ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
-ನಟರಾಜು
ಒಂದು ಬಾರಿ ಗೆಳೆಯನೊಬ್ಬನ ಜೊತೆ ಕೊಲ್ಕತ್ತಾದ ವೈದ್ಯ ವಿದ್ಯಾಲಯದ ಕ್ಯಾಂಪಸ್ ಗೆ ಹೋಗಿದ್ದೆ. ಅಂದು ಪ್ರಥಮ ವರ್ಷದ ಎಂಬಿಬಿಎಸ್ ಪದವಿಯ ಪ್ರವೇಶಕ್ಕಾಗಿ ಕೌಂಸಿಲಿಂಗ್ ನಡೆಯುತ್ತಿತ್ತು. ಆ ಜಾಗದಲ್ಲಿ ರಾಜಕೀಯ ಪಕ್ಷಗಳ ವತಿಯಿಂದ ಮೂರ್ನಾಲ್ಕು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಜಕೀಯ ಪಕ್ಷದ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ನೋಡಿ, ಕಾಲೇಜಿನ ಆವರಣದಲ್ಲಿ ರಾಜಕೀಯ ಪಕ್ಷದವರಿಗೇನು ಕೆಲಸ ಅಂತ ನಾನು ಕುತೂಹಲದಿಂದ ಆ ಮಳಿಗೆಯ ಬಳಿ ಹೋಗಿದ್ದೆ. ಆ ಮಳಿಗೆಯ ಒಬ್ಬ ವ್ಯಕ್ತಿ ನಾನು ಹೊಸ ವಿದ್ಯಾರ್ಥಿ ಇರಬೇಕು ಅಂತ ತಮ್ಮ ಸಂಘದ ಭಿತ್ತಿ ಪತ್ರವೊಂದನು ಕೈಗಿತ್ತಿದ್ದ. ಬೆಂಗಾಳಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿದ್ದ ಭಿತ್ತಿ ಪತ್ರವನು ಓದಿ ನನ್ನ ಗೆಳೆಯನೆಡೆಗೆ ತಿರುಗಿದ್ದೆ. ಆತ ಮುಗಳ್ನಕ್ಕಿದ್ದ. ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ತಮ್ಮ ತಮ್ಮ ರಾಜಕೀಯ ಪಕ್ಷದ ಒಲವನ್ನು ವಿದ್ಯಾರ್ಥಿಗಳು ತಮಗಿಷ್ಟ ಬಂದ ಪಕ್ಷದ ವಿದ್ಯಾರ್ಥಿ ಸಂಘದಲಿ ನೋಂದಾಯಿಸುವುದರ ಮೂಲಕ ವ್ಯಕ್ತಪಡಿಸಬಹುದು ಅಂತ ನನ್ನ ಗೆಳೆಯ ಹೇಳಿದ್ದ.
ನೀವು ನಮ್ಮ ರಾಜ್ಯದಲ್ಲಿನ ಕಾಲೇಜುಗಳಲ್ಲಿ ಜಾತಿ ಆಧಾರಿತ ವಿದ್ಯಾರ್ಥಿ ಸಂಘಗಳನ್ನು ನೋಡಿರಬಹುದು. ನಾನು ಸಧ್ಯ ವಾಸವಿರುವ ಪಶ್ಚಿಮ ಬಂಗಾಳದ ಪ್ರತಿ ಕಾಲೇಜುಗಳಲ್ಲಿ ಜಾತಿ ಆಧಾರಿತ ವಿದ್ಯಾರ್ಥಿ ಸಂಘಗಳ ಬದಲಿಗೆ ರಾಜಕೀಯ ಪಕ್ಷಗಳು ಸ್ಥಾಪಿಸಿರುವ ವಿದ್ಯಾರ್ಥಿ ಸಂಘಗಳಿವೆ ಅಂದರೆ ನೀವು ಅಚ್ಚರಿಪಡಬೇಡಿ. ಕೇವಲ ತಮ್ಮ ಪಕ್ಷದ ಬಲವನ್ನು, ಇರುವಿಕೆಯನ್ನು ಕಾಲೇಜುಗಳಲ್ಲಿ ತೋರಿಸುವುದಕ್ಕಾಗಿ ರಾಜಕೀಯ ಪಕ್ಷಗಳು ಕಾಲೇಜುಗಳಲ್ಲಿ ಚುನಾವಣೆ ನಡೆಯುತ್ತವೆ ಅಂದರೆ ಅಂತಹ ಕಾಲೇಜುಗಳಲ್ಲಿ ರಾಜಕೀಯ ಎಷ್ಟು ಪ್ರಬಲವಾಗಿರುತ್ತೆ ಅಂತ ಊಹಿಸಿಕೊಳ್ಳಿ. ರಾಜಕೀಯ ಅಂದ ಮೇಲೆ ಮೋಸ ಸಾಮಾನ್ಯವಾದ ಕಾರಣ, ಮೋಸವೇನಾದರೂ ಚುನಾವಣೆ ಸಮಯದಲ್ಲಿ ನಡೆದಿದೆ ಎಂದರೆ ಅಥವಾ ಇನ್ನಾವುದೇ ಸಮಸ್ಯೆಗಳು ವಿದ್ಯಾರ್ಥಿಗಳಿಗೆ ಎದುರಾದಾಗ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ತಮ್ಮ ಪಕ್ಷಗಳ ಪರವಾಗಿ ಎಷ್ಟೋ ವೇಳೆ ಜಗಳಕ್ಕೆ ನಿಲ್ಲುತ್ತಾರೆ. ಅಂತಹ ಜಗಳಗಳು ಎಷ್ಟೋ ಬಾರಿ ಕಾಲೇಜಿನಿಂದ ಹಾಸ್ಟೆಲ್ ಗಳವರೆಗೂ ತಲುಪುತ್ತವೆ. ಆಗೆಲ್ಲಾ ನಾಡ ಬಾಂಬ್ ಗಳು, ನಾಡ ಪಿಸ್ತೂಲುಗಳು ಸಹ ಹಾಸ್ಟೆಲ್ ಮತ್ತು ಕಾಲೇಜುಗಳಲ್ಲಿ ಮೊಳಗುತ್ತವೆ ಅಂದರೆ ಅಚ್ಚರಿ ಪಡಬೇಕಿಲ್ಲ. ಆಗೆಲ್ಲ ಕಣ್ಣು, ಕಾಲು, ಕೈ, ಜೀವವನ್ನೆ ಕಳೆದುಕೊಳ್ಳೋ ಅಮಾಯಕ ವಿದ್ಯಾರ್ಥಿಗಳು ರಾಜಕೀಯ ಚದುರಂಗದಾಟದ ವಸ್ತುಗಳಾಗಿಬಿಡುತ್ತಾರೆ. ಅವುಗಳನ್ನೆಲ್ಲಾ ನೋಡಿದಾಗ ಕಾಲೇಜುಗಳಲ್ಲಿ ಆ ತರಹದ ಸಂಘಗಳ ಅವಶ್ಯಕತೆ ಇದೆಯಾ ಅನ್ನಿಸಿಬಿಡುತ್ತದೆ.
ಕೊಲ್ಕತ್ತಾಕ್ಕೆ ಬಂದ ಹೊಸದರಲಿ ನಾನು ಮಾತನಾಡುವ ಶೈಲಿ ನೋಡಿ ಎಷ್ಟೋ ಜನ “ನೀನು ಮದ್ರಾಸಿಯ” ಅಂತ ಕೇಳ್ತಾ ಇದ್ದರು. ಭಾರತ ವೈವಿಧ್ಯತೆಯಲ್ಲಿ ಏಕತೆಯಿಂದ ಕೂಡಿದ್ದರೂ ಇವತ್ತಿಗೂ ನಾನು ನಾರ್ಥ್ ಇಂಡಿಯನ್, ನೀನು ಸೌತ್ ಇಂಡಿಯನ್, ನಾನು ಬಿಹಾರಿ, ನೀನು ಮರಾಠಿ ಅನ್ನೋ ಎಷ್ಟೋ ಭಾವನೆಗಳು ಕೆಲವರಲಿ ಇಂದಿಗೂ ತುಂಬಿ ತುಳುಕುತ್ತಿದೆ. ದಕ್ಷಿಣ ಭಾರತವೆಂದರೆ ಬರೀ ಇಡ್ಲಿ, ದೋಸೆ, ಅಂತ ಎಷ್ಟೋ ಜನ ತಿಳಿದಿದ್ದಾರೆ. ಯಾರಾದರು ಕೊಲ್ಕತ್ತಾದವರು ನನ್ನನ್ನು ‘ನೀವು ಸೌತ್ ಇಂಡಿಯನ್ಸ್. ಇಡ್ಲಿ, ದೋಸೆ ಜಾಸ್ತಿ ತಿನ್ನುತ್ತೀರ’ ಎಂದು ಕೇಳಿದರೆ.. “ಇಲ್ಲ, ನಾನು ಕನ್ನಡಿಗ, ನಾನು ಜಾಸ್ತಿ ರಾಗಿ ಮುದ್ದೆ ತಿನ್ನುತ್ತೇನೆ” ಅಂತ ಎಷ್ಟೋ ಜನರಿಗೆ ಹೇಳಿದ್ದೇನೆ. “ರಾಗಿ ಮುದ್ದೆ, ಹಂಗಂದ್ರೆ ಏನು?” ಅಂತ ರಾಗಿಯ ಹೆಸರನ್ನೇ ಕೇಳದ ಅವರ ದಡ್ಡತನವನು ನೋಡಿ ನಾನು ನಕ್ಕಿದ್ದೇನೆ ಸಹ. ನನ್ನ ಎಷ್ಟೋ ಬೆಂಗಾಳಿ ಮಿತ್ರರಿಗೆ ‘ರಾಗಿ, ಸಾಸಿವೆ ತರಹ ಕಾಣೋ ಸಣ್ಣ ಧಾನ್ಯ. ಸಾಸಿವೆ ಕುಟ್ಟಿದರೆ ಎಣ್ಣೆ ಬರುತ್ತೆ. ರಾಗಿ ಕುಟ್ಟಿದರೆ ಬಿಳಿಯ ಪುಡಿ ಬರುತ್ತೆ’ ಅಂತ ಹೇಳಿ, ರಾಗಿ ಪುಡಿಯನ್ನು ನೀರಿನಲ್ಲಿ ಕಲಸಿ, ಕುದಿಸಿ, ಗಟ್ಟಿ ಮಾಡಿ, ಮುದ್ದೆ ಮಾಡಿ ತಿನ್ನುವ ವಿಧಾನವನ್ನು ಹೇಳಿಕೊಟ್ಟಿದ್ದೇನೆ. ನಮ್ಮ ರಾಗಿಯ ಬಗ್ಗೆ ಕೆಲವರಿಗೆ ಕ್ಯೂರಿಯಾಸಿಟಿ ಇದ್ದರೆ, ಈಗಾಗಲೇ ಬೆಂಗಳೂರಿನಲ್ಲಿ ಒಂದೆರಡು ಬಾರಿ ರಾಗಿ ಮುದ್ದೆ ತಿಂದಿರೋ ಬೆಂಗಾಲಿಗಳಿಗೆ ದಪ್ಪದಾದ ಕಲ್ಲೊಂದನು ಹೊಟ್ಟಯೊಳಗೆ ನುಂಗಿದ ಅನುಭವದ ಕತೆಯ ನೆನೆದು ರಾಗಿಯ ಹೆಸರು ಕೇಳಿದರೆ ಹೆದರುತ್ತಾರೆ.
ಇಂತಹ ಈಶಾನ್ಯ ಭಾರತದ ಜನರ ನಾಡೊಂದರಲ್ಲಿ ಬದುಕುವಾಗ ನಮ್ಮ ಕನ್ನಡದ ಛಾಪು ಮೂಡಿಸದೆ ಇದ್ದರೆ ಕನ್ನಡಿಗನಾಗಿ ಏನು ಪ್ರಯೋಜನ ಅಂತ ಏನಾದರೂ ಒಂದು ವಿಶಿಷ್ಠವಾದುದನ್ನು ಮಾಡಬೇಕು ಅಂತ ನನಗೆ ಆಗಾಗ ಅನ್ನಿಸುತ್ತಿತ್ತು. ನಮ್ಮ ವಿದ್ಯಾಲಯದಲ್ಲಿ ಬೇರೆ ಕಾಲೇಜುಗಳ ಹಾಗೆ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಗಳು ಇಲ್ಲದಿದ್ದುದರಿಂದ ನಾವು ಕೆಲವು ಗೆಳೆಯರು ಸೇರಿ ವಿದ್ಯಾರ್ಥಿ ಸಂಘವೊಂದನ್ನು ಹುಟ್ಟುಹಾಕಿದ್ದೆವು. ಸಂಘದ ಮೊದಮೊದಲ ಮೀಟಿಂಗ್ ಗಳಲ್ಲಿ ಮಾತುಗಳೆಲ್ಲಾ ಬೆಂಗಾಲಿಯಲ್ಲಿ ನಡೆಯುತ್ತಿದ್ದುದರಿಂದ ನನ್ನ ಹಾಗೆ ಬೇರೆ ರಾಜ್ಯದಿಂದ ಬಂದಿದ್ದ ನನ್ನ ಒಂದೆರಡು ಗೆಳೆಯರು ಆ ಮೀಟಿಂಗ್ ಗಳಲ್ಲಿ ಅಷ್ಟು ಆಸಕ್ತಿ ತೋರಿಸುತ್ತಾ ಇರಲಿಲ್ಲ. ನಮ್ಮ ವಿದ್ಯಾರ್ಥಿ ಸಂಘದಲ್ಲಿ ತಮಗೆ ಪದಾಧಿಕಾರಿಗಳ ಹುದ್ದೆ ಸಿಗಲಿಲ್ಲ ಅಂತಲೋ ಏನೋ ಕೆಲವು ಗೆಳೆಯರು ಮೀಟಿಂಗ್ ಗಳಿಂದ ಯಾವಾಗಲೂ ವಿಮುಖರಾಗಿರುತ್ತಿದ್ದರು. ಆಗೆಲ್ಲ ನನಗೆ ನಮ್ಮ ಹುಡುಗರೆಲ್ಲಾ ಇಷ್ಟಪಡೋ ಏನಾದರೊಂದು ಮಾಡಬೇಕು, ಅದಕ್ಕೆ ಭಾಷೆಯಾಗಲೀ, ನಾನತ್ವವಾಗಲಿ ಅಡ್ಡಿಯಾಗಬಾರದು ಅಂತ ಒಂದು ದಿನ ಕೆಲವು ವಿದ್ಯಾರ್ಥಿಗಳ ಈ-ಮೇಲ್ ಐಡಿಗಳನ್ನು ಸಂಗ್ರಹ ಮಾಡಿ ಅಂತರ್ಜಾಲ ತಾಣ ಗೂಗಲ್ ನಲ್ಲಿ ಗುಂಪೊಂದನು ಶುರು ಮಾಡಿದ್ದೆ. ಯಾರಿಗೆ ಏನೇ ಸಮಸ್ಯೆಯಿದ್ದರೂ, ಯಾರ ಬಳಿ ಯಾವುದೇ ಮಾಹಿತಿ ಇದ್ದರೂ ಅದನ್ನು ಎಲ್ಲಾ ವಿದ್ಯಾರ್ಥಿಗಳ ಜೊತೆ ಇ-ಮೇಲ್ ಮೂಲಕ ಹಂಚಿಕೊಳ್ಳೋದೆ ಆ ಗುಂಪಿನ ಉದ್ದೇಶವಾಗಿತ್ತು. ನಿತ್ಯ ಯಾರಾದರೂ ಶೈಕ್ಷಣಿಕ ವಿಷಯ ಕುರಿತ ಯಾವುದಾದರು ಸಂದೇಶವೊಂದನು ಕಳುಹಿಸುತ್ತಿದ್ದರು. ದಿನ ಕಳೆದಂತೆ ನಮ್ಮ ಗುಂಪು ಎಷ್ಟು ಫೇಮಸ್ ಆಗಿಬಿಡ್ತು ಅಂದರೆ ನಮ್ಮ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಆ ಅಂತರ್ಜಾಲ ಸಂಘದ ಸದಸ್ಯರಾಗಿದ್ದರು. ಎಷ್ಟೋ ಸಂಘಗಳು ವರುಷಕ್ಕೊಮ್ಮೆ ಏನೋ ಒಂದು ಕಾರ್ಯಕ್ರಮ ನಡೆಸಿ ಜೈ ಎಂದು ಮತ್ತೆ ಕೆಲ ತಿಂಗಳುಗಳ ಕಾಲ ನಾಪತ್ತೆಯಾಗಿಬಿಡೋದು ಪ್ರತಿ ಸಂಘಗಳ ವೀಕ್ ಪಾಯಿಂಟ್ ಏನೋ. ಆದರೆ ನಮ್ಮ ಸಂಘ, ವಿದ್ಯಾರ್ಥಿಗಳ ಸಂದೇಶಗಳಿಂದ ದಿನ ಜೀವಂತವಾಗಿರುತ್ತಿತ್ತು. ವಿಜ್ಞಾನ ತಂತ್ರಜ್ಞಾನಗಳನ್ನು ಉತ್ತಮ ರೀತಿ ಬಳಸಬಹುದು ಅಂತ ನನಗೆ ಅವತ್ತು ಅನ್ನಿಸಿತ್ತು.
ನಮ್ಮ ವಿದ್ಯಾರ್ಥಿ ಸಂಘ ಒಂದು ವರ್ಷ ಪೂರೈಸಿದಾಗ ವಾರ್ಷಿಕೋತ್ಸವ ಸಮಾರಂಭದಲ್ಲಿ ನಮ್ಮ ವಿದ್ಯಾರ್ಥಿ ಸಂಘದ ಹುಟ್ಟು, ಅದರ ಧ್ಯೇಯ ಹಾಗೂ ಅದರ ಪ್ರಾಮುಖ್ಯತೆಯನ್ನು ಕುರಿತು ಆ ತುಂಬಿದ ಸೆಮಿನಾರ್ ಕೊಠಡಿಯಲ್ಲಿ ಒಂದು ಪುಟ್ಟ ಭಾಷಣವನ್ನು ಮಾಡ್ತಾ ಇದ್ದೆ. ಅಲ್ಲಿ ನೆರೆದಿದ್ದ ವಿಜ್ಞಾನಿಗಳೆಲ್ಲಾ ನಾನು ಆ ಸಂಘದ ಅಧ್ಯಕ್ಷನೋ, ಕಾರ್ಯದರ್ಶಿಯೋ ಇರಬೇಕು ಅಂದುಕೊಂಡಿದ್ದರು. ಅಚ್ಚರಿಯೆಂಬಂತೆ ನಾನು ಆ ಸಂಘದ ಒಬ್ಬ ಸಾಮಾನ್ಯ ಸದಸ್ಯ ಅಷ್ಟೇ ಆಗಿದ್ದೆ. ಎಲ್ಲಿಂದಲೋ ಬಂದು ನಮ್ಮ ಇರುವಿಕೆಯ ಗುರುತನ್ನು ಮೂಡಿಸೋದು ತುಂಬಾ ಕಷ್ಟದ ಕೆಲಸ. ನಾವು ಮಾಡೋ ಕೆಲಸ ಎಲ್ಲರೂ ಮೆಚ್ಚುವಂತಿದ್ದರೆ ಬಹುಶಃ ಎಲ್ಲರೂ ನಮ್ಮನ್ನು ಸುಮ್ಮನಾದರೂ ಇಷ್ಟಪಡುತ್ತಾರೇನೋ? ಅಂತ ಆಗ ಅನಿಸಿತ್ತು. ನಮ್ಮ ವಿದ್ಯಾರ್ಥಿ ಸಂಘ ಮೂರನೆ ವರ್ಷಕ್ಕೆ ಕಾಲಿಟ್ಟಿದ್ದರೂ ಇಂದೂ ಸಹ ನಮ್ಮ ವಿದ್ಯಾರ್ಥಿ ಸಂಘ ಜಾತಿ ಆಧಾರಿತ ಅಥವಾ ರಾಜಕೀಯ ಪ್ರೇರಿತ ಸಂಘವಾಗಿಲ್ಲ ಅನ್ನೋದು ಖುಷಿಯ ಸಂಗತಿ..
* * * * * * * *
ಚಿತ್ರಕೃಪೆ : infinitecourses.com





ಪರ ಸ್ಥಳದಲ್ಲಿ ಕನ್ನಡದ ಕಂಪು ಚೆಲ್ಲುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.., ಹಾಗೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ತಿಳಿಸಿರುವ ಪರಿ ಚೆನ್ನಾಗಿದೆ.. ನಿಮಗೆ ಸಂಘದಲ್ಲಿ ಯಾವ ಸ್ಥನವನ್ನೂ ನೀಡದ ಅವರಿಗೆ ಮುದ್ದೆ ತಿನ್ನಿಸಿಬಿಡಿ.., ಅನುಭವದ ಲೇಖನಗಳು ಮತ್ತಷ್ಟು ಬರಲಿ.. ನಿಮಗೆ ಶುಭವಾಗಲಿ.. :))
ಪರಸ್ಥಳಗಳಲ್ಲಿ ನಮ್ಮಿರುವಿನ ಚಾಪನ್ನು ಇಡುವುದು ನಿಜಕ್ಕೂ ಸವಾಲಿನ ಕೆಲಸ ನಟರಾಜ್’ರವರೆ, ಆ ಕೆಲಸವನ್ನು ಮಾಡಿದ್ದೇನೆ ಎಂಬ ಹೆಮ್ಮೆ ನಿಮ್ಮಲ್ಲಿದ್ದರೆ ಅದಕ್ಕಿಂತ ದೊಡ್ಡ ವಿಷಯ ಬೇರಿಲ್ಲ.. ಕೋಲ್ಕತ್ತಾದಲ್ಲಿನ ಜನಜೀವನ ಮತ್ತು ವಿದ್ಯಾರ್ಥಿ ಜೀವನಗಳನ್ನು ತುಂಬಾ ಸರಳ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದೀರಿ.. ಕಣ್ಣ ಮುಂದೆ ನಿಮ್ಮ ಜೀವನವನ್ನೇ ತೆರೆದಿಟ್ಟಂತಿದೆ ನಿಮ್ಮೀ ಲೇಖನ.. ಲೇಖನವೆಂದರೆ ಕೇವಲ ನಮ್ಮ ಮನಸ್ಸಿನಲ್ಲಿರುವುದನ್ನು ಒಂದೇ ಸೊಲ್ಲಿನಲ್ಲಿ ಹೇಳಿಬಿಡುವುದಲ್ಲ, ಅದನ್ನು ಎಷ್ಟೇ ಸವಿಸ್ತಾರವಾಗಿ ವಿಸ್ತರಿಸಿದರೂ ನವೀನತೆ ಮತ್ತು ಲವಲವಿಕೆಯನ್ನು ಉಳಿಸಿಕೊಂಡು ಓದಿಸಿಕೊಳ್ಳುವಂತೆ ನಿರೂಪಿಸಬೇಕು ಅದು ಒಬ್ಬ ಲೇಖಕನ ಕಾವ್ಯದ ತಾಕತ್ತು, ಆ ಕೆಲಸವ್ಅನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಿ.. ನಿಮಗೆ ಅಭಿನಂದನೆಗಳು.. ಕೋಲ್ಕತ್ತಾದಲ್ಲಿದ್ದರೂ ನಮ್ಮ ಕನ್ನಡದ ಮಣ್ಣಿನ ಘಮವನ್ನು ಪಸರಿಸುವಲ್ಲಿ ನಿಮ್ಮ ಶ್ರಮ ಶ್ಲಾಘನೀಯ.. 🙂 ರಾಗಿಮುದ್ದೆಯಿಂದಿಡಿದು, ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸಲು ಪ್ರಯತ್ನಿಸಿರುವುದು ನಿಜಕ್ಕೂ ಖುಷಿ ನೀಡುತ್ತದೆ.. ಮತ್ತು ಜಾತಿ ಮತ್ತು ರಾಜಕೀಯ ರಹಿತವಾದ ಒಂದು ವಿದ್ಯಾರ್ಥಿ ಸಂಗವನ್ನು ಅಷ್ಟು ಸದುದ್ದೇಶದಿಂದ ಬೆಳಸುತ್ತಿರುವುದು ನಿಜಕ್ಕೂ ತುಂಬಾ ಹಿಡಿಸಿತು.. ವಿದ್ಯೆ ಎಂಬುದು ಇವುಗಳೆಲ್ಲದರಿಂದ ಮುಕ್ತವಾಗಬೇಕು, ಜ್ಞಾನಾರ್ಜನೆ ಮತ್ತು ವಿದ್ಯಾರ್ಥಿಗಳಲ್ಲಿ ಏನಾದರು ಒಂದು ಹೊಸದನ್ನು ಮಾಡಬೇಕು ಎಂಬ ಚಿಂತನೆಗಳನ್ನು ಬಿತ್ತಬೇಕು ಎಂಬ ನಿಮ್ಮ ಲೇಖನದ ಆಶಯ ಮೆಚ್ಚುವಂತದ್ದು.. ನಿಮಗೆ ಶುಭವಾಗಲಿ.. 🙂 🙂
baravanige adhbuthavAgide, leelajAlavAgi barediddira, navu kandante bangala rAjakeeyada jiddajiddige hesaruvaasi kolegalu rapegalu bahala antaha jaagadalli kannadigaragi neevu madiruva kelasa nijakku shlaghaneeya shubhavaagali