ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 19, 2012

2

ಸಂಸ್ಕೃತಿ ಸಂಕಥನ – 27 – ನಮಗೆ ನಾವೇ ಪರಕೀಯರು

‍ನಿಲುಮೆ ಮೂಲಕ

-ರಮಾನಂದ ಐನಕೈ

1947 ಅಗಸ್ಟ್ 15ರಂದು ಭಾರತ ಪರಕೀಯರ ದಾಸ್ಯದಿಂದ ಮುಕ್ತವಾಯಿತು ಎಂದು ಭಾಷಣ ಬಿಗಿಯುತ್ತೇವೆ. ಇದು ನಿಜವೇ? ಕೇವಲ ಆಡಳಿತ ಮತ್ತು ಅಧಿಕಾರ ಹಸ್ತಾಂತರ ಮಾಡಿದಾಕ್ಷಣ ದಾಸ್ಯ ವಿಮೋಚನೆ ಆಯಿತು ಅಂತ ನಿರ್ಧರಿಸಿಬಿಡಬಹುದೇ? ವಸಾಹತು ಪ್ರಭಾವದಿಂದ ಮಲೀನವಾದ ಭಾರತೀಯ ಮನಸ್ಸುಗಳಿಗೆ ಮುಕ್ತಿ ಸಿಕ್ಕಿದೆಯೇ? ಒಂದೊಮ್ಮೆ ಸಿಗದಿದ್ದ ಪಕ್ಷದಲ್ಲಿ ಇದೂ ಒಂದು ರೀತಿಯ ಮಾನಸಿಕ ದಾಸ್ಯ ಅಲ್ಲವೇ? ಈ ಮಾಸಿಕ ಅವಲಂಬನೆಯಿಂದ ಹೊರ ಬರುವುದು ಹೇಗೆ?

ಮೊದಲು ಭಾರತದಲ್ಲಿ ಮುಸ್ಲಿಂ ವಸಾಹತುಶಾಹಿ ಆಡಳಿತ ನಡೆಯಿತು. ನಂತರ ಸುದೀರ್ಘ ಕಾಲ ಕ್ರಿಶ್ಚಿಯನ್ ವಸಾಹತುಶಾಹಿ ರಾಜ್ಯಭಾರ ನಡೆಯಿತು. ಇವರೆಲ್ಲರೂ ಸೇರಿ ಭಾರತೀಯ ಸಂಸ್ಕೃತಿಯ ಕುರಿತು ಬೇರೆಯದೇ ಆದ ಚಿತ್ರಣ ಕಟ್ಟಿಕೊಟ್ಟರು. ಭಾರತೀಯ ಚಿಂತಕರೂ ಕೂಡಾ ಅದನ್ನೇ ಪಠಿಸುತ್ತ ಬಂದರು. ಸದ್ಯ ಭಾರತವನ್ನು ಆಳುತ್ತಿರುವುದು ಇದೇ ವಸಾಹತುಶಾಹಿ ಪ್ರಜ್ಞೆ. ಈ ಕಾರಣಕ್ಕಾಗಿ ಭಾರತದಲ್ಲಿ ರಾಷ್ಟ್ರತತ್ವಗಳಿಗೂ ಜನಸಾಮಾನ್ಯರ ಅನುಭವಕ್ಕೂ ತಾಳೆಯಾಗಲಾರದು. ಅದರ ಫಲಿತಾಂಶಗಳೇ ಸಂಘರ್ಷಗಳು. ಆದ್ದರಿಂದ ನಿಜವಾದ ನಮ್ಮ ಸಂಸ್ಕೃತಿಯನ್ನು ಅರಿತು ಅದರ ಆಧಾರದ ಮೇಲೆ ನಮ್ಮ ದೇಶದ ಜನಜೀವನವನ್ನು ರೂಪಿಸುವ ತುತರ್ು ಇದೆ.

ಸಾವಿರಾರು ವರ್ಷಗಳಿಂದ ಬಾಳಿ ಬೆಳಗಿದ ಭಾರತೀಯ ಸಂಸ್ಕೃತಿ ಐರೋಪ್ಯರ ಆಗಮನದಿಂದಾಗಿ ತನ್ನ ಸ್ವರೂಪವನ್ನೇ ಬದಲಿಸಿಕೊಂಡದ್ದು ಈಗ ಇತಿಹಾಸ. ಭಾರತ ಐರೋಪ್ಯರಿಗೆ ಅರ್ಥವಾಗಲಿಲ್ಲ. ಇಲ್ಲಿನ ಸಂಸ್ಕೃತಿ ಅವರಿಗೆ ಒಗಟಾಯಿತು. ಅಷ್ಟರಲ್ಲಾಗಲೇ ಪ್ರತಿ ಸಂಸ್ಕೃತಿಗೆ ಇತಿಹಾಸ ಬರೆಯುವ ಕಲೆಯನ್ನು ಐರೋಪ್ಯರು ಕರಗತ ಮಾಡಿಕೊಂಡಿದ್ದರು. ಇತಿಹಾಸ ಮಾತ್ರ ಅವರಿಗೆ ಸತ್ಯ ದಾಖಲೆಯಾಗಿತ್ತು. ಏಕೆಂದರೆ ಸತ್ಯವೇದವಾದ ಬೈಬಲ್ಲೇ ಅವರಿಗೆ ನಿಜವಾದ ಇತಿಹಾಸ. ಭಾರತೀಯ ಇತಿಹಾಸವನ್ನು ಎಲ್ಲಿಂದ ಆರಂಭಿಸಬೇಕು? ಅವರಿಗಾದ ದೊಡ್ಡ ಸಮಸ್ಯೆ ಅದು. ಯಾವುದೇ ಭಾರತೀಯ ಪಂಡಿತರನ್ನು ಭಾರ ತೀಯ ಇತಿಹಾಸದ ಕುರಿತು ಕೇಳಿದರೆ ಅವರೆಲ್ಲ ಪುರಾಣದ ರೋಚಕ ಕಥೆಗಳನ್ನೇ ಹೇಳಿದರು. ಒಂದೇ ಕಥೆಯನ್ನು ಬೇರೆ ಬೇರೆ ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳಿದರು. ಸಂಶಯ ಶುರುವಾಯಿತು. ಆಗ ಐರೋಪ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಭಾರತವನ್ನು ಗ್ರಹಿಸತೊಡಗಿದರು.

ಪಾಶ್ಚಾತ್ಯರು ಭಾರತಕ್ಕೆ ಕಾಲಿಡುವ ಸಂದರ್ಭದಲ್ಲಿ ಇಡೀ ಯುರೋಪಿನ ಕ್ರಿಶ್ಚಿಯಾನಿಟಿಯಲ್ಲಿ ಮಹತ್ತರ ಸ್ಥಿತ್ಯಂತರಗಳಾಗಿದ್ದವು. ಕೆಥೋಲಿಕ್ ಕ್ರಿಶ್ಚಿಯಾನಿಟಿಯ  ವಿರುದ್ಧ ದಂಗೆಯೆದ್ದು ಪ್ರೊಟೆಸ್ಟಾಂಟಿಸಂ ಜನ್ಮ ತಾಳಿತ್ತು. ಶುದ್ಧ ರಿಲಿಜನ್ನಿನ ಸ್ವರೂಪದ ಬಗ್ಗೆ ಸಿದ್ಧಾಂತಗಳು ಬೆಳೆಯತೊಡಗಿದ್ದವು. ಸಮಾಜದ ಎಲ್ಲ ಸಂಗತಿಗಳನ್ನು ನಾಮರ್ೆಟಿವ್ ಆಗಿ ನೋಡುವ ದೃಷ್ಟಿ ಬೆಳೆಯಿತು. ನಾಮರ್ೆಟಿವ್ ಎಥಿಕ್ಸ್, ಮಾರಲ್ಸ್, ಸೆಕ್ಯುಲಾರಿಸಂ, ಇಕ್ವಾಲಿಟಿ ಮುಂತಾಗಿ ಅನೇಕ ಪರಿಕಲ್ಪನೆಗಳು ಸೈದ್ಧಾಂತಿಕವಾಗಿ ಹೆಪ್ಪುಗಟ್ಟಿದವು. ಗಮನಿಸಬೇಕಾದ ಸಂಗತಿಯೆಂದರೆ ಇವೆಲ್ಲವೂ ಕ್ರಿಶ್ಚಿಯನ್ ಥಿಯಾಲಜಿಯ ಭಾಗವಾಗೇ ಬೆಳೆದುಬಂತು. ಇದೇ ಕ್ರಿಶ್ಚಿಯಾನಿಟಿಯ ಅಥವಾ ಯುರೋಪಿನ ಸಂಸ್ಕೃತಿಯ ಸಾರವಾಯಿತು. ಅಷ್ಟೇಅಲ್ಲ, ಯುರೋಪಿ ಯನ್ನರು ಇಡೀ ಮನುಕುಲವನ್ನೇ ಈ ದೃಷ್ಟಿಯಿಂದ ನೋಡಿದರು. ಹಾಗಾಗಿ ಐರೋಪ್ಯರು ಮುಖಾಮುಖಿಯಾದ ಎಲ್ಲ ಸಂಸ್ಕೃತಿಯನ್ನು ಇದೇ ದೃಷ್ಟಿಯಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದರು.

ಈ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದ ಐರೋಪ್ಯರಿಗೆ ಭಾರತ ವಿಚಿತ್ರವಾಗಿ ಕಂಡುಬಂತು. ಇದು ಸಂಪೂರ್ಣವಾಗಿ ಪತನಗೊಂಡ ಸಂಸ್ಕೃತಿಯಂತೆ ಭಾಸವಾಯಿತು. ಬಹು ಮುಖ್ಯವಾಗಿ ಅವರಿಗೆ ಭಾರತದಲ್ಲಿ ಎಥಿಕ್ಸ್ ಕಾಣಲಿಲ್ಲ. ಇಲ್ಲಿನ ಸಂಪ್ರದಾಯಗಳಲ್ಲಿ ನಾಮರ್ೆಟಿವ್ ಎಥಿಕ್ಸ್ ಕಾಣದ್ದರಿಂದ ಭಾರತೀಯ ಸಂಪ್ರದಾಯಗಳು ಅನಿಷ್ಟವೆಂದು ವಣರ್ಿಸಿದರು. ಇಲ್ಲಿಯ ವರ್ಣಗಳನ್ನು ಜಾತಿಗಳನ್ನಾಗಿ ಗುರುತಿಸಿದರು. ಜಾತಿಗಳನ್ನು ವ್ಯವಸ್ಥೆಯ ಸ್ವರೂಪದಲ್ಲಿ  ನೋಡಿದರು. ಆಗ ಜಾತಿಗಳ ಮಧ್ಯೆ ಅಸಮಾನತೆ ಕಂಡುಬಂತು. ಹಾಗಾಗಿ ಇದೊಂದು ಅನೈತಿಕ ವ್ಯವಸ್ಥೆ ಎಂದರು. ಎಲ್ಲವನ್ನೂ ಕ್ರಿಶ್ಚಿಯಾನಿಟಿಯ ಕಿಟಕಿಯ ಮೂಲಕ ನೋಡಿದ್ದರಿಂದ ಅರ್ಥ ವ್ಯತ್ಯಾಸವಾಗತೊಡಗಿತು. ಪ್ರೀಸ್ಟ್ಗಳನ್ನು ಪ್ರೀಸ್ಟ್ಹುಡ್ ಎಂದರು. ಪೂಜೆಗಳನ್ನು ವಶರ್ಿಫ್ ಎಂದರು. ನಮ್ಮ ನೂರಾರು ದೇವತೆಗಳು ಅವರಿಗೆ ಸೈತಾನನ ಪ್ರತಿರೂಪವಾಗಿ ಕಂಡವು. ಅದಕ್ಕೇ ಮೂತರ್ಿಪೂಜೆ ಅನೈತಿಕ ಎಂದರು. ಹೀಗೆ ಹೆಜ್ಜೆ ಹೆಜ್ಜೆಗೆ ಅನರ್ಥಗಳನ್ನು ಕಂಡರು.

ವಿಪಯರ್ಾಸವೆಂದರೆ ಭಾರತೀಯರು ಮೇಲಿನ ಎಲ್ಲ ಪಾಶ್ಚಾತ್ಯ ವರ್ಣನೆಗಳನ್ನು ನಿಬ್ಬೆರಗಾಗಿ, ನಿವರ್ಿವಾದವಾಗಿ ಒಪ್ಪಿಕೊಳ್ಳುತ್ತ ಬಂದರು. ಅದಕ್ಕೆ ಮುಖ್ಯ ಕಾರಣವೆಂದರೆ ಪಾಶ್ಚಾತ್ಯರು ನೀಡುತ್ತಿರುವ ವೈಜ್ಞಾನಿಕ ವಿವರಣೆ. ಈಗಾಗಲೇ ಅವರು ತಮ್ಮ ಸಂಸ್ಕೃತಿಯ ಕುರಿತಾಗಿ ಸಿದ್ಧಾಂತ ಸೃಷ್ಟಿಸಿಕೊಂಡಿದ್ದರಿಂದ ಅದರ ಹಿನ್ನೆಲೆಯಲ್ಲೇ ತರ್ಕ ಮಾಡುತ್ತಿದ್ದರು. ಜೊತೆಗೆ ಇದೇ ರೀತಿಯ ಇತಿಹಾಸ ಬರೆದರು. ಇದೇ ರೀತಿಯ ಪಠ್ಯಗಳು ಬಂದವು. ಭಾರತದಲ್ಲಿ ಹಲವಾರು ರಿಲಿಜನ್ನುಗಳಿವೆ. ಹಿಂದುಯಿಸಂ, ಬುದ್ಧಿಸಂ, ಜೈನಿಸಂ, ಶೈವಿಸಂ, ವೈಷ್ಣವಿಸಂ ಇತ್ಯಾದಿ. ಅಷ್ಟೇ ಅಲ್ಲ ಇವುಗಳು ಸಂಪ್ರದಾಯವಾದಿಗಳ ಆಡಳಿತದ ವಿರುದ್ಧ ಬಂಡೆದ್ದು ಹುಟ್ಟಿಕೊಂಡವುಗಳಾಗಿವೆ ಮುಂತಾಗಿ ಪಠ್ಯಗಳು ಹೇಳುತ್ತವೆ. ವೇದಗಳ ಶುದ್ಧ ರಿಲಿಜನ್ ಭ್ರಷ್ಟಗೊಂಡು ‘ಬ್ರಾಹ್ಮಣಿಸಂ’ ಹುಟ್ಟಿಕೊಂಡಿದೆ. ಜೈನಿಸಂ ಹಾಗೂ ಬುದ್ಧಿಸಂನ ಶ್ರಮಣ ಸಂಪ್ರದಾಯಗಳು ಒಂಟಿಯಾಗಿ ಬ್ರಾಹ್ಮಣಿಸಂ ವಿರುದ್ಧ ಹೋರಾಡಿದವು.  ಈ ಬ್ರಾಹ್ಮಣಿಸಂ ಮುಂದೆ ಹಿಂದುಯಿಸಂ ಆಗಿ ಪರಿವರ್ತನೆಯಾಯಿತು. ಬುದ್ಧಿಸಂ ವಿರುದ್ಧ ಹೋರಾಡಿದ ‘ಅದ್ವೈತ’ ರಿಲಿಜನ್ ಕೂಡಾ ಹಿಂದುಯಿಸಂನ್ನು ಬೆಂಬಲಿಸಿತು ಎಂಬಿತ್ಯಾದಿಯಾಗಿ ಬರೆದರು. ಪುರುಷ ಸೂಕ್ತ, ಭಗವದ್ಗೀತೆ ಮತ್ತು ಧರ್ಮಶಾಸ್ತ್ರಗಳನ್ನು ತಪ್ಪಾಗಿ ಅಥರ್ೈಸಿಕೊಂಡು ಭಾರತದ ಸಾಮಾಜಿಕ ರಚನೆ ಅಂದರೆ ‘ಜಾತಿ ವ್ಯವಸ್ಥೆ’ ಎಂದು ಕರೆದರು.

ಇದನ್ನೆಲ್ಲ ಭಾರತೀಯರು ನಿಜವೆಂದು ನಂಬಿ ಕೊಂಡರು. ಪ್ರಶ್ನಿಸಲು ಹೋಗಲಿಲ್ಲ. ಪಾಶ್ಚಾತ್ಯರಿಗಿದ್ದ ಹಲವು ಪ್ರಶ್ನೆಗಳು ಭಾರತೀಯರಿಗೆ ಏಳುವುದೇ ಇಲ್ಲ. ಅಂದರೆ ಇವರು ದಡ್ಡರು ಮತ್ತು ಕುತೂಹಲ ಇಲ್ಲದವರು ಅಂತಲ್ಲ. ಭಾರತೀಯರ ಸಾಂಸ್ಕೃತಿಕ ವಲಯದಲ್ಲಿ ಈ ರೀತಿಯ ಪ್ರಶ್ನೆಗಳು ಅರ್ಥವೇ ಆಗುವುದಿಲ್ಲ. ತಮ್ಮ ಸಂಪ್ರದಾಯಗಳ ಕುರಿತು ಈ ರೀತಿಯ ಪ್ರಶ್ನೆಗಳನ್ನು ಕೇಳಬಾರದು ಎಂಬುದನ್ನು ಅವರು ಹಿರಿಯರಿಂದ ಕಲಿತಿದ್ದಾರೆ. ಭಾರತದ ಸ್ಥಳೀಯ ಸಂಪ್ರದಾಯಗಳು ತಮ್ಮ ಬಗ್ಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚಿತ್ರಿಸಿಕೊಳ್ಳುತ್ತವೆ. ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ‘ಅನ್ಯರ’ ಕುರಿತು ಚಿತ್ರಣಗಳನ್ನು ಒದಗಿಸಿವೆ. ಹಾಗಾಗಿ ಭಾರತದ ಕುರಿತಾದ ಪಾಶ್ಚಾತ್ಯರ ಚಿತ್ರಣ ನಿಜವೆಂಬಂತೆ ಕಂಡುಬಂತು. ಅಷ್ಟರಮಟ್ಟಿಗೆ ಅವರು ಇವರ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದರು. ಹೀಗೆ ಭಾರತೀಯ ಬುದ್ಧಿಜೀವಿಗಳು ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಕುರಿತು ಪಾಶ್ಚಾತ್ಯರು ನೀಡಿದ ಚಿತ್ರಣಗಳ ‘ಪುನರುತ್ಪಾದನೆ’ಯಲ್ಲೇ ತೊಡಗಿದರು. ಇಂದೂ ಕೂಡಾ ಅದೇ ಕೆಲಸ ಮಾಡುತ್ತಿದ್ದಾರೆ.

ಗಮನಾರ್ಹವಾದ ಸಂಗತಿಯೆಂದರೆ ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಕುರಿತು ಮಾತ ನಾಡುವ ಶೈಲಿಯೊಂದನ್ನು ರೂಢಿಸುವಲ್ಲಿ ಬ್ರಿಟಿಶ್ ವಸಾಹತುಶಾಹಿಯು ಯಶಸ್ವಿಯಾಯಿತು. ಭಾರ ತೀಯ ರಿಲಿಜನ್, ಜಾತಿವ್ಯವಸ್ಥೆ, ಶಿಕ್ಷಣಪದ್ಧತಿ, ಸತಿ, ಅಸ್ಪೃಶ್ಯತೆ ಮುಂತಾದ ಅನಿಷ್ಟಗಳಿಗೆ ತಾವು ಮಾತ್ರ ಅಲ್ಲ, ಇಲ್ಲಿನ ಬೌದ್ಧಿಕ ಇತಿಹಾಸವು ಕೂಡಾ ಪ್ರತಿಕ್ರಿಯಿಸಿದೆ ಎಂಬಂತೆ ನಮ್ಮ ಬೌದ್ಧಿಕ ಇತಿಹಾಸದ ರೂಪರೇಷೆಗಳನ್ನು ಮರುಚಿತ್ರಿಸಿದರು. ‘ಬ್ರಾಹ್ಮಣಿಸಂ’ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿ ಭಟನೆಯೆಂಬಂತೆ ‘ಬುದ್ಧಿಸಂ’ ಮರುನಿರೂಪಣೆ ಹೊಂದಿತು. ಬ್ರಿಟಿಶರ ಇಂಥ ‘ಸತ್ಯ’ಗಳನ್ನೇ ತಮ್ಮ ದನ್ನಾಗಿ ಮಾಡಿಕೊಂಡ ಅನೇಕ ಭಾರತೀಯರು ಅವರ ಟೀಕೆಗಳನ್ನು ತಾವೂ ಪ್ರಚಾರ ಮಾಡಿದರು. ಆರ್ಯಸಮಾಜ, ಬ್ರಹ್ಮಸಮಾಜ ಹಾಗೂ ಇತರ ಹಿಂದೂ ಸುಧಾರಣಾ ಚಳವಳಿಗಳನ್ನು ಈ ಸಂಬಂಧ ವಾಗಿ ಉದಾಹರಿಸಬಹುದು.

ವಸಾಹತುಶಾಹಿ ಕಾಲದ ವಿಚಾರಗಳೇ ಸ್ವಾತಂತ್ರ್ಯೋತ್ತರ ಭಾರತದಲ್ಲೂ ಮುಂದುವರಿದು ಕೊಂಡು ಬಂದಿದೆ. ಕಾರಣವೆಂದರೆ ಬ್ರಿಟಿಶರು ನಮ್ಮ ಇತಿಹಾಸ, ಸಂಪ್ರದಾಯ ಹಾಗೂ ಸಂಸ್ಕೃತಿಯ ಕುರಿತು ಕಟ್ಟಿಕೊಟ್ಟ ಚಿತ್ರಣವು ಸುಳ್ಳಾಗಿದ್ದರೆ ನಾವೇಕೆ ಅವನ್ನು ಮುಂದುವರಿಸಿಕೊಂಡು ಬರುತ್ತಿದ್ದೆವು? ನಮ್ಮಲ್ಲೇಳುವ ಈ ಪ್ರಶ್ನೆಯೇ ಅವು ನಿಜವಿರಬಹುದೆಂಬ ನಂಬಿಕೆಯನ್ನೂ  ಧ್ವನಿಸುತ್ತವೆ. ಅಂದರೆ ನಮ್ಮ ಸಂಸ್ಕೃತಿ ಹಾಗೂ ಸಮಾಜದ ಇಂದಿನ ಅನುಭವವು ವಸಾಹತುಶಾಹಿ ಚಿತ್ರಣವನ್ನು ಸತ್ಯವೆಂದು ಪ್ರಮಾಣೀಕರಿಸುತ್ತದೆ ಎಂದಾಯಿತು. ಇದರ ಅರ್ಥ ನಾವಿನ್ನೂ ವಸಾಹತುಶಾಹಿ ಅನುಭವದಿಂದ ಹೊರ ಬಂದಿಲ್ಲ ಎಂಬುದು.

ಪಾಶ್ಚಾತ್ಯರ ಮಾರಲ್ಸ್ಗೂ ನಾವು ಬಳಸುವ ‘ನೈತಿಕತೆ’ಗೂ ಅರ್ಥವಿಸ್ತಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಜಾತಿ ಅಥವಾ ಭ್ರಷ್ಟಾಚಾರದ ಕುರಿತು ನಾವು ಓದುತ್ತಿರುವ ಮತ್ತು ಕೇಳುತ್ತಿರುವ ಟೀಕೆಗಳೆಲ್ಲ ಮಾರಲ್ ಸ್ವರೂಪದವಾಗಿದೆ. ಅವು ತಮ್ಮ ಮಾರಲ್ ಟೀಕೆಗಳಿಗೆ ಪಾಶ್ಚಾತ್ಯರ ನಾಮರ್ೆಟಿವ್ ಎಥಿಕ್ಸ್ನ್ನು ಬಳಸಿಕೊಳ್ಳುತ್ತವೆ. ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಎಥಿಕಲ್ ಚಿಂತನೆ ಇಲ್ಲ. ಸಂಪ್ರದಾಯಗಳ ಟೀಕೆಗೆ ಪಯಾಯವಾಗಿ ಸಮಥರ್ಿಸಿಕೊಳ್ಳಬೇಕಾದರೆ ಸಂಪ್ರದಾ ಯಗಳಲ್ಲಿ ಮಾರಾಲಿಟಿ ಇಲ್ಲವೆಂದು ತಿಳಿದುಕೊಳ್ಳಬೇಕಾಗುತ್ತದೆ. ಇದು ನಮ್ಮಿಂದ ಸಾಧ್ಯವೇ? ಬ್ರಿಟಿಶರು ನಮ್ಮ ಕುರಿತು ಹೇಳಿದ್ದು ಇದನ್ನೇ. ನಾವು ಸತ್ಯವೆಂಬುದಾಗಿ ನಂಬುವುದನ್ನು ಇದನ್ನೇ. ನಮ್ಮನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ನಾವು ಅನುಭವಿಸುವುದು ಹೀಗೆ.

ಈಗ ನಮಗೆ ಸ್ವಲ್ಪ ಸ್ಪಷ್ಟವಾಗಬಹುದು. ವಸಾಹತುಶಾಹಿ ಅಂದರೆ ಏನು? ಬಾಲಗಂಗಾಧರರು ಇದನ್ನು ಸರಳಗೊಳಿಸುತ್ತಾರೆ. ವಸಾಹತುಶಾಹಿ ಅಂದರೆ 1) ಭೂಮಿಯನ್ನು ಆಕ್ರಮಿಸಿಕೊಂಡು ಕಂದಾಯ ವಸೂಲಿ ಮಾಡುವುದಷ್ಟೇ ಅಲ್ಲ, 2) ನಾವು ಅವರಂತೆ ಆಗಲು ಬಯಸಿ ಅವರನ್ನು ನಕಲಿ ಮಾಡುವುದನ್ನು ಪ್ರೋತ್ಸಾಹಿಸುವುದೂ ಅಲ್ಲ ಅಥವಾ 3) ಕೆಲವು ಜನರಿಗೆ ಆಧುನಿಕತೆಯ, ಅಭಿವೃದ್ಧಿಯ ಅಥವಾ ನಯನಾಜೂಕಿನ ಕನಸು ಗಳನ್ನು ಹಚ್ಚಿ ಜನರ ಕಲ್ಪನಾ ಸಾಮ್ರಾಜ್ಯವನ್ನು ವಶ ಪಡಿಸಿಕೊಳ್ಳುವುದೂ ಅಲ್ಲ. ಅದು ಇವೆಲ್ಲವುಗಳಿಗಿಂತ ಆಳವಾಗಿದೆ. ಅಂದರೆ ವಸಾಹತುಶಾಹಿಗೊಳಪಟ್ಟ ಜನರಿಗೆ ಮತ್ತು ಸಂಸ್ಕೃತಿಗಳಿಗೆ ಅವರದೇ ಅನುಭವಗಳನ್ನು ನಿರಾಕರಿಸುವುದು. ಅವರ ಸ್ವಂತ ಅನುಭವಗಳನ್ನು ವಸಾಹತು ದೊರೆಗಳು ಚಿತ್ರಿಸುವ ರೀತಿಯಲ್ಲಲ್ಲದೇ ಬೇರೆ ಯಾವ ರೀತಿಯಲ್ಲೂ ಚಿತ್ರಿಸದಂತೆ ತಡೆಯುವುದು ಅಥವಾ ತಮಗೆ ತಾವೇ ಪರಕೀಯರಾಗುವಂತೆ ಮಾಡುವುದು.

* * * * * * * * *

ಚಿತ್ರಕೃಪೆ : mp3.com

2 ಟಿಪ್ಪಣಿಗಳು Post a comment
  1. ಸುಮಂತ್'s avatar
    ಸುಮಂತ್
    ಮಾರ್ಚ್ 19 2012

    ನೈಜ ಇತಿಹಾಸ ಇನ್ನೂ ಬರೆಯಬೇಕಿದೆ, ಅದನ್ನು ತಡೆಯುವಲ್ಲಿ ವಸಾಹತುಶಾಹಿಗಳ ಚಮಚಾಗಳು ಕೇಸರೀಕರಣದ ಹೆಸರಿನಲ್ಲಿ ಹುಯಿಲೆಬ್ಬಿಸುತ್ತಾರಲ್ಲ.

    ಉತ್ತರ
  2. Balachandra's avatar
    Balachandra
    ಮಾರ್ಚ್ 19 2012

    ಉತ್ತಮವಾದ ಲೇಖನ. ಧನ್ಯವಾದಗಳು. ನೀವು ಹೇಳಿದಂತೆ ಭಾರತೀಯರ್ಯಾರೂ ನೈಜ್ಯ ಇತಿಹಾಸವನ್ನು ಬರೆಯುವ ಪ್ರಯತ್ನ ಮಾಡಲಿಲ್ಲ. ಪೌರಾಣಿಕ ರೋಚಕ ಕಥೆಗಳನ್ನೂ ಹೆಣೆದರು ಅಷ್ಟೇ. ಆದರೆ ಒಂದು ವಿಚಾರ ನಿಜ ಅನ್ನಿಸುತ್ತದೆ ನನಗೆ. ಪಾಶ್ಚಿಮಾತ್ಯ ರಾಜಕೀಯ, ಸಾಮಾಜಿಕ ಮೌಲ್ಯಗಳು ಸಂಪೂರ್ಣವಾಗಿ ಕ್ರಿಶ್ಚಿಯನ್ ಮೌಲ್ಯಗಳಿಂದ ಕೂಡಿದ್ದಿಲ್ಲ. ಬದಲಾಗಿ ಅವೆಲ್ಲವೂ ಗ್ರೀಕರಿಂದ ಬಂದಿದ್ದವು ಹಾಗೂ ನಿಜಕ್ಕೂ ಉತ್ತಮ ಮೌಲ್ಯಗಳನ್ನೇ ಒಳಗೊಂಡಿವೆ. ಆದ್ದರಿಂದಲೇ ಪ್ರಜಾಪ್ರಭುತ್ವದಂತಹ ಕ್ರಿಯಾಶೀಲ ವ್ಯವಸ್ಥೆಗಳು ಜಾರಿಗೆ ಬಂದವು. ಆದ್ರೆ ನಮ್ಮಲ್ಲಿ ಇಂತಹ ಯಾವ ವ್ಯವಸ್ತೆಗಳೂ ಇರಲಿಲ್ಲ. ಜನರು ಹಿರಿಯರು ಹೇಳಿದ್ದನ್ನೇ ನಂಬಿದರು. ಉದಾತ್ತವಾದ, ಸ್ವತಂತ್ರವಾದ ವಿಚಾರಗಳನ್ನು ಹೊಂದಿರಲಿಲ್ಲ. ಆದ್ದರಿಂದಲೇ ಇವು ಅಸಮಾನತೆಯನ್ನು ಹುಟ್ಟುಹಾಕಿದವು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments