ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 17, 2012

1

ಕನ್ನಡ ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ

‍ನಿಲುಮೆ ಮೂಲಕ

– ಓಂ ಶಿವಪ್ರಕಾಶ್

ಆತ್ಮೀಯ ಕನ್ನಡ ವಿಕಿಪೀಡಿಯ ಗೆಳೆಯರೆ,

ಈ ಸಂದೇಶ ಕನ್ನಡ ವಿಕಿಪೀಡಿಯದಲ್ಲಿನ ಲೇಖನಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಸಲುವಾಗಿ ಪ್ರಾರಂಭಿಸಲಾಗುತ್ತಿರುವ ಒಂದು ಮುಖ್ಯ ಯೋಜನೆಯ ಬಗ್ಗೆ. 

ಸುಮಾರು ೨೦೧೦ – ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ  ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.  

ಪ್ರಾರಂಭದಲ್ಲಿ, ೧೨೦೦ ಲೇಖನಗಳು ಇರಬಹುದು ಎಂದು ಕೊಂಡಿದ್ದೆವು – ಆದರೆ ಈ ಸಂಖ್ಯೆ ಸುಮಾರು ೨೦೦೦ ಲೇಖನಗಳನ್ನು ಮುಟ್ಟಬಹುದು ಎನಿಸುತ್ತಿದೆ. ಇದರರ್ಥ ಕನ್ನಡ ವಿಕಿಪೀಡಿಯಾದಲ್ಲಿ ಈಗಿರುವ ೨೦ ಪ್ರತಿಶತ ಲೇಖನಗಳು ಗೂಗಲ್‌ನ ಯೋಜನೆಯಿಂದಾಗಿ ಸೇರ್ಪಡೆ ಆಗಿವೆ ಎಂದಾಯ್ತು. 

ನಮ್ಮಲ್ಲಿ ಕೆಲವು ಕನ್ನಡ ವಿಕಿಪೀಡಿಗರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸುವುದು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಲೇಖನಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯಕ್ಕೆ ಒಂದಿಷ್ಟು ಉತ್ತಮ ಮಾಹಿತಿ ಕಲೆ ಹಾಕುವ ಉದ್ದೇಶ ನಮ್ಮದು – ಮತ್ತು ವಿಕಿಯೋಜನೆ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ ಯ ಪ್ರಾರಂಭವನ್ನು ಈ ಮೂಲಕ ಪ್ರಕಟಿಸಲು ಹರ್ಷಿಸುತ್ತೇವೆ. 

ಈ ಯೋಜನೆಯ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳನ್ನು, ಚರ್ಚೆಗಳನ್ನು ಹಮ್ಮಿಕೊಂಡಿದ್ದೆವು ಮತ್ತು ವಾರದ ಹಿಂದಷ್ತೇ ಒಂದು ಐ.‌ಆರ್.ಸಿ ಚರ್ಚೆ ಈ ಯೋಜನೆಯ ಬಗ್ಗೆ ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್ #wikipedia-kn ನಲ್ಲಿ ನೆಡೆಯಿತು. ಯೋಜನಾ ಪುಟ ಹಾಗೂ ಐ.‌ಆರ್.ಸಿ ಯ ಚರ್ಚೆಗಳಲ್ಲಿ ನಾವೆಲ್ಲರೂ ಒಪ್ಪಿಗೆ ಸೂಚಿಸಿ, ನಿರ್ಣಯಕ್ಕೆ ಬಂದ  ಕೆಲವು ಅಂಶಗಳು ಇಲ್ಲಿವೆ. 

೧. ನಮ್ಮ ಕೆಲಸಕ್ಕೆ ಒಂದು ನಿಶ್ಚಿತ ರೂಪ ಕೊಡಲು, ಈ ಯೋಜನೆಯನ್ನು  ೧೪ ಸಣ್ಣ ಕಾರ್ಯಗಳಾಗಿ ವಿಂಗಡಿಸಲಾಗಿದೆ. 
೨.  ಲೇಖನಗಳಲ್ಲಿ ಕಂಡುಬರುವ ಕೆಂಪುಬಣ್ಣದ ಮುರಿದ ಕೊಂಡಿಗಳನ್ನು ಈಗಲೇ ತೆಗೆಯುವುದು ಬೇಡ ಎಂದು ನಿರ್ಧರಿಸಲಾಗಿದೆ ( ಬೇರೆ ಸಂವರ್ಧನಾ ಯೋಜನೆಗಳನ್ನು ಹೊರತುಪಡಿಸಿ) – ಏಕೆಂದರೆ ಇದರ ಮೂಲಕ ಹೊಸ ವಿಕಿ ಸಂಪಾದಕರನ್ನು ಈ ಲೇಖನಗಳ ಸೃಷ್ಟಿಗೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಬೇಕಿದ್ದಲ್ಲಿ ಮುಂದೆ ಈ ನಿರ್ಣಯವನ್ನು ಮತ್ತೆ ಪರಾಮರ್ಶಿಸಬಹುದು. 
೩. ಲೇಖನದ ಪರಿಚಯ ಭಾಗಗಳನ್ನು ಉತ್ತಮ ಪಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ತೆಗೆದು ಕೊಂಡಿದ್ದು, ಇತರೆ ಭಾಗಗಳನ್ನು ಬಗ್ಗೆ ಸದ್ಯ ಅಲೋಚಿಸದಿರುವಂತೆ ತೀರ್ಮಾನಿಸಿದ್ದೇವೆ. ಯಾವುದೇ ಲೇಖನವನ್ನು ಸಮೃದ್ಧಗೊಳಿಸಲು ತೊಡಗಿದಲ್ಲಿ ಬಹಳಷ್ಟು ಕೆಲಸಗಳು ಒತ್ತಟ್ಟಿಗೆ ಬರುತ್ತಲೇ ಹೋಗುವುದರಿಂದ ಈ ಒಂದು ನಿರ್ಣಯಕ್ಕೆ ಬರಲಾಗಿದೆ. ಲೇಖನದ ಇತರ ಭಾಗಗಳನ್ನು ಇದಕ್ಕಿಂತಲೂ ಹೆಚ್ಚು ಉತ್ತಮ ಪಡಿಸುವ ಕಾರ್ಯಗಳನ್ನು ಮುಂದಕ್ಕೆ ಹಾಕಿಕೊಳ್ಳಲಾಗುವುದು. 
೪. ನಾವು ಅನುವಾದದಿಂದ ಪರಿಣಾಮ ಹೊಂದಿರುವ ಎಲ್ಲಾ ಲೇಖನಗಳ ಪಟ್ಟಿ ಪರಿಶೀಲಿಸಿ ಯೋಜನೆಯ ಪ್ರಾರಂಭದ ಹಂತಕ್ಕಾಗಿ ಸುಮಾರು ೧೫೦ ಲೇಖನಗಳನ್ನು ಆಯ್ಕೆ ಮಾಡಿದ್ದೇವೆ. 
೫. ಬಳಕೆದಾರರಿಗೆ ಸಮಯ ಹಿಡಿಯುವ ಕೆಲವು ಕಾರ್ಯಗಳನ್ನು (ಖಾಲಿ ಜಾಗಗಳು / ಸಾಲುಗಳನ್ನು ತೆಗೆಯುವುದು) ಸ್ವಯಂಚಾಲಿತವಾಗಿ ಮಾಡಬಹುದು. 
೬. ನಾವು ಹೊಸ ಬಳಕೆದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಆನ್ಲೈನ್ ಮತ್ತು ಆಫ್ಲೈನ್ ಸಮುದಾಯಗಳಲ್ಲಿ ಈ ಯೋಜನೆಯ ಪ್ರಚಾರ ಮಾಡಬೇಕಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಲೇಖನಗಳನ್ನು ಸುಧಾರಣೆ ಮಾಡುವುದು ಮಾತ್ರವಲ್ಲ, ಸಮುದಾಯ ಕಟ್ಟವುದು ಕೂಡ ಆಗಿದೆ.
೭. ಯೋಜನೆಯ ಪುಟವು ಯಾವಾಗಲೂ ಸಮುದಾಯದ ಸದಸ್ಯರು ಪ್ರಸ್ತುತ ಗಮನ ಹರಿಸುತ್ತಿರುವ ಲೇಖನಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ಇತರ ಲೇಖನದ ಮೇಲೆ ಯಾರಾದರೂ ಕೆಲಸ ಮಾಡಲು ಬಯಸುವ ಸಂದರ್ಭದಲ್ಲಿ, ಈ ಯೋಜನೆಯ ಅಂಗವಾಗಿರುವ ಎಲ್ಲಾ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಯೋಜನೆಯ ಪುಟವನ್ನು ಒಮ್ಮೆ ಓದಿ, ನಿಮ್ಮ ಹೆಸರನ್ನೂ ಸದಸ್ಯರ ಪಟ್ಟಿಗೆ ಸೇರಿಸಿ.

ಜೊತೆಗೆ ನಮ್ಮೊಡನೆ ಈ ಕಾರ್ಯದಲ್ಲಿ ಕೈಜೋಡಿಸಿ ಹಾಗೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾದ ಆಸಕ್ತರನ್ನೂ ಕರೆತನ್ನಿ. 
ಈ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು:
ಮೊದಲು: ನಿಮ್ಮ ಹೆಸರನ್ನು ಸದಸ್ಯರ ವಿಭಾಗದಲ್ಲಿ ನಮೂದಿಸಿ
ನಂತರ: ನಿಮ್ಮ ಇಷ್ಟದ ಲೇಖನವನ್ನು ಆರಿಸಿಕೊಂಡು, ಅದನ್ನು ಉತ್ತಮ ಪಡಿಸಲು ಮುಂದಾಗಿ.
ಫೇಸ್ ಬುಕ್ ಗುಂಪು : https://www.facebook.com/groups/kannadawikipedia/
* * * * * * * * *
ಚಿತ್ರಕೃಪೆ : wikipedia
1 ಟಿಪ್ಪಣಿ Post a comment
  1. SSNK's avatar
    Kumar
    ಮಾರ್ಚ್ 17 2012

    ನನಗೆ ಈ ಕಾರ್ಯದಲ್ಲಿ ಆಸಕ್ತಿಯಿದೆ.
    ನೀವು ಹೇಳಿದ ಕೊಂಡಿಗೆ ಹೋಗಿ, ಅಲ್ಲಿರುವ ವಿವರಗಳನ್ನೂ, ಲೇಖನಗಳ ಪಟ್ಟಿಯನ್ನೂ ನೋಡಿರುವೆ.
    ಅಲ್ಲಿ ನನ್ನ ಹೆಸರನ್ನು ಸೇರಿಸುವುದು ಹೇಗೆಂದು ತಿಳಿಯಲಿಲ್ಲ.
    ಅಲ್ಲಿರುವ ಪುಟವನ್ನು Edit ಮಾಡಿ ನನ್ನ ಹೆಸರನ್ನು ಸೇರಿಸಬೇಕೆ ಅಥವಾ ಹೆಸರನ್ನು ನೊಂದಾಯಿಸಿಕೊಳ್ಳಬೇಕೆ?
    ನಾವು ಮಾಡುವ ಕೆಲಸದ ವಿಮರ್ಶೆ ಹೇಗೆ? ನಾವು ಯಾವ Font/Tool ಬೇಕಾದರೂ ಬಳಸಬಹುದೇ?

    ನೀವು ನನ್ನ ಇ-ಮೈಲ್ ವಿಳಾಸ: ssnkumar@gmail.com ಗೆ ವಿವರ ಕಳುಹಿಸಿದರೆ, ಹೆಜ್ಜೆ ಮುಂದಿಡಲ ಸಹಾಯವಾಗುತ್ತದೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments