ಕಹಾನಿ, ವಿದ್ಯಾಬಾಲನ್ ಮತ್ತೆ ಮಿಂಚಿಂಗ್
ಫಿಲ್ಮಿ ಪವನ್
ಈ ನಡುವೆ ಎಲ್ಲಾ ಕಡೆಯೂ ವಿದ್ಯಾಬಾಲನ್ ದೇ ದುನಿಯಾ, ಡರ್ಟಿ ಪಿಕ್ಚರ್ ಬಂದಮೇಲೇನೆ ವಿದ್ಯಾ ಬಾಲನ್ ಗೆ ಈ ಪಾಟಿ ಡಿಮ್ಯಾಂಡ್ ಬಂದಿದ್ದು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸಹ ಬಾಚಿಕೊಂಡಿದ್ದರು ವಿದ್ಯಾ, ಅವರಿಗೆ ನಿಲುಮೆ ತಂಡದಿಂದ ಶುಭಾಶಯಗಳು. ಶನಿವಾರ ಭಾನುವಾರ ಐ.ಟಿ ಹುಡುಗರಿಗೆ ಹಬ್ಬ ಇದ್ದ ಹಾಗೆ, ಗುರುವಾರವೇ ಎಲ್ಲ ಪ್ಲಾನ್ ಆಗಿ ಬಿಡುತ್ತೆ ಶುಕ್ರವಾರ ಮತ್ತು ಶನಿವಾರದ ಪ್ರೋಗ್ರಾಮ್. ಹಾಗೇ ಪ್ಲಾನ್ ಮಾಡಿ ಶನಿವಾರ ಕಹಾನಿ ಚಿತ್ರ ನೋಡಲು ಹೋಗಿದ್ದೆವು, ಮೊದಲ ಬಾರಿ ನನ್ನ ಸಹೋದ್ಯೋಗಿಗಳೊಂದಿಗೆ ಸಿನಿಮಾ ಪಯಣ.
ಕೊಲ್ಕತ್ತಾದಂತಹ ಮಹಾನಗರದಲ್ಲಿ ತೆಗೆದುಕೊಳ್ಳುವ ಸಿನಿಮಾ ಕೊಲ್ಕತ್ತಾದ ದೈನಂದಿನ ಬದುಕನ್ನು ತೆರೆದುಕೊಳ್ಳುತ್ತಾ ನಾಯಕಿಯ ಎಂಟ್ರಿ ಕೊಡಿಸುತ್ತೆ. ನಾಯಕಿ ಕೊಲ್ಕತ್ತಾ ಬಂದೊಡನೆ ಪೋಲೀಸ್ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ನೀಡುತ್ತಾಳೆ. ಆಗ ಪ್ರೇಕ್ಷಕನಿಗೂ ಸಹ ಟ್ಯಾಕ್ಸಿ ಚಾಲಕನಿಗೆ ಬಂದ ಅನುಮಾನವೆ ಬರುತ್ತೆ, ಯಾಕೆ ನೇರ ಪೋಲೀಸ್ ಠಾಣೆ ಅಂತ. ನಾಯಕಿ ತುಂಬು ಗರ್ಭಿಣಿ, ಲಂಡನ್ ಅಲ್ಲಿದ್ದ ಪತಿ ಕೊಲ್ಕತ್ತಾಗೆಂದು ಹೊರಟು ಬಂದವರು ಮತ್ತೆ ಕರೆ ಮಾಡಿಲ್ಲ, ಸಂದೇಶ ಕಳುಹಿಸಿಲ್ಲ, ಕಾಣೆಯಾಗಿದ್ದಾರೆ ಎಂದು ನೀಡುವ ದೂರನ್ನು ಪೋಲೀಸರು ಯುವ ಆಫೀಸರ್ ರಾಣಾಗೆ ವಹಿಸುತ್ತಾರೆ. ರಾಣಾ ಮತ್ತು ಪೋಲೀಸ್ ಅಲ್ಲದಿದ್ದರು ಪೋಲೀಸರಂತೆ ತನಿಖೆಯ ಎಲ್ಲ ಕಡೆಗಳಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳುವ ವಿದ್ಯಾಬಾಲನ್ ಜೊತೆಯಾಗಿ ನಡೆಸುವ ಸಸ್ಪನ್ಸ್ ಥ್ರಿಲ್ಲರ್ ಕಹಾನಿ.
ವಿದ್ಯಾ ಬಾಲನ್ ಗೆ ಸಿನಿಮಾದಲ್ಲಿ ಸಹ ವಿದ್ಯಾ ಎಂಬ ಹೆಸರು, ತಮ್ಮ ಪತಿ ಕಳೆದು ಹೋದ ಎಂದು ದೂರು ನೀಡಿದ ದಿನದಿಂದ ಸಂಪೂರ್ಣ ತನಿಖೆ ಮುಗಿಯುವವರೆಗೂ ಪೋಲೋಸರೊಂದಿಗೇ ಇರುತ್ತಾರೆ. ವಿದ್ಯಾ ವೃತ್ತಿಯಲ್ಲಿ ನೆಟ್ವರ್ಕ್ ಸೆಕ್ಯೂರಿಟಿ ಇಂಜಿನಿಯರ್, ಈ ತನಿಖೆ ನಡೆಯುವಾಗ ಅವರ ಕಂಪ್ಯೂಟರ್ ತಲೆ ಬಹಳವಾಗಿ ಉಪಯೋಗವಾಗುತ್ತದೆ, ಅದೇ ಭರದಲ್ಲಿ ನಿರ್ದೇಶಕರು ಪೋಲೀಸರಿಗೆ ಕಂಪ್ಯೂಟರ್ ಬಗೆಗಿನ ಅಲ್ಪ ತಿಳುವಳಿಕೆಯನ್ನೂ ಸಹ ತೋರಿಸಿದ್ದಾರೆ. ಬರೀ ಫೋನಿನಲ್ಲಿ ಮಾತನಾಡಿದ್ದನ್ನೆ ಅರ್ಥ ಮಾಡಿಕೊಂಡು ನನ್ನ ಗಂಡ ಇದೇ ಲಾಡ್ಜಿನಲ್ಲಿ ಇರುತಿದ್ದರು, ಇದೇ ಅಂಗಡಿಯಲ್ಲಿ ಟೀ ಕುಡಿಯುತಿದ್ದರು ಎಂದೆಲ್ಲ ಗೆಸ್ ಮಾಡುವ ವಿದ್ಯಾ ಬುದ್ದಿವಂತಿಕೆ ನಂಬಲು ಸಾಧ್ಯವಾಗದಿದ್ದರು ಸಿನಿಮಾ ಆದ್ದರಿಂದ ನಂಬಿ ಬಿಡಬೇಕಾಗುತ್ತದೆ.
ತನಿಖೆ ಮಾಡಲು ಹೊರಟಾಗ, ವಿದ್ಯಾ ಪತಿಯ ಚಿತ್ರ ಕುಖ್ಯಾತ ತೀವ್ರಗಾಮಿಯನ್ನು ಹೋಲುತ್ತದೆ, ಆದರೆ ಆ ತನಿಖೆ ಮಾಡುವಾಗ ಸಹಾಯ ಮಾಡಲು ಹೊರಟವರನ್ನೆಲ್ಲ ಸುಪಾರಿ ಕಿಲ್ಲರ್ ಒಬ್ಬ ನಿಶ್ಯಬ್ಧವಾಗಿ ಕೊಲ್ಲುತ್ತಿರುತ್ತಾನೆ. ಇದರ ಮಧ್ಯೆ ಇಂಟಲಿಜೆನ್ಸ್ ಆಫೀಸರ್ ಖಾನ್ ಬಂದು ಕೇಸ್ ಹ್ಯಾಂಡಲ್ ಮಾಡುತ್ತಾನೆ, ತೀವ್ರಗಾಮಿಯೊಂದಿಗೆ ಇಂಡಿಯನ್ ಡಾಟಾ ಸೆಂಟರ್ ನ ಹಿರಿಯರು ಸಹ ಪಾಲುದಾರರು ಎಂಬ ಸಾಕ್ಷಿ ವಿದ್ಯಾ ಸಂಗ್ರಹಿಸಿರುತ್ತಾಳೆ. ವಿದ್ಯಾಳನ್ನು ಉಪಯೋಗಿಸಿಕೊಂಡು ತೀವ್ರಗಾಮಿಯನ್ನು ಹಿಡಿಯಬೇಕೆಂದುಕೊಳ್ಳುವ ಖಾನ್ ಪ್ಲಾನ್ ಏಕ್ ದಂ ಉಲ್ಟಾ ಆಗಿರುತ್ತೆ, ವಿದ್ಯಾ ಬಾಲನ್ ಕೊಡುವ ಆ ಶಾಕ್ ಎಂತಹುದು, ಯಾವ ರೀತಿ ಕಹಾನಿ ಸೃಷ್ಠಿ ಮಾಡಿರುತ್ತಾಳೆ ಎಂಬ ಕಥೆ ನಿಜಕ್ಕೂ ಕುತೂಹಲವಾಗಿದೆ, ಅದನ್ನು ನೋಡಿ ಮಜಾ ಮಾಡಲು ಚಿತ್ರ ಮಂದಿರಕ್ಕೆ ಭೇಟಿ ಕೊಡಿ.
ವಿದ್ಯಾಬಾಲನ್ ನಟನೆ ಅಧ್ಬುತವಾಗಿದೆ, ಚಿತ್ರದಲ್ಲಿ ಬರುವ ಇತರೆ ಪಾತ್ರಗಳು ಸಹ ಅಷ್ಟೇ ಚೆಂದವಾಗಿ ಮೂಡಿಬಂದಿವೆ, ಮತ್ತು ಅದಕ್ಕೆ ಅದರದೇ ಆದ ನ್ಯಾಯ ನಟರು ದಕ್ಕಿಸಿದ್ದಾರೆ.ನಿರ್ದೇಶಕ ಸುಜಯ್ ಘೋಶ್ ಕಲ್ಕತ್ತ ನಗರದ ಜೀವನ ಶೈಲಿಯನ್ನು ಮಾಂಟೇಜಸ್ ಆಗಿ ಉಪಯೋಗಿಸಿರುವ ರೀತಿ ಯುವ ನಿರ್ದೇಶಕರಿಗೆ ಕಲಿಯಲು ಸಿಗುವ ವಿಷಯಗಳು. ಸೈಲಂಟ್ ಕಿಲ್ಲರ್ ಆಗಿ ಬರುವ ಇನ್ಸುರೆನ್ಸ್ ಏಜೆಂಟ್ ಮ್ಯಾನರಿಸಂ ನಿರ್ದೇಶಕರ ಹೊಸತನಕ್ಕೆ ಹಿಡಿದಿರುವ ಕೈಗನ್ನಡಿ. ಚಿತ್ರದಲ್ಲಿ ವಿಶೇಷವಾಗಿ ಏನು ಹಾಡುಗಳಿಲ್ಲದಿದ್ದರೂ ವಿಶಾಲ್ ಶೇಖರ್ ಅವರ ಬಾಗ್ರೌಂಡ್ ಸ್ಕೋರ್ ಪ್ರೇಕ್ಷಕನನ್ನು ಸೀಟಿನ ಕೊನೆಯಲ್ಲಿ ಬರುವಂತೆ ಮಾಡುತ್ತದೆ, ಮತ್ತು ಅಮಿತಾಬ್ ಜಿ ಹಾಡಿರುವ ಒಂದು ಹಾಡು ಚೆನ್ನಾಗಿದೆ. ಒಟ್ಟಾರೆ ಹೀರೋಯಿನ್ ಓರಿಯೆಂಟೆಡ್ ಸಿನಿಮಾ ಆದರು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಲೆಕ್ಕಾಚಾರ ನಡೆಯುತ್ತಿದೆ. ಅದಕ್ಕೆ ಕಾರಣ ವಿದ್ಯಾ ಬಾಲನ್ ಮತ್ತು ನಿರ್ದೇಶಕ ಸುಜಯ್ ಘೋಶ್ ಕಾರಣ ಎಂದರೆ ತಪ್ಪಾಗಲಾರದು. ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ ನೋಡಿ ಎಂಜಾಯ್ ಮಾಡಿ.
* * * * * * * * *
ಚಿತ್ರಕೃಪೆ : ಅಂತರ್ಜಾಲ





itsa one of the best film..Thriller thats what it is. and Vidya is superb… hope few of our own Kannada Directors seen the film..
ಧಿಕ್ಕಾರ ನಿಲುಮೆ ಬಳಗಕ್ಕೆ!
ಕನ್ನಡ ಪರಿಚಾರಕರು ಎಂದುಕೊಂಡು ಹಿಂದೀ ಪ್ರಚಾರಕ್ಕೆ ಮುಂದಾದ ನಾಡದ್ರೋಹಕ್ಕೆ ನನ್ನ ಧಿಕ್ಕಾರ!
ಒಂದು ಒಳ್ಳೆ ಹಿಂದಿ ಸಿನೆಮಾದ ವಿಮರ್ಶೆ ಬರೆದರೆ ’ಹಿಂದಿ ಪ್ರಚಾರ’ಮಾಡಿದಂತಾಗುತ್ತದೆಯೇನು? ಕನ್ನಡತನ ಅನ್ನುವುದು ಅನ್ಯಭಾಷೆ ಒಳ್ಳೆಯ ವಿಷಯಗಳನ್ನ ಗೌರವಿಸುವುದರಲ್ಲೂ ಇರಬೇಕಲ್ಲವೇ?
ನಿಲುಮೆಯ ಕನ್ನಡದೆಡೆಗಿನ ಬದ್ಧತೆಯ ಬಗ್ಗೆ ಯಾರಿಗೂ ಅನುಮಾನಗಳಿರಬೇಕಿಲ್ಲ.
‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ.ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು,ಪ್ರತಿಯೊಬ್ಬ ಕನ್ನಡಿಗನದು. – ನಿಲುಮೆ
Is it true?
ಗಮನ ಸೆಳೆಯುವ ಗಿಮಿಕ್ಕಿನ ಕನ್ನಡ ಪ್ರೇಮ ಇದು. ಹಿಂದಿ ಚಿತ್ರದ ಕನ್ನಡ ವಿಮರ್ಶೆಗೆ ಟಿಪ್ಪಣಿ ಹಾಕುತ್ತ “is it true” ಎಂದು ಬರೆಯುವುದೇ ಕನ್ನಡ ಪ್ರೇಮ…
ಹ್ಮ್ಮ್, ಕನ್ನಡ ಪ್ರೇಮಿಗಳಾಗಿರಲು ಪರಭಾಷಾ ವಿರೋಧಿಗಳಾಗಬೇಕೇನು ಗೆಳೆಯರೆ?? ಒಂದು ಒಳ್ಳೆಯ ಚಿತ್ರದ ಬಗ್ಗೆ ನಮ್ಮ ಕನ್ನಡಿಗರಿಗೂ ತಿಳಿಯಲಿ ಎಂದು ಬರೆದೆ, ಆದರೆ ಇದು ಕನ್ನಡಾಭಿಮಾನಿಗಳಿಗೆ ನೋವು ತಂದಿದೆ ಅಂದ್ರೆ ಕ್ಷಮೆ ಇರಲಿ. ಅದಕ್ಕೆ ನಿಲುಮೆಗೆ ಧಿಕ್ಕಾರ?? ನಾಡದ್ರೋಹಿಗಳು ಎಂಬ ಬಿರುದು?? ಶುಭವಾಗಲಿ ಎಲ್ಲರಿಗು.
ನಿಲುಮೆಯ ಗೆಳೆಯರೇ,
ದಿನೇಶ್ ಮಾತನ್ನು ಆಕ್ರೋಶವನ್ನು ಕಂಡು ಬೇಸರಿಸಬೇಡಿ. ಅವರ ಭಾಷೆ ಒರಟಿದ್ದರೂ ಇರಬಹುದು ಆದರೆ ಅನಿಸಿಕೆಯಲ್ಲಿ ತಪ್ಪು ಕಾಣುತ್ತಿಲ್ಲ. ನಿಲುಮೆಯಂತಹ ಕನ್ನಡಪರ ತಾಣದಲ್ಲಿ ಇಂದು ಒಂದೆಂದು ಕಾಣಿಸುವ ಹಿಂದೀ ಸಿನಿಮಾ ವಿಮರ್ಶೆ ಬರೀ ವಿಮರ್ಶ್ಜೆಯಾಗಿಲ್ಲ. ಅದು ಪ್ರಮೋಶನ್ ಆಗಿದೆ. ಕನ್ನಡ ಚಿತ್ರರಂಗಕ್ಕೆ ನೇರವಾಗಿ ಹಿಂದೀ ಸಿನಿಮಾನೇ threat ಆಗಿರುವಾಗ ಇಂಥಾ ಬರಹ ಕನ್ನಡಪರ ಕಾಳಜಿಯಾಗುವುದೇ? ಇವತ್ತು ಒಂದು ಸಿನಿಮಾ ಕಥೆ, ನಾಳೆ ವಾರಕ್ಕೊಂದು ಹಿಂದೀ ಸಿನಿಮಾ ಕಥೆ ಯಾಕಾಗುವುದಿಲ್ಲ? ಇವತ್ತು ಹಿಂದೀ… ನಾಳೆ ತಮಿಳು, ತೆಲುಗು, ಮಲಯಾಳಂ.. ಯಾಕಾಗುವುದಿಲ್ಲ? ಈ ಹಿನ್ನೆಲೆಯಲ್ಲಿ ನೋಡಿದಾಗ “ನೀವೆಷ್ಟೇ ಸಮರ್ಥಿಸಿಕೊಂಡರೂ” ಈ ಬರಹವನ್ನು ಪ್ರಕಟಿಸಿರುವುದು ಕನ್ನಡಪರ ಎನ್ನಿಸುತ್ತಿಲ್ಲ. ಈ ಮೂಲಕ ಚರ್ಚೆಗೆ ಇಳಿಯುವ ಉದ್ದೇಶವೂ ನನಗಿಲ್ಲ. ಒಮ್ಮೆ ನಿಲುಮೆ ಆತ್ಮಾವಲೋಕನ ಮಾಡಿಕೊಳ್ಳಲಿ… ತಪ್ಪು ಎನ್ನಿಸಿದರೆ ಒಪ್ಪಿಕೊಳ್ಳಲಿ.. ಆಗ ಅದರ ಘನತೆ ಹೆಚ್ಚುತ್ತದೆ.
ವಿಶ್ವಾಸಿ
ಅನಿಲ್ ಚಿನ್ನಭಂಡಾರ
ಅನಿಲ್,
ಅನಿಸಿಕೆಯಲ್ಲಿ ತಪ್ಪು ಹುಡುಕುತ್ತಿಲ್ಲ.ಈ ಹಿಂದೆಯೂ ತಮಿಳಿನ ಏಳ್ ಆಮ್ ಅರಿವು ಹಾಗೆ ಇಂಗ್ಲೀಷ್ ಚಿತ್ರದ ವಿಮರ್ಷೆಯೂ ಪ್ರಕಟವಾಗಿತ್ತು.ಹಾಗೆಲ್ಲ ಕೇಳದವರು ಹಿಂದಿ ಸಿನೆಮಾದ ಬಗ್ಗೆ ಬರೆದಾಗ ಮಾತ್ರ ಧಿಕ್ಕಾರ ಕೂಗಲು ನಿಂತಿದ್ಯಾಕೆ? ಕನ್ನಡತನ ಅಂದರೆ ಹಿಂದಿ ಕಂಡಾಗ ಮಾತ್ರ ಬರುವಂತದ್ದಾ? ನಮ್ಮ ವಿರೋಧ ಹಿಂದಿ ಹೇರಿಕೆಯ ಬಗ್ಗೆಯಷ್ಟೆ ಹಿಂದಿ ಅನ್ನುವ ಭಾಷೆಯ ಬಗೆಗಲ್ಲ.ಇವೆರಡರ ವ್ಯತ್ಯಾಸವೇ ಬಹಳ ತೆಳುವಾದದ್ದು.
ಒಳ್ಳೆಯದು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ತೆಗೆದುಕೋ ಅನ್ನುವ ದೊಡ್ಡವರ ಮಾತೇ ಸರಿಯಿಲ್ಲವೇ? ಕನ್ನಡಪರ ಕಾಳಜಿಯೆಂದರೆ ಇತರೆ ಭಾಷೆಗಳ ಒಳ್ಳೆ ಸಿನೆಮಾವನ್ನ ನಿಷೇಧಿಸುವುದೇ? ಅಸಲಿಗೆ ಕನ್ನಡ ಚಿತ್ರರಂಗದ ಮಂದಿ ಸರಿಯಿದ್ದಿದ್ದರೆ ಈ ಥಿಯೇಟರ್ ಸಮಸ್ಯೆ,ಪರಭಾಷಾ ಚಿತ್ರ ಹಾವಳಿ ಇರುತಿತ್ತಾ?
ಇಷ್ಟೆಲ್ಲ ಹೇಳಿಯಾದ ಮೇಲೆ ಕಡೆಯದಾಗಿ ಒಂದು ವಿಷಯವನ್ನ ನಿಲುಮೆಯ ಪರವಾಗಿ ಸ್ಪಷ್ಟಪಡಿಸುವೆ.ಅನ್ಯ ಭಾಷೆಯ ಅಪರೂಪದ,ಸಾಮಾಜಿಕ ಕಳಕಳಿಯ ಸಿನೆಮಾಗಳ ವಿಮರ್ಷೆಗೆ ಮಾತ್ರ ಅವಕಾಶ ನೀಡುತ್ತೇವೆ ಹೊರತು ಕನ್ನಡದ ಚಾನೆಲ್ಗಳ ಹಾಗೆ ಮಾಡುವುದಿಲ್ಲ.ಒಂದು ವೇಳೆ ನಾವು ಇದನ್ನು ಮೀರಿದ್ದು ಕಂಡರೆ ಕಿವಿ ಹಿಂಡಲು ನೀವು ನಮ್ಮ ಓದುಗರು ಸರ್ವ ಸ್ವತಂತ್ರರು.
ಇಂತಿ,
ರಾಕೇಶ್ ಶೆಟ್ಟಿ
ರಾಕೇಶ್ ಸಾರ್,
ನೀವೇ ಹೇಳಿ ಯಾವ ಲೆಕ್ಕದಲ್ಲಿ “ಏಳ್ ಅಮ್ ಅರಿವು” ಸಾಮಾಜಿಕ ಕಳಿಕಳಿಯ ಚಿತ್ರ ಅಂತಾ? ನೀವು ಕೊಟ್ಟ ಇಂಗ್ಲೀಶ್ ಚಿತ್ರದ ಯಾವುದೋ ನನಗೆ ಗೊತ್ತಿಲ್ಲ. ಆದರೆ ಅದನ್ನು ಸಾಮಾಜಿಕ ಕಳಕಳಿಯ ಉದ್ದೇಶದಿಂದ ಕೊಟ್ಟಿದ್ದೇನೆ ಎನ್ನುವುದು ಎಷ್ಟು ನಿಜಾ? ನನಗೆ ನಂಬಿಕೆಯಾಗುತ್ತಿಲ್ಲ!
ನಿಮ್ಮ “ಕನ್ನಡಪರ ಕಾಳಜಿಯೆಂದರೆ ಇತರೆ ಭಾಷೆಗಳ ಒಳ್ಳೆ ಸಿನೆಮಾವನ್ನ ನಿಷೇಧಿಸುವುದೇ? ಅಸಲಿಗೆ ಕನ್ನಡ ಚಿತ್ರರಂಗದ ಮಂದಿ ಸರಿಯಿದ್ದಿದ್ದರೆ ಈ ಥಿಯೇಟರ್ ಸಮಸ್ಯೆ,ಪರಭಾಷಾ ಚಿತ್ರ ಹಾವಳಿ ಇರುತಿತ್ತಾ?” ಮಾತಿನಲ್ಲಿ ವಿತಂಡವಾದ ಕಾಣುತ್ತದೆ. ನಿಮಗ್ಯಾರು ಪರಭಾಷಾ ಚಿತ್ರ ನಿಶೇದಿಸಬೇಕು ಎಂದರು? ಸ್ವಾಮಿ.. ನಿಮಗೆ ಬೇಕಾದ ಭಾಷೆಯ ವಿಮರ್ಶೆ ಹಾಕಿಕೊಳ್ಳಿ.. ಬೇಕಾದ ಸಿನಿಮಾ ನೋಡಿ ಎನ್ನಿ. ನೀವದಕ್ಕೆ ಸ್ವಾತಂತ್ರರು… ನಿಮ್ಮ ಈ ಪ್ರಚಾರದಿಂದ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಮೇಲೆ ಏನೂ ಪರಿಣಾಮವಾಗದು ಎಂದು ನಿಮಗನ್ನಿಸಿದ್ದರೆ ಅದು ನಿಮ್ಮ ಅನಿಸಿಕೆ. ನನಗೆ ಹಾಗನ್ನಿಸದು. ಹಾಗಾಗಿ ನಿಲುಮೆಯ ಕನ್ನಡತನದ ಬಗ್ಗೆ ನಾನೇ ತಪ್ಪೆಣಿಸಿದ್ದೆ ಎಂದು ಕೊಂಡು ನನ್ನನ್ನು ನಾನೇ ಬೈದು ಕೊಳ್ಳೋದು ನಿಮಗೂ ನೆಮ್ಮದಿ, ನನಗೂ ಸೇಫ಼ು!
ಅನಿಲ್ ಚಿನ್ನಭಂಡಾರ
ಅನಿಲ್,
ಹಾಂ! ಇಲ್ಲಿ ಧಿಕ್ಕಾರ ಕೂಗಿದವರ ಕನ್ನಡಪರ ಕಾಳಜಿಯ ಬಗ್ಗೆ ನಮಗೆ ಗೊತ್ತಿದೆ.ಊರಿಗೆಲ್ಲ ಕನ್ನಡದ ಪಾಠ ಮಾಡಿ ತಾವುಗಳೇ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ.ಅಂತವರ ಮಧ್ಯೆ ನಿಮ್ಮ ಮೊದಲ ಪ್ರತಿಕ್ರಿಯೆ ಅದಕ್ಕೆ ರಾಕೇಶ್ ಉತ್ತರ ನೀಡಿದ ರೀತಿ ನೋಡಿ ಒಳ್ಳೆ ಚರ್ಚೆಯ ನಿರೀಕ್ಷಿಸಿದ್ದೆ ವ್ಯಂಗ್ಯದಲ್ಲಿ ಮುಗಿಸಿಬಿಟ್ಟಿರಿ.ರಾಕೇಶ್ ಅವರ ಸಮಾಧಾನಕರ ಉತ್ತರ ತಮಗೇ ವಿತಂಡವಾದದಂತೆ ಕಂಡಿರುವುದರ ಹಿಂದೆ ನಿಮ್ಮ ’ನಾನು ಹೇಳಿದ್ದೇ ಸರಿ ಅದನ್ನೆ ಒಪ್ಪಬೇಕು’ ಅನ್ನುವ ಧೋರಣೆ ನನಗೂ ಕಾಣುತ್ತಿದೆ.
ಏಳಾಂ ಅರಿವು ಬೌದ್ಧ ಧರ್ಮದ ಮೂಲ ಭಾರತ ದೇಶ ಎಂಬುದರ ಬಗ್ಗೆ ಇಲ್ಲಿ ಲೇಖನ ಪ್ರಕಟವಾಗಿತ್ತು, ಇನ್ನೊಂದು ಚಿತ್ರ ಅವತಾರ್ ಆಂಗ್ಲ ಚಿತ್ರದ್ದು, ಜೇಮ್ಸ್ ಕ್ಯಾಮಾರಾನ್ ನ ಸಿನಿಮಾ ಎಷ್ಟು ಅಧ್ಬುತವಾಗಿತ್ತು ಎಂದು ಪ್ರಕಟವಾಗಿತ್ತು.ಕನ್ನಡ ಚಿತ್ರದವರೂ ಸಹ ಇಂತಹದೇ ಒಳ್ಳೆಯ ಚಿತ್ರಗಳನ್ನು ನೀಡಬೇಕು. ಆಗ ಪರಭಾಷೆ ಯಾರು ನೋಡ್ತಾರೆ?? ಈ ಲೇಖನದ ಒಂದು ಕಡೆ ಲೇಖಕರು ಮಾಂಟೇಜ್ ಶಾಟ್ಸ್ ಅನ್ನು ಚಿತ್ರದ ಕಥೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದು ತಿಳಿಸಿದ್ದಾರೆ, ಯುವ ನಿರ್ದೇಶಕರು ಅವನ್ನೆಲ್ಲ ಗಮನಿಸಬೇಕು.ಕನ್ನಡದ ಹಿರಿಯ ನಟರೇ ಅವರ ಚಿತ್ರವನ್ನು ತೆಲುಗು ಮಲಯಾಳಂ ಗೆ ಡಬ್ಬಿಂಗ್ ಮಾಡಿ ಹಣ ಮಾಡುತ್ತಿದ್ದಾರೆ, ನಾವ್ಯಾಕೆ ಸಿನಿಮಾ ಬಗ್ಗೆ ಚಿಂತಿಸಬೇಕು?? ಮನೋರಂಜನೆಗಷ್ಟೆ ಚಿತ್ರ ಸೀಮಿತವಾಗಲಿ, ಕನ್ನಡ ಸೇವೆ ಸಿನಿಮಾದ ಹೊರಗು ನಡೆಯಲಿ