ಭೈರಪ್ಪನವರ ಆತ್ಮಕತೆ ಭಿತ್ತಿ ಓದುತ್ತ…
-ಸುಪ್ರೀತ್.ಕೆ.ಎಸ್
ಭೈರಪ್ಪನವರ ಆತ್ಮಕತೆ “ಭಿತ್ತಿ”ಯನ್ನು ಓದುತ್ತಿರುವೆ. ದಿನವಿಡೀ ಕಂಪ್ಯೂಟರ್ ಪರದೆಯನ್ನು ದಿಟ್ಟಿಸಿ ಕಣ್ಣು ದಣಿದಿದ್ದರೂ ಕೈಗಳನ್ನು ತುಂಬುವಂತೆ ಕೂರುವ ಪುಸ್ತಕವನ್ನು ಹಿಡಿದು ಪುಟಗಳೊಡನೆ ಸರಸವಾಡ್ತಾ, ಒಂದು ಬೆರಳಿನಲ್ಲಿ, ಮೂರ್ನಾಲ್ಕು ಬೆರಳುಗಳನ್ನು ಒತ್ತಿ ಪುಟಗಳನ್ನು ಸರಿಸುತ್ತಾ, ನೀಟಾಗಿ ಕೂರದ ಪುಟಗಳನ್ನು ಅಂಗೈಯಲ್ಲಿ ಇಸ್ತ್ರಿ ಮಾಡುತ್ತಾ ಓದುತ್ತಿದ್ದರೆ ಕಣ್ಣುಗಳ ದಣಿವು ಇಳಿದಂತೆ ಭಾಸವಾಗುತ್ತದೆ.
ಆತ್ಮಕತೆ ಎನ್ನುವುದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಅಷ್ಟೇ ವಿಲಕ್ಷಣವಾದದ್ದೂ ಕೂಡ. ಜೀವನದಷ್ಟು ನೀರಸವಾದ, ತರ್ಕರಹಿತವಾದ, ತಾತ್ವಿಕ ಅಂತ್ಯಗಳು ಕಾಣದ ಅಸಂಖ್ಯ ದಿಕ್ಕೆಟ್ಟ ವಿದ್ಯಮಾನಗಳನ್ನು ಸಾಹಿತ್ಯದ ರಸೋತ್ಪತ್ತಿಯ ಶೈಲಿಗೆ ಒಗ್ಗಿಸುವುದು, ಅದಕ್ಕೊಂದು ಸ್ವರೂಪ ಕೊಡುವುದು – ಈ ಪ್ರಕ್ರಿಯೆಗಳಲ್ಲಿ ನುಸುಳುವ ಸುಳ್ಳುಗಳು, ಸುಳ್ಳು ಎಂದು ಹೇಳಲಾಗದಿದ್ದರೂ ಬರೆಯುವ ಮುನ್ನ ಇದ್ದ ನೆನಪಿನ ಅರ್ಥೈಸುವಿಕೆಯನ್ನೇ ಬದಲಿಸುವಂತಹ ಉತ್ಪ್ರೇಕ್ಷೆಗಳು, ಕಲ್ಪನೆ, ಆಶಯ, ಆದರ್ಶಗಳು ಸೇರಿದ ಕೃತಿಗಳು ನಿಜಕ್ಕೂ ಆಸಕ್ತಿಕರ.
ಅಮೇರಿಕಾದ ಪ್ರಸಿದ್ಧ ಕಮಿಡಿಯನ್ ಜೆರ್ರಿ ಸೈನ್ ಫೆಲ್ಡ್ ಹಾಗೂ ಲ್ಯಾರಿ ಡೇವಿಡ್ ಸೇರಿ ನಿರ್ಮಿಸಿದ ‘ಸೈನ್ ಫೆಲ್ಡ್’ ಹೆಸರಿನ ಸಿಟ್ ಕಾಮ್ ನ ಒಂದು ಎಪಿಸೋಡ್ ನಲ್ಲಿ ಒಂದು ಸನ್ನಿವೇಶವಿದೆ. ಪಾತ್ರಗಳೇನು ಮುಖ್ಯವಲ್ಲ. ಒಂದು ಪಾತ್ರ ಬಂದು “ಜೆರ್ರಿ ನಿನಗೆ ಗೊತ್ತಾ, ನಿನ್ನ ಅಂಕಲ್ ಆತ್ಮಕತೆ ಬರೆಯುತ್ತಿದ್ದಾರೆ” ಎಂದು ಹೇಳುತ್ತಾಳೆ. ಗಂಡ, “ಅದು ಪೂರ್ತಿ ನನ್ನ ಜೀವನದ ಘಟನೆಗಳನ್ನು ಆಧರಿಸಿರುವಂಥದ್ದು” ಎನ್ನುತ್ತಾನೆ. ಮತ್ತಷ್ಟು ಓದು