ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 7, 2012

18

‘ಗಾಂಧಿ ಬಂದ’ : ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ?

‍ನಿಲುಮೆ ಮೂಲಕ

-ಡಾ| ಜಿ. ಭಾಸ್ಕರ ಮಯ್ಯ

ಇಂದಿನ ಕನ್ನಡದ ಸಾಹಿತ್ಯವಿಮರ್ಶೆ ಒಂದು ವಿಚಿತ್ರ ಪೂರ್ವಗ್ರಹದಿಂದ ಪೀಡಿತವಾಗಿದೆ. ಹಸಿವಿನಿಂದ ಸಾಯುತ್ತಿರುವ ಲಕ್ಷಾಂತರ ಗತಿಹೀನ ಜನರ ಬವಣೆಯ ಬಗೆಗಾಗಲಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಕಠೋರ ನೀತಿಗಳಿಂದಾಗಿ ಈ ಭಾರತವು ಇಥಿಯೋಪಿಯಾ, ಸೂಡಾನಿನಂತೆ ನಾಶವಾಗುತ್ತಿರುವ ಬಗೆಗಾಗಲಿ ಯಾವುದೇ ಸಂಕಟ ಅಥವಾ ನೋವು ನಮ್ಮ ಇಂದಿನ ಸೃಜನಶೀಲ ಲೇಖಕರಿಗಾಗಲೀ ವಿಮರ್ಶಕರಿಗಾಗಲೀ ಕಾಣಿಸುವುದಿಲ್ಲ. ಹಾಡಿದ್ದನ್ನೇ ಹಾಡುವ ಕಿಸುಬಾಯಿ ದಾಸನ ಹಾಗೆ ಇವರಿಗೆ ಕಾಣಿಸುತ್ತಿರುವುದು – ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಲೇಖಕರು ಹಾಗೂ ಅವರ ‘ಕೊಲೆಗಡುಕ’ ಕಾವ್ಯ! ಕೋಮುವಾದೀ ರಾಜಕಾರಣಕ್ಕೆ ಹೆಚ್ಚೆಂದರೆ 150 ವರ್ಷಗಳ ಇತಿಹಾಸವಿದ್ದರೆ, ಎಲ್ಲಾ ಮತಗಳಲ್ಲೂ ಇರುವ ಪುರೋಹಿತಶಾಹಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇನ್ನು ಮಾರ್ಕ್ಸ್ ಅವರಿಂದ ಮಾರ್ಕ್ಸ್ ವಾದ ಹೊರಹೊಮ್ಮಿ ಬೆಳೆದುಬಂದ ಹಾಗೆ ‘ಮನು’ವಿನಿಂದ ಮನುವಾದವು ಬೆಳೆದು ಬಂದಿದೆಯೆ? ಶ್ರೇಣೀಕೃತ ಜಾತಿವ್ಯವಸ್ಥೆ ಮನುವಿನ ಸೃಷ್ಟಿಯೇ? ಇದಕ್ಕೆ ಸಂಬಂಧಿಸಿದ ‘ಸಮಾಜಶಾಸ್ತ್ರ’ ಇದನ್ನು ಸಮರ್ಥಿಸುತ್ತದೆಯೇ?

ಇದೇ ರೀತಿ ಬ್ರಾಹ್ಮಣಶಾಹಿ ಎಂಬ ಪದವನ್ನು ಸಾಮಂತಶಾಹಿ, ಬಂಡವಾಳಶಾಹಿ ಎಂಬ ಪದಗಳ ಹಾಗೆ ಹೇಗೆ ವಿವರಿಸುವುದು? ಆದರೆ, ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಇತ್ಯಾದಿ ವಿಶೇಷಣಗಳನ್ನು ಯಾವ ಅರ್ಥಪರಿಭೇದವಿಲ್ಲದೇ ಲೀಲಾಜಾಲವಾಗಿ ಬಳಸುತ್ತಾ ಅಂದಿನಿಂದ ಇಂದಿನವರೆಗೆ ಆಗಿ ಹೋದ ಲೇಖಕರುಗಳಲ್ಲಿ ಯಾರು ‘ಬ್ರಾಹ್ಮಣ’ ಜಾತಿಯಲ್ಲಿ ಹುಟ್ಟಿದ್ದಾರೆಂದು ಶೋಧಿಸಿ ಅವರನ್ನು ಕಟೆಕಟೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯುವುದು ಆಧುನಿಕ ಕನ್ನಡ ವಿಮರ್ಶೆಯ ಒಂದು ಅತಿ ಪ್ರಮುಖ ಲಕ್ಷಣ. ಯಾವ ಭಾಷೆಯಲ್ಲೂ ಈ ಬಗೆಯ ರೋಗವಿಲ್ಲ. ನಾಯರ್, ರೆಡ್ಡಿ, ಜಾಟ್, ಒಕ್ಕಲಿಗ, ಬಂಟ-ಶೆಟ್ಟಿ ಮೊದಲಾದ ಪರಮಶೋಷಕ ಭೂಮಾಲಕ ಜಾತಿ ಸಮುದಾಯದ ಲೇಖಕರು ತಮ್ಮನ್ನು ‘ಶೂದ್ರ’ರು, ಶೋಷಿತರು ಎಂದು ಕರೆದುಕೊಳ್ಳುವುದಂತೂ ಇಪ್ಪತ್ತೊಂದನೆಯ ಶತಮಾನದ ಕನ್ನಡ ವಿಮರ್ಶೆಯ ಒಂದು ಪರಮಾಶ್ಚರ್ಯವೂ ದುರಂತವೂ ಆಗಿದೆ.

ಈ ‘ಶೂದ್ರ’ ವಿಮರ್ಶಕರು ಹಾಗೂ ಅನುಸೂಚಿಕ ಜಾತಿಯಿಂದ ಮೇಲ್ಮಧ್ಯಮವರ್ಗಕ್ಕೆ ಬಂದ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಸಾಹಿತಿಗಳಿಗೆ ಎಲ್ಲೆಲ್ಲೊ ಬ್ರಾಹ್ಮಣ ಭೂತಗಳೇ ಹಳವಂಡವಾಗಿ ಕಾಣಿಸುತ್ತಿರುವ ಈ ಸನ್ನಿವೇಶದಲ್ಲಿ ಆಕಾಶದಿಂದ ಧರೆಗಿಳಿದು ಬಂದ ನೀಲಾಂಬರಿಯೇ ‘ಗಾಂಧಿ ಬಂದ’ ಎಂದ ಕಾದಂಬರಿ.

ಇದು ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ತರಗತಿಗೆ ಪಠ್ಯವಾಗಿದ್ದು ಅದನ್ನು ಕೂಡಲೇ ಹಿಂತೆಗೆಯುವಂತೆ (ಕಾರಂತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ) ‘ಆಚಾರಿ-ಆಚಾರ್ಯ’ ಸಮುದಾಯದ ಒಂದು ಗುಂಪು ಮತ್ತು ಈಗಲೋ ಆಗಲೋ ಕೊನೆಯುಸಿರೆಳೆಯುತ್ತಿರುವ ಯಾವುದೋ ಬ್ರಾಹ್ಮಣ ಪರಿಷತ್ತಿನ ಒಂದು ಗುಂಪು ಆಗ್ರಹಿಸುತ್ತಿದೆ. ಈ ಬಗ್ಗೆ ಭಯಾನಕವಾಗಿ ಸಾಹಿತ್ಯ ಲೋಕದಲ್ಲಿ ಪರವಿರೋಧಗಳ ಹೋರಾಟಗಳು ನಡೆಯುತ್ತಿವೆ. ಹಾಗಾದರೆ, ಈ ಕೃತಿಯಲ್ಲಿ ಅಂಥಾದ್ದೇನಿದೆ?

385 ಪುಟ್ಟಗಳಷ್ಟು ವಿಸ್ತಾರವಾದ ಈ ದೊಡ್ಡ ಕಾದಂಬರಿ ತನ್ನ ಬಾಲಕ್ಕೆ ಹಲವು ಬಿರುದಾಂಕಿತ ವಿಮರ್ಶಕರ ಜಡ್ಜ್ ಮೇಂಟ್ ಗಳನ್ನು ಸಿಕ್ಕಿಸಿಕೊಂಡಿದೆ. ಪಠ್ಯಕ್ಕೆ ಇಟ್ಟಿರುವುದು ಸದ್ರಿ ಕಾದಂಬರಿಯ ಸಂಕ್ಷಿಪ್ತ ರೂಪ.

‘ಆಚಾರಿ’ಗಳ ಬಗೆಗೆ ಈ 385 ಪುಟಗಳಲ್ಲಿ ವರ್ಣಾನೆಯಿರುವುದು ಬರೇ ಒಂದು ಸಣ್ಣ ಪ್ಯಾರಾ ಮಾತ್ರ (188-189). ಅದೂ ಕಾದಂಬರಿಯ ಯಾವುದೋ ಒಂದು ಪಾತ್ರದ ಬಾಯಲ್ಲಿ ಬರುವ ಒಂದು ಮಾತು. ಅದು ಆಕ್ಷೇಪಾರ್ಹವೆಂದಾದರೆ ಅದು ಆಕ್ಷೇಪ ಮಾಡುವರಿಗೆ ಕಾಡುತ್ತಿರುವ ಲಾಗಾಯ್ತಿನ ‘ಗಿಲ್ಟ್’ ಎಂದು ತಿಳಿಯಬಹುದೆ? ಇನ್ನು ‘ಬ್ರಾಹ್ಮಣ’ ಜಾತಿಗೆ ಯಾವುದೇ ‘ಅಪಮಾನ’ದ ಪ್ರಶ್ನೆಯೇ ಇಲ್ಲ. ಏಕೆಂದರೆ ಇದು ಹಿಂದಿನಿಂದಲೂ ಎಲ್ಲರಿಂದಲೂ ಬೈಸಿಕೊಳ್ಳುತ್ತಲೇ ಬಂದ ಜಾತಿ. ಹಾಗೆ ಬೈಯುವುದೇ ಒಂದು ಸಂಪ್ರದಾಯ. ಲೇಖಕಿ ಆ ಸತ್ಸಂಪ್ರದಾಯವನ್ನಷ್ಟೇ ಪಾಲಿಸಿದ್ದಾರೆ. ಅಲ್ಲದೇ ‘ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ? ಇಷ್ಟಕ್ಕೂ ಸಾಹಿತ್ಯ ಕೃತಿಯೊಂದರ ಬಗೆಗೆ ಇಂತಹ ‘ಹುಯಿಲು’ ‘ಆಕ್ರೋಶ’ ಸಾಹಿತ್ಯೇತರ ಕಾರಣಗಳಿಂದ ಬರುತ್ತದೆ.

ಯಾವುದೇ ಸಾಹಿತ್ಯ ಕೃತಿ ಒಂದೋ ಸಮಕಾಲೀನವಸ್ತುವನ್ನು ಹೊಂದಿರುತ್ತದೆ. ಇಲ್ಲವೆ ಪುರಾಣದ ಅಥವಾ ಇತಿಹಾಸದ ಯಾವುದೋ ಅಸ್ಪಷ್ಟವಸ್ತುವನ್ನು ಎತ್ತಿಕೊಂಡು ಅದನ್ನು ಆಧುನಿಕ ಯುಗಧರ್ಮದ ದೃಷ್ಟಿಯಿಂದ ಪುನಃ ಸೃಷ್ಟಿಸುತ್ತದೆ. ಆದರೆ, ‘ಗಾಂಧಿ ಬಂದ’ ಕಾದಂಬರಿಯ ಲೇಖಕಿ ಆಯ್ದುಕೊಂಡದು ಮಾತ್ರ ಅತಿ ಅಪಾಯಕಾರಿಯಾದ ಕಾಲಘಟ್ಟದ ವಸ್ತುವನ್ನು. ಏಕೆಂದರೆ ಇದು ಐತಿಹಾಸಿಕವೆಂದರೆ ಐತಿಹಾಸಿಕವೂ ಅಲ್ಲ ಪೌರಾಣಿಕವೆಂದರೆ ಪೌರಾಣಿಕವೂ ಅಲ್ಲ, ಸ್ವತಃ ತನ್ನ ಜೀವಿತದಲ್ಲಿ ಲೇಖಕಿ ಕಂಡ ವಿಚಾರವೂ ಅಲ್ಲ. ಲೇಖಕಿ ಹುಟ್ಟಿ ಬೆಳೆಯುವ ನೇರ ಹಿಂದಿನ – 1920-40ರ ಕಾಲ ಘಟ್ಟ. ಆ ಕಾಲದಲ್ಲೇ ಬದುಕಿ ಕೃತಿ ರಚಿಸಿದ ಹಲವಾರು ಲೇಖಕರಿದ್ದಾರೆ. (ಶಿವರಾಮ ಕಾರಂತರ ‘ಔದಾರ್ಯದ ಉರುಳಲ್ಲಿ’ ಈ ನೆಲೆಯಲ್ಲಿ ಅತ್ಯಂತ ಮಹತ್ವದ ಕೃತಿ) ಈ ಬಗೆಗೆ ಇಂಚಿಂಚೂ ದಾಖಲಾದ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯ ಅಧ್ಯಯನವೆಷ್ಟು ಆಕೆಯ ಸಾಹಸ ಎಷ್ಟರ ಮಟ್ಟಿಗೆ ಸಾರ್ಥಕವಾಗಿದೆ ಎಂಬ ಬಗೆಗೆ ನನ್ನ ವಿವೇಚನೆ ಹೀಗಿದೆ:

ಉತ್ಪಾದಕ ಶಕ್ತಿಗಳ ವಿಕಾಸದೊಂದಿಗೆ ಉತ್ಪಾದನಾ ಸಂಬಂಧಗಳಲ್ಲಿ ಬದಲಾವಣೆಗಳಾಗುತ್ತವೆ. ‘ಗಾಂಧಿ ಬಂದ’ ಕಾದಂಬರಿಯಲ್ಲಿ ಉತ್ಪಾದಕಶಕ್ತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಅದು ಸ್ಥಿರವಾಗಿದೆ. ಜಡವಾಗಿದೆ. ಆದರೆ, ಉತ್ಪಾದನಾ ಸಂಬಂಧಗಳಲ್ಲಿ ಮಾತ್ರ ಅಭೂತಪೂರ್ವವಾದ ಬದಲಾವಣೆ ಕಂಡುಬರುತ್ತದೆ. ಕಾದಂಬರಿಯ ಅರ್ಧಭಾಗದ ತನಕ ಭೂಮಾಲಕರು ಮತ್ತು ಒಕ್ಕಲುಗಳ ಸಂಬಂಧ ಪಾಳೇಗಾರಿ ಸಮಾಜದ ವಾಸ್ತವದ ಕಲಾತ್ಮಕಚಿತ್ರಣವನ್ನು ನೀಡಲು ಪ್ರಯತ್ನ ನಡೆಸಿದ್ದರೆ ಆ ನಂತರದ ಭಾಗದಲ್ಲಿ ಪಾಳೇಗಾರಿ ಸಂಬಂಧಗಳಲ್ಲಿ ಅಭೂತಪೂರ್ವ ಅತಿರಂಜಕ ಬದಲಾವಣೆಯಾಗುತ್ತದೆ. ಆದರೆ, ಈ ಬದಲಾವಣೆಗೆ ಯಾವುದೇ ನೆಲೆಯೂ ಇಲ್ಲ; ಆಧಾರವೂ ಇಲ್ಲ. ‘ಗಾಂಧಿವಾದ’ದಿಂದ ಆಗಿದೆ ಎನ್ನಲಾಗುವ ಈ ಪರಿವರ್ತನೆ ಬರೇ ಕಲ್ಪನಾವಿಲಾಸ. ಉದಾಹರಣೆಗೆ ಕಾದಂಬರಿಯ ಆರಂಭದ ‘ಜುಮಾದಿ ಕೋಲ’ದ ಸಂದರ್ಭ ಮತ್ತು ಕಾದಂಬರಿಯ ಕೊನೆಯ ‘ಜಮಾದಿ ಕೋಲ’ವನ್ನು ಹೋಲಿಸಬಹುದು. ಒಂದಕ್ಕೊಂದು ಸಂಬಂಧವಿಲ್ಲ. ಕಾದಂಬರಿಯ ಕೊನೆಯ ಘಟ್ಟದಲ್ಲಿ ಕೊರಗ, ಮೈಲಿ ಇತ್ಯಾದಿ ಎಲ್ಲರೂ ‘ಜುಮಾದಿ ಕೋಲ’ವನ್ನು ಬಹಿಷ್ಕರಿಸಿ ಗಾಂಧಿಯನ್ನು ನೋಡಲು ಹೋಗುತ್ತಾರೆಂದರೆ ಇದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ.

ಗಾಂಧಿವಾದ ಎಂದೂ ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಗೋಜಿಗೆ ಹೋಗುವುದಿಲ್ಲ. ಗಾಂಧೀಜಿ ವರ್ಣಾಶ್ರಮ ಧರ್ಮದಲ್ಲಿ ಅಖಂಡ ನಂಬಿಕೆಯನ್ನಿಟ್ಟವರು. ಅಂಬೇಡ್ಕರ್ ದೇವಾಲಯ ಪ್ರವೇಶ ಚಳವಳಿ ಆರಂಭಿಸಿದ ನಂತರವಷ್ಟೇ ಗಾಂಧೀಜಿ ಅದನ್ನು ತಮ್ಮ ಎಜೆಂಡಾದಲ್ಲಿ ಸೇರಿಕೊಂಡರು. ಅಸ್ಪೃಶ್ಯತಾ ನಿವಾರಣೆ, ಕೋಮು ಸೌಹಾರ್ದಕ್ಕೆ ಗಾಂಧೀಜಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಆದರೆ, ವಿಧವಾವಿವಾಹಕ್ಕೆ ಅವರ ಅನುಮತಿಯಿರಲಿಲ್ಲ. ‘ವಿಧವೆ’ಯೊಬ್ಬಳಿಗೆ ವಿವಾಹ ಮಾಡಿಸುವ ಪ್ರಸ್ತಾಪವನ್ನು ಗಾಂಧೀಜಿಯವರ ಮುಂದಿಟ್ಟಾಗ ಗಾಂಧೀಜಿ ಆಕೆ ಬ್ರಹ್ಮಚರ್ಯಪಾಲಿಸಿಬೇಕೆಂದು ಆಜ್ಞಾಪಿಸಿದ್ದರಿಂದ ನಾನು ಗಾಂಧಿವಾದದಿಂದ ವಿಮುಖನಾದೆ ಎಂದು ಕಾರಂತರು ತಮ್ಮ ಜೀವನಚರಿತ್ರೆಯಲ್ಲಿ ಬರೆದಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಆದರೆ, ಕಾದಂಬರಿಯ ಲೇಖಕಿ ಬ್ರಾಹ್ಮಣ ಬೋಳುಮಂಡೆ ವಿಧವೆಯನ್ನು ‘ಅದ್ರಾಮ’ನೆಂಬ ಮುಸ್ಲಿಮನೊಡನೆ ವಿವಾಹ ಮಾಡಿಸಲು ಶತಪ್ರಯತ್ನ ಮಾಡಿ ಭಾರೀ ಕ್ರಾಂತಿಕಾರಿ ಕೆಲಸ ಮಾಡಿಸುತ್ತಾರೆ. ಆದರೆ, ಅವರ ವಿಚಿತ್ರ ಪ್ರೇಮವು ಸಾರ್ಥಕತೆ ಪಡೆದು ‘ಮದುವೆ’ಯಲ್ಲಿ ಪರ್ಯವಸಾನಗೊಳ್ಳಲು ಕಾರಣವಾಗುವುದು. ಮಾತ್ರ ಅಮರ ಪ್ರೇಮವಲ್ಲ; ಬದಲಿಗೆ ಹೆಬ್ಬಾರರ ಮೇಲೆ ಗುತ್ತಿನ ಶೆಟ್ಟರ ಸೇಡಿನ ಫಲ. ಅವನು ದ್ರೌಪದಿಯನ್ನು ನೋಡಲು ಮಾಡಿದ ಪ್ರಯತ್ನದ ಹತ್ತನೆಯ ಒಂದಂಶ ಕೂಡಾ ಗಾಂಧೀ ಚಳವಳಿಗೆ ಮಾಡುವುದಿಲ್ಲ. ಆದರೂ ಅದ್ರಾಮ ಸ್ವಾತಂತ್ರ್ಯಯೋಧನಾಗಿ ಹುತಾತ್ಮನಾಗುತ್ತಾನೆ! ಇದೆಲ್ಲಾ ಗಾಂಧಿವಾದದ ಪರಿವರ್ತನೆಯ ಅಲೆಯಾಗಿ ವಿಮರ್ಶಕರಿಗೆ ಕಾಣಿಸುತ್ತಿರುವುದು ಲೇಖಕಿಯ ಸ್ವಂತದ ‘ಗಾಂಧಿವಾದ’ಕ್ಕೆ ಅವರು ಹಾಕುವ ಒಗ್ಗರಣೆಯಲ್ಲದೆ ಮತ್ತೇನಲ್ಲ.

ಈ ಕಾದಂಬರಿಯಲ್ಲಿ ಇನ್ನೂ ಒಂದು ಗಾಂಧಿವಾದಿ ಮದುವೆಯಿದೆ. ಅದು ಈ ಕಾದಂಬರಿಯಲ್ಲಿ ಸಾಮಾಜಿಕವಾಗಿ ನೆಲೆಯಿಲ್ಲದ ‘ದಾರು’ ಎಂಬ ಗರ್ಭಕೋಶವಿಲ್ಲದ ಹೆಣ್ಣಿಗೆ ‘ಬಾಳು ಕೊಡುವ’ ಗಾಂಧಿವಾದಿ ಮಾರಪ್ಪನ ಆದರ್ಶ! ವರ್ಷಗಟ್ಟಳೆ ದಾರುವಿನ ಕಷ್ಟ ನೋಡಿ ಸಾಕಾಗಿ ಆಕೆಯ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಗಾಂಧಿವಾದಿ ಮಾರಪ್ಪನಿಗೆ ದಿಗ್ಗನೆ ಎಚ್ಚರವಾಗುತ್ತದೆ. ಆತ ದಾರುವನ್ನು ಮದುವೆಯಾಗಿ ಅವಳಿಗೆ ಬಾಳುಕೊಡುವ ಮಹಾದರ್ಶಕ್ಕೆ ಒಳಗಾಗಿ ಸಾವಿನ ಮನೆಯೆಂಬುದನ್ನೂ ಲೆಕ್ಕಿಸದೆ ಆಕೆಯನ್ನು ಮದುವೆಯಾಗುತ್ತಾನೆ. ಆದರೆ ಆಕೆಗೆ ಹೇಗೆ ಬಾಳು ಕೊಡಬೇಕೆಂದು ಆತನಿಗೇ ಗೊತ್ತಿಲ್ಲ. ವಿಚಿತ್ರವೆಂದರೆ, ಹೆಬ್ಬಾರರೊಡನೆ ‘ಹೆಬ್ಬಾರರೇ ನಿಮ್ಮ ಶಾಸ್ತ್ರದಲ್ಲಿ ಕಾಮ ಪರಿಹಾರಕ್ಕಾಗಿ ಯಾವುದಾದರೂ ಮಂತ್ರಗಿಂತ್ರ ಹೇಳಿದ್ದಾರಾ?’ (ಪುಟ 90) ಎಂದು ಲೇವಡಿ ಮಾಡುವ ಈತನಲ್ಲಿ ‘ಕಾಮ’ವೆೇ ಇಲ್ಲ. ಆಕೆಯೊಂದಿಗೆ ಆತನ ವ್ಯವಹಾರವೆಲ್ಲಾ ಅತ್ಯಂತ ಅಮಾನವೀಯ. ಪ್ರಾಯಃ ಶಿಖಂಡಿ ದಾರುವಲ್ಲ. ಮಾರಪ್ಪನೇ ಇರಬೇಕು ಎಂದು ಓದುಗರಿಗೆ ಅನ್ನಿಸದೇ ಇರಲಾರದು. ಒಟ್ಟಿನಲ್ಲಿ ಮಾರಪ್ಪನದೊಂದು ಅಸಂಬದ್ಧ ಪಾತ್ರಚಿತ್ರಣ.

‘ಗಾಂಧಿ’, ‘ತಕಲಿ’, ‘ಖಾದಿ’ ಇತ್ಯಾದಿ ಚರ್ವಿತ ಚರ್ವಣದ ವಿವರಣೆ ಬಿಟ್ಟರೆ – ‘ದಲಿತೋದ್ಧಾರ’ – ಇಲ್ಲ, ಅಸ್ಪೃಶ್ಯತ ನಿವಾರಣೆಯ ವಿಚಾರವೇ ಇಲ್ಲ. ಆದರೆ, ಪಾನ ನಿಷೇದದ ಸಂಗತಿ ಇದೆ. ಸೇಂದಿ ಮಡಿಕೆಗೆ ಕಲ್ಲು ಹೊಡೆಯುವ, ಸರಾಯಿ ಮಾರುವವರನ್ನು ಹೊಡೆಯುವ ಹಿಂಸಾವಾದಿ ಗಾಂಧಿ ಇಲ್ಲಿ ವಿಜ್ರಂಭಿಸುತ್ತಾನೆ. ವಿಧವೆ ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದು ಗಾಂಧಿ ಹೇಳಿದರೆ ಈ ಕಾದಂಬರಿಯು ಗಾಂಧಿ ಬ್ರಾಹ್ಮಣ ವಿಧವೆಗೆ ಮುಸ್ಲಿಂ ಅದ್ರಾಮನೊಂದಿಗೆ ಮದುವೆ ಮಾಡಿಸುವ ಮೂಲಕ ‘ನವ ಗಾಂಧಿ’ವಾದಿ ಕೃತಿಯಾಗಿ ಬಿಡುತ್ತದೆ. ದ್ರೌಪದಿ ಸಣ್ಣ ಪ್ರಾಯದ ವಿಧವೆ. ಮನೆಯಿಂದ ಹೊರಗೆ ಹೋದವಳಲ್ಲ. ಅವಳನ್ನು ಯಾರೂ ಮಾತನಾಡಿಸುವರಿಲ್ಲ. ಆದರೂ ಆಕೆ ಗಾಂಧಿ ಫಂಡಿಗೆ ತನ್ನ ಪಾಲಿನ ನಿಧಿಯನ್ನು ಗುಟ್ಟಾಗಿ ಅಂತಪ್ಪನೊಡನೆ ಕಳುಹಿಸಿಕೊಡುತ್ತಾಳೆ. ಅದೂ ತನ್ನ ಪ್ರೀತಿಯ ಗಂಡನ ಸ್ಮೃತಿಗಾಗಿ ಜೋಪಾನವಾಗಿ ಇಟ್ಟುಕೊಂಡ ಅಂಗಿಯ ಚಿನ್ನದ ಗುಂಡಿಗಳನ್ನು! ಇದು ಪಾತ್ರ ಚಿತ್ರಣದ ಶೈಥಿಲ್ಯವಲ್ಲದೇ ಮತ್ತೇನೂ ಅಲ್ಲ. ಲೇಖಕಿ ಪಾತ್ರಗಳ ಮೇಲೆ ತನ್ನ ಭಾವನೆಗಳನ್ನು ಹೇರುತ್ತಾರೆಯೇ ಹೊರತು ಯಾವುದೇ ಪಾತ್ರ ತಾನಾಗಿಯೇ ಕಾದಂಬರಿಯಲ್ಲಿ ಬೆಳೆದು ಬರುವುದಿಲ್ಲ.

ಆಶ್ಚರ್ಯವೆಂದರೆ, ಆ ಕಾಲದ ಪಾಳೇಗಾರಿ ಸಮಾಜದಲ್ಲಿ ಒಕ್ಕಲುಗಳನ್ನು ಮರಕ್ಕೆ ಕಟ್ಟಿ ಹೊಡೆಯುವ, ಕಣ್ಣು ಕೀಳಿಸುವ, ಕೊಂದು ಗೊಬ್ಬರದ ಗುಂಡಿಯಲ್ಲಿ ಹೂತು ಹಾಕುವ ಭೂಮಾಲಿಕ ಸಮುದಾಯದ ವ್ಯಕ್ತಿಗಳೆಲ್ಲಾ ಈ ಕಾದಂಬರಿಯಲ್ಲಿ ಮಹಾನ್ ಗಾಂಧಿವಾದಿಗಳು, ಉದಾರಚೇತಸರು. ಕಾದಂಬರಿಯ ಆರಂಭದಿಂದ ಕೊನೆಯತನಕ ‘ಖಳನಾಯಕ’ನಾಗಿರುವವನು ಹೆಬ್ಬಾರನೆಂಬ ಬ್ರಾಹ್ಮಣ! ಈ ಕಾದಂಬರಿಯ ಮಹಾನ್ ಸಾಧನೆಯೆನೆಂದರೆ ಬಹುತೇಕ ಆ ಕಾಲದಲ್ಲಿ ಪಾಣಿಪಂಚೆಗೆ ಗತಿಯಿಲ್ಲದ ಬ್ರಾಹ್ಮಣರ ಪ್ರತಿನಿಧಿ ಈ ಕಾಲದಲ್ಲಿ ‘ವಿಲನ್’ ಆಗಿ ಚಿತ್ರಣಗೊಂಡಿರುವುದು. ಇದಕ್ಕೆ ಬ್ರಾಹ್ಮಣ ಜಾತಿಯ ಜನರು ಹೆಮ್ಮೆ ಪಡಬೇಕು. ಏಕೆಂದರೆ ಇತಿಹಾಸದುದ್ದಕ್ಕೂ ಭಿಕ್ಷುಕ – ಬಡವ – ಸುಳ್ಳ – ಕಳ್ಳನಾಗಿದ್ದ ಬ್ರಾಹ್ಮಣ ಈ ಕಾದಂಬರಿಯಲ್ಲಿ ‘ವಿಲನ್’ ಪಾತ್ರಕ್ಕೆ ಆಯ್ಕೆಯಾದುದಕ್ಕೆ ಸದ್ರಿ ಜಾತಿಯವರು ಖುಷಿ ಪಡುವುದು ಬಿಟ್ಟು ಆ ಕೃತಿಯನ್ನು ಮುಟ್ಟುಗೊಲು ಹಾಕಲು ಒತ್ತಾಯಿಸಬಾರದು.

ಕಾರ್ನಾಡ್ ಸದಾಶಿವರಾಯರು ದಕ್ಷಿಣಕನ್ನಡದ ಗಾಂಧಿಯೆಂದೇ ವಿಖ್ಯಾತರಾದವರು. ಅಂದು ಅವರು ಕಾಂಗ್ರೆಸಿನ ಮುಖ್ಯ ಪದಾಧಿಕಾರಿಗಳಾಗಿದ್ದವರು. ಹಲವಾರು ಬಾರಿ ಯಾತನಾಮಯ ಜೈಲು ಶಿಕ್ಷೆ, ಲಾಟಿ ಏಟು ತಿಂದವರು. ಆಗರ್ಭ ಶ್ರೀಮಂತರಾಗಿದ್ದ ಅವರು ತಮ್ಮದೆಲ್ಲ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀರಿನಂತೆ ಚೆಲ್ಲಿದವರು. ಸಾಯುವಾಗ ಅವರ ಜೇಬಿನಲ್ಲಿ ಒಂದು ಪೈ ಕೂಡಾ ಇರಲಿಲ್ಲ. ಕಾದಂಬರಿಯ ಕಾಲಘಟ್ಟದ ಇಂತಹ ಮಹಾನ್ ನಾಯಕನ ಬಗ್ಗೆ ಕಾದಂಬರಿಯಲ್ಲಿ ಯಾವ ವಿವರಣೆಯೂ ಇಲ್ಲ.

ದುರಂತನಾಯಕ ಕಾರ್ನಾಡ್ ಸದಾಶಿವರಾಯರ ಪೂವರ್ಿಕರ ಆಸ್ತಿ ಎಲ್ಲೆಲ್ಲೂ ಇತ್ತು. ಯಾರ್ಯಾರೋ ಅವರ ಆಸ್ತಿಯನ್ನು ನುಂಗಿ ಹಾಕಿದರು. ಕಾರ್ನಾಡಿನಲ್ಲಿರುವ ಅವರ ಆಸ್ತಿಯನ್ನು ಯಾವ ಗುತ್ತಿನವರು ಲಪಟಾಯಿಸಿದರು ಎಂಬುದು ಕಾರ್ನಾಡಿನವರಿಗೆ ಗೊತ್ತು. ಅಥವಾ ಆ ಕಾಲದಲ್ಲಿ ಜೀವಂತವಾಗಿ ಇದ್ದು, ಇದನ್ನೆಲ್ಲಾ ಕಂಡು ‘ಔದಾರ್ಯದ ಉರುಳಲ್ಲಿ’ ಕಾದಂಬರಿ ಬರೆದ ಕಾರಂತರಿಗೆ ಗೊತ್ತು. ಆದರೆ ಈ ಲೇಖಕಿಗೆ ಇದಾವುದೂ ಗೊತ್ತಿಲ್ಲ. ಇದೆಲ್ಲಾ ಅಜ್ಞಾನವೆ? ಅಥವಾ ಜಾಣತನವೆ?

ಅಕ್ಕಿಗೆ 2 ರೂಪಾಯಿ 3 ರೂಪಾಯಿ ಇದ್ದ ಕಾಲವದು. ಆದರೆ ಲೇಖಕಿಯ ದೃಷ್ಟಿಯಲ್ಲಿ ಅಕ್ಕಿ ಮುಡಿಗೆ 14 ರೂಪಾಯಿ! ಯುದ್ಧಾನಂತರ ಸಾಮಾನಿನ ಬೆಲೆ ಗಗನಕ್ಕೇರಿದ್ದು, ಅದರಿಂದ ಜನ ಪಡಬಾರದ ಕಷ್ಟ ಅನುಭವಿಸಿದ್ದು ಈ ಕಾದಂಬರಿಯಲ್ಲಿ ನಮೂದಾಗುವುದೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಮೊದಲ ಬಾರಿ ಬಂದು ಹೊದ ಒಂದರೆಡು ವರ್ಷಗಳಲ್ಲಿ ಕರಾವಳಿಯುದ್ದಕ್ಕೂ ಹಿಂದೆಂದೂ ಕಂಡು ಕೇಳರಿಯದ ನೆರೆ ಬಂತು. ಸಾವಿರಾರು ಮನೆಗಳು ನಾಶವಾದವು. ಬೆಳೆ ನಾಶವಾಯಿತು. ಕಾರ್ನಾಡರು ಮಂಗಳೂರಿನಿಂದ ಅಂಕೋಲೆವರೆಗೆ ಜನರಿಗೆ ಅಕ್ಕಿ ದವಸದಾನ್ಯ ಇತ್ಯಾದಿ ನೀಡಿ ಪರಿಹಾರ ಕಾರ್ಯದಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡರು. ಕಾರಂತರು ಕುಂದಾಪುರದಲ್ಲಿ ಅವರಿಗೆ ಸಹಾಯಕರಾಗಿ ದುಡಿದರು. ಕಾರಂತರು ತಮ್ಮ ಸ್ಮೃತಿ ಪಟಲದಲ್ಲಿ ಬರೆಯುತ್ತಾರೆ:- ಮುಂದಿನೆರಡು ವರ್ಷಗಳಲ್ಲಿ ಅಪೂರ್ವ ನೆರೆ ನಮ್ಮ ಜಿಲ್ಲೆಯ ನದಿಗಳಲ್ಲಿ ಕಾಣಿಸಿಕೊಂಡಾಗ ಜನಗಳಿಗಾದ ಹಾನಿ ಅಷ್ಟಿಷ್ಟಲ್ಲ. ಆ ಕಾಲದಲ್ಲಿ ಕುಂದಾಪುರದಲ್ಲಿ ಉಂಟಾದ ನೆರೆಹಾವಳಿಯ ವಿವರಗಳನ್ನು ಮನೆಮನೆಗೂ ಹೋಗಿ ಸಂಗ್ರಹಿಸಿದ ನನಗೆ ಅದರ ನೋವು ಅರಿವು ಚೆನ್ನಾಗಿದೆ. ಆ ವೇಳೆಗೆ ಸದಾಶಿವರಾಯರು ಅಲ್ಲಿಗೂ ಎಷ್ಟೊಂದು ಬಾರಿ ಬಂದು ಹೋಗಿದ್ದರು.

ಆಶ್ಚರ್ಯವೆಂದರೆ, ಆ ಕಾಲಘಟ್ಟದ ವಾಸ್ತವಿಕ ಚಿತ್ರಣ ಕೊಡುವ ಮಹದೋದ್ದೇಶ ಹೊಂದಿದ ‘ಗಾಂಧಿ ಬಂದ’ ಲೇಖಕಿಗೆ ಈ ಪ್ರಾಥಮಿಕ ಐತಿಹಾಸಿಕ ಜ್ಞಾನವೂ ಇಲ್ಲದಿರುವುದು ನಿಜಕ್ಕೂ ಶೋಚನೀಯ.

ಆ ಕಾಲಘಟ್ಟದ ಪಾಳೇಗಾರಿ ಪ್ರಭುಗಳು ‘ಗುತ್ತಿನವರು’ ಬಂಟರು, ವಕ್ಕಲಿಗರು. ಇಡೀ ದೇಶದ 35 ಭಾಗಗಳಲ್ಲಿ (28 ರಾಜ್ಯ + 7 ಕೇಂದ್ರಾಡಳಿತ ಪ್ರದೇಶ) ಕೇವಲ ಕೇರಳ, ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಕರ್ನಾಟಕದಲ್ಲಿ ಮಾತ್ರ ಜಮೀಂದಾರಿ ವ್ಯವಸ್ಥೆ ಇಂದಷ್ಟೇ ತಕ್ಕಮಟ್ಟಿಗೆ ಕೊನೆಗೊಂಡಿದೆ. ಆದಾಗ್ಯೂ ಕರ್ನಾಟಕದಲ್ಲಿ ಒಕ್ಕಲು ಮಸೂದೆಯಿಂದ ನಷ್ಟ ಅನುಭವಿಸಿದವರು ಬ್ರಾಹ್ಮಣರೇ ಹೊರತು ಬಂಟ – ವಕ್ಕಲಿಗ ಲಿಂಗಾಯಿತ ಜಾತಿಗಳಲ್ಲ. ಇಂದು ಕರ್ನಾಟಕವೂ ಸೇರಿದಂತೆ ದೇಶದೆಲ್ಲಡೆ ಇದೇ ಭೂಮಾಲಿಕ ಬಂಡವಾಳಶಾಹಿ ವರ್ಗ ಅಧಿಕಾರದಲ್ಲಿರುವುದು. ಆದರೆ ಕಾದಂಬರಿಗಾರ್ತಿ ಸ್ವಾತಂತ್ರ್ಯಪೂರ್ವದ 2-3ನೇ ದಶಕದಲ್ಲಿಯೆ ಬ್ರಾಹ್ಮಣ ಹೆಬ್ಬಾರನೊಬ್ಬನನ್ನು ಭೂಮಾಲಿಕ ಸ್ಥಾನದಲ್ಲಿ ನಿಲ್ಲಿಸಿ ಆತನ ಪಾಳೇಗಾರಿ ಶೋಷಣೆಯನ್ನು ವಿವರವಾಗಿ ವರ್ಣಿಸಿದ್ದಾರೆ. ನಮಗೆ (ಕಾರಂತರ ಕಾದಂಬರಿಗಳಲ್ಲಿ) ಆ ಕಾಲದ ಕೋಮಣಕ್ಕೆ ಗತಿಯಿಲ್ಲದ ದಟ್ಟ ದರಿದ್ರ ಬ್ರಾಹ್ಮಣರು ಕಂಡು ಬಂದರೆ ಇಲ್ಲಿಯ ಚಿತ್ರಣವೇ ಬೇರೆ. ಕಾರಂತರು ಆ ಕಾಲದಲ್ಲಿ ಬದುಕ್ಕಿದ್ದವರು. ಅವರು ಬದುಕಿನ ವಾಸ್ತವಗಳನ್ನು ಚಿತ್ರಿಸಿದ್ದಾರೆ. ಸದ್ರಿ ಲೇಖಕಿ ಬ್ರಾಹ್ಮಣರ ಬಗೆಗಿನ ಕಲ್ಪಿತ, ಪೂರ್ವಾಗ್ರಹಗಳಿಂದ ತಾನು ಕಂಡಿರದ ಪ್ರಪಂಚದ ಅವಾಸ್ತವಿಕ ಸ್ಪಪ್ನಲೋಕವನ್ನು ಸೃಷ್ಟಿಸಿದ್ದಾರೆ. ಇದರಿಂದಾಗಿ ಆರಂಭದಿಂದ ಅಂತ್ಯದವರೆಗೆ – ‘ಹೆಬ್ಬಾರ’ ಎಂಬ ಬ್ರಾಹ್ಮಣನು ಖಳನಾಯಕನಾಗಿ ಇಡೀ ಕಾದಂಬರಿಯು ಅವನ ಸುತ್ತಲೇ ಗಿರಕಿ ಹೊಡೆಯುತ್ತ ಇರುತ್ತದೆ.

ಈ ಕಾದಂಬರಿಯಲ್ಲಿ ‘ಗಾಂಧಿ’ ಬರೇ ನಾಮಕಾವಾಸ್ತೆ ಅಷ್ಟೇ. ಗಾಂಧಿ ಮತ್ತು ಗಾಂಧಿವಾದದ ಬಗ್ಗೆ ಲೇಖಕಿಯ ತಿಳುವಳಿಕೆ ಪ್ರಾಥಮಿಕ ಶಾಲೆಯ ಪಠ್ಯಗಳಲ್ಲಿ ಚಿತ್ರಿಕವಾದ ಗಾಂಧಿ ಬಗೆಗಿನ ವಿವರಗಳಿಗಿಂತ ಹೆಚ್ಚಿನದಲ್ಲ. ಗಾಂಧಿ ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಅವರು ಉಡುಪಿ, ಬ್ರಹ್ಮಾವರ, ಕುಂದಾಪುರ, ಮಂಗಳೂರಿನ ಆಚೀಚಿನ ಹಲವಾರು ಪ್ರದೇಶಗಳಿಗೂ ಭೇಟಿಕೊಟ್ಟಿದ್ದರು. ಆದರೆ, ಈ ಕಾದಂಬರಿಗಾರ್ತಿಯ ಪ್ರಕಾರ ಮೂರು ಸಾರಿ ಗಾಂಧಿ ಕೇವಲ ಮಂಗಳೂರಿಗೆ ಮಿಂಚಿನಂತೆ ಬಂದು ಮಾಯಾವಾಗಿದ್ದಾರೆ. ಇದು ‘ಗಾಂಧಿ ಬಂದ’ ಶಿರ್ಷಿಕೆ ಹೊತ್ತ ಕಾದಂಬರಿಯ ‘ಗಾಂಧಿ ಕಥೆ’!

ಲೇಖಕಿಯ ಪೂರ್ವಗ್ರಹೀತವು ಕೇವಲ ಬೌದ್ಧಿಕ ಮಟ್ಟದಲ್ಲಷ್ಟೇ ವಿಹಾರ ಮಾಡುತ್ತಿರುವುದರಿಂದ ಕೌಟುಂಬಿಕ ಸಂಬಂಧಗಳ ಮನಮುಟ್ಟುವ ಕೇವಲ ಒಂದು ವರ್ಣಾನೆ ಸುಬ್ಬಯ್ಯ ಶೆಟ್ಟಿಯ ಪ್ರಸಂಗದಲ್ಲಿ ಬಿಟ್ಟರೆ ಮತ್ತೆಲ್ಲೂ ಕಂಡು ಬರುವುದಿಲ್ಲ. ಇಲ್ಲಿ ಯಾರಿಗೂ ವಾಸ್ತವಿಕ ಕೌಟುಂಬಿಕ ಸಂಬಂಧಗಳಿಲ್ಲ. ಬ್ರಾಹ್ಮಣ ಹೆಬ್ಬಾರಿನಿಗಂತೂ ಕೌಟುಂಬಿಕ ಸಂಬಂಧವೇ ಇಲ್ಲ. ವಿಧವೆ ದ್ರೌಪದಿ ಯಾವ ರೀತಿಯಲ್ಲೂ ಹೆಬ್ಬಾರನ ಕುಟುಂಬದಲ್ಲಿ Fit ಆಗುವುದಿಲ್ಲ. ಅವಳ ಪಾತ್ರವೇ ಸಂಪೂರ್ಣವಾಗಿ misfit.. ಕೊನೆಗೆ ಅವಳನ್ನು ಅದ್ರಾಮನೊಂದಿಗೆ ಸೇರಿಸಿದ ಲೇಖಕಿ ಆಕೆಗೊಂದು ಮಗುವಾಗುತ್ತಲೇ ಅದ್ರಾಮನನ್ನು ಕೊಲ್ಲಿಸಿ ಆತನಿಗೊಂದು ಹುತಾತ್ಮಪಟ್ಟ ಕೊಡಿಸಿ, ದ್ರೌಪದಿಯನ್ನು ಸಿನೇಮಾದ ದುರಂತ ನಾಯಕಿಯಾಗಿಸುವುದಂತೂ ಕಾದಂಬರಿಗಾರ್ತಿಯ ಬಾಲಪ್ರತಿಭೆಯೆಂದು ನಿಜಕ್ಕೂ ಶ್ಲಾಘಿಸಬಹುದು!

ಹೆಬ್ಬಾರರ ಮದುವೆಯಾಚೆಗಿನ ಪುಟ್ಟಮ್ಮಕ್ಕನ ಸಂಬಂಧವು ಯಥಾರ್ಥವೂ ಸಹಜವೂ ಆಗಿದೆ. ಆದರೆ ಆಕೆ ಯಾವ ಹಿನ್ನೆಲೆ ಮುನ್ನೆಲೆಯಿಲ್ಲದೆ ಗಾಂಧಿಯ ಬಗ್ಗೆ ಭಯಾನಕ ಗೌರವ ಹೊಂದಿ ಚಿನ್ನಾಭರಣಗಳನ್ನು ಕೊಡುವುದು ಮತ್ತು ಆ ಚಿನ್ನಾಭರಣಗಳು ಗುತ್ತಿನ ಶೆಟ್ಟರದ್ದೇ ಆಗಿರುವುದು, ಚಂದಮಾಮದ ಕತೆಯನ್ನು ನೆನಪಿಸುವಂತಿದೆ.

ಹೆಬ್ಬಾರನನ್ನು ಮಾಧ್ವ ಬ್ರಾಹ್ಮಣನೆಂದು ಲೇಖಕಿ ವರ್ಣಿಸುತ್ತಾರೆ. ಪದೇ ಪದೇ ಬ್ರಾಹ್ಮಣರ ಜನಿವಾರದಲ್ಲಿ ನಾಲ್ಕು ಮಣ ಮಣ್ಣು ಕೊಳೆಬೆಲ್ಲ ಅಂಟಿಕೊಂಡಿದೆ, ಮೆತ್ತಿಕೊಂಡಿದೆಯೆಂದು ಲೇಖಕಿ ಆರೋಪಿಸುತ್ತಾರೆ. ಇಷ್ಟೇ ಅಲ್ಲ, ಚಾಂಡಾಲ ಬ್ರಾಹ್ಮಣ, ಬ್ರಾಹ್ಮಣನ ಹೆಣ, ಪುಳಚಾರು ಬ್ರಾಹ್ಮಣ ಎಂದು ಪದೇ ಪದೇ ಲೇವಡಿ ಮಾಡುತ್ತಾರೆ. ಬ್ರಾಹ್ಮಣರು ಇಷ್ಟೊಂದು ಕೊಳಕರಾಗಿ ಲೇಖಕಿಗೆ ಕಾಣಿಸುವಾಗ ಬ್ರಾಹ್ಮಣರ ಆಚಾರವಿಚಾರಗಳ ಬಗ್ಗೆ ಲೇಖಕಿಯ ತಿಳುವಳಿಕೆ ಯಾವ ಮಟ್ಟದ್ದು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಮಾಧ್ವ ಬ್ರಾಹ್ಮಣ ಹೆಬ್ಬಾರನ ಮುದ್ರಾಧಾರಣೆಯ ಪ್ರಸಂಗವನ್ನಷ್ಟೇ ತೆಗೆದುಕೊಳ್ಳೋಣ. ಶಂಖ ಚಕ್ರ ಇತ್ಯಾದಿ ಮುದ್ರೆಯನ್ನೊತ್ತುವುದು ತಾಮ್ರ ಅಥವಾ ಬೆಳ್ಳಿಯಿಂದ ಮಾಡಲಾದ ಸೀಲುಗಳ ಮೂಲಕ. ಅದೂ ಅದನ್ನು ಬರಿದೇ ತಾಗಿಸುವುದಷ್ಟೆ. ಆದರೆ, ಲೇಖಕಿ ಅದನ್ನು ಕಾದ ಕಬ್ಬಿಣದಿಂದ ಒತ್ತಿ ಹಾಕಿಸುತ್ತಾರೆ. ಹೀಗಾದರೆ, ಈ ಬ್ರಾಹ್ಮಣರೆಲ್ಲಾ ಗಾಯಾಳುಗಳಾಗಿಯೋ, ಟಿಟಾನಸ್ ಪೀಡಿತರಾಗಿಯೋ ಸಾಯಬೇಕಾಗುತ್ತದೆ. ಇವೆಲ್ಲಾ ವಾಸ್ತವ ಚಿತ್ರಣವೆ? ಇನ್ನೊಂದೆಡೆ ಸಂವತ್ಸರಗಳ ಹೆಸರು ಕೂಡಾ ತಪ್ಪು. ರೌದಿ ಅಲ್ಲ ರೌದ್ರಿ, ರುದೋದ್ದಾರಿ ಅಲ್ಲ ರುಧಿರೋದ್ಗಾರಿ.

ಈ ಕಾದಂಬರಿಯ ಲೇಖಕಿ ಹೀನೋಪಮೆಯ ಸರದಾರಿಣಿಯೆಂಬುದು ಕಾದಂಬರಿಯ ಪುಟ ಪುಟದಲ್ಲೂ ವ್ಯಕ್ತವಾಗುತ್ತದೆ. ಉಳಿದವರ ವಿಷಯ ಬಿಡಿ. ಗಾಂಧಿಯ ಬಗ್ಗೆ ಲೇಖಕಿಯ ಈ ಮಾತುಗಳನ್ನು ನೋಡಿ – ಇನ್ನು ಗಾಂಧಿ.. ಅವರ ಹೆಂಡತಿ.. ಸಾಹೇಬರು ಮಕ್ಕಳು ಇಳಿಪ್ರಾಯ.. ಇದೆಲ್ಲ ಎಲ್ಲ್ಲಿ ಗುರುತಿಸಬೇಕು? ಕಾಗೆ ಹಿಂಡಿನಲ್ಲಿ ಪಿಂಡ ತಿಂದ ಕಾಗೆಯನ್ನು ಗುರುತಿಸುವ ಸ್ಥಿತಿಯೆಂದಾಯಿತು. ಈ ಮಾತುಗಳನ್ನು ಆಡುವವರು ಪಾಂಡು ಶೆಟ್ಟರ ಆಳುಗಳು, ಆ ಆಳುಗಳಿಗೆ ಪಿಂಡ ತಿಂದ ಕಾಗೆಯ ಕಲ್ಪನೆ ಬರುವುದಾದರೂ ಹೇಗೆ? ಇಷ್ಟಕ್ಕೂ ಕಾಗೆಗಳಿಗೆ ಯಾರಾದರೂ ಪಿಂಡ ಹಾಕುತ್ತಾರೆಯೆ? ಎಡೆ ಹೊರಗಿಡುವುದು ಬೇರೆ, ಪಿಂಡ ಹಾಕುವುದು ಬೇರೆ. ಪಿಂಡವನ್ನು ಕ್ರಿಯಾಕರ್ಮದ ನಂತರ ಕೆರೆಗೂ ಸರೋವರಕ್ಕೊ ಹಾಕುತ್ತಾರೆ, ಕಾಗೆಗಳಿಗಲ್ಲ.

ಕಾದಂಬರಿಯಲ್ಲಿ ಕೋಲ, ಕೆಡ್ಡಸ, ಕಂಗಿಲ, ಕೋಳಿಅಂಕ, ಕಂಬಳ – ಇತ್ಯಾದಿಗಳ ವೈಭವದ ವರ್ಣನೆಯಿದೆ. ಇವುಗಳನ್ನೆಲ್ಲ ತಿಳಿದುಕೊಳ್ಳಲು ಈ ಕಾದಂಬರಿಯೇ ಬೇಕೆಂದಿಲ್ಲ. ಇದನ್ನು ವರ್ಣಿಸುವ ನೂರಾರು ತುಳು ಸಾಹಿತ್ಯದ ಪುಸ್ತಕಗಳಿವೆ. ತುಳು ಸಂಸ್ಕೃತಿಯ ಬಗ್ಗೆ ಏನೇನೂ ಗೊತ್ತಿಲ್ಲದ ‘ಪರ’ ಲೇಖಕರಿಗೆ ಅದು ಕಣ್ಣಿಗೆ ಕಟ್ಟುವ ವರ್ಣನೆಯಾಗಿ ಕಾಣಿಸಿದರೆ ಅದು ಸಹಜ; ಅದರಲ್ಲೇನೂ ಆಶ್ಚರ್ಯವಿಲ್ಲ.

ಇಂಥ ಒಂದು ಕಾದಂಬರಿಯನ್ನು ವಿಶ್ವವಿದ್ಯಾಲಯದ ಡಿಗ್ರಿ ತರಗತಿಗೆ ಪಠ್ಯವನ್ನಾಗಿಸಿದ ಕನ್ನಡ ಅಧ್ಯಯನ ಮಂಡಳಿಯ ಬೌದ್ಧಿಕಮಟ್ಟದ ಬಗ್ಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಇಂದು ಕುಸಿಯುತ್ತಿರುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಅಂತೆಯೇ ಈ ಕಾದಂಬರಿಯನ್ನು ಪಠ್ಯದಿಂದ ಹೊರದಬ್ಬಬೇಕೆಂಬುದು ಹೋರಾಡುವ ಹುಂಬಸಮುದಾಯಗಳ ಬಗ್ಗೆಯೂ ಖೇದವೆನಿಸುತ್ತದೆ. ವಿಡಂಬನೆಯೆಂದರೆ, ಇಂತಹ ಹೋರಾಟ ಹುಯಿಲಾಟಗಳಿಂದ ಒಂದು ಸಾಮಾನ್ಯ ದರ್ಜೆಯ ಕೃತಿಯು ರಾತ್ರಿ ಬೆಳಗಾಗುವುದರೊಳಗೆ ಶ್ರೇಷ್ಠ ಕೃತಿ ಎನಿಸಿಬಿಡುತ್ತದೆ!

*********

ಚಿತ್ರ ಕ್ರಪೆ: http://www.rangamantapa.blogspot.com

Read more from ಲೇಖನಗಳು
18 ಟಿಪ್ಪಣಿಗಳು Post a comment
  1. ಮಾರ್ಚ್ 7 2012

    Ee pusthakakke “Booker” prashasthi guarantee sigutthe… Ashtondu quality ide.. 😛

    ಉತ್ತರ
  2. Santhosh Kumar PK,
    ಮಾರ್ಚ್ 7 2012

    Nice article,

    ಉತ್ತರ
  3. M Maravanthe.
    ಮಾರ್ಚ್ 7 2012

    ಇನ್ನೂ ಸ್ವಲ್ಪ ಸಮಯ ಅಷ್ಟೇ…
    ಮಾಸ್ತಿ,ಬೇಂದ್ರೆ,ಅಡಿಗ,ಕಾರಂತ ಮುಂತಾದ ಲೇಖಕರನ್ನ ಪೌರೋಹಿತ್ಯದ ಪ್ರತಿಮೆಗಳು ಅಂತ ಜರಿದು ವಿಮರ್ಶಾತ್ಮಕ ಪುಸ್ತಕ ಬರೆದು ವಿಶ್ವ ವಿದ್ಯಾಲಯದಲ್ಲಿ ಪಠ್ಯಪುಸ್ತಕ ಮಾಡುವ ದಿನವೊಂದು ಬರುತ್ತೇನೊ.

    ಉತ್ತರ
  4. ಮಾರ್ಚ್ 7 2012

    ಅದ್ಭುತ ವಿಮರ್ಶೆ ಈ ಲೇಖನದಲ್ಲಿ ಆಗಿದೆ..
    ‘ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ?..

    ಉತ್ತರ
  5. ಜಗತ್ತೇ ಪ್ರಗತಿಯ ಹಾದಿಯಲ್ಲಿದ್ದರೂ ಕೆಲವು ಲೇಖಕರು, ಬುದ್ದಿಜೀವಿಗಳ ಮನಸ್ಸು ರಿವರ್ಸ್ ಗೇರಿನಲ್ಲಿಯೇ ಇದೆ. ಇಂದಿನ ಪೆಡಂಭೂತದಂತಹ ಬಡತನ, ಜನಸಂಖ್ಯಾ ಸ್ಪೋಟ, ಭಯೋತ್ಪಾದನೆ ಇಂತವುಗಳು ಅವರ ಕಣ್ಣಿಗೆ ರಾಚುವುದೇ ಇಲ್ಲ. ಅವರಿಗೆ ಕಾಣುವುದು ಅವರ ಕಲ್ಪನೆಯ ಬ್ರಾಹ್ಮಣ, ಇಂದು ಅಸ್ಥಿತ್ವವೇ ಇಲ್ಲದ ಬೋಳು ವಿದವೆ ಇಂತಹದ್ದು. ಯಾವುದೋ ಬ್ರಾಹ್ಮಣ ವ್ಯಕ್ತಿಯನ್ನು ಇನ್ಯಾವುದೋ ಜಾತಿ, ಮತ ದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಚಿತ್ರಿಸುವ ಮೂಲಕ ಪ್ರಗತಿ ಪರರಾಗುವ ಅವರ ವಿಕೃತ ಮನಸ್ಸು ಇನ್ನೆಂತಹ ಸ್ವಸ್ಥ ಸಮಾಜವನ್ನು ನಿರ್ಮಿಸೀತು?

    ಉತ್ತರ
  6. bhadravathi
    ಮಾರ್ಚ್ 8 2012

    ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ? – ನನ್ನದೂ ಅದೇ ಪ್ರಶ್ನೆ, ಮತ್ತು ಅಳಲು. ಮಾಧ್ಯಮದ ಒಂದು ಸಮೂಹ, ಅದರಲ್ಲೂ “ನಾನು ಇಂಥ ಧರ್ಮದ ಪೋಸ್ಟರ್ ಬಾಯ್” ಎಂದು ಬೀಗುವ, ಅಲ್ಪಸಂಖ್ಯಾತರನ್ನು ಗೋಳು ಹೋಯ್ದುಕೊಳ್ಳುವ ಮಂದಿಯ ಲೇಖನ ಬಂದಾಗ ಬರೆದವರ ಬಗ್ಗೆ ಹೇಸಿಗೆ, ತಾತ್ಸಾರ ಮೂಡುತ್ತದೆ.

    ಉತ್ತರ
  7. Pungidaasa
    ಮಾರ್ಚ್ 8 2012

    ಉತ್ತಮವಾದ ಲೇಖನ! ಇವತ್ತಿನ ದಿನಗಳಲ್ಲಿ, ಬ್ರಾಹ್ಮಣರನ್ನು ತೆಗಳುವುದು, ಒಂದು ಸಾಮನ್ಯ ಜಾಡ್ಯ ಆಗಿ ಬಿಟ್ಟಿದೆ. ಆ ರಿತಿ ಮಾಡುವುದರಿಂದ ತಮನ್ನು ತಾವು ದೊಡ್ದ ವ್ಯಕ್ತಿ ಎಂದೂ, ಪ್ರಗತಿಪರರೆಂದೂ ತೋರಿಸಿಕೊಳ್ಳೂವ ಹುನ್ನಾರ ಅಡಗಿದೆ ಅನ್ನಿಸುತ್ತದೆ. ಯಾಕೆ ಈ ದ್ವೇಶ? ಯಾವ ಪಾಪಕ್ಕಾಗಿ? ಒಮ್ಮೆ ಫ಼್ರಾಂಕೊ ಗೋತೆ ಬರೆದಿರುವ ಲೇಖನ ಓದಲಿ, ಬ್ರಾಹ್ಮಣರು ಪಡುತ್ತಿರುವ ಕಷ್ಟಗಳ ಅರಿವು ಆಗಲಿದೆ ಅವರಿಗೆ.

    ಜನಕ್ಕೆ, ಬ್ರಾಹ್ಮಣ, RSS ಸಂಸ್ಕೃತ ಇವುಗಲ ಬಗ್ಗೆ ದೂಷಣೆ ಮಾಡಿ , ಯಾರನ್ನೋ ಓಲೈಸಿ ಅಧಿಕಾರ ಲಾಭ ಪಡೆಯುವ ಮಹತ್ವಾಕಾಂಕ್ಷೆ ಇದ್ದಂತಿದೆ.

    ಉತ್ತರ
    • ಗಂಜಾಂ ಪರಮೇಶ್
      ಮಾರ್ಚ್ 13 2012

      ಕೋಲು ಕೊಟ್ಟು ಹೊಡೆಸಿಕೊಳ್ಳುವುದೇಕೆ?

      ಉತ್ತರ
  8. ಮಾರ್ಚ್ 8 2012

    Nice article,

    ಉತ್ತರ
  9. ಮಾರ್ಚ್ 8 2012

    Nice article…

    ಉತ್ತರ
  10. ಅಭಿಮನ್ಯು
    ಮಾರ್ಚ್ 8 2012

    ನಿಜ.ಬ್ರಾಹ್ಮಣರನ್ನ ದೂಷಿಸುವುದು ಒಂದು ರೀತಿ ಫ಼್ಯಾಷನ್.ಆದರೆ, ದೂಷಣೆಗೆ ಆಹಾರವಾಗುವುದೇಕೆ? ಹಳೆ ಕಾಲದಲ್ಲಿ ಹೇಗಿತ್ತೋ ಎಲ್ಲ ಬೇಡ.ತೀರಾ ಈಗ ಉದಾಹರಣೆಗೆ ಮಡೆಸ್ನಾನ ಮತ್ತು ಪಂಕ್ತಿ ಭೋಜನದ ಬಗ್ಗೆ ಯೋಚಿಸಬೇಕಲ್ಲವೇ?

    ಗಾಂಧೀ ಬಂದ ಪುಸ್ತಕದ ವಿವಾದವೆದಿದ್ದು ಇದೇ ಪಂಕ್ತಿ ಭೋಜನದ ವಿಷಯಕ್ಕಾಗಿ ಅಲ್ಲವೇ?

    ಉತ್ತರ
  11. ashwini
    ಮಾರ್ಚ್ 9 2012

    ಅತ್ಯುತ್ತಮವಾದ ಲೇಖನ …

    ಉತ್ತರ
    • ಮಾರ್ಚ್ 15 2012

      ಎಂಥದಿದು ಪಂಕ್ತಿ ಭೋಜನ ಅಂದ್ರೆ ನಿಮ್ಮನ್ನ ಯಾವ ಹೋಟೆಲ್ನಲ್ಲಿ ಓಡಿಸಿದರು ?

      ಉತ್ತರ
      • ಅಭಿಮನ್ಯು
        ಮಾರ್ಚ್ 15 2012

        ಅನ್ನ ದಾಸೋಹ ಮಾಡುವ ದಕ್ಷಿಣ ಕನ್ನಡದ ಕೆಲ ದೇವಸ್ಥಾನಗಳಲ್ಲಿ ಕೇಳಿ ನೋಡಿ

        ಉತ್ತರ
  12. ಮಾರ್ಚ್ 9 2012

    ಕಾ೦ಟ್ರವರ್ಸಿಯಲ್ ಕಥೆ ಬರೆದು ಜೇಬು ತು೦ಬಿಸಿಕೊಳ್ಳುವುದು ‘ಬುದ್ಧಿಜೀವಿ’ಗಳ ಜೀವನ ಮಾರ್ಗ. ಪೂರ್ವಾಗ್ರಹಪೀಡಿತರು ಅರೆಬೆ೦ದ ಯೋಚನೆಗಳನ್ನು ಬೇರೆಯವರ ಮೇಲೆ ಆರೋಪಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ಬುದ್ಧಿಜೀವಿಗಳನ್ನುತ್ತಾರೆ೦ಬುದು ಹೊಸ ಡೆಫಿನೇಷನ್. ಪೋಯಿಟಿಕ್ ಲೈಸನ್ಸ್ ನಲ್ಲಿ ಯಾವುದೇ ಕ್ಯಾರೆಕ್ಟರಿ೦ದ ಏನೂ ಬೇಕಾದರೂ ಮಾಡಿಸಬಹುದೇ? ಒಟ್ಟಾರೆಯಾಗಿ ಬಡ ಬ್ರಾಹ್ಮಣ ಇನ್ನೂ ಬಡವಾದ.
    ಗಾ೦ಧಿ, ಜಾತಿ ನಿ೦ದನೆ ಇ೦ತಹ ವಿಷಯಗಳು ಸೆಲ್ಲಿ೦ಗ್ ಪೊಯಿ೦ಟ್ ಗೆ ತು೦ಬಾ ಅನುಕೂಲವಾಗುತ್ತದೆ.

    ಉತ್ತರ
  13. vk
    ಮಾರ್ಚ್ 10 2012

    ಈ ಲೇಖನ ಆಶಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಉತ್ತಮ ಲೇಖನ…ಈ ಬ್ರಾಹ್ಮಣ ವಿರೋಧಿ, ವೇದವಿರೋಧಿ ಗುಂಪುಗಳು ಈ ಸಾಮಾಜಿಕ ತಾಣದಲ್ಲಿ ಸಾಕಷ್ಟಿವೆ. ಅವರಲ್ಲಿ ವಾದ ವಿವಾದ ಮಾಡಿದ ಅನುಭವ ನನ್ನಲ್ಲೂ ಹಸಿರಾಗಿದೆ. ಆದರೆ ಈ ತಮ್ಮ ಲೇಖನದಲ್ಲಿ ಅನವಶ್ಯಕವಾಗಿ ಇನ್ನೊಂದು ವರ್ಗವನ್ನು ಎಳೆದು ತಂದಿರುವುದು ಯಾಕೋ ಸರಿಯೆನಿಸಲಿಲ್ಲ. ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಸ್ವಾಭಿಮಾನವಿದೆ..

    ಈ ಸಮುದಾಯಕ್ಕೂ ಬ್ರಾಹ್ಮಣತ್ವಕ್ಕೆ ಆದ ಅವಮಾನಕ್ಕೂ ಯಾವ ಸಂಬಂಧವಿದೆ?

    (ಇದು ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ತರಗತಿಗೆ ಪಠ್ಯವಾಗಿದ್ದು ಅದನ್ನು ಕೂಡಲೇ ಹಿಂತೆಗೆಯುವಂತೆ (ಕಾರಂತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ) ‘ಆಚಾರಿ-ಆಚಾರ್ಯ’ ಸಮುದಾಯದ ಒಂದು ಗುಂಪು ಮತ್ತು ಈಗಲೋ ಆಗಲೋ ಕೊನೆಯುಸಿರೆಳೆಯುತ್ತಿರುವ ಯಾವುದೋ ಬ್ರಾಹ್ಮಣ ಪರಿಷತ್ತಿನ ಒಂದು ಗುಂಪು ಆಗ್ರಹಿಸುತ್ತಿದೆ. ಈ ಬಗ್ಗೆ ಭಯಾನಕವಾಗಿ ಸಾಹಿತ್ಯ ಲೋಕದಲ್ಲಿ ಪರವಿರೋಧಗಳ ಹೋರಾಟಗಳು ನಡೆಯುತ್ತಿವೆ. ಹಾಗಾದರೆ, ಈ ಕೃತಿಯಲ್ಲಿ ಅಂಥಾದ್ದೇನಿದೆ?

    385 ಪುಟ್ಟಗಳಷ್ಟು ವಿಸ್ತಾರವಾದ ಈ ದೊಡ್ಡ ಕಾದಂಬರಿ ತನ್ನ ಬಾಲಕ್ಕೆ ಹಲವು ಬಿರುದಾಂಕಿತ ವಿಮರ್ಶಕರ ಜಡ್ಜ್ ಮೇಂಟ್ ಗಳನ್ನು ಸಿಕ್ಕಿಸಿಕೊಂಡಿದೆ. ಪಠ್ಯಕ್ಕೆ ಇಟ್ಟಿರುವುದು ಸದ್ರಿ ಕಾದಂಬರಿಯ ಸಂಕ್ಷಿಪ್ತ ರೂಪ.

    ‘ಆಚಾರಿ’ಗಳ ಬಗೆಗೆ ಈ 385 ಪುಟಗಳಲ್ಲಿ ವರ್ಣಾನೆಯಿರುವುದು ಬರೇ ಒಂದು ಸಣ್ಣ ಪ್ಯಾರಾ ಮಾತ್ರ (188-189). ಅದೂ ಕಾದಂಬರಿಯ ಯಾವುದೋ ಒಂದು ಪಾತ್ರದ ಬಾಯಲ್ಲಿ ಬರುವ ಒಂದು ಮಾತು. ಅದು ಆಕ್ಷೇಪಾರ್ಹವೆಂದಾದರೆ ಅದು ಆಕ್ಷೇಪ ಮಾಡುವರಿಗೆ ಕಾಡುತ್ತಿರುವ ಲಾಗಾಯ್ತಿನ ‘ಗಿಲ್ಟ್’ ಎಂದು ತಿಳಿಯಬಹುದೆ? ಇನ್ನು ‘ಬ್ರಾಹ್ಮಣ’ ಜಾತಿಗೆ ಯಾವುದೇ ‘ಅಪಮಾನ’ದ ಪ್ರಶ್ನೆಯೇ ಇಲ್ಲ. ಏಕೆಂದರೆ ಇದು ಹಿಂದಿನಿಂದಲೂ ಎಲ್ಲರಿಂದಲೂ ಬೈಸಿಕೊಳ್ಳುತ್ತಲೇ ಬಂದ ಜಾತಿ. ಹಾಗೆ ಬೈಯುವುದೇ ಒಂದು ಸಂಪ್ರದಾಯ. ಲೇಖಕಿ ಆ ಸತ್ಸಂಪ್ರದಾಯವನ್ನಷ್ಟೇ ಪಾಲಿಸಿದ್ದಾರೆ. ಅಲ್ಲದೇ ‘ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ? ಇಷ್ಟಕ್ಕೂ ಸಾಹಿತ್ಯ ಕೃತಿಯೊಂದರ ಬಗೆಗೆ ಇಂತಹ ‘ಹುಯಿಲು’ ‘ಆಕ್ರೋಶ’ ಸಾಹಿತ್ಯೇತರ ಕಾರಣಗಳಿಂದ ಬರುತ್ತದೆ.)

    ಉತ್ತರ
  14. Kotathattu Somayaji
    ಡಿಸೆ 16 2014

    ಅತ್ಯತ್ತಮ ಲೇಖನ, ಬ್ರಾಹ್ಮಣ್ಯವನ್ನು ಮೂದಲಿಸುವುದೇ ವಿಚಾರವಾದ /ದಿ ಎನಿಸಿಸಿಕೊಳ್ಳುವುದು. ಇಂಥ ವಿಚಾರವಾದಿಗಳಿಗೆ ಯಧೇಚ್ಛವಾಗಿ ಬಾಲಂಬಡುಕರು ಇರುತ್ತಾರೆ. ಸದರಿ ಪುಸ್ತಕದಲ್ಲಿನ ಅಸಂಬಂದ್ಧ ವಿಚಾರಗಳಿಂದ ವಿದ್ಯಾರ್ಥಿಗಳು ಯಾವ ರೀತಿಯ ಜ್ಞಾನ ಪಡೆಯಲು ಸಾಧ್ಯ?

    ಉತ್ತರ
  15. Nagshetty Shetkar
    ಡಿಸೆ 16 2014

    ಬ್ರಾಹ್ಮಣರಿಗೆ ಬ್ರಾಹ್ಮಣ್ಯದ ಅನುಭವ ಮಧುರ ಪುಳಕಗಳನ್ನು ನೀಡಬಹುದು. ಆದರೆ ಈ ನಾಡಿನ ಶೂದ್ರರಿಗೆ ದಲಿತರಿಗೆ ಸ್ತ್ರೀಯರಿಗೆ ಬ್ರಾಹ್ಮಣ್ಯದ ಅನುಭವ ಉಸಿರು ಕಟ್ಟಿಸುವಂಥದ್ದು. ನಾಗವೇಣಿ ಅವರು ಶೋಷಿತರ ಅನುಭವಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಬ್ರಾಹ್ಮಣರ ಅನುಭವದ ಬಗ್ಗೆ ನಾಗವೇಣಿ ಏಕೆ ಬರೆಯಬೇಕು? ಭೈರಪ್ಪನವರು ಈಗಾಗಲೇ ಹಲವು ಹತ್ತು ಕಾದಂಬರಿಗಳಲ್ಲಿ ಬರೆದಿದ್ದಾರಲ್ಲ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments