ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!
-ಬಿ.ಆರ್. ಸತ್ಯನಾರಾಯಣ್
“ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!”
ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.
ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಮತ್ತಷ್ಟು ಓದು