ಭಗವಾನ್ ರಮಣ ಮಹರ್ಷಿಗಳ ಸಂದೇಶ – 2
–ಪ್ರಕಾಶ್ ನರಸಿಂಹಯ್ಯ
ತನ್ನ ತಾನು ಅರಿಯಲು ಬ್ರಹ್ಮಜ್ಞಾನ ಪ್ರಾಪ್ತಿಯಾಗಬೇಕೆ?. ಈ ಬ್ರಹ್ಮಜ್ಞಾನ ಪಡೆಯಲು ಸಾಮಾನ್ಯರಿಗೆ ಸಾಧ್ಯವೇ? ಈ ಪ್ರಶ್ನೆಯನ್ನು ಭಗವಾನ್ ರಮಣ ಮಹರ್ಷಿಗಳಲ್ಲಿ ಒಬ್ಬ ವಿದೇಶಿ ಭಕ್ತ ನಿವೇದಿಸಿಕೊಂಡ.
ಆಗ ಮಹಷಿಗಳು ಕೊಟ್ಟ ಸ್ಪಷ್ಟ ಉತ್ತರ ಏನೆಂದರೆ “ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ; ಬ್ರಹ್ಮಜ್ಞಾನ ಪಡೆಯುವುದರಿಂದ ಸಂತೋಷ ವಾಗಿರಬಹುದೆಂದು ಆಶಿಸಿದರೆ ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ ಹೇಗಿದೆಯೆಂದರೆ ಹತ್ತು ಜನ ಧಡ್ಡರು ನದಿದಾಟಿದಂತಿದೆ.” ಎಂದು ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು. ” ಹತ್ತು ಜನ ಧಡ್ಡರು ನದಿ ದಾಟಲು ಸಿದ್ದರಾದರು. ಎಲ್ಲರೂ ಈಜಿ ದಡವನ್ನು ಸೇರಿದರು. ದಡ ಸೇರಿದ ನಂತರ ಎಲ್ಲರೂ ಬಂದು ತಲುಪಿರವರೆ, ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ತಂಡದ ನಾಯಕನು ಎಲ್ಲರ ತಲೆಯನ್ನು ಎಣಿಸಿದ. ಒಂಬತ್ತು ಜನ ಮಾತ್ರ ಲೆಕ್ಕಕ್ಕೆ ಸಿಕ್ಕಿದರು. ಪುನಃ ಎಣಿಸಿದ, ಆಗಲು ಅಷ್ಟೇ! ಮತ್ತೊಬ್ಬನನ್ನು ಕರೆದು ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಣಿಸಲು ಹೇಳಿದ. ಆಗಲೂ ಒಂಬತ್ತು ಜನರೇ! ನಾಯಕನಿಗೆ ಗಾಭರಿ ಆಯ್ತು. ಏನೂ ತೋಚದೆ ಎಲ್ಲರು ಅಳಲು ಪ್ರಾರಂಭಿಸಿದರು. ಇವರ ಅಳುವನ್ನು ಕೇಳಿ ದಾರಿಯಲ್ಲಿ ಬರುತ್ತಿದ್ದ ದಾರಿಹೋಕ ಏನೆಂದು ವಿಚಾರಿಸಿದ. ನಾಯಕ ಎಲ್ಲವನ್ನು ವಿಸ್ತಾರವಾಗಿ ವಿವರಿಸಿದ. ದಾರಿಹೋಕ ಸುಮ್ಮನೆ ಎಣಿಸಿನೋಡುವಾಗ ಸರಿಯಾಗಿ ಹತ್ತು ಜನರಿದ್ದರು. ಆಗ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಲ್ಲರ ಬೆನ್ನು ಮೇಲೆ ಒಂದೊಂದು ಪೆಟ್ಟು ಕೊಡುತ್ತ ಎಣಿಸಿದ. ಎಲ್ಲರು ಸೇರಿ ಹತ್ತು ಜನರಾದರೆಂದು ತಿಳಿದಮೇಲೆ ಸಂತೋಷಗೊಂಡ ದಡ್ಡರು ದಾರಿಹೋಕನನ್ನು ಕೊಂಡಾಡಿದರು. ಹತ್ತೂ ಜನರು ತಮ್ಮ ಪ್ರಯಾಣವನ್ನು ಮುದುವರೆಸಿದರು.” ಕಥೆಯನ್ನು ಮುಗಿಸಿ ಒಂದು ಕ್ಷಣ ಸುಮ್ಮನಾದರು.