ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 29, 2012

ಮಂಕುತಿಮ್ಮನ ಕಗ್ಗ – ರಸಧಾರೆ (೧೩)

‍ರಾಕೇಶ್ ಶೆಟ್ಟಿ ಮೂಲಕ

– ರವಿ ತಿರುಮಲೈ

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ?I
ಧರಣಿಗನುದಿನದ ರಕ್ತಾಭಿಷೇಚನೆಯೇ? II
ಕರವಾಲವನು ಪುಷ್ಪಸರವೆಂದು ಸೆಳೆದಾಡೆ I
ಪರಿಮಳವ ಸೂಸುವುದೆ ? – ಮಂಕುತಿಮಾ II

ಪುರುಷ=ಶಕ್ತಿ , ಪರಮ =ಸರ್ವೋಚ್ಚ, ಸಿದ್ಧಿ= ಪ್ರಯೋಜನ, ಧರಣಿ= ಭೂಮಿ, ಅನುದಿನ=ಪ್ರತಿನಿತ್ಯ ,
ಅಭಿಷೇಚನೆ = ಅಭಿಷೇಕ , ಕರವಾಲ=ಕತ್ತಿ,  ಸೆಳೆದಾಡೆ = ಎಳೆದಾಡಿದರೆ,   ಪರಿಮಳ = ಸುಗಂಧ.

ಪುರುಷ ಸ್ವತಂತ್ರತೆಯು ಪರಮ ಸಿದ್ಧಿಯದೇನು ಧರಣಿಗೆ ಅನುದಿನವೂ ರಕ್ತಾಭಿಷೇಚನೆಯೇ
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ-ಮಂಕುತಿಮ್ಮ.

ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.

ಪುರುಷ ಎಂದರೆ ಗಂಡಸು ಎನ್ನುವ ಅರ್ಥದಲ್ಲಿ ಸಾಮಾನ್ಯ ಬಳಕೆ. ಆದರೆ ವಾಸ್ತವದಲ್ಲಿ ಪುರುಷ ಎಂದರೆ ಶಕ್ತಿ ಎಂದು ಅರ್ಥ ” ಪುರೇ ಶಯತೀತಿ ಪುರುಷಃ ” ಚೇತನ ಎಂದು ಅಸ್ತಿತ್ವವನ್ನು ಸೂಚಿಸುವಾಗ, ಕ್ರಿಯಾಶೀಲತೆಯನ್ನು ಸೂಚಿಸುವಾಗ, ಚೈತನ್ಯ ಎಂದೂ ಕರೆಯಲಾಗುತ್ತದೆ. ಆದ್ದರಿಂದಲೇ ದೇವರನ್ನು ಸೂಚಿಸುವಾಗ ” ಪರಮ ಅಂದರೆ ಸರ್ವೋಚ್ಚ, ಪುರುಷ ಅಂದರೆ ಶಕ್ತಿ ಎಂಬ ಅರ್ಥದಲ್ಲಿ ” ಪರಮ ಪುರುಷ ” ಅಥವಾ ” ಪರಮಾತ್ಮ “ಎಂದು ಕರೆಯುತ್ತಾರೆ. ಒಟ್ಟಾರೆ, ಪುರುಷವೆಂದರೆ ಶಕ್ತಿ.  ಈ ಶಕ್ತಿಯ ಉಪಯೋಗ ರಕ್ಷಣೆಗೆ ಮಾತ್ರ. ಹೇಗೆ ಪರಮಪುರುಷನು ತನ್ನ ಸರ್ವೋಚ್ಚ ಶಕ್ತಿಯನ್ನು ಜಗದ್ರಕ್ಷಣೆಗೆ ವಿನಿಯೋಗಿಸುತ್ತಾನೋ ಹಾಗೆಯೇ, ಈ ಜಗತ್ತಿನಲ್ಲಿ ಹೆಚ್ಚು ಶಕ್ತಿ ಇರುವವರು ತಮಗಿಂತ ಕಡಿಮೆ ಶಕ್ತಿ ಇರುವವರನ್ನು ರಕ್ಷಿಸಬೇಕು ಮತ್ತು ಆ ಶಕ್ತಿಯನ್ನು ಕೇವಲ ಆತ್ಮ ರಕ್ಷಣೆ ಮತ್ತು ಇತರರನ್ನು ರಕ್ಷಿಸುವುದಕ್ಕಾಗಿಯೇ ಉಪಯೋಗಿಸಬೇಕು. ಇದು ಧರ್ಮ.

ಇಲ್ಲಿ ಶಕ್ತಿಯೆಂದರೆ ಕೇವಲ, ದೈಹಿಕ ಶಕ್ತಿಯಷ್ಟೇ ಅಲ್ಲ. ಎಲ್ಲ ರೀತಿಯ ಶಕ್ತಿಯೂ ಇದರ ಪರಿಧಿಯೊಳಕ್ಕೆ ಬರುತ್ತದೆ. ದೇಹ ಬಲ, ಧನಬಲ, ಜನಬಲ, ಅಧಿಕಾರ ಬಲ, ಬುದ್ಧಿ ಬಲ, ಇತ್ಯಾದಿ ಇತ್ಯಾದಿ… ಹೀಗೆ ಯಾವುದೇ ರೀತಿಯ  ಶಕ್ತಿಯ ಆಧಿಕ್ಯವಿದ್ದರೂ ಅದನ್ನು ಪರರ ರಕ್ಷಣೆಗೆ ಮಾತ್ರ ಉಪಯೋಗಿಸುವುದು ಧರ್ಮ.

ಆದರೆ ಅಂದಿನ ಮತ್ತು ಇಂದಿನ ವಾಸ್ತವತೆಯೇ ಬೇರೆ. ” ಹಿಂದಿಯಲ್ಲಿ ” ಜಿಸ್ಕಿ ಲಾಠಿ ಉಸ್ಕ್ತಿ ಭೈನ್ಸ್” ಎನ್ನುತ್ತಾರೆ. ಅಂದರೆ ಯಾರಕೈಯಲ್ಲಿ ಕೋಲು೦ಟೋ  ಅವನದೇ ಎಮ್ಮೆ” ಎಂದು ಯಾರಿಗೆ ಅಧಿಕ ಶಕ್ತಿ ಇದೆಯೋ ಅವನೇ  ರಾಜ. ತನಗೆ ಶಕ್ತಿ ಇದೆ. “ನಾನು ಏನನ್ನಾದರೂ ಮಾಡಬಹುದು, ನನ್ನು ಕೇಳುವವರಾರು, ಕೇಳಿದವರನ್ನು ಸದೆಬಡಿದುಬಿಡುತ್ತೇನೆ”  ಎನ್ನುವ ದುರಾಚಾರದ ಜನರೇ ಅಧಿಕವಾಗಿದೆ. ಇದು ಅಹಂಕಾರದ ಪರಮಾವಧಿ. ಎಲ್ಲ ಸಂಘರ್ಶಗಳೂ ಈ ಅಹಂಕಾರ ಜನಿತವಾದ ದಬ್ಬಾಳಿಕೆಯಿಂದಲೇ ನಡೆಯುತ್ತವೆ. ಇದು ತಪ್ಪು. ಇದರಿಂದ ಪ್ರತಿನಿತ್ಯದ  ರಕ್ತಪಾತ ಸಾವು ನೋವು ಮಾತ್ರ, ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅದಕ್ಕೊಂದು ಉಪಮೆಯನ್ನು ಕೊಡುತ್ತಾರೆ. ಹೂವಿನಮಾಲೆ ಎಂದು ಒರೆಯಿಂದ ಕತ್ತಿಯನ್ನು ಎಳೆದರೆ, ಅದು ಸುಗಂಧವನ್ನು ಬೀರುತ್ತದೆಯೇ.

ವಾಚಕರೆ  ನಮ್ಮಲ್ಲಿ ಶಕ್ತಿ ಇದ್ದರೆ ನಮ್ಮ ಅವಶ್ಯಕತೆಗೆ ಮೀರಿ ಶಕ್ತಿ ಇದ್ದರೆ, ಅದನ್ನು ಪರಹಿತಕ್ಕಾಗಿ ಉಪಯೋಗಿಸಬೇಕು. ಆ ಪರಮಾತ್ಮನ ಕೃಪೆಯಿಂದ ನಮಗೆ ಸಿಕ್ಕ ಅಧಿಕ ಶಕ್ತಿಯನ್ನು ನಮಗಿಂತ ಕಡಿಮೆ ಶಕ್ತಿ ಇರುವವರ ಒಳಿತಿಗಾಗಿ ಉಪಯೋಗಿಸಬೇಕು. ಹಾಗಾದಾಗ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದು ಇಡೀ ಸಮಾಜವೇ ವಾಸಿಸಲು ಒಂದು ಸುಂದರ ತಾಣವಾಗುತ್ತದೆ. ಇಂದಿನ ಸ್ವಾರ್ಥಭರಿತ ಸಮಾಜದಲ್ಲಿ ಎಂತೆಂತಹ ವಿಧ್ಯಮಾನಗಳು ನಡೆಯುತ್ತಿವೆ ಎಂದು ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಅದು ಸರ್ವರಿಗೂ ಗೊತ್ತಿರುವ ವಿಷಯವೇ. ಅದು ತಪ್ಪು. ಅದು ಸರಿಯಿಲ್ಲ ಎಂಬ ಅರಿವೂ ಎಲ್ಲರಿಗೂ ಇದೆ. ಹಾಗಾಗಿ, ವಾಚಕರೆ, ನಾವೂ ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ನಮ್ಮ ಶಕ್ತಿಯನ್ನು, ಸ್ವರಕ್ಷಣೆಗೆ ಉಪಯೋಗಿಸುವ, ಪರರ ರಕ್ಷಣೆಗೆ ಉಪಯೋಗಿಸುವ ಆದರೆ ದುರಾಸೆಗೆ ಸ್ವಾರ್ಥಕ್ಕೆ ಪರರ ಭಕ್ಷಣೆಗೆ ಉಪಯೋಗಿಸುವ ಬುದ್ಧಿ ನಮಗೆ ಎಂದೂ ಬರದಿರಲಿ ಎಂದು ಪ್ರಾರ್ಥಿಸುತ್ತ, ನಮ್ಮಲ್ಲಿ ಇರಬಹುದಾದ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ.

ಇದೆ ಭಾವಗಳೊಂದಿಗೆ ಬನ್ನಿ ನಾವು ನೀವು ಎಲ್ಲ ಮುಂದಿನ ಕಗ್ಗಕ್ಕೆ ಹೋಗೋಣ.

ಇಂದಿನ ದಿನ ಎಲ್ಲರೂ ಶಕ್ತಿವಂತರಾಗಿ ಮತ್ತು ಆ ಶಕ್ತಿಯನ್ನು ಪರಹಿತಕ್ಕಾಗಿ ಉಪಯೋಗಿಸುವ ಪಣ ತೊಡುವ.

ನಮಸ್ಕಾರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments