ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ
– ಪ್ರಸಾದ್.ಡಿ.ವಿ
ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. “ಆತ(?)” ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.
ನನ್ನ ಕ್ಯಾಂಟೀನ್ ಪುರಾಣದಲ್ಲಿ “ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ” ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು ‘ನಮ್ಮ ಪ್ರೀತಿಯಾಗಿ’ ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.