ವಿಷಯದ ವಿವರಗಳಿಗೆ ದಾಟಿರಿ

Archive for

20
ಮಾರ್ಚ್

ಹೊಸ ಚಿಂತನೆ ಮೂಡಿ ಬರಲಿ

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

ಸೆಕ್ಯುಲರ್ನಿಜ ಹೇಳಬೇಕೆಂದರೆ 2014ರ ಲೋಕಸಭಾ ಚುನಾವಣೆ ನಮ್ಮಲ್ಲಿನ ನೈಜ ರಾಷ್ಟ್ರೀಯತೆಗೆ ಅದರ ಪರಂಪರಾಗತವಾದ ಜಾತ್ಯಾತೀತತೆಯ ನಿಜ ಅರ್ಥವಂತಿಕೆಗೆ ಮತದಾರ ಕೊಡಬೇಕಾದ ಪ್ರಬುದ್ಧ ತೀರ್ಪು ಎನ್ನಬಹುದುದೇನೋ!  ಅದರಲ್ಲೂ ಈ ಚುನಾವಣೆ ಈ ದೇಶದ ಅಲ್ಪಸಂಖ್ಯಾತ-ಬಹುಸಂಖ್ಯಾತರೆಂಬ ಸಂಕುಚಿತ ಅವಕಾಶವಾದಿ ಮನೋಭೂಮಿಕೆಯನ್ನೊದ್ದು, ಈ ದೇಶ ಒಂದು ರಾಷ್ಟ್ರವಾಗಿ, ಜಾತಿ-ಮತಗಳ ಸಣ್ಣತನವನ್ನು ಬದಿಗಿಟ್ಟು, ಈ ದೇಶದ ಭವ್ಯ ಭವಿಷ್ಯವನ್ನು ಕಣ್ತುಂಬಿಕೊಳ್ಳಲು ಈ ದೇಶದ ಶ್ರೀಸಾಮಾನ್ಯನಿಗೆ ಸ್ವತಃ ಆ ಭಗವಂತನೇ ನೀಡಿದ ಅವಕಾಶವೆಂದರೆ ಖಂಡಿತ ಉತ್ಪ್ರೇಕ್ಷೆ ಎಂದು ಭಾವಿಸಬೇಕಿಲ್ಲ. ಅದಲ್ಲೂ ಇಲ್ಲಿನ ಅಲ್ಪಸಂಖ್ಯಾತರೆಂದೇ ಬಿಂಬಿಸಲ್ಪಡುವ ಕ್ರೈಸ್ತ-ಮುಸುಲ್ಮಾನ ಬಂಧುಗಳಿಗೂ ಈ ಚುನಾವಣೆ ಈ ದೇಶದ ತಮ್ಮ ವಾರಸಿಕೆ ಶೃತಪಡಿಸಲು ಇದೊಂದು ಸದವಕಾಶ ಎನ್ನಲು ಅವರು ಸಂಕೋಚಪಡಬೇಕಿಲ್ಲ. ಈ ದೇಶದ ಬಹುತೇಕ ರಾಜಕೀಯ ನಾಯಕರು ಬುದ್ಧಿಜೀವಿವರ್ಗ ಅಕ್ಷರಶಃ ಈ ದೇಶದ ನೈಜ ರಾಷ್ಟ್ರೀಯತೆ ಮತ್ತದರ ಪಾರಂಪರಿಕ ಜಾತ್ಯಾತೀತತೆಯ ವೈಶಾಲ್ಯತೆಯನ್ನು ಪ್ರತಿಪಾದಿಸಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ದೇಶದ ಜಾತಿ-ಪಂಥಗಳಿಗೆ ಮೀರಿದ ಈ ರಾಷ್ಟ್ರ ನನ್ನದು, ಈ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಸವಾಲಾಗಿರುವ ಭಾರತದ ಇಂದಿನ ಜಾತ್ಯಾತೀತತೆಯ ವ್ಯಾಖ್ಯಾನದ ನೈಜ ಅರ್ಥವನ್ನು ಪುನರ್‍ರೂಪಿಸುವ ಅವಕಾಶ ಒದಗಿಬಂದಿರುವುದು ಈ ದೇಶದ ಅಲ್ಪಸಂಖ್ಯಾತರೆಂದು ಕರೆಯಲ್ಪಡುತ್ತಿರುವವರು ಮಾಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎಂದರೆ ತಪ್ಪಲ್ಲ.  ಈ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ ಹಿಂದುಗಳ ಗುಮ್ಮವನ್ನು ಮುಸಲ್ಮಾನರ ಮುಂದೆ, ಮುಸಲ್ಮಾನರ ಗುಮ್ಮವನ್ನು ಹಿಂದುಗಳ ಮುಂದೆ ತೋರಿಸಿ ಅಖಂಡ ಭಾರತವನ್ನು ತುಂಡಾಗಿಸಿ ಅವರ  ಸುತ್ತ ಗಿರಕಿ ಹೊಡೆಯುತ್ತಿದ್ದ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದೊಂದು ತುಂಡನ್ನು ಆಳಲು ಕೊಟ್ಟು, ಬ್ರಿಟಿಷರು ಹೋದ ಮೇಲೆ ಇಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ಸ್ ಮಾಡಿದ್ದೇನು?

ಮತ್ತಷ್ಟು ಓದು »

19
ಮಾರ್ಚ್

ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ!

– ರಾಜೇಶ್ ರಾವ್

ಸಿಂಧು ರಕ್ಷಕ್ಭಾರತೀಯ ನೌಕೋದ್ಯಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ನೌಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ನೌಕೆಗಳ ಬಗ್ಗೆ, ಅವುಗಳನ್ನು ತಯಾರಿಸುವ, ಬಳಸುವ ಬಗ್ಗೆ ಜನತೆಗೆ ಅರಿವು ಇತ್ತು. ಅಂದರೆ ಸಾಗರ ಗರ್ಭದೊಳಗಡಗಿರುವ ಅಪಾರ ಸಂಪನ್ಮೂಲಗಳ ಬಗ್ಗೆ ಜನ ತಿಳಿದಿದ್ದರು. ಆಧುನಿಕ ವಿಜ್ಞಾನದ ಅರಿವಿಗೆ ದೊರಕಿದ ಮಾಹಿತಿಯನ್ನು ಆಧರಿಸಿದರೂ ಭಾರತವೇ ನೌಕೋದ್ಯಮದ ತವರು. ಕ್ರಿ.ಪೂ 2300ರ ಸುಮಾರಿಗೆ ಗುಜರಾತಿನ ಲೋಥಲ್ ಎಂಬ ಪ್ರದೇಶದಲ್ಲಿರುವ ಮಾಂಗ್ರೋಲ್ ಬಂದರಿನ ಬಳಿ ಸಿಂಧೂ ನಾಗರೀಕತೆಯ ಸಮಯದಲ್ಲಿ ಮೊದಲ ಉಬ್ಬರವಿಳಿತದ ಹಡಗು ನಿರ್ಮಾಣವಾಯಿತು. ಮೌರ್ಯರ ಆಳ್ವಿಕೆಯ ಸಮಯದಲ್ಲಿ ಜಲಮಾರ್ಗದ ಸಮಸ್ತ ಆಗು ಹೋಗುಗಳು ನವಾಧ್ಯಕ್ಷನ ನಿಯಂತ್ರಣದಲ್ಲಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೌಕೆಗಳ ಬಗೆಗಿನ ಅಗಾಧ ಮಾಹಿತಿಯಿದೆ. ಮೌರ್ಯರಲ್ಲದೆ ಚೋಳ, ಶಾತವಾಹನ, ಗುಪ್ತ, ಪಾಲ, ಪಾಂಡ್ಯ, ವಿಜಯನಗರ, ಕಳಿಂಗ, ಮರಾಠರ ಆಳ್ವಿಕೆಯ ಕಾಲದಲ್ಲೂ ನೌಕೋದ್ಯಮ ಪ್ರಸಿದ್ದಿ ಪಡೆದಿತ್ತು. ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ವಹಿವಾಟು ಬಹು ಹಿಂದಿನಿಂದಲೂ ಸಾಗರ ಮಾರ್ಗವಾಗಿಯೇ ನಡೆದಿತ್ತು. ಮರಾಠ ನೌಕಾ ಪಡೆಯಂತೂ ಮೂರು ಶತಮಾನಗಳ ಕಾಲ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಯೂರೋಪಿನ ನೌಕಾಪಡೆಗಳು ಅನೇಕ ಸಲ ಮರಾಠರ ನೌಕಾಪಡೆಗಳೆದುರು ನಿಲ್ಲಲಾರದೆ ಓಡಿ ಹೋಗಿದ್ದವು. ಕನ್ಹೋಜಿ ಆಂಗ್ರೇಯಂತಹ ಸಾಗರ ವೀರ ಎಂದೆಂದಿಗೂ ಅಮರ.

ಭಾರತೀಯ ನೌಕಾಪಡೆ ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಸ್ವತಂತ್ರ ಭಾರತದ ನೌಕಾಪಡೆ ಇತಿಹಾಸದಲ್ಲಿ ಹಡಗಿನೊಂದಿಗೇ ಜಲಸಮಾಧಿಯಾದ ಹಾಗೂ ಸಾಯುವ ಮೊದಲು 67 ಜನರ ಜೀವ ರಕ್ಷಣೆ ಮಾಡಿದ್ದ ಮೊದಲ ಹಾಗೂ ಏಕೈಕ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾರಂತಹ ವೀರರನ್ನು ಹೊಂದಿದ್ದ ನೌಕಾಪಡೆ ನಮ್ಮದ್ದು.

ಮತ್ತಷ್ಟು ಓದು »

18
ಮಾರ್ಚ್

ಜಾತ್ಯಾತೀತರೆನಿಸಿಕೊಳ್ಳಲು ಮುಸಲ್ಮಾನರ ಟೋಪಿ ಧರಿಸಲೇಬೇಕೆ?

– ನರೇಂದ್ರ ಕುಮಾರ್

Secular Nandan Nilekaniಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದನ್ ನೀಲೇಕಣಿಯವರು ಸ್ಪರ್ಧಿಸುತ್ತಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಣೆಯಾದ ಕೂಡಲೇ ಮುಸಲ್ಮಾನರ ಟೋಪಿ ಧರಿಸಿ ತಾವು ಕೂಡಾ “ಜಾತ್ಯಾತೀತ”ರೆಂದು ಲೋಕಕ್ಕೆಲ್ಲಾ ಸಾರಿದರು. ಈ ರೀತಿ ಮುಸಲ್ಮಾನ ಟೋಪಿ ಧರಿಸಿ “ಜಾತ್ಯಾತೀತ”ರಾಗುವುದು ಕಾಂಗ್ರೆಸ್ ಪರಂಪರೆಯೇ ಆದಂತಿದೆ. ಅದಕ್ಕಿಂತಲೂ ಮಿಗಿಲಾಗಿ, ಮುಸಲ್ಮಾನ ಟೋಪಿ ಧರಿಸದಿದ್ದವರನ್ನು “ಕೋಮುವಾದಿ” ಎಂದು ಖಂಡಿಸಲಾಗುತ್ತದೆ. ಒಂದೆರಡು ವರ್ಷದ ಹಿಂದೆ ಗುಜರಾತಿನಲ್ಲಿ ನಡೆದ ಸದ್ಭಾವನಾ ಸಭೆಯೊಂದರಲ್ಲಿ ನರೇಂದ್ರ ಮೋದಿಯವರಿಗೆ ಮುಸಲ್ಮಾನರೊಬ್ಬರು ಟೋಪಿ ನೀಡಿದರು. ಮೋದಿಯವರು ಆ ಟೋಪಿಯನ್ನು ಧರಿಸಲಿಲ್ಲ. ಆ ಕೂಡಲೇ ಅವರನ್ನು “ಕೋಮುವಾದಿ” ಎಂದು ಖಂಡಿಸಲಾಯಿತು.

ಇದು ಯಾವ ಸೀಮೆ ಜಾತ್ಯಾತೀತತೆ? ಒಂದು ಕೋಮಿನ ಟೋಪಿ ಧರಿಸಿದರೆ ಜಾತ್ಯಾತೀತ, ಧರಿಸದಿದ್ದರೆ ಕೋಮುವಾದಿ!? ಈ ದೇಶದಲ್ಲಿ ಬೇರೆ ಕೋಮುಗಳೇ ಇಲ್ಲವೆ? ಅವುಗಳಲ್ಲಿ ಅನೇಕ ಕೋಮುಗಳೂ ಅಲ್ಪಸಂಖ್ಯಾತವಲ್ಲವೇ? ಆ ಕೋಮುಗಳ ಲಾಂಚನವನ್ನೋ, ಟೋಪಿಯನ್ನೋ ಈ ರಾಜಕಾರಣಿಗಳು ಏಕೆ ಧರಿಸಿ ಪತ್ರಿಕೆಗಳಲ್ಲಿ ಚಿತ್ರ ಹಾಕಿಸಿಕೊಳ್ಳುವುದಿಲ್ಲ? ಮುಸಲ್ಮಾನ ಟೋಪಿ ಧರಿಸದಿದ್ದವರು ಕೋಮುವಾದಿಯಾಗುವುದಾದರೆ, ಆ ಉಳಿದ ಅಲ್ಪಸಂಖ್ಯಾತ ಕೋಮುಗಳ ಟೋಪಿ ಧರಿಸದಿದ್ದವರೂ ಕೋಮುವಾದಿ ಆಗಬೇಕಲ್ಲವೇ? ಮುಸಲ್ಮಾನರಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿರುವವರು ಜೈನರು. ಯಾವ ರಾಜಕಾರಣಿಯೂ ಜೈನರ ದಿರಿಸು ಧರಿಸಿ ತನ್ನ “ಜಾತ್ಯಾತೀತತೆ”ಯನ್ನು ಮೆರೆದದ್ದು ನನಗೆ ತಿಳಿದಿಲ್ಲ. ಅಥವಾ ಪಾರ್ಸಿ ಲಾಂಚನ ಧರಿಸಿಯೋ, ಇಲ್ಲವೇ ಬೌದ್ಧರ ದಿರಿಸು ಧರಿಸಿಯೋ, ಕ್ರೈಸ್ತರಂತೆ ವೇಷ ಹಾಕಿದ್ದೋ ಎಲ್ಲೂ ನೋಡಿಲ್ಲ.

ಮತ್ತಷ್ಟು ಓದು »

17
ಮಾರ್ಚ್

ರಿಲಿಜನ್ನಿನ ಅಫೀಮು “ಶಂಕರಾಚಾರ್ಯ ಹಿಲ್” ಅನ್ನು “ತಖ್ತ್-ಈ-ಸುಲೇಮಾನ್” ಆಗಿಸುತ್ತದೆ

ರಾಕೇಶ್ ಶೆಟ್ಟಿ

ಶಂಕರಾಚಾರ್ಯ ಹಿಲ್ಬೆಳಗ್ಗೆ ಎದ್ದು ನಮ್ಮಲ್ಲಿ ಕೆಲವರು ಹೇಳುತಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅನ್ನುವ ಉದ್ಘೋಷವನ್ನು ಇನ್ಮುಂದೆ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು ಅನ್ನಿಸುತ್ತಿದೆ.ಯಾಕೆಂದರೆ, ನಮ್ಮ ’ಭಾರತೀಯ ಪುರಾತತ್ವ ಇಲಾಖೆ’ ಮಾಡುತ್ತಿರುವ ಕೆಲಸವೇ ಅಂತದ್ದು.

ಟ್ರಿಬ್ಯೂನ್ ಪೇಪರಿನಲ್ಲಿ ಬಂದ ವರದಿಯ ಪ್ರಕಾರ,ಜಮ್ಮು-ಕಾಶ್ಮೀರದ “ಶಂಕರಾಚಾರ್ಯ ಹಿಲ್” ಅನ್ನು ಭಾರತೀಯ ಪುರಾತತ್ವ ಇಲಾಖೆ “ತಖ್ತ್-ಈ-ಸುಲೇಮಾನ್” ಅಂತ ಬದಲಾಯಿಸಿದೆ.ಕಾಶ್ಮೀರವನ್ನು ಈ ಹಿಂದೆ ಶಾರದ ದೇಶ,ಶಾರದ ಪೀಠ ಅಂತೆಲ್ಲ ಕರೆಯುತಿದ್ದರು.ಮೇಲೆ ಹೇಳಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅದನ್ನೇ ಸಾರುತ್ತಿದೆ.ಇನ್ನು ಶಂಕರಾಚಾರ್ಯರು ದೇಶದ ನಾಲ್ಕು ಮೂಲೆಗಳಿಗೂ ಸಾಗಿ ಶಾರದ ಪೀಠಗಳನ್ನು ಸ್ಥಾಪಿಸಿದ್ದು ಎಲ್ಲರಿಗೂ ತಿಳಿದಿರುವುದೇ,ಹಾಗಿದ್ದ ಮೇಲೆ,ಇವನೆಲ್ಲಿಂದ ಬಂದ ಸುಲೇಮಾನ್?

ದಾಲ್ ನದಿಯ ಕಡೆಗೆ ಮುಖಮಾಡಿ ನಿಂತಿರುವ ಈ ಪರ್ವತವಿರುವುದು ಶ್ರೀನಗರದಲ್ಲಿ.ಇದೇ ಜಾಗದಲ್ಲಿ ಆದಿ ಶಂಕರಾಚಾರ್ಯರು 788-820 ADರಲ್ಲಿ ನೆಲೆಸಿದ್ದರು ಅನ್ನುತ್ತದೆ ಇತಿಹಾಸ.ಪಂಡಿತ್ ಆನಂದ್ ಕೌಲ್ ಅವರ ಪ್ರಕಾರ ಈ ದೇವಸ್ಥಾನದ ನಿರ್ಮಾಣ ಮಾಡಿದ್ದು ಸಂಡಿಮನ್ ಎಂಬುವವ 2629 -2564 BC ಯಲ್ಲಿ.ಆ ನಂತರ ರಾಜ ಗೋಪಾದಿತ್ಯ 426–365 BCರಲ್ಲಿ ಮತ್ತು ರಾಜ ಲಲಿತಾಧಿತ್ಯ 697–734BC ರಲ್ಲಿ ಇದರ ಪುನುರುಜ್ಜೀವನ ಮಾಡಿಸಿದ್ದರು.ಝೈನ್-ಉಲ್-ಅಬಿದ್ದೀನ್ ಅವರು ದೇವಸ್ಥಾನದ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಿದ್ದರು.1841–1846ರಲ್ಲಿ ಸಿಖ್ ಗವರ್ನರ್ ಶೇಕ್ ಗುಲಾಂ ಮೊಹಿದುದ್ದೀನ್ ಕೂಡ ದುರಸ್ತಿ ಮಾಡಿಸಿದ್ದರು.ಇದನ್ನು ಜ್ಯೋತೇಶ್ವರ ದೇವಸ್ಥಾನವೆಂದು ಕರೆಯಲಾಗುತಿತ್ತು.ಬೌದ್ಧರಿಗೂ ಪೂಜ್ಯನೀಯವಾದ ಸ್ಥಳವಿದು.ಅವರಿದನ್ನು ಪಾರಸ್- ಪಹಾರ್ ಅನ್ನುತ್ತಾರೆ.ಶಂಕರರು ಇಲ್ಲಿ ಶಿವಲಿಂಗ ಪ್ರತಿಷ್ಟಾಪಿಸಿದ್ದರು.ಶಂಕರರು ಇಲ್ಲಿ ಬಂದನಂತರ,ಈ ಪರ್ವತ ಮತ್ತು ದೇವಸ್ಥಾನವನ್ನು ಶಂಕರಾಚರ್ಯರ ಹೆಸರಿನಿಂದಲೇ ಗುರಿತಿಸಲಾಗುತ್ತಿದೆ.

ಮತ್ತಷ್ಟು ಓದು »

15
ಮಾರ್ಚ್

ಕಾಮನ ಹಬ್ಬ

– ಹಂಸಾನಂದಿ

ಕಾಮನ ಹಬ್ಬಇವತ್ತು ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.

ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)

ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||

(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗುವರು!)
ಮತ್ತಷ್ಟು ಓದು »

15
ಮಾರ್ಚ್

ಧರ್ಮ ಅನಿವಾರ್ಯವೇ?

– ಪ್ರಸನ್ನ ಬೆಂಗಳೂರು

ಧರ್ಮಅಯ್ಯೋ! ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಕಣ್ರೀ ಎಂದು ನಿರಾಶದಾಯಕ ಮಾತುಗಳನ್ನು ನಾವು ಕೇಳಿರುತ್ತೇವೆ.
ಅದಕ್ಕೆ ಕಾರಣವೇನು ಎಂಬುದನ್ನು ನಾವು ಎಂದಾದರೂ ಮನಗಾಣಲು ಪ್ರಯತ್ನಿಸಿದ್ದೇವೆಯೆ?

ಕಾನೂನು (ಧರ್ಮ) ಎನ್ನುವುದು ನಿರ್ಬಂಧ, (ಇಲ್ಲಿ ನಾನು ಧರ್ಮ ಎನ್ನುವುದನ್ನು ಕಾನೂನು ಎಂದೆ ಕರೆಯುತ್ತಿದ್ದೇನೆ ಕಾರಣ ಬಹುತೇಕರಿಗೆ ನಮ್ಮಲ್ಲಿ ಧರ್ಮವೆಂದಾಕ್ಷಣ ಒಂದು ತೆರನಾದ ಅಸಡ್ಡೆ ಅಥವ ಯಾವುದಕ್ಕೂ ಬೇಡದ ಅಥವ ನಾನು ಅದರಿಂದ ದೂರವಿದ್ದು ಎಲ್ಲ ಧರ್ಮೀಯರಿಗೂ ಒಳ್ಳೆಯವನು ಸಮಾನ ಎನಿಸಿಕೊಳ್ಳಬೇಕೆನ್ನುವ ಚಟವಿರುತ್ತದೆ ಹಾಗಾಗಿ ಧರ್ಮ ಎಂಬುದನ್ನು ಕಾನೂನೆಂದೆ ನಾನು ಸಂಬೋಧಿಸುತ್ತೇನೆ.ಅದು ಹೌದೂ ಕೂಡ) ಸಂಕೋಲೆ ಅದನ್ನು ಮುರಿಯುವುದು ಧಿಕ್ಕರಿಸುವುದು ಹದಿಹರೆಯದಲ್ಲಿ ಸಾಹಸದ ಕೆಲಸ ಎನಿಸಿಕೊಳ್ಳುತ್ತದೆ. ಅಂತಹ ಕಾರ್ಯವನ್ನು ಕೆಲವರು ಆಸ್ವಾದಿಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂಬ ನಿಯಮವಿಲ್ಲ. ಆದ್ದರಿಂದಲೇ ಇಲ್ಲಿ ಕಾನೂನು ಮುರಿಯುವುದು ತಪ್ಪಿನ ಕೆಲಸ ಎನಿಸಿಕೊಳ್ಳುವುದೇ ಇಲ್ಲ. ಎಲ್ಲವೂ ಸ್ವಯಂ ನಿಯಂತ್ರಣದ ನೈತಿಕತೆಯ ಮೇಲೆ ನಿಂತಿರುತ್ತದೆ. ಉದಾಹರಣೆಗೆ ರಾತ್ರಿ ಹನ್ನೆರಡು ಗಂಟೆಯಲ್ಲಿ ನಿರ್ಜನ ಪರಿಸ್ಥಿತಿಯಲ್ಲಿ ಹಸಿರು ದೀಪಕ್ಕಾಗಿ ಕಾಯುವುದಿಲ್ಲ. ಕಾರಣ ನನ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ನೈತಿಕತೆಯಷ್ಟೇ ಇಲ್ಲಿ ಕೆಲಸ ಮಾಡುತ್ತದೆ.

ಮತ್ತಷ್ಟು ಓದು »

14
ಮಾರ್ಚ್

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-1

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಭ್ರಷ್ಟಾಚಾರದ ನಿಗ್ರಹಕ್ಕೆ (ಲೋಕಪಾಲದಂತಹ) ಸಾರ್ವಭೌಮ ಕಾನೂನು/ಸಂಸ್ಥೆಗಳೇ ಪರಿಹಾರ ಎಂಬ ಸಾಮಾನ್ಯ ಗ್ರಹಿಕೆ ಇದೆ. ಇಂದು ಭ್ರಷ್ಟಾಚಾರ ಯಾವ ಸ್ವರೂಪದಲ್ಲಿದೆಯೋ ಮತ್ತು ಅದು ಎಷ್ಟರಮಟ್ಟಿಗೆ ವಿರಾಟ ಸ್ವರೂಪವನ್ನು ಪಡೆದಿದೆಯೋ ಅದಕ್ಕೆ ಈ ರೀತಿಯ ಸಾರ್ವಭೌಮ ಸಂಸ್ಥೆಗಳೇ ಕಾರಣವಾಗಿರುವ ಸಾಧ್ಯತೆಯ ಕುರಿತು ಯಾರೂ ಯೋಚಿಸಿದಂತಿಲ್ಲ. ಅಂದರೆ, ಓರ್ವ ಅಧಿಕಾರಿ ಅಥವಾ ರಾಜಕಾರಣಿ ಕೋಟಿಗಟ್ಟಲೆ ಸಂಪತ್ತನ್ನು ವಾಮಮಾರ್ಗದಲ್ಲಿ ಪಡೆಯಲು ಅವಕಾಶ ಹೇಗೆ ದೊರೆಯುತ್ತದೆ? ಕಾರ್ಪೋರೇಟ್ ಸೆಕ್ಟಾರ್ಗಳ ಲಾಭಿ ಎಂದು ಅಣ್ಣಾ ಹಜಾರೆಯವರ ಹೋರಾಟವನ್ನು ಟೀಕಿಸಿ ಅರುಂಧತಿ ರಾಯ್ರವರು ನೀಡುವ ವಿವರಣೆಗಳನ್ನೇ ಆಳವಾಗಿ ವಿಶ್ಲೇಷಿಸಿದರೆ ಇದಕ್ಕೆ ಭಾಗಶಃ ಉತ್ತರ ದೊರೆಯುತ್ತದೆ. ಒಂದು ಕಾರ್ಪೋರೇಟ್ ಸಂಸ್ಥೆ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂತು ಎಂದರೆ ಅದಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಸರ್ಕಾರವು ಒದಗಿಸಿಕೊಡಬೇಕು ಎಂಬುದು ಸರ್ಕಾರದ್ದೇ ನಿಯಮವಾಗಿದೆ. ಉದಾಹರಣೆಗೆ ಟಾಟಾದ ನ್ಯಾನೋ ಕಾರಿನ ಉಧ್ಯಮಕ್ಕೆ ಪಶ್ಚಿಮ ಬೆಂಗಾಲದ ಸರ್ಕಾರ ಸಿಂಗೂರಿನಲ್ಲಿ 997 ಎಕರೆ ಭೂಮಿಯನ್ನು 90 ವರ್ಷಗಳಿಗೆ ಗುತ್ತಿಗೆ ನೀಡಿತು. ಗುತ್ತಿಗೆ ಹಣವನ್ನು ಮೊದಲ 60ವರ್ಷಗಳು ಮುಗಿದ ಮೇಲೆ ಉಳಿದ 30 ವರ್ಷಗಳಲ್ಲಿ ವಾರ್ಷಿಕ ಕಂತಿನ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಆ ಭೂಮಿಯು ಆ ಕಂಪೆನಿಗೆ ಉಚಿತವಾದ ‘ಉಡುಗೊರೆ’ಯಾಗಿರುತ್ತದೆ. ಈ ಭೂಮಿಯಲ್ಲಿ ಶೇ 45ರಷ್ಟು ಭೂಮಿಯನ್ನು ಬಲವಂತವಾಗಿ ಸರ್ಕಾರ ರೈತರನ್ನು ತೆರವುಗೊಳಿಸಿ ಕೊಟ್ಟಿರುವುದನ್ನು ಸರ್ಕಾರವೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರ ಜೊತೆಗೆ ರಸ್ತೆ, ನೀರಿನ ಸೌಲಭ್ಯಗಳನ್ನು ಉಚಿತವಾಗಿ ನೀಡಿ ರಿಯಾಯಿತಿ ದರದಲ್ಲಿ ನಿರಂತರ ವಿದ್ಯುತ್ ನೀಡಬೇಕು. ಇಷ್ಟನ್ನು ಒಂದು ಖಾಸಗಿ ಕಂಪನಿಗೆ ಸರ್ಕಾರವು ಒದಗಿಸುತ್ತದೆ.

ಮತ್ತಷ್ಟು ಓದು »

13
ಮಾರ್ಚ್

ನಿನ್ನೆಗೆ ನನ್ನ ಮಾತು – ಭಾಗ ೪

– ಮು ಅ ಶ್ರೀರಂಗ ಬೆಂಗಳೂರು

ನೆನಪುಗಳುನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩

ಮೂವತ್ತು ಮೂರು ವರ್ಷಗಳ  ನನ್ನ ವೃತ್ತಿ ಜೀವನದಲ್ಲಿ ನಾನು ಮುಂದೆ ಮುಂದೆ ಸಾಗಿ ಸಾಧಿಸಿದ್ದೇನೂ ಇಲ್ಲ. ಅಂಚೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದೆ. ಇಪ್ಪತ್ತು ವರ್ಷಗಳು ಗುಮಾಸ್ತನಾಗಿದ್ದ  ಮೇಲೆ ಅಂಚೆ ಇಲಾಖೆಯು ತನ್ನ ನೌಕರರಿಗೆ  ತಾನಾಗಿಯೇ ಒಂದು promotion ಕೊಡುತ್ತದೆ. ಹೀಗಾಗಿ ನಾನು ಅಂಚೆ ಮಾಸ್ತರನಾದೆ. ಇಲಾಖೆಯ ಪರೀಕ್ಷೆಗಳನ್ನು ಪಾಸು  ಮಾಡಿ ನಿವೃತ್ತಿಯ  ವೇಳೆಗೆ assistant  director ಆಗಿರಬಹುದಿತ್ತು. ನನ್ನ ಸಹೋದ್ಯೋಗಿಗಳಲ್ಲಿ ಕೆಲವರು  ಆ ಹಂತ ಮುಟ್ಟಿದ್ದಾರೆ. ಇನ್ನು ಕೆಲವರು ಅಂಚೆ ಇಲಾಖೆಯ ಕಡಿಮೆ ಸಂಬಳ ಸವಲತ್ತು ನೋಡಿ ಒಂದೆರೆಡು ವರ್ಷಗಳ ನಂತರ  ರಾಜೀನಾಮೆ ನೀಡಿ ಬ್ಯಾಂಕ್ ಗಳಿಗೆ ಸೇರಿದರು.  ಪ್ರೌಢಶಾಲೆಯಲ್ಲಿ ನನ್ನ  ಕಿರಿಯ ಸ್ನೇಹಿತನಾಗಿದ್ದ  ಒಬ್ಬ ಮೊದಲಿಗೆ ಅಂಚೆ ಇಲಾಖೆಯ ಕೆಲಸದಲ್ಲಿದ್ದು ನಂತರದಲ್ಲಿ ಬಿಟ್ಟು ಈಗ corporation Bank ನಲ್ಲಿ chief Manager ಆಗಿದ್ದಾನೆ. ಇವರೆಲ್ಲರನ್ನೂ ನೋಡಿ ನಾನೂ ಏಕೆ ಪ್ರಯತ್ನ ಪಡಲಿಲ್ಲ ಎಂದು ಒಮ್ಮೊಮ್ಮೆ ಅನಿಸುವುದುಂಟು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂಬ ಉದರ ವೈರಾಗ್ಯವನ್ನು ನಾವು ಮೇಲ್ನೋಟಕ್ಕೆ ಎಷ್ಟೇ  ತೋರ್ಪಡಿಸಿಕೊಂಡರೂ ಹಣದ ಮುಗ್ಗಟ್ಟು ನಮ್ಮನ್ನು  ಕೆಲವೊಮ್ಮೆ ಪೇಚಾಟಕ್ಕೆ ಸಿಲುಕಿಸಬಹುದು. ಸಂಸಾರಸ್ಥರಾದ ಮೇಲಂತೂ ಇದು ಇನ್ನೂ ಜಟಿಲವಾಗುತ್ತದೆ. ಇವೆಲ್ಲ ಗೊತ್ತಿದ್ದೂ ನಾನು ಇದ್ದಲ್ಲೇ ಇದ್ದುದಕ್ಕೆ.ಆಗ  ಮುಂದಿನ  ದಿನಗಳ ಬಗ್ಗೆ ಯೋಚಿಸದೆ ಕಾಲ ಕಳೆದದ್ದೇ  ಕಾರಣ.  ಒಂದೆರೆಡು ಸಂದರ್ಭಗಳಲ್ಲಿ ಹಣದ ಮುಗ್ಗಟ್ಟು ಆದಾಗ  ನನ್ನ ಬಂಧು ಬಾಂಧವರಿಂದ ಸಾಲ ಪಡೆದು ಆ ಸನ್ನಿವೇಶವನ್ನು ನಿಭಾಯಿಸಿದ್ದಾಯ್ತು. ಕೆಲಸಕ್ಕೆ ಸೇರಿದಾಗ ಒಂದು ಸಾವಿರದಷ್ಟು ಇದ್ದ ಸಂಬಳ(೧೯೭೯ರಲ್ಲಿ) ನಿವೃತ್ತನಾಗುವ ವೇಳೆಗೆ ಮೂವತ್ತು ಸಾವಿರದಷ್ಟಾಗಿತ್ತು(೨೦೧೧ರಲ್ಲಿ). ಆ ಮೂವತ್ತುಮೂರು ವರ್ಷಗಳಲ್ಲಿ ಎರಡು ಮೂರು pay commissionಗಳ ಶಿಫಾರಸ್ಸುಗಳು  ಅಷ್ಟಿಷ್ಟು ಜಾರಿಯಾಯ್ತು. ಅದರಿಂದ ಹೊಸಬರಿಗೆ ಅನುಕೂಲವಾದಷ್ಟು ಹಳಬರಿಗೆ ಆಗುವುದಿಲ್ಲ. (ನಾನು ನಿವೃತ್ತನಾದಾಗ ಮೂರು ವರ್ಷ ಕೆಲಸ ಮಾಡಿದ ಗುಮಾಸ್ತನಿಗೆ ಹದಿನೈದು ಸಾವಿರದಷ್ಟು ಸಂಬಳ ಬರುತ್ತಿತ್ತು. ಮೂವತ್ತುಮೂರು  ವರ್ಷ ಕೆಲಸ ಮಾಡಿದ ನನಗೆ ಮೂವತ್ತು ಸಾವಿರ!) ಆದರೆ ಹೊಸಬರಿಗೆ pension ಇಲ್ಲ. ಹಳಬರಿಗೆ ಇದೆ.

ಮತ್ತಷ್ಟು ಓದು »

12
ಮಾರ್ಚ್

‘ತುರ್ತು ಪರಿಸ್ಥಿತಿ’ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ

-ಕ.ವೆಂ.ನಾಗರಾಜ್

ತುರ್ತು ಪರಿಸ್ಥಿತಿಪರಕೀಯರ ಸಂಕೋಲೆಯಿಂದ ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ ೨೮ ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ೧೯೭೫ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. ೧೯೭೫ರ ಜೂನ್ ೨೬ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಆಗಿಹೋಯಿತು.

ಮತ್ತಷ್ಟು ಓದು »

11
ಮಾರ್ಚ್

’ಗ೦ಡಸರೇ ಕೆಟ್ಟವರು’ ಎನ್ನುವ ಮುನ್ನ..

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Misuse of IPC 498Aರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ ಭಾರತಕ್ಕೆ ತೆರಳಲು ನಿಶ್ಚಯಿಸಿದ.ತನ್ನ ಪೋಷಕರಿಗೆ ಅವನು ತನ್ನ ನಿರ್ಧಾರ ತಿಳಿಸಿದಾಗ ಅವರೂ ಸಹ ಸ೦ತಸ ವ್ಯಕ್ತಪಡಿಸಿದ್ದರು.ಇದೇ ಖುಷಿಯಲ್ಲಿ ಅವರು ತಮ್ಮ ಒಬ್ಬನೇ ಮಗನ ಮದುವೆ ಮಾಡುವುದರ ಬಗ್ಗೆ ಯೋಚಿಸಿದರು.ಆ ಬಗ್ಗೆ ಅವರು ರಾಹುಲನೊ೦ದಿಗೆ ಚರ್ಚಿಸಿದಾಗ ಅವನೂ ಸಮ್ಮತಿಸಿದ್ದ.ಅವರು ಅವನಿಗೆ ತಕ್ಕ ವಧುವಿಗಾಗಿ ಹುಡುಕಾಟ ನಡೆಸತೊಡಗಿದರು.ಅಲ್ಲದೇ ಅವನ ಮಾಹಿತಿಯನ್ನು ವಿವಾಹ ಸ೦ಬ೦ಧಿ ಅ೦ತರ್ಜಾಲ ತಾಣವೊ೦ದರಲ್ಲೂ ಪ್ರಕಟಿಸಿದ್ದರು.

ಹಾಗೆ ರಾಹುಲನ ಅಪ್ಪ ಅಮ್ಮ ರಾಹುಲನಿಗಾಗಿ ಹುಡುಗಿ ಹುಡುಕುವ ಪ್ರಯತ್ನದಲ್ಲಿದ್ದಾಗ ಮದುವೆಯ ವೆಬ್ ಸೈಟಿನಲ್ಲಿ ಅವರಿಗೆ ಪರಿಚಯವಾದ ಹುಡುಗಿಯ ಹೆಸರು ಕವಿತಾ.ಅವರಿಗೆ ಹುಡುಗಿಯ ರೂಪ ಇಷ್ಟವಾಗಿತ್ತು. ಅವರು ರಾಹುಲನಿಗೆ ಅವಳನ್ನು ತೋರಿಸಿದಾಗ ಅವನು ಕವಿತಾಳನ್ನು ಮೊದಲ ನೋಟದಲ್ಲೇ ಮೆಚ್ಚಿದ್ದ.ಎಲ್ಲರಿಗೂ ಹುಡುಗಿ ಒಪ್ಪಿಗೆಯಾಗಿದ್ದರಿ೦ದ ಅವರು ಕವಿತಾ ಮತ್ತವಳ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಲು ನಿರ್ಧರಿಸಿದರು.ಕವಿತಾಳ ತಾಯಿ ಕೆಲವು ವರ್ಷಗಳ ಹಿ೦ದೆ ತೀರಿ ಹೋಗಿದ್ದರು.ಕವಿತಾ ಮತ್ತು ಅವಳ ತ೦ದೆ ರಾಹುಲನ ಮನೆಗೆ ಬ೦ದು ಮದುವೆಯ ಮಾತುಕತೆ ನಡೆಸಿದರು.ಮೂಲತ: ತಾವು ಮು೦ಬಯಿಯ ನಿವಾಸಿಗಳೆ೦ದು,ತಮಗೂ ರಾಹುಲ್ ಇಷ್ಟವಾಗಿರುವುದಾಗಿ ತಿಳಿಸಿದರು.ಕವಿತಾಳ ಸರಳ ವ್ಯಕ್ತಿತ್ವ,ಹಿರಿಯರೆಡೆಗಿನ ಅವಳ ಗೌರವವನ್ನು ಕ೦ಡ ರಾಹುಲನ ತ೦ದೆತಾಯಿಗಳು ಇವಳೇ ತಮ್ಮ ಸೊಸೆಯೆ೦ದು ಆಗಲೇ ತೀರ್ಮಾನಿಸಿದ್ದರು.ಹಿರಿಯರೆಲ್ಲರೂ ಸೇರಿ ಮದುವೆಯ ದಿನಾ೦ಕವನ್ನು ನಿರ್ಧರಿಸಿದರು. ಅತ್ಯ೦ತ ಸರಳ ಜೀವಿಗಳಾಗಿದ್ದ ರಾಹುಲನ ಪೋಷಕರು ವರದಕ್ಷಿಣೆ ,ವರೋಪಚಾರದ೦ತಹ ಯಾವ ಬೇಡಿಕೆಗಳನ್ನೂ ವಧುವಿನ ತ೦ದೆಯ ಮು೦ದಿಡಲಿಲ್ಲ.

ಮತ್ತಷ್ಟು ಓದು »