ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ
-ಹರಿಹರಪುರಶ್ರೀಧರ್
ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ “ವಿಶ್ವಗುರುವಿನ” ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ “ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ” ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ ” ಸರ್ವೇ ಭವಂತು ಸುಖಿನ:…….ಮಾ ಕಶ್ಚಿತ್ ದು:ಖ ಭಾಗ್ಭವೇತ್”-ಎಲ್ಲರೂ ಸುಖವಾಗಿರಬೇಕು…….., ಯಾರಿಗೂ ದು:ಖ ಬರುವುದು ಬೇಡ”. ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು ” ಇದೇನೋ ನೀನು “ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!” ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ” ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.