ಸಂಸ್ಕೃತಿ ಸಂಕಥನ – 25 – ಆನಂದದ ಮಾರ್ಗ ಅಧ್ಯಾತ್ಮ
-ರಮಾನಂದ ಐನಕೈ
ಭಾರತೀಯರ ಅಧ್ಯಾತ್ಮ ಒಂದು ಅದ್ಭುತ ವಿಜ್ಞಾನ. ಭಾರತೀಯ ಪ್ರಗತಿಪರ ಚಿಂತಕರು ಹಾಗೂ ಮನೋಭಾವದವರೆಲ್ಲ ಸಂಪ್ರದಾಯಕ್ಕೆ ಸಂಬಂಧಪಟ್ಟ ಸಂಗತಿಗಳನ್ನೆಲ್ಲ ಮೌಢ್ಯ ಎಂದು ಪರಿಗಣಿಸುತ್ತಾರೆ. ಅಚಿದರೆ ಅವರ ಪ್ರಕಾರ ಬ್ರಿಟಿಶ್ ವಸಾಹತುಶಾಹಿಯ ನಂತರವೇ ಈ ದೇಶದಲ್ಲಿ ಆಧುನಿಕತೆ ಬಂದಿದೆ. ನಾಗರಿಕತೆ ಬೆಳೆದಿದೆ. ಮನುಷ್ಯನ ಚಿಂತನಾಕ್ರಮ ಬದಲಾಗಿದೆ ಇತ್ಯಾದಿ ಇತ್ಯಾದಿ. ಹಾಗಾದರೆ ಕಳೆದ ಮೂರು ಸಾವಿರ ವರ್ಷಗಳಿಂದ ನಮ್ಮ ಪೂರ್ವಜರು ಏನು ಮಾಡಿದರು? ಏನನ್ನೂ ಮಾಡಿಲ್ಲವೇ? ಹಾಗಿದ್ದರೆ ಭಾರತೀಯ ಸಂಸ್ಕೃತಿ ಹೇಗೆ ಉಳಿದುಕೊಂಡು ಬಂತು? ಪಾಶ್ಚಾತ್ಯರಿಗೆ ಈ ಸಂಸ್ಕೃತಿಯ ಕುರಿತು ಏಕಿಷ್ಟು ಕುತೂಹಲ? ಇಂತಹ ನೂರಾರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಅವರಲ್ಲಿಲ್ಲ. ಹೆಚ್ಚೆಂದರೆ ಮೊಂಡುವಾದ ಮಾಡಬಹುದು ಅಷ್ಟೆ. ನಮ್ಮ ಪೂರ್ವಜರು ಸುಮ್ಮನೆ ಆಯಸ್ಸು ಕಳೆಯುತ್ತ ಬಂದಿಲ್ಲ. ಮನುಷ್ಯನ ಆನಂದ ಹಾಗೂ ಆರೋಗ್ಯದ ಬಗ್ಗೆ ಆಳವಾದ ಚಿಂತನೆ ಮಾಡಿದ್ದಾರೆ. ಇದಕ್ಕಾಗಿ ಸಾವಿರಾರು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಅದೇ ಅಧ್ಯಾತ್ಮ.
ಲಿಂಗಭೇದವಿಲ್ಲ, ವರ್ಣಭೇದವಿಲ್ಲ, ಬಡವ -ಶ್ರೀಮಂತ ಎಂಬ ತರತಮವಿಲ್ಲ. ಎಲ್ಲರೂ ಈ ಮಾರ್ಗದಲ್ಲಿ ಹೋಗಬಹುದು. ಆ ಮೂಲಕ ಆನಂದ ಪಡೆಯಬಹುದು. ಆನಂದ ಎಂದರೇನು? ಅದು ಎಲ್ಲಿ ಸಿಗುತ್ತದೆ? ಹೇಗೆ ಸಿಗುತ್ತದೆ? ಯಾರಿಗೂ ಗೊತ್ತಿಲ್ಲ. ಆದರೆ ಆನಂದವನ್ನು ಪಡೆಯಬಹುದು. ಅಧ್ಯಾತ್ಮದ ದಾರಿಯ ಮೂಲಕ ಪ್ರತಿಯೊಬ್ಬನೂ ಆನಂದ ಪಡೆಯಬಹುದು. ಅಧ್ಯಾತ್ಮ ಇಂತಹ ಸಹಸ್ರ ದಾರಿಗಳನ್ನು ನಮ್ಮೆದುರು ತೆರೆದಿಟ್ಟಿದೆ. ಅಧ್ಯಾತ್ಮದ ಮೂಲಕ ಆನಂದ ಪಡೆಯಬಹುದು. ಆರೋಗ್ಯ ಪಡೆಯಬಹುದು, ನಮ್ಮೊಳಗಿನ ಜ್ಞಾನವನ್ನು ಉದ್ದೀಪನಗೊಳಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಭಾರತೀಯ ಸಮಾಜದ ಮಾನಸಿಕ ಭದ್ರತೆಯೇ ಈ ಅಧ್ಯಾತ್ಮದ ತಳದಲ್ಲಿದೆ.
ಆನಂದ ಅಂದರೆ ಒಂದು ಅನೂಹ್ಯ ಅನುಭವ. ಈ ಅನುಭವಕ್ಕೆ ಬಣ್ಣ, ರುಚಿ, ವಾಸನೆ ಅಥವಾ ವರ್ಣನೆ ಇಲ್ಲ. ಹಾಗಾಗೇ ಆನಂದಕ್ಕೆ ವ್ಯಾಖ್ಯೆ ಇಲ್ಲ. ಇದು ದೇವರು ಸೃಷ್ಟಿಸಿದ್ದೂ ಅಲ್ಲ. ಆನಂದ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಾವು ಪಡೆದ ಆನಂದವನ್ನು ಇನ್ನೊಬ್ಬರಿಗೆ ವಣರ್ಿಸಲಿಕ್ಕೂ ಸಾಧ್ಯವಿಲ್ಲ.ಒಂದೊಮ್ಮೆ ವಣರ್ಿಸಿದರೂ ಅದು ಅಪೂರ್ಣ. ಹಾಗಾದರೆ ಆನಂದ ಅಂದರೆ ಏನು? ‘ನಾನು’ ಎಂಬ ನಮ್ಮ ಗ್ರಹಿಕೆಗಳನ್ನೆಲ್ಲ ಮೀರಿ ನಮ್ಮೊಳಗಿನ ನಮ್ಮನ್ನು ಕಂಡುಕೊಳ್ಳುವುದೇ ಆನಂದ. ಒಬ್ಬ ವ್ಯಕ್ತಿಗೆ ಸುತ್ತಲಿನ ಹತ್ತು ವ್ಯಕ್ತಿಗಳು ಹತ್ತು ತೆರನಾಗಿ ಕಾಣುತ್ತಿರುತ್ತಾರೆ. ಹಾಗೆ ಕಾಣುತ್ತಿರುವುದು ಆ ಒಬ್ಬ ವ್ಯಕ್ತಿಯ ತೊಂದರೆಯೇ ವಿನಾ ಹತ್ತು ವ್ಯಕ್ತಿಗಳದ್ದಲ್ಲ. ಹಾಗಾಗಿ ಆ ವ್ಯಕ್ತಿ ಇಷ್ಟೆಲ್ಲಾ ತೊಂದರೆಗಳಿಂದ ಮುಕ್ತನಾಗಬೇಕಾದರೆ ಆತನೇ ರಿಪೇರಿ ಆಗಬೇಕು. ಉಳಿದ ಹತ್ತು ಜನರನ್ನು ರಿಪೇರಿ ಮಾಡುವುದರಿಂದ ಇದು ಸಾಧ್ಯವಿಲ್ಲ. ಆ ತೊಂದರೆಯನ್ನು ನಿವಾರಿಸಿಕೊಂಡಾಗಲೇ ನಿಜವಾದ ಆನಂದ. ಅದಕ್ಕೆ ಅಧ್ಯಾತ್ಮ ದಾರಿ ತೋರಿಸುತ್ತದೆ. ಇದೊಂದು ಪುಟ್ಟ ಉದಾಹರಣೆ ಅಷ್ಟೆ.
ಸುಖ ಅಂದರೂ ಆನಂದ ಅಲ್ಲವೇ? ನಮಗಿರುವ ತೊಂದರೆ ಅಂದರೆ ಇದೇ. ಸುಖವನ್ನು ನಾವು ಆನಂದ ಎಂದು ಗ್ರಹಿಸುತ್ತೇವೆ. ಸುಖ ಅನ್ನುವುದು ಮನಸ್ಸಿಗೆ ಸಂಬಂಧಪಟ್ಟ ಸಂಗತಿ. ಆನಂದ ಅಂದರೆ ಹೃದಯಕ್ಕೆ ಸಂಬಂಧಿಸಿದ್ದು. ಒಂದು ಮೆತ್ತನೆಯ ಸೋಫಾದಲ್ಲಿ ಕುಳಿತು ಸುಖ ಪಡೆಯಬಹುದು. ಆದರೆ ಅಲ್ಲಿ ಆನಂದ ಸಿಕ್ಕೇಬಿಡುತ್ತದೆ ಎಂಬ ಖಾತ್ರಿ ಇಲ್ಲ. ಅಂತೆಯೇ ಮುಳ್ಳಿನ ಹಾಸಿಗೆಯ ಮೇಲೆ ಕುಳಿತು ಆನಂದ ಪಡೆಯಬಹುದು. ಆದರೆ ಅಲ್ಲಿ ಸುಖ ಸಿಗುವುದು ಕಷ್ಟ. ನಮ್ಮ ಪೂರ್ವಜರು ಈ ವ್ಯತ್ಯಾಸವನ್ನು ಚೆನ್ನಾಗಿ ಕಂಡುಕೊಂಡಿದ್ದರು.
ಸುಖದ ಆಧುನಿಕ ಅರ್ಥ ಬೇರೆತೆರನಾಗಿದೆ. ಮನುಷ್ಯ ಭೌತಿಕ ಸ್ಥಿತಿಗತಿಗಳನ್ನು ಹೊಂದುವುದೇ ಸುಖ ಎಂದುಕೊಂಡಿದ್ದೇವೆ. ಐಹಿಕ ಸವಲತ್ತುಗಳನ್ನು ವೃದ್ಧಿಪಡಿಸಿಕೊಳ್ಳುವುದೇ ಸುಖ, ಅಭಿವೃದ್ಧಿಪರ ಕನಸಾಗಲೀ, ಕಲ್ಯಾಣರಾಜ್ಯದ ಕಲ್ಪನೆಯಾಗಲೀ, ಈ ಹಿನ್ನೆಲೆಯಲ್ಲಿ ಸಮಾಜಬದಲಾಯಿಸಬೇಕೆಂಬ ಚಳುವಳಿ/ಹೋರಾಟವಾಗಲಿ ಎಲ್ಲವೂ ಸ್ಥೂಲವಾಗಿ ಸುಖ ವನ್ನು ಆಧರಿಸಿಕೊಂಡಿದ್ದೆ. ಇಂಥ ಸುಖಗಳು ನೆಮ್ಮದಿಯ ಒಳನೋಟಗಳನ್ನು ಹೊಂದಿರಲಾರವು.
ಸುಖ ಅನುಭವಕ್ಕೆ ಬರಬೇಕಾದರೆ ಅದಕ್ಕೆ ಪಾರಂಪರಿಕವಾಗಿ ಹಲವು ಸಂಗತಿಗಳು ಇರಲೇ ಬೇಕಾಗುತ್ತದೆ. ಆದರೆ ಆನಂದ ಅನುಭವಕ್ಕೆ ಬರಬೇಕಾದರೆ ಯಾವುದೂ ಇರಬಾರದು. ನಮ್ಮ ಐಹಿಕ ಸಂಗತಿಗಳನ್ನು ಮರೆಯುವುದೇ ಆನಂದ ಅಥವಾ ನಮ್ಮ ಯೋಚನಾ ಪ್ರಪಂಚವನ್ನು ನಿಸ್ತಬ್ಧ ವಾಗಿಸಿಕೊಳ್ಳುವುದೇ ಆನಂದ. ಸಕಲ ಸವಲತ್ತನ್ನೂ ಹೊಂದಿದ ಒಂದು ಒಳ್ಳೆಯ ಮನೆ ಸುಖ ನೀಡುತ್ತದೆ. ಆದರೆ ಆನಂದ ಕೊಡಲಾರದು. ಅಲ್ಲಿ ಆನಂದ ಪಡೆಯಬೇಕಾದರೆ ವೈಭವದ ಮನೆಯಲ್ಲಿದ್ದೂ ಇಲ್ಲ ದಂತಹ ಸ್ಥಿತಿ ನಿಮರ್ಾಣ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಆನಂದ ಪಡೆಯುವವರು ಸುಲಭವಾಗಿ ವಿರಕ್ತಿಮಾರ್ಗವನ್ನು ಅನುಸರಿಸುತ್ತಿದ್ದರು. ಆದರೆ ಆನಂದ ಪಡೆಯಲು ವಿರಕ್ತಿ ಮಾರ್ಗದಲ್ಲೇ ಹೋಗಬೇಕೆಂಬ ಯಾವ ನಿರ್ಬಂಧವಿಲ್ಲ. ಸಂಸಾರಿಯಾಗಿದ್ದೂ ಆನಂದ ಪಡೆಯಬಹುದು.
ಆನಂದ ಅನ್ನುವುದು ಸಂಪೂರ್ಣ ಸಂತೃಪ್ತಿಯ ಸ್ಥಿತಿ. ಅಂದರೆ ಈ ಸ್ಥಿತಿಯನ್ನು ತಲುಪಲು ಎಷ್ಟು ಜನರಿಗೆ ಸಾಧ್ಯವಿದೆ? ಯೋಗ, ಧ್ಯಾನ, ಉಪಾಸನೆ ಮುಂತಾಗಿ ಹಲವು ಮಾರ್ಗಗಳನ್ನು ಸೃಷ್ಟಿಸಿ ನಮ್ಮ ಅಧ್ಯಾತ್ಮ ಎಲ್ಲರಿಗೂ ಆನಂದ ಪಡೆಯುವ ಸಾಧ್ಯತೆಯನ್ನು ಎದುರಿಗಿಟ್ಟಿದೆ. ಇಂದಿಗೂ ಕೂಡಾ ಬಹುತೇಕ ಜನ ಯೋಗ, ಧ್ಯಾನ, ಉಪಾಸನೆಯನ್ನು ಆರೋಗ್ಯದ ದೃಷ್ಟಿಯಿಂದಲೇ ಮಾಡುತ್ತಾರೆಯೇ ವಿನಾ ಆನಂದಕ್ಕಲ್ಲ. ಏಕೆಂದರೆ ಎಲ್ಲರಿಗೂ ಆರೋಗ್ಯ ಅಂದರೆ ಏನೆಂಬುದು ಗೊತ್ತಿದೆ. ಆದರೆ ‘ಆನಂದ’ ಅಂದರೆ ಏನೆಂದು ಗೊತ್ತಿಲ್ಲ. ಅಧ್ಯಾತ್ಮ ಹೇಳುತ್ತದೆ ‘ಆನಂದ’ವೇ ‘ಆರೋಗ್ಯ’.
ಆಧುನಿಕ ಯುಗದಲ್ಲಿ ಇದನ್ನೆಲ್ಲ ಸರಳಗೊಳಿಸುತ್ತ ಬಂದರು. ಆನಂದ ಅಂದರೆ ನಗುನಗುತ್ತ ಇರುವುದು. ಆದ್ದರಿಂದ ನಗುನಗುತ್ತ ಇದ್ದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸರಳ ವ್ಯಾಖ್ಯಾನ ಹುಟ್ಟಿಕೊಂಡಿತು. ಇದರ ಹಿಂದೆ ‘ಲಾಫಿಂಗ್ ಕ್ಲಾಸ್’ಗಳು ಶುರುವಾದವು. ನಗರಗಳಲ್ಲಿ ದೊಡ್ಡ ದೊಡ್ಡ ಹಾಲ್ಗಳಲ್ಲಿ ಇಂತಹ ನೂರಾರು ಜನ ಚಿತ್ರವಿಚಿತ್ರವಾಗಿ ನಗುತ್ತಿರುವುದನ್ನು ನಾವು ಕಾಣುತ್ತೇವೆ. ಇವರಿಗೆಲ್ಲ ನಿಜ ಜೀವನದಲ್ಲಿ ನಗದೆ ಮುಖ ಗಂಟಿಕ್ಕಿಕೊಂಡು ಕ್ಲಾಸಿಗೆ ಹೋಗಿ ನಗುವ ಪರಿಸ್ಥಿತಿ ಏಕುಂಟಾಯಿತು? ಈ ರೀತಿ ನಗುವುದರ ಮೂಲಕ ಅವರು ನಿಜಕ್ಕೂ ಆನಂದ ಪಡೆದಿರುತ್ತಾರೆಯೇ? ಕೊಳ್ಳುಬಾಕ ಸಂಸ್ಕೃತಿಯಿಂದ ಹುಟ್ಟಿದ ಮನೋವಿಜ್ಞಾನ ಇದು. ಅಂದರೆ ಎಲ್ಲವನ್ನೂ ಹಣದಿಂದ ಪಡೆಯಬಹುದೆಂಬ ನಂಬಿಕೆ ಅಥವಾ ಅಹಂಕಾರ. ಲಾಫಿಂಗ್ ಕ್ಲಾಸ್ಗಳು ಇಂಥ ಆನಂದದ ಮಾರಾಟ ಮಳಿಗೆಗಳು. ಅಂದರೆ ‘ಆನಂದ’ವನ್ನು ಕೂಡಾ ಬೇರೆಯದರಿಂದ ಪಡೆಯುವುದು ಎಂದೇ ಎಲ್ಲರೂ ನಂಬಿದ್ದಾರೆ. ಈ ನಂಬಿಕೆ ವಸಾಹತುಶಾಹಿ ಪ್ರಜ್ಞೆಯಿಂದ ಬಂದದ್ದು.
ನಿತ್ಯ ಜೀವನದಲ್ಲಿ ನಾವು ಅನೇಕ ವಿಚಿತ್ರಗಳನ್ನು ಕಾಣುತ್ತೇವೆ. ಸುಖ ವೈಭೋಗದಲ್ಲಿದ್ದ ಜನರೆಲ್ಲ ವಿನಾಕಾರಣ ಚಡಪಡಿಸುತ್ತಿರುತ್ತಾರೆ. ನೆಮ್ಮದಿಯಿಲ್ಲದವರಂತೆ ಕಾಣುತ್ತಾರೆ. ಅಂದರೆ ಅವರಿಗೆ ‘ಸುಖ’ ಇದೆ ‘ನೆಮ್ಮದಿ’ ಇಲ್ಲ. ನೆಮ್ಮದಿಯೇಕಿಲ್ಲವೆಂದರೆ ಅವರಿಗೆ ಆನಂದ ಸಿಗುತ್ತಿಲ್ಲ. ಸುಖದ ಕಲ್ಪನೆ ಬಂದಿದ್ದೇ ನಮ್ಮ ಆಧುನಿಕತೆಯಿಂದ ಅಥವಾ ನಾಗರಿಕತೆಯಿಂದ. ಬೇಕಾದ ವಸ್ತುಗಳನೆಲ್ಲ ಹೊಂದಿದ್ದರೆ ಅದೇ ಸುಖ. ಆದರೆ ಅನೇಕ ಜನರು ತಮಗೆ ಬೇಕಾದ/ಬೇಡವಾದ ಎಲ್ಲ ವಸ್ತುಗಳನ್ನು ಹೊಂದಿರುತ್ತಾರೆ. ಆದರೆ ಅವರು ಸುಖವಾಗಿದ್ದಂತೆ ಕಾಣುವುದಿಲ್ಲ ಎಂದು ಗುರುತಿಸುತ್ತೇವೆ. ಅದರ ಅರ್ಥ ಅವರು ಸುಖದ ವಿಚಾರದಲ್ಲಿ ಸರಿಯಾಗೇ ಇದ್ದಾರೆ. ಆದರೆ ಆನಂದದ ವಿಚಾರದಲ್ಲಿ ಕಷ್ಟಪಡುತ್ತಿದ್ದಾರೆ. ಒಬ್ಬ ವ್ಯಕ್ತಿಯ ಸುಖವನ್ನು ಅವನ ವೇಷಭೂಷಣ ಹಾಗೂ ಭೌತಿಕ ಸಂಗತಿಗಳು ಹೇಳುತ್ತಿವೆ. ಆದರೆ ಒಬ್ಬ ವ್ಯಕ್ತಿಯ ಆನಂದವನ್ನು ಅವನ ಮುಖದ ಭಾವನೆ ಹೇಳುತ್ತದೆ. ಅಂದರೆ ಆನಂದ ಅನ್ನುವುದು ಹೃದಯದಲ್ಲಿ ಹುಟ್ಟುವಂತಹದ್ದು.
ನಮ್ಮಲ್ಲಿ ಸುಖ ಅನ್ನುವುದೇ ಹೆಚ್ಚು ಪ್ರಾಮುಖ್ಯತೆ ಪಡೆದದ್ದು ವಸಾಹತುಶಾಹಿ ಪ್ರಭಾವದಿಂದ. ಐರೋಪ್ಯರು ಗಾಡ್ನನ್ನು ನಂಬಿದವರು. ಈ ಮನುಷ್ಯನನ್ನು ಸೃಷ್ಟಿಸಿದವನೇ ಗಾಡ್. ಹಾಗೂ ಗಾಡ್ ಮನುಷ್ಯ ನೊಳಗೆ ಸುಖ-ದುಃಖ ಎರಡನ್ನೂ ತುಂಬಿದ್ದಾನೆ. ಅದನ್ನು ಅನುಭವಿಸಲೇಬೇಕು. ಆದ್ದರಿಂದ ಸುಖ ಅನ್ನುವುದು ಇರುವುದೇ ಅನುಭವಿಸಲಿಕ್ಕೆ. ಹಾಗಾಗಿ ಸುಖಕ್ಕೆ ಸಂಬಂಧಿಸಿದ ಸಕಲ ಸೌಕರ್ಯ ಗಳನ್ನು ಕಂಡುಹಿಡಿದರು. ಪರಿಪರಿಯಾಗಿ ಈ ಸೌಕರ್ಯಗಳನ್ನು ಅನುಭವಿಸುವ ಮಾರ್ಗವನ್ನು ಕಂಡುಹಿಡಿದರು. ಅದು ಅವರ ಜೊತೆಗೆ ನಮ್ಮಲ್ಲೂ ಪ್ರಭಾವ ಬೀರಿತು. ಹಾಗಾಗೇ ನಾವಿಂದು ಸುಖದ ದಾಸರಾಗಿದ್ದೇವೆ.
ಆದರೆ ನಮ್ಮಲ್ಲಿ ಆನಂದದ ಮಾರ್ಗವನ್ನು ದೇವರು ಕಂಡುಹಿಡಿದಿದ್ದಲ್ಲ. ಮನುಷ್ಯರೇ ಕಂಡು ಹಿಡಿದಿದ್ದು. ನಮ್ಮ ಪೂರ್ವಜರೇ ಕಂಡುಹಿಡಿದಿದ್ದು. ಹಾಗೂ ಎಲ್ಲರೂ ಕಡ್ಡಾಯವಾಗಿ ಆನಂದವನ್ನು ಪಡೆಯಲೇಬೇಕು ಎಂಬ ನಿಯಮಾವಳಿಗಳಿಲ್ಲ. ಆನಂದ ಬೇಕಾದವರು ಮಾತ್ರ ಪಡೆಯಬಹುದು. ಆದರೆ ಆನಂದ ಪಡೆಯುವ ಮಾರ್ಗ ಎಲ್ಲರಿಗೂ ಮುಕ್ತವಾಗಿದೆ. ಆನಂದವನ್ನು ಪಡೆಯಲು ದುಡ್ಡು ಬೇಡ. ದೇಹದಂಡನೆ ಬೇಕು. ಏಕಾಗ್ರತೆ ಬೇಕು. ಆದರೆ ಸುಖವನ್ನು ಪಡೆಯಲು ಮುಖ್ಯವಾಗಿ ದುಡ್ಡು ಬೇಕು. ಆಧುನಿಕತೆಯಲ್ಲಿ ದೇಹದಂಡನೆ ಯಾರಿಗೂ ಬೇಡ. ದುಡ್ಡಿಗೆ ಆನಂದ ಸಿಗಬಹುದಾದರೆ ಎಲ್ಲರಿಗೂ ಬೇಕು.
ಆನಂದ ಎಂಬುದು ನಿರಾಕಾರವಾದದ್ದೇ ಮುಖ್ಯ ಸಮಸ್ಯೆ. ಪಾಶ್ಚಾತ್ಯ ವೈಜ್ಞಾನಿಕ ದೃಷ್ಟಿಕೋನದಿಂದ ನಮಗೆ ಕಣ್ಣಿಗೆ ಕಾಣುವುದು ಮಾತ್ರ ಸತ್ಯ. ಆನಂದ ಎನ್ನುವುದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅನುಭವಕ್ಕೆ ತಂದುಕೊಳ್ಳುವುದೂ ಕಷ್ಟ. ಆದ್ದರಿಂದ ಅದು ಸುಳ್ಳು. ಸುಖ ಅಂದರೆ ಕಾಣುತ್ತದೆ ಹಾಗೂ ಅನುಭವಕ್ಕೆ ಬರುತ್ತದೆ. ಆದ್ದರಿಂದ ಅದು ಸತ್ಯ. ಈ ವಾತಾವರಣದಲ್ಲಿ ಆನಂದವನ್ನು ಕಣ್ಣಿಗೆ ಕಾಣಿಸುವಂತೆ ಸರಳಗೊಳಿಸಲು ಅನೇಕ ಸಂತರು, ಬಾಬಾಗಳು ತಯಾರಾದರು. ಅವರು ಆನಂದವನ್ನು ಕಣ್ಣಿಗೆ ಕಾಣಿಸಲು ಲಾಗ ಹಾಕುತ್ತಿದ್ದಾರೆ. ಜನಸಾಮಾನ್ಯರಿಗೆ ಅದು ರೋಚಕವಾಗಿ ಕಾಣುತ್ತದೆ. ಅಂತಹವರನ್ನು ನಂಬುತ್ತಾರೆ. ಅಷ್ಟರಲ್ಲಿ ಬಾಬಾಗಳೇ ನಾಪತ್ತೆಯಾಗುತ್ತಾರೆ. ಅಂದರೆ ಇವ್ಯಾವುದೂ ಮೋಸದ ವ್ಯವಹಾರ ಅಂತಲ್ಲ. ‘ಉದರ ನಿಮಿತ್ತಂ ಬಹುಕೃತ ವೇಷಂ’. ಪರಿಸ್ಥಿತಿಯ ಲಾಭ ಪಡೆಯಲು ಹಿಡಿಯುವ ಹೊಸ ಹೊಸ ಮಾರ್ಗಗಳು.
ಆದ್ದರಿಂದ ‘ಆನಂದ’ ಅನ್ನುವುದು ಎಲ್ಲೂ ಇಲ್ಲ. ನಮ್ಮಲ್ಲೇ ಇದೆ. ನಾವೇ ಅದನ್ನು ಕಂಡುಕೊಳ್ಳಬೇಕು. ಅದಕ್ಕೆ ಬೇರೆಯವರ ಸಹಾಯದ ಅಗತ್ಯವೂ ಇಲ್ಲ. ನಾವು ನಿಂತಿರುವ ಎರಡು ಅಡಿ ಅಗಲದ ನೆಲವೇ ಸಾಕು. ಅಲ್ಲೇ ಕೂಡ್ರುವಾ. ಕಣ್ಣು ಮುಚ್ಚಿ ಮನಸ್ಸಿನ ವಿಕಾರಗಳನ್ನು ಮರೆಯಲು ಪ್ರಯತ್ನಿಸುವಾ. ಇಂಚಿಂಚೇ ಜಾಗ ಖಾಲಿಯಾಗುತ್ತ ಬಂದಹಾಗೆ ಅಲ್ಲಿ ಆನಂದ ಆವರಿಸುತ್ತದೆ. ಇದು ಸಾಧ್ಯವಾದರೆ ಎಲ್ಲವೂ ಆನಂದಮಯ.
* * * * * * *
ಚಿತ್ರಕೃಪೆ :- divyajivan.org




