–ನಟರಾಜು ಎಸ್ ಎಂ
ಹಳ್ಳಿಯ ಉದಯೋನ್ಮುಖ ಗಾಯಕನೊಬ್ಬ ತನ್ನ ಕರ್ಕಷ ಕಂಠದಿಂದ ಹಾಡಲು ಶುರು ಮಾಡಿದರೆ ಅವನ ಊರಿನವರು ಅವನನ್ನು “ಮಹಾರಾಜರ ಅರಮನೆ ಮುಂದೆ ಹೋಗಿ ಹಾಡು ನಿನಗೆ ಬಹುಮಾನ ಕೊಡುತ್ತಾರೆ” ಅಂತ ಆ ಗಾಯಕನಿಗೆ ಹೇಳಿಕೊಟ್ಟು ಅವನ ಹಿಂದೆ ಮುಸಿಮುಸಿ ನಗುತ್ತಾರೆ. ಪಾಪ ಅವರ ಮಾತಿನ ಅರ್ಥ ತಿಳಿಯದ ಆ ಗಾಯಕ ಆ ಜನಗಳ ಮಾತನ್ನು ಹೊಗಳಿಕೆ ಎಂದು ತಿಳಿದು ಅತಿ ಖುಷಿಯಿಂದ ಒಂದು ಮುಂಜಾನೆ ಎದ್ದವನೇ ರಾಜರ ಅರಮನೆಯ ಅನತಿ ದೂರದಲಿ ಕುಳಿತು ತನ್ನ ಗಾಯನ ಶುರು ಮಾಡುತ್ತಾನೆ. ಆ ಗಾಯಕನ ಕರ್ಕಷ ದನಿಯಿಂದ ನಿದ್ರಾಭಂಗವಾದ ರಾಜ ತನ್ನ ಭಟರನ್ನು ಕರೆದು ಆ ಗಾಯಕನನ್ನು ಕತ್ತೆಯ ಮೇಲೆ ಕುಳ್ಳರಿಸಿ ಊರಿನಿಂದ ಬಹಿಸ್ಕಾರ ಮಾಡಿಸಿಬಿಡುತ್ತಾನೆ. ಹಾಗೆಯೆ ತನ್ನ ಸಂಗೀತದ ಹುಚ್ಚಿಗೆ ತನ್ನ ಊರಿನವರಿಂದ ಬಹಿಷ್ಕಾರಗೊಂಡ ಮತ್ತೊಬ್ಬ ಡೊಳ್ಳಿನವನು ಕತ್ತೆಯ ಮೇಲೆ ಸವಾರಿ ಮಾಡಿ ಬಂದ ಗಾಯಕನೊಡನೆ ಭೇಟಿಯಾಗುತ್ತಾನೆ. ಆ ಇಬ್ಬರು ಕಾಡಿನ ಒಂದು ಜಾಗದಲ್ಲಿ ಕುಳಿತು ಕಷ್ಟ ಸುಖ ಮಾತನಾಡ್ತ ಇರುವಾಗ ಅವರ ಮುಂದೆ ಹುಲಿಯೊಂದು ಪ್ರತ್ಯಕ್ಷವಾಗುತ್ತದೆ. ಭಯಗೊಂಡ ಇಬ್ಬರು ಕಲ್ಲುಗಂಭದಂತೆ ಅಲ್ಲಾಡದೆ ನಿಂತು ಆ ಹುಲಿಯಿಂದ ಹೇಗೋ ಪಾರಾದ ಮರು ಕ್ಷಣ ಭೂತಗಳ ರಾಜ ಒಂದು ವಿಚಿತ್ರ ಪ್ರಪಂಚವನ್ನೆ ಅವರ ಮುಂದೆ ಸೃಷ್ಠಿಸಿಬಿಡುತ್ತಾನೆ. ಭೂತಗಳೆಂದರೆ ಬಿಳಿ ಬಟ್ಟೆ ತೊಟ್ಟ, ಉದ್ದ ಜಡೆಯ, ಕಾಲುಗಳು ಉಲ್ಟಾ ಇರುವ ಆಕೃತಿಗಳು ಅನ್ನೋ ನಮ್ಮ ಭಾವನೆಗಳಿಗೆ ನಿಲುಕದಂತ ಭೂತಗಳನ್ನು ಬರಿ ನೆರಳು ಬೆಳಕಿನ ಆಟದಲ್ಲಿ, ವಿಚಿತ್ರ ವೇಷ ಭೂಷಣಗಳಲ್ಲಿ, ಬರೀ ಗೆರೆಗಳಲ್ಲಿ ಸೃಷ್ಠಿಸಿಬಿಡಬಲ್ಲ ಚಾಣುಕ್ಯತನ ಬಹುಶಃ ಶ್ರೇಷ್ಠ ಕಲಾವಿದರಿಗೆ ಮಾತ್ರ ಸಾಧ್ಯವೇನೋ!
ಅಂತಹ ಭೂತ ರಾಜನಿಂದ ಆ ಹಳ್ಳಿಯ ಇಬ್ಬರು ಯುವಕರು ತಮ್ಮ ಸಂಗೀತದಿಂದ ಜನರನ್ನು ಮಂತ್ರಮುಗ್ದರನ್ನಾಗಿ ಮಾಡುವ, ಇಚ್ಛೆ ಬಂದಾಗ ಊಟ ಮಾಡುವ ಹಾಗು ಬೇಕೆಂದ ಕಡೆಗೆ ಹೋಗುವ ಮೂರು ವರಗಳನ್ನು ಪಡೆಯುತ್ತಾರೆ. ಖುಷಿಗೆ ಮನದುಂಬಿ ಒಬ್ಬ ಹಾಡಿದ ಹಾಡಿಗೆ ಮತ್ತೊಬ್ಬ ಡೋಲು ಬಡಿಯುತ್ತಾನೆ. ಹಸಿವಾದಾಗ ಕಣ್ಮುಚ್ಚಿ ಬೇಡಿದರೆ ಸಾಕು ಮೃಷ್ಟಾನ್ನ ಬೋಜನವೇ ಎದುರಾಗಿಬಿಡುತ್ತದೆ. ಭೂತರಾಜ ಕೊಟ್ಟ ಪಾದರಕ್ಷೆಗಳನ್ನು ತೊಟ್ಟು ಹೋಗಬೇಕಾದ ಸ್ಥಳದ ಹೆಸರು ಹೇಳಿ ಇಬ್ಬರು ಕೈ ಸೇರಿಸಿ ಚಪ್ಪಾಳೆ ಹೊಡಿದರೆ ಸೇರಬೇಕಾದ ಸ್ಢಳ ಸೇರಿಬಿಡುವ ಆ ಇಬ್ಬರು ಬೆಂಗಾಳಿ ಜನರಲ್ಲಿ ಗೂಪಿ ಹಾಗು ಬಾಘ ಅನ್ನೋ ಹೆಸರಿನಲ್ಲಿ ಅಜರಾಮರವಾಗಿ ನಿಲ್ಲುವಂತೆ ಮಾಡಿದ್ದು ಭಾರತದ ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇಯವರು. ಸತ್ಯಜಿತ್ ರೇ ಅಂದರೆ ಬರೀ ಪಥೇರ್ ಪಾಂಚಾಲಿ ಅಂದುಕೊಂಡಿದ್ದ ನಾನು ಬೆಂಗಾಳಿ ಸಂಸ್ಕೃತಿಯನ್ನು ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಶುರು ಮಾಡಿದ್ದೇ ನಾನು ಕೊಲ್ಕತ್ತಾಕ್ಕೆ ಬಂದ ಮೇಲೆಯೆ.
ನನಗ್ಯಾಕೊ ಸಿನಿಮಾ ಎಂದರೆ ವಿಚಿತ್ರ ಹುಚ್ಚು. ತುಂಬಾ ಚಿಕ್ಕ ಹುಡುಗನಾಗಿದ್ದಾಗ ನಮ್ಮೂರಿನಲ್ಲಿ ನನಗಿಂತ ನಾಲ್ಕೈದು ವರ್ಷ ದೊಡ್ಡವನಾಗಿದ್ದ ಒಬ್ಬ ಅಣ್ಣನಂತವನು ಅವನ ನೆಚ್ಚಿನ ಹೀರೋ ನಟಿಸಿರುವ ಸಿನಿಮಾದ ಕತೆಯನ್ನು ಸಂಭಾಷಣೆ ಸಹಿತ ನನಗೆ ಹೇಳುವಾಗ ಯಾಕೋ ಸಿನಿಮಾದ ಬಗ್ಗೆ ವಿಚಿತ್ರ ಕುತೂಹಲ ನನ್ನಲ್ಲಿ ಮೂಡುತ್ತಿತ್ತು. ಇಡೀ ಊರಿನಲ್ಲಿ ಆ ದಿನಗಳಲ್ಲಿ ಇದ್ದ ಒಂದೇ ಒಂದು ಕಲರ್ ಟಿವಿಯಲ್ಲಿ ಭಾನುವಾರ ಬರುತ್ತಿದ್ದ ಮಹಾಭಾರತದ ಆ ಹಿಂದಿಯ ದಾರಾವಾಹಿ ನೋಡಲು ಇಡೀ ಊರಿನ ಅನೇಕ ಜನ ಆ ಮನೆಯಲ್ಲಿ ಜಮಾಯಿಸುತ್ತಿದ್ದರು. ಹಿತ್ತಿಲಿನ ಬಾಗಿಲಿನ ಬಳಿ ಇದ್ದ ಆ ಪುಟ್ಟ ಜಾಗದಲ್ಲಿ ದೊಡ್ಡವರ ಮಧ್ಯೆ ಹೇಗೋ ಜಾಗ ಪಡೆದು ಅಧ್ಬತವಾದ ಆ ದಾರಾವಾಹಿಯನ್ನು ನೋಡ್ತ ಖುಷಿ ಪಡ್ತ ಇದ್ದೆ.
ಕ್ರಮೇಣ ದುಡ್ಡಿರುವವರ ಮನೆಗಳ ಮೇಲೆ ದೊಡ್ಡ ದೊಡ್ಡ ಆಂಟೇನಗಳು ಕಾಣಿಸತೊಡಿಗಿದಾಗ ಅವರ ಮನೆಗೆ ಟಿವಿ ಬಂದಿದೆ ಅಂತ ಇಡೀ ಊರಿಗೆ ಗೊತ್ತಾಗಿಬಿಡುತ್ತಿತ್ತು. ಟಿವಿ ನೋಡಲು ಹೋದರೆ ಯಾಕೋ ಕೆಲವರು ಓದೋ ಹುಡುಗರನ್ನು ಟಿವಿ ನೋಡಲು ಸೇರಿಸುತ್ತಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ಅದರಲ್ಲೂ ಗೌರಿ ಗಣೇಶನ ಹಬ್ಬದಲ್ಲಿ ನಮ್ಮೂರಿನ ಹಿರಿಯಣ್ಣನೊಬ್ಬ ವಿಸಿಆರ್, ವಿಸಿಆರ್ ಕ್ಯಾಸೆಟ್ ಹಾಗೂ ಬಣ್ಣದ ಟಿವಿಯನ್ನು ಬಾಡಿಗೆಗೆ ತಂದು ಬೀದಿಯ ಮಧ್ಯದಲ್ಲಿ ನಮ್ಮ ಕನ್ನಡದ ಸಿನಿಮಾ ತೋರಿಸುತ್ತಿದ್ದನು. ತಣ್ಣನೆಯ ರಾತ್ರಿಯ ವೇಳೆ ಮನೆಗಳಿಂದ ತಂದ ಚಾಪೆಗಳ ಮೇಲೆ ಕಣ್ಣುಮುಚ್ಚದಂತೆ ಇಡೀ ರಾತ್ರಿ ಒಂದರ ಮೇಲೊಂದರಂತೆ ನಮ್ಮ ಕನ್ನಡದ ಅದ್ಭತವಾದ ಸಿನಿಮಾಗಳನ್ನು ನೋಡ್ತಾ ಇದ್ದರೆ ಅದರ ಮಜಾನೆ ಬೇರೆ ಇರುತ್ತಿತ್ತು. ನನ್ನ ಬಾಲ್ಯದ ದಿನಗಳಲ್ಲಿ ಊರಿನಲ್ಲಿ ಆಗಾಗ ನಡೆಯುತ್ತಿದ್ದ ದಾನಶೂರ ಕರ್ಣ, ಕುರುಕ್ಷೇತ್ರದಂತಹ ನಾಟಕಗಳು ಕ್ರಮೇಣ ಕಣ್ಮರೆಯಾಗ್ತ ಇದ್ದವು. ಯಾಕೋ ಚಿಕ್ಕ ಹುಡುಗನಾಗಿದ್ದ ನನಗೆ ಇಡೀ ರಾತ್ರಿ ಕುಳಿತು ಆ ನಾಟಕಗಳನ್ನು ನೋಡಬೇಕು ಅಂತ ಅನಿಸ್ತಾ ಇರಲಿಲ್ಲ. ಹಾಗೆಯೆ ಯಾರಾದರು ಊರಿನಲ್ಲಿ ಸಿದ್ದಪ್ಪಾಜಿ ಕತೆ ಅಥವಾ ಶನಿಮಹಾತ್ಮನ ಕತೆಗಳನ್ನು ಮಾಡಿಸಿದರೆ ಆ ಕತೆಗಳನ್ನು ಕುಳಿತು ಕೇಳುವ ವ್ಯವಧಾನ ಯಾಕೋ ಇರುತ್ತಿರಲಿಲ್ಲ. ಆದರೆ ಸಿನಿಮಾ ಅಂದರೆ ನನಗೆ ಒಂತರಾ ಪಂಚಪ್ರಾಣವಾಗಿತ್ತು.
ಇವತ್ತು ವಿಸಿಆರ್ ನ ಜಾಗಗಳಲ್ಲಿ ಡಿವಿಡಿಗಳು ಬಂದಿವೆ. ವಿಸಿಡಿಗಳಂತು ಕಣ್ಮರೆಯಾಗ್ತಾ ಇವೆ. ಕೆಲವು ವರ್ಷಗಳ ಹಿಂದಷ್ಠೇ ಇದ್ದ ಆಡಿಯೋ ಕ್ಯಾಸೆಟ್ ಗಳು ಇಂದು ಮಾರುಕಟ್ಟೆಗಳಲ್ಲಿ ಬಿಕಿರಿಯಾಗುವುದಿಲ್ಲ. ಎಮ್ ಪಿ 3, ಐಪೋಡ್ ಅಂತ ಏನೇನೋ ಮಾರುಕಟ್ಟೆಗಳಲ್ಲಿ ಈ ದಿನಗಳಲ್ಲಿ ಲಭ್ಯ. ಮೊದಮೊದಲು ಅಂತರ್ಜಾಲ ತಾಣದಲ್ಲಿ ಸಣ್ಣ ಸಣ್ಣ ವಿಡೀಯೋ ತುಣುಕುಗಳಿದ್ದ ಯೂ ಟ್ಯೂಬ್ ಎನ್ನುವ ವೆಬ್ ತಾಣ ಪಾರಂಭವಾಗಿತ್ತು. ಇವತ್ತು ಅದೇ ಯೂ ಟ್ಯೂಬ್ ಮತ್ತು ಇನ್ನಿತರ ವೆಬ್ ತಾಣಗಳಲ್ಲಿ ಪ್ರಪಂಚದ ಯಾವುದೆ ಮೂಲೆಯಲ್ಲಿ ಕುಳಿತು ಕನ್ನಡವೂ ಸೇರಿದಂತೆ ಯಾವ ಭಾಷೆಯ ಪೂರ್ತಿ ಚಿತ್ರವನ್ನು ಸಹ ನೋಡಬಹುದು. ಇಂದಿನ ದಿನಗಳಲ್ಲಿ ವಿಜ್ಞಾನ ಮುಂದುವರೆದಂತೆ ಎಲ್ಲವೂ ಬದಲಾಗ್ತಾ ಇದೆ.
ಬದಲಾಗುತ್ತಿರೋ ಪ್ರಪಂಚದಲ್ಲಿ ಕಲಾತ್ಮಕ ಚಿತ್ರಗಳನ್ನು ನೋಡುವ ಅವಕಾಶ ಅದೆಷ್ಟು ಜನಸಾಮಾನ್ಯರಿಗೆ ದೊರೆಯುತ್ತೆ? ತಮ್ಮ ಚಿತ್ರಗಳನ್ನು ಕಲಾತ್ಮಕ ರೀತಿಯಲ್ಲಿಯೇ ಹೆಣೆದು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿರುವ ಸತ್ಯಜಿತ್ ರೇ ಅವರಂತಹ ಶ್ರೇಷ್ಠ ನಿರ್ದೇಶಕರ ಗೆಲುವಿನ ಗುಟ್ಟು ಏನಾಗಿತ್ತು ಅನ್ನುವುದನ್ನು ಆ ದೇವರೇ ಬಲ್ಲ. ನನ್ನ ಗೆಳೆಯನೊಬ್ಬನಿಗೆ ಐಎಎಸ್ ಪರೀಕ್ಷೆಯ ಸಂದರ್ಶನದಲ್ಲಿ ಎಂಬತ್ತರ ದಶಕದ ಕನ್ನಡದ ಕಲಾತ್ಮಕ ಚಿತ್ರವೊಂದರ ಚಿತ್ರಕತೆಯ ಸಾರಾಂಶ ಕೇಳಿದ್ದರಂತೆ. ಆತ ತನಗೆ ಗೊತ್ತಿಲ್ಲ ಅಂತ ಹೇಳಿದ್ದನಂತೆ. ಎಷ್ಟೋ ಚಿತ್ರಗಳಿಗೆ ರಾಷ್ಟೀಯ ಪ್ರಶಸ್ತಿ ಬಂದಿರುತ್ತದೆ ಆದರೆ ಯಾಕೋ ಚಿತ್ರಗಳು ಜನಮನಗಳನ್ನು ತಲುಪಿರುವುದಿಲ್ಲ. ಎಲ್ಲೋ ದೂರದ ಊರಿನಲ್ಲಿ ಕುಳಿತು ನಾನು ಕಾಣದ, ನಾನು ಇದುವರೆಗು ನೋಡದಿದ್ದ ಎಷ್ಟೋ ಸಿನಿಮಾಗಳನ್ನು ನೋಡಿದಾಗ ಬದುಕೇ ಒಂತರಾ ಬದಲಾದಂತೆ ಕಾಣುತ್ತದೆ. ಯಾವ ಭಾಷೆಯ ಸಿನಿಮಾ ನೋಡಿದರೂ, ಪ್ರಪಂಚದ ಯಾವ ಮೂಲೆಗೆ ಹೋದರೂ ಮನುಷ್ಯನ ಭಾವನೆಗಳು ಒಂದೇ ಆಗಿರುತ್ತವೆ. ಮನುಷ್ಯ ಸತ್ತಾಗ, ಕೆಟ್ಟಾಗ, ಖುಷಿಗೊಂಡಾಗ ಅವನು ಕಲ್ಕತ್ತದವನೇ ಆದರೂ ಅವನ ಭಾವನೆಗಳು ನಮ್ಮ ಕನ್ನಡಿಗರ ಭಾವನೆಗಳ ಹಾಗೆ ಇರುತ್ತವೆ.
* * * * * * * *
ಚಿತ್ರಕೃಪೆ : t1.gstatic.com
ಎಷ್ಟೋ ಚಿತ್ರಗಳಿಗೆ ರಾಷ್ಟೀಯ ಪ್ರಶಸ್ತಿ ಬಂದಿರುತ್ತದೆ ಆದರೆ ಯಾಕೋ ಚಿತ್ರಗಳು ಜನಮನಗಳನ್ನು ತಲುಪಿರುವುದಿಲ್ಲ. ಎಲ್ಲೋ ದೂರದ ಊರಿನಲ್ಲಿ ಕುಳಿತು ನಾನು ಕಾಣದ, ನಾನು ಇದುವರೆಗು ನೋಡದಿದ್ದ ಎಷ್ಟೋ ಸಿನಿಮಾಗಳನ್ನು ನೋಡಿದಾಗ ಬದುಕೇ ಒಂತರಾ ಬದಲಾದಂತೆ ಕಾಣುತ್ತದೆ. ಯಾವ ಭಾಷೆಯ ಸಿನಿಮಾ ನೋಡಿದರೂ, ಪ್ರಪಂಚದ ಯಾವ ಮೂಲೆಗೆ ಹೋದರೂ ಮನುಷ್ಯನ ಭಾವನೆಗಳು ಒಂದೇ ಆಗಿರುತ್ತವೆ. ಮನುಷ್ಯ ಸತ್ತಾಗ, ಕೆಟ್ಟಾಗ, ಖುಷಿಗೊಂಡಾಗ ಅವನು ಕಲ್ಕತ್ತದವನೇ ಆದರೂ ಅವನ ಭಾವನೆಗಳು ನಮ್ಮ ಕನ್ನಡಿಗರ ಭಾವನೆಗಳ ಹಾಗೆ ಇರುತ್ತವೆ.
correct aagi hELidderi Nataraju avare!!! tumbaa aptavenisuvantaha baraha!!