ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 5, 2012

1

ಮಾಧ್ಯಮದವರು ನಡೆದುಕೊಂಡ ರೀತಿ ಸರಿಯೇ…?

‍ನಿಲುಮೆ ಮೂಲಕ

-ಸತೀಶ್ ಡಿ. ಆರ್. ರಾಮನಗರ

ಟೀವಿ ವಾಹಿನಿಯವರು ನಡೆದುಕೊಂಡ ರೀತಿಯ ಬಗ್ಗೆ ಇಷ್ಟೊಂದು ಬಹು ಪರಾಕ್ ಹೇಳುತಿದ್ದೀರಲ್ಲ. ನಿನ್ನೆ ನಡೆದ ಘಟನೆಗಳ ಬಗ್ಗೆ ಅದರ ಹಿನ್ನೆಲೆಯನ್ನು ಸ್ವಲ್ಪವಾದರೂ ಮನುಷ್ಯತ್ವದಿಂದ ಯೋಚಿಸಿದ್ದೀರ. ವಸ್ತು ನಿಷ್ಠೆ ಮೆರೆವ ಮಾಧ್ಯಮದವರು ನಿನ್ನೆ ಮಾಡಿದ್ದು ಏನು. ಪೋಲೀಸಿನವರು ಕೋರ್ಟ್ ಹಾಲ್ ಗಳಿಗೆ ನುಗ್ಗಿ ವಕೀಲರನ್ನು ಮನ ಬಂದಂತೆ ತಳಿಸುತಿದ್ದರೆ ಮಾಧ್ಯಮದವರು ಅದನ್ನು ಏಕೆ ಪ್ರಸಾರ ಮಾಡಲಿಲ್ಲ. ವಕೀಲ ಸಿಂಬಲ್ ಇರುವ ಕಾರು ಬೈಕ್ಗಳನ್ನು ಎಲ್ಲರ ಮುಂದೆಯೇ ಸುಡುತಿದ್ದ ಪೋಲೀಸಿನವರ ಕೃತ್ಯವನ್ನು ಏಕೆ ಮಾಧ್ಯಮದವರು ಪ್ರಸಾರ ಮಾಡಲಿಲ್ಲ. ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ವಕೀಲರನ್ನು ಯಾವೊಬ್ಬ ಮಾಧ್ಯಮದವರು ಏಕೆ ತೋರಿಸಲಿಲ್ಲ. ಮೊದಲು ಮಾಧ್ಯಮದವರೇ ಪೋಲೀಸೀವರಿಗೆ ಧಿಕ್ಕಾರ ಕೂಗುತಿದ್ದವರು, ರೆಡ್ಡಿ ಬೆಂಬಲಿಗರೆಂದು ಬಂದಿದ್ದ ಕರಿ ಕೋಟು ದರಿಸಿದ್ದ ಕೆಲವು ವಕೀಲರು ತೆಗೆದ ಜಗಳಕ್ಕೆ ಇಡೀ ವಕೀಲ ಸಮುದಾಯವನ್ನು ಭಯೋತ್ಪಾದಕರ ರೀತಿ ಚಿತ್ರಿಸುತಿದ್ದೀರಲ್ಲ ಏಕೆ. ಬಾರ್ ಅಸೋಸಿಯೇಶನ್, ಕ್ಯಾಂಟೀನ್, ನ್ಯಾಯಾಲಯದ ಒಳ ಹೊಕ್ಕು, ಕುಳಿತಿದ್ದ ವಕೀಲರನ್ನು ನಾಯಿಗೆ ಬದಿದಂತೆ ಬಡಿದು ರಕ್ತ ಹರಿಸಿದ್ದಾರಲ್ಲ ಪೋಲೀಸಿನವರು ಅವರ ಬಗ್ಗೆ ಏಕೆ ಮೌನವಾಗಿದ್ದೀರಿ.

ಸಾಮಾಜಿಕ ಕಳಕಳಿ ಪತ್ರಿಕಾ ಸ್ವಾತಂತ್ರ್ಯ ಎಂದು ಮಾತು ಮಾತಿಗೆ ಬಡಿಬಡಿಸುವ ಮಾಧ್ಯಮದವರು ನಡೆದುಕೊಳ್ಳುವ ರೀತಿ ಇದೇನಾ. ಒಂದು ಕಣ್ಣಿಗೆ ಸುಣ್ಣ. ಒಂದು ಕಣ್ಣಿಗೆ ಬೆಣ್ಣೆಯಂತೆ ವರದಿಗಳನ್ನು ಪ್ರಕಟಿಸುತಿದ್ದೀರಲ್ಲ ನೈತಿಕತೆ ಎಲ್ಲಿ ಮಾಯವಾಯಿತು. ಈ ಹಿಂದೆ ವಕೀಲರು ರಸ್ತೆ ತಡೆ ಮಾಡಿ ಸಾವಿರಾರು ಜನರಿಗೆ ನೋವನ್ನುಂಟು ಮಾಡಿದ್ದರರು ಆ ಸಂದರ್ಭದಲ್ಲಿನ ಅವರ ಕೃತ್ಯಕ್ಕೆ ಅನೇಕ ವಕೀಲ್ಲರು ಆಕ್ಷೇಪ ವ್ಯಕ್ತಪಡಿಸಿದ್ದರು, ನನಗೆ ಆ ದಿನದ ಘಟನೆಯ ಬಗ್ಗೆ ಆ ದಿನ ಧರಣಿಗೆ ಕುಳಿತ ವಕೀಲ ಮಿತ್ರರುಗಳ ಬಗ್ಗೆ ಅಸಹ್ಯ ಬಂದಿತ್ತು. ಆದರೆ ನೆನ್ನೆ ನಡೆ ಘಟನೆಗಳಿಗೆ ಕೇವಲ ವಕೀಲರನ್ನೇ ಖಳನಾಯಕರಾಗಿ ಬಿಂಬಿಸಿ, ವಕೀಲರ ಮೇಲೆ ನಡೆದ ಹಲ್ಲೆಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿ, ಮನಸಲ್ಲೇ ಪೈಶಾಚಿಕ ಆನಂದ ವ್ಯಕ್ತಪಡಿಸುತ್ತಿರುವ ಮಿತ್ರರನ್ನು ನೋಡಿ ಈ ವ್ಯವಸ್ತೆ ಬಗ್ಗೆಯೇ ಹೇಸಿಗೆಯಾಗುತ್ತಿದೆ. ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಆಗಬೇಕು. ಅವನು ವಕೀಲನೆ ಆಗಿರಲಿ ರಾಜಕೀಯ ವ್ಯಕ್ತಿಯೇ ಆಗಿರಲಿ. ಆದರೆ ಏಕ ಮುಖ ವರದಿಯನ್ನು ಮಾಡಿ ಇಡೀ ವಕೀಲರ ಸಮುದಾಯವನ್ನೇ ಭಯೋತ್ಪಾದಕರಂತೆ ಚಿತ್ರಿಸುತ್ತಿರುವ ಮಾಧ್ಯಮಗಳಿಗೆ ಸಾಮಾಜಿಕ ಕಳಕಳಿ ಎಲ್ಲಿದೆ. ಮಾಧ್ಯಮ ಮಿತ್ರರಿಗೆ ಮಾತ್ರ ನೋವಾದರೆ ನೋವು. ಅದೇ ವಕೀಲನ ಮೇಲೆ ಪೋಲೀಸಿನವರು ಮಾಡಿದ ಹಲ್ಲೆಯನ್ನು, ಪರೀಸ್ಥಿತಿಯನ್ನು ತಹಬಂದಿಗೆ ತರಲು ಪೋಲೀಸಿನವರು ಮಾಡಿದ ಪ್ರಯತ್ನ ಮಾತ್ರ ಎಂದು ಹೇಳುವುದರಲ್ಲಿ ಎಂತಹ ಜಾಣತನವಿದೆ ಅಲ್ಲವೇ. ಯಾವುದೇ ಒಂದು ಕೃತ್ಯವನ್ನು ಮೊದಲೇ ಯೋಜನೆ ಹಾಕಿಕೊಂಡು ಮಾಡಿದರೆ ನೆನ್ನೆಯಂತ ಘಟನೆ ನಡೆಯುತ್ತವೆ. ಬೇರೆ ಯಾರೋ ತಮ್ಮ ಬೇಳೆ ಬೇಯಿಸಿಕೊಳ್ಳಲು, ಎಲ್ಲರ ದೃಷ್ಟಿಯನ್ನು ಬೇರೆಡೆಗೆ ಸೆಳೆಯಲು ನಡೆದ ಕೃತ್ಯ ಇದೆಂದು ಯಾಕೆ ಯಾರು ಗಮನ ಕೊಡಲಿಲ್ಲ. ಇಲ್ಲಿ ನಾವೆಲ್ಲರೂ ಮನುಷ್ಯರು. ಪಶುಗಳಲ್ಲ. ನಾವು ವಾಸಿಸುತ್ತಿರುವುದು ಜನಗಳ ಮಧ್ಯೆ. ಕಾಡಿನಲ್ಲಲ್ಲ. ದ್ವೇಷ ಅಸೂಯೆ ಯಾರಿಗೂ ತರವಲ್ಲ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ ಆದರೆ ಅದು ಕೇವಲ ಒಂದು ಕಡೆಯ ನ್ಯಾಯವಾಗದಿರಲಿ. ಸುಮ್ಮನೆ ಒಂದೆಡೆ ಕುಳಿತು ಬಾಯಿಗೆ ಬಂದಂತೆ ಕಲ್ಪಿತ ಬರಹ ಬರೆಯುವುದಲ್ಲ. ವಕೀಲರು ಕಲ್ಲನ್ನು ಎಸೆದರು, ಮಾಧ್ಯಮ ಮಿತ್ರರಿಗೆ ಹೊಡೆದರು, ಬೀಕರವಾಗಿ ಪ್ರತಿಭಟಿಸುವ ಚಿತ್ರಗಳನ್ನು ಮಾತ್ರ ಪ್ರಕಟಿಸುತ್ತೀರಲ್ಲ, ಅದೇ ವಕೀಲರು ಹಾಗು ನ್ಯಾಯಾಧೀಶರ ಮೇಲೆ ಹಲ್ಲೆ ಮಾಡುತ್ತಿರುವ ಚಿತ್ರಗಳನ್ನು ಏಕೆ ಪ್ರಕಟಿಸಲಿಲ್ಲ. ವಕೀಲರು ಮಾಡಿದ್ದು ತಪ್ಪೇ, ಅದೇ ರೀತಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಕಂಡರೂ ಕಾಣದಂತೆ ಅವರಿಗೆ ಪರೋಕ್ಷ ಬೆಂಬಲ ನೀಡದ ಮಾಧ್ಯಮದವರದು ತಪ್ಪೇ.ನಾನೊಬ್ಬ ವಕೀಲ. ಆದರೆ ಕಣ್ಣಿಗೆ ಪೊರೆ ಕಿವಿಗೆ ಹತ್ತಿ ಹಾಕಿಕೊಂಡ ವ್ಯಕ್ತಿ ನಾನಲ್ಲ. ಅನ್ಯಾಯ ದಬ್ಬಾಳಿಕೆಗೆ ಯಾರೇ ತುತ್ತಾದರು ನಾನು ಖಂಡಿಸುತ್ತೇನೆ.

ನೀವುಗಳು ಬೆಳಿಗ್ಗೆಯಿಂದ ಟೀವಿಯಲ್ಲಿ ಬರುತ್ತಿರುವ ದೃಶ್ಯಾವಳಿಗಳನ್ನು ನೋಡುತಿದ್ದೀರ. ಅದರಲ್ಲಿ ವಕೀಲರು ಹಲ್ಲೆ ನಡೆಸಿದರು ಎಂದು ಬರುತ್ತಿದೆಯೇ ಹೊರತು. ಈ ಹಲ್ಲೆಗೆ ಕಾರಣವೇನು. ಈ ಹಲ್ಲೆಯಿಂದ ವಕೀಲ ಸಮುದಾಯ ಹೇಗೆ ತೊಂದರೆಗೆ ಸಿಲುಕಿದೆ. ಕೋರ್ಟು, ಕ್ಯಾಂಟೀನು, ಬಾರ್ ಅಸೋಷಿಯೇಶನ್ ಅನ್ನದೆ ವಕೀಲರನ್ನು ನಾಯಿಗಳನ್ನು ಅಟ್ಟಾಡಿಸಿಕೊಂಡು ಹುಡುಕಿ ಹುಡುಕಿ ಮುಖ ಮೂತಿಯನ್ನದೆ ಹೊಡೆದರಲ್ಲ ಪೋಲೀಸೀನವರು ಅವರ ಬಗ್ಗೆ ಈ ಮಾಧ್ಯಮ ಏಕೆ ಬೆಳಕು ಚಲ್ಲಲಿಲ್ಲ. ಯಾವನೇ ಒಬ್ಬ ವಕೀಲನನ್ನು ಇವರು ಸಂದರ್ಶಿಸಿದ್ದಾರ. ಈ ದಿನ ಕಪ್ಪು ಕೋಟನ್ನು ಹಾಕಿಕೊಂಡು ಬಂದವರೆಲ್ಲ ವಕೀಲರಲ್ಲ ಎಂಬ ಸತ್ಯ ಎಷ್ಟು ಜನಕ್ಕೆ ತಿಳಿದಿದೆ. ತಲೆಗೆ ಒಬ್ಬರಿಗೆ ೫೦೦ ರೂಪಾಯಿ ಕೊಟ್ಟು ಕರೆಸಿದ ಮಂದಿಯ ಬಗ್ಗೆ ಏಕೆ ಯಾವ ಮಾಧ್ಯಮ ಮಿತ್ರರು ತಲೆಕೆಡಿಸಿ ಕೊಳ್ಳಲಿಲ್ಲ. ಎಷ್ಟೊಂದು ಮಂದಿ ವಕೀಲರು ಆಸ್ಪತ್ರೆಯಲ್ಲಿ ತೀವ್ರ ಘಾಯಗೊಂಡು ಚಿಕೆತ್ಸೆ ಪಡೆಯುತಿದ್ದಾರೆ ಎಂಬುದನ್ನು ಏಕೆ ತೋರಿಸುತ್ತಿಲ್ಲ. ತಮಗೆ ಒಂದು ನ್ಯಾಯ ಪರರಿಗೆ ಒಂದು ನ್ಯಾಯ. ಪೊಲೀಸರೇ ಕೋರ್ಟಿನ ಸುತ್ತ ಮುತ್ತಲಿದ್ದ ವಾಹನಗಳಿಗೆ ಬೆಂಕಿ ಹಚ್ಚುತಿದ್ದರೆ ಅದನ್ನು ಶೂಟ್ ಮಾಡಿದ ಯಾವೊಬ್ಬ ಮಾಧ್ಯಮ ಮಿತ್ರರು ಏಕೆ ಪ್ರದರ್ಶನ ಮಾಡಲಿಲ್ಲ. ಎಲ್ಲಿಂದಲೋ ಬರುತಿದ್ದ ವಕೀಲರನ್ನು ನಾಯಿಗೆ ಬಡಿದಂತೆ ಬಡಿಯುತಿದ್ದರಲ್ಲ ಅದನ್ನು ಏಕೆ ಟೀವಿ ಮಾಧ್ಯಮದವರು ತೋರಿಸಲಿಲ್ಲ. ಯಾರೋ ಕೆಲವೇ ಪುಂಡ ವಕೀಲರು ಮಾಡಿದ ಕೆಲಸಕ್ಕೆ ಇಡೀ ವಕೀಲ ಸಮುದಾಯವನ್ನೇ ಹಿಯಾಳಿಸುವುದು ಯಾವ ನ್ಯಾಯ. ಮಾಧ್ಯಮದವರು ಎಷ್ಟೊಂದು ಸಾಚಾ ವ್ಯಕ್ತಿಗಳು ಎಂಬುದು ಎಲ್ಲರಿಗು ತಿಳಿದ ಸತ್ಯ. ೩ ಜನ ಬ್ಲೂ ಫಿಲಂ ನೋಡಿದರೆ, ಈ ಟೀವಿ ಮಾಧ್ಯಮದವರು ಇಡೀ ವಾರ ಪ್ರಪಂಚದಲ್ಲಿರುವ ಎಲ್ಲರಿಗು ದಿನಕ್ಕೆ ಹತ್ತು ಬಾರಿಯಂತೆ ತೋರಿಸಿದರು. ಹಾಗದೆ ಇವರು ಮಾಡಿದ್ದು ಏನು. ಯಾವದೇ ವಿಷಯವನ್ನು ಆ ತಕ್ಷಣಕ್ಕೆ ಸತ್ಯಾಸತ್ಯತೆಯ ಬಗ್ಗೆ ಆಲೋಚಿಸಿ ಬರೆಯಿರಿ.

ಈ ಹಿಂದೆ ವಕೀಲರು ರಸ್ತೆ ತಡೆ ಮಾಡಿ ಸಾವಿರಾರು ಅಮಾಯಕರಿಗೆ ತೊಂದರೆ ಮಾಡಿರುವುದನ್ನು ನಾನು ಕಂಡಿಸುತ್ತೇನೆ. ಅವರು ನನ್ನ ಮಿತ್ರರು ಎಂದು ಹೇಳಿಕೊಳ್ಳುವುದಕ್ಕೆ ಆಗ ನಾನು ನಾಚಿಕೆ ಪಟ್ಟುಕೊಂಡಿದ್ದೇನೆ. ಆದರೆ ಅಂದಿನ ದ್ವೇಷವನ್ನು ಇಂದು ತೀರಿಸಿಕೊಂಡ ಮಾಧ್ಯಮ ಹಾಗು ಪೋಲೀಸಿನವರ ರೀತಿ ನಿಜಕ್ಕೂ ದುರದೃಷ್ಟಕರ. ಈ ಆರೋಪ ಮಾಡುವುದಕ್ಕೆ ಮುನ್ನ ನೀವು ಯೋಚಿಸಿ. ನಾವೆಲ್ಲಾ ನಾಗರೀಕ ಪ್ರಪಂಚದಲ್ಲಿ ವಾಸಿಸುತ್ತಿರುವವರು ಪಶುಗಳಲ್ಲ. ದ್ವೇಷ ಅಸೂಯೆ ಯಾರಿಗೂ ತರವಲ್ಲ. ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಆಗಲಿ. ಆದರೆ ಅದು ಅರ್ದ ಸತ್ಯದ ಕಡೆಯಿರಬಾರದು. ಸತ್ಯಾ ಸತ್ಯತೆ ತಿಳಿಯುತ್ತದೆ ಎರಡು ದಿನ ತಾಳ್ಮೆ ವಹಿಸಿ. ಅತಿರೇಕದ ಸುದ್ಧಿಗಳಿಗೆ ಮಹತ್ವ ನೀಡಬೇಡಿ ಎಂದು ನನ್ನ ಮನವಿ..

* * * * * * * * *

ಚಿತ್ರಕೃಪೆ : ಅಂತರ್ಜಾಲ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments