ಅಟಲ್ ಜಿ ನಮಗೆಷ್ಟು ಗೊತ್ತು?
-ನಾಗರಾಜ್ ಎಂ ಎಂ
ಸ್ನೇಹಿತರೇ ಹೇಗಿದ್ದೀರಿ? ಇವತ್ತು ಮತ್ತೆ ಸ್ವಲ್ಪ ಟೈಮ್ ಮಾಡ್ಕೊಳಿ, ಏನಾದ್ರೂ ಹಾಗೆ ಮಾತಾಡೋಣ ಅಲ್ವಾ? ನೀವೇ ನೋಡಿದ್ದೀರಲ್ಲ ಇತ್ತೀಚೆಗೆ ಟಿವಿ ಚಾನಲ್ ಗಳನ್ನ ನೋಡೋಕೆ ಆಗದೆ ಇರೋವಷ್ಟರಮಟ್ಟಿಗೆ ನಮ್ಮ ಮಾನ್ಯ ಮಂತ್ರಿಗಳು, ರಾಜಕಾರಣಿಗಳು ಹೊಲಸು ಮಾಡೋದನ್ನ, ಇನ್ನೂ ಕೆಲವರು ಅದರ ಪರ ವಿರೋಧ ಮಾತಾಡಿ ಮಜಾ ಕೊಡೋದನ್ನ!! ಅಲ್ವೇ? ಆದರೆ ನಿಷ್ಟಾವಂತರಾಗಿ ದೇಶಕ್ಕಾಗಿ ದೇಶದ ಪ್ರಗತಿಗಾಗಿ ಹೋರಾಡಿದ ಎಷ್ಟೋ ಜನರಿದ್ದಾರೆ ಅವರಲ್ಲಿ ಒಬ್ಬರು ಹಾಗೂ ಮುಖ್ಯವಾದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು…….. ಅವರ ಬಗ್ಗೆ ನಮಗೆ ಎಷ್ಟು ಗೊತ್ತು? ತಿಳಿಯುವ ಸಣ್ಣ ಪ್ರಯತ್ನ ಮಾಡೋಣ ಬನ್ನಿ.
ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಅದು 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ, ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು……. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….. ನಿಮಗೆ ಗೊತ್ತ? ಭಾರತದ ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!
ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.