ವಿಷಯದ ವಿವರಗಳಿಗೆ ದಾಟಿರಿ

ಜನವರಿ 18, 2012

13

ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು :ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !

‍parupattedara ಮೂಲಕ

-ರವಿ ಮೂರ್ನಾಡು

 ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ  ನನ್ನಲ್ಲಿತ್ತು.  ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!

ಇಲ್ಲಿನ ಡ್ವಾಲಾ  ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2007 ರಲ್ಲಿ ಕಾಲಿಟ್ಟು ಪಾಸ್‍ಪೋರ್ಟಿಗೆ ಮುದ್ರೆಯೊತ್ತಿ ಲಗ್ಗೇಜು ವಿಲೇವಾರಿಗೆ ಬರುವಾಗಲೇ ಈರ್ವರು ಹಿಂದೆಯೇ ಬಂದರು. “ ನಾನು ಕಸ್ಟಂ ಅಧಿಕಾರಿ, ನಿಮ್ಮ ಬ್ಯಾಗ್ ಚೆಕ್‍ ಮಾಡಬೇಕು, ಸ್ವಲ್ಪ ಈ ಕಡೆ ಬನ್ನಿ” ಅಂದರು. ಅರೆ..! ಅಧಿಕಾರಿಯಾಗಿದ್ದರೆ ಮರೆಗೆ ಕರೆಯುವ ಆಲೋಚನೆ ಏನು ಅಂತ ಯೋಚಿಸಿದ್ದೆ. ಇಲ್ಲಿನ ಐದು ಸಾವಿರ ಕ್ಯಾಮರೂನ್ ಫ್ರಾಂಕ್ ಕೊಟ್ಟರೆ ತಕರಾರಿಲ್ಲ ಅಂದರು. ಅಲ್ಲಿಯೇ ನಮ್ಮ ಕಂಪೆನಿಯ ವಾರೀಸುದಾರರು ಮಧ್ಯೆ ಬಂದಿದ್ದರಿಂದ ಆ ಪೀಡನೆಯಿಂದ ಪಾರಾದೆ. ಅಮಾನುಷ ಕೃತ್ಯಗಳ ಹೆಣಗಳ ವಾಸನೆ ನನ್ನ ಮೂಗಿಗೆ ಆಗಲೇ ಬಡಿದಿದೆ. ಹಣ ಕೊಟ್ಟರೆ ಕಾನೂನುಗಳು ಇಲ್ಲಿ ನಮ್ಮ ಕೈಗೆ ಬರುತ್ತವೆ.  ಹಾಗಂತ ಹಣಕ್ಕೆ ಬಾಯ್ಬಿಟ್ಟ ನಡೆದಾಡುವ ಹೆಣಗಳೇ ಇಲ್ಲಿನ ಮನುಷ್ಯರು. ಭಾರತದಲ್ಲಿ ಇಂತಹದ್ದು ಬೇಕಾದಷ್ಟು ನಡೆಯುತ್ತವೆ. ಅದನ್ನು ಪ್ರಶ್ನಿಸುವ ಜನರಿದ್ದಾರೆ ಅನ್ನುವ ಸಮಾಧಾನ. ಇಲ್ಲಿ ಕೇಳುವವರು, ಕೊಡುವವರು ಎಲ್ಲರೂ  ಕಳ್ಳರೇ ಅಂದಾಗ ಸತ್ಯಕ್ಕೂ ಹಲ್ಲು ಕಿರಿಯಲು ನಾಚಿಕೆ…!

ಒಮ್ಮೆ 2008 ರಲ್ಲಿ ಹಾಗೇ ಆಯಿತು.  ವಾರ್ಷಿಕ ಲೆಕ್ಕಪತ್ರಗಳ  ಅಂತಿಮ ತಪಾಣೆಯ ಪರಿಶೀಲನೆ. ಅದು ಡಿಸೆಂಬರ‍್ ತಿಂಗಳ ಕ್ರಿಸ್‍ಮಸ್ ದಿನಗಳು. ಆಡಿಟರ‍್ ಕಚೇರಿ ನಮ್ಮ  ಕಚೇರಿಯಿಂದ ಅನತಿ ದೂರದಲ್ಲಿದೆ. ಈ ರಸ್ತೆ ಭಾರೀ ಜನಜಂಗುಳಿ. ಇವರಲ್ಲಿ  ಕಳ್ಳರು ಯಾರೂ ಅಂತ ಗೊತ್ತಾಗುವುದಿಲ್ಲ. ಕಪ್ಪು ಜನರು, ಎಲ್ಲರೂ ಒಂದೇ ರೀತಿ ಕಾಣುತ್ತಿದ್ದರು. ಕಳ್ಳರ ಉಪಟಳವಿರುವುದರಿಂದ 100 ಮೀಟರ್ ಹೋಗಬೇಕಾದರೂ ಕಂಪೆನಿಯ ಕಾರಿನಲ್ಲಿ ಹೋಗುವುದೇ ಎಲ್ಲರೂ ರೂಢಿಸಿಕೊಂಡಿರುವ ವಾಡಿಕೆ. ಧಾಳಿ ಮಾಡಿದಾಗ ಎಲ್ಲರೂ ಮುಂಜಾಗ್ರತೆಯಾಗಿ  ಜೀವ ರಕ್ಷಿಸಿಕೊಳ್ಳಲು ಇಲ್ಲಿನ 10 ಸಾವಿರ  ಕ್ಯಾಮರೂನ್ ಫ್ರಾಂಕ್ (ಭಾರತದ 1000 ರೂ.) ಯಾವಾಗಲೂ ಇಟ್ಟಿರುತ್ತಾರೆ. ಹಾಗೇ ನಾನು ಇಟ್ಟಿದ್ದೆ. ಸಾಮಾನ್ಯವಾಗಿ ಮೊಬೈಲ್-ವಾಚುಗಳನ್ನು ಯಾರಿಗೂ ಗೋಚರಿಸಿದಂತೆ ಜೇಬಿನೊಳಗೇ ಇಟ್ಟು ಸಂಚರಿಸುವುದು. ನಡು ಮಧ್ಯಾಹ್ನ ಆಡಿಟರ್ ಕಚೇರಿಯಿಂದ  ಹೊರಬಿದ್ದು ನಮ್ಮ ಕಚೇರಿಗೆ ಬರುವ ತುರಾತುರಿಯಲ್ಲಿ  ಅ ಜನಜಂಗುಳಿ ರಸ್ತೆಯಲ್ಲಿ ನಡೆದೇ ಬರುತ್ತಿದ್ದೆ. . ಯಾರದೋ ಬ್ಯಾಂಕ್ ಅಧಿಕಾರಿಯ ಕರೆ ಬಂತು. ಮೊಬೈಲ್ ಹಿಡಿದು ಮಾತಾಡಿ, ಹಾಗೆಯೆ ಕೈಯಲ್ಲಿ ಹಿಡಿದಿದ್ದೆ. ಈ ರಸ್ತೆಗೆ ಮಧ್ಯೆ ಹಾದು ಹೋಗುವ ತಿರುವಿಗೆ ಬರುತ್ತಿದ್ದಂತೆ ,ಯಾರೋ ಸ್ಪರ್ಶಿದ ಅನುಭವಾಯಿತು. ತಿರುಗಿ ನೋಡಿದೆ.  ವ್ಯಕ್ತಿಯೊಬ್ಬ ಓಡುತ್ತಿದ್ದಾನೆ. ನನ್ನ ಕೈ ನೋಡಿದೆ, ಮೊಬೈಲ್ ಇಲ್ಲದೆ ಖಾಲಿಯಾಗಿತ್ತು. ಅಷ್ಟು ನಾಜೂಕಾಗಿ ಅವನು ಕಿತ್ತಿದ್ದ. ಕಿರುಚಿದೆ…! ದಾರಿ ಹೋಕರು ನನ್ನನ್ನೇ ನೋಡುತ್ತಿದ್ದರು. ಕೆಲವರು ನಗುತ್ತಿದ್ದರು. ಮುಜುಗರ ಅನ್ನಿಸಿತು. ಆ ಕಳ್ಳ ಸರಕ್ಕನೇ ಪಕ್ಕದ ಗಲ್ಲಿಯಲ್ಲಿ  ನನ್ನ ಮೊಬೈಲ್‍ನೊಂದಿಗೆ ಮರೆಯಾದ.  ಯಾರದೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅವರ ಪಾಡಿಗೆ ಅವರು ನನ್ನ ಪಕ್ಕದಲ್ಲೇ ನಡೆದು ಹೋಗುತ್ತಿದ್ದರು. ಹಾಡ ಹಗಲಲ್ಲೇ ಇಂತಹ ಕಸಿದುಕೊಳ್ಳುವ ಘಟನೆ ಇಲ್ಲಿ ಸರ್ವೇ ಸಾಮಾನ್ಯ.  ! ಹಾಗಾಗಿ, ಎಲ್ಲರೂ ಕಳ್ಳನನ್ನು ನೋಡುವ ಬದಲು ನನ್ನನ್ನೇ ನೋಡುತ್ತಿದ್ದರು.

ಘಟನೆ ನಡೆದು ಮೂರು ದಿನಗಳಾಗಿಲ್ಲ.  ಒಂದು ಬೆಳಿಗ್ಗೆ ಕಚೇರಿಗೆ ಕರೆ ಬಂತು. ನಮ್ಮ ಕಚೇರಿಯ ಕ್ಯಾಷಿಯರ್ ಸಂಜೆ 5.30 ಗಂಟೆಗೆ ಕೆಲಸ ಮುಗಿಸಿ ಟ್ಯಾಕ್ಸಿ ಕಾರಿನಿಂದ ಇಳಿದು ಸ್ವಲ್ಪ ದೂರದಲ್ಲೇ ಇರುವ ಮನೆಗೆ ನಡೆದು ಹೋಗುತ್ತಿದ್ದಳು.  ಅವಳಲ್ಲಿ ತಿಂಗಳ ಸಂಬಳದ ಹಣವೂ ಇತ್ತು. ಮನೆ ಪಕ್ಕದಲ್ಲೇ ದಾಳಿಗಿಳಿದ ಲೂಟಿಗಾರರು ಹಣಕ್ಕೆ ಪೀಡಿಸಿದ್ದರು. ಈ ಹೆಂಗಸು ವಾಗ್ಯುದ್ದಕ್ಕೆ ನಿಂತಳು. ಬೊಬ್ಭೆ ಹಾಕುತ್ತಿದ್ದಂತೆ ಚಾಕು ತೆಗೆದು ಅವಳ ಮೂಗು ಮತ್ತು ಬಾಯಿಯನ್ನು ಸೀಳಿಯೇ ಬಿಟ್ಟರು. ರಕ್ತದ ಓಕುಳಿ..! ಹಣ-ಮೊಬೈಲ್‍ನೊಂದಿಗೆ ಪರಾರಿಯಾದರು. ಈ ಹೆಂಗಸು ಮಾರಕ ಚೂರಿ ಇರಿತದಿಂದ ಎರಡು ತಿಂಗಳು ಕಚೇರಿಗೇ ಬರಲಿಲ್ಲ. ಇಂತಹದ್ದು ಬೇಕಾದಷ್ಟು ನಮ್ಮ  200 ಕ್ಕಿಂತಲೂ ಅಧಿಕ  ಕೆಲಸದವರಿಂದ ತುಂಬಿರುವ ಕಂಪೆನಿಯ ದೈನಂದಿನ ಘಟನೆಗಳ ಮಾತುಗಳು. ಕೇಳಿ ಭಯಭೀತನಾಗಿದ್ದೆ. ಎಚ್ಚರವೂ ವಹಿಸಿದ್ದೆ. ನನಗೆ ಸಿಕ್ಕಿದ ಸಲಹೆ ಎಂದರೆ,ದಾಳಿ ನಡೆಸುವ ಸಂದರ್ಭ ಏನೂ ಮಾತಾಡಬಾರದು. ದಾಳಿಕೋರರು ಕೇಳಿದ್ದನ್ನು ಕೊಟ್ಟು ಬಿಡಬೇಕು. ವಾಗ್ಯುದ್ಧಕ್ಕೆ ನಿಂತರೆ ಖಂಡಿತಾ ಜೀವಕ್ಕೆ ಆಪತ್ತು. ಮನುಷ್ಯರನ್ನು ಮನುಷ್ಯರೇ  ಬೀಭತ್ಸವಾಗಿ ಹರಿತವಾದ ಚೂರಿಗಳಿಂದ ಕತ್ತರಿಸುವುದು. ಅಂದರೆ, ಮನುಷ್ಯರು ಮತ್ತು ಹರಕೆಗೆ ಕತ್ತು ಕುಯ್ಯುವ ಕೋಳಿ-ಕುರಿಗಳಿಗಗೂ ವ್ಯತ್ಯಾಸವಿಲ್ಲ ಅಂತ ಗೊತ್ತಾಯಿತು. ಇದು ಹಗಲು ಲೂಟಿ ಎಂಬ ನಡೆದಾಡುವ ಹೆಣಗಳ ನೈಜ ಸ್ಪಷ್ಟ ಜೀವನಗಾಥೆ.!

ದಿನಗಳ ಸಂಜೆಗಳು ಇಲ್ಲಿ ಭಯಾನಕ..!  ಅದು ಆರರ ನಂತರ ಹಗಲು ಲೂಟಿಗಳು ಸರ್ವೇ ಸಾಮಾನ್ಯ. ಕ್ಯಾಮರೂನಿನ ಡ್ವಾಲಾದಲ್ಲಿ ಮಾತ್ರ ಇದು ದೈನಂದಿನ ಚಟುವಟಿಕೆ. ಒಂದಂತೂ ಹೆಣ ರಸ್ತೆಯಲ್ಲಿ ಬೀಳುತ್ತವೆ. ದಿನಕ್ಕೆ ಹತ್ತಂತೂ ಮುಖ-ಕಾಲು-ಕೈಗಳು ಹಿಗ್ಗಾಮುಗ್ಗಾ ಕತ್ತರಿಸಿಕೊಂಡು ಹೆಣಗಳ ಕಪಾಟಿನಂತಿರುವ ಇಲ್ಲಿನ ಆಸ್ಪತ್ರೆಗಳಲ್ಲಿ  ಬಿದ್ದಿರುತ್ತವೆ. ಮುಟ್ಟಬೇಕಾದರೂ ಮುಟ್ಟಿದವರೆಲ್ಲರಿಗೂ ಕೈ ಬಿಸಿ ಮಾಡಬೇಕು. ಇಲ್ಲದಿದ್ದರೆ ಬದುಕುವ ಜೀವವೂ ಹೆಣವಾಗುತ್ತವೆ. ಅಂತಹ ಸಾಯುವವರ ಸಂಖ್ಯೆಗೆ ಇಲ್ಲಿ ದಾಖಲೆಯಿಲ್ಲ. ಇದು  ಲೂಟಿಗಾರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ  ಕ್ಯಾಮರೂನ್ ಜೀವನ ಪುಟ. ಫ್ರೇಂಚ್ ಭಾಷೆಯಲ್ಲಿ ಈ ಹಗಲು ಲೂಟಿಗಾರರ ಗುಂಪಿಗೆ ” ನಗಾ ಬೋಕು” ಅನ್ನುತ್ತಾರೆ.  ಕಳ್ಳನಿಗೆ ” ಬಾಂದಿ ” ಅನ್ನುತ್ತಾರೆ. ರಸ್ತೆಯ ಎಲ್ಲೆಂದರಲ್ಲಿ ಇವರ ಓಡಾಟ ನೊಣಗಳಂತೆ ಕಂಡು ಬರುತ್ತವೆ. ಸಂಜೆಯಾದಂತೆ ಚಟುವಟಿಕೆ ಮೈ ಸೆಟೆದುಕೊಳ್ಳುವೆ.

ಸಾಮಾನ್ಯವಾಗಿ ಇಲ್ಲಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ನಡೆಯುತ್ತವೆ ಜಗಜ್ಜಾಹೀರು ಲೂಟಿ ಪ್ರಸಂಗ . ಕ್ರಿಸ್‍ಮಸ್‍ ಹಬ್ಬದ ಸಂಭ್ರಮದಲ್ಲಿ  ವ್ಯಾಪಾರ ವಹಿವಾಟುಗಳು ಹೆಚ್ಚು. ಜನರ ಓಡಾಟವೂ ಹೆಚ್ಚು. ದಾರಿ ಮಧ್ಯೆಯೂ ನಡು ಹಗಲಲ್ಲಿ  ನೇರವಾಗಿ ಹಣಕ್ಕಾಗಿ ದಾಳಿ ನಡೆಯುತ್ತದೆ. ಟ್ಯಾಕ್ಸಿ ಕಾರುಗಳಲ್ಲಿ ಸಹ ಪ್ರಯಾಣಿಕರೊಂದಿಗೆ ಹೋಗುವಾಗ ಯಾರು ಲೂಟಿಗಾರ ಎಂದೇ ತಿಳಿಯುವುದಿಲ್ಲ. ಕಾರಿನೊಳಗೆ ನೇರವಾಗಿ ಕುತ್ತಿಗೆಗೆ ಚಾಕು ಇಟ್ಟು ಬಿಡುತ್ತಾರೆ. ಜೊತೆಗೆ ಚಾಲಕನಿಗೂ. ಬೊಬ್ಬೆ ಹೊಡೆಯುವಂತಿಲ್ಲ, ಏನೂ ಮಾತಾಡುವಂತಿಲ್ಲ. ಕೈಯಲ್ಲಿರುವ ಏನೆಲ್ಲಾ ಬೆಲೆಬಾಳುವ ವಸ್ತುಗಳುಂಟೋ ಕೊಟ್ಟು ಬಿಟ್ಟರೆ, ಜೀವ ಬಿಟ್ಟು ಕಾರಿನಿಂದ ಇಳಿದು ಅಲ್ಲೇ ಇರುವ ಗಲ್ಲಿಯಲ್ಲಿ ಮರೆಯಾಗುತ್ತಾರೆ.

ಟ್ಯಾಕ್ಸಿ ಕಾರುಗಳಿಗಿಂತ ಬೈಕ್ ಬಾಡಿಗೆದಾರರು ಕ್ಯಾಮರೂನಿನಲ್ಲಿ ಹೆಚ್ಚು. ಒಮ್ಮೆಗೇ ಮೂರು ಮಂದಿಯನ್ನೂ ಡ್ವಾಲಾದ ಎಲ್ಲೆಂದರಲ್ಲಿ ಹೊತ್ತು ಸಾಗುತ್ತಾರೆ. ಫ್ರೇಂಚ್‍ ಭಾಷೆಯಲ್ಲಿ ” ಬೆನ್ಸ್ ಕಿನ್‍” ಅಂತ ಇವರುಗಳಿಗೆ ಹೆಸರು. ಹಗಲು ಲೂಟಿಗಾರರ ಗುಂಪಿನಲ್ಲಿ ನೇರ ಸಂಪರ್ಕ ಹೊಂದಿರುವವರು ಇವರೇ. ಅದೇ ರೀತಿ ಇವರೇ ಹೆಚ್ಚಿನ ಪಾಲು ಲೂಟಿಗಾರರಾಗಿದ್ದಾರೆ. ರಸ್ತೆ ಬದಿಯ ಪ್ರಯಾಣಿಕರನ್ನು ತಲಪಿಸುವ ಸ್ಥಳಕ್ಕೆ ಕೊಂಡೊಯ್ಯುವ ನಾಟಕವಾಡಿ ಜನನಿಬಿಡ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ. ಲೂಟಿ ಮಾಡಿ ಅಲ್ಲೇ ಪ್ರಯಾಣಿಕರನ್ನು ಬಿಟ್ಟು ಪರಾರಿಯಾಗುತ್ತಾರೆ. ಅಥವಾ ಲೂಟಿಗಾರ ಗುಂಪಿಗೆ ಸೂಚನೆ ಕೊಡುತ್ತಾರೆ. ಸ್ಥಳಕ್ಕೆ  ತಲಪಿದಂತೆ ,ಸೂಚಿಸಿದ ಲೂಟಿಗಾರರು ದಾಳಿ ಪ್ರಾರಂಭಿಸುವಾಗ  ಪರಾರಿಯಾಗುತ್ತಾರೆ. ಈ ಟ್ಯಾಕ್ಸಿ ಕಾರು ಲೂಟಿ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸುವವರು ರೂಪವತಿ ಯುವತಿಯರು ಮತ್ತು ಹೆಂಗಸರು. ಪ್ರಯಾಣಿಕರು ತುಂಬಿರುವ ಟ್ಯಾಕ್ಸಿ ಕಾರುಗಳನ್ನು ತಡೆದು ಜನನಿಬಿಡ ಪ್ರದೇಶದ ವಿಳಾಸ ಚಾಲಕನಿಗೆ ಕೊಟ್ಟು ಲೂಟಿಗಾರರೊಂದಿಗೆ ಕೈ ಜೋಡಿಸುತ್ತಾರೆ. ಅದೇ ರೀತಿ ಟ್ಯಾಕ್ಸಿ ಕಾರು ಚಾಲಕರು ಲೂಟಿ ಪ್ರಕರಣಗಳಲ್ಲಿ ಹಿಂದೆ ಉಳಿದಿಲ್ಲ. ಒಂದೊಕ್ಕೊಂದು ಸಂಪರ್ಕದೊಂದಿಗೆ ಕೈ ಜೋಡಿಸಿದ ಜೀವನ ಇವರದ್ದಾಗಿದೆ.

ನನ್ನನ್ನು ಹೆಣ ಮಾಡಿದ ಪ್ರಸಂಗ ನೋಡಿ..!  ಅದು ಸಂಜೆ ಆರರ ಸಮಯ. 2009 ರ ಡಿಸೆಂಬರ್ ಭರ್ಜರಿ ಕ್ರಿಸ್‍ಮಸ್‍ ಸಡಗರ. ನಮ್ಮ ಕಚೇರಿ ಡ್ವಾಲಾದ ಅಕ್ವಾ ಅನ್ನುವ ಸ್ಥಳದಲ್ಲಿದೆ.ಇಲ್ಲಿಂದ  2 ಕೀ.ಮೀ.ದೂರದ ಬೊನಂಜೋ ಅನ್ನುವ  ಜಾಗಕ್ಕೆ ಔಷಧಿ ಖರೀದಿಸಲು ತಕ್ಷಣವೇ ಹೋಗಬೇಕಾಗಿತ್ತು. ನಮ್ಮ ಕಂಪೆನಿಯ ಬೈಕೊಂದರಲ್ಲಿ  ಸಹ ಉದ್ಯೋಗಿಯೊಂದಿಗೆ ಹೊರಟೆ. ಹಿಂಬದಿಗೆ ಕುಳಿತ ನಾನು, ಅವನು ಬೈಕ್‍ ಚಾಲಿಸುತ್ತಿದ್ದ.  ಅಕ್ವಾದಿಂದ  ಬೊನಂಜೋವರೆಗಿನ  ಅರ್ಧದಷ್ಟು ದಾರಿ ಸಂಪೂರ್ಣ ಜನಜಂಗುಳಿ. ಅದರ ನಂತರ ಸ್ವಲ್ಪ  ನಿರ್ಜನ ಪ್ರದೇಶ. ಅಲ್ಲೇ ಒಂದು ಬೃಹದಾಕಾರದ ವೃತ್ತವಿದೆ. ವಾಹನ ಓಡಾಟ ಭರ್ಜರಿಯಾಗಿ ನಡೆಯುತ್ತಿತ್ತು. ಅಂದಾಜು ಅಳತೆಯ ಜನರ ಚಲನೆಯೂ ಇತ್ತು. ಅವರ ನಡುವೆ ಕೊಲೆಗಡುಕ ಇದ್ದ ಅನ್ನುವ ಅನುಮಾನವೂ ನಮ್ಮಿಬ್ಬರಿಗೂ ಇರಲಿಲ್ಲ. ವೃತ್ತವನ್ನು ಆವರಿಸಿದ ರಸ್ತೆ ಸ್ವಲ್ಪ ಇಳಿಜಾರು. ಬೈಕನ್ನು ಈತ ನ್ಯೂಟ್ರೋಲ್‍ಗೆ ತಂದು ಚಾಲಿಸಿದ. ಪಕ್ಕದಲ್ಲೇ ನಾಲ್ವರು ಹೋಗುತ್ತಿದ್ದರು. ಈರ್ವರು ಹಿಂದೆ, ಇನ್ನೀರ್ವರು ಮುಂದೆ. ನಮ್ಮನ್ನು ಗಮನಿಸದಂತೆ ಹೋಗುತ್ತಿದ್ದರು. ತಕ್ಷಣ ಬೈಕನ್ನು ಮೊದಲ ಗೇರಿಗೆ ತರುವಷ್ಟರಲ್ಲಿ, ಅದು ಅಲ್ಲೇ ಸಿಕ್ಕಿಕೊಂಡಾಂತಾಗಿ ತಿರುವಿನ ಬದಿಯಲ್ಲೇ ನಿಂತು ಬಿಟ್ಟಿತು.

ಆ ಕ್ಷಣದಲ್ಲೇ ಆ ನಾಲ್ವರಲ್ಲಿ ಓರ್ವ ಬೈಕಿನ ಹಿಂಬದಿಗೆ ಬಂದು ನನ್ನೆರಡು ಕೈಗಳನ್ನು ಮುರಿದು ಹಿಂಬದಿಗೆ ಹಿಡಿದ. ಮತ್ತೋರ್ವ ನನ್ನ ಸಹ ಉದ್ಯೋಗಿಯ ಎರಡು ಕೈಗಳನ್ನೂ ಅದೇ ರೀತಿ ಹಿಡಿದ. ಮತ್ತೀರ್ವರಲ್ಲಿ ಓರ್ವ ನನ್ನ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ನಾನು ಕಿರುಚಿ ಮಾತಾಡಲೂ ಶುರು ಹಚ್ಚಿದೆ. ಇನ್ನೋರ್ವ ನೇರವಾಗಿ ನನ್ನ ಕುತ್ತಿಗೆಗೆ ಚಾಕು ಇಟ್ಟೇ ಬಿಟ್ಟ.! ನಾನು ಸ್ಥಬ್ಧನಾದೆ. ಚಾಕು ಇಟ್ಟವನು ನನ್ನ ಬಾಯಿಯನ್ನು  ತನ್ನ ಬಲಿಷ್ಠ ಇಷ್ಟಗಲದ ಕೈಗಳಿಂದ ಮುಚ್ಚಿದ. ಯಾವುದೋ ” ಡ್ರಗ್ಸ್” ವಾಸನೆ ಅವನ ಕೈಗಳಿಂದ ಮೂಗಿಗೆ ಬಡಿಯಿತು. ನನ್ನ ಕಣ್ಣೆರಡು ಮಂಕಾದಂತೆ ಅನ್ನಿಸಿತು. ಮುಂಬದಿಯಲ್ಲಿ ಕೊಸರಾಡುತ್ತಿದ್ದ ನನ್ನ ಸಹೊದ್ಯೋಗಿಯ ಬಾಯಿ – ಗಂಟಲನ್ನು ಇನ್ನೋರ್ವ ಭದ್ರವಾಗಿ ಹಿಡಿದ. ಕುರಿ ಬಲಿಗೆ ಸಿದ್ಧವಾಯಿತು…! ಅನತಿ ದೂರದಲ್ಲಿ ಎರಡು ಹದ್ದುಗಳು ಅಗಸದಲ್ಲಿ ಸುತ್ತಿ ಸುತ್ತಿ ಹಾರಾಡುತ್ತಿದ್ದವು. ಹಕ್ಕಿಗಳ ಭಯಭೀತ ಕಲರವ ತಾರಕಕ್ಕೇರಿದ್ದು ಕೇಳಿಸುತ್ತಿತ್ತು.!

ಇಷ್ಟೇಲ್ಲಾ ನಡೆಯುವಾಗ ಅಲ್ಲೇ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರು-ಬೈಕುಗಳು ಅಲ್ಲಲ್ಲೇ ನಿಂತಿದ್ದವು. ಕೆಲವರು ಕೆಳಗಿಳಿದು ಮುಂದಿನದನ್ನು ಎದುರು ನೋಡುತ್ತಿದ್ದರು. ಲೂಟಿಗಾರರು ಅದ್ಯಾವುದರ ಪರಿವೇ ಇಲ್ಲದೆ ಕೋಳಿಯ ಕತ್ತು ಹಿಡಿದಂತೆ ನಮ್ಮನ್ನು ಹಿಡಿದಿದ್ದರು. ನನ್ನ ಜೇಬಿನಲ್ಲಿ ಔಷಧಿಗೆಂದು ಇಟ್ಟಿದ್ದ 50 ಸಾವಿರ ಕ್ಯಾಮರೂನ್ ಫ್ರಾಂಕ್,ಮೊಬೈಲ್ ಅನ್ನು ಅವರಲ್ಲಿ ಓರ್ವ ಮೊದಲು ತೆಗೆದ,  ಪ್ಯಾಂಟ್ ಜೇಬಿಗೆ ಕೈ ಹಾಕಿ ಅದರಲ್ಲಿದ್ದ 15  ಸಾವಿರ ಫ್ರಾಂಕ್‍ಗೆ ತಡಕಾಡುತ್ತಿದ್ದ. ಹೆಣವಾಗಿದ್ದ ನನ್ನ ದೇಹದ ಕುತ್ತಿಗೆಗೆ ಇಟ್ಟ ಚಾಕು, ಅಲ್ಪಸ್ವಲ್ಪ ಸುರಿದ ರಕ್ತದಿಂದ ಗೆರೆಗಳನ್ನು ಮೂಡಿಸ ತೊಡಗಿತ್ತು. ಮಲಗಿದ್ದ ಹೆಣಗಳ ಬಿಳಿ ಬಟ್ಟೆ ಸರಿಸಿದಾಗ ನನ್ನ ಮುಖ ಕಾಣತೊಡಗಿದವು. ನನ್ನ 4 ವರ್ಷದ ಮಗು ಮುಗ್ದವಾಗಿ ಕಣ್ಣಲ್ಲಿ ನಗುತ್ತಿದ್ದ. ಮುಖಮುಚ್ಚಿ ಕೂದಲು ಬಿಚ್ಚಿಟ್ಟು ಅಳುತ್ತಿದ್ದ ನನ್ನ ಪತ್ನಿಯ ಹಾದುಹೋದ ನೆರಳನ್ನು  ಅಲ್ಲಿ ಕಂಡೆ. ಅಲ್ಲೇಲ್ಲಾ ಜನರ ಮುಖದಲ್ಲಿ ಕಣ್ಣೀರ ಭಾಷ್ಪ ಹರಳುಗಟ್ಟುತ್ತಿದ್ದವು.

ಮೊಬೈಲ್, ಹಣ,ಒಂದು ಚಿನ್ನದ ಉಂಗುರ ಎಲ್ಲವನ್ನೂ ಲೂಟಿ ಮಾಡಿ ಅಲ್ಲೇ ಪಕ್ಕದ ಕಾಲು ಗಲ್ಲಿಯಲ್ಲಿ ಸದ್ದಿಲ್ಲದೆ ಮರೆಯಾದರು. ಮತ್ತೇನೋ ಒಂದು ಉಳಿದ ಅನುಭವ ..! ಗಾಬರಿಯಿಂದ ವಿಚಲಿತಗೊಂಡ ಸಹೊದ್ಯೋಗಿಯ ಕಣ್ಣುಗಳಲ್ಲಿ ತೊಟ್ಟಿಕ್ಕಿದ ಹನಿಗಳು. ಹಿಡಿದ ರಭಸಕ್ಕೆ ಗಂಟಲು ಕಟ್ಟಿ  ಒಂದೇ ಉಸಿರಿಗೆ ಕೆಮ್ಮ ತೊಡಗಿದೆ. ಜೀವ ಇತ್ತು. ಮತ್ತೊಮ್ಮೆ  ಕೆಮ್ಮಿದೆ, ಸುತ್ತಲೂ ಅಲ್ಲೆಲ್ಲಾ ನಿಂತಿದ್ದ ಕಾರು-ಬೈಕುಗಳು ಒಂದೊಂದಾಗಿ ತೆರಳ ತೊಡಗಿದವು.ನಮ್ಮಿಬ್ಬರದೂ ಮಾತಿಲ್ಲದ ನೋಟ..! ಜಗ್ಗಾಟದಲ್ಲಿ ಕೆಳಗೆ ಬಿದ್ದಿದ್ದ ಬೈಕ್‍ನ “ಕೀ”ಯನ್ನು ಹೆಕ್ಕಿ  ಬೈಕ್ ಚಾಲಿಸಿದ. ಔಷಧಿಯಿಲ್ಲದೆ ಬರಿಗೈಯಲ್ಲಿ ಕಂಪೆನಿ ವಾಸಸ್ಥಾನಕೆ ತಲಪಿದೆವು.ಕೈ ಕಾಲೆಲ್ಲಾ ನಡುಗುತ್ತಿದ್ದವು.ಯಾರಿಗೂ ಹೇಳಿ ಪ್ರಯೋಜನವಿಲ್ಲ , ಯಾರಿಗೂ ಹೇಳದೆ ಹಾಗೇ ಮಲಗಿದ್ದೆವು.

ಸಾವಿನ ಬಗ್ಗೆ ಸಾವಿರ ಮಾತಾಡಿದ್ದೆ. ಜೀವದ ಬಗ್ಗೆ ಬೇಕಾದಷ್ಟು  ಆಲೋಚಿಸಿದ್ದೆ. ಪ್ರಾಣ ಹೋಗುವ ಆ ಸಂದರ್ಭಗಳ ಕುರಿತು ಆಲೋಚಿಸಿರಲಿಲ್ಲ. ಎಷ್ಟೊಂದು ಕಠಿಣ ಸಂದರ್ಭ ಅದು ?.ತಮಗೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುವವರ ಧೈರ್ಯದ ಬಗ್ಗೆ ಮುಟ್ಟಿ ನೋಡಕೊಳ್ಳಬೇಕೆನಿಸಿತು.ಮನಸ್ಸು ಶ್ರೇಷ್ಠ ಸಮುದ್ರ, ಅಲ್ಲಿ ನವೀರಾದ ಅಲೆಗಳು ಬಡಿಯುತ್ತವೆ… ಬಿರುಸಾದ ಬಿರುಗಾಳಿ ಬೀಸಿದಾಗ ದೋಣಿ ನಿಯಂತ್ರಣ ತಪ್ಪಿ ಮಗುಚುತ್ತದೆ…!

ಈ ಘಟನೆ ಕಳೆದು  ಒಂದು ವಾರ ಕಳೆಯಿತು. ಒಂದು ಶನಿವಾರ ರಾತ್ರಿ 8.00 ಗಂಟೆಗೆ ಸುದ್ದಿ ಬಂತು. ನಮ್ಮ ಕಂಪೆನಿಯ  ಈರ್ವರನ್ನು ಲೂಟಿಗಾರರು ಧಾಳಿ ನಡೆಸಿ,ಅವರು ಚಾಲಿಸುತ್ತಿದ್ದ ಬೈಕ್‍ನೊಂದಿಗೆ ಪರಾರಿಯಾದರು ಅಂತ. ತಕ್ಷಣವೇ ಸ್ಥಳಕ್ಕೆ ಧಾವಿಸಿದೆವು. ಓರ್ವ ಚೂರಿ ಇರಿತಕ್ಕೆ ಹೊಟ್ಟೆ, ಎದೆ ತಲೆಯಿಂದ ಸುರಿಯುತ್ತಿದ್ದ ರಕ್ತದಲ್ಲಿ  ಬಿದ್ದಿದ್ದ.  ಇನ್ನೋರ್ವ ಮುಖ ದವಡೆ ಮುರಿದು, ಮುಂಭಾಗದ ಮೂರು ಹಲ್ಲುಗಳು ಕಿತ್ತು ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪಕ್ಕದಲ್ಲೇ ಒದ್ದಾಡುತ್ತಿದ್ದ. ಅವರುಗಳನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದೆವು. ಮುಂಜಾನೆ  ಆಸ್ಪತ್ರೆಗೆ ಧಾವಿಸಿ, ಮಂಚದಲ್ಲಿ ಮಲಗಿದ್ದ ಈರ್ವರ ಗಂಟಲಿನಿಂದ ಭಯ ಮಿಶ್ರಿತ ಸ್ವರ ಹೊರಟಾಗ ಸಮಾಧಾನವಾಯಿತು. ಅಬ್ಬಾ….!ಎಲ್ಲಕ್ಕಿಂತ ದೊಡ್ಡದು ಜೀವ. ಎದ್ದು ಮಾತಾಡುತ್ತಿದೆ. ಆಫ್ರೀಕಾದಲ್ಲಿ ಬದುಕುತ್ತೇವೆ ನಾವು.ಕುಟುಂಬ ಬಡತನದ ಭಾರ ಹೊತ್ತು. ನಾಲ್ಕಾರು ಜೀವಗಳು ಬದುಕಲಿ ಎಂಬ ಆಶಯಕ್ಕೆ ನಕ್ಕು..!

* * * * * * * *

ಚಿತ್ರಕೃಪೆ : ಅಂತರ್ಜಾಲ

13 ಟಿಪ್ಪಣಿಗಳು Post a comment
  1. ಜನ 18 2012

    ಎಲ್ಲರೂ ಓದಲೇಬೇಕಾದ ಕಥೆ.. ತಿಳಿಯಲೇಬೇಕಾದ ಕೆಲವು ಎಚ್ಚರಿಕೆಯ ಆಲೋಚನೆಗಳು.. ಅನುಭವದ ಮಾತುಗಳು.. 🙂
    ನಮಗಂತೂ ನಿಮ್ಮ ಈ ಕಥೆಯು ತೆಲುಗು ಚಿತ್ರ ನೇನು ನಾ ರಾಕ್ಷಸಿ ಮತ್ತು ಹಿಂದಿ ಚಿತ್ರ ಲೂಟ್ .. ಇದರ ನೆನಪು ಮಾಡಿಸಿತು.. ನಿಮ್ಮ ಕಥೆಗೂ ಮತ್ತು ಆ ಚಿತ್ರದ ಸನ್ನಿವೇಶಗಳಿಗೂ ತುಂಬಾನೇ ವ್ಯತ್ಯಾಸ ಇದೆ .. ಆದರೆ ವಿಷಯ ವಸ್ತು ಮಾತ್ರ ಇತ್ತೀಚಿನಲ್ಲಿ ಹೊರದೇಶದಲ್ಲಿ ಭಾರತೀಯರ ಕಷ್ಟಗಳ ನೆನಪನ್ನು ತೋರಿಸುವಂತದ್ದು.. ನಿಜಕ್ಕೂ ಮನ ಕಲಕುವ ಘೋರ ಘಟನೆ.. ಇಂತಹಾ ಪ್ರಸಂಗ ಕನಸಿನಲ್ಲೂ ಯಾರಿಗೂ ಬೇಡ.. ನಿಮ್ಮ ಅಲ್ಲಿನ ಜೀವನ ಶೈಲಿಗೆ ತುಂಬಾನೇ ಕಲ್ಲು ಮನಸ್ಸಿರಬೇಕು.. ಯಾರನ್ನು ಅತೀ ಸುಲಭವಾಗಿ ನಂಬುವುದೇ ಅಲ್ಲಿ ಸ್ವಲ್ಪ ಕಷ್ಟ ಅನ್ನಿಸುತ್ತದೆ.. ಎಲ್ಲರನ್ನು ಆ ಶ್ರೀ ಗಣೇಶನು ಕಾಪಾಡಲಿ .. “ಓಂ ಶ್ರೀ ಗಣೇಶಾಯ ನಮಃ”… 🙂

    ಉತ್ತರ
  2. nagabhushana madhyastha
    ಜನ 18 2012

    Good story,Must read.

    ಉತ್ತರ
  3. ಜನ 18 2012

    ರವಿ ಮುರ್‌ನಾಡು ಅವರ ಈ ಕತೆ ಓದಿ. ದಿಗ್‍ಮೂಡನಾದೆ. ಬಡತನ, ಸಾಮಾಜಿಕ ತಾರತಮ್‌ಯ ಮುಂತಾದವುಗಳು ಈ ರೀತಿಯ ವರ್‌ತನೆಗೆ ಕಾರಣವಾಗುತ್ತವೆ.

    ಓದಿ ಬೇಸರವಾಯಿತು.

    – ಮಿ. ಮೆಂ. ಶ್‌ರೀನಿವಾಸ.

    ಉತ್ತರ
  4. ಜನ 18 2012

    ರವಿ ಅಣ್ಣ ನರಕದ ದರ್ಶನವಾಯ್ತು, ಪ್ರಾಣವನ್ನು ಕೈಲಿ ಹಿಡಿದು ಹೆಂಡತಿ ಮಕ್ಕಳನ್ನು ದೂರ ಇಟ್ಟು ಕೆಲಸ ಮಾಡುತ್ತಿರುವ ನಿಮ್ಮ ಪರಿಸ್ಥಿತಿಗೆ ನಾನು ಬಹಳಾ ಮರುಗುತಿದ್ದೇನೆ. ಸರ್ಕಾರವೇ ಇಲ್ಲದ ದೇಶ ಎಂಬುದು ನಿಮ್ಮ ಲಖನದಿಂದಲೇ ತಿಳಿದಿದ್ದೆ, ಈಗ ಅಲ್ಲಿನ ಪರಿಸ್ಟಿತಿಯ ನಿಮ್ಮ ವಿವರವ ನೋಡಿ ಭಯ ನನ್ನಲ್ಲೂ ಉಂಟಾಗಿಬಿಟ್ಟಿದೆ, ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ನೀವು ಆದಷ್ಟು ಬೇಗ ಅಲ್ಲಿಂದ ಬಿಡುಗಡೆ ಮಾಡಿಕೊಂಡು ಮರಳಿ ತಾಯ್ನಾಡ ಸೇರಲಿ ಎಂದು.. ಛೆ [:(] [:(] [:(]

    ಉತ್ತರ
  5. vidya B C
    ಜನ 18 2012

    ಅಬ್ಬಾ! ಎಷ್ಟು ಮನ ಹಿಂಡುವ ಘಟನೆ.ಓದುತ್ತ ಓದುತ್ತ ಮನದಲ್ಲಿ ಮೂಡಿತು ಭೀತಿ.ಇಂತಹ ಜನರು ಇದ್ದಾರೆಯೇ?ಜನರು ,ತಮ್ಮ ಜೀವ ಯಾವ ಚಣದಲ್ಲಿ ಹಾರಿ ಹೋಗುಹುದೋ ಎಂಬ ಆತಂಕದಲ್ಲಿ ತನ್ನವರನ್ನು ನೆನೆಯುತ್ತ ಜೀವಿಸುತ್ತಿದ್ದಾರೆ.ಆರ್ಥೀಕವಾಗಿ ಸಬಲವನ್ನು ಹೊಂದುವ ಬದಲು ತಮ್ಮ ಮೂಲಭೂತ ಸೌಕರ್ಯವಾದ ಇಚ್ಛೆಯ ಜೀವನ ನಡೆಸಲು ಅಳುಕುತ್ತಿದ್ದಾರೆ.ಹಣಕ್ಕಾಗಿ ಜೀವವನ್ನೆ ತೆಗೆಯುವುದು ಅಮಾನುಷ ಕೃತ್ಯ.ನನಗೆ ಯಾವ ಅರಿವೂ ಇಲ್ಲ.ಜೀವ ಮಾಡಲು ಮತ್ತೊಬ್ಬ ಜೀವಿಯನ್ನೆ ಬಲುಪಶುವನ್ನಾಗಿಸಿ ಜೀವನದ ಅರ್ಥವನ್ನೆ ತಿಳಿಯದೆ ಸಾಗಿಸುವ ಜನರ ನಾ ಕಲ್ಪಿಸಿಕೊಳ್ಳಲಾರೆ…… ಹರಿಯೇ ಎಲ್ಲರನು ಸಲಹು……… ತಮ್ಮ ಈ ಘಟನೆಯನ್ನು ಹಂಚಿಕೊಂಡ್ಡಿದ್ದಕ್ಕೆ ಧನ್ಯವಾದಗಳು.ಎನ್ನಲ್ಲಿ ನಾನು ಬೆಳೆಯುತ್ತಿರುವ ಸ್ಥಳ ಎಷ್ಟು ಸುರಕ್ಷಿತ,ಕಾಪಾಡಿಕೊಳ್ಳಬೇಕಾದುದು ಅನಿವಾರ್ಯವೆಂದು ತಿಳಿದಿದೆ.

    ಉತ್ತರ
  6. Mohan V Kollegal
    ಜನ 18 2012

    ಅಬ್ಬಾ.. ಈ ಲೇಖನ ಓದಿ ಒಂದು ಅರಾಜಕತೆಗೆ ದಿಗ್ಭ್ರಾಂತನಾದೆ. ಒಂದು ವ್ಯವಸ್ಥೆಯಲ್ಲಿ ಇಷ್ಟು ಉಡಾಫೆ ತನವಿದೆ ಮತ್ತು ನೋಡುಗರಿಗೆ ನಿತ್ಯವಾರ್ತೆಯಾಗಿರುವುದು ಆಶ್ಚರ್ಯಕರವೇ. ಸಾವಿನ ಮೆಟ್ಟಿಲು ಮೆಟ್ಟಿ ಬಂದ ಒಂದು ಪ್ರತಿಮೆಯ ಬಾಯಿಂದ ಬಂದ ಮಾತು ವಿದೇಶದಲ್ಲಿ ಕೆಲಸ ಅರಸಿ ಹೋಗುವವರಿಗೆ ಒಂದು ಪಾಠವೇ ಸರಿ. ಅಲ್ಲಿನ ವ್ಯವಸ್ಥೆಗೆ ಧಿಕ್ಕಾರ….

    ಉತ್ತರ
  7. ಜನ 18 2012

    ರವಿಯಣ್ಣ ಭಯವಾಗುತ್ತಿದೆ ನಿಮ್ಮ ಪರಿಸ್ಥಿತಿ ಕಂಡು.. ಇಲ್ಲಿ ನಾವು ವಯಸ್ಸಾದ ಜೀವವನ್ನು ದೇವರು ಹೊತ್ತೊಯ್ಯುವಾಗಲೆ ಬಯ್ದಾಡಿಕೊಂಡು ತಿರುಗಾಡುತ್ತೇವೆ ಅಲ್ಲಿನ ಜನ ಜೀವವನ್ನೆ ಕೈಯಲ್ಲಿಡಿದು ತಿರಗುತ್ತಾರಲ್ಲ ಎಂದು.. ಪ್ರತಿಕ್ರಿಯೆಯನ್ನು ಟೈಪ್ ಮಾಡಲೂ ಕೈ ನಡುಗುತ್ತಿದೆ ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೀರಿ ನೀವು.. ನಿಮ್ಮ ಧೈರ್ಯಕ್ಕೆ ಕೈ ಎತ್ತಿ ಮುಗಿಯುತ್ತೇನೆ.. ಜೀವನವನ್ನು ಸಲುಹಿಕೊಳ್ಳಲು ಅಮಾನವೀಯರಾಗಿಯೆ ಇರಬೇಕೆ? ಅಷ್ಟೆಲ್ಲಾ ಕೊಲೆ ದರೋಡೆಗಳು ಅವ್ಯಾಹತವಾಗಿ ನಡೆಯುತ್ತಿದ್ದರು ಅಲ್ಲಿನ ಸರ್ಕಾರ ಮತ್ತು ಪೋಲೀಸರು ಕಣ್ಮುಚ್ಚಿ ಕುಳಿತಿದ್ದಾರೆಯೆ? ಅಲ್ಲಿ ನಡೆಯುತ್ತಿರುವುದು ಪ್ರಜಾತಂತ್ರ ಸರ್ಕಾರವೇ ಹೌದೆ? ಮನುಷ್ಯನ ಪ್ರಾಣಕ್ಕೆ ಬೆಲೆಯೇ ಇಲ್ಲವೆ? ಆ ಲೂಟಿಕೋರನನ್ನೂ ಒಮ್ಮೆ ಅವನಿಗಿಂತ ದೊಡ್ಡ ಲೂಟಿಕೋರ ಕೊರಳು ಕತ್ತಿರಿಸಿದರೆ ಎಂಬ ಭಯವೂ ಕಾಡುವುದಿಲ್ಲವೆ? ೨೦೦ ರ ಸಂಖ್ಯೆಯ ಮೇಲಿರುವ ಕಂಪೆನಿಯಲ್ಲಿ ಒಂದಾದರು ಲೂಟಿ ಪ್ರಕರಣಗಳಿರುತ್ತವೆ ಎಂದರೆ ಅಲ್ಲಿನ ಸಾಮಾಜಿಕತೆ ಎಷ್ಟು ಅಧಃಪತನಕ್ಕಿಳಿದಿದೆ ಎಂಬುದನ್ನು ನೆನೆದೇ ಭಯವಾಗುತ್ತದೆ.. ದಿನಕ್ಕೊಂದು ಹೆಣವನ್ನು ನೋಡುತ್ತಾ, ಎಲ್ಲವನ್ನೂ ಸಹಿಸುತ್ತಾ ದಿನದ ಹೊಟ್ಟೆ ಹೊರೆಯಲು ಅಂತಹ ಕಗ್ಗತ್ತಲ ಖಂಡಗಳಲ್ಲಿ ನರಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವ ಆ ದೇವರಿಗೆ ಕರುಣೆಯೇ ಇಲ್ಲವೆ? ದೇವರೆ ಎಲ್ಲರನ್ನು ಸಲಹಿ ಕಾಪಾಡು, ಎಲ್ಲರೂ ನಿನ್ನ ಮಕ್ಕಳೆಂಬುದನ್ನು ಮರೆಯಬೇಡ.. ಮನಕಲಕುವ ಲೇಖನ ರವಿಯಣ್ಣ, ಆ ಭಯಾನಕತೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದೆ..

    ಉತ್ತರ
  8. ಜನ 18 2012

    ಅಬ್ಬಾ !!!! ಏನ್ರಿ ಅದು ದೇಶ, ಕಳ್ಳರ ಸಂತೆ, ದರೋಡೆಗಳ ಬಗ್ಗೆ ಓದುತ್ತಿದ್ದರೆನೇ ಹೇಗಪ್ಪ ಬದುಕೋದು ನಮ್ಮವರು ಅಲ್ಲಿ ಅನ್ಸುತ್ತೆ. ಆದ್ರೆ ಸುಮಾರು ವರ್ಷಗಳಿಂದ ನೀವಲ್ಲೇ ಇರೋದು ಯಾಕೆ ?

    ಉತ್ತರ
  9. Abdul Satthar Kodagu
    ಜನ 18 2012

    ಯಾಕಷ್ಟು ಕ್ರೂರ ಲೋಕದಲ್ಲಿದ್ದೀರಿ. ಆದಷ್ಟು ಬೇಗ ತಾಯ್ನಾಡಿಗೆ ಮರಳಿಬನ್ನಿ…

    ಉತ್ತರ
  10. M Maravanthe
    ಜನ 18 2012

    ಕಣ್ಣಂಚಿನಲ್ಲಿ ನೀರು ಹನಿಯಿತು.
    ಅಪ್ಪನ ಆಸ್ಫತ್ರೆ,ಅಮ್ಮನ ಮಾತ್ರೆ,ತಮ್ಮನ ವಿದ್ಯಾಭ್ಯಾಸ, ತಂಗಿಯ ಮದುವೆ ಎಂದು ದುಡಿಯಲು ಹೊರ ಹೋಗುವ ಜನರು ಎಷ್ಟು ಅಭದ್ರರು.

    ಉತ್ತರ
  11. ಜನ 18 2012

    ರವಿಯವರೇ ನಮಗೆ ಓದಲು ಇಷ್ಟು ಕಷ್ಟವಾಗಿರುವಾಗ ಅನುಭವಿಸುವಾಗ ಹೇಗಾಗಿರಬೇಡ, ಅದನ್ನು ಆ ಸ್ಥಿತಿಯನ್ನು ಅನುಭವಿಸಿದವರಿಗೇ ಗೊತ್ತಾಗುತ್ತೆ,
    ಈ ಕ್ಷಣ ಕಳೆಯುವುದು ಕಷ್ಟವಾಗಿರುವಾಗ…………………
    ತೆರೆದ ಟೋಪಿಯನಮನ
    ಬೇಸರಿಸದಿದ್ದರೆ ಒಂದು ಮಾತು ರವಿಯವರೇ
    ಅಲ್ಲಿಯೇ ಕೆಲಸದಲ್ಲಿರುವುದು ಎಷ್ಟು ಅನಿವಾರ್ಯ????

    ಉತ್ತರ
  12. rajuvinay
    ಜನ 18 2012

    ಗೆಳೆಯ ರವಿ ಯವರೇ,
    ನಿಮ್ಮ ಅನುಭವದ ಮಾತುಗಳು, ನೀವು ನೇರವಾಗಿ ಅನುಭವಿಸಿದ ಘಟನೆಗಳು ಮನಮುಟ್ಟುವಂತೆಯೂ, ಭಯಬೀತ ಹಾಗೂ ಗಾಬರಿ ಹುಟ್ಟಿಸುವಂತಹ ಸನ್ನಿವೇಶಗಳು ನಮ್ಮ ಕಣ್ಣೆದುರು ಬಂದು ನಿಲ್ಲುವಂತೆ ಬರೆದಿದ್ದಿರಿ.
    ಕೊಲೆ, ಸುಲಿಗೆ, ಹಲ್ಲೆ, ಹತ್ಯೆಗಳು ಒಂದು ದೇಶದ ಆಡಳಿತ ವೈಖರಿಯನ್ನು ತೋರಿಸುತ್ತದೆ. ಇದು ಆಫ್ರಿಕಾದ ಕ್ಯಾಮರಾನ್ ಒಂದರಲ್ಲೇ ಅಲ್ಲ. ಬಹುತೇಕ ರಾಷ್ಟ್ರಗಳಲ್ಲೂ ನಡೆಯುತ್ತಿರುತ್ತವೆ. ಸೋಮಾಲಿಯಾದ ಬಡತನದಿಂದ ನಡೆಯುತ್ತಿರುವ ಕಡ್ಗಳ್ಳತನಗಳು ನಮ್ಮ ಮುಂದೆ ಬರುತ್ತವೆ. ಪಾಕಿಸ್ತಾನದ ಅರಾಜಕತೆ, ಅಫ್ಘಾನಿಸ್ಥಾನ (ತಾಲಿಬಾನ್) ಉಪಟಳಗಳು ಇವೆಲ್ಲವೂ ನಮ್ಮ ಮುಂದೆ ಇರುವ ಜೀವಂತ ಸಾಕ್ಷಿಗಳು.

    ನೀವು ಹೇಳುವಂತಹ, ನಾವು ನೋಡುವಂತಹ ಘಟನೆಗಳು ಮಾಡುವವರು ಯಾರು ? ಮಾನವರೇ ?
    ಮಾನವರಿಗೆ ಯೋಚಿಸುವ ಬುದ್ದಿ ಶಕ್ತಿ ಇದೆ. ಆದರೂ ಯಾಕೆ ಈ ರೀತಿಯಾಗಿ ಅಡ್ಡ ದಾರಿ ಹಿಡಿಯುತ್ತಿದ್ದಾನೆ. ಒಂದೇ ಉತ್ತರ ಜೀವನೋಪಾಯಕ್ಕೆ . ಒಂದು ರಾಷ್ಟ್ರ ತನ್ನ ಆಡಳಿತದಲ್ಲಿ ಪ್ರಜೆಗಳಿಗೆ ನೀಡಬೇಕಾದ ಸವಲತ್ತುಗಳನ್ನು ಸಮಯಕ್ಕೆ ತಕ್ಕಂತೆ ನೀಡುತ್ತಾ ಬಂದರೆ. ಬಹುಶಃ ಬುದ್ದಿವಂತ ಮನುಷ್ಯ ಇಂತಹ ಕಾರ್ಯಗಳಿಗೆ ಇಳಿಯಲಾರ.
    ನಾವು ಪ್ರತಿನಿತ್ಯವೂ ಬೇರೆ ರಾಷ್ಟ್ರಗಳಲ್ಲಿ ಯಾಕೆ ನಮ್ಮ ಭವ್ಯ ಬಾರತದಲ್ಲೂ ಇಂತಹ ಘಟನೆಗಳನ್ನು ಇತ್ತೀಚಿಗೆ ಪ್ರತ್ಯಕ್ಷವಾಗಿ ನೋಡುತ್ತಲೇ ಇರುತ್ತೇವೆ. (ಪ್ರಮಾಣ ಕಡಿಮೆ ಇರಬಹುದು) .
    ಆದರೆ ಪರೋಕ್ಷವಾಗಿ ನಾವೆಲ್ಲರೂ ಒಂದಲ್ಲ ರೀತಿಯಲ್ಲಿ ಮಾನಸಿಕವಾಗಿ ದಾಳಿಗೊಳಗಾಗುತ್ತಲೇ ಇದ್ದೇವೆ.
    ಮನುಷ್ಯನಲ್ಲಿ ಹೆಚ್ಚುತ್ತಿರುವ ಸ್ವಾರ್ಥ, ಹಣದ ದಾಹ ದಿಂದ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಆಂತರಿಕವಾಗಿ ರಾಕ್ಷಸನಾಗುತ್ತಿದ್ದಾನೆ. ಯಾವ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿ ತಾನು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಹೇಳಲು ಸಾಧ್ಯವಿದೆಯೇ? ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾನೆ. ಕಾರಣ ಜೀವನ ನಡೆಸಲು… ಹೋರಾಟ….
    ತಾನು, ತನ್ನದು, ಅನ್ನೋ ದುರಾಸೆಯ ಫಲ, ಇದರಿಂದ ಸಂಬಂಧಗಳನ್ನೇ ಮರೆಯುತ್ತಿದ್ದಾನೆ. ಜನ್ಮ ಕೊಟ್ಟ ತಂದೆ ತಾಯಿಗಳನ್ನು ಬೀದಿಗೆ ಬಿಡುತ್ತಿದ್ದಾನೆ (ವೃದ್ದಾಶ್ರಮ). ತನಗೆ ಬೇಕಾದ ಸಂಬಳ, ಸವಲತ್ತುಗಳನ್ನು ಕೊಟ್ಟಿದ್ದರೂ ಸಹ ಲಂಚದ ಆಸೆಗೆ ಬಡವರು ಶ್ರೀಮಂತರೆನ್ನದೇ “ಭಿಕ್ಷೆ”ಯ ರೂಪದಲ್ಲಿ ಲಂಚ ಪಡೆದು ಜೀವಿಸುತ್ತಿದ್ದಾನೆ
    ಅದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ದೇಶದಲ್ಲಿ ತಾಂವವಾಡುತ್ತಿರುವ ಭ್ರಷ್ಟಾಚಾರ.
    ತನಗೆ ಬೇಕಾದುದನ್ನು ತಾನು ಪಡೆಯದೇ ಬೇರೆಯವರ ತಟ್ಟೆಗೂ ಕೈ ಹಾಕುವ ಇಂದಿನ ಸ್ಥಿತಿ. ನೀವು ಹೇಳುವ ಕ್ಯಾಮರಾನ್ ಕಳ್ಳರಿಗಿಂತಲೂ ಅಪಾಯಕಾರಿ.
    ಅವರುಗಳು ನೇರವಾಗಿ ಕತ್ತಿ ಹಿಡಿದು ತಮಗೆ ಬೇಕಾದುದನ್ನು ಪಡೆಯುತ್ತಿದ್ದರೆ. ಹೊಟ್ಟೆ ತುಂಬ ಊಟ ಇದ್ದರೂ ದುರಾಸೆಗಾಗಿ ಯಾರ ಜೀವನದ ಪರಿವೇ ಇಲ್ಲದೇ ಗುಪ್ತಗಾಮಿನಿಯಾಗಿ ದರೋಡೆ ಮಾಡಿಕೊಂಡೆ ಜೀವನ ಸಾಗಿಸುತ್ತಿದ್ದಾರಲ್ಲ. ಇಂತಹ ಭ್ರಷ್ಟರನ್ನು ಏನನ್ನ ಬೇಕು. ಶಾಸಕಾಂಗ, ಕಾರ್ಯಾಂಗದ ಸಂಪೂರ್ಣ ವ್ಯವಸ್ಥೆ ಭ್ರಷ್ಟಮಯವಾಗಿದೆ.
    “ಆರಂಭದಲ್ಲಿ ಒಬ್ಬ ಅಣ್ಣಾ ಹಜಾರೆ ಕೂಗಿಗೆ ದನಿ ಎತ್ತಿದ್ದ ನಮ್ಮ ಜನ, ತೋರಿಕೆ ಹೆಸರಾಗಿದ್ದ * ನಮ್ಮ ಮಾಧ್ಯಮ*ಗಳು ಇಂದೇನಾಗಿವೆ.” ಅಣ್ಣಾ ಹಜಾರೆಯವರ ಹೋರಾಟದ ಕೂಗು ಕ್ಷೀಣಿಸುವಂತೆ ಮಾಡಿಬಿಡುತ್ತಿದ್ದಾರೆ.
    *** ಯಾವ ದೇಶದಲ್ಲಿ ಆಡಳಿತ ವ್ಯವಸ್ಥೆ ಹಿಡಿತದಲ್ಲಿದೆ. ಆಳುವ ದೊರೆಗಳೇ ಕಳ್ಳರಾಗುತ್ತಾರೋ, ಭ್ರಷ್ಟರಾಗುತ್ತಾರೋ, ಜನರ ತೆರಿಗೆ ಹಣವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಮನುಷ್ಯರನ್ನು ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಾರೋ, ಜನರ ತೆರಿಗೆ ಹಣದಿಂದ ತಮ್ಮ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳುತ್ತಾರೋ ಅಲ್ಲಿಯವರೆಗೂ ” ಯಾವ ದೇಶವು ಸುಧಾರಿಸುವುದಿಲ್ಲ. ಮುಂದೊಂದು ದಿನ ನೀವು ಹೇಳುತ್ತಿರುವ ಕ್ಯಾಮಾರಾನ್ ಘಟನೆಗಳು ನಮ್ಮ ಭಾರತದಲ್ಲೂ ನಡೆಯುವ ದಿನಗಳು ದೂರವಿಲ್ಲ. ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ, ಐಷಾರಾಮಿ ಬದುಕಿಗೆ ಮಾರು ಹೋಗುತ್ತಿರುವ ಹಳ್ಳಿ, ನಗರ ಪ್ರದೇಶದ ಜನರು, ಬೆಲೆ ಏರಿಕೆ, ಹಣದುಬ್ಬರ ಇವೆಲ್ಲವೂ ಜನರನ್ನೂ ರಾಕ್ಷಸರನ್ನಾಗಿ ಮಾಡಿಬಿಡುತ್ತವೆ. ಇಂದು ಕ್ಯಾಮರಾನ್ ನಾಳೆ ನಮ್ಮ ಭವ್ಯ ಭಾರತವೂ ಕೂಡ.
    ಇದೆಲ್ಲದ ಬದಲಾವಣೆ ಹೇಗೆ ?
    ರಾಜು ವಿನಯ್ ದಾವಣಗೆರೆ

    ಉತ್ತರ
  13. ಪ್ರಮೋದ್ ಶೆಟ್ಟಿ
    ಜನ 19 2012

    ಕಳ್ಳ ತನವನ್ನು ನೋಡಿ ನಗುವ ಜನರು ,ಒಬ್ಬನ ಅಮೂಲ್ಯ ಜೀವವು ರಣಹದ್ದುವಿನಂತಹ ವ್ಯಕ್ತಿಯ ಕೈಯಲ್ಲಿ ಇರುವಾಗಲು ಯಾವುದು ತಮ್ಮದಲ್ಲವಲ್ಲವೆಂಬ ಭಾವನೆಯುಳ್ಳ ಅಶಿಕ್ಷಿತ ಜನರ ಬಗ್ಗೆ ಎನಿಸುವಾಗಲೇ ಲೋಕದಲ್ಲಿ ಇಂತಹ ನಿರ್ದಯಿಗಳು ಇನ್ನೂ ಇದ್ದಾರೋ ಎಂಬ ಚಿಂತೆ ಕಾಡುತ್ತಿದೆ ಜೊತೆಗೆ ಇಷ್ಟೊಂದು ಕಳ್ಳ ಕಾಕರರಿಂದ ,ಕೊಲೆಗಾರಿಂದ ತುಂಬಿರುವ ಆಫ್ರೀಕಾದ ಪ್ರದೇಶದಲ್ಲಿ ನೀವು ಪಡುತ್ತಿರುವ ಯಾತನೆಯನ್ನು ನೋಡಿದಾಗ ಮನಕರಗಿತು ,ತೊಟ್ಟು ಕಣ್ಣೀರನ್ನು ಹರಿಸಿತು

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments