ಪ್ರಾರ್ಥನೆ…
-ಬದರಿನಾಥ ಪಲವಳ್ಳಿ
ನನ್ನ ಹೆಣ ಭಾರಕ್ಕೆ
ಹೊತ್ತವರು ಬಳಲ ಬಾರದು
ಪ್ರಭುವೇ!
ದೇಹ ಉಬ್ಬಿಸಬೇಡ ಇನ್ನೂ…
ನಿತ್ಯತೃಪ್ತನು ನೀನು
ನಿತ್ಯಯಾತ್ರಿಕನಿವನು
ಬೇಡುವುದೇ ಸುಲಭ ವಿದ್ಯೆ!
ನಿನ್ನ ತಂತಿಯೋ ನೇರ
ತೂರಾಡದಂತೆ ಕಾಪಾಡು
ಸುಡುವ ಕಿಡಿಯಾಗಿಸದೇ
ಬೆಳಕ ಹಂಚಲಿ ಮನಸು
ಗೂಡಾದರೂ ಬೆಳಗಲಿ ಹಣತೆ,
ಉಪ್ಪರಿಗೆ ಚಪಲಕೆ ಚಿತ್ತ
ಭ್ರಷ್ಟವಾಗದಂತೆ ಕಾಪಾಡು
ಹಾಲುಗೆರೆಯೋ ಭಾಗ್ಯವಿಲ್ಲ
ವಿಷವ ಹಿಂಡುವ ಬಾಯಿ ಬೇಡ
ನಗುವನೇ ಅರಳಿಸಲಿ ಮಾತು,
ಮುಳ್ಳಿವನು ಎಂದ್ಯಾರೋ ಕುದ್ದು
ಮುರಿಯದಂತೆ ಕಾಪಾಡು
ಖಾಯಿಲೆ ಬಿದ್ದಿವನು ಮಲಗಿ
ಕೆಮ್ಮಿ ಕಕ್ಕಿ ಕೆರೆದು ನರಳೋ
ಇಂಚಿಂಚು ಸಾವ ತರಬೇಡ,
ಆಗಿದ್ದ ಈಗಿಲ್ಲ – ಎಂಬ ಸಾವ
ಕೊಟ್ಟಾದರೂ ಕಾಪಾಡು.
* * * * * * *
ಚಿತ್ರಕೃಪೆ : expressthesensual.com





ಸ್ವಾಭಿಮಾನಿ ಬದುಕ ಕಟ್ಟಿಕೊಳ್ಳಬಯಸುವವನ ’ಪ್ರಾರ್ಥನೆ’ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿದೆ ಬದರಿ ಸರ್.. ಮೊದಲ ಸಾಲುಗಳನ್ನು ನೋಡಿ ನಗೆಯುಕ್ಕಿತ್ತು, ನಂತರವೇ ಒಂದು ವಿಭಿನ್ನವಾದ ತಿರುವು ಕೊಟ್ಟಿರಿ ಕವಿತೆಯ ಹರಿವಿಗೆ.. ಪ್ರಾರ್ಥನೆಯಲ್ಲಿ ತನಗಾಗೊಂದಷ್ಟು, ಅರ್ಪಣೆ ಒಂದಷ್ಟು, ಮಾನವತೆ ಒಂದಷ್ಟು, ಸಹೃದಯತೆ ಒಂದಷ್ಟು, ಸ್ವಾಭಿಮಾನವೊಂದಷ್ಟು, ಭಾವಗಳ ಉತ್ಕೃಷ್ಟತೆ ಒಂದಷ್ಟು ಸೇರಿ ತುಂಬಾ ಚೆನ್ನಾಗಿ ನಿಂತಿದೆ ಪ್ರಾರ್ಥನೆಯ ಪ್ರತಿಮೆ.. ತುಂಬಾ ಹಿಡಿಸಿತು ಕವಿತೆ..:)
ಖಾಯಿಲೆ ಬಿದ್ದಿವನು ಮಲಗಿ
ಕೆಮ್ಮಿ ಕಕ್ಕಿ ಕೆರೆದು ನರಳೋ
ಇಂಚಿಂಚು ಸಾವ ತರಬೇಡ,
ಆಗಿದ್ದ ಈಗಿಲ್ಲ – ಎಂಬ ಸಾವ
ಕೊಟ್ಟಾದರೂ ಕಾಪಾಡು
ಈ ಸಾಲುಗಳ ಮೋಡಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ..