ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 21, 2012

2

ಉಪಚುನಾವಣೆ ಫಲಿತಾಂಶ: ಬಿಜೆಪಿಗೆ ಮತದಾರ ಪ್ರಭು ಕೊಟ್ಟ ಮೊದಲ ಮತ್ತು ಕಡೆಯ ಎಚ್ಚರಿಕೆ

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ 

ಕಳೆದ ವಿಧಾನಸಭಾ ಚುನಾವಣೆಯ ನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಕರ್ನಾಟಕದ ಮತದಾರರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಹಲವಾರು ವಿವಾದಗಳನ್ನು ಬಿಜೆಪಿ ಹುಟ್ಟುಹಾಕಿಕೊಂಡಿದ್ದರೂ ಜನತೆ ಪಕ್ಷಕ್ಕೆ ಆಶೀರ್ವದಿಸಿದ್ದರು. ಆದರೆ ಈ ಸರಣಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಮುಂದುವರೆದಿಲ್ಲ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ತೆರವಾಗಿ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿತ್ತು.

ಇಂದು ಉಪಚುನಾವಣೆಯ ಫಲಿತಾಂಶ ಹೊರಬಂದಿದ್ದು  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಜಯಪ್ರಕಾಶ ಹೆಗ್ಡೆಯವರು ಸರಿಸುಮಾರು ೫೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಬಿಸಿತುಪ್ಪವಾಗುವ ಸಾಧ್ಯತೆಗಳಿವೆ. ಇದು ಉಪಚುನಾವಣೆಯಾದುದರಿಂದ ಮುಂದಿನ ಸುಮಾರು ಎರಡು ವರ್ಷಗಳು ಹೆಗ್ಡೆಯವರು ಲೋಕಸಭಾಸದಸ್ಯರಾಗಿರುತ್ತಾರೆ.

ಪ್ರತಿಷ್ಠೆಯ ಕಣ:

ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಿನಾಮೆಯ ನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿದ್ದ ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದರಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿತ್ತು. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳನ್ನು ಒಳಗೊಂಡ ಈ ಲೋಕಸಭಾ ಕ್ಷೇತ್ರವು ಚುನಾವಣೆಯ ವಿಭಿನ್ನ ಮನೋಭಾವ, ಜೀವನ ಶೈಲಿಯ ಜನತೆಯನ್ನು ಈ ಕ್ಷೇತ್ರವು ಒಳಗೊಂಡಿದೆ. ಇಲ್ಲಿನ ರಾಜಕಿಯ ವಿಷಯಗಳು ಮತ್ತು ಆಸಕ್ತಿಗಳು ಭಿನ್ನವಾಗಿವೆ.

ಕರ್ನಾಟಕದಲ್ಲಿ ನಡೆದ ಅನೇಕ ಉಪಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಸಾಕಷ್ಟು ಹಿನ್ನೆಡೆಯಾಗಿತ್ತು. ಈ ಸರಣಿ ಸೋಲುಗಳಿಂದ ಹೊರಬರುವುದು ಸೇರಿದಂತೆ ಪಕ್ಷಕ್ಕೊಂದು ಉತ್ಸಾಹ ಮೂಡಿಸುವಲ್ಲಿ ಈ ಚುನಾವಣೆ ಯಶಸ್ವಿಯಾಗಿದೆ. ಕಾಂಗ್ರೆಸ್ಸಿಗೆ ಹೋಲಿಸಿದರೆ ಬಿಜೆಪಿಗೆ ಒಂದು ಶಿಸ್ತುಬದ್ಧವಾದ ಕಾರ್ಯಕರ್ತರ ಪಡೆಯಿದ್ದರೂ ಪ್ರಯೋಜನವಾಗಿಲ್ಲ.

ಬಿಜೆಪಿಯ ಸೋಲಿನ ಕಾರಣಗಳೇನಿರಬಹುದು?

ಜಯಪ್ರಕಾಶ ಹೆಗ್ಡೆಯವರಿಗೆ ಇರುವ ಸರಳ, ಸಜ್ಜನಿಕೆಯ ವ್ಯಕ್ತಿತ್ವವೇ ಅವರ ಗೆಲುವಿಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಇವರು ಕರಾವಳಿಯ ಪ್ರಮುಖ ಮತ್ತು ಸಮುದಾಯವಾದ ಬಂಟ ಸಮುದಾಯಕ್ಕೆ ಸೇರಿದ್ದಾರೆ. ರಾಜ್ಯದ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು, ಸರ್ಕಾರಕ್ಕೆ ಇರಿಸುಮುರಿಸು ತರಿಸುವ ಅನೇಕ ಪ್ರಸಂಗಗಳು ಇದೇ ಸಮಯದಲ್ಲಿ ಘಟಿಸಿದ್ದು ಜನರ ಮನಸ್ಸಿನಿಂದ ಅಳಿಸಿಹೋಗುವ ಮೊದಲೇ ಈ ಚುನಾವಣೆ ನಡೆದಿರುವುದು ಬಿಜೆಪಿಯ ಸೋಲಿಗೆ ಮತ್ತೊಂದು ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕೂಡ ಈ ವಿಷಯಗಳಿಂದ ಮುಜುಗರಕ್ಕೆ ಒಳಗಾಗಿದ್ದರು. ಈ ಲೋಕಸಭಾ ಕ್ಷೇತ್ರದ ಎರಡು ವಿಧಾನ ಸಭಾ ಸ್ಥಾನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಎಂ ಎಲ್ ಎ ಗಳಿದ್ದರೂ ಚುನಾವಣೆಯಲ್ಲಿ ಸೋಲಾಗಿರುವುದು ಆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಸಾಧ್ಯತೆ ಇದೆ.

ಅಲ್ಲದೇ ರಾಜ್ಯದ ಪ್ರಭಾವಿ ನಾಯಕರಾದ ಯಡಿಯೂರಪ್ಪನವರು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಇದರಿಂದ ಪಕ್ಷವು ಆಂತರಿಕವಾಗಿ ಗಟ್ಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ವಿಶೇಷವೆಂಬಂತೆ ಕಾಂಗ್ರೆಸ್ಸಿನ ಕೇಂದ್ರದ ನಾಯಕರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಾಂಘಿಕ ಪ್ರಯತ್ನ ಮಾಡಿದ್ದರು.

ರಾಜಕೀಯ ಬದಲಾವಣೆಯ ಮುನ್ಸೂಚನೇ?

ಇದೀಗ ರಾಜ್ಯ ಸರ್ಕಾರದಲ್ಲೂ ಅಧಿಕಾರಕ್ಕಾಗಿ ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರವು ಇದುವರೆಗೆ ತನ್ನ ಆಡಳಿತಾವಧಿಯಲ್ಲಿ ಮಾಡಿಕೊಂಡ ಅನೇಕ ವಿವಾದಗಳು, ಬಿಜೆಪಿ ಪಕ್ಷದ ಸಾಧನೆಗಳು ಮತ್ತು ಜನಪರ ವಿಷಯಗಳನ್ನು ಮಸುಕುಗೊಳಿಸಿವೆ. ಇದು ರಾಜಕೀಯದಲ್ಲಿ ಏನು ಕೂಡ ಆಗಬಹುದು ಎಂಬುದರ ಮುನ್ಸೂಚನೆಯಾಗಿದೆ. ಯಡಿಯೂರಪ್ಪನವರು ತಮಗೆ ರಾಜ್ಯಕಾರಣದ ಪ್ರಮುಖ ಹುದ್ದೆಯನ್ನು ಕೊಡಲೇ ಬೇಕು ಎಂದು ಹಠ ಹಿಡಿರುವುದು ರಾಜ್ಯರಾಜಕಾರಣಕಷ್ಟೇ ಅಲ್ಲ ಕೇಂದ್ರ ಚುನಾವಣೆಯ ಮೇಲೂ ಸಾಕಷ್ಟು ಪ್ರಭಾವ ಬೀರಬಹುದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೂ ಕರ್ನಾಟಕದಲ್ಲಿ ೧೮ ಸ್ಥಾನಗಳನ್ನು ಗೆದ್ದಿದ್ದನ್ನು ಸ್ಮರಿಸಿಕೊಳ್ಳಬಹುದು.

ಅಲ್ಲದೇ ಉತ್ತರಪ್ರದೇಶವೂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷೆಯ ಮಟ್ಟಕ್ಕೆ ಸಾಧನೆ ಮಾಡದಿರುವುದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಚಿಂತೆಗೀಡು ಮಾಡಿದ್ದು ಮುಂದಿನ ಲೋಕಸಭಾ ಮಹಾಚುನಾವಣೆಯ ವೇಳೆಗೆ ಕಾಂಗ್ರೆಸ್ಸಿನ ಬೇರುಗಳನ್ನು ಗಟ್ಟಿ ಮಾಡಬೇಕಾದ ರಾಜ್ಯಗಳಲ್ಲಿ ಕರ್ನಾಟಕವನ್ನು ಗಮನದಲ್ಲಿ ಇರಿಸಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇದರ ಶುಭಾರಂಭವೆಂಬಂತೆ ಉಡುಪಿ-ಚಿಕ್ಕಮಗಳೂರು ಉಪಚುನಾವಣೆ ಫಲಿತಾಂಶ ಬಂದಿದೆ.

ಅಂತೂ ಇಂತೂ ಈ ಚುನಾವಣೆಯು ಹತ್ತು ಹಲವು ಸಾಧ್ಯತೆಗಳ ಜೊತೆಗೆ ಬಿಜೆಪಿಗೆ ಎಚ್ಚರಿಕೆಯನ್ನು ರವಾನಿಸಿದೆ. ಇದು ಇನ್ನು ೨೦೧೪ ರ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಿಗೂ ಅನ್ವಯಿಸುತ್ತದೆ. ಇದರಿಂದ ಬಿಜೆಪಿಯು ಸಾಕಷ್ಟು ಜಾಗ್ರತೆಯಿಂದ ಮುಂದಿನ ರಾಜಕೀಯ ನಡೆಗಳನ್ನು ಇರಿಸಬೇಕಾಗುತ್ತದೆ. ಮತದಾರ ಕೊಟ್ಟ ಈ ತೀರ್ಪನ್ನು ಬಿಜೆಪಿಯು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 *************

ಚಿತ್ರಕೃಪೆ: megamedianews.in

Read more from ಲೇಖನಗಳು
2 ಟಿಪ್ಪಣಿಗಳು Post a comment
  1. ಸೌರವ್ ದಾದ's avatar
    ಸೌರವ್ ದಾದ
    ಮಾರ್ಚ್ 21 2012

    janate olle patha kalisiddare

    ಉತ್ತರ
  2. pavankannada's avatar
    ಮಾರ್ಚ್ 21 2012

    ಬಿಜೆಪಿ ಯ ಸೋಲಿಗೆ ಆ ಪಕ್ಷವೇ ಕಾರಣ. ತನ್ನ ಆಂತರಿಕ ಕುಂದುಕೊರತೆಗಳನ್ನು ಸರಿದೂಗಿಸಿ ಕೊಳ್ಳಲಾಗದ ಇವರಿಗೆ ಜನತೆ ಸರಿಯಾದ ಪಾಠ ಕಲಿಸಿದೆ. ಇನ್ನಾದರೂ ಬಿಜೆಪಿ ಪಕ್ಷ ಒಗ್ಗಟಾಗದಿದ್ದರೆ ಸಂಪೂರ್ಣ ಅಧಿಕಾರ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮವಾದ ಲೇಖನವನ್ನು ಬರೆದ ಸಾತ್ವಿಕ್ ಸರ್ ನಿಮಗೆ ಧನ್ಯವಾದಗಳು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments