‘ಚಿತ್ತಗಾಂಗ್’ನಲ್ಲಿ ಸ್ವಾತಂತ್ರ್ಯ’ಸೂರ್ಯ’ನ ಉದಯ…!
– ಭೀಮಸೇನ್ ಪುರೋಹಿತ್
‘ಚಿತ್ತಗಾಂಗ್’ ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ ‘ಬಾಂಗ್ಲಾದೇಶ’ದಲ್ಲಿದೆ..
ಅವನ ಹೆಸರು ‘ಸೂರ್ಯಸೇನ್’. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ ‘ಮಾಸ್ಟರ್ ದಾ’.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ…ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ ‘ಅನುಶೀಲನ ಸಮಿತಿ’ ಮತ್ತು ‘ಜುಗಾಂತರ’ ದಿಂದ ಪ್ರಭಾವಿತನಾಗಿದ್ದ..
ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..