಯಪದ್ಧತಿ. 2008).

ಈ ರೀತಿಯ ಸಂಸ್ಕೃತಿಯಿರುವೆಡೆ ಮೊದಲಿಗೆ ಸ್ಟೇಟ್ ಬ್ರೀಟೀಷರ ಮೂಲಕ (ಇಲ್ಲಿಯ/ಹಿಂದು ಜನರ ಜೀವನದ ಆಧಾರ ನಿಯಮಗಳೆಂದು ಕ್ರೋಢೀಕರಿಸಿ ಶಾಸನಗಳನ್ನಾಗಿ ಮಾಡಿ) ಪ್ರವೇಶವಾಯಿತು. ನಂತರ, ಸ್ವತಂತ್ರ್ಯಾನಂತರ ನೇಷನ್-ಸ್ಟೇಟ್ ಎನ್ನುವುದು ಭಾರತೀಯ ಪ್ರಭುತ್ವ ಭಾರತೀಯ ಕಾನೂನುಗಳ (ಭಾರತೀಯರದ್ದೆಂದು ಕ್ರೋಢೀಕರಿಕೊಟ್ಟವರು ಬ್ರಿಟೀಷರು) ಮೂಲಕ ಆಳುವ ವ್ಯವಸ್ಥೆಯ ರೂಪದಲ್ಲಿ ಪ್ರವೇಶವಾಯಿತು. ಆದರೆ ನೇಷನ್ ಸ್ಟೇಟ್ ಎಂದಿಗೂ ಇಲ್ಲಿಯ ಜನರ ಅನುಭವ ಪ್ರಪಂಚದ ವಾಸ್ತವವಾಗಿ ಬದಲಾಗಲಿಲ್ಲ. ಅದಕ್ಕೆ ಇಲ್ಲಿಯ ಜನರೆಲ್ಲರೂ ಒಂದು ಜನಾಂಗವಾಗಿ ಬದಲಾಗಬೇಕಿತ್ತು ಮತ್ತು ಪಶ್ಚಿಮ ಸಂಸ್ಕೃತಿಯ ಪಡಿಯಚ್ಚಿನಂತೆ ಸಮಾಜವೂ ಬದಲಾಗಬೇಕಿತ್ತು. ಆದರೆ ಅದಾಗದ ಕಾರಣ (ಆಗಬೇಕೆಂಬ ಆಶಯ ಇದಲ್ಲ) ಇದು ಕೇವಲ ಪರಿಕಲ್ಪನೆಯಲ್ಲಿ ಉಳಿಯಿತೇ ವಿನಹ ಜನರ ವಾಸ್ತವಿಕ ಜೀವನ ವಿಧಾನವಾಗಿ ಬದಲಾಗಲಿಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments