ಮಂಕು ತಿಮ್ಮನ ಕಗ್ಗ – ರಸಧಾರೆ (೧)
(ಡಿ.ವಿ ಗುಂಡಪ್ಪನವರ ಕಗ್ಗದ ರಸಧಾರೆಯನ್ನ ಶ್ರೀ ರವಿ ತಿರುಮಲೈ ಅವರು ನಿರಂತರವಾಗಿ ಹರಿಸಲಿದ್ದಾರೆ ನಿಲುಮೆಯಲ್ಲಿ)
– ರವಿ ತಿರುಮಲೈ
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ //
ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.
ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ.
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವುಸುವರದರಂತೆ ಕಾಣುವನು
ಶಿವ ಶರಣರ ಮಾತು. ಹೀಗೆ ಒಂದೇ ಸತ್ಯವನ್ನು ಎಲ್ಲ ಮಹಾ ಮಹಿಮರೂ ಹೇಳಿದ್ದರೆ ಅಲ್ಲವೇ?





ನಿಲುಮೆ ತಂಡದವರಿಗೆ ಮತ್ತು ಲೇಖಕರಾದಂತಹ ರವಿ ತಿರುಮಲೈ ಅವರಿಗೆ ಅಭಿನಂದನೆಗಳು, ಮತ್ತು ಇಂತಹ ಒಳ್ಳೆಯ ವಿಷಯಗಳನ್ನು ಹಂಚುತ್ತಿರುವುದಕ್ಕೆ ಧನ್ಯವಾದಗಳು.
ಮಂಕುತಿಮ್ಮನ ಕಗ್ಗ, ಮನುಜರು ಅರ್ಥ ಮಾಡಿಕೊಂಡರೆ ತಪ್ಪುಗಳು ಕಡಿಮೆ ಆಗುತ್ತದೆ, ಮನುಜ ದುರಾಸೆಯಿಂದ ದೂರ ಬರುತ್ತಾನೆ,ಒಳ್ಳೆಯ ಸಂದೇಶಗಳಿರುವ ಪುಟ್ಟ ಪುಟ್ಟ ಪದ್ಯಗಳಿವು. ನಾನಂತೂ ಪ್ರತಿದಿನ ಬಿಡದೆ ಓದುವೆ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
Nice way of explaining “Mankutimmana Kagga!” One question: What is Aakasha Gange in English? I know Soura Vyuha (or Soura Mandala) is “Solar System,” and “Ksheera Patha” is “Milky Way”, and “Vishwa” is “Universe.” So, what about Aakasha Gange? Just curious! 🙂
Never mind. Got it. Aakasha Gange is “Galaxy” in English.