ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು (ವ್ಯಾಲ್ಯೂಸ್) ಕಲಿಸುವುದು ಹೇಗೆ?
-ರಾವ್ ಎವಿಜಿ
ಮೌಲ್ಯಗಳು ಎಂದರೇನು ಎಂಬ ಪ್ರಶ್ನೆಗೆ ‘ನಿರ್ದಿಷ್ಟ ವಸ್ತು, ಕ್ರಿಯೆ ಮತ್ತು ಸನ್ನಿವೇಶಗಳಿಗೆ ವ್ಯಕ್ತಿಗಳು ನೀಡುವ ಬೆಲೆಗೆ ಸಂಬಂಧಿಸಿದ ಅದ್ವಿತೀಯ ಶಾಬ್ದಿಕ ಪರಿಕಲ್ಪನೆಗಳು’ ಎಂಬ ಸೈದ್ಧಾಂತಿಕ ಉತ್ತರ ನೀಡಬಹುದಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸರ್ವಸಮ್ಮತ ಉತ್ತರ ನೀಡುವುದು ಕಷ್ಟ. ಕೆಲವು ವಿಶೇಷಜ್ಞರು ವ್ಯಕ್ತಿಯ ಮನೋಧರ್ಮಗಳ (ಆಟಿಟ್ಯೂಡ್) ಸಂಘಟನೆಯನ್ನು ಮೌಲ್ಯ ಎಂದು ಉಲ್ಲೇಖಿಸುವುದೂ ಉಂಟು. ಅದೇನೇ ಇರಲಿ ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು, ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಬಹುತೇಕ ಸನ್ನಿವೇಶಗಳಲ್ಲಿ ನಾವು ಕೈಗೊಳ್ಳುವ ಮೌಲ್ಯಾಧಾರಿತ ತೀರ್ಮಾನಗಳು ವ್ಯಕ್ತಿನಿಷ್ಠವೂ ಸಾಪೇಕ್ಷವೂ ಆಗಿರುತ್ತವೆ. (ಅ) ನಿರ್ದಿಷ್ಟ ಅಂಶಕ್ಕೆ ನಾವು ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಸೂಚಿಸುವ ಪರಿಮಾಣಾತ್ಮಕ ಆಯಾಮ, (ಆ) ನಿರ್ದಿಷ್ಟ ಮೌಲ್ಯಕ್ಕೆ ನಾವು ಎಷ್ಟು ಬದ್ಧರಾಗಿರುತ್ತೇವೆ ಎಂಬುದನ್ನು ಸೂಚಿಸುವ ಗುಣಾತ್ಮಕ ಆಯಾಮ ಮತ್ತು (ಇ) ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳ ನಡುವಿನ ಸಂಬಂಧವನ್ನು ಸೂಚಿಸುವ ಅಂತರ್- ಸಂಬಂಧ ಆಯಾಮ – ಈ ಮೂರು ಆಯಾಮಗಳು ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳಿಗೆ ಇರುತ್ತವೆ.