ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2012

2

ಗುಡ್ಡದ ಭೂತ: ಪ್ರಯೋಗಶೀಲತೆಯೋ? ಅನಿವಾರ್ಯತೆಯೋ?

‍ನಿಲುಮೆ ಮೂಲಕ

-ಕಾಲಂ ೯

ಜನಶ್ರೀ ಸುದ್ದಿವಾಹಿನಿ 90ರ ದಶಕದ ದೂರದರ್ಶನದ ಜನಪ್ರಿಯ ಧಾರಾವಾಹಿಯ ಮರುಪ್ರಸಾರ ಆರಂಭಿಸಿದೆ. ತಾಂತ್ರಿಕತೆ, ಅಭಿನಯ, ನಿರೂಪಣೆಯ ದೃಷ್ತಿಯಿಂದ ಅಸಾಧಾರಣವೆನಿಸಿದ ಧಾರಾವಾಹಿಗೆ ಮತ್ತೆ ಮನ್ನಣೆ ಸಿಕ್ಕಿದ್ದು ಸ್ವಾಗತಾರ್ಹವೇ. ಈಗ ೪೦ರ ಗಡಿಯಲ್ಲಿರುವ ಧಾರಾವಾಹಿ ನಿರ್ದೇಶಕ ಸದಾನಂದ ಸುವರ್ಣರಿಗೆ ಮತ್ತವರ ತಂಡಕ್ಕೆ ಈ ಮನ್ನಣೆ ಖುಷಿ ತಂದಿರಬೇಕು.

ಆದರೆ ಸುದ್ದಿ ವಾಹಿನಿಯೊಂದು ಧಾರಾವಾಹಿಯ ಪ್ರಸಾರಾಕ್ಕೆ ಅದೂ ಮರು ಪ್ರಸಾರಕ್ಕೆ ಹೊರಟಿರುವುದು ಪ್ರಯೋಗಶೀಲತೆಯೇ ಅಥವಾ ಅದರಾಚೆಯ ಅನಿವಾರ್ಯತೆಗಳೂ ಕೆಲಸ ಮಾಡುತ್ತಿದೆಯೇ?

‘ಸುದ್ದಿ’ಯ ಸೋಂಕಿಲ್ಲದ ಜ್ಯೋತಿಷ್ಯ, ಸೆಕ್ಸು, ಕ್ರೈಮು, ಸಿನೆಮಾ, ಕ್ರಿಕೆಟ್ಟು, ಹಾಸ್ಯಗಳ ‘ಶೋ’ಗೆ ಹತ್ತಿರ ಹತ್ತಿರ ಶೇ 50ರಷ್ಟು ಸಮಯ ವಿನಿಯೋಗಿಸುವ ಸುದ್ದಿ ವಾಹಿನಿಗಳೇ  ನಮಗಿಂದು ಕಾಣುತ್ತಿವೆ. ಟಿವಿ9 ಹಾಕಿಕೊಟ್ಟ ಮಾದರಿಯಿಂದ ಹೊರ ಬರಲಾಗದ  ಎಲ್ಲ ವಾಹಿನಿಗಳು ಅದೇ ಚರ್ವಿತಗಳಲ್ಲೇ ಸುತ್ತುತ್ತಿವೆ.

ಕರ್ನಾಟಕದಂತಹ ಸೀಮಿತ ಪರಿಧಿಯಲ್ಲಿ ದಿನವಿಡೀ ವಿದ್ಯಮಾನಗಳು ಘಟಿಸುತ್ತಲೇ ಇರಬೇಕೆಂಬುದು ಅಸಾಧ್ಯದ ಮಾತು. ಈ ಕೊರತೆ ದೇಶ ವ್ಯಾಪ್ತಿಯ ರಾಷ್ಟ್ರೀಯ ಚಾನೆಲ್‍ಗಳನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ನಮ್ಮ ಸುದ್ದಿವಾಹಿನಿಗಳಿಗೆ ದಿನವಿಡೀ ಉಣಬಡಿಸಲು ಸುದ್ದಿ ಖಾದ್ಯಗಳಾದರೂ ಏನು ಉಳಿದಿರುತ್ತದೆ? ಈ ಅನಿವಾರ್ಯತೆಯ ಹೊಸ ಫಸಲೆಂಬಂತೆ ಗುಡ್ಡದ ಭೂತ ಮತ್ತೆ ಅವತರಿಸಿದೆ.

ಧಾರಾವಾಹಿ ರಂಗದ ಸಾಮ್ರಾಟರೆಂದೇ ಖ್ಯಾತರಾಗಿರುವ ಟಿಎನ್ ಸೀತಾರಾಂ ಬಿಜೆಪಿ ಸರ್ಕಾರದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಈ ಬಿಜೆಪಿ ಸರ್ಕಾರ ಬಂದ ಮೇಲೆ ನಮ್ಮ ಸೀರಿಯಲ್ ನೋಡೋರೇ ಇಲ್ಲದಂತಾಗಿದೆ. ಜನ ನ್ಯೂಸನ್ನೇ ಸೀರಿಯಲ್ ಅಂತ ಅಂದುಕೊಂಡಿದ್ದಾರೆ.’ ಅಂತ ಹೇಳಿಕೊಂಡಿದ್ದರು.

ಬಿಜೆಪಿ ಸರಕಾರ ಇಷ್ಟೆಲ್ಲ ‘ಸುದ್ದಿ’ ಸೃಷ್ಟಿಸುತ್ತಿರುವುದು ನಮ್ಮ ವಾಹಿನಿಗಳಿಗೆ ಅಷ್ಟಿಷ್ಟಾದರೂ ಮೇವು ಒದಗಿಸಿದೆ.

ಒಳ್ಳೆಯ ಸರ್ಕಾರ, ಸ್ಥಿರ ಸರ್ಕಾರ ಬಂದು ಬಿಟ್ಟರೆ ನಮ್ಮ ಸುದ್ದಿವಾಹಿನಿಗಳ ಗತಿಯೇನಪ್ಪ ಅಂತ ಯೋಚಿಸುವಂತಾಗಿದೆ.

ಕ್ರಮು ಡೈರಿಯ ಅಬ್ಬರಕ್ಕಿಂತ ಗುಡ್ಡದ ಭೂತ ನೋಡೋದೇ ವಾಸಿ. ಅದಕ್ಕಾಗಿ ಜನಶ್ರೀಯನ್ನು ಅಭಿನಂದಿಸಬೇಕು.

**********

2 ಟಿಪ್ಪಣಿಗಳು Post a comment
  1. Bhairav Kodi's avatar
    Bhairav Kodi
    ಮಾರ್ಚ್ 16 2012

    ಹದಿಮೂರು ಕಂತುಗಳಲ್ಲಿ, ಹದಿಮೂರು ವಾರಗಳಲ್ಲಿ ಬಹುಷಃ ಸುಮಾರು 1988-89 ಆಸುಪಾಸಿನಲ್ಲಿ ಪ್ರಸಾರಗೊಂಡ ಅಧ್ಬುತ ಧಾರಾವಾಹಿ, ಇಂದಿನ ನಮ್ಮ ಕಿರುತೆರೆ ಮೆಗಸಿರಿಯಲ್ ಧಾರಾವಾಹಿ ನಿರ್ದೇಶಕರಿಗೆ ಮತ್ತೊಮ್ಮೆ ನೋಡಿ ಕಲಿಯುವಂತಹ ಅನಿವಾರ್ಯತೆ ಖಂಡಿತ ಇದೆ…..ಜನಶ್ರೀ ವಾಹಿನಿಯ ದಿಟ್ಟ ನಿರ್ಧಾರ ಪ್ರಶಂಸನಾರ್ಹ

    ಉತ್ತರ
  2. ವಸಂತ್.'s avatar
    ವಸಂತ್.
    ಮಾರ್ಚ್ 16 2012

    ಇಲ್ಲಸಲ್ಲದ ಅಪನಂಬಿಕೆಗಳನ್ನು ಬೆಳಸುವ, ಕ್ರೌರ್ಯವನ್ನು ಸಾರುವ ಇತ್ತೀಚಿನ ವಸ್ತುಗಳ ಅಬ್ಬರಕ್ಕಿಂತ … ಈ ಧಾರಾವಾಹಿಯನ್ನು ಮರುಪ್ರಸಾರ ಮಾಡುವುದೇ ಒಳ್ಳೆಯ ನಿರ್ಧಾರ…

    ಉತ್ತರ

Leave a reply to ವಸಂತ್. ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments