ಮಂಕು ತಿಮ್ಮನ ಕಗ್ಗ – ರಸಧಾರೆ (೧)
(ಡಿ.ವಿ ಗುಂಡಪ್ಪನವರ ಕಗ್ಗದ ರಸಧಾರೆಯನ್ನ ಶ್ರೀ ರವಿ ತಿರುಮಲೈ ಅವರು ನಿರಂತರವಾಗಿ ಹರಿಸಲಿದ್ದಾರೆ ನಿಲುಮೆಯಲ್ಲಿ)
– ರವಿ ತಿರುಮಲೈ
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ //
ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.
ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ.
ಕನ್ನಡ ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ
– ಓಂ ಶಿವಪ್ರಕಾಶ್
