ಸಂಸ್ಕೃತಿ ಸಂಕಥನ – 23 – ಕಾನೂನು ಸಂಸ್ಕೃತಿಯನ್ನಾಧರಿಸಿ ಇರಬೇಕು
-ರಮಾನಂದ ಐನಕೈ
ಜಿಜ್ಞಾಸುಕೂಟ ಅಂತ ಸಮಾನ ಮನಸ್ಕರ ಸಂಘಟನೆಯೊಂದು ಶಿರಸಿಯಲ್ಲಿದೆ. ಅವರು ತಿಂಗಳಿಗೊಮ್ಮೆ ಸೇರಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಅವರು ಹಲವಾರು ವರ್ಷ ಗಳಿಂದ ಈ ಪ್ರವೃತ್ತಿಯನ್ನು ಉಳಿಸಿ ಬೆಳೆಸಿಕೊಡು ಬಂದಿದ್ದಾರೆ. ಮೊನ್ನೆ ಅಕ್ಟೋಬರ್ 1ಕ್ಕೆ ಅವರು ಚರ್ಚೆಗೆ ಇಟ್ಟುಕೊಂಡ ವಿಷಯ ‘ಜನಲೋಕ ಪಾಲ್ ಮಸೂದೆ’. ಈ ಚರ್ಚೆ ಶಿರಸಿಯ ವಿದ್ಯಾನಗರ ರುದ್ರಭೂಮಿ ಆವರಣದಲ್ಲಿರುವ ‘ನೆಮ್ಮದಿ’ ಕುಟಿರದಲ್ಲಿ ನಡೆಯಿತು. ಈ ಕುರಿತು ನ್ಯಾಯವಾದಿಗಳಾದ ಅನಂತ ಹೆಗಡೆ ಹೂಡ್ಲಮನೆ ಹಾಗೂ ಅರುಣಾಚಲ ಹೆಗಡೆ ಜಾನ್ಮನೆ ಜೊತೆಗೆ ಕಾನೂನು ಉಪ ನ್ಯಾಸಕರಾದ ಅರವರೆ ಅವರು ವಿಷಯ ಮಂಡಿಸಿದರು. ಸುದೀರ್ಘ ಚರ್ಚೆ ನಡೆಯಿತು. ಕೊನೆಗೂ ಒಂದು ಗೊಂದಲ ಉಳಿಯಿತು. ಅದನ್ನು ಚೌಧರಿ ಡಾಕ್ಟರ್ ಸ್ಪಷ್ಟಪಡಿಸಿದರು. ನಾವು ಕಾನೂನು ತಜ್ಞರನ್ನು ಕರೆಸಿದ್ದು ಭ್ರಷ್ಟಾ ಚಾರ ನಿವಾರಣೆಗೆ ಏನಾದರೂ ಮಾರ್ಗ ಸೂಚಿಸ ಬಹುದೆಂದು. ಆದರೆ ನೀವು ಮಾತನಾಡುವುದು ನೋಡಿದರೆ ಸರಕಾರವನ್ನೇ ಸಮರ್ಥಿಸುವಂತಿದೆ ಎಂದರು.
ಇದು ಭಾರತದಲ್ಲಿರುವ ಪ್ರತಿಯೊಬ್ಬರ ಸಮಸ್ಯೆ. ಯಾಕೆ ಹೀಗಾಗುತ್ತದೆ? ಕಾನೂನು ಅಂದರೆ ಹಿಂಬಡಿಗನ ಹಾವಿನಂತೆ ಎರಡೂ ಕಡೆ ತಲೆ ಇದ್ದಂತೆ ಕಾಣುತ್ತದೆ. ಕಾನೂನು ವಿಳಂಬ ನೀತಿ ಅನುಸರಿಸುವಂತೆ ಕಾಣುತ್ತದೆ. ನೂರು ಜನ ಅಪರಾಧಿಗಳು ಬಿಡುಗಡೆಯಾದರೂ ಅಡ್ಡಿಯಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಕಾನೂನಿನ ಆದರ್ಶವಾದರೆ ಈ ದೇಶದಲ್ಲಿ ನೂರಾರು ಅಪರಾಧಿಗಳು ತಪ್ಪಿಸಿಕೊಂಡು ಕೊನೆ ಗೊಬ್ಬ ನಿರಪರಾಧಿ ಸಿಕ್ಕಿಬೀಳುವ ಪರಿಸ್ಥಿತಿ ಎದು ರಾಗಿದೆ ಅನಿಸುತ್ತದೆ. ಜನರಿಗೆ ಕಾನೂನಿನ ಬಗ್ಗೆ ಭಯ ಇದೆ. ಆದರೆ ಗೌರವ ಇಲ್ಲ. ಈ ದೇಶದಲ್ಲಿ ಕಾನೂನಿನ ಸದುಪಯೋಗಕ್ಕಿಂತ ದುರುಪಯೋಗ ಆಗುತ್ತಿರುವುದೇ ಹೆಚ್ಚು. ಕಾನೂನಿಗೆ ಸಂಬಂಧ ಪಟ್ಟಂತಹ ಇಂತಹ ನೂರಾರು ಪ್ರಶ್ನೆಗಳಿಗೆಲ್ಲ ಕಾರಣ ಗಳೇನು?
ನಮ್ಮ ದೇಶದ ಕಾನೂನುಗಳು ನಮ್ಮ ಸಂಸ್ಕೃತಿ ಯನ್ನಾಧರಿಸಿ ಇಲ್ಲ. ಮುಖ್ಯವಾಗಿ ನಮ್ಮ ಸಂವಿ ಧಾನವೇ ನಮ್ಮ ಸಂಸ್ಕೃತಿಯನ್ನಾಧರಿಸಿ ರಚಿತವಾ ದಂತೆ ಕಾಣುತ್ತಿಲ್ಲ. ಹಾಗಾಗಿ ಈ ದೇಶದ ಕಾನೂನು ಗಳಿಗೂ ಜನಜೀವನಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ನಮ್ಮ ಆಧುನಿಕ ಕಾನೂನುಗಳು ಅಂದರೆ ವಸಾ ಹತು ಪ್ರಭಾವದಿಂದ ಆಮದಾಗಿ ಬಂದಂತಹವು ಗಳು. ಅದನ್ನೇ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ನಾವು ಅಳವಡಿಸಿಕೊಂಡಿದ್ದೇವೆ. ಆದ್ದರಿಂದ ಇಲ್ಲಿ ಅಡ್ಡ ದಾರಿಗಳು ಮತ್ತು ಅಡ್ಡ ಪರಿಣಾಮಗಳೇ ಜಾಸ್ತಿ.
ಪ್ರತಿಯೊಂದು ಸಮಾಜವೂ ಯಾವುದೇ ಒಂದು ಸಾಂಸ್ಕೃತಿಕ ನೆಲೆಯಲ್ಲಿ ಸಂಘಟಿತವಾಗಿ ಅದರಲ್ಲಿ ನೂರಾರು ತಿದ್ದುಪಡಿಯಾಗುತ್ತ ಬಂದಿರು ತ್ತದೆ. ಪರಂಪರೆ ಅಥವಾ ಸಂಪ್ರದಾಯ ಅನ್ನು ವುದು ಪ್ರತೀ ಸಮಾಜವನ್ನು ತಿದ್ದುತ್ತ ಹೋಗುತ್ತದೆ. ಆದ್ದರಿಂದ ಒಂದು ಸಮಾಜಕ್ಕೆ ಅಥವಾ ಸಂಸ್ಕೃತಿಗೆ ಸಂಬಂಧಪಟ್ಟ ನೀತಿ-ನಿಯಮಾವಳಿಗಳು ಆಯಾ ಸಮಾಜ ಅಥವಾ ಸಂಸ್ಕೃತಿಯನ್ನಾಧರಿಸಿಯೇ ಇರಬೇಕು. ಅದರಲ್ಲೂ ಭಾರತೀಯರಿಗೆ ಹಾಗೂ ಐರೋಪ್ಯರಿಗೆ ಮೂಲ ನಂಬಿಕೆಯಲ್ಲೇ ಭಿನ್ನತೆಯಿ ದ್ದಾಗ ಅವರ ಕಾನೂನುಗಳು ಇಲ್ಲಿ ಹೇಗೆ ಸಂಪೂರ್ಣ ನ್ಯಾಯ ನೀಡಲು ಸಾಧ್ಯ?
ಐರೋಪ್ಯರು ರಿಲಿಜನ್ನಿನ ಕಥೆ ನಂಬಿದವರು. ರಿಲಿಜನ್ ಅನ್ನುವುದು ಮುಖ್ಯವಾಗಿ ಸತ್ಯ ಸುಳ್ಳುಗಳ ಜಿಜ್ಞಾಸೆಯ ಮೇಲೆ ನಿಂತಿದೆ. ಹಾಗಾಗಿ ಅವರ ಕಾನೂನುಗಳಿಗೂ ಸತ್ಯ ಅಥವಾ ಸುಳ್ಳು ಅನ್ನುವುದೇ ನಿರ್ಣಾಯಕವಾಗುತ್ತದೆ. ಹಾಗೂ ಅದನ್ನು ನಂಬಿದ ವರಿಗೆ ಅದೇ ನ್ಯಾಯವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ನೇ ಇಲ್ಲ. ಆದ್ದರಿಂದ ಇಲ್ಲಿ ಸತ್ಯ, ಸುಳ್ಳು ಅನ್ನುವುದು ಸಂಸ್ಕೃತಿಯ ಜಿಜ್ಞಾಸೆ ಅಲ್ಲ. ಹಾಗೂ ಅದನ್ನು ಶೋಧಿಸಿಯೇ ಬಿಡಬೇಕೆಂಬ ಛಲ ಯಾರಿಗೂ ಇಲ್ಲ. ಉದಾಹರಣೆಗೆ ನಾವು ಇಂದು ನಮ್ಮೆದುರಿಗೆ ಹಲವು ವೈಚಿತ್ರ್ಯ ಗಳನ್ನು ಕಾಣುತ್ತೇವೆ. ಒಳ್ಳೆಯ ವರು ಕೆಟ್ಟವರು, ಸುಳ್ಳುಗಾರರು ಸತ್ಯವಂತರು ಇತ್ಯಾದಿ. ಪ್ರಾಮಾ ಣಿಕರು ಅಂದುಕೊಂಡವರು ಮೋಸ ಮಾಡಿಬಿಡುತ್ತಾರೆ. ಅಂದರೆ ಸತ್ಯ ಯಾವುದು ಸುಳ್ಳು ಯಾವುದು ಎಂದು ವಿಂಗಡಣೆ ಮಾಡಲಾಗದ ಪರಿಸ್ಥಿತಿ. ಇಂಥ ಪರಿಸ್ಥಿತಿಗೆ ಪಾಶ್ಚಾತ್ಯರು ತೋರಿ ಸುವ ಪ್ರತಿಕ್ರಿಯೆಯೇ ಬೇರೆ. ಭಾರತೀಯರು ತೋರಿಸುವುದೇ ಬೇರೆ.
ಇಂಥ ಸಂದ ರ್ಭಗಳಲ್ಲಿ ಪಾಶ್ಚಾ ತ್ಯರು ಸಿಕ್ಕಾಪಟ್ಟೆ ಗಂಭೀರರಾಗು ತ್ತಾರೆ. ಈ ಸತ್ಯ ಸುಳ್ಳಿನ ಸಂಶೋ ಧನೆಗಾಗಿ ಗಾಡ್ ನನ್ನು ತರುತ್ತಾರೆ. ಪಿಲಾಸಫಿ ತರು ತ್ತಾರೆ. ಮನುಷ್ಯನ ಎಥಿಕ್ಸ್ ಹಾಗೂ ಮೋರಲ್ಗಳನ್ನು (Ethics and Morals) ಪ್ರಶ್ನಿಸುತ್ತಾರೆ, ಇತ್ಯಾದಿ ಇತ್ಯಾದಿ. ಅವರು ಇಷ್ಟು ಕಷ್ಟಪಟ್ಟು ಕಂಡುಹಿಡಿದ ಸತ್ಯ ಭಾರತೀಯರಿಗೆ ಅರ್ಥವೇ ಆಗುವುದಿಲ್ಲ. ಏಕೆಂದರೆ ಇವರಿಗೆ ಅದು ಅನುಭವದ ಸಂಗತಿಯೇ ಅಲ್ಲ. ಪಾಶ್ಚಾತ್ಯರು ಒಂದು ಸಮಸ್ಯೆಗೆ ಉತ್ತರ ಕಂಡುಕೊಳ್ಳುವುದಕ್ಕೂ ನಾವು ಕಂಡುಕೊಳ್ಳುವುದಕ್ಕೂ ತುಂಬ ವ್ಯತ್ಯಾಸ ಇದೆ. ಸತ್ಯ ಸುಳ್ಳಿಗೆ ಸಂಬಂಧಪಟ್ಟ ಮೇಲಿನಂತಹ ಸಂದರ್ಭ ದಲ್ಲಿ ಭಾರತೀಯರು ಗ್ರಹಿಸುವ ರೀತಿಯೇ ಬೇರೆ ಆಗುತ್ತದೆ. ಇವರು ದೃಷ್ಟಾಂತದ ಮೂಲಕ ಕಥೆಯ ಮೂಲಕ ಗ್ರಹಿಸುತ್ತಾರೆ. ಉದಾಹರಣೆಗೆ ‘ಒಂದು ಊರಿನಲ್ಲಿ ಸತ್ಯ ಮತ್ತು ಸುಳ್ಳ ಎಂಬ ಇಬ್ಬರು ಸ್ನೇಹಿತರಿದ್ದರಂತೆ. ಸತ್ಯನನ್ನು ಜನ ಹೊಗಳುತ್ತಿದ್ದರು. ಏಕೆಂದರೆ ಆತ ನೋಡಲು ಚಂದವಾಗಿದ್ದ. ಅದಕ್ಕಾಗಿ ಸುಳ್ಳನಿಗೆ ಸತ್ಯನ ಕುರಿತು ಅಸೂಯೆ ಇತ್ತು. ಆದರೂ ಇಬ್ಬರೂ ಅನ್ಯೋನ್ಯ ಸ್ನೇಹಿತರಾಗಿದ್ದರು. ಒಂದು ದಿನ ಇಬ್ಬರೂ ಸರೋವರಕ್ಕೆ ಈಜಲು ಹೋದರು. ಈಜಿ ಈಜಿ ಸುಸ್ತಾಯಿತು. ಸುಳ್ಳ ಮೊದಲು ದಡಕ್ಕೆ ಬಂದ. ಥಟ್ಟನೆ ಅವನಿಗೆ ಸತ್ಯನ ಬಟ್ಟೆ ಕಾಣಿಸಿತು. ತಡ ಮಾಡದೇ ಅದನ್ನು ಹಾಕಿಕೊಂಡು ಹೋಗಿಬಿಟ್ಟ. ಸತ್ಯ ಬಂದು ನೋಡುತ್ತಾನೆ, ಬಟ್ಟೆ ಇಲ್ಲ. ಹಾಗೆ ಹೋಗುವಂತಿಲ್ಲ. ಅನಿವಾರ್ಯವಾಗಿ ಸುಳ್ಳನ ಬಟ್ಟೆ ಹಾಕಿಕೊಂಡು ಹೋಗುತ್ತಾನೆ. ಈ ಬಟ್ಟೆ ಬದಲಿಸಿ ಕೊಂಡ ಸತ್ಯ ಮತ್ತು ಸುಳ್ಳರೇ ನಮ್ಮ ಸುತ್ತಲೂ ಇದ್ದಾರೆ. ಹಾಗಾಗೇ ನಮಗೆ ನಿತ್ಯಗೊಂದಲ’ ಹೀಗೆ ಕಥೆ ಹೇಳುವ ಮೂಲಕ ಈ ಗೊಂದಲಗಳನ್ನು ಸಹಜವಾಗೇ ಸ್ವೀಕರಿಸುತ್ತೇವೆ.
ಪಾಶ್ಚಾತ್ಯರು ಪ್ರತಿಯೊಂದನ್ನೂ ಕೂಡ ನಾರ್ಮೇ ಟಿವ್ ಆಗಿ ವಿಭಜಿಸುತ್ತಾರೆ. ಅವರ ಕಾನೂನು ಕೂಡಾ ಹಾಗೇ. ಒಂದು ಸತ್ಯವಾಗಿರಬೇಕು. ಇಲ್ಲ ಸುಳ್ಳಾಗಿರಬೇಕು. ಎರಡೇ ಸಾಧ್ಯತೆಗಳು. ಆದರೆ ನಮ್ಮ ಸಂಸ್ಕೃತಿಯಲ್ಲಿ ಎರಡನ್ನು ಮೀರಿದ ಮೂರನೇ ಸಾಧ್ಯತೆಗಳನ್ನು ಊಹಿಸುತ್ತೇವೆ. ಅನೇಕ ಸಲ ಈ ಮೂರನೇ ಸಾಧ್ಯತೆಯೇ ನಿಜವಾಗಿರುತ್ತದೆ.
ವಿವಾಹವಾಗಿ ಒಂದು ವರ್ಷದಲ್ಲೇ ಗಂಡ- ಹೆಂಡತಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಬಂದಿ ದ್ದಾರೆ. ಗಂಡು ತನಗೆ ಸಾಧ್ಯವಾದಷ್ಟು ಸಮರ್ಥ ನೀಯ ಕಾರಣಗಳನ್ನು ಸಿದ್ಧಪಡಿಸುತ್ತಾನೆ. ಅಂತೆಯೇ ಹೆಣ್ಣು ಕೂಡಾ ತನ್ನ ಮೇಲೆ ಹೆಚ್ಚು ಸಿಂಪತಿ ಬರು ವಂತಹ ಕಾರಣಗಳನ್ನು ಸೃಷ್ಟಿಸುತ್ತಾಳೆ. ಏಕೆಂದರೆ ಇವೆಲ್ಲ ಸತ್ಯವನ್ನು ಸಾಬೀತು ಮಾಡುವ ಪ್ರಯತ್ನಗಳು. ಕಾನೂನಿಗೆ ಯಾವುದು ಹೆಚ್ಚು ಸತ್ಯ ಅನಿಸುತ್ತದೆಯೋ ಆ ಕಡೆ ನ್ಯಾಯ ನೀಡುತ್ತದೆ. ಸತ್ಯ ಮತ್ತು ಸುಳ್ಳಿನ ಹೊರತಾಗಿಯೂ ಇನ್ನೊಂದು ಸಾಧ್ಯತೆಯನ್ನು ಅಥವಾ ವಾಸ್ತವ ವನ್ನು ಗ್ರಹಿ ಸುವ ನಮ್ಮ ಸಂಸ್ಕೃ ತಿಗೆ ಇಂಥ ಕಾನೂನುಗಳು ತೊಡಕನ್ನೇ ಉಂಟುಮಾಡುತ್ತದೆ.
ನಮ್ಮಲ್ಲಿ ಪೂರ್ವದಲ್ಲಿದ್ದ ಪಂಚಾಯತಿಗೆ ವ್ಯವಹಾರ ನೋಡಿದರೆ ಇದು ಸ್ಪಷ್ಟ ಆಗು ತ್ತದೆ. ಮೇಲೆ ಉಲ್ಲೇಖಿಸಿದ ಪ್ರಕರಣ ಒಂದೊಮ್ಮೆ ಪಂಚಾಯತಿಕಟ್ಟೆ ಎದುರು ಬಂದರೆ ಏನಾಗುತ್ತಿತ್ತು? ಅವರು ಸತ್ಯ ಸುಳ್ಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಪರಿಸ್ಥಿತಿಯ ಗಂಭೀರ ತೆಯನ್ನು ಮೊದಲು ಊಹಿಸುತ್ತಾರೆ. ‘ಹಳೆಯದನ್ನೆಲ್ಲ ಮರೆಯಿರಿ, ಆಗಿದ್ದು ಆಗಿಹೋಯಿತು. ಅಮೂಲ್ಯ ವಾದ ಜೀವನವನ್ನು ಹಾಳುಮಾಡಿಕೊಳ್ಳಬೇಡಿ, ಚೆನ್ನಾಗಿ ಬಾಳ್ವೆ ಮಾಡಿ’ ಎಂದು ಇಬ್ಬರಿಗೂ ಬೇರೆ ಬೇರೆ ಸಲಹೆ ನೀಡಿ ಕಳುಹಿಸುತ್ತಿದ್ದಾರೆ. ಈ ರೀತಿಯ ಗ್ರಹಿಕೆ ಒಂದು ಪರಂಪರೆ ಅಥವಾ ಸಂಸ್ಕೃತಿಯಿಂದ ಬಂದಿರುವಂತಹದ್ದು. ಹಾಗಾಗಿ ಇಂತಹ ಗ್ರಹಿಕೆಯ ಆಧಾರದ ಮೇಲೆ ಕಾನೂನುಗಳು ರಚಿತವಾಗ ಬೇಕು.
ಕ್ರಿಶ್ಚಿಯಾನಿಟಿ ಹುಟ್ಟಿದ್ದೇ ರೋಮಿನ ಪಟ್ಟಣ ದಲ್ಲಿ. ರೋಮಿನಂತೆ ಅಥವಾ ಭಾರತದಂತೆ ಕ್ರಿಶ್ಚಿಯಾನಿಟಿಗೆ ಪರಂಪರೆ ಅಥವಾ ಸಾಂಸ್ಕೃತಿಕ ಹಿನ್ನೆಲೆಯಿಲ್ಲ. ಅವರು ಕಟ್ಟಿಕೊಂಡ ರಿಲಿಜನ್ನಿ ಕಥೆಯೇ ಅವರಿಗೆ ಬಂಡವಾಳ. ಹಾಗೂ ಈ ಕಥೆಗೆ ಮಿತಿ ಇದೆ. ಆದ್ದರಿಂದ ರಿಲಿಜನ್ನಿಗೆ ಸಂಬಂಧಪಟ್ಟ ಎಲ್ಲ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಮಿತಿ ಗುರುತಿಸ ಬಹುದಾಗಿದೆ. ಆದ್ದರಿಂದ ನಮ್ಮ ದೇಶದ ಕಾನೂನುಗಳಲ್ಲಿ ಕಂಡುಬರುವುದು ಈ ರಿಲಿಜನ್ನ್ನಿನ ಮಿತಿ. ರಿಲಿಜನ್ನೇ ಇಲ್ಲದ ದೇಶದಲ್ಲಿ ಅದು ಅಶಾಂತಿಗೆ ಕಾರಣ ಆಗುತ್ತದೆ.
ಕಾನೂನು ಅನ್ನುವುದು ಮನುಷ್ಯರು ಮನುಷ್ಯರಿಗಾಗಿಯೇ ಮಾಡಿರುವಂತಹದ್ದು. ಏಕೆಂದರೆ ಮನುಷ್ಯ ಸಕಲ ಜೀವಿಗಳಲ್ಲೇ ಅತ್ಯಂತ ಬುದ್ಧಿವಂತ! ಈತನನ್ನು ಬೇರಾವ ರೀತಿಯಲ್ಲೂ ನಿಯಂತ್ರಿಸಲು ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ಬೇರೆ ಬೇರೆ ಸಂಸ್ಕೃತಿಗಳ ಮನುಷ್ಯರ ಆಚಾರ, ವಿಚಾರ, ನಂಬಿಕೆ, ಆಚರಣೆ ಬೇರೆ ಬೇರೆ ಇರುತ್ತದೆ. ಕಾನೂನು ಮನುಷ್ಯ ಸ್ವಾತಂತ್ರ್ಯವನ್ನು ನಿಯಂತ್ರಣ ದಲ್ಲಿಡಬೇಕೇ ವಿನಾ ಮೊಟಕುಗೊಳಿಸಬಾರದು. ಅಥವಾ ತಾರತಮ್ಯ ಮಾಡಬಾರದು. ಹಾಗಿದ್ದಾಗ ಕಾನೂನುಗಳು ಆಯಾ ಸಂಸ್ಕೃತಿಗೆ ಸಂಬಂಧ ಪಟ್ಟಂತೆ ರಚಿತವಾಗಬೇಕೇ ವಿನಾ ವಿಶ್ವಕ್ಕೆ ಒಂದು ಕಾನೂನು ಅಂದರೆ ನ್ಯಾಯವಲ್ಲ. ಐರೋಪ್ಯರು ಪ್ರಗತಿಯ ರೂವಾರಿಗಳು. ಹಾಗೂ ನಮಗೆ ಮಾದರಿ ಎಂದು ಒಪ್ಪಿಕೊಂಡಿದ್ದರಿಂದ ಅವರದೆಲ್ಲ ವನ್ನು ಸಾರಾಸಗಟಾಗಿ ಸ್ವೀಕರಿಸಿಬಿಟ್ಟಿದ್ದೇವೆ. ನಮ್ಮ ದೇಹಪ್ರಕೃತಿಗೆ ಒಗ್ಗುವಂತಹದ್ದನ್ನು ಮಾತ್ರ ಅಳ ವಡಿಸಿಕೊಂಡಿದ್ದರೆ ಈ ಅನಾಹುತ ಖಂಡಿತ ಆಗುತ್ತಿ ರಲಿಲ್ಲ. ಈಗ ನಮ್ಮ ದೇಶದಲ್ಲಿ ಬುದ್ಧಿವಂತರು ಮಾತ್ರ ಕಾನೂನಿನ ಸದುಪಯೋಗ ಮತ್ತು ದುರು ಪಯೋಗ ಪಡೆದುಕೊಳ್ಳುವ ಸಂದರ್ಭ ಎದು ರಾಗಿದೆ.
ಭಾರತೀಯ ಕಾನೂನು ಪ್ರಪಂಚದಲ್ಲಿ ‘ಹಿಂದೂ ಲಾ’ ಮಾತ್ರ ಹೆಚ್ಚು ಕಮ್ಮಿ ಎಲ್ಲ ಭಾರತೀ ಯರಿಗೆ ಅರ್ಥವಾಗುತ್ತದೆ. ಹಾಗೂ ಅದರ ಕುರಿತು ಸ್ವಲ್ಪಮಟ್ಟಿನ ಮೆಚ್ಚುಗೆ ಇದೆ. ಏಕೆಂದರೆ ‘ಹಿಂದೂ ಲಾ’ ಭಾರತೀಯರ ಅನುಭವ. ಅದಕ್ಕಿಂತ ಮುಖ್ಯ ವಾಗಿ ಭಾರತೀಯ ಪರಂಪರೆಯಲ್ಲೇ ಇದ್ದ ಕಾನೂ ನಿನ ಪರಿಷ್ಕೃತ ಪಠ್ಯ ಇದು. ಉಳಿದ ಕಾನೂನು ಗಳಲ್ಲೂ ಈ ಪರಿಷ್ಕೃರಣೆ ಅಗತ್ಯ ಇದೆ.
ಇದು ಯಾರೋ ಪ್ರಜ್ಞಾಪೂರ್ವಕವಾಗಿ ಮಾಡಿದ ತಪ್ಪಲ್ಲ. ನಮ್ಮ ತಿಳುವಳಿಕೆಯೊಂದಿಗೆ ಬಂದಂತಹದ್ದು. ಆದರೆ ಈ ತಿಳುವಳಿಕೆಯೇ ತಪ್ಪಾ ಗಿದೆ ಎಂಬುದನ್ನು ಎತ್ತಿ ತೋರಿಸುತ್ತಾರೆ ಬಾಲ ಗಂಗಾಧರರು.
* * * * * * * * *
ಚಿತ್ರಕೃಪೆ :pakistanhindupost.blogspot.com





ಲೇಖನದಲ್ಲಿ ಒಳ್ಳೇಯ ಮಾಹಿತಿಗಳಿವೆ.ಧನ್ಯವಾದಗಳು
Uttamavada Baraha…..