ಸಂಸ್ಕೃತಿ ಸಂಕಥನ – 16 ನೆಹರೂ ಸೆಕ್ಯುಲರಿಸಂ
-ರಮಾನಂದ ಐನಕೈ
ನೆಹರೂರವರು ಸಂಪೂರ್ಣ ಪಾಶ್ಚಾತ್ಯ ಶಿಕ್ಷಣ ಹಾಗೂ ಪ್ರಭಾವದಿಂದ ರೂಪಗೊಂಡವರು. ಹಾಗಾಗಿ ಅವರು ಭಾರತದ ಕುರಿತು ಚಿಂತಿಸುವಾಗ ಪಶ್ಚಿಮದಿಂದ ಪ್ರವೇಶಿಸುತ್ತಾರೆ. ಮೂಲಭೂತವಾಗಿ ನೆಹರೂರವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಸಡ್ಡೆಯ ಭಾವನೆ ಇದೆ. ಈ ಭಾವನೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯಿಂದ ಬಂದಿದ್ದು. ಹಾಗಾಗಿ ನೆಹರೂ ಸೆಕ್ಯುಲರಿಸಂನಲ್ಲಿ ಪ್ರಭುತ್ವ ಈ ಮೌಢ್ಯವನ್ನು ನಿವಾರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂದರೆ ಪ್ರಭುತ್ವ ಹೇಗೆ ‘ತಟಸ್ಥ’ ಇದ್ದಂತಾಯಿತು?
ನೆಹರೂ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ. ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗ್ಗೆ ಕಸನು ಕಂಡವರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಹಂತಹಂತವಾಗಿ ಪ್ರಗತಿಗೆ ತರಲು ಹೆಗಲು ಕೊಟ್ಟವರು. ಭಾರತ ಲಿಬರಲ್ ಸೆಕ್ಯುಲರ್ ರಾಷ್ಟ್ರವಾಗಿ ಪ್ರಗತಿ ಮತ್ತು ಸಮಾ ನತೆಯ ತುತ್ತತುದಿಗೆ ಹೋಗಬೇಕೆಂಬ ದೃಢವಾದ ಸಂಕಲ್ಪ ಹೊಂದಿದವರು. ಹಾಗಾದರೆ ನೆಹರೂರವರ ಪ್ರಕಾರ ಲಿಬರಲ್ ಸೆಕ್ಯುಲರ್ ನೀತಿಯೆಂದರೆ ಏನು? ಅದನ್ನೇ ನೆಹರೂ ಸೆಕ್ಯುಲರ್ ಎನ್ನುವುದು.
ಪ್ರಭುತ್ವ ಎಲ್ಲಾ ರಿಲಿಜನ್ಗಳಿಂದ ತಟಸ್ಥವಾಗಿರ ಬೇಕು ಹಾಗೂ ರಿಲಿಜನ್ನನ್ನು ತನ್ನ ಎಲ್ಲಾ ವ್ಯವಹಾರ ಗಳಿಂದ ಹೊರಗಿಡಬೇಕೆಂದು ನೆಹರೂ ಅಭಿ ಪ್ರಾಯಪಡುತ್ತಾರೆ. ಪ್ರಭುತ್ವ ರಿಲಿಜನ್ನನ್ನು ಪುರಸ್ಕರಿ ಸಿದರೆ ಆ ರಾಷ್ಟ್ರ ಒಂದು ಪ್ರಗತಿಹೀನ ರಾಷ್ಟ್ರವಾಗು ತ್ತದೆ ಎಂಬುದು ಅವರ ದೃಢವಾದ ನಂಬಿಕೆ. ನೆಹರೂ ಸೆಕ್ಯುರಿಸಂನ್ನು ವೈಜ್ಞಾನಿಕ ಸೆಕ್ಯುಲರಿಸಂ ಅಂತಲೂ ಕರೆಯುತ್ತಾರೆ. ಹಾಗಾದರೆ ಈ ವೈಜ್ಞಾನಿಕ ಸೆಕ್ಯುಲರಿಸಂ ಅಂದರೆ ಏನು?
ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾ ಧರರು ನೆಹರೂ ಅವರ ಸೆಕ್ಯುಲರಿಸಂ ಕಲ್ಪನೆಯನ್ನು ದೀರ್ಘವಾದ ಚರ್ಚೆಗೆ ಎಳೆಯುತ್ತಾರೆ ಹಾಗೂ ನೆಹರೂ ಸೆಕ್ಯುಲರಿಸಂನ ಮಿತಿಯನ್ನು ವೈಜ್ಞಾನಿಕ ವಾಗಿ ಎತ್ತಿ ತೋರಿಸುತ್ತಾರೆ. ನೆಹರೂರವರಿಗೂ ಸಂಸ್ಕೃತಿ ಹಾಗೂ ರಿಲಿಜನ್ನಿನ ನಡು ವಿನ ವ್ಯತ್ಯಾಸ ಸ್ಪಷ್ಟವಾ ಗಿಲ್ಲ. ಏಕೆಂದರೆ ಅವರು ಇಡೀ ಭಾರ ತೀಯ ಸಂಸ್ಕೃತಿಯನ್ನು ಪಾಶ್ಚಾತ್ಯರು ನಿರೂಪಿಸಿದ ದೃಷ್ಟಿಯಲ್ಲೇ ನೋಡುತ್ತಾರೆ. ನೆಹರೂರವರಿಗೂ ಕೂಡಾ ಭಾರತೀಯ ವಿಭಿನ್ನ ಸಂಸ್ಕೃತಿಗಳ ಗುಂಪು ರಿಲಿಜನ್ನೇ! ಈ ರಿಲಿಜನ್ಗಳು ಗೊಡ್ಡು ಕಂದಾ ಚಾರಗಳಿಂದ ತುಂಬಲ್ಪಟ್ಟಿವೆ. ಇಂಥ ಕಂದಾಚಾರ ಗಳು ಪ್ರಭುತ್ವದ ಒಳಗಡೆ ಬಂದರೆ ದೇಶ ನಾಶ ವಾಗುತ್ತದೆ. ಪುನಃ ದೇಶ ಪುರೋಹಿತ ಶಾಹಿಗಳ ಕೈಗೆ ಹೋಗಿ ಸಂಕಷ್ಟ ಎದುರಾಗುತ್ತದೆ. ಆದ್ದರಿಂದ ಇಂಥ ಕಂದಾಚಾರಗಳನ್ನು ಪ್ರಭುತ್ವದ ಎಲ್ಲ ವ್ಯವಹಾರಗಳಿಂದ ಹೊರಗಿಡಬೇಕೆಂಬುದು ನೆಹರೂ ವಾದ.
ನೆಹರೂರವರು ಭಾರತೀಯ ಸಂಪ್ರದಾಯ ಗಳನ್ನೆಲ್ಲ ‘ರಿಲಿಜನ್’ ಎಂದೇ ಭಾವಿಸುತ್ತಾರೆ. ಆದ್ದರಿಂದ ಈ ಸಂಸ್ಕೃತಿಯಲ್ಲಿ ರಿಲಿಜನ್ನಿನ ಅಂಶಗಳು ಸ್ಪಷ್ಟವಾಗಿ ಕಾಣದಿರುವುದರಿಂದ ಅದು ಗೊಡ್ಡು ಎಂಬ ನಿರ್ಣಯಕ್ಕೆ ಬರುತ್ತಾರೆ. ಏಕೆಂದರೆ ರಿಲಿ ಜನ್ಗಳ ಹಿಂದೆ ಒಂದು ಥಿಯಾಲಜಿ ಇರುತ್ತದೆ. ಥಿಯಾಲಜಿ ಅಂದರೆ ದೇವರ ಕುರಿತ ವಿಜ್ಞಾನ. ಇದು ಕ್ರೈಸ್ತ ಚರ್ಚುಗಳು ಬೆಳೆಸಿಕೊಂಡು ಬಂದಂತೆ ಗಾಡ್, ಅವನ ಉದ್ದೇಶಗಳು, ಕೃತಿಗಳು, ರಿಲಿಜ ನ್ನಿನ ಸ್ವರೂಪ, ರಿಲಿಜನ್ನಿನ ಶ್ರದ್ಧೆ, ಆಚರಣೆ ಇತ್ಯಾದಿಗಳ ಕುರಿತು ಶಾಸ್ತ್ರೀಯ ಚಿಜ್ಞಾಸೆಯನ್ನು ನಡೆಸುವ ಜ್ಞಾನ ಶಾಖೆಗಳು. ಹಾಗಾಗಿ ಥಿಯಾಲಜಿ ವೈಜ್ಞಾನಿಕವಾಗಿರುತ್ತದೆ ಮತ್ತು ಇಂಥ ವೈಜ್ಞಾನಿಕತೆ ಸಂಪ್ರದಾಯಗಳಲ್ಲಿ ಕಾಣದೇ ಇದ್ದರಿಂದ ಅದು ಮೂಢನಂಬಿಕೆ ಹಾಗೂ ಕಂದಾಚಾರ ಎನ್ನುತ್ತಾರೆ ನೆಹರೂ. ಗಾಡ್ ಈ ಬ್ರಹ್ಮಾಂಡದ ಸೃಷ್ಟಿ ಮಾಡಿದ. ಅಷ್ಟೇಅಲ್ಲ, ಆ ಮೂಲಕ ಪ್ರತಿಯೊಬ್ಬರಿಗೂ ರಿಲಿ ಜನ್ ನೀಡಿದ. ಆದ್ದರಿಂದ ಇಲ್ಲಿನ ಪ್ರತಿ ಯೊಂದು ಕ್ರಿಯೆಯ ಹಿಂದೂ ಗಾಡ್ನ ಉದ್ದೇಶ ಇರುತ್ತದೆ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯ ನಂಬಿಕೆ. ಈ ಕಾರ್ಯ ಕಾರಣ ಸಂಬಂಧಗಳೇ ವೈಜ್ಞಾನಿಕತೆ. ಎಲ್ಲ ಸಂಪ್ರದಾಯಗಳಲ್ಲಿ ಈ ರೀತಿಯ ಕಾರ್ಯ ಕಾರಣ ಸಂಬಂಧಗಳು ಸಿಗಲಾರದು. ಆದ್ದರಿಂದ ಸಂಪ್ರದಾಯಗಳೆಲ್ಲ ಸುಳ್ಳು ರಿಲಿಜನ್ಗಳು. ಈ ಸುಳ್ಳು ರಿಲಿಜನ್ಗಳಿಂದ ಪ್ರಗತಿಯೂ ಇಲ್ಲ, ಮುಕ್ತಿಯೂ ಇಲ್ಲ. ಪ್ರಭುತ್ವ ಇಂಥವುಗಳನ್ನು ಪುರಸ್ಕರಿಸಬಾರದೆಂಬುದು ನೆಹರೂರ ದೃಷ್ಟಿಕೋನ.
ಆದರೆ ಬಾಲಗಂಗಾಧರರು ಭಾರತದಲ್ಲಿ ರಿಲಿಜನ್ಗಳೇ ಇಲ್ಲ. ಇದೊಂದು ರಿಲಿಜನ್ ಇಲ್ಲದ ಬಹುಸಂಸ್ಕೃತಿ ಎಂಬುದನ್ನು ತಾರ್ಕಿಕವಾಗಿ ಸಾಬೀತುಪಡಿಸುತ್ತಾರೆ. ಈ ದೇಶದ ಸಾಮಾನ್ಯ ಜನರ ಅನುಭವಗಳಿಗೂ ಕೂಡಾ ಈ ವಾದವನ್ನು ಸಮೀಕರಿಸಿದಾಗ ಸತ್ಯ ಅಂತಲೇ ಅನಿಸುತ್ತದೆ. ಆದರೆ ನೆಹರೂ ರವರಿಗೆ ಈ ದೃಷ್ಟಿಯಿಂದ ಭಾರತವನ್ನು ಇಲ್ಲಿನ ಸಂಸ್ಕೃತಿ ಯನ್ನು ನೋಡಲು ಸಾಧ್ಯ ವಿಲ್ಲ. ಭಾರತದಲ್ಲಿ ರಿಲಿಜನ್ ಹೊಂದುವುದು ಅಂದರೆ ಇಲ್ಲಿನ ಕಂದಾಚಾರಗಳನ್ನು ಕಾಪಿಟ್ಟು ಕೊಳ್ಳುವುದು ಎಂಬ ತೀರ್ಮಾನಕ್ಕೆ ಬರುತ್ತಾರೆ ನೆಹರೂ. ಹಿಂದೂ ಸಂಪ್ರದಾಯಗಳ ಬಗ್ಗೆ ನೆಹರೂರಿಗಿದ್ದ ಜಿಗುಪ್ಸೆಯು ಅವರು ‘ಭಾರತವನ್ನು ಸಂಶೋ ಧಿಸಿ’ (ಡಿಸ್ಕವರಿ ಆಫ್ ಇಂಡಿಯಾ) ಹುಟ್ಟಿದ್ದಲ್ಲ. ಅದು ಅವರು ಓದಿದ ವಸಾಹತು ಶಾಹಿಯ ಪಠ್ಯಪುಸ್ತಕಗಳ ಕಥೆಗಳಿಂದ ಬಂದದ್ದು. ನೆಹರೂ ಜೀವನ ಶೈಲಿ, ಶಿಕ್ಷಣ, ವೈಚಾರಿಕ ಪ್ರಭಾವಗಳನ್ನೆಲ್ಲ ಹಿನ್ನೆಲೆಯಲ್ಲಿ ಇಟ್ಟು ನೋಡಿದಾಗ ಅವರು ಈ ರೀತಿಯಲ್ಲದೇ ಬೇರೆ ರೀತಿ ಚಿಂತಿಸಲು ಸಾಧ್ಯವಿಲ್ಲ. ಭಾರತದಲ್ಲಿದ್ದೇ ಅವರು ಭಾರತವನ್ನು ಒಬ್ಬ ಹೊರಗಿನವರಾಗಿ, ಹೊರ ಗಿನ ವಿಮರ್ಶಕರಾಗಿ ನೋಡುತ್ತಾರೆ. ಒಂದು ದೃಷ್ಟಿ ಯಿಂದ ಅವರು ಭಾರತಕ್ಕೆ ಪಶ್ಚಿಮದ ಮೂಲಕ ಪ್ರವೇಶಿಸುತ್ತಾರೆ. ಕುಲಗೆಟ್ಟು ಭ್ರಷ್ಟಗೊಂಡ ಹಿಂದೂ ಸಂಪ್ರದಾಯಗಳಿಗೆ ಬದಲಾವಣೆ ಆಗತ್ಯವಿದೆ ಎಂದು ನಿರ್ಣಯಿಸುತ್ತಾರೆ. ಆದ್ದರಿಂದ ಅವರ ಸೆಕ್ಯುಲರ್ ನೀತಿ ತಟಸ್ಥವಾಗಿರದೆ ಇಂಥ ಬದಲಾ ವಣೆಯನ್ನು ಪ್ರಚೋದಿಸುತ್ತದೆ. ಇದು ಹಿಂದೂ ವಾದಿಗಳಿಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ಹಿಂದೂ ವಾದಿಗಳು ನೆಹರೂ ಸೆಕ್ಯುಲರಿಸಂಗೆ ಪರ್ಯಾಯ ವಾಗಿ ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತ ಬಂದರು.
ವಸಾಹತುಶಾಹಿ ಭಾರತದಲ್ಲಿ ಇಂಗ್ಲೀಶ್ ಶಿಕ್ಷಣ ವನ್ನು ಪಡೆದಂತಹ ಭಾರತೀಯ ಬುದ್ಧಿಜೀವಿಗಳು ಬ್ರಿಟಿಶರ ಆಲೋಚನಾ ಶೈಲಿಯನ್ನೇ ಅಳವಡಿಸಿ ಕೊಂಡರು. ಭಾರತವನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸುವ ಹಂಬಲ ಹೊಂದಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವತಂತ್ರ ಭಾರತವು ಸೆಕ್ಯುಲರ್ ಲಿಬರಲ್ ಪ್ರಭುತ್ವವನ್ನು ಹೊಂದಬೇಕು ಎಂಬ ಹಂಬಲ ಇತ್ತು. ಒಂದುವೇಳೆ ಹೀಗಾಗದಿದ್ದಲ್ಲಿ ಭಾರತವು ರಿಲಿಜನ್ನಿನ ನಿರಂಕುಶತ್ವದಲ್ಲಿ ಕೊನೆಗೊಳ್ಳು ತ್ತದೆ ಎಂಬುದು ಅವರ ಖಂಡಿತವಾದ ಅಭಿಪ್ರಾಯ ವಾಗಿತ್ತು. ನೆಹರೂರವರ ದೃಷ್ಟಿಕೋನದಲ್ಲಿ ಈ ನಾರ್ಮೇಟೀವ್ ವಿಭಜನೆಯು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ನಾರ್ಮೇಟೀವ್ ವಿಭಜನೆ ಅಂದರೆ ಯಾವುದೋ ಒಂದು ಮಾತ್ರ ಸರಿ, ಅದನ್ನು ಕಡ್ಡಾಯವಾಗಿ ಮಾಡಲೇ ಬೇಕು. ಹಾಗಾಗಿ ಮತ್ತೊಂದು ತಪ್ಪು, ಅದನ್ನು ಕಡ್ಡಾಯವಾಗಿ ಮಾಡಲೇಕೂಡದೆಂಬ ಆಗ್ರಹವನ್ನು ಹುಟ್ಟಿ ಸುವ ವಿಂಗಡಣೆ. ಈ ನಿರ್ಧಿಷ್ಟವಾದ ವಿಂಗಡಣೆಯನ್ನು ನಾವು ನೆಹರೂರವರಲ್ಲಿ ಕಾಣುತ್ತೇವೆ.
ನೆಹರೂ ಪ್ರಕಾರ ಭಾರತವು ಒಂದೋ ಸೆಕ್ಯುಲರ್ ರಾಷ್ಟ್ರವಾಗಿರಬೇಕು ಅಥವಾ ರಿಲಿಜನ್ನಿನ ಪುರೋಹಿತಶಾಹಿ ರಾಷ್ಟ್ರವಾಗಿರಬೇಕು. ಈ ದೃಷ್ಟಿ ಕೋನ ಅವರಿಗೆ ಬಂದಿದ್ದು ಪ್ರೊಟೆಸ್ಟಾಂಟ್ ಕ್ರಿಶ್ಚಿಯಾ ನಿಟಿ ಚಿಂತಕರಿಂದ. ‘ಒಂದು ಪಕ್ಷ ಪಾಕಿಸ್ತಾನವು ಮುಸಲ್ಮಾನ ಪ್ರಭುತ್ವವಾಗಲು ಸೂಚಿಸಿದ್ದೇ ಆದರೆ ಅದೊಂದು ಹಿಂದುಳಿದ ಸಂಕುಚಿತ ದೃಷ್ಟಿಯ ಪ್ರಗತಿ ಹೀನ ರಾಷ್ಟ್ರವಾಗುವುದು. ಹಾಗೆಯೇ ಭಾರತವು ಹಿಂದೂರಾಷ್ಟ್ರವಾಗಲು ಪ್ರಯತ್ನಿಸಿದರೆ ಅದೂ ಕೂಡಾ ಇದೇ ರೀತಿಯ ಹಿಂದುಳಿದ ಮತ್ತು ಪ್ರಗತಿಹೀನ ರಾಷ್ಟ್ರವೇ ಆಗುತ್ತದೆ’ ಎಂದು ನೆಹರೂ ಮುಸ್ಲಿಂ ಗಣ್ಯರೊಬ್ಬರಿಗೆ ಬರೆದ ಪತ್ರದಲ್ಲಿ ಅಭಿಪ್ರಾಯಿಸುತ್ತಾರೆ. ಇಲ್ಲಿ ನೆಹರೂರವರು ಸೆಕ್ಯುಲರ್ ನೀತಿಯನ್ನು ಅರ್ಥೈಸಿ ಕೊಳ್ಳುವಲ್ಲೂ ಗೊಂದ ಲದಲ್ಲಿ ಸಿಕ್ಕಿಕೊಂಡಿದ್ದು ಸ್ಪಷ್ಟವಾಗುತ್ತದೆ. ರಿಲಿಜನ್ ಯಾವುದು, ಸಂಸ್ಕೃತಿ ಯಾವುದು ಎಂಬ ಸ್ಪಷ್ಟತೆ ಇವರಿಗಿಲ್ಲ. ಹಿಂದೂಯಿಸಂ ಅಂದರೆ ಸುಳ್ಳು ರಿಲಿಜನ್ಗಳ ಒಟ್ಟೂ ಮೊತ್ತ ಎಂಬಂತೆ ಪ್ರೊಟೆ ಸ್ಟಾಂಟ್ ಕಣ್ಣಲ್ಲೇ ಭಾರತವನ್ನು ನೋಡುತ್ತಾರೆ. ಆದ್ದರಿಂದ ಭಾರತ ಒಂದೋ ಮುಂದುವರಿದ ನಾಗರಿಕ ಸೆಕ್ಯುಲರ್ ರಾಷ್ಟ್ರವಾಗಬೇಕು ಅಥವಾ ಹಿಂದುಳಿದ ಸಂಕುಚಿತ ಮನೋಭಾವದ ಪುರೋಹಿತಶಾಹಿ ರಾಷ್ಟ್ರವಾಗಬೇಕು ಎಂಬ ನಾರ್ಮೇಟೀವ್ ವಿಭಜನೆ ಮಾಡುತ್ತಾರೆ. ಇದೇ ನೆಹರೂರವರ ಬೌದ್ಧಿಕ ಮಿತಿ ಎಂಬುದು ಬಾಲ ಗಂಗಾಧರರ ಅಭಿಪ್ರಾಯ.
ಎಲ್ಲಿಯವರಿಗೆ ನಾನು ಅಧಿಕಾರದಲ್ಲಿರು ತ್ತೇನೋ ಅಲ್ಲಿಯವರೆಗೆ ನಾನು ಭಾರತವನ್ನು ಒಂದು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ. ಹಿಂದೂ ರಾಷ್ಟ್ರದ ಕಲ್ಪನೆಯು ಕೇವಲ ಮಧ್ಯ ಯುಗದ್ದು ಮಾತ್ರವಲ್ಲ, ಅದೊಂದು ಮೂರ್ಖ ಕಲ್ಪನೆಯಾಗಿದೆ. ಆಧುನಿಕ ಕಾಲದಲ್ಲಿ ರಿಲಿಜನ್ ಹೊಂದಿರಬೇಕಾದವರು ವ್ಯಕ್ತಿಗಳೇ ವಿನಾ ರಾಷ್ಟವಲ್ಲ ಎಂದು 1947ರಲ್ಲಿ ನೆಹರೂರವರು ತಮ್ಮ ಭಾಷಣದಲ್ಲಿ ಘೋಷಿಸಿದ್ದಾರೆ. ಅವರ ದೃಷ್ಟಿಕೋನ ಭಾರತೀಯ ಸಮಾಜದಲ್ಲಿ ನಡೆ ಯುವ ಎಲ್ಲಾ ಹಿಂಸೆಗಳನ್ನು ರಿಲಿಜನ್ನಿನ ಮೂಲ ಭೂತವಾದ ಮತ್ತು ಕೋಮುವಾದ ಎಂದು ಗ್ರಹಿಸುವಂತೆ ಒತ್ತಾಯಿಸುತ್ತದೆ. ನೆಹರೂರವರಿಗೆ ಸೌಹಾರ್ದಯುತ ಬಹುತ್ವ ಅಂದರೆ ರಾಜಕೀಯ ದಿಂದ ರಿಲಿಜನ್ನನ್ನು ಬೇರ್ಪಡಿಸುವುದು. ಸಮುದಾಯಗಳ ನಡುವಿನ ಎಲ್ಲ ಘರ್ಷಣೆಗಳಿಗೆ ರಾಜಕೀಯ ಮತ್ತು ರಿಲಿಜನ್ನಿನ ಮಿಶ್ರಣವೇ ಕಾರಣ ಎಂಬುದು ಅವರ ಅಭಿಪ್ರಾಯ. ರಿಲಿಜನ್ನೇ ಇಲ್ಲದ ಬಹುಸಂಸ್ಕೃತಿಗಳ ದೇಶಕ್ಕೆ ಈ ದೃಷ್ಟಿಕೋನ ಎಷ್ಚು ಔಚಿತ್ಯಪೂರ್ಣ? ಅದರ ಫಲಿತಾಂಶವನ್ನೇ ನಾವಿಂದು ದಿನನಿತ್ಯ ಕಾಣುತ್ತಿ ದ್ದೇವೆ. ಇಂದು ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ನಡುವಿನ ತಾತ್ವಿಕ ಭಿನ್ನಾಭಿ ಪ್ರಾಯ ಅಂದರೆ ಇದೇ. ಅಂದರೆ ಇಬ್ಬರೂ ರಿಲಿಜನ್ ಎಂಬ ಹಗ್ಗದ ಜಗ್ಗಾಟದಲ್ಲಿದ್ದಾರೆ.
ವಸಾಹತುಶಾಹಿಯು ಹಿಂದೂ ಸಂಪ್ರದಾಯ ಗಳ ಕುರಿತಂತೆ ಒಂದು ನಿರಂತರವಾದ ವಿರೋಧ ವನ್ನಿಟ್ಟುಕೊಂಡೇ ಇತ್ತು. ಭಾರತೀಯ ರಿಲಿಜನ್ನು ಗಳ ಬಗೆಗಿನ ಪ್ರೊಟೆಸ್ಟಾಂಟ್ ಟೀಕೆಗಳನ್ನಾಧರಿಸಿ ಅದು ಶಾಸನಗಳನ್ನು ರೂಪಿಸುತ್ತಿತ್ತು. ವಸಾಹತು ಶಾಹಿಗಳ ವಿವರಣೆಯೆಂದರೆ ಭಾರತದ ಕುರಿತು ಪ್ರೊಟೆಸ್ಟಾಂಟ್ರು ನೀಡಿದ ವಿವರಣೆಗಳೇ ಆಗಿದ್ದವು. ಅವುಗಳೇ ನೆಹರೂರಾದಿಯಾಗಿ ಭಾರತದ ಸೆಕ್ಯುಲರ್ ರಾಜಕಾರಣಿಗಳಿಗೆ ಮಾರ್ಗ ದರ್ಶನ ಮಂತ್ರವಾದವು. ನೆಹರೂ ಹಾಗೂ ಅವರ ಅನುಯಾಯಿಗಳ ಸೆಕ್ಯುಲರ್ ವಾದವು ಹಿಂದೂ ಸಂಪ್ರದಾಯಗಳ ಬಗ್ಗೆ ಕೇವಲ ಒಂದು ನಕಾರಾ ತ್ಮಾಕ ಧೋರಣೆಯಾಗಿದೆ. ಈ ಹಿನ್ನೆಲೆಯಲ್ಲಿ ನೆಹರೂರವರ ‘ಸೆಕ್ಯುಲರ್’ ಪ್ರಭುತ್ವವು ಯಾವುದೇ ಅರ್ಥದಲ್ಲಿ ‘ತಟಸ್ಥ’ವಾಗಿರಲು ಸಾಧ್ಯವಿಲ್ಲ.
* * * * * * * *
ಚಿತ್ರಕೃಪೆ : http://im.in.com
ಧರ್ಮನಿರಪೇಕ್ಷತೆಯ ಬಗ್ಗೆ ನೆಹರೂ ಹಾಗೂ ಗಾಂಧೀಜಿವರ ಅಭಿಪ್ರಾಯಗಳಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ. ಇಂದು ನಮ್ಮ ದೇಶದಲ್ಲಿ ಆಧ್ಯಾತ್ಮ ಮರೆಯಾಗಿ ಧರ್ಮದ ಹೆಸರಿನ ತೊಗಟೆ ಮಾತ್ರ ಉಳಿದುಕೊಂಡಿದೆ. ನಮ್ಮ ದೇಶ ಆಧ್ಯಾತ್ಮಿಕ ದೇಶ ಎಂದು ನಾವು ಎಷ್ಟೇ ಬೊಬ್ಬೆ ಹಾಕಿದರೂ ನಮ್ಮ ಜನರಲ್ಲಿ ಆಧ್ಯಾತ್ಮಿಕ ಮೌಲ್ಯಗಳು ಬಹಳ ಕಡಿಮೆಯಾಗಿರುವುದು ಎದ್ದು ಕಾಣುತ್ತದೆ. ಹಿಂದೂವಾದಿಗಳೂ ಇದಕ್ಕೆ ಹೊರತಾಗಿಲ್ಲ. ವಾಸ್ತವವಾಗಿ ನಮ್ಮ ದೇಶದ ಹಿಂದೂವಾದವನ್ನು ಹುಟ್ಟುಹಾಕಿ ಮುನ್ನಡೆಸುತ್ತಿರುವುದು ಪುರೋಹಿತಶಾಹಿಯೇ ಆಗಿದೆ. ಇಂಥ ಪುರೋಹಿತಶಾಹಿ ಕಂದಾಚಾರಗಳ ಬಗ್ಗೆ ನೆಹರೂ ಅವರ ಅಭಿಪ್ರಾಯ ಎಲ್ಲ ಪ್ರಜ್ಞಾವಂತರೂ ಒಪ್ಪುವಂಥದ್ದೇ ಆಗಿದೆ. ಅರ್ಥವಿಲ್ಲದ, ಕಾರ್ಯಕಾರಣ ಸಂಬಂಧವಿಲ್ಲದ ಕಂದಾಚಾರ ಹಾಗೂ ಮೂಢ ನಂಬಿಕೆಗಳು ಹಿಂದಿನ ಕಾಲದಲ್ಲಿ ಪುರೋಹಿತಶಾಹಿಯ ಹೊಟ್ಟೆ ಹೊರೆಯಲು ಹುಟ್ಟಿಕೊಂಡುದು ಎಂಬುದರಲ್ಲಿ ಸಂದೇಹವಿಲ್ಲ. ಇಂದು ಹೊಟ್ಟೆ ಹೊರೆಯಲು ನಾನಾ ದಾರಿಗಳು ಇರುವಾಗ ಇಂಥ ಮೂಢ ನಂಬಿಕೆಗಳನ್ನೇ ಪೋಷಿಸುವುದು ಅನಗತ್ಯ ಎಂದು ಕಾಣುತ್ತದೆ. ಪುರೋಹಿತಶಾಹಿ ಕಂದಾಚಾರಗಳು ಜನರ ವೈಯಕ್ತಿಕ ಎಂದಾದರೆ ದೊಡ್ಡ ತೊಂದರೆಯೇನಿಲ್ಲ, ಆದರೆ ದೇವರನ್ನು ನಂಬದ ವ್ಯಕ್ತಿಗಳನ್ನೂ ಕಂದಾಚಾರಗಳನ್ನು ಪಾಲಿಸಬೇಕು ಎಂಬ ಸಾಮಾಜಿಕ ಒತ್ತಡ ಹಾಕುವ ಪುರೋಹಿತಶಾಹಿ ಧೋರಣೆ ಸರ್ವಾಧಿಕಾರಿ ಧೋರಣೆಯಂತೆ ಕಾಣುತ್ತದೆ. ಇದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪುರೋಹಿತಶಾಹಿ ವ್ಯವಸ್ಥೆ ಆಲೋಚಿಸಬೇಕಾಗಿದೆ.
>>>> ಆದರೆ ದೇವರನ್ನು ನಂಬದ ವ್ಯಕ್ತಿಗಳನ್ನೂ ಕಂದಾಚಾರಗಳನ್ನು ಪಾಲಿಸಬೇಕು ಎಂಬ ಸಾಮಾಜಿಕ ಒತ್ತಡ ಹಾಕುವ ಪುರೋಹಿತಶಾಹಿ ಧೋರಣೆ ಸರ್ವಾಧಿಕಾರಿ ಧೋರಣೆಯಂತೆ ಕಾಣುತ್ತದೆ.
ಎಡವಿದ್ದೀರಿ ನೀವು , ಹಿಂದೂ ಧರ್ಮವು ಎಂದೂ ಯಾವುದನ್ನೂ ಯಾರಿಗೂ ಹೇರಿಲ್ಲ,ಯಾರನ್ನೂ ಕಡೆಗಣಿಸಿಲ್ಲ(ಸುವುದಿಲ್ಲ) ಕೂಡ . ಇನ್ನು ನೀವು ಹೇಳುತ್ತಿರುವ ಪುರೋಹಿತಶಾಹಿ(?) , ಇಂತಹ ಜನರು(ದುರ್ಜನರು) ಎಲ್ಲಾ ವರ್ಗಗಳಲ್ಲೂ ಇದ್ದಾರೆ , ಈಗಿನ ಕೆಲವು ದಲಿತರನ್ನು ನೋಡಿ,ಅವರನ್ನ ದಲಿತಶಾಹಿ ಅನ್ನೋಣವೇ? ಅವರೂ ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾರೆ ಈಗ , ಅವರಿಗೆ ಕೊಟ್ಟ ಸಾಂವಿಧಾನಿಕ ಸೌಲಭ್ಯಗಳನ್ನ ದುರುಪಯೋಗ ಪಡಿಸಿಕೊಂಡು!
ಧರ್ಮದ ಆಧಾರದಲ್ಲಿ ರೂಪುಗೊಂಡ ಪಾಕಿಸ್ತಾನ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ಇಂದಿಗೂ ಹೊರಬರಲಾರದೆ ನರಳುತ್ತಿದೆ. ಗಾಂಧಿ ಹಾಗೂ ನೆಹರೂರವರು ತಮ್ಮ ದೂರದೃಷ್ಟಿಯಿಂದ ಭಾರತವೂ ಪಾಕಿಸ್ತಾನದಂತೆ ಮೂಲಭೂತವಾದಿ ಹಿಂದೂ ರಾಷ್ಟ್ರವಾಗದಂತೆ ನೋಡಿಕೊಂಡರು. ಇದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕು. ನೆಹರೂ ಕೆಲವು ವಿಷಯಗಳಲ್ಲಿ ತಪ್ಪು ನಿರ್ಣಯಗಳನ್ನು ತೆಗೆದುಕೊಂಡಿದ್ದರೂ ಭಾರತವನ್ನು ಒಂದು ಆಧುನಿಕ, ಉದಾರವಾದಿ, ಧರ್ಮನಿರಪೇಕ್ಷ ರಾಷ್ಟ್ರವನ್ನಾಗಿ ಮಾಡುವಲ್ಲಿ ಅಂಬೇಡ್ಕರ್ ಅವರ ಜೊತೆಗೂಡಿ ಸಂವಿಧಾನವನ್ನು ಧರ್ಮನಿರಪೇಕ್ಷ ಸಂವಿಧಾನವಾಗಿ ರೂಪಿಸಿರುವುದು ಬಹಳ ದೊಡ್ಡ ಕೊಡುಗೆ. ಇಲ್ಲದೆ ಹೋಗಿದ್ದರೆ ಭಾರತವು ಇಂದಿಗೂ ಕೂಡ ಒಂದು ಪುರೋಹಿತಶಾಹಿ ಹಿಂದೂ ಮೂಲಭೂತವಾದಿ ರಾಷ್ಟ್ರವಾಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಹಿಂದೂ ರಾಷ್ಟ್ರದ ಬಗ್ಗೆ ಬೊಬ್ಬೆ ಹೊಡೆಯುತ್ತಿರುವವರೆಲ್ಲರೂ ಬ್ರಾಹ್ಮಣರೇ ಎಂಬುದನ್ನು ಗಮನಿಸಬೇಕಾಗಿದೆ. ಇದರ ನಾಯಕತ್ವ, ಪರಿಕಲ್ಪನೆ ಕೂಡ ಬ್ರಾಹ್ಮಣರದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಉದಾಹರಣೆಗೆ ಆರ್. ಎಸ್. ಎಸ್. ದಂಥ ಸಂಘಟನೆಯ ನಾಯಕರು ಯಾವಾಗಲೂ ಬ್ರಾಹ್ಮಣರೇ ಆಗಿದ್ದಾರೆ, ಆಗುತ್ತಿದ್ದಾರೆ. ಇದರ ಸ್ಥಾಪಕರೂ ಕೂಡ ಬ್ರಾಹ್ಮಣರೇ. ವಿಶ್ವ ಹಿಂದೂ ಪರಿಷತ್ ನಂಥ ಹಿಂದೂ ಸಂಸ್ಥೆಗಳಲ್ಲೂ ಅಷ್ಟೇ. ಕಟ್ಟಾ ಹಿಂದುತ್ವವಾದದ ಪ್ರತಿಪಾದಕ ಸಾವರ್ಕರ್ ಕೂಡ ಬ್ರಾಹ್ಮಣರೇ ಎಂಬುದು ಗಮನಾರ್ಹ. ಇವರೆಲ್ಲರೂ ನೆಹರೂ ಅವರನ್ನು ದೂರುವುದೇ ಪ್ರಧಾನವಾಗಿ ಎದ್ದು ಕಾಣುವಂಥದ್ದು. ನೆಹರೂ ಮಾತ್ರವಲ್ಲ ಇವರೆಲ್ಲರಿಗೂ ಗಾಂಧೀಜಿಯವರ ಬಗೆಗೂ ಅಸಹನೆ ಇದೆ.
॒@ Ananada Prasad ಎಲ್ಲಿ ಹಿಂದೂಗಳಿಗೆ ಒತ್ತಾಯ ಹೇರಲಾಗಿದೆ ತಿಳಿಸಿ. ಸುಖಾಸುಮ್ಮನೆ ಆರೋಪ ಮಾಡುವುದು ಅಂತರ್ಜಾಲದ ದೊಡ್ಡ ರೋಗ. ಏಕೆಂದರೆ ಇಲ್ಲಿ ಯಾವುದಕ್ಕೂ ಉತ್ತರದಾಯಿತ್ವವಿಲ್ಲ. ರಮಾನಂದ ಅವರು ಬರೆದಿರುವುದು ಕಟುವಾಸ್ತವ. ಎಲ್ಲರೂ ಅವರವರ ಕಲ್ಪನಾಲೋಕದಲ್ಲಿ ವಿಹರಿಸಲು ಸ್ವತಂತ್ರರೇ.
ರಮಾನಂದ ಅವರು ಆಧಾರಗಳ ಸಮೇತ ತಮ್ಮ ಲೇಖನವನ್ನು ಮುಂದಿಟ್ಟಿದ್ದಾರೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನು ಕಂಡ ಸತ್ಯವನ್ನು ಆಧಾರಗಳ ಮೂಲಕ ಮಂಡಿಸಿ. ಇಲ್ಲದಿದ್ದರೆ ಕೃಷ್ಣಪ್ಪನವರ ಪ್ರತಿಕ್ರಿಯೆಯಂತೆ ಕೇವಲ ಬ್ರಾಹ್ಮಣ ವಿರೋಧಿಗಳ ಹಪಾಹಪಿಯಾಗುತ್ತದೆ
ಬ್ರಾಹ್ಮಣ ಜನಾಂಗದಲ್ಲಿ ವ್ಯಕ್ತಿಯೊಬ್ಬ ಸತ್ತಾಗ ಆತನ ಉತ್ತರ ಕ್ರಿಯೆಗಳು ಎಂಥ ಅರ್ಥವಿಲ್ಲದ ಆಚರಣೆಗಳಿಂದ ಕೂಡಿವೆ ಎಂಬುದನ್ನು ಗಮನಿಸಿದರೆ ಪುರೋಹಿತಶಾಹಿ ಎಂಥ ಒತ್ತಾಯವನ್ನು ಸಾಮಾಜಿಕವಾಗಿ ಹೇರಿದೆ ಎಂಬುದು ಗೊತ್ತಾಗುತ್ತದೆ. ಇದು ಒಂದು ಉದಾಹರಣೆಯಷ್ಟೇ. ಸತ್ತ ವ್ಯಕ್ತಿಯ ಎಲ್ಲ ಮಕ್ಕಳೂ ಈ ಉತ್ತರಕ್ರಿಯೆಯ ಅರ್ಥವಿಲ್ಲದ ಆಚರಣೆಗಳಲ್ಲಿ ಭಾಗವಹಿಸಲೇಬೇಕು ಎಂಬ ನಿಯಮ ಇದೆ. ಇದರಲ್ಲಿ ನಂಬಿಕೆ ಇಲ್ಲದವರಿಗೂ ಯಾವುದೇ ವಿನಾಯಿತಿ ಇಲ್ಲ. ಒಂದು ವೇಳೆ ಒಬ್ಬ ಮಗ ನಂಬಿಕೆಯಿಲ್ಲ, ಇಂಥ ಅರ್ಥಹೀನ ಆಚರಣೆಗಳಲ್ಲಿ ನಾನು ಭಾಗವಹಿಸುವುದಿಲ್ಲ ಎಂದರೆ ಆತನನ್ನು ಕುಟುಂಬ ಬಹಿಷ್ಕರಿಸುತ್ತದೆ ಅಥವಾ ಆತನ ನಿಂದನೆ ಮಾಡುತ್ತದೆ. ಈ ಆಚರಣೆಗಳು ಒಂದು ದಿನವಲ್ಲ ಮೂರ್ನಾಲ್ಕು ದಿನ ನಡೆಯುತ್ತದೆ. ಇದರಲ್ಲಿ ನಂಬಿಕೆ ಇಲ್ಲದವರಿಗೆ ಇಂಥ ಆಚರಣೆಗಳಲ್ಲಿ ಭಾಗವಹಿಸುವುದು ಒಂದು ಹಿಂಸೆಯಾಗುತ್ತದೆ. ಈ ಬಗ್ಗೆ ಪುರೋಹಿತಶಾಹಿ ಎಂದಾದರೂ ಆಲೋಚಿಸಿದೆಯೇ? ವ್ಯಕ್ತಿಯೊಬ್ಬನಿಗೆ ಇಂಥ ಆಚರಣೆಗಳನ್ನು ಮಾಡಲೇಬೇಕು ಎಂದು ಹೇರುವುದು ಸರ್ವಾಧಿಕಾರಿ ಮನೋಭಾವವಲ್ಲವೇ? ಇದು ಒಂದು ಉದಾಹರಣೆ. ಬ್ರಾಹ್ಮಣ ಜಾತಿಯಲ್ಲಿ ಇಂಥ ಅರ್ಥವಿಲ್ಲದ ಆಚರಣೆಗಳು ನಂಬಿಕೆ ಇಲ್ಲದವರ ಮೇಲೆ ಹೇರಲ್ಪಟ್ಟಿದೆ. ಈ ಬಗ್ಗೆ ಯಾರೂ ಉಸಿರೆತ್ತದಂತೆ ಪುರೋಹಿತಶಾಹಿ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ. ಇದು ಕೇವಲ ಬ್ರಾಹ್ಮಣವಿರೋಧಿ ಹಪಾಹಪಿಯಲ್ಲ ಕಟು ವಾಸ್ತವ. ಸಾಮಾಜಿಕವಾಗಿ ಯಾವುದೇ ಆಚರಣೆಗಳೂ ವೈಯಕ್ತಿಕ ಇಷ್ಟ, ನಂಬಿಕೆಯ ಮೇಲೆ ಇದ್ದಾರೆ ಒಳ್ಳೆಯದು, ಬಲವಂತವಾಗಿ ಇಷ್ಟವಿಲ್ಲದವರ ಮೇಲೆ ಹೇರುವುದು ಒಳ್ಳೆಯದಲ್ಲ. ನೆಹರೂ ಈ ವಿಷಯದಲ್ಲಿ ಉದಾರವಾದಿ ಧೋರಣೆ ಹೊಂದಿದ್ದರು. ಹೀಗಾಗಿಯೇ ನೆಹರೂ ಅವರನ್ನು ಪುರೋಹಿತಶಾಹಿಗಳು ನಿರಂತರವಾಗಿ ದೂರುತ್ತಾ ಬಂದಿರುವುದು.
ನಾನು ನನ್ನ ಪ್ರತಿಕ್ರಿಯೆಯಲ್ಲಿ ಕಟು ವಾಸ್ತವ ಸಂಗತಿಗಳನ್ನೇ ತಿಳಿಸಿದ್ದೇನೆ. ಇದು ಬ್ರಾಹ್ಮಣವಿರೋಧಿ ಹಪಾಹಪಿ ಎಂಬುದು ಸಮಂಜಸವಾಗಲಾರದು. ನಾನು ಹೇಳಿದ ವಿಷಯ ಸ್ಪಷ್ಟವಾಗಿ ಆಧಾರ ಸಹಿತವಾಗಿದೆ. ಆರ್. ಎಸ್. ಎಸ್. ಸಂಸ್ಥೆಯ ಸ್ಥಾಪಕರು ಹಾಗೂ ಸರಸಂಘಚಾಲಕರು ಯಾವಾಗಲೂ ಬ್ರಾಹ್ಮಣರೇ ಆಗಿರುವುದು ಸುಳ್ಳೇ? ಕಟ್ಟಾ ಹಿಂದುತ್ವವಾದಿ ಸಾವರ್ಕರ್ ಬ್ರಾಹ್ಮಣರೆಂಬುದು ಸುಳ್ಳೇ? ಇವರೆಲ್ಲರಿಗೂ ಗಾಂಧಿ ಹಾಗೂ ನೆಹರೂ ಬಗ್ಗೆ ಅಸಹನೆ ಇರುವುದು ಸುಳ್ಳೇ? ಹಿಂದುತ್ವದ ಬಗ್ಗೆ ಬೊಬ್ಬೆ ಹೊಡೆಯುವ ಪರಿಕಲ್ಪನೆ ಹಾಗೂ ನಾಯಕತ್ವ ನೀಡುತ್ತಿರುವುದು ಬ್ರಾಹ್ಮಣರೆಂಬುದು ಸುಳ್ಳೇ?
ಯಾವುದೇ ಕರ್ಮ ಸಂಸ್ಕಾರಗಳಲ್ಲೂ ನಂಬಿಕೆಯಿಲ್ಲದವರಿಗೆ ಯಾವುದೇ ಧರ್ಮ ಮಾಡಲೇಬೇಕೆಂಬ ಕಟ್ಟಾಜ್ಣೆ ಇಲ್ಲ. ಆದರೆ ಕೆಲವು ಅಸಡ್ಡಾಳ ಪುರೋಹಿತರು, ದೇವರ ದೂತರೆಂಬಂತೆ ಹುಚ್ಚು ಹುಚ್ಚಾಗಿ ದೇವರ ಧರ್ಮ ಕರ್ಮದ ಹೆಸರಿನಲ್ಲಿ ಇಲ್ಲಸಲ್ಲದ ಭಯವನ್ನು ಸಾಮಾನ್ಯ ಜನರ ಮೇಲೆ ಹೇರುತ್ತಿದೆ.
ಅಸಲಿಗೆ ನೆಹರೂ ಯಾವುದನ್ನು ಬೆಂಬಲಿಸುವನೋ ಸಾವರ್ಕರ್ ಯಾವುದನ್ನು ಅನುಸರಿಸುವನೋ ಎಂಬುದು ಪ್ರಸ್ತುತ ಅಲ್ಲ. ಒಂದು ವೇಳೆ ನೆಹರು ಸಹಕರಿಸುವುದಾದರೆ ಸಹಕರಿಸರಲಿ ಬಿಡಿ. ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇದೆ. ಇನ್ನು ಆನಂದ ಪ್ರಸಾದರ ಉಲ್ಲೇಖದಂತೆ ಸಂಬಂಧಿಕರ ನೆಂಟರಿಷ್ಟರ ವಿಚಿತ್ರತೆರನಾದ ಪ್ರತಿಕ್ರಿಯೆಗೆ ಮಾಡಬಾರದು. ೧೩ ದಿನಗಳ ಕಾಲ ಮತ್ತು ವರ್ಷಕ್ಕೊಂದು ದಿನ ತಿಂದುಂಡು ಹೋಗುವವರಿಗೆ ನಮ್ಮ ನಂಬಿಕೆ ಮತ್ತು ಜೀವನವನ್ನು ಪ್ರಶ್ನೆ ಮಾಡುವ ಹಕ್ಕು ಇಲ್ಲ.
ಆನಂದ ಪ್ರಸಾದ್ ಮತ್ತು ಕ್ರಿಷ್ಣಪ್ಪರು ತಮ್ಮ ವಾದದ ಮೂಲಕ ತಾವೇನು ಎಂದು ಇಲ್ಲಿ ಸಾಬೀತು ಮಾಡಿದರು.!! ಕುತರ್ಕಿಗಳು !!!!!!! ಸಾಲದೆಂಬಂತೆ ತಮ್ಮನ್ನು ತಾವು ಸಮರ್ಥಿಸಿಕೊಂಡರು (ಅನಿವಾರ್ಯವಾಗಿ) ಕೂಡ !!!! ಇನ್ನು ಯಾರೂ ಅವರಬಗ್ಗೆ ಕಮೆಂಟಿಸಿ ಸಮಯ ವ್ಯರ್ಥ ಮಾಡಬೇಕಾಗಿಲ್ಲ !
ಯಾವುದು ಕುತರ್ಕ ಎಂದು ಹೇಳಿದರೆ ಉತ್ತಮ. ವಾಸ್ತವ ವಿಚಾರ ಹೇಳಿದರೆ ಕುತರ್ಕವಾಗುತ್ತದೆಯೇ? ವೈಚಾರಿಕವಾಗಿ ಬೆಳೆಯದ ವ್ಯಕ್ತಿಗಳು ಇಂಥ ಹೇಳಿಕೆಗಳನ್ನು ನೀಡುತ್ತಾರೆ ಅಥವಾ ಅಸಹನೆಯಿಂದ ದೈಹಿಕ ದಾಳಿಗೂ ಇಳಿಯುತ್ತಾರೆ
ರಮಾನಂದರರವರ ಲೇಖನ ಉತ್ತಮವಾಗಿದೆ. ಇದನ್ನು ಅದರ ಕುರಿತು ನಡೆದಯುತ್ತಿರುವ ಚರ್ಚೆ ಮಾತ್ರ ದಿಕ್ಕು ತಪ್ಪುತ್ತಿದೆ ಎಂಬುದು ನನ್ನ ಅಭಿಪ್ರಾಯ. ಲೇಖನದ ಆಶಯವನ್ನು ಅರ್ಥಮಾಡಿಕೊಳ್ಳದೆ ವಿನಾಕಾರಣ ಯಾರನ್ನೋ ದೂಷಣೆ ಮಾಡುವುದು ತರವಲ್ಲ. ಹಾಗಾದರೆ ಮೇಲಿನ ಚರ್ಚೆಯಲ್ಲಾಗುತ್ತಿರುವ ಗೊಂದಲಗಳೇನು? ಎಂಬುದನ್ನು ನೋಡಬೇಕಾಗಿದೆ.
೧. ನೆಹರೂರವರ ಸೆಕ್ಯಲರಿಸಂ ಬಗ್ಗೆ ಒಬ್ಬೊಬ್ಬರ ವೈಯುಕ್ತಿಕ ನಿಲುವುಗಳು ಇಲ್ಲಿ ಮುಖ್ಯ ಅಲ್ಲ ಎಂದುಕೊಂಡಿದ್ದೇನೆ. ಅದರ ಬದಲು ವಸ್ತುನಿಷ್ಟವಾಗಿ ಅವರ ಚಿಂತನೆಗಳನ್ನು ನೋಡಬೇಕಾಗಿದೆ. ನೆಹರೂರವರು ರಮಾನಂದರವರು ಹೇಳುವ ಹಾಗೆ ಭಾರತದ ಸಂಪ್ರದಾಯಗಳನ್ನು ರಿಲಿಜನ್ ಗಳೆಂದು ತಪ್ಪಾಗಿ ಅರ್ಥಮಾಡಿಕೊಂಡಿದ್ದರ ಪರಿಣಾಮವಾಗಿ ಅವರ ಸೆಕ್ಯುಲರಿಸಂ ಚಿಂತನೆ ಹೆಚ್ಚು ಬೆಳೆಯುತ್ತಾ ಹೋಯಿತು, ಆದರೆ ಇಲ್ಲಿರುವ ಸಂಪ್ರದಾಯಗಳು ರಿಲಿಜನ್ ಗಳಲ್ಲ ಎಂಬುದನ್ನು ವೈಜ್ಞಾನಿಕವಾಗಿಯೇ ಈಗಾಗಲೇ ಬಾಲು ರವರು ಸ್ಪಷ್ಟಪಡಿಸಿದ್ದಾರೆ. ಇದು ನಿಜವೆಂದಾದರೆ, ನೆಹರೂ ರವರ ಸೆಕ್ಯೂಲರಿಸಂನ್ನು ಹಿಂದೂ ಮೂಲಭೂತವಾದಕ್ಕೆ ಎದಿರುಗೊಳಿಸುವಲ್ಲಿ ಯಾವುದೇ ಅರ್ಥವಿಲ್ಲ. ಹಾಗೆ ನೋಡಿದರೆ ಚಚ್ð ಮೇಲೆ ನಡೆದಂತಹ ದಾಳಿಗಳನ್ನು ಸೆಕ್ಯುಲರಿಸಂ ಪರಿಹರಿಸಲು ಸಾಧ್ಯವೇ ಇಲ್ಲ, ಏಕೆಂದರೆ ಅದು ತಟಸ್ಥ ನೀತಿಯನ್ನು ಅನುಸರಿಸಿದರೆ ಕ್ರಿಶ್ಚಿಯನ್ನರಿಗೆ ಮತಾಂತರ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ, ಹಾಗೆಯೇ ಮತಾಂತರವನ್ನು ವಿರೋಧಿಸುವವರಿಗೆ ಏನು ಬೇಕಾದರೂ ಮಾಡುವ ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ಸೆಕ್ಯುಲರಿಸಂ ಎಂಬುದು ತಟಸ್ಥವಾಗಿ ಇರಲು ಸಾಧ್ಯವೇ ಇಲ್ಲ. ಒಂದೊಮ್ಮೆ ಅದು ತಟಸ್ಥವಾಗಿರಲು ಸಾಧ್ಯವಾಗದಿದ್ದರೆ ಸೆಕ್ಯುಲರ‍್ ಆಗಿ ಉಳಿಯುವದೂ ಇಲ್ಲ.
೨. ಹಿಂದೂ ಮೂಲಭುತವಾದವನ್ನು ತಡೆಗಟ್ಟಲು ಸೆಕ್ಯುಲರಿಸಂ ಬಲವಾಯಿತು ಎಂದು ಒಬ್ಬರು ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ. ಅವರ ವಾದ ನಿಜವೇ ಆಗಿದ್ದ ಪಕ್ಷದಲ್ಲಿ, ನೆಹರು ಹುಟ್ಟುಹಾಕಿರುವುದು ಸೆಕ್ಯುಲರಿಸಂ ಅಲ್ಲ ಬದಲಿಗೆ ಹಿಂದೂ ವಿರೋಧ ನೀತಿ ಎಂದು ಕರೆಯಬಹುದು. ಏಕೆಂದರೆ ತಟಸ್ಥವಾಗಿರ ಬೇಕಾದ ಸೆಕ್ಯುಲರ‍್ ತತ್ವ ಒಬ್ಬರನ್ನು ದ್ವೇಷಿಸಿ ಮತ್ತೊಬ್ಬರನ್ನು ಪೋಷಿಸುತ್ತದೆ ಎಂದರೆ ನಿಜವಾಗಿಯೂ ಅದು ಯಾವುದೋ ಒಂದರ ಪರ ಮತ್ತು ಇನ್ನೊಂದರ ವಿರೋಧ ನೀತಿ ಎನ್ನದೆ ಬೇರೆ ವಿಧಿ ಇಲ್ಲ.
೩. ಪಾಕಿಸ್ಥಾನದಲ್ಲಿ ಬೆಳೆದ ಮೂಲಭೂತವಾದವನ್ನು ಭಾರತದಲ್ಲಿ ಬೆಳೆಯದೆ ಬಿಡಲು ನೆಹರೂರವರ ಸೆಕ್ಯುಲರಿಸಂ ಪ್ರಯತ್ನ ಪಟ್ಟಿದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಆದರೆ ಸೆಮೆಟಿಕ್ ರಿಲಿಜನ್ ಗಳ ಸಾಲಿನಲ್ಲಿ ಇಸ್ಲಾಂ ಸೇರಿಕೊಳ್ಳುತ್ತದೆ. ಆದರೆ ಭಾರತದಲ್ಲಿರು ಸಂಪ್ರದಾಯಗಳು ಸೆಮೆಟಿಕ್ ರಿಲಿಜನ್ ಗಳ ಮಾದರಿಯನ್ನು ಹೊಂದಿಲ್ಲ. ರಿಲಿಜನ್ ನಲ್ಲಿ ಆದಂತಹ ಬದಲಾವಣೆಯ ರೀತಿಯಲ್ಲಿಯೇ ಜಗತ್ತಿನ ಎಲ್ಲಾ ಕಡೆ ಆಗುತ್ತದೆ ಎಂಬುದು ನಂಬಲು ಅಸಾಧ್ಯವಾದ ವಿಷಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕ್ರಿಶ್ಚಿಯಾನಿಟಿ ಇರುವುದರಿಂದ ಸೈದ್ಧಾಂತಿಕ ಜ್ಞಾನ ಅದರ ಮೂಲ ಬೇರು ಆಗಿರುವುದರಿಂದ ಜಗತ್ತಿನ ಕುರಿತಾದ ಸಿದ್ಧಾಂತಗಳು ಅಲ್ಲಿ ಬೆಳೆಯಲಾರಂಭಿಸಿದವು. ಅಂದ ಮಾತ್ರಕ್ಕೆ ಭಾರತದಲ್ಲಿ ಸಿದ್ಧಾಂತ ಬೆಳೆಯಿತೆ? ಇಲ್ಲವಲ್ಲಾ.
೪. ಪುರೋಹಿತಶಾಹಿಯ ಕುರಿತಾದ ಚರ್ಚೆ: ಮೊದಲನೆಯದಾಗಿ ಪುರೋಹಿತಶಾಹಿ ಎಂದರೇನು? ಇಲ್ಲಿ ಶಾಹಿ ಎಂದರೆ ಸಂಘಟನೆ ಎಂದರ್ಥ. ಅಂದರೆ ಪುರೋಹಿತರದ್ದು ಒಂದು ಅಥವಾ ಹಲವೋ ಸಂಘಟನೆ ಇದೆ ಎಂದು ಅರ್ಥವೇ? ವಾಸ್ತವವಾಗಿ ಹೀಗೆ ಪುರೋಹಿತಶಾಹಿ ಎಂದು ಅರ್ಥಮಾಡಿಕೊಂಡಿರುವುದರಲ್ಲೇ ಹಲವಾರು ಸಮಸ್ಯೆಗಳಿವೆ. ಭಾರತದಲ್ಲಿರುವ ಬ್ರಾಹ್ಮಣರೆಲ್ಲಾ ಪುರೋಹಿತರಲ್ಲ, ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ, ಹಾಗೆಯೇ ಪೌರೋಹಿತ್ಯ ಮಾಡುವ ಕಾರ್ಯ ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿರದೆ ಹಲವಾರು ಸಮುದಾಯಗಳ ವ್ಯಕ್ತಿಗಳು ಮಾಡುತ್ತಾರೆ. (ಹೆಚ್ಚಿನ ವಿವರಣೆ ಓದಿ-ಎ.ಎಂ.ಹೊಕಾರ್ಟ್ ರವರ ಕಾಸ್ಟ್ ಪುಸ್ತಕ). ಹಾಗಾದರೆ ಯಾವುದೋ ಸ್ಥಾನದಲ್ಲಿರುವ ಬ್ರಾಹ್ಮಣರನ್ನು ತೋರಿಸಿ ಎಲ್ಲರೂ ಪುರೋಹಿತರು, ಪುರೋಹಿತಶಾಹಿ ಎನ್ನುವುದು ಅಸಮಂಜಸವಾದ ವಿಚಾರವಾಗಿದೆ. ಯಾರಿಗೋ ಒಬ್ಬರಿಗೆ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿರದ ಕೆಲಸವನ್ನು ಅವರಿಗೆ ಮಾತ್ರ ಸೀಮಿತವಾದ ಕೆಲಸ ಎಂದು ಹೇಳುವುದು ನಮ್ಮ ಅವಸರದ ಹೇಳಿಕೆಯಾಗುತ್ತದೆ. ಪುರೋಹಿತಶಾಹಿಯೇ ಅರ್ಥವಾಗದಿರುವಾಗ ಅವರ ಸರ್ವಾಧಿಕಾರದ ಮಾತು ಇನ್ನೆಲ್ಲಿ.
೫. ಇನ್ನು ಆಚರಣೆಗಳ ಬಗ್ಗೆ: ನಮ್ಮ ಎಲ್ಲಾ ಆಚರಣೆಗಳನ್ನು ಬ್ರಾಹ್ಮಣರು ಹೇರಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನಮ್ಮಲ್ಲಿರುವ ಬಹುತೇಕ ಆಚರಣೆಗಳು ನಶಿಸಿ ಹೋಗಿವೆ ಕೆಲವು ಬದಲಾವಣೆಯೊಂದಿಗೆ ಮುಂದುವರೆದು ಕೊಂಡು ಬರುತ್ತಿವೆ. ಮೊನ್ನೆ ನಮ್ಮ ಅಜ್ಜಿಯ ತಿಥಿ ಇತ್ತು. ಅಲ್ಲಿ ಯಾವ ಬ್ರಾಹ್ಮಣನೂ ಬಂದು ಪೂಜೆ ಮಾಡಿಲ್ಲ, ನಮ್ಮ ಸಮುದಾಯದವರು ಮತ್ತು ಆ ಊರಿನ ಇತರ ಸಮುದಾಯಗಳವರು ಸೇರಿಕೊಂಡು ಮಾಡುತ್ತಿದ್ದರು, ನನ್ನ ಹಿರಿಯರೊಬ್ನಬರು ನನಗೆ ಮಂಡೆ ಬೋಳಿಸಲು ಹೇಳಿದರು, ಆದರೆ ಆಗಲ್ಲ ಎಂದಾಗ, ಸ್ವಲ್ಪ ಕೂದಲನ್ನು ಕತ್ತರಿಸಿದರು, ಹೀಗೆ ಬದಲಾವಣೆಗೂ ಒಳಪಡುವ ಮತ್ತು ಮುಂದುವರೆದು ಕೊಂಡು ಹೋಗುವ ಗುಣ ನಮ್ಮ ಸಂಪ್ರದಾಯಗಳಿಗಿವೆ.
೬. ಅರ್ಥವಿಲ್ಲದ ಆಚರಣೆಗಳನ್ನು ಮಾಡುವುದರ ಕುರಿತು: ಭಾರತದ ಆಚರಣೆಗಳ ಕುರಿತು ಬಂದಿರುವ ವೈಜ್ಞಾನಿಕ ವಿಶ್ಲೇಷಣೆಗಳನ್ನು ಗಮನಿಸಿ (ಫ್ರಿಟ್ಸ್ ಸ್ಟಾಲ್ ರವರ ಮೀನಿಂಗ್ಲೆಸ್ ನೆಸ್ ಆಫ್ ರಿಚುವಲ್ಸ್, ಬಾಲಗಂಗಾಧರರ ಸ್ಮೃತಿ ವಿಸ್ಮೃತಿ ಭಾರತೀಯ ಸಂಸ್ಕೃತಿಯ ೧೧ ನೇ ಅಧ್ಯಾಯ), ವಿಧಿಆಚರಣೆಗಳಿಗೆ ಅರ್ಥ ಮತ್ತು ಉದ್ದೇಶಗಳಿರುವುದಿಲ್ಲ. ಅದನ್ನು ಬ್ರಾಹ್ಮಣರು ಮಾಡಿದರೂ ಅಷ್ಟೆ, ಉಳಿದ ಯಾವ ಜಾತಿಯವರು ಮಾಡಿದರೂ ಅಷ್ಟೇ, ಆಚರಣೆಗಳ ಗುಣವೇ ಅರ್ಥರಹಿತವಾಗಿರುವುದರಿಂದ ಅದರಲ್ಲಿ ಅರ್ಥ ಹುಡುಕುವವರ ಪ್ರಯತ್ನ ವಿಫಲವಾಗುತ್ತದೆ.
ಮೇಲಿನ ಇಷ್ಟು ಸಂಗತಿಗಳನ್ನು ಗಮನಿಸಿದರೆ, ರಿಲಿಜನ್, ಸೆಕ್ಯುಲರಿಸಂ, ಮತ್ತು ಆಚರಣೆಗಳ ಕರಿತ ತಪ್ಪಾದ ಗ್ರಹಿಕೆಯಿಂದ ಚರ್ಚೆಮಾಡುತ್ತಿರುವುದು ಗೊತ್ತಾಗುತ್ತದೆ.
ಭಾರತದಲ್ಲಿ ತಮ್ಮ ತಮ್ಮ ಆಚರಣೆಗಳನ್ನು, ಧರ್ಮಗಳನ್ನು ಪಾಲಿಸಲು ಎಲ್ಲ ಅವಕಾಶ ನೀಡಲಾಗಿದೆ. ಹೀಗಾಗಿ ನೆಹರೂ ಅವರನ್ನು ದೂಷಿಸುವುದು ಅನಗತ್ಯ. ಭಾರತವು ಧರ್ಮ ನಿರಪೇಕ್ಷ ರಾಷ್ಟ್ರವಾಗಿರುವುದು ಕೆಲವರಿಗೆ ಸಹಿಸಲಸಾಧ್ಯವಾಗಿದೆ. ಹೀಗಾಗಿ ನೆಹರೂ ಹಾಗೂ ಗಾಂಧೀಜಿಯವರನ್ನು ನಿರಂತರ ದೂಷಿಸಲಾಗುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇಲ್ಲದವರ ಮೇಲೆ ತಮ್ಮ ಆಚರಣೆಗಳನ್ನು ಹೇರುವುದು ಒಂದು ರೀತಿಯ ಬಲಾತ್ಕಾರದ ಮತಾಂತರವಲ್ಲವೇ? ಇಂಥ ಹೇರಿಕೆ ಸಾಮಾಜಿಕವಾಗಿ, ಕೌಟುಂಬಿಕವಾಗಿ ನಮ್ಮ ಸಮಾಜದಲ್ಲಿದೆ. ಇದಕ್ಕೆ ಕಾರಣ ಪುರೋಹಿತಶಾಹಿಯೇ ಆಗಿದೆ. ಮೂಲತಃ ಇಂಥ ಆಧಾರವಿಲ್ಲದ ನಂಬಿಕೆಗಳನ್ನು, ಪರಿಕಲ್ಪನೆಗಳನ್ನು ರೂಪಿಸಿರುವುದು ಬ್ರಾಹ್ಮಣ ಪುರೋಹಿತಶಾಹಿಗಳೇ. ಹಾಗಾಗಿ ಪುರೋಹಿತಶಾಹಿ ಎಂದು ಹೇಳದೆ ವಿಧಿಯಿಲ್ಲ.
ಆನಂದ್ ರವರೆ
ನನಗೆ ನಿಮ್ಮ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದಂತೆ ಕೆಲವು ಪ್ರಶ್ನೆಗಳು ಬಂದಿವೆ, ಅವುಗಳಿಗೆ ಉತ್ತರ ನೀಡಲು ಪ್ರಯತ್ನಿಸಿದರೆ ಚರ್ಚೆ ಉತ್ತಮವಾಗಿ ಮುಂದುವರೆಯಹುದು ಎಂಬುದು ನನ್ನ ಆಶಯ.
೧. ಧರ್ಮನಿರಪೇಕ್ಷತೆ ಎಂದರೇನು?
೨. ಲೇಖನದಲ್ಲಿ ಗಾಂಧೀಯನ್ನು ಯಾರು ದೂಷಿಸಿದ್ದಾರೆ? ಮತ್ತು ಲೇಖನದಲ್ಲಿ ಗಾಂಧಿ ಬಗ್ಗೆ ಪ್ರಸ್ತಾಪವಿಲ್ಲದಿದ್ದರೆ ವಿನಾಕಾರಣ ಅನಗತ್ಯ ವಿಚಾಚರಗಳನ್ನು ಏಕೆ ತರುತ್ತಿದ್ದೀರಿ.
೩. ಧಾರ್ಮಿಕ ನಂಬಿಕೆ ಇಲ್ಲದವರಿಗೆ ಆಚರಣೆಗಳನ್ನು ಬಲವಂತವಾಗಿ ಹೇರುತ್ತಿದ್ದಾರೆ ಎಂಬುದು ಅಸ್ಷ್ಟಷ್ಪಟವಾಗಿದೆ, ಅದನ್ನು ಉದಾಹರಣೆ ಸಹಿತ ವಿವರಿಸಲು ಸಾಧ್ಯವೇ ನೋಡಿ, ಆಗ ಹೆಚ್ಚಿನ ಸ್ಪಷ್ಟತೆ ನಮಗೆ ದೊರಕಬಹುದು.
೪. ನಂಬಿಕೆ, ಪರಿಕಲ್ಪನೆಗಳನ್ನು ಬ್ರಾಹ್ಮಣರೇ ರೂಪಿಸಿದ್ದಾರೆ ಎನ್ನುತ್ತಿರಾ? ಆದರೆ ಹಾಗೆಂದರೇನು? ಯಾವ ನಂಬಿಕೆಗಳನ್ನ, ಮತ್ತು ಯಾವ ಪರಿಕಲ್ಪನೆಗಳನ್ನು ಅವರು ಹುಟ್ಟುಹಾಕಿದ್ದಾರೆ? ಹಾಗೆಯೇ ಕೆಲವೇ ಕೆಲವು ಅಲ್ಪಸಂಖ್ಯಾತ ಬ್ರಾಹ್ಮಣರು ಹುಟ್ಟುಹಾಕಿದ್ದನ್ನೇ ಎಲ್ಲರೂ ಕಣ್ಣುಮುಚ್ಚಿ ಹೆಡ್ಡರ ಹಾಗೆ ಒಪ್ಪಿಕೊಂಡಿದ್ದು ಯಾಕೆ?
೩. ಯಾವ್ಯಾವುದೋ ಸಂಗತಿಗಳನ್ನು ತೋರಿಸಿ ಎಲ್ಲದಕ್ಕೂ ಪುರೋಹಿತಶಾಹಿ ಎಂದರೆ ಯಾವ ಉಪಯೋಗವೂ ಇಲ್ಲ, ದಯವಿಟ್ಟು, ಬ್ರಾಹ್ಮಣರಲ್ಲದ ಪುರೋಹಿತರು ಏಕೆ ಪುರೋಹಿತಶಾಹಿಗೆ ಸೇರುವುದಿಲ್ಲ ಎಂದು ತಿಳಿಸಿ.
ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದರೆ ಚರ್ಚೆ ಉತ್ತಮವಾಗಬಹುದು….
೧. ಧರ್ಮ ನಿರಪೇಕ್ಷತೆ ಎಂದರೆ ಪ್ರಭುತ್ವವು ಯಾವುದೇ ಧರ್ಮದ ಪ್ರಭಾವದಿಂದ ಹೊರತಾಗಿರುವುದು. ಧಾರ್ಮಿಕ ಆಚರಣೆಗಳು ಪ್ರಭುತ್ವದ ಮೇಲೆ ಪ್ರಭಾವ ಬೀರದಂತೆ ಸರ್ಕಾರದ ನೀತಿನಿಯಮಗಳನ್ನು ರೂಪಿಸುವುದು.
೨. ಲೇಖನದಲ್ಲಿ ಗಾಂಧೀಜಿಯವರನ್ನು ದೂಷಿಸಿದ್ದಾರೆ ಎಂದು ನಾನು ಹೇಳಿಲ್ಲ. ಅದನ್ನು ಸಾಮಾನ್ಯ ಪ್ರತಿಕ್ರಿಯೆಯಾಗಿ ಹೇಳಿದ್ದೇನೆ ಅಂದರೆ ನೆಹರೂ ಅವರನ್ನು ಟೀಕಿಸುವಾಗ ಗಾಂಧೀಜಿಯವರನ್ನು ಪ್ರತಿಗಾಮಿ ಚಿಂತನೆಯವರು ಟೀಕಿಸುತ್ತಾರೆ. ಉದಾಹರಣೆಗೆ ಎಸ್. ಎಲ್. ಭೈರಪ್ಪ ಮೊದಲಾದವರು ಹಾಗೂ ಸಂಘದ ಪ್ರಭಾವಕ್ಕೆ ಒಳಗಾದವರು. ಚರ್ಚೆ, ಅನಿಸಿಕೆ ವ್ಯಕ್ತಪಡಿಸುವಾಗ ಒಂದು ವಿಷಯದ ಸುತ್ತ ಇರುವ ವಿಷಯಗಳು ಸಹಜವಾಗಿಯೇ ಪ್ರಸ್ತಾಪವಾಗುತ್ತವೆ.
೩. ಧಾರ್ಮಿಕ ಆಚರಣೆಗಳನ್ನು ಹೇರುತ್ತಾರೆ ನಂಬಿಕೆ ಇಲ್ಲದವರ ಮೇಲೆ ಎಂಬುದಕ್ಕೆ ನಾನು ಈಗಾಗಲೇ ಮೇಲೆ ಉದಾಹರಣೆ ಕೊಟ್ಟಿದ್ದೇನೆ. ಇಂಥ ಹಲವು ಆಚರಣೆಗಳನ್ನು ನಂಬಿಕೆ ಇಲ್ಲದವರ ಮೇಲೆ ನಂಬಿಕೆ ಇರುವವರು (ಅಂದರೆ ಕುಟುಂಬದವರು, ಸುತ್ತಮುತ್ತಲಿನ ಸಮಾಜ) ಹೇರುತ್ತಾರೆ. ಇಂಥ ಹೇರಿಕೆಗೆ ಕಾರಣ ಪುರೋಹಿತಶಾಹಿ ಚಿಂತನೆ.
೪. ಆಚರಣೆಗಳನ್ನು, ಕಂದಾಚಾರಗಳನ್ನು ಪುರೋಹಿತರೆ ಹುಟ್ಟು ಹಾಕಿದ್ದು. ಉದಾಹರಣೆಗೆ ದೇವರನ್ನು ಪೂಜಿಸಬೇಕಾದರೆ ಅಥವಾ ದೇವರ ಕೃಪೆಗೆ ಪಾತ್ರರಾಗ ಬೇಕಾದರೆ ಪುರೋಹಿತರ ಮಧ್ಯಸ್ಥಿಕೆ ಬೇಕು, ಅವರ ವಿಧಿ ವಿಧಾನಗಳೇ ಬೇಕು ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿದ್ದು ಪುರೋಹಿತರೆ ಅಲ್ಲವೇ? ನಿಜವಾದ ಆಧ್ಯಾತ್ಮ ಪುರುಷರು ದೇವರ ಆರಾಧನೆಗೆ ಯಾರ ನೆರವೂ ಬೇಡ, ನೇರವಾಗಿ ದೇವರನ್ನು ಶುದ್ಧ ಮನಸ್ಸಿನಿಂದ ಸ್ತುತಿಸಿದರೆ ಸಾಕು ಎಂದೇ ಹೇಳುತ್ತಾ ಬಂದಿದ್ದಾರೆ. ಬ್ರಾಹ್ಮಣರು ಹುಟ್ಟುಹಾಕಿದ್ದನ್ನೆ ಇತರರು ಅನುಸರಿಸುತ್ತಿದ್ದಾರೆ ಏಕೆಂದರೆ ವಿಚಾರ ಶೀಲತೆಯ ಕೊರತೆ ಅವರನ್ನು ಆವರಿಸಿದೆ. ಆದರೆ ಇದರ ವಿರುದ್ಧ ಜಾಗೃತಿ ಮೂಡಿಸಿದ ಮಹಾಪುರುಷರೂ ಇದ್ದಾರೆ, ಉದಾಹರಣೆಗೆ ಬಸವಣ್ಣ, ಬುದ್ಧ ಇತ್ಯಾದಿ.
೫. ಬ್ರಾಹ್ಮಣರಲ್ಲದ ಪುರೋಹಿತರನ್ನು ಪುರೋಹಿತಶಾಹಿ ಎಂದು ಕರೆದರೆ ತಪ್ಪಿಲ್ಲ. ಆದರೆ ದೇಶಾದ್ಯಂತ ಬ್ರಾಹ್ಮಣ ಪುರೋಹಿತರದ್ದೆ ಪ್ರಭಾವ ಹೆಚ್ಚು. ಏಕೆಂದರೆ ಬ್ರಾಹ್ಮಣರು ಅಲ್ಪಸಂಖ್ಯಾತರಾದರೂ ಇಡೀ ದೇಶದಲ್ಲಿ ಹರಡಿದ್ದಾರೆ. ಹೀಗಾಗಿ ಎಲ್ಲೆಡೆ ಅವರ ಪ್ರಭಾವ ಇದೆ. ಪ್ರತಿಗಾಮಿ ಚಿಂತನೆಗಳನ್ನು ಕಾಪಾಡಿಕೊಂಡು ಬರುವುದರಲ್ಲಿ ಅವರದೇ ಪ್ರಧಾನ ಪಾತ್ರ. ಹೀಗಾಗಿಯೇ ಸಹಜವಾಗಿಯೇ ಪುರೋಹಿತಶಾಹಿ ಎಂಬ ಪದ ಬಳಸಬೇಕಾಗಿದೆ. ಬ್ರಾಹ್ಮಣರು ಆಡಳಿತದ ಎಲ್ಲ ಹಂತದಲ್ಲೂ ಆಯಕಟ್ಟಿನ ಸ್ಥಾನದಲ್ಲಿ ಇದ್ದಾರೆ.
೧. ಧಾರ್ಮಿಕ ನೀತಿನಿಯಮಗಳು ಪ್ರಭುತ್ವದ ಮೇಲೆ ಪ್ರಭಾವ ಬೀರದಿರುವುದು ಎಂದಾದರೆ, ಯಾವುದೇ ಆಚರಣೆ ಮತ್ತು ಸಂಪ್ರದಾಯವನ್ನು ಹತ್ತಿಕ್ಕುವ ಅಧಿಕಾರ ಪ್ರಭುತ್ವಕ್ಕಿರುವುದಿಲ್ಲ. ಆದರೂ ನೀವು ಹೇಳಿದಂತೆ ಹಿಂದುತ್ವವನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಎಂದಾದರೆ ಅದು ನಿಜವಾದ ಅರ್ಥದಲ್ಲಿ ಧರ್ಮನಿರಪೇಕ್ಷವಾಗಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಇದು ಯಾವುದೋ ಒಂದು ಪಕ್ಷದ ನಿಲುವಿನ ಆಧಾರದ ಮೇಲೆ ನಿಲ್ಲುವುದಿಲ್ಲ. ಏಕೆಂದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನದ ಮೂಲ ರಚನೆಯನ್ನು ತಿದ್ದುಪಡಿ ಮಾಡುವ ಹಾಗೆಯೂ ಇಲ್ಲ ಹಾಗೂ ಬದಲಾವಣೆ ಮಾಡುವ ಹಾಗೂ ಇಲ್ಲ. ಇದನ್ನು ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಅಂದ ಮೇಲೆ ಪ್ರಭುತ್ವದ ಚುಕ್ಕಾಣಿ ಹಿಡಿಯುವ ಯಾವುದೇ ರಾಜಕೀಯ ಪಕ್ಷವಾಗಲಿ ಧರ್ಮನಿರಪೇಕ್ಷವಾದ ಆಡಳಿತವನ್ನು ನಡೆಸಬೇಕು. ಆದರೆ ಇಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದರೆ ಐಡಿಯಾಲಜಿಯ ಹೆಸರಿನಲ್ಲಿ ಹೊಸ ಹೊಸ ಕಾನೂನು ಗಳನ್ನು ಜಾರಿಗೆ ತಂದು ಜನರ ಆಚಾರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಹಾಗೆಯೇ ಬಿ.ಜೆಪಿ ಅಧಿಕಾರಕ್ಕೆ ಬಂದರೂ ಅದೇ ಕೆಲಸವನ್ನು ಮಾಡುತ್ತದೆ. ಒಟ್ಟಿನಲ್ಲಿ ನೀವು ಯಾವುದನ್ನು ಧರ್ಮನಿರಪೇಕ್ಷ ಎಂದು ಹೇಳುತ್ತಿದ್ದಿರೋ ಅದನ್ನು ಪಾಲಿಸಲು ಯಾವ ಪಕ್ಷಗಳಿಂದಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ರಜಕೀಯ ಪಕ್ಷಗಳ ರಾಜಕೀಯ ಹಣಾಹಣಿಯಾಗಲೀ ಅಥವಾ ದೌರ್ಬಲ್ಯವೆಂದಾಗಲಿ ನೋಡುವುದಕ್ಕಿಂದ ಆ ಪರಿಕಲ್ಪನೆಯಲ್ಲಿ ಇರುವ ದೋಷವನ್ನು ನೋಡುವ ಅಗತ್ಯವಿದೆ. ಸೆಕ್ಯುಲರಿಸಂ ಎಂಬುದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅವರ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಕಂಡು ಕೊಂಡ ವಿಚಾರವಾಗಿದೆ. ಆದರೆ ಅದನ್ನು ಭಾರತಕ್ಕೆ ತಂದು ಅಳವಡಿಸುವಾಗ, ನಮ್ಮಲ್ಲಿಯೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ಸಮಸ್ಯೆಗಳಿವೆಯೇ ಎಂಬುದನ್ನು ಪರೀಕ್ಷೆ ಮಾಡದೆ, ಪಾಶ್ಚಾತ್ಯರದ್ದೆ ಮೌಲ್ಯಯುತವಾದುದು ಎಂವಬ ಕುರುಡು ನಂಬಿಕೆಯಿಂದ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಸೆಕ್ಯುಲರಿಸಂ ಎಂಬುದು ಭಾರತದ ಮೂಲ ಕಲ್ಪನೆಯಲ್ಲ, ಮತ್ತು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗುತ್ತಿದೆ.
೨. ನೋಡಿ ಪುರೋಹಿತ ಶಾಹಿ ಕಾರಣ ಎಂದು ಕೇವಲ ವ್ಯಾಖ್ಯೆಗಳನ್ನು ೧೦೦ ಸಾರಿ ನೀಡಿದರೂ ಉಪಯೋಗವಿಲ್ಲ. ಬದಲಿಗೆ ಸಾಕ್ಷ್ಯಗಳನ್ನು ನೀಡುವ ಮೂಲಕ ನಿಮ್ಮ ವಾದವನ್ನು ಗಟ್ಟಿಗೊಳಿಸಿ. ನೀವು ಸಾಕ್ಷ್ಯ ನೀಡದೆ ಸುಮ್ಮನೆ ಕತೆ ಹೇಳಿದರೆ, ಸುಲಭವಾಗಿ ನಾನೂ ಸಹ ಅವೆಲ್ಲವೂ ಪುರೋಹಿತಶಾಹಿ ಕಾರಣವಲ್ಲ ಎಂಬ ವಿರುದ್ದವಾದ ಹೇಳಿಕೆಯೊಂದನ್ನು ನೀಡಬಹುದು.
೩. ಪುರೋಹಿತರು ಮಧ್ಯವಸ್ಥಿಕೆ ವಹಿಸಬೇಕು, ನಂತಹ ಕ್ರಾಂತಿಯಿಂದಾಗಿ ಅವರ ಮಧ್ಯಸ್ಥಿಕೆಯನ್ನು ತೆಗೆದು ಹಾಕಬೇಕು ಎಂಬುದು ಭಾರತಲದಲ್ಲಿ ಬೆಳೆದು ಬಂದ ವಿಚಾರವಲ್ಲ. ೧೭ ನೇ ಶತಮಾನದಲ್ಲಿ ಕ್ರಿಶ್ಚಿಯಾನಿಟಿಯ ಒಳಗೆ ಕ್ಯಾಥೋಲಿಕ್ ಮತ್ತು ಪ್ರಾಟಸ್ಟಂಟ್ ಪಂಥಗಳೊಳಗೆ ನಡೆದ ವಾಗ್ವಾದ. ಈ ಹಿನ್ನೆಲೆಯಿಂದ ಬಂದ ಪಾಶ್ಚಾತ್ಯರು ಭಾರತವನ್ನು ನೀವು ಹೇಳುವ ರೀತಿಯಲ್ಲೇ ತಪ್ಪಾಗಿ ವಿವರಿಸಿದರು, ಅದನ್ನೇ ಸತ್ಯ ಎಂದು ನಾವು ಗಟ್ಟಿಯಾಗಿ ನಂಬಿ ಕೂತಿದ್ದೇವೆ. ನಮ್ಮಲ್ಲಿರುವ ಯಾವ ತತ್ವವೂ ವಿಚಾರವೂ ಪುರೋಹಿತರ ಮಧ್ಯಸ್ಥಿಕೆ ಬೇಕು ಎಂದು ಹೇಳುವುದಿಲ್ಲ. ಇದ್ದರೆ ನಿದರ್ಶಿಸಿ. ನಮ್ಮ ಸಮಾಜದಲ್ಲಿ ಹಲವಾರು ಕೆಲಸಗಳನ್ನು ಹಲವಾರು ಸಮುದಾಯಗಳು ಮಾಡುತ್ತವೆ. ಕಮ್ಮಾರನ ಕೆಲಸ ಎಲ್ಲರಿಗೂ ತಿಳಿದಿರದ ಕಾರಣ ಅವರನ್ನು ನಾವು ಆಶ್ರಯಿಸಬೇಕಾಗುತ್ತದೆ. ಹಾಗೆಯೇ ಮನೆ ಕಟ್ಟುವ ಕೆಲಸ ನಮಗೆಲ್ಲರಿಗೂ ಬರದ ಕಾರಣ ಇಂಜಿನಿಯರ‍್, ಮತ್ತು ಮೇಸ್ತ್ರಿಗಳನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳುತ್ತೇವೆ. ಹೀಗಿರುವ ಪ್ರಕ್ರಿಯೆಯಲ್ಲಿ ಕಮ್ಮಾರನ್ನನ್ನಾಗಲಿ, ಗಾರೆಯ ಮೇಸ್ತ್ರಿಯನ್ನಾಗಲಿ ಮಧ್ಯಸ್ಥಿಕೆ ದಾರರು ಎಂದು ಹೇಳುವುದಿಲ್ಲ, ಹಾಗೆ ಹೇಳಿದರೆ ಅದು ಅಸಹಜವಾಗಿ ಕಾಣುತ್ತದೆ. ಅಂತೆಯೇ ಕೆಲವು ಸಮುದಾಯಗಳು ಪೂಜೆ ಪುನಸ್ಕಾರ ಮಾಡುವುದನ್ನು ಕಲಿತಿವೆ. ನಮಗೆ ಅಗತ್ಯವಿದ್ದಾಗ, ಅವರನ್ನು ಕರೆಯಿಸಿಕೊಂಡು ಪೂಜೆ ಮಾಡಿಸಿಕೊಳ್ಳುತ್ತೇವೆ. ಕಮ್ಮಾರನ ಕೆಲಸದ ಹಾಗೆ ಪೂಜೆಯು ಮತ್ತೊಂದು ಕೆಲಸ. ನಮಗೆ ಬಾರದ ಕೆಲಸವನ್ನು ಮಾಡಿಸಿಕೊಳ್ಳಲು ಮತ್ತೊಬ್ಬರ ಮೇಲೆ ಅವಲಂಬಿತರಾಗುತ್ತೇವೆ. ಆದರೆ ಇವೆಲ್ಲವನ್ನೂ ನಗಣ್ಯ ಮಾಡಿ ಪಾಶ್ಚಾತ್ಯರು ಹೇಳಿದ್ದ ಮಾತ್ರಕ್ಕೆ ಅವರ ಚಿಂತನೆಗಳನ್ನು ಪರೀಕ್ಷೆ ಮಾಡದೆ ಒಪ್ಪಿಕೊಳ್ಳುವುದು ಅಸಮಂಜಸವಾಗುತ್ತದೆ. ಹಾಗೆಯೇ ಎಲ್ಲವನ್ನೂ ಪುರೋಹಿತರೇ ಹುಟ್ಟುಹಾಕಿದ್ದು ಎಂಬುದಕ್ಕೂ ಯಾವ ಸಾಕ್ಷ್ಯವೂ ಇಲ್ಲ. ಸುಮ್ಮನೆ ಕತೆ ಹೇಳುತ್ತೇವೆ ಅಷ್ಟೆ, ಮತ್ತೊಬ್ಬರ ತಲೆಯ ಮೇಲೆ ಗೂಬೆ ಕೂರಿಸಲು.
ನಿಮ್ಮ ಕೊನೆಯ ಅಂಶ ಮತ್ತೊಂದು ಬಾರಿ ಸುಮ್ಮನೆ ಪುನರಾವರ್ತನೆಯಾಗಿದೆ. ಸಾಧ್ಯವಾದರೆ ಉತ್ತಮವಾದ ವಾದ ಮತ್ತು ಪುರಾವೆಗಳೊಂದಿಗೆ ಚರ್ಚಿಸಿ. ಚರ್ಚೆಯನ್ನು ಮುಂದುವರೆಸೋಣ
ನಿಮ್ಮ ಆಸಕ್ತಿ ಮತ್ತು ಸಹನೆಗೆ ಧನ್ಯವಾದ
ನಾನು ವೈಜ್ಞಾನಿಕ ಮನೋಭಾವದಲ್ಲಿ ನಂಬಿಕೆ ಇಟ್ಟವನು. ಹೀಗಾಗಿ ನಿಮ್ಮ ದೃಷ್ಟಿಕೋನ ಹಾಗೂ ನನ್ನ ದೃಷ್ಟಿಕೋನದಲ್ಲಿ ಭಾರಿ ಅಂತರ ಇದೆ. ಹೀಗಾಗಿ ವಾದ ಮಾಡುವುದರಿಂದ ಪ್ರಯೋಜನ ಇರುವಂತೆ ಕಾಣುವುದಿಲ್ಲ. ನಾನು ನಿಮ್ಮ ವಾದವನ್ನು ವಿರೋಧಿಸಬಹುದು, ನೀವು ನನ್ನ ವಾದವನ್ನು ವಿರೋಧಿಸುವುದು ಹೀಗೆ ಆಗುತ್ತ ಇರುವುದರಿಂದ ಈ ಚರ್ಚೆಯಿಂದ ನಾನು ಹಿಂದೆಗೆದುಕೊಂಡಿದ್ದೇನೆ. ನನ್ನ ದೃಷ್ಟಿಕೋನ ಬೇರೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಾನು ಸಹ ವೈಜ್ಞಾನಿಕವಾಗಿಯೇ ಚರ್ಚೆಯನ್ನು ಮಾಡುತ್ತಿದ್ದೇನೆ. ಅದಕ್ಕಾಗಿ ವಾದಗಳನ್ನು ಹಾಗೂ ಸಾಕ್ಷ್ಯಗಳನ್ನು ನೀಡುತ್ತಿದ್ದೇವೆ. ದೃಷ್ಟಿಕೋನ ಯಾವುದಾದರೂ ಆಗಿರಲಿ, ಎಲ್ಲರಿಗೂ ಒಂದೆ ತೆರನಾದ ದೃಷ್ಟಿಕೋನವಿರಬೇಕೆಂದು ನಾನೂ ಸಹ ಭಾವಿಸುವುದಿಲ್ಲ, ಅದು ಸಾಧ್ಯವೂ ಇಲ್ಲ. ಆದ್ದರಿಂದ ವೈಜ್ಞಾನಿಕ ವಿಧಾನದಲ್ಲಿ ಚರ್ಚಿಸುವಾಗ ನಿಮ್ಮ ವಾದವನ್ನು ನೀವು ಮಂಡಿಸಬಹುದು, ನನ್ನ ವಾದವನ್ನು ನಾನು ಮಂಡಿಸಬಹುದು. ವಾದವು ಹೆಚ್ಚು ಮಾಡಿದಂತೆಲ್ಚೆಲಾ ತಿಳುವಳಿಕೆಯೂ ಹೆಚ್ನ್ನಾಗುತ್ತದೆ ಎಂಬುದು ನನ್ನ ನಂಬಿಕೆ. ವಾದ ಪ್ರತಿವಾದ ಇದ್ದರೇನೆ ವೈಜ್ಞಾನಿಕ ಮನೋಭಾವ ಬೆಳೆಯಲು ಸಾಧ್ಯ. ನೀವು ಹೇಳಿದ ವಿಷಯಗಳಿಗೆ ಸುಮ್ಮನೆ ನಾನು ವಿರೋಧವಾದ ವ್ಯಾಖ್ಯೆಗಳನ್ನು ನೀಡಿಲ್ಲ, ಬದಲಿಗೆ ವಾದದ ರೂಪದಲ್ಲಿ ಇಟ್ಟಿದ್ದೇನೆ. ಚರ್ಚೆ ಮುಂದುವರೆಯಬೇಕಾದರೆ ನಮ್ಮ ವೈಯುಕ್ತಿಕ ನಿಲುವುಗಳನ್ನು ಬದಿಗಿಟ್ಟು ವಸ್ತುನಿಷ್ಠವಾಗಿ ಚರ್ಚಿಸಬೇಕಾಗುತ್ತದೆ.
@Santhosh Kumar PK, CSLC , ಮೇಲೆ ವಾದಿಸಿದ ಕ್ರಿಷ್ಣಪ್ಪರಾಗಲಿ,ಅನಂದರಾಗಲಿ ತಪ್ಪಾದ ಗ್ರಹಿಕೆಯಿಂದ ಅದನ್ನು ಹೇಳಿಲ್ಲ ನೆನಪಿರಲಿ ,ಅವರು ಅದನ್ನು ಪ್ರಯತ್ನಪೂರ್ವಕವಾಗಿ , ಒಂದು ಸ್ಪಷ್ಟ HIDDEN
AGENDA ಇಟ್ಟುಕೊಂಡು ಸಮಾಜದ ಸ್ವಾಸ್ತ್ಯ ಕೆಡಿಸಲು ಹೇಳಿದ್ದಾರೆಯೇ ಹೊರತು,ತಪ್ಪಾದ ಗ್ರಹಿಕೆಯಿಂದಂತೂ ಖಂಡಿತಾ ಅಲ್ಲ ! ನಿದ್ರಿಸಿದವರನ್ನು ಎಬ್ಬಿಸಬಹುದು ಆದರೆ ನಿದ್ರಿಸಿದಂತೆ ನಟಿಸುವವರನ್ನು ಎಬ್ಬಿಸಲಾಗದು! ಬಿಟ್ಟುಬಿಡಿ ಅವರನ್ನು ಅವರ ಗ್ರಹಿಕೆಯನ್ನು ಸರಿಮಾಡಲು ಹೊರತು ನೀವ್ಯಾಕೆ ಮೂರ್ಖರಾಗಬೇಕ್ ಅಲ್ವೇ?
ಸಮಾಜದ ಸ್ವಾಸ್ಥ್ಯ ಕೆಡಿಸುವಂಥ ಯಾವ ವಿಚಾರಗಳು ನನ್ನ ಅನಿಸಿಕೆಗಳಲ್ಲಿ ಇದೆ ಎಂದು ತಿಳಿಸಿದರೆ ಒಳ್ಳೆಯದು. ವಿಚಾರಶೀಲ ವ್ಯಕ್ತಿಗಳನ್ನು ಭಾರತದಲ್ಲಿ ಯಾವಾಗಲೂ ನಿಂದನೆ ಮಾಡಿ ಉಸಿರೆತ್ತದಂತೆ ಮಾಡಲು ಪ್ರಯತ್ನಿಸಲಾಗುತ್ತದೆ. ಅದಕ್ಕೆ ನಿಮ್ಮ ಅನಿಸಿಕೆ ಒಂದು ಉದಾಹರಣೆಯಷ್ಟೇ. ಯಾವಾಗ ವೈಚಾರಿಕವಾಗಿ ವ್ಯಕ್ತಿಗಳು ದಿವಾಳಿಯಾಗುತ್ತಾರೋ, ಸಮರ್ಥ ಪ್ರತಿವಾದ ಮಾಡಲು ವಿಫಲರಾಗುತ್ತರೋ ಆಗ ನಿಮ್ಮ ಹೇಳಿಕೆಯಂತೆ ಪ್ರತಿಕ್ರಿಯಿಸುತ್ತಾರೆ ಅಥವಾ ದೈಹಿಕವಾಗಿ ದಾಳಿ ಮಾಡುತ್ತಾರೆ
ವಿಶೇಷ ಅನ್ನಿಸಿತು ! ವೈಜ್ಞಾನಿಕ ಚಿಂತಕರು ಅಂದರೆ , ಹಿಂದೂ ಧರ್ಮದ ಅವಹೇಳನ ಮಾಡುವವರೋ? ಅಥವಾ ಪುರೋಹಿತಶಾಹಿ ಮೊದಲಾದ ಶಾಹಿ ಗಳನ್ನೂ ಹುಟ್ಟು ಹಾಕುವವರೋ? ಸ್ಪಷ್ಟಪಡಿಸಿ !
ಇನ್ನು ವಿಚಾರಶೀಲ ವ್ಯಕ್ತಿಗಳೆಂದರೆ ಯಾರು? ಬುದ್ದಿಜೀವಿಗಳೇ?
ನನ್ನ ಪ್ರಕಾರ ವೈಜ್ಞಾನಿಕ ಚಿಂತಕರು ಮತ್ತು ವಿಚಾರಶೀಲರು ಯಾವುದೇ ಒಂದು ಧರ್ಮ ವ್ಯಕ್ತಿ ಮತ್ತು ಧರ್ಮದ ಬಗ್ಗೆ ಮಾತ್ರ ಟೀಕಿಸಬಾರದು. ತಪ್ಪು ಇರುವಲ್ಲೆಲ್ಲ ತಿಳಿಹೇಳಿ ಸರಿಮಾಡಲು ಪ್ರಯತ್ನಿಸಬೇಕು, ಅದು ಬಿಟ್ಟು ಒಂದು ಕಡೆ ಮಾತ್ರ ಟೀಕಿಸುವವರನ್ನು ” ವೈಜ್ಞಾನಿಕ ಚಿಂತಕರು ಮತ್ತು ವಿಚಾರಶೀಲರು” ಎನ್ನಲಾದೀತೇ? ಅಸಹ್ಯಕರ ಪ್ರವೃತ್ತಿ !