ವಿಷಯದ ವಿವರಗಳಿಗೆ ದಾಟಿರಿ

ಜನವರಿ 13, 2012

1

‘ಚಿತ್ತಗಾಂಗ್’ನಲ್ಲಿ ಸ್ವಾತಂತ್ರ್ಯ’ಸೂರ್ಯ’ನ ಉದಯ…!

‍ನಿಲುಮೆ ಮೂಲಕ

– ಭೀಮಸೇನ್ ಪುರೋಹಿತ್

‘ಚಿತ್ತಗಾಂಗ್’ ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ ‘ಬಾಂಗ್ಲಾದೇಶ’ದಲ್ಲಿದೆ..

ಅವನ ಹೆಸರು ‘ಸೂರ್ಯಸೇನ್’. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ ‘ಮಾಸ್ಟರ್ ದಾ’.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ…ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ ‘ಅನುಶೀಲನ ಸಮಿತಿ’ ಮತ್ತು ‘ಜುಗಾಂತರ’ ದಿಂದ ಪ್ರಭಾವಿತನಾಗಿದ್ದ..

ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..

ಸುಮಾರು ೬೦ ವಿದ್ಯಾರ್ಥಿಗಳ ದೊಡ್ಡ ಸೈನ್ಯವೆ ತಯಾರಾಯ್ತು.

ಗಣೇಶ್ ಘೊಶ್,ಅನಂತ ಸಿಂಹ,ನಿರ್ಮಲ್ ಸೇನ್,ಲೊಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವದ್ದೆದಾರ್, ಕಲ್ಪನಾ ದತ್ತ ಇವರ ಮುನ್ದಾಳತ್ವದಲ್ಲಿ ಅನೆಕ ಪಡೆಗಳನ್ನು ಸೂರ್ಯಸೇನ್ ರಚಿಸಿದ. ಹರಿಗೊಪಾಲ್ ಬಲ್(ಟೆಗ್ರ), ದೇವಪ್ರಸಾದ್ ಗುಪ್ತಾ, ಆನಂದಪ್ರಸಾದ ಗುಪ್ತಾ, ಹರಿಪಾದ ಚಕ್ರವರ್ತಿ, ಜಿಬನ್ ಘೋಶಾಲ್ ಮುಂತಾದ ಉತ್ಸಾಹಿ ತರುಣರು ಆ ಪಡೆಗಳಲ್ಲಿದ್ರು.

ಪ್ರತಿ ಪಡೆಗೂ ಒಂದೊಂದು ಕೆಲಸ ನೀಡಲಾಯಿತು.

ಅದು ಎಪ್ರಿಲ್ 18 – 1930. ಸೂರ್ಯಸೇನನ ಪ್ಲಾನಿನಂತೆ ಅವತ್ತು ರಾತ್ರಿ 10 ಗಂಟೆಗೆ ಸರಿಯಾಗಿ, ಒಮ್ಮೆಲೇ ಚಿತ್ತಗಾಂಗ್ ನ ಎಲ್ಲ ಆಂಗ್ಲ ಕಛೇರಿಗಳ ಮೇಲೆ ದಾಳಿ ಮಾಡಲಾಯಿತು..

ಪೂರ್ವ ಯೋಜಿತದಂತೆ, ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ ‘ಅರೆಸೈನ್ಯ’ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ.

ಈ ಎಲ್ಲ ಕಾರ್ಯಗಳ ನಂತರ, ಸೂರ್ಯಸೇನನ ನಾಯಕತ್ವದಲ್ಲಿ, ಪೋಲಿಸ್ ಶಸ್ತ್ರಾಗಾರದ ಮುಂದೆ ಎಲ್ಲರೂ ಸೇರಿ, ಅಲ್ಲೇ ಭಾರತದ ಬಾವುಟ ಹಾರಿಸಿ, “ವಂದೇ ಮಾತರಂ” ಹೇಳಿ, ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು..

ಆನಂತರ, ಚಿತ್ತಗಾಂಗ್ ನ ಪರ್ವತಶ್ರೇಣಿಗಳಲ್ಲಿ ಕ್ರಾಂತಿಕಾರಿಗಳು ಅಡಗಿಕೊಂಡರು. ಆದರೆ ಸುಳಿವನ್ನು ಹಿಡಿದು ಬೆನ್ನುಹತ್ತಿದ ಆಂಗ್ಲರು, ಇಡೀ ಆ ಪರ್ವತವನ್ನು ಸುತ್ತುವರೆದರು.

ಸುಮಾರು 80 ಬ್ರಿಟಿಶ್ ಪಡೆಗಳ ಜೊತೆಗೆ, ಆ ಪುಟ್ಟ ವಿದ್ಯಾರ್ಥಿಗಳ ಪಡೆ ಗುಂಡಿನ ದಾಳಿ ನಡೆಸಿತು.. 12 ಜನ ಆ ಹೋರಾಟದಲ್ಲಿ ಮೃತರಾದರು. ಕೆಲವರು ಕಲ್ಕತ್ತೆಗೆ ಓಡಿಹೋದರು. ಸೂರ್ಯಸೇನ್ ಮಾತ್ರ ವೇಷಮರೆಸಿಕೊಂಡಿದ್ದ..!!

ಇದಾದ ಮೇಲೆ, ಅಜ್ಞಾತ ಮನೆಯೊಂದರಲ್ಲಿ ಅಡಗಿದ್ದಾಗ, ಬ್ರಿಟಿಷರ ದಾಳಿಗೆ ‘ನಿರ್ಮಲ್ ಸೇನ್’ ಬಲಿಯಾದ. ನಂತರ ಪ್ರೀತಿಲತಾ, ಊರಿನ “ಯುರೋಪೆಯನ್ ಕ್ಲಬ್’ ಮೇಲೆ ದಾಳಿ ನಡೆಸಿ, ದುಷ್ಟ ಆಂಗ್ಲರನ್ನು ಕೊಂದು, ತಾನೂ ಹುತಾತ್ಮಳಾದಳು..

ಆದರೂ ಕೊನೆಗೆ, ‘ನೇತ್ರ ಸೇನ್’ ಎಂಬ ದ್ರೋಹಿಯ ಕಾರಣದಿಂದ, ಸೂರ್ಯಸೇನ್ ಬಂಧಿತನಾಗಿಬಿಟ್ಟ.. ಆ ಸಿಟ್ಟಿಗೆ, ಉಳಿದ ಕ್ರಾಂತಿ ಯುವಕರು ಆ ಮನೆಮುರುಕನನ್ನು ಕೊಂದು, ದೇಶದ್ರೋಹಕ್ಕೆ ಸಾವೇ ಶಿಕ್ಷೆ ಅನ್ನೋದನ್ನ ತೋರಿಸಿದರು..ಬಂಧಿತ ಸೂರ್ಯಸೇನನ ವಿಚಾರಣೆ ನಡೆದು, ಅವನಿಗೆ ಮತ್ತು ಜುಗಾಂತರ ಪಾರ್ಟಿಯ “ತಾರಕೆಶ್ವರ ದಸ್ತಿದಾರ್’ ಇಬ್ರಿಗೂ ಗಲ್ಲು ಶಿಕ್ಷೆ ಪ್ರಕಟಿಸಲಾಯಿತು..

ಜನವರಿ 12 ರಂದು ಅವರನ್ನು ನೇಣು ಹಾಕಲಾಯಿತು..

ಆದರೆ, ಗಲ್ಲಿಗೆರಿಸುವುದಕ್ಕಿಂತ ಮುಂಚೆ, ಸೂರ್ಯಸೆನನನ್ನು ಅಮಾನುಷವಾಗಿ ಬ್ರಿಟಿಷರು ಹಿಂಸಿಸಿದರು..

ಹ್ಯಾಮರ್ ನಿಂದ ಅವನ ಹಲ್ಲುಗಳನ್ನು ಒಡೆದರು. ಕಟಿಂಗ್ ಪ್ಲೇಯರ್ ನಿಂದ ಅವನ ಉಗುರುಗಳನ್ನ ಕೀಳಲಾಯಿತು.. ತೊಡೆಯ ಸಂದಿಗಳಲ್ಲಿ ತಿವಿದರು. ಕೈಕಾಲಿನ ಕೀಲುಗಳನ್ನ ಮುರಿದರು. ಇಂಥಾ ಹಿಂಸೆಯಿಂದ ಮೂರ್ಚೆ ಹೋಗಿದ್ದ ಸೂರ್ಯಸೇನನನ್ನು ಅನಾಮತ್ತಾಗಿ ಎಳೆದುಕೊಂಡು ಬಂದು ನೇಣಿಗೇರಿಸಿದರು.

ಸಾವಿಗೂ ಮುಂಚೆ, ಆತ ತನ್ನ ಯುವಕರಿಗೆ ಪತ್ರವೊಂದನ್ನು ಬರೆದಿದ್ದ..

” ಸಾವು ನನ್ನನ್ನು ಆಲಂಗಿಸುತ್ತಿದೆ.. ಆ ಅನಂತದೆಡೆಗೆ ನಾನು ಹೊರಟಿದ್ದೇನೆ.. ಮಾತೃಭೂಮಿಗೆ ಪ್ರಾಣ ಕೊಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ, ನಾನು ನಿಮಗೆ ನೀಡುವ ಆದೇಶ ಒಂದೇ. ಅದು ನನ್ನ ದೇಶದ “ಸ್ವರಾಜ್ಯ”ದ ಕನಸು. ಚಿತ್ತಗಾಂಗ್ ನ ಕ್ರಾಂತಿಯನ್ನು ಎಂದಿಗೂ ಮರೆಯಬೇಡಿ.. ನಿಮ್ಮ ಮನದಲ್ಲಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲ ವೀರರ ಹೆಸರನ್ನು ರಕ್ತದಲ್ಲಿ ಬರೆದುಕೊಳ್ಳಿರಿ.. ಮತ್ತು ಸ್ವಾತಂತ್ರ್ಯ ಸಿಗೋವರೆಗೂ ಹೋರಾಟ ನಿಲ್ಲಿಸದಿರಿ..”

ಅವನ ಶಿಷ್ಯರೆನೋ, ಹುತಾತ್ಮರ ಹೆಸರನ್ನು ಸ್ಮರಿಸಿ, ಅದರಂತೆ ಹೋರಾಡಿ ದೇಶವನ್ನು ಬಿಡುಗಡೆಗೊಳಿಸಿದರು..ಆದರೆ, ನಾವು ನಮ್ಮ ಹೃದಯದಾಳದಲ್ಲಿ, ಆ ತ್ಯಾಗಮಯಿಗಳ ಹೆಸರನ್ನು ಬರೆದುಕೊಳ್ಳಲೆ ಇಲ್ಲವಲ್ಲ..!!!!!!!

ಇದೇ ಚಿತ್ತಗಾಂಗ್ ಹೋರಾಟವನ್ನು ಆಧರಿಸಿ ಆಶುತೋಷ್ ಗೊವಾರಿಕರ್ ಅವ್ರ ನಿರ್ದೇಶನದಲ್ಲಿ, “ಖೇಲೇ ಹಂ ಜೀ ಜಾನ್ ಸೆ” ಎಂಬ ಅದ್ಭುತ ಚಿತ್ರ ತೆರೆಕಂಡಿತ್ತು. ಆದರೆ ಡಾನ್-2, ಬಾಡಿಗಾರ್ಡ್ ಮುಂತಾದ ಚಿತ್ರವನ್ನು ನೋಡುವ ನಮ್ಮ ಯುವಕರು ಇಂಥಾ ಅಪರೂಪದ ಚಿತ್ರವನ್ನು ಪ್ರೋತ್ಸಾಹಿಸಲಿಲ್ಲ.( ಅದೆಷ್ಟೋ ಮಂದಿಗೆ ಇಂಥಾ ಸಿನೆಮಾ ಇದೆ ಅನ್ನೋದೇ ಗೊತ್ತಿಲ್ಲ.)
ನಿನ್ನೆ ಸೂರ್ಯ ಸೇನರು ಹುತಾತ್ಮರಾದ ದಿನ,ಆ ವೀರ ಚೇತನಕ್ಕೆ ಭಾವಪೂರ್ಣ ಶ್ರಧಾಂಜಲಿ..

ವಂದೇ ಮಾತರಂ

1 ಟಿಪ್ಪಣಿ Post a comment
  1. ಮಂಜುನಾಥ್.ಆರ್'s avatar
    ಮಂಜುನಾಥ್.ಆರ್
    ಏಪ್ರಿಲ್ 16 2012

    ಮಹನ್ ವ್ಯಕ್ತಿಯ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು

    ಉತ್ತರ

Leave a reply to ಮಂಜುನಾಥ್.ಆರ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments