ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 28, 2012

2

ಜೋಡಿ ನಯನದ ಒಂಟಿ ನೋಟ

‍ನಿಲುಮೆ ಮೂಲಕ

– ವಿಜಯಕುಮಾರ್  ಹೂಗಾರ್

ಹೀಗೊಂದು ನೋಟ.ವಿಚಿತ್ರ ನೋಟ.ಇಡಿ ಬೆಂಗಳೂರು ಒಂದೇ ನೋಟಕ್ಕೆ ನೋಡೋ ಹಟ.ಖೇಚರ ಜೀವಿಯಂತೆ ನಗರದ ತಲೆಯಮೇಲೆ ಹಾರಾಡೋ ಬಯಕೆ ಈ ಜೋಡಿ ನಯನಕ್ಕೆ.ಬಯಕೆ ಈಡೇರದೆ ಅದರ ಪಾದದಡಿ ನುಸುಳಿ ಸುತ್ತುತ್ತಿದೆ ನಿಘೂಡ ಮನಸ್ಸು ಭೇಧಿಸುವ ವ್ಯಾಧನ ಅಗೋಚರ ಬಿಲ್ಲಿನಂತೆ.ಬಯಕೆಯ ತೇವಕೆ ಸಮ್ಮತಿಸುವಂತೆ ಮಹಾನಗರ ಬಿಡಿ ಬಿಡಿಯಾಗಿ ನೀಗಿಸುತಿದೆ ನಯನದ ದಾಹ.ತುಂಡು ತುಂಡಾಗಿ ಚಲಿಸಲೋಲಿಸುತಿದೆ ಸೆಳೆಯುವ ದಾರಿಯ ಮೋಹ.

ಗಾಳಿಯ ರಭಸಕ್ಕೆ ನಯನ ಮನಬಂದಂತೆ ತೂರಿ ಹಾರಿದೆ,ಕುರುಡನ ಕೈ ಹಿಡಿದು.ನಯನದ ಜಾಡು ದಾರಿಗೆ ಹೆಜ್ಜೆಯ ಕುರುಹು ಹಾಕುತ್ತ ದೇಹ ಅದಕೆ  ಹಿಂಬಾಲಿಸಿದೆ.ಕಣ್ಣು ಓಡಿದಲೆಲ್ಲ ಬಣ್ಣದ ಲೋಕದಲ್ಲಿ ಬಣ್ಣಗೆಟ್ಟ ಜನರ ಓಟ.ನಡೆದಾಡುವ,ಸರಿಸೋಡುವ ಜನ.ಚಲಿಸುವ ದಾರಿಯ ಮೇಲೆ ಇಟ್ಟ ಬೊಂಬೆಯಂತೆ.ಯಾವ ಕಾಲಕ್ಕೂ ಲೆಕ್ಕಿಸದೆ ಉಳಿಗಾಲದ ಜೀವಂತ ಜನ ಓಡುತ್ತಿದ್ದಾರೆ ನಡೆದ ದಾರಿ ಮತ್ತಷ್ಟು ಸವೆಯುವಂತೆ.ಓಡಾಟದಲ್ಲಿ ಭಾರ ಹೊತ್ತಿ ಚಲಿಸುವ ಪಾರಗನ್ ಚಪ್ಪಲಿ ಮೈ ಮರೆತು ನಿಲ್ಲುವಹಾಗಿಲ್ಲ.ಮರೆತರೆ ಮರೆಯಲಾಗದ ನೆನಪು ಕೊಡುಗೆ ನೀಡುವ ಜನರು ಹದ್ದಿನಂತೆ ಕಾಯುತ್ತಿದ್ದಾರೆ.ಅವರೂ ಕಾದು ಕಾದು ಸುಸ್ತಾಗಿದ್ದಾರೆ,ಹಸಿದ ಹುಲಿಯ ಹೊಟ್ಟೆಯಂತೆ.ಕೈಯಲ್ಲಿ ಮಹಾನಗರದ ನಕ್ಷೆ.ಪೆನ್ನು.ಗತ ಕಾಲದ ಹಳಸು ಡೈರಿ ಹಿಡಿದು ಹೊಂಚು ಹಾಕುತ್ತಿದ್ದಾರೆ.

ಐವತ್ತಕ್ಕೆ ಎರಡು ಅಂಗಿ.ಹೊಸ ಬೆಲೆ ಪಡೆಯಲು ಕುಳಿತ ಕದ್ದ ಹಳೆ ಪರ್ಸು,ಚಪ್ಪಲಿ,ಬೂಟು.ಹತ್ತಕ್ಕೆ ಎರಡು ಕರ್ಚೀಫು.ಹಾಸುಗಲ್ಲಿನ ಮೇಲೆ ಭಾವಚಿತ್ರದಲ್ಲಿ ಅಡಗಿ ಅನಾಥ ದೇವರಂತೆ ಕುಳಿತ ದೇವರು.ಬಣ್ಣ ಬದಲಾಯಿಸುವ ಉಸುರುವಳ್ಳಿ ಚಂಡು.ಪ್ಲಾಸ್ಟಿಕ್ ಅಂಚಿನ ಟಂಗ್ ಕ್ಲೀನೆರ್.ಸುಗಂಧದ ಹೆಸರಿನಲ್ಲಿ ಗುಳಿಗೆಯಂತಿರುವ ಬೆಳ್ಳನೆಯ ಡಾಂಬರ್ ಗೋಳಿ.ಅಂಧನ ಕೋಲಿನ ಜೊತೆ ಇರುವ ತೂಕ ಮಾಪಕ.ಅದರ ಮುಂದೆ ಬಿದ್ದಿರುವ ಎಂಟಾಣೆಯ ಎರಡು ನಾಣ್ಯಗಳು .ಗಾಳಿಯಾಡುವಾಗ ಅಪಹರಿಸಿದ ಅನಾಥ ಬಣ್ಣಗೆಟ್ಟ ಬಟ್ಟೆ.ಕಾಲುಗಾಳಿಯಿಂದ ಸುತ್ತುವರೆದ ಮೆತ್ತನೆಯ ಚಿಕ್ಕು,ಬಾಳೆಹಣ್ಣು.ದೋಚುವವರಂತೆ ಎದುರಾಗುವ ತಂಪು ಕನ್ನಡಕ ಮಾರುವವರು ಹೀಗೆ ಒಮ್ಮೆ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಣ್ಮುಂದೆ ಬಂದು ಪರಾರಿಯಾಗಿದ್ದಾರೆ.

ಕೈಯೋ,ಕಾಲು ಕಳೆದುಕೊಂಡು ಬರಿಮೈಯ ಮೇಲೆ ದಿನವೀಡಿ ಭಿಕ್ಷೆ ಯಾಚಿಸುವ ಹಸುಳೆಯ ಮನದ ಪುಟಾಣಿಗಳು.”ಊರಿಗೆ ಹೋಗುವದಕ್ಕೆ ದುಡ್ಡಿಲ್ಲ,ಸಹಾಯ ಮಾಡಿ” ಅಂತ ಸಾಗರ ಥಿಯೇಟರ್ ಹತ್ತಿರ ಸಾಫ್ಟ್ವೇರ್ ಇಂಜಿನಿಯರ್ ಹೆಸರಿನಲ್ಲಿ ಸಿಗೋ ನಿರ್ಜೀವ ಧಡೂತಿ ದೇಹಗಳು.ಮರೆಯಾದ ವಯಸ್ಸಾದ ತಂದೆಯನ್ನ ಅರೆಸುವ ಯುವಕನ ದೀನ ನೋಟ.ತನ್ನ ಹಸಿವು ನೀಗಲು ಪರರ ತನು-ಮನ ತಣಿಸಲು ಬಣ್ಣ ಬಡಿದು ನಿಂತ ಶಾಮಂಗ ಸುಂದರಿಯರು.”ಜೇಬುಗಳ್ಳರಿದ್ದರೆ ಎಚ್ಚರಿಕೆ” ಅಂತ ಆಕಾಶವಾಣಿಯ ಹುಡುಕಿ ಬರುವ ಸೊಲ್ಲಿಗೆ ಕಿವಿಯರಳಿಸಿ ಕೇಳಿ ತಮ್ಮ ಧಾಟಿಯಲ್ಲೇ ಮಂಪರಿನಲ್ಲಿ ಜನ ಸಾಗರ ಸಾಗುತ್ತಿದೆ.

ಚಿತ್ರ ಬಿಡುಗಡೆಯ ತುದಿಗಾಲಲಿದೆ.ನಿರ್ದೇಶಕನ ಕಣ್ಣಲ್ಲಿ ಅಡಗಿದ ಖೈದಿಯಂತೆ.ಅವನ ಕನಸುಗಳು ಶುಕ್ರುವಾರ ಬೀದಿ ಗೋಡೆಗಳಲ್ಲಿ ಕನಸು ಮರೆತ ಕೈಗಳಿಂದ ಅಲಂಕರಿಸಿವೆ.ಯಾರದೋ ಶ್ರಮ ಇನ್ಯಾರದೋ ಹೆಸರು ಅನ್ನುವಂತೆ ನಾಯಕನ ಉದ್ದನೆಯ ಕಟೌಟ್ ಹಾಕಲಾಗಿದೆ,ನೆಲ ತಾಗುವ ಹೂವಿನ ಹಾರದಲಿ.ಹೂವು ಪೋಣಿಸಿದ ಅಜ್ಜಿ ಪಕ್ಕದಲ್ಲೇ ಟಿಕೆಟ್ ಗಾಗಿ ಪರದಾಡುತ್ತಿದ್ದಾಳೆ.ಟಿಕೆಟ್ ಎರಡರಷ್ಟು ಬೆಲೆಗೆ ಮಾರಾಟವಾಗುತ್ತಿದೆ.ಹತ್ತು ರೂಪಾಯಿ ಕಡಿಮೆ ಕೇಳಿದರೆ “ನಂದು ಹೊಟ್ಟೆ ತುಂಬಲಿ “ಅಂತ ಅಧಿಕೃತವಾಗಿ ರೋಪು ಹಾಕುತ್ತಿದ್ದಾರೆ.ಕಥೆ,ಚಿತ್ರಕತೆ,ಸಂಭಾಷಣೆ ಬರೆದ ನಿರ್ದೇಶಕ ಅಲ್ಲೇ ಓಡಾಡುತ್ತಿದ್ದಾನೆ.ಅವನ ಪರಿವಿಲ್ಲದೆ ಮೊದಲ ದಿನ ನಾಯಕ,ನಾಯಕಿ ಬರಬಹುದು ಅನ್ನೋ ನೀರಿಕ್ಷೆಯಲ್ಲಿದ್ದಾರೆ.ನಾಯಕ ಬಂದ ಮೇಲೆ ಜನರು ಗೌ ಅಂತ ಕಿರುಚುತ್ತಿದ್ದಾರೆ.ನಾಯಕಿ ಯಾಕೆ ಬಂದಿಲ್ಲ ಅಂತ ನಿರ್ಮಾಪಕ ಬೇಸರದಲ್ಲಿದ್ದಾನೆ.ಮೊದಲ ದಿನ ಚಿತ್ರ ಹೌಸ್ಫುಲ್ ಆಗಿದೆ.ಚಿತ್ರಮಂದಿರದವನು ಖುಷಿಯಾಗಿದ್ದಾನೆ.ಪಕ್ಕದ ಚಿತ್ರಮಂದಿರದ ಮಾಲೀಕ ಕೊನೆಯ ವಾರದ ಚಿತ್ರ ಓಡದಿದ್ದರು ಯಾರದೋ ಒತ್ತಾಯಕ್ಕೆ ಓಡಿಸಬೇಕಾಗಿದೆ.

ಬಿಸಿಲು ಮಳೆ ಗಾಳಿ ಚಳಿಗೆ ಎದೆಯೊಡ್ದುತ ಕಣ್ಣರಳಿಸುತ ಸಾಗಿದೆ ಕಣ್ಣೋಟದ ಪಯಣ,ಬಿ ಎಂ ಟಿ ಸಿ ಬಸ್ಸಿನ ಚಕ್ರದಂತೆ.ಬಸ್ಸಿನಲ್ಲಿ ಮಸೆದು ತಿನ್ನುವಂತೆ ಕಿಕ್ಕಿರಿದು ಜನ ತುಂಬಿದ್ದಾರೆ.ಪ್ರಾಣಾಂತಿಕ ಚಾಲನೆ ಚಾಲಕನ ಹವ್ಯಾಸವಾಗಿದೆ.ದೃತಿಗೆಡದೆ ಧೈರ್ಯವಂತ ಜನ ಮತ್ತೆ ಹತ್ತಿದ್ದಾರೆ.ಗುಂಪುಗೂಡಿ ಲೆಕ್ಕಾಚಾರದ ಯೋಜನೆ ಹಾಕಿ ಠಕ್ಕರು ಕೂಡ ಹತ್ತಿದ್ದಾರೆ.ನಿದ್ದೆಯ ಜೋಂಪಿನಿಂದ ಎದ್ದು ಅವಾಗಾವಾಗ ಜೇಬಿನಲ್ಲಿ ಕೈ ಹಾಕಿ ಮೊಬೈಲು,ಹಣ ಇದೆಯೋ ಅಥವಾ ಇಲ್ಲ ಅಂತ ಪದೇ ಪದೇ ಚೆಕ್ ಮಾಡುತ್ತಿದ್ದಾರೆ.ಎಲ್ಲರ ಕಿವಿ ಶಿರಶ್ರವಣಕದಿಂದ ಸಂಗೀತದ ಸುಧೆಯಲ್ಲಿ ಮುಳುಗಿದೆ,ಕಿವುಡರ ಕಿವಿಯಯಂತೆ.ಕೆಲಹೊತ್ತಲ್ಲೇ ಠಕ್ಕರು ತಮ್ಮ ಯೋಜನೆಯಲ್ಲಿ ಯಸಶ್ವಿಯಾಗಿ ಕೆಳಗಿಳಿದಿದ್ದಾರೆ.ದೋಚಿಕೊಂಡ ವ್ಯಕ್ತಿ ನಿದ್ದೆಯ ಸುಳಿಯಲ್ಲಿ ಸಿಲುಕಿದ್ದಾನೆ.ಚಾಲಕ ಪ್ರಾಣಾಂತಿಕ ಘಟನೆ ಸ್ವಲ್ಪದರಲ್ಲೇ ಪಾರದ ಭಾವ ವ್ಯಕ್ತ ಪಡಿಸುತ್ತಿದ್ದಾನೆ.ಜನರಿಗೆ ಯಾರದು ಸರಿ ಯಾರದು ತಪ್ಪು ಅಂತ ಹೇಳುವದಕ್ಕಾಗದೆ ತಡವರಿಸಿ ಎದುರಿನವನದೆ ತಪ್ಪು ಅಂತ ಪರಭಾಷೆಯಲ್ಲೇ ರೋಪು ಹಾಕುತ್ತಿದ್ದಾರೆ.ಕೀಳಾಗಿ ಮಾತಾಡುವ ಪರಭಾಷಾ ಪ್ರೇಮಿಗೆ ತಕ್ಕ ಪಾಠ ಕಲಿಸುವ ಬಿ ಎಂ ಟಿ ಸಿ ಬಸ್ಸಿನಲ್ಲಿ ಪಯಣಿಸುವ ಜನರ ಎದೆಯ ಮಿಡಿತದಲ್ಲಿ ಕನ್ನಡ ಸ್ವಾಭಿಮಾನ ಎದ್ದು ಕಾಣುತ್ತಿದೆ.ಕನ್ನಡಾಭಿಮಾನ ಕಂಡು ಈ ನಯನ ಸೂರ್ಯನಿಂದ ಹಿಡಿ ಬೆಳಕು ಕದ್ದು ಮಿಂಚಿನಂತೆ ಹೊಳೆಯುತಿದೆ.

ಇಲ್ಲಿಯವರೆಗೆ ಕಂಡದ್ದು ಸುಳ್ಳು ಎನ್ನುವಂತೆ ಚಿತ್ರಣವೇ ಬದಲಾಗಿದೆ.ಹೆಜ್ಜೆಗೊಂದು ಹೆಜ್ಜೆ ಇಡುತ್ತ ಮನಬಂದಂತೆ ಸಾಗುವಾಗ ಚುಂಬಕದಂತೆ ತನ್ನೆಡೆಗೆ ಎಳೆದು ನಿಲ್ಲಿಸಿದೆ ಅಲ್ಲಿಯ ದೃಶ್ಯ.ಬಣ್ಣ ಬಣ್ಣದ ತುಂಡು ಬಟ್ಟೆ ತೊಟ್ಟ ಜನ ದಿಡೀರನೆ ಮೈಕೈ ತಾಗಿಸಿ   ಕಣ್ಣು ಕುಕ್ಕಿಸಿ ನೋಡುವಂತೆ ಅನುಮೊದಿಸುತ್ತಿದ್ದಾರೆ.ಬ್ರಹ್ಮಾಂಡದೆರಡು ತುಂಡುಗಳು ನಿಕಟ ಪೂರ್ವ ಹುಣ್ಣಿಮೆ ಚಂದ್ರನ ತುಂಡಿನಂತೆ ಆಕಾಶ ನೋಡಲು ಹಾತೊರಿಯುತ್ತಿವೆ.ಮುತ್ತು,ಮುತ್ತಿನಂತಹ ಮಾತುಗಳು ಸರಾಗವಾಗಿ ವಿನಿಮಯವಾಗುತ್ತಿವೆ.ದೀಪಾವಳಿಯಂತೆ ಜಘಮಗಿಸುವ ಬೆಳಕು ಚಂದ್ರನನ್ನು ನಾಚುವಂತೆ ಮಾಡಿದೆ.ಯಾರೋ ಸಿಡಿಸುವ   ಸಂಗೀತದ ಸದ್ದಿಗೆ,ಇನ್ಯಾರದೋ ಮನ ಕುಣಿಯುತಿದೆ.ಬಾಡಿಗೆ ಮನದಲ್ಲಾಡುವ,ಮಿಲನಕ್ಕೆ ತುಡಿಯುವ ಮನದಂತೆ ಯಾರದೋ ಕೈ ಇನ್ಯಾರದೋ ಸೊಂಟದ ಮೇಲೆ ಮಿಡಿಯುತಿದೆ.ಹೊಗೆ,ಲಿಂಗ ಬೇಧವಿಲ್ಲದೆ ಮೈ ಮರೆತ ತುಟಿಯಿಂದ ಹೊರ ಬರುತ್ತಿದೆ.ಸ್ಪಟಿಕದ ಸ್ಪಷ್ಟತೆ ನೋಡಬಯಸದ ಕಣ್ಣುಗಳು ಕಪ್ಪು ಕನ್ನಡಕದ ಅಡಿಯಲ್ಲಿ ಕಳೆದುಹೋಗಿವೆ.ನೋಡಿದುದು ಕನಸಲ್ಲ ಎಂದು ನಂಬಲು ಮನ ಮುಜುಗರಿಸುತ್ತಿದೆ.

ಅಜಗಜಾಂತರ ವ್ಯತ್ಯಾಸವಿರುವ ದೃಶ್ಯಗಳು ನನ್ನ ಮೂಕನನ್ನಾಗಿಸಿದೆ.ಮಾತಾಡುವ ತುಟಿಗಳು ಮಾನಕ್ಕೆ ಶರಣಾಗಿವೆ.ಮತ್ತೆ

ನಯನಾವಲಂಬಿ ಹೆಜ್ಜೆಯ ಪಯಣ ಎಡೆಬಿಡದೆ ಸಾಗಿದೆ.ಜೋಡಿ ನಯನದ ಒಂಟಿ ನೋಟ ಕ್ಷಣ ಕ್ಷಣಕ್ಕೂ ಮಗ್ಗುಲು ಹೊರಳಿಸಿದಂತೆ ಚಿತ್ರಣ ಬದಲಾಗುತಿದೆ.ಪ್ರತಿ ಚಿತ್ರಣದಲ್ಲೂ ಸಾವಿರಾರು ವಿಚಿತ್ರ ಭಾವಗಳ ಅಡಕಲು.ಪ್ರತಿ ನೋಟದಲು ಗೋಚರಿಸುವ ಅಗೋಚರ ಸೆಳೆತ.

ದಿಗಂತ ಬೇಧಿಸಿ ದಿಕ್ಕೆಟ್ಟು ಚಲಿಸಿದೆ,ದಿಕ್ಕು ಅರಿಯದೆ ಬೀಸುವ ಗಾಳಿಯಂತೆ.ಮರಳಿ ಬರದೆ ಕಳೆದು ಹೋಗಿದೆ ನಯನನೋಟ,ಪರಿವಿಡಿ ಪುಟ ಇರದ ಪುಸ್ತಕದಲ್ಲಿ ಕಳೆದುಹೋದ ಶಿರ್ಷಿಕೆಯಂತೆ.ಮತ್ತೆ ನಯನದಾರಿಗೆ ಒಡಲು ಸಾಗಿದೆ ತೀರ ಹುಡುಕುವ ಕಡಲ ನೀರಿನಂತೆ.

Read more from ಲೇಖನಗಳು
2 ಟಿಪ್ಪಣಿಗಳು Post a comment
  1. Kannadiga's avatar
    Kannadiga
    ಮಾರ್ಚ್ 30 2012

    Super…!

    ಉತ್ತರ
  2. karan's avatar
    karan
    ಏಪ್ರಿಲ್ 2 2012

    ಜಯಂತ್ ಕಾಯ್ಕಿಣಿ ಮುಂಬೈ ಬದುಕಿನ ಮೇಲೆ ಬರೆದ ಬರಹದಂತೆ ಮೂಡಿ ಬಂದಿದೆ.

    ಒಳ್ಳೆಯ ಬರಹ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments