ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 7, 2012

8

ಆ ವಿಧಿಯಾಟವ ಬಲ್ಲವರಾರು ?

‍ನಿಲುಮೆ ಮೂಲಕ

 –  ಪ್ರಸಾದ್.ಡಿ.ವಿ.

ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.

ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ತನ್ನ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, “ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?” ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, “ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ” ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.

ಹೀಗೇ ನೆನ್ನೆ ಅಪ್ಪ ಮತ್ತು ಅವ್ವನಿಗೆ ಊಟ ತೆಗೆದುಕೊಂಡು ಹೋಗು ಎಂದು ಹೇಳಿ ಅಮ್ಮ ನನ್ನನ್ನು ಆಸ್ಪತ್ರೆಗೆ ಕಳುಹಿಸಿದರು. ನನಗೂ ಅಜ್ಜನನ್ನು ನೋಡಿ ಎರಡು ದಿನಗಳಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ತಿಳಿಯಬಹುದೆಂದು ನಾನೇ ಹೋದೆ.

ನನ್ನಜ್ಜ ಇರುವ ವಾರ್ಡಿನಲ್ಲಿಯೆ ಇನ್ನೊಬ್ಬ ವಯಸ್ಸಾದ ವ್ಯಕ್ತಿ ದಾಖಲಾಗಿದ್ದರು. ವಯಸ್ಸು ೭೫ ದಾಟಿರಬಹುದು. ಆತನಿಗೂ ವಯಸ್ಸಾದ ಕಾರಣ ದೇಹದ ಅಂಗಗಗಳ ಸಾಮರ್ಥ್ಯ ಕ್ಷೀಣಿಸಿ ಒದ್ದಾಡುತ್ತಿದ್ದರು. ಆದರೆ ನನ್ನ ಅಜ್ಜನಿಗಿಂತ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಅವರಾಗಿಯೆ ತಿಂಡಿ ತಿನ್ನುತ್ತಿದ್ದರು. ಆರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಈ ವಯಸ್ಸಾದವರಿಗೆ ಮಾತು ಜಾಸ್ತಿ. ಅನುಭವ ಪಡೆದಿದ್ದೇವೆಂದು ಎಲ್ಲರಿಗೂ ಧಾರಾಳವಾಗಿ ಧಾರೆ ಎರೆಯುತ್ತಾರೆ. ಆ ವಿಷಯದಲ್ಲಿ ಆ ತಾತನನ್ನು ಅವರ ಮಗ ಬಯ್ಯುವುದೂ ಇತ್ತು. ಅಂದು ಅವರ ಹೆಂಡತಿಯ ಸಹಾಯ ಪಡೆದು ಮೇಲೆದ್ದ ಆ ತಾತ ನೈಸರ್ಗಿಕ ಕರ್ಮಗಳನ್ನು ಮುಗಿಸಲು ಹೋದರು. ಎಲ್ಲವನ್ನೂ ಮುಗಿಸಿ ಹೊರಬಂದವರು ಕೈತೊಳೆದುಕೊಳ್ಳಲು ವಾಶ್ ಬೇಸಿನ್ ಹತ್ತಿರ ನಿಂತಿರಬಹುದೆಂದು ಕಾಣುತ್ತದೆ. ತಕ್ಷಣವೇ ಕುಸಿದು ಬಿದ್ದರು. ನಾವು ನಮ್ಮ ತಾತನ ಬಳಿಯಿದ್ದುದ್ದರಿಂದ ಅದರ ಅರಿವೇ ನಮಗಿರಲಿಲ್ಲ. ಆ ಅಜ್ಜಿ ’ಯಾಕೋ ನಮ್ಮನೆಯವರು ಕುಸಿದು ಕುಳಿತಿದ್ದಾರೆ ಅವರನ್ನು ತಂದು ಮಲಗಿಸಲು ಸಹಕರಿಸಿ’ ಎಂದು ನನ್ನನ್ನು ಮತ್ತು ನಮ್ಮ ಮಾವನನ್ನು ಕರೆದರು. ನಾವು ಮತ್ತಿಬ್ಬರು ವಾರ್ಡ ಬಾಯ್ಸ್ ಸಹಾಯ ಪಡೆದು ಆ ಅಜ್ಜನನ್ನು ತಂದು ಅವರ ಹಾಸಿಗೆಯ ಮೇಲೆ ಮಲಗಿಸಿದೆವು. ಆ ಅಜ್ಜ ತುಂಬಾ ನಿತ್ರಾಣಗೊಂಡಂತೆ ಕಾಣುತ್ತಿದ್ದರು. ನಾವು ಸಾವಧಾನವಾಗಿ ಅವರಿಗೆ ಗಾಳಿ ಹಾಕಿ ಡಾಕ್ಟರ್ ಗೆ ವಿಷಯ ಮುಟ್ಟಿಸಿದೆವು. ಅಯಪ್ಪನ ಸ್ಥಿತಿ ನೋಡಿದ ನಮ್ಮ ಅಜ್ಜಿ ’ಹೋಗಿ ಅವರ ಬಾಯಿಗೆ ನಿಮ್ಮ ಕೈಯಿಂದಲೆ ನೀರು ಬಿಡಿ’ ಎಂದು ಅವರ ಹೆಂಡತಿಗೆ ಹೇಳಿದರು. ನಾನು ಗರಬಡಿದವನಂತೆ ನಿಂತಿದ್ದೆ. ಎರಡು ಗುಟುಕು ನೀರು ಗುಟುಕಿಸಿದ ಆ ಜೀವ ದೇಹವನ್ನು ತೊರೆದಿತ್ತು. ಇದೇ ಮೊದಲು ನಾನು ಒಬ್ಬರು ಸಾಯುವುದನ್ನು ಕಣ್ಣಾರೆ ಕಂಡಿದ್ದು. ಅವರ ಕುಟುಂಬದ ಆಕ್ರಂದನ ನನ್ನ ಮನಸ್ಸನ್ನು ಕಲಕಿತು. ಅವರು ಆ ತಾತನ ಶವವನ್ನು ಆಸ್ಪತ್ರೆಯಿಂದ ಸಾಗಿಸುತ್ತಿದ್ದಂತೆ ನಮ್ಮ ಮನಸ್ಸು ತಡೆಯದೆ ನಮ್ಮ ತಾತನನ್ನು ಮತ್ತೊಂದು ವಾರ್ಡಿಗೆ ವರ್ಗಾಹಿಸಿ ಬಿಟ್ಟೆವು.

ಆ ದೃಶ್ಯ ಕಂಡ ನನ್ನ ಮನಸ್ಸು ಜರ್ಜರಿತಗೊಂಡಿತ್ತು. ಆ ಸಾವು ನನ್ನ ವೈಚಾರಿಕ ಮತ್ತು ವಾಸ್ತವದ ನೆಲೆಗಟ್ಟುಗಳನ್ನು ಅಲುಗಾಡಿಸುತ್ತಿತ್ತು. ’ಅಹಂ ಬ್ರಹ್ಮಾಸ್ಮಿ’ ಹಾಗೇ ಹೀಗೆ ಎಂಬ ಎಷ್ಟೆಲ್ಲಾ ಗಟ್ಟಿ ತಟಸ್ಥ ಭಾವಗಳಿದ್ದ ನಾನೇ ಇಷ್ಟು ಸೂಕ್ಷ್ಮವಾಗಿಬಿಟ್ಟೆನೆ ಎಂದೆನಿಸುತ್ತಿತ್ತು. ಸಾವು ಯಾವಾಗ ಬಂದರೂ ಅದು ಸಾವೇ. ವಯಸ್ಸಾದವರು ಸತ್ತರೆಂದ ಮಾತ್ರಕ್ಕೆ ಅದರಿಂದಾಗುವ ನೋವು ಮತ್ತು ದುಃಖಗಳೇನೂ ಕಡಿಮೆಯಲ್ಲ. ಒಂದು ಸಾವು ಒಂದು ತಲೆಮಾರಿನ ಕೊಂಡಿಯನ್ನು ಕಡಿದಂತೆಯೇ ಸರಿ. ಆ ಜನರೇಷನ್ ಗ್ಯಾಪ್ ನಮ್ಮನ್ನು ಕಾಡುತ್ತಲೇ ಇರುತ್ತದೆ. ’ಈ ಮನುಷ್ಯನ ಜೀವನ ಸಾವು ನೋವುಗಳಿಂದ ಮುಕ್ತವಾಗಿಬಿಡಲಿ ದೇವರೆ’ ಎಂದು ಮೊರೆಯಿಟ್ಟರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಎಲ್ಲಾ ವಿಷಯಗಳನ್ನು ನನ್ನಮ್ಮನ ಬಳಿ ಹೇಳಿ ಅವಳ ಮಡಿಲಲ್ಲಿ ಮುದುಡಿ ಮಲಗಿದೆ. ಅಮ್ಮ ಎಂದಳು “ಯಾಕೋ ಅಪ್ಪೀ ಚಿಕ್ಕ ಮಗುವಾಗಿಬಿಟ್ಟೆ, ನಮಗೆಲ್ಲಾ ಧೈರ್ಯ ತುಂಬುತ್ತಿದ್ದವನು ನೀನು, ಕಮ್ ಆನ್ ಚಿಯರ್ ಅಪ್ ಮೈ ಡಿಯರ್” ಎಂದು ಸಾಂತ್ವಾನ ಹೇಳಿದ ಮೇಲೆಯೆ ನಾನು ವಾಸ್ತವಕ್ಕೆ ಬಂದದ್ದು.

ಯಾವುದೇ ಸಂಬಂಧವಿಲ್ಲದ, ವಯಸ್ಸಾಗಿ ಸತ್ತ ಯಾರೋ ಒಬ್ಬರ ಸಾವೇ ಇಷ್ಟು ನೋವನ್ನು ಕೊಡುವಾಗ ಅಪಘಾತದಲ್ಲಿಯೊ, ಆತ್ಮಹತ್ಯೆ ಮಾಡಿಕೊಂಡೊ ಇಲ್ಲವೆ ಕೊಲೆಯಾಗುವ ಸಾವುಗಳು ಎಷ್ಟು ನೋವನ್ನು ಕೊಡಬಹುದು?? ಪ್ರಿಯ ಸ್ನೇಹಿತರೆ ನಿಮಗೇನು ನೀವು ಹೋಗಿಬಿಡುತ್ತೀರಿ ಆದರೆ ನಿಮ್ಮ ಸಾವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕೊಡುವ ನೋವು ಸಹಿಸಲಸಾಧ್ಯವಾದುದು. ಆದ್ದರಿಂದ ದುಡುಕುವ ಮುನ್ನ, ವಾಹನ ಚಲಾಯಿಸುವಾಗ ಒಮ್ಮೆ ಯೋಚಿಸಿ. ಜೀವನ ಅಮೂಲ್ಯವಾದುದು, ಅದನ್ನು ಮಾತ್ರ ಮರೆಯಬೇಡಿ.

* * * * * * *

ಚಿತ್ರಕೃಪೆ : spraguephoto.com

8 ಟಿಪ್ಪಣಿಗಳು Post a comment
  1. Maruthigk
    ಫೆಬ್ರ 7 2012

    Really heart touching

    ಉತ್ತರ
  2. ಫೆಬ್ರ 7 2012

    dada office alliddare kannada baryakkagta illa 😦 😦 😦 kannu odde aytu, nam taatana nenapu aytu, avara kade ghaligeyalli devaramaneya ganga sthaliyannu hodedu neeru kudisidru namappa 😦 😦 love u taata, nimma baravanige tumba effective aagide

    ಉತ್ತರ
  3. ಫೆಬ್ರ 7 2012

    ಈ ಸಾವು ಎಂಬುದು ತೀರಾ ದುಸ್ತರವಾದ ಸಂಗತಿ.. ಒಬ್ಬ ಮನುಷ್ಯನ ಭಾವನಗಳನ್ನು ತಳದಿಂದಿಡಿದು ಹಿಪ್ಪೆ ಮಾಡಿಬಿಡುತ್ತದೆ.. ಅದು ನಮ್ಮ ಆತ್ಮೀಯರ ಸಾವೇ ಇರಬೇಕೆಂದು ಏನೂ ಇಲ್ಲ, ಆ ಸಾವು ಎಂಬುದೇ ಮನುಷ್ಯನನ್ನು ಅಧೀರನನ್ನಾಗಿ ಮಾಡಿಬಿಡುತ್ತದೆ.. ಕಣ್ಣಾಲಿಗಳು ನೀರಾಡಿ ಮನಸ್ಸು ಮುದುಡಿಬಿಡುತ್ತದೆ.. 😦
    ’ಹೋದೋರೆಲ್ಲಾ ಒಳ್ಳೆಯವರು,
    ನಮ್ಮ ಹಿರಿಯರು..’
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮತ್ತು ಸೌರವ್, ನನ್ನ ಬರವಣಿಗೆಯನ್ನು ಅಭಿನಂದಿಸಿದ್ದೀರಿ ನಿಮಗೆ ವಂದನೆಗಳು..

    ಉತ್ತರ
  4. ದೇಶ ಮಿತ್ರ
    ಫೆಬ್ರ 7 2012

    ಒಳ್ಳೆ ಬರಹ ಪ್ರಸಾದ್. ನಿಮ್ಮ ಲೇಖನಗಳು ಹೆಚ್ಚೆಚ್ಚು ಬರಲಿ.
    ದೇಶ ಮಿತ್ರ

    ಉತ್ತರ
  5. ಬಸವಯ್ಯ
    ಫೆಬ್ರ 7 2012

    ಪ್ರಸಾದ, ನಿಮ್ಮ ಭಾವನೆಯನ್ನು, ತುಮುಲಾಟವನ್ನು ಶಬ್ದಗಳಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಿರಿ. ಹೌದು, ಸಾವು ನಮ್ಮೆಲ್ಲರನ್ನು ಅಲುಗಾಡಿಸುತ್ತದೆ,ಅಂತರಂಗ ಶೋಧನೆಗೆ ಪ್ರೇರಣೆ ಕೊಡುತ್ತದೆ.

    ಉತ್ತರ
  6. ಫೆಬ್ರ 8 2012

    ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ಸಹೃದಯಿ ಸ್ನೇಹಿತರೆ.. ಕಂಡಿತಾ ಹೆಚ್ಚೆಚ್ಚು ಲೇಖನಗಳನ್ನು ಕೊಡಲು ಪ್ರಯತ್ನಿಸುತ್ತೇನೆ, ನನ್ನ ಬರವಣಿಗೆಗೆ ಮತ್ತು ಶೈಲಿಗೆ ಸಿಗುತ್ತಿರುವ ಒಳ್ಳೆಯ ಪ್ರತಿಕ್ರಿಯೆಗಳಿಂದ ತುಂಬಾ ಉತ್ಸುಕನಾಗಿದ್ದೇನೆ.. ನಿಲುಮೆ ತಂಡಕ್ಕೆ ನನ್ನ ವಂದನೆಗಳು..

    ಉತ್ತರ
  7. ಫೆಬ್ರ 8 2012

    ಬರಹದ ಶೈಲಿ ಮಸ್ತ್…! ಸಾವಿಗ್ಯಾರ ಹಂಗು….
    ದಿಂಬದಲ್ಲಿರುವ ಜೀವ ಕಂಬ ಸೂತ್ರ ಬೊಂಬೆಯಂತೆ
    ಎಂದಿಗಾದರೊಂದು ದಿನ ಸಾವು ತಪ್ಪದು… ಅಂತ ದಾಸರು ಸುಮ್ಮನೇ ಹಾಡಿದ್ದಾರೆಯೆ

    ಉತ್ತರ
  8. ಫೆಬ್ರ 9 2012

    ಹೌದು ರಾಕೇಶ್ ’ಆ ದೇವನಾಡಿಸುವ ದೊಂಬರಾಟದಲ್ಲಿ ಕೀಲು ಗೊಂಬೆಗಳು ನಾವು’ ಇನ್ನು ಸಾವೇನು, ಹುಟ್ಟೇನು? ಅವನು ನಡೆಸಿದಂತೆ ಎಲ್ಲವೂ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments