ವಿಷಯದ ವಿವರಗಳಿಗೆ ದಾಟಿರಿ

ಜನವರಿ 24, 2012

5

ಶ್ರಾದ್ಧ … ಆಚರಣೆ

‍ನಿಲುಮೆ ಮೂಲಕ

-ಪ್ರಕಾಶ್ ನರಸಿಂಹಯ್ಯ

ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.

 ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು “ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ.” ಎನ್ನುತ್ತಾರೆ. ಮತ್ತೆ ಕೆಲವರು “ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .
ಹಿರಿಯರ  ನೆನಪಿನಲ್ಲಿ ಒಂದು ದಿನ ತಿಥಿ ಆಚರಣೆ ಅವಶ್ಯಕ.” ಎಂದು ವಾದಿಸುತ್ತಾರೆ.        ” ಸಮಾಜದಲ್ಲಿ ಬದುಕಿರುವಾಗ ಕೆಲವು ಆಚರಣೆಗಳು ಅನಿವಾರ್ಯ. ಎಲ್ಲರು ತಿಥಿ ಆಚರಣೆಯನ್ನು ಮಾಡುವಾಗ ನಾವೊಬ್ಬರು ಮಾಡುವುದಿಲ್ಲ ಎನ್ನಲು ಸಾಧ್ಯವೇ? ಆದ್ದರಿಂದ ನಾವು ಮಾಡುತ್ತವೆ.” ಎಂದು ಕೆಲವರು ಸಮಜಾಯಿಷಿ ಕೊಡುತ್ತಾರೆ.   ಹೀಗೆ ಹಲವಾರು  ಅಭಿಪ್ರಾಯಗಳು ಇವೆ.
 ಇನ್ನು ವಾರ್ಷಿಕವಾಗಿ ಮಾಡುವ ತಿಥಿಯ ಸಂದರ್ಭದಲ್ಲಿ ಹಲವಾರು ರೀತಿಯ  ಆಚಾರಗಳು ಇವೆ.  ಕೆಲವಕ್ಕೆ ಅರ್ಥವಿಲ್ಲ, ಕೆಲವು ಅತಿರೇಕ ಮತ್ತೆ ಕೆಲವು  ಸಂಬಂಧವಿಲ್ಲದ ರೀತಿಯಲ್ಲಿ ಇರುತ್ತವೆ.  ಇದಕ್ಕೆ ಯಾವುದೇ ರೀತಿಯ ವಿವರಣೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ  ಆದರೂ  ನಮ್ಮ ಹಿರಿಯರು ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಇವರು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಮಾಡುವ ಕರ್ಮದಲ್ಲಿ ವಿಶ್ವಾಸ ಮತ್ತು  ಶ್ರದ್ಧೆಗಿಂತ ಭಯ ಜಾಸ್ತಿ ಇರುತ್ತದೆ.  ನಾನು ತಿಥಿ ಮಾಡದಿದ್ದರೆ ಏನೋ ಆಗಿಬಿಡಬಹುದೆಂಬ ಭಯ ಇವರನ್ನು ಕಾಡುತ್ತದೆ. ಒಂದು ಚಿಕ್ಕ ವ್ಯತ್ಯಾಸವನ್ನು ಇವರು ಸಹಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಇಂತಹ  ಕರ್ಮಗಳಲ್ಲಿ ಶ್ರದ್ಧೆಗಿಂತ ಹೆಚ್ಚು ಅಂಧ ವಿಶ್ವಾಸ ಜಾಸ್ತಿಯಾಗಿರುತ್ತದೆ. ಇಂತಹ ಹಿರಿಯರ ತಿಥಿಯ ದಿನವನ್ನು ಕೆಲವು ಸಂಪ್ರದಾಯದಲ್ಲಿ ಹಬ್ಬವನ್ನಾಗಿ ಆಚರಿಸುವುದಿಲ್ಲ  . ಉದಾಹರಣೆಗೆ,  ಅಂದು ಮನೆಯ ಮುಂದೆ ರಂಗೋಲಿ ಇಡದೆ, ಮನೆಯ ಹೆಂಗಸರು ಕುಂಕುಮ ಇಡದೆ ಶ್ರಾದ್ಧ  ಕಾರ್ಯ ಮುಗಿಯುವವರೆಗೂ ಕಾಯುತ್ತಾರೆ. ದೇವರಪೂಜ ಸಮಯದಲ್ಲಿ ಘಂಟಾನಾದವನ್ನು ಕೂಡ ಮಾಡುವುದಿಲ್ಲ.       ಇಂತಹ ಕ್ರಿಯೆಗಳಿಗೆ ಕೊಡುವ ಕಾರಣಗಳು ಅಸಂಬದ್ದವಾಗಿರುತ್ತವೆ.    ಇದು ಏನೇ ಇದ್ದರೂ ಹಿರಿಯರ ನೆನಪಿನಲ್ಲಿ ಮಾಡುವ ತಿಥಿ ಅಥವಾ ಶ್ರಾದ್ಧ  ಮಾತ್ರ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ.
ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ  ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು  ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ  ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ.
 “ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ.”  ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು   ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ  ಅಥವಾ ತಿಥಿ.  ಶ್ರದ್ಧೆ ಮತ್ತು ಅಚಲ ವಿಶ್ವಾಸ ಇಂತಹ  ಕರ್ಮಕ್ಕೆ ಬೇಕಾದ ಎರಡು ಮುಖ್ಯ ಅಂಶಗಳು. ಈ ಎರಡು ಭಾವನೆ  ಕ್ರಿಯೆಯಲ್ಲಿರಬೇಕಾಗುತ್ತದೆ. ನಮ್ಮ ಅಂತಃಕರಣ ಭಾವನೆಗಳಾದ ಭಕ್ತಿ, ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು  ವ್ಯಕ್ತ ಪಡಿಸುವ ಕ್ರಿಯೆಗಳು ಧನ್ಯತಾ ಭಾವದಿಂದ  ನಡೆಸಿದರೆ ಹೆಚ್ಚು ಪ್ರಯೋಜನ. ಈ ಭಾವನೆಗಳು ಹುಟ್ಟಬೇಕಾದರೆ ನಾವು ಮಾಡುವ ಪ್ರತಿ ಕಾರ್ಯಗಳ ಜೊತೆಗೆ ಹೇಳುವ ಮಾತುಗಳು, ಮಂತ್ರಗಳು, ನಡವಳಿಕೆಗಳು, ಆಚಾರಗಳು ಇತ್ಯಾದಿಗಳ ಅರ್ಥ ತಿಳಿದು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಆಗ ನಮ್ಮ ಭಾವನೆಗಳು ಇನ್ನಷ್ಟು ದೃಢಗೊಳ್ಳುತ್ತವೆ. ಧನ್ಯತೆಯು ಪವಿತ್ರ ಭಾವನೆಗಳಾಗಿ ಕರ್ತೃವಿಗೆ ಅಪೂರ್ವವಾದ ದೈವಿಕಾನಂದ ಸಿಗುತ್ತದೆ.
“A well performed ritual is work of art by which even a sceptical spectator will get a kick. it will give a enduring and lingering satisfaction to  both”—Aldous Huxley.      
ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.
* * * * * * * *
ಚಿತ್ರಕೃಪೆ : http://farm4.staticflickr.com
5 ಟಿಪ್ಪಣಿಗಳು Post a comment
  1. Parthasarathy Narasingarao's avatar
    Parthasarathy Narasingarao
    ಜನ 24 2012

    >> ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.

    ಮಾನ್ಯರೆ ನಿಮ್ಮ ಕಳಕಳಿ ಒಪ್ಪುತ್ತೇನೆ
    ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ ಅನ್ನುವ ವಾಕ್ಯದ ಹಿಂದೆ ಹೊರಟಾಗ ಹಲವು ಸಮಸ್ಯಗಳು ಕಾಡುತ್ತವೆ . ಏಕೆಂದರೆ ಈಗ ನಾವು ಅನುಸರಿಸುವ ಹಲವು ಆಚರಣೆಗಳು, ನಮ್ಮ ಕಾಲದಲ್ಲಿ ತುಂಬಾ ಹಿಂದೆ ಜಾರಿಗೆ ಬಂದಿರುವುದು, ಅವುಗಳನ್ನು ನಿಯಮಕ್ಕೊಳಪಡಿಸಿರುವುದು ಆಗಿನ ಕಾಲಮಾನಕ್ಕೆ ಆಗಿನ ಸಮಾಜಕ್ಕೆ ಆಗಿನ ‘ರಿಸೋರ್ಸ್’ ಮತ್ತು ಆಗ ಸಿಗುತ್ತಿದ್ದ ಕೆಲವು ವಸ್ತುಗಳನ್ನು ಅವಲಂಬಿಸಿತ್ತು. ನೆನಪಿಡಿ ನಾನು ಯಾವುದೆ ಸಂಸ್ಕುತಿಯನ್ನು ವಿರೋದಿಸುತ್ತಿಲ್ಲ, ಆದರೆ ನಾವೀಗ ಆಚರಿಸುತ್ತ ಇರುವುದು ಆಚರಣೆಗಳಲ್ಲ ಅವುಗಳ ಪಳಿಯುಳಿಕೆಗಳು ಅನ್ನಿಸಿಬಿಡುತ್ತದೆ. ಅದಕ್ಕೆ ಕಾರಣ ಆಗಿನ ಕಾಲಮಾನದ ನಿಯಮಗಳು ಈಗಿನ ಸಂದರ್ಬಕ್ಕೆ ಏಕೊ ಹೊಂದಿಕೊಳ್ಳುವದಿಲ್ಲ ಅನ್ನಿಸಿಬಿಡುತ್ತದೆ.
    ನೀವು ಶ್ರಾದ್ದವನ್ನೆ ಉದಾಹರಣೆಯಾಗಿ ತೆಗೆದುಕೊಳ್ಳಿ, ಶ್ರಾದ್ದಾನಂತರದ ಪಿಂಡ ವಿಸರ್ಜನೆಯಲ್ಲಿ ಕಾಡುವ ಸಮಸ್ಯೆ ಅದನ್ನು ನೀರಿನಲ್ಲಿ ವಿಸರ್ಜಿಸಬೇಕು ಅಥವ ಹಸುವಿಗೆ ಕೊಡಬೇಕು, ಬೆಂಗಳೂರಿನಂತ ನಮ್ಮ ಮನೆಯ ಸಮೀಪದಲ್ಲಿ ಹಸುವಾಗಲಿ, ನೀರಿನ ಕೆರೆ ಬಾವಿಗಳಾಗಲ್ಲಿ ಇಲ್ಲ. ಅದಕ್ಕೆ ಪುರೋಹಿತರು ಅವನ್ನು ಮಣ್ಣು ಮಾಡುವಂತೆ ತಿಳಿಸುತ್ತಾರೆ , ಆಗೆಲ್ಲ ಮನಸಿಗೆ ಹಿಂಸೆಯಾಗುತ್ತದೆ, (ಚಂಡಿಯ ಕತೆ ನೆನಪಿಸಿಕೊಳ್ಳೂ ಅವಳು ಕಡೆಯಲ್ಲಿ ಪಿಂಡವನ್ನು ಮಣ್ಣಿಗೆ ಹಾಕಿದ ಕಾರಣಕ್ಕೆ ಶಾಪಕ್ಕೆ ಒಳಗಾಗುತ್ತಾಳೆ). ಈ ಬಾರಿಯಂತು ನಮಗೆ ಸಗಣಿ ಸಹ ಸಿಗಲಿಲ್ಲ. ,ಅತ್ತೆ ಪುರೋಹಿತರ ಹಾಗು ಬ್ರಾಹ್ಮಣರ ಬಗ್ಗೆ ಚರ್ಚೆಬೇಡ.
    ಹೀಗಿರುವಾಗ , ಅದು ಇರುವ ರೀತಿಯಲ್ಲಿಗೆ ಅದನ್ನು ಒಪ್ಪಿಕೊಳ್ಳೂವುದು ಕಷ್ಟವೆನಿಸುತ್ತದೆ. ಈ ರೀತಿ ಸಾವಿರ ಉದಾಹರಣೆ ಕೊಡಬಹುದು, ಕಾಲಕ್ಕೆ ತಕ್ಕ ಕೆಲವು ಬದಲಾವಣೆಗಳೊಡನೆ ಮುಂದುವರಿದಾಗ ಧರ್ಮ ಅಥವ ಆಚರಣೆಗಳು ಪ್ರಸ್ತುತ ಅನಿಸುತ್ತದೆ, ಇಲ್ಲದಿದ್ದರೆ ಯಾವ ಬದಲಾವಣೆಯನ್ನು ಒಪ್ಪಿಕೊಳ್ಳುವದಿಲ್ಲ ವೆಂದರೆ, ಪದ್ದತಿಯಲ್ಲಿರುವ ಎಲ್ಲ ಆಚರಣೆಗಳನ್ನು ನಾನು ನಿಯಮಬದ್ದವಾಗಿ ನಡೆಸಲು ಆಗದೆ ಬಿಡಲು ಆಗದೆ ತ್ರಿಶಂಕುಗಳಾಗುತ್ತೇವೆ.
    ಗೃಹ ಪ್ರವೇಶ ಮಾಡುವಾಗ ಹಸು ಮನೆಯೊಳಗೆ ಕರೆಸುತ್ತಾರೆ ಆಚರಣೆ…. ಆದರೆ ಈಗ ಹಸುಗಳು ಎಲ್ಲಿ … ಹೋಗಲಿ ಹಸು ಸಿಕ್ಕರು ಇಪ್ಪತ್ತನೆ ಅಂತಸ್ತಿನಲ್ಲಿ ಮನೆಯಿದ್ದರೆ ಹಸು ಅಲ್ಲಿಗೆ ಕರೆಸುವದೆಲ್ಲ , ಅದಕ್ಕೆ ಪುರೋಹಿತರು ಪರಿಹಾರ ಸೂಚಿಸುತ್ತಾರೆ ಬಿಡಿ ಬೆಳ್ಳಿ ಹಸುವಿದ್ದರೆ ಸಾಕು ಎಂದು. ಆಗ ಆಚರಣೆ ಇರುವದಿಲ್ಲ ಆಚರಣೆಯ ಪಳಿಯುಳೀಕೆ ಮಾತ್ರ.
    ನನ್ನ ಉದ್ದೇಶ ಯಾವ ಪದ್ದತಿಯನ್ನು ಟೀಕಿಸುವದಲ್ಲ, ಅದನ್ನು ನಮ್ಮ ಬಾಳಿಗೆ ಅಳವಡಿಸಿಕೊಳ್ಳುವ ಬಗ್ಗೆ ಎಂದು ಅರ್ಥ ಮಾಡಿಕೊಂಡರೆ ಸಾಕು.

    ಉತ್ತರ
  2. Ananda Prasad's avatar
    Ananda Prasad
    ಜನ 24 2012

    ವ್ಯಕ್ತಿ ಸತ್ತ ನಂತರ ಉತ್ತರ ಕ್ರಿಯೆಯಾಗಲಿ ಅಥವಾ ವಾರ್ಷಿಕವಾಗಿ ಶ್ರಾದ್ಧವಾಗಲಿ ಮಾಡುವುದು ಅವರವರ ಶ್ರದ್ಧೆ, ನಂಬಿಕೆ, ಭಕ್ತಿಗೆ ಬಿಟ್ಟರೆ ಒಳ್ಳೆಯದು. ಎಲ್ಲರೂ ಇದನ್ನು ಮಾಡಲೇಬೇಕು ಎಂದು ನಮ್ಮ ಸಂಪ್ರದಾಯದಲ್ಲಿ ಮಾಡಿರುವುದು ಸೂಕ್ತವೆಂದು ಕಾಣಿಸುವುದಿಲ್ಲ. ಸತ್ತವರನ್ನು ಸ್ಮರಿಸಲು ಯಾವುದೇ ಒಳ್ಳೆಯ ಕೆಲಸ ಮಾಡಿದರೆ ಆದೀತು ಎಂಬ ಸಂಪ್ರದಾಯ ತಂದರೆ ಒಳ್ಳೆಯದು. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಇಂಥ ಸಾಂಪ್ರದಾಯಿಕ ಕರ್ಮಠ ಆಚರಣೆಗಳಲ್ಲಿ ಶ್ರದ್ದೆಯಿಲ್ಲ ಎಂದಾದರೆ ಆತನು ಇಂಥ ಕರ್ಮಟ ಆಚರಣೆಗಳಿಲ್ಲದ ರೀತಿಯಲ್ಲಿ ಸತ್ತವರನ್ನು ಸ್ಮರಿಸಲು ಅವಕಾಶವಾಗಬೇಕು. ಇದನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಬಡವರಿಗೆ ಸತ್ತವರ ಹೆಸರಿನಲ್ಲಿ ದಾನ ಮಾಡುವುದು, ಸತ್ತವರ ಹೆಸರಿನಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಸಲು ಸಹಾಯ ಮಾಡುವುದು, ಬಡವರಿಗೆ ಓದಲು ವಿಧ್ಯಾರ್ಥಿ ವೇತನದ ಅನುಕೂಲ ಕಲ್ಪಿಸುವುದು, ಸ್ಥಳೀಯ ಶಾಲೆಗೆ ಏನು ಅನುಕೂಲ ಮಾಡಿಕೊಡಲು ಸಾಧ್ಯವೋ ಅದನ್ನು ಸತ್ತವರ ಹೆಸರಿನಲ್ಲಿ ಮಾಡಿಕೊಡುವುದು, ಪರಿಸರ ರಕ್ಷಣೆಗೆ ಸಸಿ ನೆಟ್ಟು ಬೆಳೆಸುವುದು, ಬಡವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಹಣಕಾಸಿನ ಸಹಾಯ ಮಾಡುವುದು ಇತ್ಯಾದಿಗಳನ್ನು ಮಾಡಿ ಸತ್ತವರ ಸ್ಮರಣೆಯನ್ನು ವಾರ್ಷಿಕವಾಗಿ ಮಾಡಲು ಸಮಾಜವು ಅನುವು ಮಾಡಿಕೊಟ್ಟರೆ ಕಡ್ಡಾಯ ಕರ್ಮಠ ಆಚರಣೆಗಳ ವಿಧಿ ವಿಧಾನಗಳಿಂದ ವಿಚಾರಶೀಲ ಮಾನವರು ಪಾರಾಗಲು ಸಾಧ್ಯವೆಂದು ಕಾಣುತ್ತದೆ.

    ಉತ್ತರ
  3. nanjundaraju's avatar
    ಜನ 25 2012

    mitrare, shradda maaduva uddeshavenu. Adannu eke maadabeku. kaarna illi mukhya. namma hindu dharmadalli shraaddha maaduva vidhi vidhana tilisidare. maduvudu biduvudu nantarada matallave.

    ಉತ್ತರ
  4. thirumala raya halemane's avatar
    thirumala raya halemane
    ಆಗಸ್ಟ್ 14 2012

    ಇದು ಚರ್ಚಿಸ ಬೇಕಾದ ವಿಷಯವೇ . ಇದೂ ಸೇರಿ ನನಗೆ ಮಿತ್ರರು ಕೊಟ್ಟ ಎರಡು weblinks ನಲ್ಲಿ ಬರೆದದ್ದನ್ನು ನೋಡಿದೆ . ಚೆನ್ನಾಗಿಯೇ ಬರೆದಿದ್ದಾರೆ . ಇದರಲ್ಲಿ ವೇದಗಳಲ್ಲಿ ಏನು ಹೇಳಿದೆ ಆ ದ್ರಷ್ಟಿಯಿಂದ ಮಾತಾಡಿದ್ದಾರೆ . ಅದು ತರ್ಕ ಬದ್ಧ ವಾಗಿಯೇ ಇದೆ . ಆದರೆ ಉಳಿದ ಶಾಸ್ತ್ರಗಳಲ್ಲಿ ಏನಿವೆ ಎಂಬ ಕುರಿತು ಹೇಳಲಿಲ್ಲ . ಬೇರೆ ತಿಳಿದವರು , ಅಂಥಹ ವೈದಿಕ ಕ್ರಿಯೆ ಮಾಡುವ ಪುರೋಹಿತರು , ಪಂಡಿತರು ಇತ್ಯಾದಿ ಶ್ರಾದ್ಧ ಗಳನ್ನು ಯಾವ ರೀತಿ ಯಿಂದ ನೋಡುತ್ತಾರೆ, ಮನದಟ್ಟು ಮಾಡುತ್ತಾರೆ ಅಂತ ಅಲ್ಲಿ ನಮಗೆ ಗೊತ್ತಾಗಲಿಲ್ಲ .

    ಇನ್ನೊಂದರಲ್ಲಿ ಈಗಿನ ಕಾಲದ ಜನರ ಲೋಕದ್ರಷ್ಟಿ ಯಿಂದ overview ರೀತಿಯಲ್ಲಿ ಬರೆದಿದ್ದಾರೆ. ಈಗಿನ ಆಧುನಿಕ ಕಾಲ , ಸಮಾಜ ದಲ್ಲಿ ಹೊಸ ತರದ ಸಮಸ್ಯೆ ಗಳಿರುವುದರಿಂದ ನಮ್ಮ ದ್ರಷ್ಟಿಕೊನವೇ ಬಹಳ ರೀತಿಯಲ್ಲಿ ಬದಲಾಗಿರಬಹುದು . ಅದರಿಂದಾಗಿ ಹಳೆ ಕಾಲದಿಂದ ನಡೆದು ಬಂದ ಪದ್ಧತಿ ಗಳ ಅರ್ಥವನ್ನು ಹಿಡಿಯಲು ಕಷ್ಟವಾಗಬಹುದು . ಇನ್ನೂ ಆಳವಾಗಿ ಯೋಚಿಸಿ , deep study ಮಾಡಿ , ಚರ್ಚಿಸಿ , ಶಾಸ್ತ್ರ , ಪುರಾಣಗಳಲ್ಲಿ ಹುಡುಕಿದರೆ ಮತ್ತೆ ಅದರ ಮಹತ್ವದ ಅರ್ಥವೇನಾದರೂ ಇದ್ದರೆ ಅದು ನಮ್ಮ ತಿಳುವಳಿಕೆಗೆ ಬರಬಹುದೋ ಏನೋ ????????

    ಉತ್ತರ
  5. nataraj sharma's avatar
    nataraj sharma
    ಜೂನ್ 10 2013

    Sharadhayaa karthavya karmam ithi SHRAADHAM- ಶ್ರಾಧ

    ಶ್ರದ್ಧೆ ಇಂದ ಮೃತನ ಕರ್ಮಗಳನ್ನ ಮಾಡುವದೆನ್ದಾದರೆ ಕರ್ಮವನ್ನು ಮಾಡುವ ಕರ್ತ್ರು ಮತ್ತು ಮೃತನ ಇವರೀರ್ವರ ಸಂಬಂಧ ದ ಪ್ರತೀಕವಾಗಿ ಹಾಗು ಸವೆಸಿದ ಜೀವನದ ಸವಿದ ಪ್ರತಿ ಕ್ಷಣಗಳ ತುಲನೆಯನ್ನ ಈ ಕರ್ಮಗಳು ಸ್ಮೃತಿ ಪಟಲದಲ್ಲಿ ತಂದು ಮಾಡಿದ ತಪ್ಪಿನ ಅರಿವು ಹಾಗು ಸರಿದಾರಿಯಲ್ಲಿ ನಡೆಯುವ ವಿವೇಚನೆ ಹಾಗು ತಿದ್ದಿ ನಡೆದು ಸ್ವ ಇಚ್ಚಯಿಂದ ಬಲ್ಲಿದನಿಗೆ ಸಹಾಯಹಸ್ತ ಮಾಡುತ್ತಾ ತನ್ನ ಜೀವನದ ನಿಜವಾದ ಅರ್ಥವನ್ನು ಹಾಗೂ ಗುರು ಪಾರಂಪರ ರೀತಿಯಲ್ಲಿ ನಶ್ವರ ಜೀವನದ ನಿಜ ಸತ್ಯವನ್ನು ತಿಳಿಯುತ್ತಾ ಅಧ್ಯತ್ಮಕಥೆಯ ಹಾದಿಯನ್ನು ಅರ್ಥಿಸಿಕೊಳ್ಳುವ ಅರಿವನ್ನು ಪಡೆಯುತ್ತಾನೆ

    ಉತ್ತರ

Leave a reply to nataraj sharma ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments