ಚಿಂತನಗಂಗಾ ಚರ್ಚೆಯ ಪ್ರತಿಕ್ರಿಯೆಗಳ ಸುತ್ತ…
(ಗೋಲ್ವಾಲ್ಕರ್ ಅವರ ಚಿಂತನಗಂಗಾ ಪುಸ್ತಕದ ಸುತ್ತ ಬನವಾಸಿ ಬಳಗದ ಮಿತ್ರರು ಶುರು ಮಾಡಿದ ಚರ್ಚೆಗೆ ನಿಲುಮೆಯಲ್ಲಿ ಅಶ್ವಿನ್ ಅಮೀನ್ ಅವರು ಪ್ರತಿಕ್ರಿಯೆ ನೀಡಿದ್ದರು.ಅಶ್ವಿನ್ ಅವರ ಪ್ರತಿಕ್ರಿಯೆಗೆ ಪ್ರಿಯಾಂಕ್ ,ಚೇತನ್ ಮತ್ತು ಮಂಜುನಾಥ್ ಅವ್ರು ಎತ್ತಿದ ಪ್ರಶ್ನೆಗಳು ಕೇವಲ ಪ್ರತಿಕ್ರಿಯೆಗಳಾಗಿ ಕಳೆದುಹೋಗದಿರಲಿ ಅನ್ನುವ ಉದ್ದೇಶದಿಂದ ಓದುಗರಿಗಾಗಿ ಪ್ರಕಟಿಸುತಿದ್ದೇವೆ – ನಿಲುಮೆ)
– ಪ್ರಿಯಾಂಕ್
ಇಲ್ಲಿ ಹೇಳಲಾಗಿರುವ ಕೆಲ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳು.
– ಗೋಲ್ವಾಲ್ಕರ್ ಅವರ ಚಿಂತನಗಂಗಾ ಹೊತ್ತಗೆಯೇ ಆರ್.ಎಸ್.ಎಸ್ಸಿನ ನಿಲುವುಗಳಲ್ಲ ಅಂತಲೂ ಕೆಲವರು ಹೇಳಿದ್ದರು. ನೀವು ಬರೆದಿರೋದು ನೋಡಿ, ಆರ್.ಎಸ್.ಎಸ್ಸಿನ ನಿಲುವುಗಳೆಲ್ಲವೂ ಗೋಲ್ವಾಲ್ಕರ್ ಅವರ ಮಾತುಗಳನ್ನು ಒಪ್ಪುತ್ತದೆ ಎನ್ನುವಂತಿದೆ.
– ಹಿಂದಿಯನ್ನು ರಾಷ್ಟ್ರಬಾಷೆ ಮಾಡಬೇಕಾಗಿ ಗಾಂಧಿ ಅವರೂ ಸೇರಿದಂತೆ, ಗೋಳ್ವಾಲ್ಕರ್ ಅವರೂ ಹೇಳಿದ್ದರು. ಅದಕ್ಕೆ ಕಾರಣಗಳೂ ಇದ್ದವು ಎಂದಿದೀರಿ. ಗಾಂಧಿ ಅವರು ಹೇಳಿದ್ದೂ ನಿಜವೇ. ಅದೆಲ್ಲವನ್ನೂ ಪ್ರಶ್ನಿಸಬೇಕಾಗಿದೆ. ಗೋಳ್ವಾಲ್ಕರ್ ಅವರ ಚಿಂತನೆಗಳೇ ಸಂಘದ ನಿಲುವಾಗಿದ್ದರೆ, ಇವತ್ತಿಗೂ ಸಂಘವು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದರ್ಥವಲ್ಲವೇ? ಎಲ್ಲಾರ ಮೇಲೆ ಹಿಂದಿ ಹೇರಿಕೆ ಮಾಡುವುದರ ಪರವಾಗಿ ಸಂಘವಿದೆ ಎಂಬರ್ಥವಲ್ಲವೇ? ಹಾಗೆ ಮಾಡುತ್ತಿದಾರೋ, ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.
ಇನ್ನು, ಕೇಂದ್ರ ಸರಕಾರ ತನ್ನ ಹಣ ತೊಡಗಿಸಿ ಹಿಂದಿಯೇತರರ ಮೇಲೆ ಹಿಂದಿ ಹೇರುವುದನ್ನು ಏನ್ ಗುರುವಿನಲ್ಲಿ ವಿರೋದಿಸುತ್ತಾ ಪ್ರಶ್ನಿಸುತ್ತಾ ಬರಲಾಗಿದೆ. ನಿಮಗೆ ಟೈಮ್ ಆದಾಗ, “ಹಿಂದಿ ಹೇರಿಕೆ” ಎಂಬ ಟ್ಯಾಗಿನಡಿ ಬರುವ ಎಲ್ಲಾ ಅಂಕಣಗಳನ್ನೂ ಓದಿಕೊಳ್ಳಿ.
– ಸಂಸ್ಕ್ರುತದ ಬಗೆಗೆ ನೀವು ಮಾತನಾಡುತ್ತಾ, ಕನ್ನಡದ ಸಾಹಿತ್ಯಕ್ಕೆ ಮೂಲ ಪ್ರೇರಣೆಯೇ ಸಂಸ್ಕ್ರುತ ಎಂದಿದೀರಿ. ಕನ್ನಡದಲ್ಲಿ ಸಾಹಿತ್ಯ ರಚನೆ ಸಾದ್ಯವಿದೆ ಎಂದು ಕೆಲವರು ತೋರಿಸಿದ್ದರೂ, ಆ ಚರ್ಚೆಯನ್ನು ಪಕ್ಕಕ್ಕಿಡೋಣ.
ಗೋಲ್ವಾಲ್ಕರ್ ಅವರು ಸಂಸ್ಕ್ರುತವನ್ನು ಮುಂದೊಂದು ದಿನ ರಾಷ್ಟ್ರಬಾಷೆಯನ್ನಾಗಿ ಮಾಡಬೇಕು, ಸಂಸ್ಕ್ರುತವನ್ನೇ ಸಂವಹನ ಮಾಧ್ಯಮವಾಗಿ ಬಳಸಬೇಕು ಎಂದಿದಾರೆ. ರಾಷ್ಟ್ರಬಾಷೆ ಹೆಸರಿನಲ್ಲಿ ಯಾವ ಬಾಷೆಯ ಹೇರಿಕೆ ಮಾಡಿದರೂ ಅದು ಹೇರಿಕೆಯೇ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಂಸ್ಕ್ರುತ ಪ್ರೇರಣೆಯಾಗಿದೆ ಎನ್ನುವುದು, ಎಲ್ಲಾ ಕನ್ನಡಿಗರ ಮೇಲೆ ಸಂಸ್ಕ್ರುತ ಹೇರಲು ಹೇಗೆ ಸಮರ್ಥನೆಯಾಗುತ್ತದೆ? ಯಾವುದೇ ಭಾಷಿಗರ ಮೇಲೆ, ಇನ್ನೊಂದು ಭಾಷೆ ಹೇರುವ ಹಕ್ಕು ಯಾರಿಗಾದರೂ ಎಲ್ಲಿದೆ?
– ಭಾರತವು ಒಕ್ಕೂಟವಾಗಿದೆ ಎಂಬುದನ್ನೇ ಅಲ್ಲಗಳೆಯುವಂತಿದೆ ತಮ್ಮ ಮಾತುಗಳು. ಸಂವಿದಾನದಲ್ಲಿ “ಭಾರತವು ರಾಜ್ಯಗಳ ಒಕ್ಕೂಟ” ಎಂಬುದನ್ನು ಹೇಳಲಾಗಿದೆ. ರಾಜ್ಯಗಳ ನಡುವಣ ತಿಕ್ಕಾಟಕ್ಕೆ ತಾವು ರಾಜ್ಯಗಳ ಇರುವಿಕೆಯೇ ಕಾರಣ ಎಂದು ಬಗೆದಂತಿದೆ. ಆದರೆ, ರಾಜ್ಯಗಳಿಗೆ ಅರ್ದಂಬರ್ದ ಆಡಳಿತ ಹಕ್ಕುಗಳನ್ನು ನೀಡಿ ಹೆಚ್ಚಿನ ಆಡಳಿತದ ಹಕ್ಕುಗಳನ್ನು ಕೇಂದ್ರವೇ ಇರಿಸಿಕೊಂಡಿರುವುದು ಈ ರೀತಿಯ ತಿಕ್ಕಾಟಕ್ಕೆ ಕಾರಣವಾಗಿದೆ. ನಾವು ನಿಜವಾದ ಫೆಡೆರಲ್ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇ ಆದರೆ, ಈ ತಿಕ್ಕಾಟಗಳಿಗೆ ರಾಜ್ಯಗಳೇ ಪರಿಹಾರ ಕಂಡುಕೊಳ್ಳುತ್ತವೆ. ಸರಿಯಾದ ಒಕ್ಕೂಟವನ್ನು ಬೆಳೆಸಿದ್ದೇ ಆದರೆ, ಏಕತೆಯೂ ಬರುತ್ತದೆ. ಏಕತೆಯ ಹೆಸರಿನಲ್ಲಿ, ಒಂದು ಬಾಷೆಯನ್ನು ಇನ್ನೊಂದು ಬಾಷೆಯ ಮೇಲೆ ಹೇರಲು ಹೊರಟರೆ ಏಕತೆ ಸಾದಿಸುವುದು ಕಷ್ಟ. ಬಾಷೆಯ ಹೇರಿಕೆ ಸಹಿಸಲಾರದೇ ಬೇರಾದ ನಾಡುಗಳ ಉದಾಹರಣೆ ನಮ್ಮ ಮುಂದೆಯೇ ಇದೆ.
ಗೋಲ್ವಾಲ್ಕರ್ ಅವರು ಫೆಡೆರಲ್ ವ್ಯವಸ್ತೆಯ ವಿರುದ್ದವಾಗಿದ್ದರು ಅನ್ನೋದು, ಅವರ ಹೊತ್ತಗೆಯಲ್ಲಿ ಕಂಡಿದೆ. ಇವತ್ತಿಗೂ ಆರ್.ಎಸ್.ಎಸ್ ಅದೇ ನಿಲುವನ್ನು ಹೊಂದಿದೆಯಾ ಎಂಬುದು ಪ್ರಶ್ನೆ.
=========================================================================================
– ಚೇತನ್
ಮಾನ್ಯ ಅಶ್ವಿನ್ ಎಸ್ ಅಮೀನ್ ಅವರೇ,
->”ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.”
ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆನ್ನುವ ಗಟ್ಟಿಯಾದ ಕಾರಣ ಇವತ್ತಿಗೂ ಪ್ರಸ್ತುತವೇ? ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದೀರಿ ತಾವು ದಯವಿಟ್ಟು ನಮ್ಮ ಕರ್ನಾಟಕವನ್ನು ಒಮ್ಮೆ ಸುತ್ತಿ ನೋಡಬೇಕು, ಅಲ್ಲಿ ಜನರಿಗೆ ಕನ್ನಡವಲ್ಲದೇ ಬೇರೆ ಭಾಷೆಗಳು ಬರುವುದು ತೀರಾ ಕಡೆಮೆ, ಹಿಂದಿ ಭಾಶೆ ಗೊತ್ತೇ ಇರುವುದಿಲ್ಲ. ಗಡಿ ಭಾಗದಲ್ಲಿರುವ ಜನರು ತಮ್ಮ ಪಕ್ಕದ ರಾಜ್ಯದ ನುಡಿ ಕಲಿತಿರುವ ಸಾಧ್ಯತೆ ಇದೆ, ಒಳನಾಡಿಗೆ ಬಂದಂತೆ ಅಲ್ಲಿ ಕನ್ನಡವೊಂದೇ ಕಾಣಿಸುತ್ತದೆ. ಇದೇ ಪರಿಸ್ಥಿತಿಯನ್ನು ಹೆಚ್ಚು ಕಡಿಮೆ ಹಿಂದಿಯೇತರ ರಾಜ್ಯಗಳಲ್ಲಿ ನಾವು ಕಾಣಬಹುದು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹೀಗೆ… ಇನ್ನು ಹಿಂದಿಯನ್ನು ರಾಷ್ಟ್ರ ಭಾಷೆಯಂದು ಹೇಳಿ ಎಲ್ಲರೂ ಕಲಿತರೆ ಆಗುವ ಪ್ರಯೋಜನ ಹೊರ ರಾಜ್ಯದಿಂದ ಬರುವ ಹಿಂದಿ ಜನರಿಗೆ ಮಾತ್ರ. ಗಣತಿಯ ಪ್ರಕಾರ ಕರ್ನಾಟಾಕದಿಂದ ಉದ್ಯೋಗ ಅರಸಿ ಹೊರ ಹೋಗುವ ಜನರು ತೀರಾ ಕಡಿಮೆ. ಆದರೆ ನಿಮಗೂ ತಿಳಿದಿರುವಂತೆ ಉತ್ತರ ಭಾರತದ ಜನರು ಕರ್ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಹಿಂದಿ ಮಾತನಾಡುವ ಕನ್ನಡಿಗನಿಂದ ಆಗಬಹುದಾದ ಉಪಯೋಗವೆಂದರೆ ಅವರಿಗೆ ಕನ್ನಡ ಕಲಿಸದೇ ನಮ್ಮ ರಾಜ್ಯದ ಎಲ್ಲಾ ಸವಲತ್ತುಗಳನ್ನು ಅವನ ಭಾಷೆಯಲ್ಲೇ ನೀಡುವುದು. ಈ ಒಂದು ಭಾಷೆ ಮೇಲುಗೈಯನ್ನು ಸಂಘವು ಒಪ್ಪುತ್ತದೆಯೇ? ಗಾಂಧಿಯವರ ಹಿಂದಿ ಭಾಷೆ ಪ್ರಾಚಾರವನ್ನು ಖಂಡಿತವಾಗಿಯೂ ನಾವು ಪ್ರಶ್ನಿಸೋಣ.
->”ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು.”
ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ ಎಂದು ಹೇಗೆ ಹೇಳುತ್ತೀರಿ? ಕನ್ನಡದ ವಿಷಯಕ್ಕೆ ಬಂದರೆ ಬರಿ ವಚನ ಸಾಹಿತ್ಯ ಒಂದೇ ಅಲ್ಲಾ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ, ಬರವಣಿಗೆಯಲ್ಲಿ ಇರದ ಜನಪದ ಸಾಹಿತ್ಯ ಇವುಗಳಲ್ಲಿ ಯಾವುದರಲ್ಲೂ ಸಂಸ್ಕ್ಟೃತ ಬಳಸಿರುವ ಅಥವಾ ಅದನ್ನು ಮೂಲವಾಗಿಟ್ಟುಕೊಂಡು ಕಟ್ಟಿರುವ ಸಾಹಿತ್ಯ ಎಂದು ಹೇಗೆ ಹೇಳುತ್ತೀರಿ? ಇಂದಿಗೂ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎನ್ನುವುದು ಸಂಘದ ನಿಲುವಾಗಿದೆಯೇ? ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಗೂ ಪಾರಿಭಾಷಿಕ ಪದಗಳಿಗೆ ತಿರುಗಿ ನೋಡುವುದು ನಮ್ಮಗಳ ಮಿತಿಯೇ ಹೊರತು ಭಾಷೆಯ ಮಿತಿಯಲ್ಲ. ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಜನರನ್ನು ಮುಟ್ಟಬೇಕೆಂದರೆ ಜನರಾಡುವ ಹಾಗೂ ಅವರಿಗೆ ಅರ್ಥವಾಗು ಭಾಷೆಯಲ್ಲಿ ಕೊಡಬೇಕೆ ಹೊರತು ನಾಲಿಗೆ ಹೊರಳುವುದಕ್ಕೂ ಕಷ್ಟವಿರುವ ಪದಗಳಿಂದಲ್ಲ.
->”ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚದುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?”
ರಾಜ್ಯದ ಬಗ್ಗೆ ಮಾತನಾಡಿದವರು ಸಂಕುಚಿತ ಮನಸ್ಸುಳ್ಳವರು ಹಾಗೂ ದೇಶದ ಬಗ್ಗೆ ಮಾತನಾಡಿದರೆ ದೇಶ ಪ್ರೇಮಿ ಅನ್ನೋ ಹಣೆಪಟ್ಟಿ ಹಾಸ್ಯಾಸ್ಪದವಾಗಿದೆ. ಸಂವಿಧಾನದಲ್ಲಿ ಭಾರತವನ್ನು Union of States ಅಂತ ಕರೆಯಲಾಗಿದೆ. ವಿವಿಧ ರಾಜ್ಯಗಳ ಬುಡವನ್ನೇ ಗಟ್ಟಿ ಮಾಡದೇ ಒಂದೇ ಬಾರಿಗೆ ಅಖಂಡ ಹಾಗೂ ಸಮೃದ್ಧ ಭಾರತವನ್ನ ಕಟ್ಟುತ್ತೇವೆ ಅನ್ನೋ ವಾದದಲ್ಲಿ ಎಷ್ಟು ಟೊಳ್ಳು ಎಷ್ಟು ಗಟ್ಟಿ ಅನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಜನರ ಮಧ್ಯ ಏಕತೆಯನ್ನು ಹೇಗೆ ತರುತ್ತೀರಿ? ಒಂದು ಕಡೆ ಒಂದು ಭಾಷೆಯನ್ನು ಎಲ್ಲದಕ್ಕಿಂತ ದೊಡ್ಡದು ಎಂದು ಹೇಳಿ ಆ ಭಾಷೆ ಬರದ ಜನರಲ್ಲಿ ಕೀಳರಿಮೆ ತುಂಬುವ ಹಾಗೆ ಮಾಡಿ, ನೀನು ಆ ಭಾಷೆ ಕಲಿಯದಿದ್ದರೆ ಭಾರತೀಯನೇ ಅಲ್ಲ ಎನ್ನುವ ವಾದದ ಮೂಲಕವೋ? ಅಥವಾ ಭಾರತದಂತಹ ವೈವಿಧ್ಯ ದೇಶದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನವಾದ ಅವಕಾಶ ಹಾಗೂ ಗೌರವವನ್ನು ಕೊಡುವುದರ ಮೂಲಕವೋ? ಗುರೂಜಿಯವರು ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕ್ಟುತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಂಅಧಿಕಾರ ಕೊಡುವುದನ್ನು ವಿರೋಧಿಸಿದ್ದರು ಅಂತ ಬರಿದಿದ್ದೀರಿ ಹಾಗಾದರೆ ಗೂರೂಜಿಗೆ ಭಾರತದ ವೈವಿಧ್ಯತೆಯ ಮೇಲೆ ಅಭಿಮಾನ ಇರಲಿಲ್ಲವೇ? ಇವತ್ತು ಭಾರತವನ್ನು ಜನರು ಗುರುತಿಸುವುದು ಅದರ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತಿರುವುದಕ್ಕೋ ಅಥವಾ ಭಾರತದಲ್ಲಿ ಎಲ್ಲರೂ ಒಂದೇ ತರಹ ಅನ್ನುವುದಕ್ಕೋ? ವಿವಿಧತೆಯ ಬಗ್ಗೆ ಸಂಘವು ಇನ್ನೂ ಇದನ್ನು ಒಪ್ಪುತ್ತದೆಯೇ? ಇಲ್ಲಿ ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟ ರಾಯರು ಹೇಳಿರುವ ಮಾತನ್ನ ಉಲ್ಲೇಖಿಸುತ್ತೇನೆ “ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.” “ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. ”
->”ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ”
ಹಾಗಿದ್ದರೆ ಬಿಜೆಪಿಗೂ ಹಾಗೂ ಸಂಘಕ್ಕು ಯಾವುದೇ ನಂಟಿಲ್ಲವೆಂದು ಹೇಳುತ್ತಿದ್ದೀರಾ? ಹಾಗಿದ್ರೆ ಬಿಜೆಪಿ ಪಕ್ಷದ ಹಿತ ಚಿಂತರಾಗಿರುವ ಸಂಘವು ಬಿಜೆಪಿ ಪಕ್ಷದ ಈ ಕೆಲಸಗಳಿಗೆ ಏನು ಹೇಳುತ್ತದೆ?
೧. ಕಡಿಮೆ ಮಕ್ಕಳು ಇದ್ದಾರೆ ಅನ್ನೋ ನೆಪದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ. ಅವೇ ಜಾಗಗಳಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡುತ್ತಿದೆ.
೨. ವಿವಿಧ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕ್ಟುತ ವಿಭಾಗದಲ್ಲಿ ಓದಲು ವಿಧ್ಯಾರ್ಥಿಗಳಿಲ್ಲದಾಗ, ವಿರೋಧದ ನಡುವೆ ಸಂಸ್ಕ್ಟುತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಸುತ್ತದೆ
೩. ಶಾಲೆಗಳಲ್ಲಿ ಕೇವಲ ಭಗವದ್ ಗೀತೆಯನ್ನು ಕಲಿಸಲು ಹೊರಟಿರುವುದು ಯಾಕೆ. ಮೊದಲನೆಯದಾಗಿ ಧರ್ಮಗಳನ್ನು ಆಚರಣೆಗೆ ತರಬೇಕಾಗಿರುವುದು ನಮ್ಮ ಮನೆಗಳಲ್ಲಿ ಹಾಗು ಅದನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಬೇಕು. ಅದನ್ನ ಬಿಟ್ಟು ಏನು ಅರಿಯದ ಮಕ್ಕಳಲ್ಲಿ ಒಡಕು ಉಂಟು ಮಾಡುವುದು ಪಾಪವೇ ಸರಿ. ಮಕ್ಕಳಿಗೆ ಕೊಡಬೇಕಾಗಿರುವುದು ಬದುಕಲು ಬೇಕಾಗಿರುವ ಕೌಶಲ್ಯ ಹಾಗೂ ಶಿಕ್ಷಣವೇ ಹೊರತು ಧರ್ಮಾಧಾರಿತ ಶಿಕ್ಷಣವಲ್ಲ.
೪. ಅಧಿಕಾರಕ್ಕೆ ಬರುವಾಗ ರೆಡ್ಡಿ ಹಾಗೂ ಇತರರನ್ನು ಉಪಯೋಗಿಸಿಕೊಂಡ ಸಂಘವು ನಂತರ ಹಗರಣ ಬಯಲಾದಾಗ ಯಡಿಯೂರಪ್ಪ ಹಾಗೂ ರೆಡ್ಡಿಗಳ ಮೇಲೆ ಹಾಕಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಮಾತನ್ನ ಜಗತ್ತಿಗೆ ಹೇಳೂತ್ತೆ. ಹೊಣೆಗಾರಿಕೆ ಇಲ್ಲದೇ ಅಧಿಕಾರ ಚಲಾಯಿಸುತ್ತಿದೆ. ಆಪತ್ತು ಬಂದಾಗ ಸುಲಭವಾಗಿ ನುಣುಚಿಕೊಳ್ಳುತ್ತದೆ.
೫. ಕನ್ನಡಿಗರಿಗೆ ಬೇಡವಾಗಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಎಲ್ಲರ ವಿರೋಧದ ನಡುವೆಯೂ ಸ್ಥಾಪಿಸಲಾಯಿತು.
೬. ಇನ್ನು ಮುಖ್ಯವಾಗಿ ಇತ್ತೀಚಿಗೆ ಶಾಲೆಯಲ್ಲಿ ತರಲಾಗುತ್ತಿರುವ ಪಠ್ಯವನ್ನು ಕೇಸರಿಕರಣಗೊಳಿಸಲಾಗುತ್ತಿದೆ. ಬಾಲ್ಯದಿಂದಲೇ ಮಕ್ಕಳ ಮನಸಲ್ಲಿ ದ್ವೇಷದ ಬೀಜವನ್ನು ಬಿತ್ತಿ, ಸಮಾಜದ ಸಾಮರಸ್ಯವನ್ನು ಕೆಡಿಸುವುದಕ್ಕೆ ಹೊರಟಿದೆ. ಇದಕ್ಕೆ ಉದಾಹರಣೆಯಾಗಿ ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಈ ಲೇಖನವನ್ನ ನೋಡಿ. http://www.prajavani.net/web/include/story.php?news=3374§ion=30&menuid=14
->”ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ.”
ಸಂಘದ ಮುಖ್ಯಸ್ಥರ ಮಾತುಗಳನ್ನು ನಾವು ಒಪ್ಪುತ್ತೇವೆಯೋ ಇಲ್ಲವೋ ಅನ್ನುವುದು ನಿರ್ಧಾರವಾಗಬೇಕೆ ಹೊರತು ಅದನ್ನು ಹೊರತುಪಡಿಸಿ ನೋಡುವುದು ಬೇಡ.
=========================================================================================
– ಮಂಜುನಾಥ್,
ಅಶ್ವಿನ್ ಅಮೀನ್ ಅವರೇ,,
ಆರ್.ಎಸ್.ಎಸ್ ವಿಕೋಪಗಳ ಸಂದರ್ಭದಲ್ಲಿ ದೇಶದ ಎಲ್ಲ ಬಾಗಗಳಿಗೆ ನೆರವಿಗೆ ಧಾವಿಸಿದ್ದನ್ನು ಎನ್ಗುರು ಲೇಖನದಲ್ಲೂ ಉಲ್ಲೇಖಿಸಲಾಗಿದೆ. ಆರ್.ಎಸ್.ಎಸ್ ಅದಕ್ಕೆ ಮಾತ್ರ ಸೀಮಿತವಾಗಿದೆಯೇ.? ಆರ್.ಎಸ್.ಎಸ್ ದೇಶ ಕಟ್ಟುವ ಕನಸು ಹೊತ್ತ ಒಂದು ಶಿಸ್ತು ಬದ್ದ ಸಂಘಟನೆ ಅಂತೆಲ್ಲ ಹೇಳಲಾಗುತ್ತದೆ. ಎನ್ಗುರುವಿನಲ್ಲಿ ಪ್ರಕಟವಾದ ಲೇಖನ ಚಿಂತನಗಂಗಾದಲ್ಲಿನ ಅಂಶಗಳನ್ನು ಉಲ್ಲೇಖಿಸಿ ಬರೆಯಲಾಗಿದೆ. ಚಿಂತನಗಂಗಾ, ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಪುಸ್ತಕವಾಗಿರುವುದರಿಂದ ಅದನ್ನು ಆರ್.ಎಸ್.ಎಸ್ ಸಂಘಟನೆಯ ತತ್ವ ಸಿದ್ದಾಂತವನ್ನು ಬಿಂಬಿಸುವ ಅದೀಕೃತ ಹೊತ್ತಿಗೆ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಈಗ ನೀವು ಹೇಳಿ,
ಚಿಂತನಗಂಗಾದಲ್ಲಿನ ಅಂಶಗಳಿಗೂ ಆರ್.ಎಸ್.ಎಸ್ ಗೂ ಸಂಬಂದವಿಲ್ಲವೇ.? ಇಲ್ಲ ಎಂದರೆ ಚಿಂತನಗಂಗಾ,, ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಎಂದು ಪುಸ್ತಕದ ಮೊದಲಲ್ಲೇ ಏಕೆ ಬರೆಯಲಾಗಿದೆ.? ಆರ್.ಎಸ್.ಎಸ್ ನ ಈಗಿನ ತತ್ವ ಸಿದ್ದಾಂತಗಳು ಬದಲಾಗಿವೆಯೇ.?
ಚಿಂತನಗಂಗಾವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಿರಿ. ಚಿಂತನಗಂಗಾದಲ್ಲಿನ ಆಯ್ದ ಬಾಗವನ್ನು ಕೆಳಗೆ ಕೊಡಲಾಗಿದೆ. ಸರಿಯಾಗಿ ಅರ್ಥೈಸಿ ಹೇಳಿ.
But the question before us now is, what is the attitude of those people who have been converted to Islam or Christianity? They are
born in this land, no doubt. But are they true to their salt? Are they grateful to this land which has brought them up? Do they feel that they are the children of this land and its tradition, and that to serve it is their great good fortune? Do they feel it a duty to serve her? No! Together with the change in their faith, gone is the spirit of love and devotion for the nation.
ಹೀಗೆ ಬರೆಯುವಾಗ ಮುಂದೊಂದು ದಿನ, ದೇಶಾಬಿಮಾನಿಗಳು ಎಂದು ಹೇಳಿಕೊಳ್ಳುವವರಿಂದಲೇ ಪಾಕಿಸ್ತಾನದ ದ್ವಜ ಹಾರುತ್ತದೆ ಎಂದು ಬಹುಶ: ಗುರೂಜಿ ಅವರೂ ಊಹಿಸಿರಲಿಲ್ಲ ಅನ್ಸುತ್ತೆ. ಸಮಾಜದಲ್ಲಿ ಒಡಕಿನ ವಿಷ ತುಂಬುವ ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ ಎನ್ನುವ ಮೂಲಕ ವಿಭಿನ್ನ ಧರ್ಮಗಳ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ನಿಜವಲ್ಲವೇ.?
ಇನ್ನು ನಿಮ್ಮ ಮಾತಿಗೆ ಕೆಲವು ಪ್ರತಿಕ್ರಿಯೆ:
>> ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ.
> ಯಾವ ಆದಾರದ ಮೇಲೆ ಇದನ್ನು ಹೇಳಿದಿರೋ ನಾ ಕಾಣೆ. ಇಲ್ಲಿದೆ ನೋಡಿ ಇದಕ್ಕುತ್ತರ. ಹಿಂದಿಗೆ ಕೊಂಚ ಹತ್ತಿರವಾಗಿರುವ ಗುಜರಾತಿಗಳಿಗೆನೇ ಹಿಂದಿ ಒಂದು ವಿದೇಶದ ಬಾಷೆ. ಹೀಗಿರುವಾಗ ಹಿಂದಿಗೆ ಸಂಬಂದವೇ ಇರದ ದ್ರಾವಿಡ ಬಾಷೆಗಳಿಗೆ ಹಿಂದಿ ಹೇಗೆ ಗೊತ್ತು ಸ್ವಾಮೀ. ಹಾಗೇನಾದರೂ ಅಲ್ಪ ಸ್ವಲ್ಪ ಜನಕ್ಕೆ ಗೊತ್ತಿದ್ದರೆ ಅದು ೬೦ ವರುಶಗಳಿಂದ ನಡೆದು ಬಂದಿರುವ ಹಿಂದಿ ಹೇರಿಕೆಯಿಂದನೇ ಅಲ್ಲವೇ.? http://articles.timesofindia.indiatimes.com/2012-01-01/ahmedabad/30578461_1_gujarati-foreign-language-hindi
>> ಅವರು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ.
> ನಿಮ್ಮ ಈ ಮಾತಿಗೂ ಮೇಲಿನ ಕೊಂಡಿಯೇ ಉತ್ತರ. ಏಕೆಂದರೆ ಹಿಂದಿಯನ್ನು ಕೇವಲ ಆಡಳಿತ ಭಾಷೆಯನ್ನಾಗಿ ಬಳಸಿದ ಪರಿಣಾಮವಾಗಿಯೇ ಗುಜರಾತಿನಲ್ಲೇ ಗುಜರಾತಿ ಭಾಷೆ ಸ್ಥಾನ ಕಳೆದುಕೊಂಡಿತು. ಹೀಗಿರುವಾಗ ಹಿಂದಿಯನ್ನು ರಾಷ್ಟ್ರಬಾಷೆಯನ್ನಾಗಿ ಮಾಡಿದರೆ ಪರಿಣಾಮ ಹೇಗಿರಬೇಡ. ಇದಕ್ಕೆ ಕರ್ನಾಟಕವೇನು ಕಮ್ಮಿನೇ.? ಬ್ಯಾಂಕಿಗೆ ಹೋಗಿ ನೋಡಿ ಸ್ವಾಮೀ. ಬ್ಯಾಂಕಿನ ಎಲ್ಲ ವ್ಯವಹಾರದಲ್ಲಿ ಹಿಂದಿ ಸ್ಥಾನ ಪಡೆದಿದೆ, ಕನ್ನಡ ಕೆಲವೆಡೆ ಕಾಣಿಸಿ, ಹಲವು ಕಡೆ ಮಾಯವಾಗಿದೆ. ಅದ್ ಹಾಗೇನೇ? ಕರ್ನಾಟಕದಲ್ಲಿ ಹಿಂದಿ ಇರಲಿ ಅನ್ನೋದು ಕರ್ನಾಟಕದಲ್ಲಿ ಕನ್ನಡ ಬೇಡ ಎಂಬುದರ ಇನ್ನೊಂದು ಅರ್ಥ. ಒಬ್ಬರು ಹೇಳಿದರು,, ನಾವೂ ಕನ್ನಡಾಬಿಮಾನಿಗಳೇ, ಆದರೆ ಅದಕ್ಕೆ ಹಿಂದಿಯನ್ನು ಒದ್ದೋಡಿಸುವ ಸಂಕೋಚಿತ ಬಾವನೆ ನಮಗಿಲ್ಲ ಎಂದು. ಅವರು ಸ್ವಲ್ಪ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ನೋಡಲಿ. ಯಾವ ಬಾಷೆಯನ್ನು ಯಾವ ಭಾಷೆ ಒದ್ದೊಡಿಸುತ್ತಿದೆ. ಮೂಲವಾಗಿ ಹಿಂದಿ ಕರ್ನಾಟಕಕ್ಕೆ ಸಂಬಂದಿಸಿದ ಭಾಷೆಯೇ ಅಲ್ಲ, ಇನ್ನು ಒದ್ದೋಡಿಸುವ ಮಾತೆಲ್ಲಿ. ಆದರೆ ಕರ್ನಾಟಕದಲ್ಲಿ ಕನ್ನಡ ೨೦೦೦ ವರುಶಗಳಿಂದ ಇದೆ. ಮೊನ್ನೆ ಮೊನ್ನೆ ಬಂದ ಹಿಂದಿ ನಿಮ್ಮ ಅಬಿಮಾನಪೂರ್ವಕವಾದ ಕನ್ನಡವನ್ನು ಎಲ್ಲ ಕಡೆಯಿಂದ ಒದ್ದೋಡಿಸುತ್ತಿರುವುದು ಕಣ್ಣಿಗೆ ರಾಚುತ್ತಿಲ್ಲವೇ.? ಹಿಂದಿಯನ್ನು ರಾಷ್ಟ್ರಬಾಷೆಯನ್ನಾಗಿಸುವ ಪ್ರಯತ್ನ ಯಾರೇ ಮಾಡಿದ್ದರೂ ಆ ನಿಲುವಿಗೆ ವಿರೋದ ಇದೆ.
ಸುಮಾರು ೩ ವರುಶಗಳ ಹಿಂದೆ ಮೋದಿ ಅವರು ಗುಜರಾತ್ ಅಸ್ಮಿತಾ ಎಂಬ ಕೂಗನ್ನು ಹೊರಹಾಕಿ ಸ್ವಾಬಿಮಾನಿ ಗುಜರಾತ ಎಂಬ ದ್ಯೇಯ ವಾಕ್ಯವನ್ನು ರಾಜ್ಯದ ಎಲ್ಲೆಡೆ ಮೊಳಗಿಸಿದ್ದರು. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲವೇ ಹಾಗಾದರೆ.? ಗುಜರಾತ್ ಎನ್ನುವುದು ಸಂಕುಚಿತವೇ.? ಬಾರತಕ್ಕೆ ಪ್ರತಿಯೊಂದು ರಾಜ್ಯಗಳು ಆದಾರಸ್ಥಂಬಗಳು. ಒಂದೊಂದು ಆದಾರಸ್ಥಂಬ ಗಟ್ಟಿಯಾದಂತೆ ಬಾರತ ಗಟ್ಟಿಯಾಗುವುದಿಲ್ಲವೇ.? ಕರ್ನಾಟಕದಲ್ಲಿ ಕನ್ನಡವೆಂದರೆ ಸಂಕುಚಿತ ಎನ್ನುವ ಸಂಘದ ಬೋದನೆಯನ್ನು ಒಪ್ಪಲು ಸಾದ್ಯವೇ.? ವೈವಿದ್ಯತೆಯನ್ನು ಗೌರವಿಸುತ್ತಿದ್ದರೆ ಸ್ಥಳೀಯ ಭಾಷೆಗಳೇ ಸಾರ್ವಬೌಮವಾಗಬೇಕು ಎಂಬ ನಿಲುವಿರಬೇಕು. ದೇಶಕ್ಕೊಂದು ರಾಷ್ಟ್ರಭಾಷೆ ಬೇಕು ಎನ್ನುವುದು ಇತರ ಭಾಷೆಗಳನ್ನು ಮೂಲೆಗಟ್ಟುವ ಒಂದು ತಂತ್ರವೇ ಹೊರತು ಮತ್ತೇನೂ ಅಲ್ಲ. ಸ್ಥಳಿಯ ಭಾಷೆಗಳು ಹೋದರೆ ಎಲ್ಲಿದೆ ವೈವಿದ್ಯತೆ. ವೈವಿದ್ಯತೆ ಇಲ್ಲದಿದ್ದರೆ ಎಲ್ಲಿದೆ ಏಕತೆ. ನೂರಾರು ಭಾಷೆಗಳಿರುವ ಸಾವಿರಾರು ಸಂಸ್ಕೃತಿಗಳಿರುವ ವೈವಿದ್ಯತೆಯನ್ನೇ ಮೈಗೂಡಿಸಿಕೊಂಡಿರುವ ಬಾರತದಲ್ಲಿ ಒಂದು ದರ್ಮ, ಒಂದು ಭಾಷೆಯಿಂದ ಏಕತೆಯನ್ನು ಸಾದಿಸಬಹುದೇ.?





ನಿಲುಮೆ,
ಬನವಾಸಿ ಬಳಗದ ಈ ಗೆಳೆಯರ ಚಿಂತನೆಗಳು ಸರಿಯೋ ತಪ್ಪೋ ಬೇರೆಯೇ ವಿಷಯ. ಆದರೆ ವಾದ ಮಾಡುವಲ್ಲಿ ಎದುರಾಳಿಗಳ ಬಗ್ಗೆ ಇವರು ತೋರಿರುವ ಸೌಜನ್ಯಯುತ ಭಾಷೆ ಮೆಚ್ಚುಗೆಗೆ ಅರ್ಹವಾಗಿದೆ. ಇಂತಹ ಬಳಗದ ಗೆಳೆಯರ ಕಾಳಜಿಯನ್ನೂ ಅವಹೇಳನ ಮಾಡದೆ ಸರಿಯಾಗಿ ವಿಷಯಕ್ಕೆ ಮಾತ್ರಾ ಅಂಟಿಕೊಂಡು ನಿಲುಮೆಯ ಓದುಗರು ವಾದ ಮಂಡಿಸಿದರೆ ಚೆನ್ನ! ಆಗ ನಿಲುಮೆಯೂ ಅರ್ಥಪೂರ್ಣವಾದ ವೇದಿಕೆಯಾಗಬಹುದು! Hats off to balaga team!!
ಹೌದು ಅನಿಲ್, ನೀವು ಹೇಳಿದಂತೆ ನಿಲುಮೆ ಬಳಗ ಅಭಿನಂದನಾರ್ಹ ವಿಷಯಗಳನ್ನು ಎಲ್ಲೆಡೆ ಹರಡುತ್ತಿದ್ದೆ. ನಿಲುಮೆಯಲ್ಲಿ ಪ್ರಕಟಿಸುವ ಲೇಖನಗಳು ಯಾವುದೇ ವಿಚಾರಗಳಿಗೆ ಅಂಟಿಕೊಳ್ಳದೆ, ಅದರ ಅಡಿಬರಹದಂತೆ ಎಲ್ಲ ತತ್ವದ ಎಲ್ಲೆಯನ್ನು ಮೀರಿ ನಿಂತಿದೆ, ಪ್ರತಿಕ್ರಿಯೆಗಳನ್ನು ಹಾಕುವವರು ಅವರವರ ಆಲೋಚನೆ ಹಾಗೂ ಅನಿಸಿಕೆಗಳನ್ನು ಪ್ರಕಟಿಸುತ್ತಾರೆಯೇ ಹೊರತು ಅದಕ್ಕೆ ನಿಲುಮೆ ಯಾವುದೇ ಅವುಗಳಾವುದು ನಿಲುಮೆಯ ಅಭಿಪ್ರಾಯವೂ ಅಲ್ಲ ಎಂಬುದು ಮೆಚ್ಚತಕ್ಕದ್ದೇ. ನಿಜಕ್ಕೂ ನೀವು ಹೇಳಿದಂತೆ ನಿಲುಮೆ ಬಳಗಕ್ಕೆ Hats off
“ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ.”
“ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ.”
ಕನ್ನಡದಲ್ಲಿ ದೊರೆತಿರುವ ಮೊದಲ ಕಬ್ಬ ಕವಿರಾಜಮಾರ‍್ಗ ಒಂದು ಜೈನ ಕಬ್ಬ. ಅದರಾಗೆ ಜೈನ ಮತದ ಹುರುಳುಗಳು ಸಾಕಶ್ಟಿವೆ. ಮಾದರಿಯಾಗಿ ವೈದಿಕ ಸಂಸ್ಕೃತಿಯಲ್ಲಿ ಅರಿಷಡ್ವರ‍್ಗಗಳೆಂಬುದನ್ನು, ಕವಿರಾಜಮಾರ‍್ಗವು ಜೈನ ಮತದಂತೆ ಸಪ್ತರಿಪುವರ‍್ಗ ಎಂದು ಹೇಳುವುದು. ಜೈನ ಮತದ ಭಾಷೆ ಪಾಕೃತ ಸಂಸ್ಕೃತವಲ್ಗ. ಅದೂ ಅಲ್ಲದೇ ಕವಿರಾಜಮಾರ‍್ಗದಲ್ಲೇ ಸಂಸ್ಕೃತ ಕನ್ನಡಕ್ಕೆ ಬರೆಸಿದಿದರೆ ಕನ್ನಡದ ಸಿಹಿತನ ಕಡಮೆಯಾಗಿ ಹರಿದ ಡೊಳ್ಲು ನುಡಿಸಿದಂತೆ ಮಾತು ಕರ‍್ಕಶವಾಗುವುದು ಎಂದು ಹೇಳಿದೆ.
ಕವಿರಾಜಮಾರ‍್ಗಕಾರನು ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, ಬೆದಂಡೆ, ಚೆತ್ತಾಣ, ಹಾಗೂ ಒನಕೆವಾಡುಗಳು ಮುಖ್ಯವಾದುವು.
ಕನ್ನಡ ಸಾಹಿತ್ಯದಲ್ಲಿ ಹಳಗನ್ನಡದಲ್ಲಿ ಜೈನ ಕವಿಗಳು ಪ್ರಧಾನ. ಪಂಪ, ರನ್ನ ಮುಂತಾದವರು ಜೈನರು. ನಡುಗನ್ನಡದಲ್ಲಿ ಕುಮಾರವ್ಯಾಸರಂತಹವರು ಇದ್ದಿದ್ದರೂ, ಆ ಕಾಲಘಟ್ಟದಲ್ಲಿ ಕನ್ನಡನಾಡಿನಲ್ಲಿ ಪ್ರಮುಖವಾಗಿದ್ದು ವಚನ ಚಳುವಳಿ ಹಾಗು ಅದರಿಂದ ಹೊರಬಂದ ಅಚ್ಚಕನ್ನಡದ, ಆಡುಮಾತಿಗೆ ಹತ್ತಿರವಾದ, ಹಾಗು ಕನ್ನಡ ನೆಲದಲ್ಲೇ ಹುಟ್ಟಿದ ಹೊಸ ಆಧ್ಯಾತ್ಮ ಹಾಗು ಧರ‍್ಮದ ಹೊಸ ವ್ಯಾಖ್ಯಾನ ವಚನಗಳು.
ಮುಂದೆ ದಾಸ ಸಾಹಿತ್ಯವೂ ಕೂಡ ಕನ್ನಡ ನೆಲದಲ್ಲೇ ಹುಟ್ಟಿದ ಕರ‍್ನಾಟಕ ಶಾಸ್ತ್ತೀಯ ಸಂಗೀತಕ್ಕೆ ತಕ್ಕಂತೆ ಬೆಳೆಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ಭರತ ನಾಟ್ಯವನ್ನು ಅಧ್ಯಯನ ಮಾಡಿದ ಹಲವರು ಅವುಗಳು ದಕ್ಷಿಣಭಾರತದ ದ್ರಾವಿಡ-ಕರ‍್ನಾಟ-ಆಂಧ್ರ ಮುಂತಾದ ನಾಡುಗಳ ಜನಪದದ ಹಾಡು ಹಾಕು ಕುಣಿತಗಳ ಅಂಶಗಳಿಗೆ ಶಾಸ್ತ್ರೀಯತೆಯನ್ನು ಕೊಟ್ಟ ಕಾರ‍್ಯಗಳೇ.
ಇನ್ನು ಹೊಸಗನ್ನಡದ ನವ್ಯ, ಬಂಡಾಯ ಸಾಹಿತ್ಯವೂ ಪಾಶ್ಚಿಮಾತ್ಯ ಸಾಹಿತ್ಯ ಹಾಗು ಆದರ್ಶಗಳ ಪ್ರಭಾವಕ್ಕೆ ಒಳಪಟ್ಟಿದೆ.
ಹೀಗೆ ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಂಸ್ಕೃತ ಹಾಗು ವೈದಿಕ ಸಂಪ್ರದಾಯಗಳ ಪ್ರಭಾವ ಇದ್ದರೂ ಪ್ರಧಾನವಲ್ಲ. ಇನ್ನು ಸಂಸ್ಕೃತಪದಗಳ ಬಳಕೆ ಹೆಚ್ಚಿರುವುದು ಇತ್ತೀಚಿನ ದಶಕಗಳಲ್ಲಿ. ಮೈಸೂರು ಅರಸರ ಕಾಲ ಶಾಸನಗಳಲ್ಲಿ ಹೆಚ್ಚು ಕನ್ನಡವೇ ಇದ್ದು, ಸಂಸ್ಕೃತಪದಗಳು ಈಗಿನ ಬರಹ ಹಾಗು ಸರಕಾರಿ ಕನ್ನಡಕ್ಕಿಂತ ಕಡಮೆಯೇ ಇದೆ.